ಕರಿಬೇವು ವಿಶೇಷ ಪರಿಮಳಯುಕ್ತವಾಗಿದ್ದು, ವಗ್ಗರಣೆಗೆ ಅಗತ್ಯವಿರುವ ಸಾಮಗ್ರಿ. ಸುವಾಸನೆಗೆ ಅವುಗಳಲ್ಲಿನ ಆರುವ ತೈಲ ಪದಾರ್ಥವೇ ಕಾರಣ. ಕೈತೋಟದ ಗಿಡ.

ಪೌಷ್ಟಿಕ ಗುಣಗಳು : ಇದರ ಸೊಪ್ಪು ಪೌಷ್ಟಿಕ ತರಕಾರಿ. ಸೊಪ್ಪಿನಲ್ಲಿ ಅಧಿಕ ಪ್ರಮಾಣದ ಶರ್ಕರಪಿಷ್ಟ, ಪ್ರೊಟೀನ್, ಕೊಬ್ಬು, ಖನಿಜ ಪದಾರ್ಥ, ನಾರು ಮತ್ತು ಜೀವಸತ್ವಗಳು ಇರುತ್ತವೆ. ಸಾಕಷ್ಟು ಬಲಿತ ತಾಜಾ ಸೊಪ್ಪನ್ನು ಕಿತ್ತು ಬಳಸಬೇಕು.

೧೦೦ ಗ್ರಾಂ ಸೊಪ್ಪಿನಲ್ಲಿರುವ ವಿವಿಧ ಪೋಷಕಾಂಶಗಳು

ತೇವಾಂಶ – ೬೬.೫ ಗ್ರಾಂ
ಶರ್ಕರಪಿಷ್ಟ – ೧೬.೦ ಗ್ರಾಂ
ಪ್ರೊಟೀನ್ – ೬.೧ ಗ್ರಾಂ
ಕೊಬ್ಬು – ೧.೦ ಗ್ರಾಂ
ಒಟ್ಟು ಖನಿಜ ಪದಾರ್ಥ – ೩.೭ ಗ್ರಾಂ
ನಾರು ಪದಾರ್ಥ – ೬.೪ ಗ್ರಾಂ
ರಂಜಕ – ೬೦ ಮಿ.ಗ್ರಾಂ
ಕ್ಯಾಲ್ಸಿಯಂ – ೦.೦೮ ಗ್ರಾಂ
ಕಬ್ಬಿಣ – ೪ ಮಿ.ಗ್ರಾಂ
’ಎ’ ಜೀವಸತ್ವ – ೧೮೫೮೦ ಐಯು
ಥಯಮಿನ್ – ೧೯೨ ಮಿ.ಗ್ರಾಂ
ರೈಬೋಫ್ಲೇವಿನ್ – ೧೮೨ ಮಿ.ಗ್ರಾಂ
’ಸಿ’ ಜೀವಸತ್ವ – ೦.೦೮ ಗ್ರಾಂ
ಕ್ಯಾಲೊರಿಗಳು – ೩ ಮಿ.ಗ್ರಾಂ

ಔಷಧೀಯ ಗುಣಗಳು : ಕರಿಬೇವು ಸೊಪ್ಪಿನಲ್ಲಿ ಹಲವಾರು ಔಷಧೀಯ ಗುಣಗಳಿವೆ. ಅದರಲ್ಲಿ ವಿರೇಚನ ತಡೆಯುವ ಶಕ್ತಿಯಿದೆ. ಜ್ವರಪೀಡಿತರಿಗೆ ಇದರ ಎಲೆಗಳ ಕಷಾಯ ಕೊಡುತ್ತಾರೆ. ಎಲೆಗಳು ಶೈತ್ಯಕಾರಕ, ಹಸಿವು ಕಾರಕ, ವಾಕರಿಕೆ ಇದ್ದಲ್ಲಿ ಇದರ ಎಲೆಗಳ ರಸ ಮತ್ತು ನಿಂಬೆ ಹಣ್ಣಿನ ರಸ ಬೆರೆಸಿ ಕುಡಿಯಲು ನಿರ್ದೇಶಿಸುತ್ತಾರೆ.  ಇದರ ಚಿಗುರನ್ನು ತಿನ್ನುತ್ತಿದ್ದಲ್ಲಿ ಮೂಲವ್ಯಾಧಿಗೆ ಒಳ್ಳೆಯದು. ದಿನನಿತ್ಯ ಕರಿಬೇವು ಸೊಪ್ಪನ್ನು ಬಳಸುತ್ತಿದ್ದಲ್ಲಿ ಶರೀರದಲ್ಲಿನ ಕೊಬ್ಬು ಕರಗುತ್ತದೆ. ಸ್ಥೂಲಕಾಯರು ಇದನ್ನು ಬಳಸುತ್ತಿದ್ದಲ್ಲಿ ಭಾರ ಕುಗ್ಗುತ್ತದೆ. ಸಕ್ಕರೆ ಕಾಯಿಲೆಯಿಂದ ನರಳುತ್ತಿರುವವರು ಇದನ್ನು ತಪ್ಪದೇ ಬಳಸಬೇಕು. ಹೀಗೆ ಬಳಸುವುದರಿಂದ ಮೂತ್ರದಲ್ಲಿನ ಸಕ್ಕರೆ ಅಂಶ ಕ್ರಮೇಣ ಕಡಿಮೆಯಾಗುತ್ತದೆ. ಎಲೆಗಳ ರಸವನ್ನು ಕಣ್ಣುಗಳಿಗೆ ಬಿಟ್ಟಲ್ಲಿ ಪೊರೆ ಇದ್ದರೆ ಹೋಗುವುದೆಂದು ತಿಳಿದುಬಂದಿದೆ. ಹುಳುಕಚ್ಚಿದ ಸಂದರ್ಭಗಳಲ್ಲಿ ಇದರ ಹಣ್ಣುಗಳ ರಸ ಮತ್ತು ನಿಂಬೆ ಹಣ್ಣಿನ ರಸ ಬೆರೆಸಿ ಆ ಜಾಗದಲ್ಲಿ ಹಚ್ಚಬೇಕು. ಹೀಗೆ ಮಾಡುವುದರಿಂದ ನೋವು ಮಾಯವಾಗುವುದು. ಇದರ ಸೊಪ್ಪನ್ನು ಚರ್ಮರೋಗಗಳಲ್ಲಿ ನಿರ್ದೇಶಿಸುತ್ತಾರೆ.

ಉಗಮ ಮತ್ತು ಹಂಚಿಕೆ : ಕರಿಬೇವು ನಮ್ಮ ದೇಶದ್ದೇ ಆಗಿದೆ. ಹಿಮಾಲಯದ ತಪ್ಪಲು ಪ್ರದೇಶ ಇದರ ತವರೂರು. ಈಗಲೂ ಸಹ ಅಲ್ಲೆಲ್ಲಾ ಕಾಡು ಬಗೆಗಲು ಯಥೇಚ್ಛವಾಗಿ ಕಂಡುಬರುತ್ತವೆ. ಇದರ ಬಳಕೆ ಹಾಗೂ ಬೇಸಾಯಗಳು ದಕ್ಷಿಣ ಭಾರತದಲ್ಲಿ ಹೆಚ್ಚು.

ಸಸ್ಯ ವರ್ಣನೆ : ಕರಿಬೇವು ರುಟೇಸೀ ಕುಟುಂಬಕ್ಕೆ ಸೇರಿದ ಸಸ್ಯ. ಹಾಗೆಯೇ ಬೆಳೆಯಲು ಬಿಟ್ಟರೆ ಸಣ್ಣಮರವಾಗಬಲ್ಲದು. ಕೊಯೆನಿಗಿ ಎಂಬ ಹೆಸರು ಎಲೆಗಳಲ್ಲಿನ ಕೊಯೆನೆಜಿನ್ ಎಂಬ ಗ್ಲೂಕೋಸ್ ಯುಕ್ತ ರಾಳ ಪದಾರ್ಥದಿಂದ ಬಂದಿದೆ. ಇದರ ಮರಗಳನ್ನು ಹಾಗೆಯೇ ಬೆಳೆಯಲು ಬಿಟ್ಟರೆ ಸುಮಾರು ೩-೪ ಮೀಟರ್‌ಗಳಷ್ಟು ಎತ್ತರಕ್ಕೆ ಬೆಳೆಯಬಲ್ಲವು. ಮರದ ಕಾಂಡ ಅಷ್ಟೊಂದು ದೃಢವಾಗಿರುವುದಿಲ್ಲ; ಸ್ವಲ್ಪ ಮೋಟಾಗಿದ್ದು ಕವಲುರೆಂಬೆಗಳಿಂದ ಕೂಡಿರುತ್ತದೆ. ತೊಗಟೆ ಬೂದು ಬಣ್ಣದ್ದಿದ್ದು, ನಯವಾಗಿರುತ್ತದೆ. ರೆಂಬೆಗಳು ಸಾಕಷ್ಟಿದ್ದು ಸುತ್ತಲೂ ಹರಡಿರುತ್ತವೆ. ಮರದ ನೆತ್ತಿ ಒತ್ತಾಗಿರುವುದಿಲ್ಲ. ಚಿಗುರು ರೆಂಬೆಗಳು ಹಸುರುಗೆಂಪು ಇಲ್ಲವೇ ಹಸುರುಬಣ್ಣದ್ದಿರುತ್ತವೆ. ಚಳಿಗಾಲದಲ್ಲಿ ಎಲೆ ಉದುರಿ, ಬೇಸಿಗೆಯಲ್ಲಿ ಹೊಸ ಚಿಗುರು ಮತ್ತು ಹೂವು ಕಾಣಿಸಿಕೊಳ್ಳುತ್ತವೆ. ಸೊಪ್ಪು ಬಲಿತಂತೆಲ್ಲಾ ಅವುಗಳಲ್ಲಿನ ಪರಿಮಳ ತೀಕ್ಷ್ಣಗೊಳ್ಳುತ್ತದೆ ಪ್ರತಿ ಎಲೆಯಲ್ಲಿ ೨೦-೩೦ ಪ್ರತ್ಯೇಕ ಉಪ ಎಲೆಗಳಿರುತ್ತವೆ. ಎಲೆತೊಟ್ಟು ತೀರಾ ಗಿಡ್ಡ; ಉಪ ಎಲೆಗಳಲ್ಲೂ ಅಷ್ಟೇ. ಉಪ ಎಲೆಗಳ ತುದಿ ಈಟಿಯಾಕರ. ಚಿಗುರೆಲೆಗಳ ಬಣ್ಣ ಕೆಂಪು ಹಸುರು, ಬಲಿತಂತೆಲ್ಲಾ ಅವು ದಟ್ಟ ಹಸುರು ಬಣ್ಣಕ್ಕೆ ತಿರುಗುತ್ತವೆ. ಎಲೆಗಳ ಹಿತವಾದ ಪರಿಮಳಕ್ಕೆ ಅವುಗಳಲ್ಲಿನ ತೈಲ ಪದಾರ್ಥವೇ ಕಾರಣ. ಹೂವು ಗೊಂಚಲುಗಳಲ್ಲಿ ಬಿಡುತ್ತದೆ. ಬಿಡಿಹೂವು ಗಾತ್ರದಲ್ಲಿ ಸಣ್ಣವು. ಹೂವು ಬಿಡುವ ಕಾಲ ಫೆಬ್ರುವರಿ-ಮಾರ್ಚ್. ಹೂಗಳಲ್ಲೂ ಪರಿಮಳ ತುಂಬಿರುತ್ತದೆ. ಕಾಯಿಗಳ ಬಣ್ಣ ಹಸುರು ಬಿಳುಪು; ಅವು ಪೂರ್ಣ ಬಲಿತು ಪಕ್ವಗೊಂಡಂತೆ ಕೆಂಪಗಾಗಿ ನಂತರ ಕಪ್ಪು ಬಣ್ಣಕ್ಕೆ ಮಾರ್ಪಡುತ್ತವೆ. ಸಿಪ್ಪೆಯ ಮೇಲೆಲ್ಲಾ ತೈಲಗ್ರಂಥಿಗಳು ಹರಡಿರುತ್ತವೆ. ಹಣ್ಣನ್ನು ಹಿಚುಕಿದರೆ ಲೋಳೆಯಿಂದ ಆವೃತವಾದ ಹಸುರು ಬಣ್ಣದ ಬೀಜ ಕಂಡುಬರುತ್ತವೆ. ಹಣ್ಣುರಸವತ್ತಾಗಿದ್ದು ಸಿಹಿಯಾಗಿರುತ್ತವೆಯಾದರೂ ತೀಕ್ಷ್ಣಪರಿಮಳದಿಂದಾಗಿ ಹೆಚ್ಚಾಗಿ ತಿನ್ನಲು ಯಾರೂ ಇಷ್ಟಪಡುವುದಿಲ್ಲ. ಪ್ರತಿ ಬೀಜದಲ್ಲಿ ಹಲವಾರು ಭ್ರೂಣಗಳಿರುತ್ತವೆ; ಕರಿಬೇವು ಬಹುಭ್ರೂಣೀಯ ಬೀಜ ಹಾಗಾಗಿ ಪ್ರತಿ ಬೀಜ ಒಂದಕ್ಕಿಂತ ಹೆಚ್ಚು ಸಸಿಗಳನ್ನು ಉತ್ಪಾದಿಸಬಲ್ಲದು. ಹಣ್ಣುಗಳಲ್ಲಿ ಸಹ ರಾಳದ ಅಂಟು ಪದಾರ್ಥವಿರುತ್ತದೆ. ಕರಿಬೇವಿನಲ್ಲಿ ಬೇರು ಆಳವಾಗಿ ಇಳಿದಿದ್ದು, ನೆಲಮಟ್ಟದಲ್ಲಿ ಹರಡಿ ಬೆಳೆದ ಬೇರುಗಳು ಚಿಗುರುಗಳನ್ನು ತಳ್ಳುವುವು.

ಹವಾಗುಣ : ಇದಕ್ಕೆ ಒಣಹವೆ ಇದ್ದರೆ ಉತ್ತಮ. ದಕ್ಷಿಣ ಭಾರತದಲ್ಲಿ ಎಲೆಗಳು ಉದುರುವುದಿಲ್ಲ. ಆದರೆ ಉತ್ತರ ಭಾರತದಲ್ಲಿ ಚಳಿಗಾಲದಲ್ಲಿ ಅವು ಉದುರಿ ಮರಗಳು ಬೋಳಾಗುತ್ತವೆ. ಇತರ ಋತುಗಳಿಗಿಂತ ಚಳಿಗಾಲದಲ್ಲಿ ಸಸ್ಯ ಬೆಳವಣಿಗೆ ಕಡಿಮೆ.

ಭೂಗುಣ : ಆಳವಿರುವ ಹಾಗೂ ಸಾರವತ್ತಾದ ಮಣ್ಣಾದಲ್ಲಿ ಬಹುಚೆನ್ನಾಗಿ ಫಲಿಸುತ್ತದೆ. ನೀರು ನಿಲ್ಲದೆ ಬಸಿಯುವಂತಿರಬೇಕು. ಕೆಮಪು ಮಣ್ಣಿನ ಭೂಮಿ ಹೆಚ್ಚು ಸೂಕ್ತ.

