(ಅಭಿಮನ್ಯು ಪ್ರವೇಶ)

ಅಭಿಮನ್ಯು : ಮಾವ ನಮಸ್ಕರಿಸುವೆನು.

ಕೃಷ್ಣ : ಅಭಿಮನ್ಯು ನಿನಗೆ ಮಂಗಳವಾಗಲಿ. ಕುಮಾರ ಅಭಿಮನ್ಯು ನಿಮ್ಮ ತಂದೆಯು ಮಾಡಿರುವ ಕಾರ‌್ಯವು ನಿನಗೆ ತಿಳಿಯಿತೊ.

ಅಭಿಮನ್ಯು : ಮಾವನವರೆ ಪಿತನು ಹೀಗೆ ಯಂದಿಗೂ ತಿಳಿದು ಮಾಡಿರಲಾರನು.

ಕಂದ

ಸುತ ತಾಂ ಲೋಕದಿ ತನ್ನಯ ಪಿತ
ತಾಂ ಗೈದ ಮಹಾಪರಾಧಗಳೆಲ್ಲಂ
ಹಿತದಿಂ ಸ್ತುತಿಯನು ಗೈಯ್ಯುವ ಅತಿ
ವಿನಯದ ಪೌರುಷವನು ನಿಲ್ಲಿಸುವೆನು ನಾಂ ॥

ಕೃಷ್ಣ : ಯಲವೋ ಬಾಲನೆ, ಯೀ ಲೋಕದಲ್ಲಿ ತಂದೆಯು ಮಾಡಿದ ತಪ್ಪನ್ನು ಮಗನು ಮನ್ನಿಸುವದು ಸ್ವಾಭಾವಿಕ. ವಳ್ಳೆಯದು ಇಂದಿಗೆ ಪಾಂಡವರ ಆಸೆ ಪೂರೈಸಿತು.

ಅಭಿಮನ್ಯು : ಯದುಪತಿಯೆ ತಂದೆಯು ಮಾಡಿರುವ ಕಾರ್ಯದಲ್ಲಿ ಲೇಶವೂ ತಪ್ಪಿಲ್ಲ. ಆದರೆ ಮಹಾತ್ಮರು ಹೇಳಿದಂತೆ ನಿನ್ನ ಪ್ರತಿಜ್ಞೆಯಂ ತಿಳಿದು ಯಂದಿಗೂ ಹೀಗೆ ಮಾಡಿರಲಾರನು. ಅಭಯವಂ ಕೊಟ್ಟ ಅನಂತರವೇ ತಿಳಿದಿರಬಹುದು.

ಕೃಷ್ಣ : ಯಲೋ ಹುಡುಗನೆ, ಯನಗೆ ರಾಜಧರ್ಮವನ್ನು ಉಪದೇಶಿಸುವೆಯಾ. ನಿನ್ನ ತಂದೆಗೆ ನನ್ನ ಪ್ರತಿಜ್ಞೆಯು ತಿಳಿದಿರಲಿಲ್ಲವೋ. ಆಗಲಿ ಆ ನೀಚನಿಗೆ ತಕ್ಕ ಶಿಕ್ಷೆಯನ್ನು ವಿಧಿಸುತ್ತೇನೆ.

ಪದ

ಮಾವ ನೀ ಲಾಲಿಸಿ ಕೇಳ್ವುದು ದೇವಾ ॥
ಯನ್ನಯ ಜನಕನು ನಿನ್ನ ಹಗೆಯು
ಇವನೆನ್ನುವದನು ತಾ ತಿಳಿಯದಲೇ
ಯಿನ್ನವನಿಗೆ ಭಾಷೆಯ ಕೊಟ್ಟಿರುತಿಹನು
ನನ್ನಿಯಿಂ ಮನ್ನಿಸಿ ಯಿನ್ನು ನೀ ಪಾಲಿಸು
ಯಾತಕೆ ಯೀ ಪರಿ ಬ್ರಾಂತನಾಗುತಲಿ
ಆತುರಪಡುತಿಹೆ ಖತಿಯಲಿ
ನೀತಿಯನರಿಯದೆ ಪಾತಕನಾಗುವೆ
ಮಾತನು ಲಾಲಿಸು ಧಾತನೆ ರಕ್ಷಿಸು ॥

ಅಭಿಮನ್ಯು : ಅಹೋ ಮಾವನವರೆ. ಯನ್ನ ಜನಕನು, ಗಂಧರ್ವನು ನಿನ್ನ ಹಗೆ ಯಂಬುದನ್ನರಿಯದೆ ಭಾಷೆಯಂ ಕೊಟ್ಟಿರುವನು. ಇದನ್ನು ಯೋಚಿಸದೆ ಆತುರದಿಂದ ಖತಿಪಡುವುದು ಯಾತರ ನ್ಯಾಯ. ಮಮ ಪ್ರಾಣಾಹಿ ಪಾಂಡವ ಎಂಬ ಬಿರುದಂ ಧರಿಸಿರುವ ಧಾತನೆ ಅಪರಾಧವಂ ಕ್ಷಮಿಸಿ ಕರುಣದಿಂದ ನಮ್ಮನ್ನು ಪೊರೆಯುವನಾಗೈ ದಾನವಾರಿ ಕೋಪವನ್ನು ತೊರಿ ॥

ಕೃಷ್ಣ : ಯಲವೊ ಹುಚ್ಚನೆ ಯಾತಕ್ಕೆ ಕೂಗಿಕೊಳುವೆ ಆಚೆಗೆ ಹೋಗು. ಯಾರೊ ಚಾರ. ಅತಿ ಶೀಘ್ರವಾಗಿ ಯಮ್ಮ ಅಗ್ರಜರಾದ ಬಲರಾಮಮೂರ‌್ತಿಯನ್ನು ಕರೆದುಕೊಂಡು ಬಾ.

