(ಭೀಮಸೇನ ಪ್ರವೇಶ)

ಭೀಮ : ಅಗ್ರಜಾ ವಂದಿಸುವೆನು.

ಧರ್ಮರಾಜ : ಅನುಜಾ ಭೀಮಸೇನ ನಿನಗೆ ಮಂಗಳವಾಗಲಿ, ತಮ್ಮಾ ಭೀಮಸೇನ, ಶ್ರೀ ಹರಿಯು ಯೇನು ಕೊರತೆಯನ್ನು ತಂದೊಡ್ಡಿರುವನೈ ಅನುಜಾ.

ಭೀಮ : ಅಣ್ಣ ಚಿಂತಿಸಲಾಗದು.

ಪದ

ಯೇನೆಂದು ಹೇಳಲಯ್ಯ ತಮ್ಮನೆ ಭೀಮ
ಅನುಜಾ ಪಾರ್ಥನ ಪರಿಯ ಅರಿಯದೆ
ಗಯನ ಪೊರೆವೆನೆಂದಭಯವ ಭರದಿ ಕೊಟ್ಟಿಹ ಪಾರ್ಥನ ॥

ಧರ್ಮರಾಜ : ತಮ್ಮ ಭೀಮಸೇನ. ಯಮ್ಮ ಪರಿಯನ್ನು ನಿನ್ನೊಡನೆ ಏನೆಂದು ಹೇಳಲಿ. ಅನುಜನಾದ ಅರ್ಜುನನು ಯೇನೊಂದು ಯೋಚಿಸದೆ ಗಂಧರ್ವನಂ ಪೊರೆಯುವೆನೆಂದು ಅಭಯವಂ ಕೊಟ್ಟಿರುವನು. ಇದರಿಂದ ಮುಂದೆ ನಮಗೆ ವದಗಬಹುದಾದ ಕುಂದು ಕೊರತೆಗಳನ್ನು ಪರಿಹರಿಸಿ ಕಾಪಾಡುವರಾರೈ ತಮ್ಮಾ-

ಪದ

ಹರಿ ವೈರಿಯನು ತಂದೀಗಾ
ತಮ್ಮಾ ಭೀಮ ಪರಿಕಷ್ಟ ವದಗಿಹುದೊ
ಹರಿ ನಮ್ಮೊಳ್ ಮುನಿದರೆ ಪೊರೆವರ ಕಾಣೆನು
ತರನೇನು ಇದಕೆ ಯೀಗ ॥

ಧರ್ಮರಾಜ : ತಮ್ಮಾ ಭೀಮಸೇನ. ಶ್ರೀಹರಿಯ ವೈರಿಯಾದ ಗಯನೆಂಬ ಗಂಧರ್ವನಿಗೆ ಹಿಂದು ಮುಂದೂ ಯೋಚಿಸದೆ ಕಾಪಾಡುವೆನೆಂದು ಅಭಯವಂ ಕೊಟ್ಟು ಕರೆತಂದಿರುವನು. ಇನ್ನು ಮುಂದೆ ಪಾಂಡವರಿಗೆ ಕಡೆಗಾಲ ಪ್ರಾಪ್ತವಾಯಿತು. ಇದಕ್ಕೆ ಹೇಗೆ ಮಾಡಬೇಕೈ ಅನುಜಾ-

ಕಂದ

ಮರೆ ಬಿದ್ದಿಹ ಗಂಧರ್ವನ ಮೇಣ್
ಸೆರೆ ಸೇರಿದ ನೃಪನ ಕೊಲ್ಲಿಸಬಾರದು ಕಂಡ್ಯಾ
ಅರಸರ ಧರ್ಮಗಳೀ ಪರಿ ಯಿರುತಿರಲಾ
ನೀತಿಯನ್ನು ತೊರೆಯುವರೇನೈ