ತಳಿಗಳು : ಕರಿಬೇವಿನಲ್ಲಿ ಹೆಸರಿಸುವಂತಹ ತಳಿಗಳಾವುವೂ ಇಲ್ಲ. ಸ್ಥಳೀಯವಾಗಿ ಕೆಂಪು ತೊಗಟೆಯ, ಸಣ್ಣ ಎಲೆಗಳಿಂದ ಕೂಡಿದ ಹಾಗೂ ದೊಡ್ಡ ಎಲೆಗಳ ಬಗೆಗಳೆಂದು ಗುರುತಿಸುತ್ತಾರಾದರೂ ಅವುಗಳಿಗೆ ನಿರ್ದಿಷ್ಟ ಹೆಸರುಗಳೇನೂ ಇಲ್ಲ. ಸಾಮಾನ್ಯವಾಗಿ ಕೆಂಪು ತೊಗಟೆಯ ಚಿಗುರು ರೆಂಬೆಗಳಿಂದ ಕೂಡಿದ ಹಾಗೂ ಸಣ್ಣ ಎಲೆಗಳ ಬಗೆ ಹೆಚ್ಚಿನ ಕಂಪನ್ನು ಹೊಂದಿರುವುದು ತಿಳಿದು ಬಂದಿದೆ. ’ಸುವಾಸಿನಿ’ ತಳಿ ಇತ್ತೀಚೆಗೆ ಧಾರವಾಡದ ಕೃಷಿ ವಿಶ್ವವಿದ್ಯಾಲಯವು ಉತ್ಪಾದಿಸಿ ಬೇಸಾಯಕ್ಕೆ ತಂದ ತಳಿ. ಇದರ ಗಿಡಗಳು ದೊಡ್ಡವು; ಎಲೆಗಳು ದೊಡ್ಡವಿದ್ದು ಹೆಚ್ಚಿನ ಇಳುವರಿ ಸಾಧ್ಯ.

ಭೂಮಿ ಸಿದ್ಧತೆ ಮತ್ತು ನಾಟಿ : ಸೂಕ್ತ ಅಂತರದಲ್ಲಿ ೩೦ ಘನ ಸೆಂ.ಮೀ. ಗಾತ್ರದ ಗುಂಡಿಗಳನ್ನು ತೆಗೆದು ಬಿಸಿಲಿಗೆ ಬಿಡಬೇಕು. ಈ ಕೆಲಸಕ್ಕೆ ಮೇ ತಿಂಗಳು ಸೂಕ್ತ. ಒಂದೆರಡು ಮಳೆಗಳಾದ ನಂತರ ಗುಂಡಿಗಳಿಗೆ ಸಮಪ್ರಮಾಣದ ತಿಪ್ಪೆಗೊಬ್ಬರ ಹಾಗೂ ಮೇಲ್ಮಣ್ಣುಗಳನ್ನು ಹರಡಿ ತುಂಬಬೇಕು. ಸಾಮಾನ್ಯವಾಗಿ ೪ ರಿಂದ ೫ ಮೀಟರ್ ಅಂತರಕೊಡುತ್ತಿದ್ದು ಸಂಶೋಧನೆಗಳಿಂದ ೧ ಮೀಟರ್ ಅಂತರ ಅನುಸರಿಸುವುದು ಹೆಚ್ಚು ಲಾಭದಾಯಕವೆಂದು ಕಂಡುಬಂದಿದೆ. ಪ್ಲಾಸ್ಟಿಕ್ ಚೀಲಗಳಲ್ಲಿ ಇಲ್ಲವೇ ಒಟ್ಲು ಪಾತಿಗಳಲ್ಲಿ ಬೀಜ ಬಿತ್ತಿ ಸಸಿಗಳನ್ನು ಎಬ್ಬಿಸಬೇಕು. ಗಿಡದಲ್ಲಿಯೇ ಪೂರ್ಣ ಬಲಿತು ಪಕ್ವಗೊಂಡ ಕಪ್ಪು ಬಣ್ಣಕ್ಕೆ ತಿರುಗಿದ ಸಿಪ್ಪೆಯಿಂದ ಕೂಡಿದ ದೊಡ್ಡ ಗಾತ್ರದ ಹಣ್ಣುಗಳನ್ನು ಆರಿಸಿಕೊಂಡು, ನೀರಿಗೆ ಸುರಿದು ಹಿಚುಕಿದಲ್ಲಿ ಸಿಪ್ಪೆ ಮತ್ತು ತಿರುಳಿನ ಲೋಳೆ ಬೇರ್ಪಡುತ್ತವೆ. ನೀರಿನ ತಳಭಾಗದಲ್ಲಿ ಕುಳಿತ ಗಟ್ಟಿ ಬೀಜಗಳನ್ನು ಮಾತ್ರವೇ ಹೊರತೆಗೆದು, ಮೂರು ನಾಲ್ಕು ದಿನಗಳ ಕಾಲ ನೆರಳಲ್ಲಿ ಒಣಗಿಸಿ ಅನಂತರ ಬಿತ್ತಬೇಕು. ಒಟ್ಲು ಪಾತಿಗಳಾದಲ್ಲಿ ಅನುಕೂಲಕ್ಕೆ ತಕ್ಕ ಉದ್ದ, ೧.೨ ಮೀಟರ್ ಅಗಲ ಮತ್ತು ೧೦ ಸೆಂ.ಮೀ. ಎತ್ತರ ಇರುವಂತೆ ಸಿದ್ಧಗೊಳಿಸಿ ಪ್ರತಿ ಒಟ್ಲು ಪಾತಿಗೆ ಸಾಕಷ್ಟು ತಿಪ್ಪೆಗೊಬ್ಬರ ಹರಡಿ, ಬೆರೆಸಬೇಕು. ಅನಂತರ ಬೀಜವನ್ನು ಗೀರು ಸಾಲುಗಳಲ್ಲಿ ತೆಳ್ಳಗೆ ಬಿತ್ತಬೇಕು. ಬಿತ್ತುವ ಆಳ ೧ ಸೆಂ.ಮೀ.