ಚಾರ : ಅಪ್ಪಣೆ ಪ್ರಭು.

ಕೃಷ್ಣ : ಅಣ್ಣಾ ನಿನಗೆ ವಂದಿಸುವೆನು.

ಬಲರಾಮ : ವಾಸುದೇವ ನಿನಗೆ ಮಂಗಳವಾಗಲಿ.

ಪದ

ಯೇನ ಗೈಯಲೀ ನಾನೇನ ಮಾಡಲೀ
ಹೀನ ಮನುಜನಿಂದ ಯನಗೆ ಮಾನಹಾನಿ ವದಗಿ ಇಹುದು
ಕುಂತಿ ಸುತರಿಗೆಂತು ನಾನು ಇಂತು ಉಪಕಾರವ ಮಾಡೆ
ಅಂತದನವರೆಣಿಸದೆನಗೆ ನಿಂತು ಪಾರ್ಥ ವೈರಿಯಾಗಿಹ ॥

ಕೃಷ್ಣ : ಅಣ್ಣಾ ಬಲರಾಮ ದೇವ ಕೇಳೆನ್ನ ಮಾತಿನ ಭಾವ. ಕುಂತೀ ಪುತ್ರರು ನನ್ನ ಸ್ವಂತದವರೆಂದು ಅನೇಕ ವಿಧದಲ್ಲಿ ಉಪಕಾರವಂ ಮಾಡಿ ಬಂದ ಕಷ್ಟಗಳಿಷ್ಟೂ ತಾಕದ ಹಾಗೆ ಕಾಪಾಡಿಕೊಂಡು ಬಂದದ್ದಕ್ಕೆ ಅದಂ ಮರೆತು ಅರ್ಜುನನೇ ನನಗೆ ವೈರಿಯಾಗಿರುವನು ನೋಡೈ ಅಣ್ಣಾ.

ಪದ

ಕೊಟ್ಟು ಪಾರ್ಥಗನುಜೆಯನ್ನು ಭ್ರಷ್ಟರಾದೆವೊ ॥
ದುಷ್ಟತನವ ಬಿಡದೆ ಪಾರ್ಥ ಕೆಟ್ಟು ಪೋಪನೈ ॥ಯೇನ ಗೈಯಲೀ ॥

ಕೃಷ್ಣ : ಅಣ್ಣಾ ನಮ್ಮ ಅನುಜೆಯಾದ ಸುಭದ್ರೆಯನ್ನು ಆ ದುಷ್ಟನಾದ ಅರ್ಜುನನಿಗೆ ಕೊಟ್ಟು ಯೀ ಸೃಷ್ಠಿಯೋಳ್ ಭ್ರಷ್ಟರಾದೆವು. ಬಿಟ್ಟಿರೆ ಪಂಥವು ಕೆಡುವುದು. ಕಟ್ಟಿಕೊಂಡರೆ ಕಲಹ ಉಂಟಾಗುವುದು ಇದಕ್ಕೆ ಏನು ಮಾಡಲೈ ಅಣ್ಣಾ. ಕುಂತಿಪುತ್ರರಿಗೆ ನಾನು ಪರಿಪರಿಯಿಂದ ಮಾಡಿರುವ ಉಪಕಾರವಂ ಆ ದುರುಳರು ಸ್ಮರಿಸದೆ ಯನ್ನ ವೈರಿಯಾದ ಗಯನಂ ಬೆನ್ನು ಹಾಕಿಕೊಂಡು ಇರುವ ಕುನ್ನಿ ಪಾರ್ಥನಂ ಇನ್ನಿರಿಸಲಾಗದು. ನಾನು ವೈರಿಯನ್ನು ಬಿಡಬೇಕೆಂದು ಪತ್ರಿಕೆಯಂ ಬರೆದು ಕಳುಹಿಸಿದರೆ ಚಾರನ ಕೊರಳಿಗೆ ಪತ್ರಿಕೆಯಂ ಕಟ್ಟಿ ವೈರಿಯಂ ಬಿಡುವುದಿಲ್ಲವೆಂದು ವರ‌್ತಮಾನವಂ ಕೊಟ್ಟಿರುವರು. ಆ ದುಷ್ಟ ಗಯನಿಗಾಗಿ ಅರ್ಜುನನು ನಷ್ಟವಾಗುವನು. ಬಂಧುತ್ವದಲ್ಲಿ ಯಿಂಥಾ ಸಂಕಟ ಪ್ರಾಪ್ತವಾಯಿತಲ್ಲೈ ಅಣ್ಣಾ.

