ಶಿವನಿಂಗ ಗೌಡನ ಮಗನೆಂದಲ್ಲ; ಸ್ವಂತ ಛಾತಿ ಇದ್ದವನು. ಯಾರಿಗೊಂದು ಅಂದವನಲ್ಲ, ಆಡಿಸಿಕೊಂಡವನಲ್ಲ, ತಾನುಂಟೋ ತನ್ನ ಹೊಲ ಮನೆಯುಂಟೋ, ಎದುರಾಡಿದವನಲ್ಲ, ಕಣ್ಣೆತ್ತಿ ಒಬ್ಬರ ಮುಖ ದಿಟ್ಟಿಸಿ ನೋಡಿದವನಲ್ಲ, ವಾಚಾಳಿಯಲ್ಲ, ಮುಂಗುಲಿ, ಗುಬ್ಬಿ, ಗಿಳಿಗಳನ್ನು ಹಿಡಿದು ಸಾಕುವುದರಲ್ಲಾಯಿತು. ಹಕ್ಕಿ ಹಾಗೂ ಕಾಡುಪ್ರಾಣಿಗಳಂತೆ ಕೂಗುವುದರಲ್ಲಾಯಿತು; ಮರಹತ್ತಿ ಕೋತಿಗಳಂತೆ ನೆಗೆದಾಡುವುದರಲ್ಲಾಯಿತು. ಹಕ್ಕಿ ಹಾಗೂ ಕಾಡುಪ್ರಾಣಿಗಳಂತೆ ಕೂಗುವುದರಲ್ಲಾಯಿತು; ಮರಹತ್ತಿ ಕೋತಿಗಳಂತೆ ನೆಗೆದಾಡುವುದರಲ್ಲಾಯಿತು, ಅದಕ್ಕೇ ಅವನ ತಾಯಿ ಶಿವಸಾನಿ, ‘ಇವನೆಂದು ಮನುಷ್ಯರೊಳಗೆ ಬೆರೆಯುತ್ತಾನೋ!’ ಎಂದುಕೊಳ್ಳುತ್ತಿದ್ದಳು. ಹೆಂಗಸರನ್ನು ಕಂಡಾಗಲಂತೂ ಹುಡುಗ ಆಮೆಯ ಥರ ಒಳಗೊಳಗೆ ಇಂಗಿ ಸಂಕೋಚಗೊಳ್ಳುತ್ತಿದ್ದ. ಕೆರೆಯಲ್ಲಿ ಮುಳುಗುತ್ತಿದ್ದ ಸುಂದರಿಯನ್ನು ಬದುಕಿಸಿದಾಗ ಕೆಲವರು ಗುಡಸೀಕರನ ಮೇಲೆ ಸಿಟ್ಟಿನಿಂದ ಹಾಗೆ ಮಾಡಬಾರದಿತ್ತು ಎಂದಿದ್ದರು. ಆದರೆ ದತ್ತಪ್ಪ ಭೇಶ್ ಅಂದಿದ್ದ. ಎಷ್ಟೆಂದರೂ ‘ಗೌಡನ ಬೀಜ’ ಎಂದಿದ್ದಳು. ಲಗಮವ್ವ.