ಪ್ಲಾಸ್ಟಿಕ್ ಚೀಲಗಳಲ್ಲಿ ಬಿತ್ತುವ ಉದ್ದೇಶವಿದ್ದರೆ ೧೫ ಸೆಂ.ಮೀ. ಉದ್ದ ಮತ್ತು ೧೦ ಸೆಂ.ಮೀ. ಅಗಲ ಇರುವ ಪ್ಲಾಸ್ಟಿಕ್ ಚೀಲಗಳನ್ನು ಆರಿಸಿಕೊಂಡು ಅವುಗಳ ತಳಭಾಗ ಹಾಗೂ ಪಕ್ಕಗಳಲ್ಲಿ ರಂಧ್ರಗಳನ್ನು ಮಾಡಿ ಗೊಬ್ಬರ ಮತ್ತು ಮಣ್ಣುಗಳ ಮಿಶ್ರಣ ತುಂಬಬೇಕು. ಅನಂತರ ತಲಾ ಒಂದರಂತೆ ಬೀಜ ಊರಬೇಕು. ಹದವರಿತು ನೀರು ಕೊಡುತ್ತಿದ್ದಲ್ಲಿ ಬೀಜ ಸುಮಾರು ೧೫ ದಿನಗಳಲ್ಲಿ ಮೊಳೆಯುತ್ತವೆ. ನಾಟಿ ಮಾಡುವ ಕಾಲಕ್ಕೆ ಸಸಿಗಳ ವಯಸ್ಸು ಎರಡು ತಿಂಗಳಷ್ಟಿದ್ದರೆ ಸಾಕು.

ಸಸಿಗಳನ್ನು ನೆಡಲು ಜೂನ್-ಜುಲೈ ಸರಿಯಾದ ಕಾಲ. ಹೆಪ್ಪು ಸಮೇತ ನೆಡುವುದು ಒಳ್ಳೆಯದು. ಗಿಡಗಳಿಗೆ ಕೂಡಲೇ ಆಸರೆ ಕೋಲು ಸಿಕ್ಕಿಸಿ ಕಟ್ಟಬೇಕು. ಪ್ರತಿ ಗುಂಡಿಗೆ ೨೫ ಗ್ರಾಂ ಸೂಪರ್‌ಫಾಸ್ಫೇಟ್ ಹಾಕುವುದು ಲಾಭದಾಯಕ. ಸ್ವಲ್ಪ ಕಾಲ ಕೈ ನೀರು ಕೊಡುವುದು ಉತ್ತಮ.

ಗೊಬ್ಬರ : ನೆಟ್ಟ ನಂತರ ಗಿಡಗಳಿಗೆ ಪ್ರತಿ ವರ್ಷ ಗೊಬ್ಬರ ಕೊಡುವ ರೂಢಿ ಇಲ್ಲ. ಆದರೆ ಗಿಡವೊಂದಕ್ಕೆ ೧೦ ಕಿ.ಗ್ರಾಂ ತಿಪ್ಪೆಗೊಬ್ಬರ ಹಾಗೂ ಅರ್ಧ ಕಿ.ಗ್ರಾಂ ಹಿಂಡಿಗಳನ್ನು ಕೊಡುವುದು ಲಾಭದಾಯಕ. ಹಿಂಡಿ ಇಲ್ಲದಿದ್ದರೆ ೫೦ ಗ್ರಾಂ ಅಮೋನಿಯಂ ಸಲ್ಫೇಟ್ ಕೊಡಬಹುದು. ಸಾರಜನಕ ಒಂದನ್ನೇ ಕೊಡುವ ಬದಲಾಗಿ ೧೭:೧೭:೧೭ರ ಸುಫಲ ಸಂಯುಕ್ತ ರಾಸಾಯನಿಕ ಗೊಬ್ಬರ ಕೊಡುವುದು ಹೆಚ್ಚು ಲಾಭದಾಯಕ. ಒಂದೇ ಒಂದು ಕಂತಿನಲ್ಲಿ ಕೊಡುವುದರ ಬದಲು ಕಂತುಗಳಲ್ಲಿ ಕೊಡುವುದು ಒಳ್ಳೆಯದು. ಮೊದಲ ಕಂತನ್ನು ಜೂನ್-ಜುಲೈ ತಿಂಗಳಲ್ಲು ಮತ್ತು ಎರಡನೆಯ ಕಂತನ್ನು ಮಳೆಗಾಲದ ಕಡೆಯಲ್ಲೂ ಕೊಡಬೇಕು. ಗೊಬ್ಬರಗಳನ್ನು ಗಿಡಗಳ ಬುಡದಿಂದ ಸುಮಾರು ೬೦ ಸೆಂ.ಮೀ. ದೂರದಲ್ಲಿ ಉಂಗುರಾಕಾರದ ತಗ್ಗು ತೆಗೆದು ಅದರಲ್ಲಿ ಸಮನಾಗಿ ಹರಡಿ ಮಣ್ಣು ಮುಚ್ಚಿದರೆ ಪೋಲಾಗುವುದಿಲ್ಲ.