ಪದ

ನಡೆ ನಡೆ ನೀಂ ತಡೆಯದೀಗ ಬಿಡೆನು ನಿನ್ನ
ವೈರಿಯಾ ಬಿಡೆನು ನಿನ್ನ ನಾಂ ಕಡಿದು ಹಾಕುವೆ ಬಲ್ಲೆಯಾ
ತೆರಳು ಕಾಮ್ಯಕವನಕೆ ಯೀಗ ತ್ವರಿತದಿಂದ ಅನುಜನೆ
ಧುರವ ಜೈಸಿ ಬೇಗನೇ ಅರಿಗಳನ್ನು ತರಿಯುವೇ ॥ಬಿಡೆನು॥

ಭ್ರಷ್ಟ ಗಯನನೀಗ ನಾನು ಕಟ್ಟಿ ಯಳೆದು ತರುವೆನೈ
ದುಷ್ಟಪಾರ್ಥನನೂ ಸುಡುವೆ ಕಷ್ಟಪಡುವೆ ಸಹಿತಕೆ ॥ಬಿಡೆನು ॥

ಬಲರಾಮ : ವಾಸುದೇವನೆ, ಇಷ್ಟಕ್ಕೆ ನೀನು ಯೋಚಿಸುವುದೆ. ಆ ದುಷ್ಟ ಪಾಂಡವರನ್ನು ನಷ್ಟಗೊಳಿಸಿ ಭ್ರಷ್ಟನಾದ ಗಂಧರ್ವನಂ ಯೀಗಲೇ ಕಟ್ಟಿ ಯಳೆದು ತರುತ್ತೇನೆ. ಕಿಂಚಿತ್ತು ಚಿಂತಿಸದೆ ಯುದ್ಧಕ್ಕೆ ತೆರಳುವನಾಗೈ ಕ್ರಿಷ್ಣ ಜಗದೋಳ್ ಶ್ರೇಷ್ಟ.

ಪದ

ಸಿದ್ಧಗೊಳಿಸು ನೀ ಯುದ್ಧಕ್ಕೆ ರಥವನು  ಬದ್ದ ಸಾತ್ಯಕೀ
ಬೇಗಾ ಅರಿಗಳ ಜೈಸಲು ಶಿರಗಳ ತರಿಯಲು
ಭರದೊಳು ನೀ ತೆರಳೂ ಧುರ ವಿಜಯರು ಯದುಬಲವ
ಕೂಡುತಲಿ ಹರುಷದಿ ಹೊರಡುವನು.

ಕೃಷ್ಣ : ಯಲೈ ಸಾತ್ಯಕಿ, ಆ ನೀಚನಾದ ಅರ್ಜುನನೊಡನೆ ಯುದ್ಧವಂ ನಡೆಸಬೇಕಾದ ಪ್ರಯುಕ್ತ ನಮ್ಮ ಯದು ಬಲವನ್ನೆಲ್ಲಾ ಸಿದ್ಧಗೊಳಿಸಿ ರಥವಂ ಶೃಂಗರಿಸಿ ಬೇಗ ಹೊರಡುವನಾಗು. ಪಾಂಡುತನಯರನ್ನು ಖಂಡಿತ ಇನ್ನುಳಿಸಬಾರದು. ಭಂಡರನ್ನು ದಂಡಧರನಾಲಯಕ್ಕೆ ಕಳುಹಿಸಿ ಅವರ ಪುಂಡಾಟವಂ ಅಡಗಿಸುವೆನು. ಯುದ್ಧಕ್ಕೆ ಸಿದ್ಧರಾಗಿರಿ.

ಸಾತ್ಯಕಿ : ಯದುಪತಿಯೆ, ಆ ದುಷ್ಟ ಪಾಂಡವರಲ್ಲಿ ಯುದ್ಧವಂ ಮಾಡಲು ಸೈನ್ಯ ಯಾವತ್ತು ಸಿದ್ಧವಾಗಿರುವುದು. ತುಡುಗರ ಬಡಿವಾರವನ್ನಡಗಿಸಿ ಸಡಗರಗೊಳಿಸುವೆನು. ಜಲಜನಾಭನೆ ಪ್ರಯಾಣವಂ ನಡೆಸಬಹುದು.

ಅಭಿಮನ್ಯು : ವಳ್ಳೆಯದು. ಇರಲಿ ನಾನು ಯೀ ಪುರ ದ್ವಾರದಲ್ಲಿ ನಿಂತು ಯುದ್ಧಕ್ಕೆ ಬರುವ ಯದು ಸೈನ್ಯವನ್ನು ಕ್ಷಣಾರ್ಧದಲ್ಲಿ ಯಮನಾಲಯಕ್ಕೆ ಕಳುಹಿಸಿ ಬಿಡುತ್ತೇನೆ. ಆ ಶ್ರೀಹರಿಯು ಇಲ್ಲಿಂದ ಪಾರಾಗಿ ಉಳಿದರಲ್ಲವೆ ಯನ್ನ ತಂದೆಯ ಸಂಗಡ ಯುದ್ಧವಂ ಮಾಡುವುದು. ಆ ಕಮಲಾಂಬಕನ ಕರುಳನ್ನು ಬಗೆದು ಧರಾತಲಕ್ಕೆ ವಗೆದು ಬಿಡುತ್ತೇನೆ. ಭಲಾ.

ಪದ

ಅಲ್ಲಿ ಬರುವೀ ಸೇನೆಯಲ್ಲವ ಮೆಲ್ಲನೇ ಸಂಹರಿಸಿ ಕ್ಷಣದೊಳು
ನಿಲ್ಲದಲೆ ಮಾಧವನನೀಗಲೆ ಗೆಲ್ವೆ ನಾಂ ಬೇಗ
ಪುಲ್ಲನಾಭಗೆ ಮಲ್ಲಮರ್ಧನ ನಿಲ್ಲದಲೆ ಬೆಂಬಲಕೆ ಬಂದರೂ
ಸೊಲ್ಲನಡಗಿಸಿ ಮೆಲ್ಲನೋಡಿಸುವೆ ಕಳ್ಳ ಹರಿಯಾ ॥

ಅಭಿಮನ್ಯು : ಅಹಹ ಶ್ರೀ ಕೃಷ್ಣನು ತನಗೆ ಸಖನಾದ ಸಾಂಬನಂ ವಡಗೊಂಡು ಬಂದರೆ ಯೀ ಮುಂಗೈಗೆ ಬಂಗಾರದ ವೀರ ಕಂಕಣವಂ ಕಟ್ಟಿ ಗದಾಯುದ್ಧದಲ್ಲಿ ಸದಾಶಿವನಂ ಹಣಿದು ಹರಿಯಂ ಬೆತ್ತಲೆ ಮಾಡಿ ಯತ್ತಲೂ ಬಿಡದೆ ಧಾತ್ರಿ ಧರಾ ಮಧ್ಯದಲ್ಲಿ ಕುತ್ತಿ ಕೆಡಹುತ್ತೇನೆ. ಭಳಿರೇ ಯನ್ನ ವಿಕ್ರಮಕ್ಕೆ ಯೀಡುಂಟೇ.

ಕಂದ

ಅಲ್ಲಿಗೆ ಬರುವೀ ಸೇನೆಯ ಮೆಲ್ಲನೆ ಸಂಹರಿಸುತ್ತ ಕ್ಷಣಮಾತ್ರದಲೀ ॥
ನಿಲ್ಲದೆ ಯಾದವರೊಡೆಯನ ಗೆಲ್ಲುತ ನಾಂ
ತಂದೆಯ ಸಮೀಪಕೆಳದೊಯ್ಯುವೆನೈ ॥

ಅಭಿಮನ್ಯು : ಭಲಾ ಭಲಾ, ನಾನು ಯೀ ಪುರ ದ್ವಾರದಲ್ಲಿ ನಿಂತು ಪ್ರಯಾಣವಾಗಿ ಬರುವ ಯದು ಸೈನ್ಯವನ್ನು ಕ್ಷಣಾರ್ಧದಲ್ಲಿ ಸಂಹರಿಸಿ ಹರಿಯೊಡನೆ ಧುರವಂಗೈದು ಪರಿಪರಿಯ ಕಷ್ಟವಂ ಪಡಿಸುವೆನು. ಆ ಹರನು ಹರಿಗೆ ಸಹಾಯಕನಾಗಿ ಬಂದರೂ ನಿಲ್ಲದೇ ಪುಲ್ಲನಾಭ ಮಲ್ಲಮರ್ದನರ ಸೊಲ್ಲನ್ನಡಗಿಸಿ ಸಲ್ಲಲಿತದಿಂ ತಂದೆಯ ಬಳಿಗೆ ಹರಿಯಂ ಕುರಿಯಂತೆ ಯಳದೊಯ್ಯುವೆನು. ಬರಲಿ ಆ ಯದುಪತಿ ಕಾಣೆ ಅವನ ಗತಿ

ಪದ

ದೇವದೇವ ನಾರಾಯಣ ಪರಂಧಾಮ
ಪುರುಷೋತ್ತಮ ಸಕಲದನುಜ ಸಂಹಾರಕ
ನಿಖಿಲಲೋಕಪಾಲಕ ನಟನ ಸೂತ್ರಧಾರಿ ನೀ ॥
ದೇವ ದೇವ ನಾರಾಯಣ ಪರಂಧಾಮ ॥

ನಾರದ : ಯಲೈ ಕೃಷ್ಣನೆ ನಿನ್ನ ಕಾರ್ಯವು ಕೆಡುವುದು. ಯಾಕೆಂದರೆ ಅಭಿಮನ್ಯು ಆಯುಧಪಾಣಿಯಾಗಿ ಪುರದ್ವಾರದಲ್ಲಿ ನಿಂತಿರುವನು. ನೀನು ಅವನಂ ಗೆಲ್ಲಬೇಕಾದರೆ ಮತ್ತೊಂದು ಅವತಾರವನ್ನೇ ಎತ್ತಬೇಕಾಗುತ್ತದೆ.

ಕೃಷ್ಣನ : ವಳ್ಳೆಯದು ಅವನು ಅಲ್ಲಿಯೇ ನಿಂತಿರಲಿ. ಸೇನೆಯೆಲ್ಲವನ್ನು ಗರುಡನ ಮೇಲೆ ಅಂತರಿಕ್ಷದಲ್ಲಿ ಕರೆದೊಯ್ಯುವೆನು ಹಾಗೇನು ಮಾಡುತ್ತಾನೆ ನೋಡೋಣ.