ಭೀಮ : ಅಗ್ರಜಾ. ಮರೆಬಿದ್ದಿಹ ಯೀ ಗಯನಂ ಕೊಲ್ಲಿಸುವದು ಯೋಗ್ಯವಲ್ಲಾ. ನಮ್ಮಂತಹ ವೀರಾಧಿವೀರರ ಮರೆ ಬೀಳಲು ಬಿಡುವುದು ರಾಜಧರ್ಮವಲ್ಲ. ಮರೆ ಬಿದ್ದವನಂ ಪೊರೆಯದಿದ್ದವನು ಕ್ಷತ್ರಿಯನೆನಿಸಿಕೊಳ್ಳುವನೆ. ಆ ಯಾದವರಾದ ಜಾರ ಚೋರ ಕೃಷ್ಣ ಬಲರಾಮರನ್ನು ಸಂಹರಿಸುವುದಕ್ಕೆ ಅನುಜ್ಞೆಯಂ ಬೇಡುವೆನು.

ಕಂದ

ತಮ್ಮನೆ ನಿನಗಿಂತಹ ಹೆಮ್ಮೆಯ ನುಡಿ
ನುಡಿಯೆ ಸಲ್ಲದು ಸೈರಣೆಗೊಳೈ ॥
ಬೊಮ್ಮನ ಪಿತ ಶ್ರೀಹರಿಯೋಳ್
ನಮ್ಮಯ ಅನುಜಾತನಿಂದ ಹಗೆಯಾದೆವು ಕೇಳ್

ಧರ್ಮರಾಜ : ಅನುಜಾ ಭೀಮಸೇನ, ಅಸುರಾರಿಯಾದ ವಸುದೇವ ಸುತನಂ ಜೈಸುವ ಕಲಿಪರಾಕ್ರಮಿ ಯಾರು, ಆತನಂ ಜೈಸಬಹುದೆ. ಬಂಧುತ್ವದಲ್ಲಿ ಕುಂದುಕ ಬಂದೊದಗಿತೈ ತಮ್ಮಾ

ಪದ

ಯಾತಕೆ ಚಿಂತಿಸುವೆ ಧಾತನೆ ನೀನೀ ಪರಿಪರಿ ವಿಧದೊಳು ॥
ಪೊಡವಿಯೊಳ್ ಕೃಷ್ಣನ ಅಡಗಿಸಿ ಬರುವೆನು ಕೊಡು ನೇಮವ
ನೀ ಸಡಗರದಿ ಕಡುಹನು ನಿಲ್ಲಿಸಿ ವಡಲ ಬಗೆದು
ನಾಂ ಕುಡಿವೆ ರುಧಿರವನು ತಡಮಾಡದಲೇ ॥

ಅನುಜನು ಮಾಡಿದ ಘನತೆಯ ಕಾರ‌್ಯವ
ಅನುವನು ನೀಂ ತಿಳಿಯದಲೇ ॥
ವನಜನಾಭನೊಳು ಕನಿಕರ ಪಡುವುದು
ಸನುಮತವಲ್ಲವು ವಿನಯದಿ ಕೊಡು ನೀಂ ॥

ಭೀಮ : ಅಣ್ಣಾ ಮರುಗುವದೇತಕ್ಕೆ, ದನುಜಾರಿಯಲ್ಲಿ ಕನಿಕರವಂ ಬಿಡು. ಧರ್ಮಪಾಲನೆಗಿಂತಲೂ ಅಧಿಕವಾದ ಕಾರ‌್ಯವಾವುದು. ಆ ಕೃಷ್ಣನಿಗೆ ಹೆದರಿ ಸ್ವಧರ್ಮವಂ ಬಿಡಬೇಕೇ ಅಣ್ಣಾ – ಯಲೈ ಅರ್ಜುನ ವಳ್ಳೆಯ ಕಾರ್ಯವಂ ಮಾಡಿದೆ ಇದಕ್ಕಾಗಿ ಯಾತಕ್ಕೆ ಯೋಚಿಸುವೆ