ತನ್ನ ಜೀವ ಉಳಿಸಿದ ಧೀರ ಬಾಲಕನನ್ನು ಸುಂದರಿ ಆಗಾಗ ಧ್ಯಾನಿಸುತ್ತಿದ್ದಳು. ಗುಡಸೀಕರನ ತೋಟದ ಕಡೆ ಹೋದರೆ, ಪಕ್ಕದಲ್ಲೇ ಅವರ ತೋಟ, ಅಲ್ಲಿರುತ್ತಿರಲಿಲ್ಲ. ಊರಲ್ಲಿ ಹಾದಾಡುವಾಗಲೂ, ನೀರು ತರುವಾಗಲೂ ಯಾವಾಗಲೂ ಹೊರಬಿದ್ದಾಗಲೂ ಹುಡುಕಿದ್ದಳು. ಊರ ಬಾಲೆಯರಿಗೇ ಅಪರೂಪವಾದ ಹುಡುಗ ಇವಳಿಗೆಲ್ಲಿ ಸಿಕ್ಕಾನು? ಸುದ್ದಿಯವನಲ್ಲ, ಬೇಲಿ ಜಿಗಿದವನಲ್ಲ, ತೋರುಬೆರಳಿಗೆ ಗುರಿಯಾದವನಲ್ಲ, ಅವ್ವಾ ಎಂಥಾ ಗಂಭೀರ ಇದ್ದಿದ್ದಾನ! ಎಂದುಕೊಂಡಿದ್ದಳು. ಇನ್ನೇನು ಬೇಡ, ಒಮ್ಮೆ ಸಿಕ್ಕರೆ ‘ಎಪ್ಪಾ ಉಪಕಾರಾತೊ’ ಎಂದಾದರೂ ತನ್ನ ಕೃತಜ್ಞತೆ ಹೇಳುವ ಮನಸ್ಸಾಗಿತ್ತು. ಆ ಅವಕಾಶವೂ ಸಿಕ್ಕಿತು.

ಒಂದು ದಿನ ಇನ್ನೂ ಇಳಿಹೊತ್ತಾಗಿರಲಿಲ್ಲ. ಆಕಾಶದಲ್ಲಿ ಅಡ್ಡಮಳೆಯ ದಟ್ಟ ಮೋಡಗಳು ಕಟ್ಟಿ ಸೂರ್ಯನನ್ನು ಮುಚ್ಚಿ, ಗುಡ್ಡದೋರೆಯಲ್ಲಿ ನೆಲ ಕಂಡು ಹುಬ್ಬು ಹಾರಿಸುವಂತೆ ಮಿಂಚುತ್ತಿದ್ದವು. ಕೊಯ್ಲಿಗೆ ಸಿದ್ಧವಾಗಿ ಬೆಳೆದ ಮಾಗಿ ಹಾಗೇ ನಿಂತಿತ್ತು. ಇನ್ನೇನು ನಾಕಾರು ದಿನಗಳಲ್ಲಿ ದೀಪಾವಳಿ ಹಬ್ಬವಾಗಿ ಬೆಳೆ ಕೈಗೆ ಬರಬೇಕಷ್ಟೆ. ಈಗ ಮಳೆಯಾದರೆ ಕೈಗೆ ಬಂದೂ ಬಾರದ ಹಾಗೆ. ರೈತರು ಹಿಂಡುಗಟ್ಟಿ ಹೊಲಗಳಿಗೆ ಹೋಗುವುದು ಈಗ ಕಡಿಮೆ. ಹೋದರೂ ಒಬ್ಬಿಬ್ಬರು ಮೇವಿಗೆ, ಕಾಯಿಪಲ್ಲೆಗೆ, ದನ ಮೇಯಿಸಲಿಕ್ಕೆ ಹೋಗಬೇಕಷ್ಟೆ. ಮೋಡ ಕಟ್ಟಿದೊಡನೆ ರೈತರು ಹುಬ್ಬಿಗೆ ಕೈಹಚ್ಚಿ ಆಕಾಶದ ಕಡೆ ದೈನಾಸದಿಂದ ನೋಡಿದನು. ತಂಗಾಳಿ ಸೂಸತೊಡಗಿತ್ತು. ಶೀಗೀ ಹುಣ್ಣಿಮೆಯ  ಬುಟ್ಟಿಯೊಳಗಿಂದ ಬರುವ ಚಳಿಗಾಳಿ ಇದಾಗಿರಲಿಲ್ಲ. ಮಳೆ ಬರುವುದೇ ಖಾತ್ರಿಯಾಗಿ ಹಳಹಳಿಸುತ್ತ ರೈತರು ದನ ಬಿಚ್ಚಿಕೊಂಡು ಊರ ಕಡೆ ತೆರಳಿದರು. ಗುಡಿಸಲು ಕಟ್ಟಿದ್ದವರು ಅಲ್ಲೇ ಉಳಿದರು. ಈ ಅಡ್ಡಮಳೆಯಿಂದಾಗಿ ಕರಿಮಾಯಿಯ ಕೋಟ ಸ್ಪಷ್ಟವಾಗಿತ್ತು. ತೋಟದ ಗುಡಿಸಲಲ್ಲಿ ಶಿವನಿಂಗ ಒಬ್ಬನೇ ನಾರಿನಿಂದ ಹುರಿ ಹೊಸೆಯುತ್ತ ಕೂತಿದ್ದ. ಪಕ್ಕದ ಗುಡಸೀಕರನ ತೋಟದಲ್ಲಿ ಚಿಮಣಾ ಇದ್ದಂತಿತ್ತು. ಸಿನೆಮಾ ಹಾಡು ಗೊಣಗುತ್ತಿದ್ದಳೆಂದೂ ತೋರುತ್ತದೆ. ಅಥವಾ ಅದು ಚಿಮಣಾಳ ಹಾಡೇ ಆಗಿರಬೇಕಿರಲಿಲ್ಲ. ಯಾಕೆಂದರೆ ಬಸವರಾಜೂನ ರೇಡಿಯೋ ಕೂಡ  ಹಾಡುತ್ತಿದ್ದುದು ಹಾಗೇ, ಇದ್ದಕ್ಕಿದ್ದಂತೆ ಹಾಡು ನಿಂತಿತು. ಹಾಡಿದರು, ಹಾಡದಿದ್ದರೂ ಅದರಿಂದ ಇವನಿಗೇನಾಗಬೇಕಾಗಿದೆ? ಹೊಸೆಯುತ್ತ ಕೂತ.

ಅಷ್ಟರಲ್ಲಿ ಸಮೀಪ ನಿಂತು ಯಾರೋ ತನ್ನನ್ನು ಗಮನಿಸುತ್ತಿದ್ದರೆನಿಸಿತು. ಕತ್ತೆತ್ತಿ ನೋಡಿದ. ಎದುರಿಗೆ ಚಿಮಣಾ ನಿಂತಿದ್ದಳು. ಹೊಯ್ಕಾಯಿತು. ಗಂಟಲೊಣಗಿ ಎದೆ ಧಸ್ಸೆಂದಿತು. ಬಂದವಳು ಯಾರೇ ಆಗಿರಲಿ ತನ್ನ ಗುಡಿಸಲಿಗೆ ಬಂದಿರೋಣದರಿಂದ ಮಾತಾಡಿಸಬೇಕಾದವನು ತಾನಲ್ಲವೆ? ಹಿಡಿದ ಹುರಿ ಕೈಯಲ್ಲೇ, ಮೂಡಿದ ಮಾತು ಗಂಟಲಲ್ಲೇ, ಹೊಯ್ಕಿನ ಭಂಗಿಯಲ್ಲೇ ಹಾಗೇ ಕೂತ. ಹುಡುಗನ ಬೆರಗಿಗೆ ಚಿಮಣಾ ಕುಲುಕುಲು ನಕ್ಕಳು.

“ಒಬ್ಬನs ಏನ ಮಾಡಾಕ ಹತ್ತೀದಿ?” ಅಂದಳು. ಶಿವನಿಂಗ ಮಾತಾಡಲಿಲ್ಲ. ಕೈ ಮುಂದೆ ಮಾಡಿ ಹುರಿತೋರಿಸಿದ ಅಷ್ಟೆ, “ಅಲೀ ನೋಡೋಣು” ಎನ್ನುತ್ತ ಅವನ ಬಳಿಗೆ ಹೋದಳು. ತಕ್ಷಣ ಹಾವು ಕಂಡಂತೆ ದೂರ ಸಿಡಿದ. ಚಿಮಣಾ ಖಿಖ್ಖೆಂದು ನಕ್ಕಳು. ಎಂಥಾ ಹುಚ್ಚು ಹುಡುಗ ಎಂದುಕೊಂಡಳು. ಆ ಹುಚ್ಚುತನ ಸೂಜಿಗಲ್ಲಿನಂತೆ ಅವಳನ್ನೆಳೆಯಿತು. ಹುಡುಗ ತಬ್ಬಿಬ್ಬಾಗಿ ಇನ್ನೂ ದೂರ ನಿಂತಿದ್ದ. ಇವನನ್ನು  ಮುಟ್ಟುವುದಿರಲಿ ಮಾತಿಗೆಳೆಯುವುದೂ ಕಷ್ಟ. ಅವಳು ನಿಂತಷ್ಟೂ ಇವನ ಪೆದ್ದುತನ ಹೆಚ್ಚಿತು. ಪೆದ್ದುತನ ಕಂಡಷ್ಟೂ ಇವಳ ಉಮೇದಿ ಉಕ್ಕಿತು.