ಅಭಿಮನ್ಯು : ಯಿದೇ ಪುರದ್ವಾರವು. ಆ ಕೃಷ್ಣನ ಸೇನೆ ಯಾವತ್ತು ಬರುವವರೆಗೂ ಇಲ್ಲಿಯೇ ಕಾಯ್ದುಕೊಂಡಿರುವೆನು. ನಮ್ಮ ಜನಕನು ಮಾಡಿರುವ ಪಂಥಕ್ಕೆ ಕುಂದುಬಾರದಂತೆ ತಂದೆಯ ಮನೋಗತವಂ ಪೂರೈಸುವದಲ್ಲದೆ ಬಿಡಲಾಗದು. ಯೀ ಯಾದವನ ಸೈನ್ಯವನ್ನೆಲ್ಲಾ ಇಲ್ಲಿಯೇ ಸಂಹರಿಸಿದರೆ ಯಮ್ಮ ತಂದೆಯು ಸಂತೋಷಿಸುವನು. ಆಗಲಿ ಭರದಿಂದ ಬರುವ ಸೈನ್ಯವಂ ಕಾದುಕೊಂಡಿರುತ್ತೇನೆ.

ಪದ

ದೇವ ದೇವ ಧವಳಾಚಲ ಮಂದಿರ ಗಂಗಾಧರ ಹರ ನಮೋನ್ನಮೊ
ದೈವತ ಲೋಕ ಶುಭಾಂಬುಧಿ ಹಿಮಕರ ಗಂಗಾಧರ ಹರ ನಮೋನ್ನಮೊ ॥

ನಾರದ : ನಾರಾಯಣ ನಾರಾಯಣ.

ಅಭಿಮನ್ಯು :ನಾರದ ಮುನೀಂದ್ರರಿಗೆ ವಂದಿಸುವೆನು.

ನಾರದ : ಮಂಗಳಾನಿ ಭವಂತು. ಯಲೈ ಅಭಿಮನ್ಯು ಕುಮಾರನೆ. ನಿನ್ನ ಮನೋಗತವನ್ನು ಚನ್ನಾಗಿ ಬಲ್ಲೆನು. ಮೆಚ್ಚಿದೆ ಸರಿಸರಿ.

ಅಭಿಮನ್ಯು : ಪೂಜ್ಯರೆ ತಂದೆಯ ಕಾರ‌್ಯವನ್ನು ನೆರವೇರಿಸದಿದ್ದರೆ ಪುತ್ರನಿದ್ದು ಫಲವೇನು.

ನಾರದ : ಸುಕುಮಾರನೆ ಸುಪುತ್ರರ ಲಕ್ಷಣವೇ ಹಾಗೆ. ಶ್ರೀಕೃಷ್ಣನು ಗರುಡಾರೂಢನಾಗಿ ಸೇನೆ ಸಹಿತ ಅಂತರಿಕ್ಷದಲ್ಲಿ ನಿಮ್ಮ ತಂದೆಯ ಬಳಿಗೆ ಯುದ್ಧಕ್ಕೆ ಹೋಗಿರುವನು. ನೀನು ಇಲ್ಲಿ ಮಾಡತಕ್ಕ ಕಾರ್ಯವೇನು. ಇಲ್ಲಿ ಏತಕ್ಕೆ ನಿಂತಿರುವೆ.

ಪದ

ಇದು ತರವೆ ಮುನಿಯೇ ಚದುರರಾ ಕಾರ್ಯವೇ ॥
ಪದುಮನಾಭ ಯೀ ವಿಧವ ಗೈದಿಹನು
ಬುಧರು ಮೆಚ್ಚುವರೆ ಮುದವೆ ಅವಗೆ ॥ಇದು ॥

ಚೋರನ ತೆರದೊಳು ದಾರಿಯ ತೊರೆಯುತೆ ಸಾರಿ
ಪೋಗಿಹನು ಶೂರರ ಪರಿಯೇ ॥ಇದು ॥
ನಳಿನನಾಭ ತಾಂ ನೆಲಸಿಹ ಪುರಹರನು  ॥

ಅಭಿಮನ್ಯು : ಮಹಾತ್ಮರೆ, ಆ ಕೃಷ್ಣನಿಗೆ ಅಷ್ಟಲ್ಲದೆ ಜಾರ ಚೋರ ಶಿಖಾಮಣಿಯೆಂದು ಹೆಸರು ಬಂದಿರುವುದೆ. ಮೋಸಪಡಿಸಿ ಕಳ್ಳತನದಿಂದ ಹೋದರೆ ಇದು ಶೂರರ ಕಾರ್ಯವೆ. ನಾನು ಅವನನ್ನು ಸುಮ್ಮನೆ ಬಿಡುವೆನೆ. ಅವನ ಪಟ್ಟಣವಾದ ದ್ವಾರಕಾವತಿಯಂ ಕಿತ್ತು ಅಟ್ಟಹಾಸದಿಂ ಶರಧಿಯಲ್ಲಿ ಮುಳುಗಿಸಿ ಬಿಡುವೆನು ಸುರಮುನಿಯೆ ಇದು ಅವನಿಗೆ ಸರಿಯೆ.

ನಾರದ : ಯಲೈ ಬಾಲಕನೆ ನಿಮ್ಮ ತಂದೆಗೂ ಕೃಷ್ಣನಿಗೂ ಯುದ್ಧವಾಗುವುದು. ನೀನು ನಿಮ್ಮ ತಂದೆಗೆ ಸಹಾಯ ಮಾಡಲೇಬೇಕು. ಬೇಗ ಹೊರಡು.