ನೀರಾವರಿ : ಕರಿಬೇವು ಸೊಪ್ಪಿನ ಗಿಡಗಳಿಗೆ ಹದವರಿತು ನೀರು ಕೊಡಬೇಕು. ಅವು ಸ್ವಲ್ಪ ಎತ್ತರಕ್ಕೆ ಬೆಳೆದ ನಂತರ ನೀರನ್ನು ಹಾಯಿಸುವುದೇ ಸರಿ. ಹಾಯಿಸಿದ ನೀರು ಕಾಂಡವನ್ನು ತಾಕದಂತೆ ನಿಗಾವಹಿಸಬೇಕು. ಮಳೆಗಾಲದಲ್ಲಿ ಅಷ್ಟೊಂದು ನೀರು ಬೇಕಾಗಿಲ್ಲ. ಚಳಿಗಾಲ ಹಾಗೂ ಬೇಸಿಗೆಗಳಲ್ಲಿ ಹೆಚ್ಚು ನೀರು ಬೇಕಾಗುತ್ತದೆ. ಅವು ಬೆಳೆದು ದೊಡ್ಡವಾದ ನಂತರ ಕಡಿಮೆ ನೀರಿದ್ದರೂ ತಡೆದುಕೊಳ್ಳಬಲ್ಲವು. ಆದರೆ ಇಳುವರಿ ಕುಸಿಯುತ್ತದೆ. ಸಂಶೋಧನೆಯ ಪ್ರಕಾರ ಗಿಡವೊಂದಕ್ಕೆ ದಿನಕ್ಕೆ ೨೨ ಲೀಟರ್ ನೀರು ಕೊಟ್ಟಾಗ ಹೆಚ್ಚಿನ ಸೊಪ್ಪು ಸಿಕ್ಕಿರುವುದಾಗಿ ತಿಳಿದುಬಂದಿದೆ.

ಆಕಾರ ಮತ್ತು ಸವರುವಿಕೆ : ಗಿಡಗಳಿಗೆ ಒಳ್ಳೆಯ ಆಕಾರ ಅಗತ್ಯ. ಪ್ರಧಾನ ಕಾಂಡ ನೆಟ್ಟಗಿರಬೇಕು ಹಾಗೂ ನೆಲಮಟ್ಟದಿಂದ ಸುಮಾರು ೧ ಮೀಟರ್ ಎತ್ತರದಲ್ಲಿ ಕವಲೊಡೆದರೆ ಅಡ್ಡಿಯಿಲ್ಲ. ನೆಟ್ಟನಂತರ ಸುಳಿಯನ್ನು ಒಂದು ಮೀಟರ್ ಎತ್ತರದಲ್ಲಿ ಚಿವುಟಿದರೆ ಸಾಕಷ್ಟು ಪಕ್ಕ ಮೋಸುಗಳು ಹುಟ್ಟಿ ಹರಡುತ್ತವೆ. ಗಿಡಗಳ ನೆತ್ತಿ ಸಮತೋಲನವಾಗಿದ್ದು, ಬಲಿಷ್ಟವಾಗಿರಬೇಕು. ಅದೇ ರೀತಿ ಬೇರುಗಳಿಂದ ಮೂಡಿ ಬೆಳೆಯುವ ಚಿಗುರುಗಳನ್ನು ಚಿವುಟಿ ಹಾಕಬೇಕು.

ಅಂತರ ಬೇಸಾಯ ಮತ್ತು ಕಳೆ ಹತೋಟಿ : ಒಮ್ಮೆ ನೆಟ್ರೆ ಇದರ ಗಿಡಗಳು ಬಹಳ ಕಾಲ ಇರುವಂತಹವು. ಹೆಚ್ಚಿನ ಅಂತರಕೊಟ್ಟು ನೆಟ್ಟು ಬೆಳೆಸಿದಾಗ ಅಂತಹ ಬೆಸಾಯ ಸುಲಭವಿರುತ್ತದೆ. ಒಂದು ಮೀಟರ್ ಅಂತರದಲ್ಲಿ ನೆಟ್ಟು ಬೆಳೆಸಿದಾಗ ಸಾಲುಗಳ ಹಾಗೂ ಸಸಿಗಳ ನಡುವೆ ಕೈಯ್ಯಾಡಿಸಿ ಮಣ್ಣನ್ನು ಸಡಿಲಿಸುವುದು ಸ್ವಲ್ಪ ಕಷ್ಟ. ಕಳೆಗಳನ್ನು ಕಿತ್ತು ತೆಗೆಯುತ್ತಿರಬೇಕು. ಪಾತಿಗಳು ಹಸನಾಗಿರುವಂತೆ ನೋಡಿಕೊಳ್ಳಬೇಕು.