“ಅಲ್ಲಾ, ಹೊಲದಾಗ ಸೇಂಗಾ ಇದ್ದರ ಸುಟ್ಟುಕೊಡಬಾರದ?” ಎಂದಳು. ಶಿವನಿಂಗ ತೋಟದ ಅಂಚಿನ ಕಡೆ ಕೈಮಾಡಿ ತೋರಿಸಿ ಈಗಲೇ ಸುಟ್ಟುಕೊಡಬೇಕೆಂದು ಉತ್ಸಾಹದಿಂದ ಆ ಕಡೆ ನಡೆದ. ಚಿಮಣಾ ಅವನ ಹಿಂದಿನಿಂದಲೇ ನಡೆದಳು. ಈಗ ಓಡತೊಡಗಿದ. ಚಿಮಣಾ ಒಂದು ಹೆಜ್ಜೆ ಹಾಕಿದರೆ, ಇವನು ಹತ್ತು ಹೆಜ್ಜೆ ಧಾವಿಸುತ್ತಿದ್ದ. ತೋಟಕ್ಕಂಟಿ ಹಳ್ಳಿ, ಹಳ್ಳದಾಚೆ ಜೋಳದ ಹೊಲ, ಹೊಲದಂಚಿಗೆ ಸೇಂಗಾ ಬೆಳೆ – ಸುಮಾರು ಹತ್ತು ಕೂರಿಗೆ ನೆಲವನ್ನು ಹೀಗೆ ಕ್ರಮಿಸಿದರು.

ಶಿವನಿಂಗ ಪಸಪಸ ಹತ್ತು ಬಳ್ಳಿ ಕಿತ್ತ. ಕಾಯಿ ಹರಿದ.  ಓಡಿಹೋಗಿ ಕೊರೆ ಬೇಲಿ ತಂದ, ಕೂಡಿಟ್ಟು ಮೇಲೆ ಸೇಂಗಾ ಸುರಿದ. ಬೆಂಕಿಗಾಗಿ ಸುತ್ತ ನೋಡಿದ. ದೂರ ಮರಡಿಯ ಓರೆಯಲ್ಲಿ ಹೊಗೆ ಹಾಯುತ್ತಿತ್ತು. ಓಡಿಹೋದ. ಹುಡುಗನ ಕಾಲಲ್ಲಿ ಕುದುರೆ ಗೆರೆಯಿದ್ದುವೋ ಏನೋ! ನೋಡು ನೋಡುವದರಲ್ಲಿ ಗುರಿಮುಟ್ಟಿದ. ಚಕಪಕ ಮಿಂಚಿನ ವೇಗದಲ್ಲಿ ಸಂಚರಿಸಿ ಕುಳ್ಳು ಬೆಂಕಿ ತಂದು ಹಚ್ಚಿದ. ದೂರ ಕೂತುಕೊಂಡು ಇವನನ್ನೇ ನೋಡುತ್ತಿದ್ದ ಚಿಮಣಾ “ಅದ್ಯಾಕ ಅಲ್ಲಿ ಬೆಂಕಿ?” ಎಂದು ಮರದಡಿಯ ಕಡೆ ಕೈಮಾಡಿ ಕೇಳಿದಳು. ಕೇಳಿಸಿತೋ, ಕೇಳಿಸಿಲ್ಲವೋ ಎಂಬಂತೆ “ಲಗಮವ್ವನ ಸೆರೇದ ಭಟ್ಟಿ” ಅಂದ. ಸೆರೆ ಅಂದೊಡನೆ ಅವಳ ಬಾಯಿ ನೀರೂರಿತು. “ಹೋಗಿ ಸೊಲಪ ಕುಡದ ಬರೋಣು ಬಾರಲಾ” ಎಂದಳು. ಇಷ್ಟು ಕೇಳಿದ್ದೇ ಯಾಕೆಂಬುದಿಲ್ಲ, ಏನೆಂಬುದಿಲ್ಲ, ಶಿವನಿಂಗ ಆ ಕಡೆ ಓಡತೊಡಗಿದ. ಇವಳಿಗಾಶ್ಚರ್ಯವಾಯ್ತು. ಅಷ್ಟು ದೂರ ಹೋದ ಮೇಲೆ ಸೆರೆ ತರಲಿಕ್ಕೆ ಓಡಿದನೆಂದು ಗೊತ್ತಾಯ್ತು. ಇವಳು ಬೆನ್ನಹತ್ತಿದಳು. ಸಕಾಲಕ್ಕೆ ಇವಳು ಅಲ್ಲಿ ಮುಟ್ಟದಿದ್ದರೆ ಕಾಯ್ದ ಇಡೀ ಹರವಿಯನ್ನೇ ಹೊತ್ತು ತರುತ್ತಿದ್ದನೋ ಏನೋ!