ಕಂದ

ಸುರಮುನಿ ನಿಮ್ಮಾಜ್ಞೆಯ ನಾಂ
ಶಿರಸಾ ವಹಿಸುತೆ ತೆರಳಿ ನಿಮಿಷದೊಳಲ್ಲಿ ॥
ಹರಿಯಂ ಜೈಸುತೆ ತಂದೆಗೆ
ಹರುಷವ ತೋರಿಸುವೆ ಪುರಹರನ ದಯದಿಂದೀಗಾ.

ಅಭಿಮನ್ಯು : ಮಹಾತ್ಮರೆ ನಾನೀಗಲೆ ಕಾಮ್ಯಕವನಕ್ಕೆ ಹೋಗಿ ಹರಿಯಂ ಧುರದೋಳ್ ಸರಸದಿಂ ಜೈಸಿ ವರಜನಕನಾದ ಕಿರೀಟಿಗೆ ಹರುಷವಂಗೊಳಿಸಿ ಸುರರು ಮೆಚ್ಚುವಂತೆ ಭರದಿಂ ಧುರವಂ ಗೈಯ್ಯುವೆನೈ ನಾರದರೆ ಯನ್ನ ಪರಾಕ್ರಮವಂ ನೀವರಿಯದವರೇ ॥

ನಾರದ : ವಳ್ಳೆಯದು ಬೇಗ ಹೋಗು.

 

(ಅರಣ್ಯಧರ್ಮಅರ್ಜುನಗಯಪ್ರವೇಶ)

ಧರ್ಮ : ಅನುಜಾ ಫಲ್ಗುಣ, ಆ ದನುಜಾರಿಯು ನಮ್ಮಗಳ ಮೇಲೆ ಯುದ್ಧಕ್ಕೆ ಸನ್ನದ್ಧನಾಗಿ ಬರುವಂತೆ ಕಾಣುತ್ತದೆ. ಹರಿಯೊಡನೆ ಧುರವಂ ಗೈಯ್ಯುವುದು ಉಭಯ ಸಂಕಟವಾಗಿರುವುದು. ಕೃಷ್ಣನನ್ನು ಗೆಲ್ಲುವ ಪರಾಕ್ರಮಿ ಯಾರೂ ಇಲ್ಲವಲ್ಲಾ ಇದಕ್ಕೆ ಯೇನು ಮಾಡಬೇಕೈ ಅರ್ಜುನ.

ಪದ

ಬಿಡು ಬಿಡು ಬಿಡು ಬಿಡು ಚಿಂತೆ
ಪಡದಿರು ನೀಂ ಮನಭ್ರಾಂತೆ ಸಡಗರದಿಂ
ಜಲಜನಾಭನ ಕಡುತವಕದಿ ಕೆಡಹಿ
ಬಿಡುವೆನಣ್ಣಾ ತಡಮಾಡದೆ ಕೊಡು ಅಪ್ಪಣೆ
ಬಿಡದಲೆ ಶಿರ ಕಡಿದಿಡುವೆನು ದೃಢವಾಗಿಯೆ ನುಡಿ
ಬೇಗನೆ ಕಡಲ ಶಯನನನ್ನು ಬಡಿವೆ ಬಿಡು॥

ಅರ್ಜುನ : ಅಣ್ಣಾ ಯಮನಂದನ, ಇದೇನು ಹೀಗೆ ಚಿಂತಿಸುವೆ. ಬೇಗನೆ ಯನಗೆ ನೇಮವಂ ಕೊಡು. ಕಡಲ ಶಯನನಾದ ಜಲಜನಾಭನಂ ಬಿಡದೆ ವಡಲಂ ಬಗೆದು ಕಡು ಸಡಗರದಿಂ ಬೇಗನೆ ನಿನ್ನೆಡೆಗೆ ಬರುವೆನು. ತಡಮಾಡದೆ ನುಡಿಯದೆ ಬಿಡದೆ ಯನಗೆ ಅಪ್ಪಣೆಯಂ ಕೊಡುವನಾಗೈ ಅಣ್ಣ.

ಧರ್ಮ : ಯಲೈ ವಿಜಯಾ, ದುಷ್ಟಮರ್ದನನಾದ ಹರಿಯಲ್ಲಿ ನರರು ಸಂಗರವಂ ಮಾಡುವದು ಶಕ್ಯವೆ. ಯಂಥಾ ವಿಘಾತ ವದಗಿರುವದೈ ಪಾರ್ಥ ತ್ರಿಲೋಕ ಸಮರ್ಥ.

ಕಂದ

ಯೇನಿದು ಭೂಪತಿ ಚಿಂತಿಪೆ
ದಾನವ ಮರ್ಧನನು ಬಂದಡೀಗ ಹಿಂದೆಗೆಯುವೆನೇ ॥
ನಾನವನ ಬಿಂಕವ ಮುರಿವೆನು
ಮಾನವಪತಿ ನಿನ್ನ ಮನದಿ ಸಂಶಯವೇಕೈ॥

ಭೀಮ : ಅಗ್ರಜಾ ಇದೇನು ಹೀಗೆ ಚಿಂತಿಸುವೆ. ಆ ದನುಜಾರಿಯು ಬಂದರೆ ನಾನು ಹಿಂಜರಿಯುವೆನೆ. ವನಜನಾಭನ ಗರ್ವವಂ ಮುರಿದು ಊರ್ವಿಯ ಜನರು ಬೆರಗುಗೊಳ್ಳುವಂತೆ ಮಾಡುವೆನಲ್ಲದೆ ಬಿನುಗು ನುಡಿಯಲ್ಲಾ ನೀನು ಮನದಲ್ಲಿ ಏನೂ ಯೋಚಿಸಲಾಗದೈ ಅಣ್ಣಾ.