ಮಿಶ್ರ ಬೆಳೆಯಾಗಿ : ಹೆಚ್ಚು ಅಂತರ ಕೊಟ್ಟು ಬೆಳೆಸಿದಾಗ ಬಹಳಷ್ಟು ಜಾಗ ಖಾಲಿಯಾಗಿಯೇ ಉಳಿದಿರುತ್ತದೆ. ಸಾಲುಗಳ ನಡುವೆ ತರಕಾರಿಗಳನ್ನು ಬೆಳೆದು ಸ್ವಲ್ಪ ಆದಾಯ ಪಡೆಯಬಹುದು. ಅದೂ ಸಾಧ್ಯವಾಗದೆ ಹೋದರೆ ಹಸುರುಗೊಬ್ಬರದ ಬೆಳೆಗಳನ್ನಾದರೂ ಬೆಳೆದು ಮಣ್ಣಿಗೆ ಸೇರಿಸಿದರೆ ಅದರ ಫಲವತ್ತತೆ ಸುಧಾರಿಸುತ್ತದೆ ಹಾಗೂ ಕಳೆ ಹತೋಟಿ ಸುಲಭವಿರುತ್ತದೆ, ಗಿಡಗಳು ಎತ್ತರಕ್ಕೆ ಬೆಳೆದಾಗ ಬಳ್ಳಿ ತರಕಾರಿಗಳನ್ನು ಬಿತ್ತಿ ಅವುಗಳ ಮೇಲೆ ಹಬ್ಬಿಸಬಹುದು.

ಕೊಯ್ಲು ಮತ್ತು ಇಳುವರಿ : ಸಸಿಗಳನ್ನು ನೆಟ್ಟ ೪-೫ ತಿಂಗಳುಗಳ ನಂತರ ಸೊಪ್ಪನ್ನು ಕಿತ್ತು ಬಳಸಬಹುದು. ಹೆಚ್ಚಿನ ಪ್ರಮಾಣದಲ್ಲಿದ್ದರೆ ಸೊಪ್ಪನ್ನು ವರ್ಷದಲ್ಲಿ ಎರಡು ಸಾರಿ ಕಿತ್ತು ಮಾರಾಟ ಮಾಡುತ್ತಾರೆ. ಸುಮಾರು ೨೪ ರಿಂದ ೩೦ ವರ್ಷಗಳವರೆಗೆ ಸೊಪ್ಪು ಸಿಗುತ್ತಿರುತ್ತದೆ. ಸೊಪ್ಪನ್ನು ಕೂಡಲೇ ಸಾಗಿಸಿ, ಮಾರಾಟ ಮಾಡಿದರೆ ಹೆಚ್ಚಿನ ಬೆಲೆ ಸಿಗುತ್ತದೆ. ವರ್ಷಕ್ಕೆ ೨೫ ರಿಂದ ೫೦ ಕಿ.ಗ್ರಾಂ. ಸೊಪ್ಪನ್ನು ನಿರೀಕ್ಷಿಸಬಹುದು.

ಕೀಟ ಮತ್ತು ರೋಗಗಳು : ಕರಿಬೇವಿಗೆ ಹಾನಿಯನ್ನುಂಟುಮಾಡುವ ಕೀಟಗಳಲ್ಲಿ ಕಾಂಡ ಕೊರೆಯುವ ಹುಳು, ಎಲೆ ತಿನ್ನುವ ಆಮೆ ದುಂಬಿ, ನಿಂಬೆಯ ಚಿಟ್ಟೆ ಮತ್ತು ರಸಹೀರುವ ತಗಣೆ ಮುಖ್ಯವಾದುವು. ರೋಗಗಳಲ್ಲಿ ಮುಖ್ಯವಾದುದು ಬೂದಿರೋಗ ಮತ್ತು ಎಲೆಚುಕ್ಕೆ ರೋಗ.

ಕಾಂಡ ಕೊರೆಯುವ ಹುಳದ ಹತೋಟಿ ಕಷ್ಟ. ಹುಳುಗಳು ಕಾಂಡದ ಒಳಗೆ ಇದ್ದುಕೊಂಡು, ಕೊರೆಯುತ್ತಿರುತ್ತವೆ. ರಂಧ್ರಗಳಿಂದ ಹೊರಬೀಳುವ ಹಿಕ್ಕೆ, ಮರದ ಪುಡಿ ಮುಂತಾದುವುಗಳಿಂದ ಹುಳುಗಳು ಇವೆಯೆಂಬುದು ಖಚಿತಗೊಳ್ಳುತ್ತದೆ. ಸಣ್ಣ ಕಂಬಿಯ ತುಂಡನ್ನು ರಂಧ್ರಗಳೊಳಕ್ಕೆ ಚುಚ್ಚಿದಲ್ಲಿ ಅವು ಸಾಯುತ್ತವೆ. ಅದು ಸಾಧ್ಯವಾಗದಿದ್ದಲ್ಲಿ ರಂಧ್ರಗಳೊಳಕ್ಕೆ ಪೆಟ್ರೋಲ್ ಅದ್ದಿದ ಹತ್ತಿಯ ಸಿಂಬಿಯನ್ನು ತೂರಿಸಿ, ಮೇಲೆ ಕೆಸರು ಮಣ್ಣನ್ನು ಮೆತ್ತಿದಲ್ಲಿ ಹುಳುಗಳು ಉಸಿರುಕಟ್ಟಿ ಸಾಯುತ್ತವೆ.