ಪದ

ತಮ್ಮಾ ಭೀಮ ಹಮ್ಮು ಬೇಡ ಬೊಮ್ಮನ ಪಿತನೊಳು
ನಮ್ಮ ವೈರವು ಸಲ್ಲ ತಮ್ಮಾ ॥
ಗ್ನಾನಿಯು ನೀನಾಗಿ ಹೀನ ಕಾರ‌್ಯವಗೈವೆ
ಜ್ಞಾನಿಗಳ್ ಜಗದೊಳು ಏನೆನ್ನುತಿಹರೈ॥
ವನಜನಾಭನು ನಮ್ಮ ಅನುದಿನ ಸಲಹಿದ
ಘನ ಕಷ್ಟಗಳನ್ನೆಲ್ಲಾ ತೃಣವಾಗಿ ಕಳೆದಾ ॥
ಶರಪುರಿರಂಗನೋಳ್ ಜಗಳವು ಸಲ್ಲದು
ದುಗುಡವ ಬಿಟ್ಟು ನೀಂ ಸೊಗಸಿನಿಂದಿಹುದೈ ॥

ಧರ್ಮರಾಜ : ತಮ್ಮ ಭೀಮಸೇನ. ಬರಿದೇ ಹಮ್ಮಿನ ಮಾತಿನಿಂದ ಪ್ರಯೋಜನವಿಲ್ಲ. ಹಗಲಿರುಳು ನೆರಳಿನಂತೆ ನಮ್ಮನ್ನು ಕಾಪಾಡಿದ ಆ ಪರಮಾತ್ಮನಲ್ಲಿ ಕಲಹವಂ ಗೈದರೆ ಧರೆಯ ಜನರು ಅಪಹಾಸ್ಯವಂ ಮಾಡುವುದಿಲ್ಲವೆ ಹರಿಯೋಳ್ ಕಲಹವು ಸರಿಯಲ್ಲವೈ ಭೀಮಾ ವೈರಿ ನಿರ್ನಾಮ ॥

 

(ಕೃಷ್ಣನ ಸಭೆನಾರದ ಪ್ರವೇಶ)

ಪದ

ಜಯ ಜಯ ಶ್ರೀರಾಮ
ರಘುವರಾ ಶುಭಕರ ಶ್ರೀರಾಮಾ ॥
ರಾಮಾ ರವಿಕುಲಜಲನಿಧಿ ಸೋಮ.
ತಾರಕನಾಮ ದಶರಥ ರಾಮ ದನುಜ
ನಿರ್ನಾಮ ಪಟ್ಟಾಭಿರಾಮ ॥

ಕಾಮಿತದಾಯಕ ಕರುಣಾಧಾಮ
ಭೂಮಿಸುತಾ ಕಾಮ ಶ್ರೀರಾಮ
ಕೋಮಲ ಲೀಲಾಸರೋಜ
ಶ್ಯಾಮ ಜಯ ಜಯ ಶ್ರೀರಾಮ ॥

ಕೃಷ್ಣ : ಮುನೀಂದ್ರ ವಂದಿಸುವೆನು.

ನಾರದ : ಯದುಪತಿಯೆ ನಿನಗೆ ಮಂಗಳವಾಗಲಿ. ಕೃಷ್ಣಾ ಇದೇನು ಹೀಗೆ ಖಿನ್ನನಾಗಿರಲು ಕಾರಣವೇನು.

ಪದ

ಕೇಳೈ ನಾರದರೆ ಯತಿವರ‌್ಯರೆ ಕೇಳೈ ನಾರದರೆ ॥
ಪೇಳುವೆ ಲಾಲಿಸು ಗಯ ಮಾಡಿದಪರಾಧ
ಇಳೆಯೊಳು ನಾನೀಗಾ ಖೂಳನ ಪರಿಯನ್ನು ॥
ಬೆಳಗಿನ ವೇಳೆ ನಾರದ ಕೇಳು ಬೆಳಗಿನ ವೇಳೆ
ನಳಿನಮಿತ್ರಗೆ ಅರ್ಘ್ಯ ಲಲಿತಾದಿ ಕೊಡುತ್ತಿರೆ
ಖಳನ ಹಯದೆಂಜಲು ಇಳೆಯೊಳ್ ಕರಕೆ ಬೀಳಲ್ ॥