ಧರ್ಮ : ತಮ್ಮಾ ಭೀಮಸೇನ, ಹರಿ ಸರ್ವೋತ್ತಮನೊಡನೆ ಸಂಗರವೇ, ಧುರವನ್ನೆಸಗುವೆನೆಂಬುದು ಸದರವಲ್ಲ ಬರಿಮಾತುಗಳೇತಕಯ್ಯ ಭೀಮ ಸಂಗರ ನಿಸ್ಸೀಮಾ.

ಭೀಮ : ಯಾರೊ ಚಾರಕ, ಯನ್ನ ಮೋಹದ ಕುವರನಾದ ಘಟೋದ್ಗಜನನ್ನು ಕರೆದುಕೊಂಡು ಬಾರೊ ಸೇವಕಾ.

 

(ಘಟೋದ್ಗಜ ಬರುವಿಕೆ)

ಚಾರಕ : ಯಲವೊ ದೂತ ಹಂಸಾಸನ ಪಿತ. ಹಂಸ ಕೋಟಿ ಪ್ರಭಾಯಮಾನದಿಂದ ಹಿಮಾಂಶು ವಂಶರಾದ ಭೂಮೀಶ್ವರರ ಸಂಶಯವಿಲ್ಲದೆ ಮಾತನಾಡಿಸುವ ನೀವು ಧಾರು ರಾಜಾ ರವಿಕುಲತೇಜಾ.

ಘಟೋದ್ಗಜ : ಯಲೈ ಸಾರಥಿ ನಾವು ಧಾರೆಂದರೆ ಶ್ರೀಮತ್ ಪದ್ಮಾಲಯ ವದನಾಬ್ಜ ಭೃಂಗಮಂಗಳ ತರಂಗ ಶಾಮಾಂಗ ಅಂಗಜಪಿತ ಭಕ್ತ ಹೃದಯ ಸಂಭೂಷಿತ ಬರ್ಭರ ಕುಲತದ್ವಿಜಯ ಕಂಬುಕಂಠೀರವ ಅಂಬುಜ ಮಿತ್ರ ದಯಾಂಬು ನಿಧಿ ವಿಶ್ವಂಬರನಾದ ಶ್ರೀಮತ್ ಪರಮಾತ್ಮ ಪರಿಪೂರ್ಣ ದಕ್ಷ ಬ್ರಂಹಾದಿ ಶಿರೋರತ್ನ ಇಂದ್ರಪ್ರಸ್ಥ ಪುರವರಾಧಿಪ ವಾಯು ತನಯ ಭೀಮಸೇನನ ಸುತ ಹಿಡಿಂಬಿ ಗರ್ಭ ಸಂಭೂತ ಘಟೋದ್ಗಜ ಮಹಾರಾಜನೆಂದು ತಿಳಿಯೊ ದೂತ ರಾಜ ಸಂಪ್ರೀತ.

ಯಲೈ ಸಾರಥಿ ನಾವು ಯೀ ವರಸಭೆಗೆ ಬಂದ ಕಾರಣವೇನೆಂದರೆ ಯಮ್ಮ ಜನಕನಾದ ಭೀಮಸೇನನು ಕಂದಾ ಬಾ ಯಂದು ಚಂದ ಚಂದ ಧ್ವನಿಗಳಿಂದ ಕರೆಸಿಕೊಂಡ ಕಾರಣ ಬಾಹೋಣವಾಯಿತು. ಯಮ್ಮ ಜನಕನಾದ ಭೀಮ ಸಂಗರ ನಿಸ್ಸೀಮನಂ ತೋರಿಸೊ ದೂತ ಕೇಳೆನ್ನ ಮಾತ.

ಘಟೋದ್ಗಜ : ನಮೋನ್ನಮೋ ತಂದೆಯೆ ವಂದಿಸುವೆನು.

ಭೀಮ : ಕಂದಾ ಘಟೋದ್ಗಜನೆ ನಿನಗೆ ಮಂಗಳವಾಗಲಿ.

ಘಟೋದ್ಗಜ : ತಂದೆಯೆ ಯನ್ನನ್ನು ಯಿಷ್ಟು ತ್ವರಿತದಿಂದ ಕರೆಸಿದ ಕಾರಣವೇನು ಪೇಳೈ ಜನಕಾ.

ಪದ

ಕಂದ ಘಟೋದ್ಗಜನೇ ಇಂದು ಪೇಳುವೇ ಕೇಳು
ಬಂದಿಹುದು ಸಂಗ್ರಾಮ ಇಂದು ಹರಿಯೊಡನೇ ॥

ಭೀಮ : ಭಳಿರೇ ಕಂದಾ ಘಟೋದ್ಗಜನೆ, ಯಿಂದಿನ ದಿನ ನಂದಗೋಪನ ಸುತ ಶ್ರೀಕೃಷ್ಣನೊಡನೆ ಯುದ್ಧವು ವದಗಿರುವುದು. ಅದರ ಪರಿಯನ್ನು ವರೆಯುತ್ತೇನೆ ಕೇಳೈ ಮಗನೆ.