ಆಮೆ ದುಂಬಿಯ ಎಳೆಯ ಕೀಟಗಳು ಎಲೆಗಳಲ್ಲಿನ ಹಸುರುಭಾಗವನ್ನೆಲ್ಲಾ ತಿಂದು ಹಾಳು ಮಾಡುತ್ತವೆ. ಹಾನಿಗೀಡಾದ ಎಲೆಗಳು ಕಾಗದದಂತಾಗಿ, ಬಿಳಿಚಿಕೊಂಡು ನಂತರ ಮುದುಡಿಕೊಳ್ಳುತ್ತವೆ. ಅವುಗಳ ಹತೋಟಿಗೆ ೧೦ ಲೀಟರ್ ನೀರಿಗೆ ೫೦ ಮಿ.ಲೀ. ಮಾನೊಕ್ರೊಟೋಫಾಸ್ ಕೀಟನಾಶಕ ಬೆರೆಸಿ ಸಿಂಪಡಿಸಬೇಕು.

ನಿಂಬೆ ಚಿಟ್ಟೆ ಕರಿಬೇವಿನ ಗಿಡಗಳಲ್ಲಿ ಹಾರಾಡಿ ಎಲೆಗಳ ಮೇಲೆಲ್ಲಾ ಮೊಟ್ಟೆ ಇಡುತ್ತವೆ. ಮೊಟ್ಟೆಯೊಡೆದು ಹೊರಬಂದ ಎಳೆಯ ಕೀಟಗಳು ಹಸುರುಭಾಗವನ್ನೆಲ್ಲಾ ತಿಂದು ಹಾಳು ಮಾಡುತ್ತವೆ. ಪ್ರಾಯದ ಕಂಬಳಿ ಹುಳುಗಳು ನೋಡಲು ಹಸುರು ಬಣ್ಣವಿದ್ದು, ಕೋಶಾವಸ್ಥೆಯನ್ನು ಪ್ರವೇಶಿಸುತ್ತವೆ.

ಕೆಲವೊಮ್ಮೆ ಹಸುರು ಮತ್ತು ಕಂದು ಬಣ್ಣದ ತಗಣೆಗಳು ಎಲೆಗಳಲ್ಲಿನ ರಸವನ್ನು ಹೀರಿ ಸಾಕಷ್ಟು ಹಾನಿಯನ್ನುಂಟು ಮಾಡುತ್ತವೆ. ಹಾನಿಗೀಡಾದ ಚಿಗುರು ಮತ್ತು ಎಲೆಗಳು ಬಾಡಿ ಒಣಗುತ್ತವೆ. ಈ ಎರಡೂ ಕೀಟಗಳ ಹತೋಟಿ ಆಮೆ ದುಂಬಿಯಲ್ಲಿದ್ದಂತೆ.

ಬೂದಿ ರೋಗ ಕಾಣಿಸಿಕೊಂಡ ಎಲೆಗಳಲ್ಲಿ ನವಿರಾದ ಬೂದು ಬಣ್ಣದ ಧೂಳು ಕಂಡುಬರುತ್ತದೆ. ರೋಗಪೀಡಿತ ಎಲೆಗಳು ವಾಸ್ತವ ಬಣ್ಣ ಕಳೆದುಕೊಂಡು ನಂತರ ಉದುರಿಬೀಳುತ್ತವೆ. ಸೂಕ್ತ ಪ್ರಮಾಣದ ನೀರಲ್ಲಿ ಕರಗುವ ಗಂಧಕವನ್ನು ಸಿಂಪಡಿಸಬೇಕು.

ಎಲೆ ಚುಕ್ಕೆ ರೋಗ (ಸಿಲಿಂಡ್ರೋಸ್ಪೊರಿಯಂ)- ಎಲೆಗಳ ಮೇಲೆ ಸಣ್ಣ ಸಣ್ಣ ಬಿಳಿ ಚುಕ್ಕೆಗಳು ಕಾಣಿಸಿಕೊಂಡು ಎಲೆಗಳು ಉದುರಿ ಹೋಗುವುವು. ಈ ರೋಗದ ಹತೋಟಿಗೆ ಡೈಥೇನ್ ಎಂ-೪೫ ಅನ್ನು ಒಂದು ಲೀಟರ್ ನೀರಿಗೆ ೨ ಗ್ರಾಂ ಪ್ರಕಾರ ಬೆರೆಸಿ ಸಿಂಪಡಿಸಬೇಕು.

* * *