ಪದ

ವರ ಕುಭೇರನ ಸುತನ ಪೊರೆವೆನೆಂದಭಯವನು
ಭರದಿ ಕೊಟ್ಟಿಹ ಪಾರ್ಥ ಪರಿಯಾಯ್ತು ನಮಗೇ॥

ಭೀಮ : ಮಗನೇ ರಕ್ಕಸಕುಲ ತದ್ವಿಜಯ ಲಾಲಿಸು. ಕುಬೇರನ ಸುತನಾದ ಗಯನಂ ಎಂಟು ದಿನಗಳಲ್ಲಿ ಕೊಲ್ಲುವೆನೆಂದು ಶ್ರೀ ಕೃಷ್ಣನು ಪಂಥವಂ ಮಾಡಿದ್ದನಂತೆ. ಅದಂ ತಿಳಿದ ಗಯನು ಅರ್ಜುನನ ಮರೆ ಬಿದ್ದು ಯನ್ನಂ ಪೊರೆಯಬೇಕೆಂದು ಬೇಡಿಕೊಂಡ ಕಾರಣ ಅರ್ಜುನನು ಕಾಪಾಡುವೆನೆಂದು ಅಭಯಂ ಕೊಟ್ಟ ಬಳಿಕ ವಿಚಾರ ತಿಳಿಯಿತು. ಇದರಿಂದ ಕೃಷ್ಣನಿಗೂ ನಮಗೂ ಯುದ್ಧವು ವದಗಿ ಬಂದಿರುತ್ತದೆ. ಇದಕ್ಕೆ ಏನು ಮಾಡಬೇಕೈ ಧೀರಾ ಅಸಹಾಯ ಶೂರ.

ಪದ

ವಸುಧೆ ಶರಪುರದರಸ ಕುಸುಮನಾಭನ ದಯದಿ
ಅಸಮಾ ಸಾಹಸ ವೀರ ಯಸಗೊ ಸಂಗರವಾ॥

ಭೀಮ : ಭಳಿ ಭಳಿರೇ ಕಂದಾ ಘಟೋದ್ಗಜನೆ, ಯಾ ವಸುಧೆಯಲ್ಲಿ ಸುರಪುರಕ್ಕೆ ಮಿಗಿಲೆನಿಸಿ ತೋರುವ ಶರಪುರದ ಶ್ರೀರಂಗಧಾಮನ ದಯದಿಂದ ಅರಿಗಳಾದ ಯಾದವರೊಡನೆ ಕದನವಂ ಗೈಯ್ಯಲೋಸುಗ ನಿನ್ನನ್ನು ಕರೆಸಿರುತ್ತೇನೆ. ತಡಮಾಡದೆ ಕಡುಶೀಘ್ರದಿಂದ ಕದನಕ್ಕೆ ಮೊದಲಾಗೊ ವೀರ ಸಂಗರ ಶೂರ.

ಪದ

ಕೊಡು ಕೊಡು ಕೊಡು ಕೊಡು ನೇಮ ತಡಮಾಡದೆ ನಿಸ್ಸೀಮಾ ॥
ವಡಲಾ ಬಗೆವೆನು ಹರಿಯಾ ಬಿಡದೇ ಸಂಗರದೀ ॥

ಘಟೋದ್ಗಜ : ಹೇ ತಂದೆ ವಾಯುನಂದನ, ಯಿಂಥಾ ಕಿಂಚಿತ್ ಕಾರ್ಯಕ್ಕೆ ಚಿಂತಿಸುವರೆ. ತಡ ಮಾಡದೆ ಯನಗೆ ನೇಮವನ್ನು ಕೊಡು. ಆ ಬಡ ಯಾದವರನ್ನು ಬಿಡದೇ ಹಿಡಿದು ತಂದು ಯಮ್ಮ ದೊಡ್ಡಪ್ಪನಾದ ಧರ್ಮನಂದನನ ಪಾದದಡಿಯಲ್ಲಿ ಕೆಡಹುತ್ತೇನೆ. ಕಡುತವಕದಿಂದ ಅಪ್ಪಣೆಯಂ ದಯಪಾಲಿಸೈ ತಂದೆ ನೋಡು ಮುಂದೆ.

ಪದ

ದುರುಳ ಯಾದವರರಸನ ಕೊರಳ ಕೊಯ್ಯುತೆ ನಾನು
ಕರುಳ ವನಮಾಲೆಯ ಧರಿಸುವೆನೊ ॥

ಘಟೋದ್ಗಜ : ಹೇ ತಂದೆ ಭೀಮಸೇನ. ಮಂದಮತಿಗಳಾದ ಯಾದವರನ್ನೆಲ್ಲಾ ಹಿಡಿದು ತಂದು ನಿಮ್ಮೆದುರಿನಲ್ಲಿ ವಡಲಂ ಬಗೆದು ಆ ಕೃಷ್ಣನ ಉರವಂ ಸೀಳಿ ತಿಳಿ ರುಧಿರವಂ ಪಾನಮಾಡಿ
ಅವನ ಕರುಳನ್ನು ಮಾಲೆಯಾಗಿ ಧರಿಸುತ್ತೇನೆ. ಯುದ್ಧಕ್ಕೆ ಅನುಮತಿಯನ್ನು ಕೊಡೈ ತಂದೆ ನೋಡು ಮುಂದೆ.