ಮೆಳೆಯ ಮರೆಯಲ್ಲಿ ತಗ್ಗಿನಲ್ಲೊಂದು ಹರವಿಯಿಟ್ಟು ಬೆಂಕಿ ಹಚ್ಚಲಾಗಿತ್ತು. ಹರವಿಯ ಮೇಲೆ ದೊಡ್ಡ ಹರಿವಾಣ ಮುಚ್ಚಲಾಗಿತ್ತು. ಅದು ಲಗಮವ್ವನ ಸೆರೇದ ಭಟ್ಟಿ. ಹೇಳಿಕೊಂಡರಾಯ್ತೆಂದು ಹರವಿ ಬಗ್ಗಿಸಿ ಹರಿವಾಣ ತುಂಬಿದ. ಭಕ್ತಿಯಿಂದ ಸುಂದರಿಗೆ ಕೊಟ್ಟ. ಹದವೇರಿ ಸುಮಾರು ಹೊತ್ತಾಗಿದ್ದರಿಂದ, ಅಪರೂಪ ರುಚಿಯ ಉಗುರು ಬೆಚ್ಚಗಿನ ದೇಸೀ ಸೆರೆ  ನಾಲಗೆಗೆ ಅಪ್ಯಾಯಮಾನವಾಗಿ  ಗಟಗಟ ಹೀರಿದಳು. ಹೀರಿ ಮತ್ತೆ ಒಡ್ಡಿದಳು. ಮತ್ತೆ ತುಂಬಿದ. ಮತ್ತೂ ತುಂಬಿದ. ಮೂರಕ್ಕೆ ಡರ್‌ರ್ ಎಂದು ಗಂಡಸಿನಂತೆ ಢರಿಕೆ ತೇಗಿ ನೀ ಕುಡಿ ಎಂದು ಸನ್ನೆ ಮಾಡಿದಳು ಒಲ್ಲೆನೆಂದ.

ಸೇಂಗಾ ಸುಟ್ಟಲ್ಲಿಗೆ ಬಂದು ಗುಡುಗುಟ್ಟುವ ಮೋಡವೆನ್ನದೆ ಎದುರಿಗಿನ ಹುಡುಗನನ್ನು ನೋಡದೆ, ಎರಡೂ ಕಾಲು ಅರಹಾಕಿದಂತಿಟ್ಟು, ಅಂದರೆ ಕರಿಮಾಯಿಯ ಭಂಗಿಯಲ್ಲಿ ಕೂತು, ಪಚಪಚ ಸೇಂಗಾ ತಿಂದಳು. ಶಿವನಿಂಗನ ನೆನಪಾಯ್ತು. ಅವನ ಕಡೆ ತೇಲುಗಣ್ಣಾಡಿಸಿದಳು. ತಿನ್ನದೆ, ತಿನ್ನುವುದನ್ನೇ ನೋಡುತ್ತ ಕೂತಿದ್ದವನು ಈಗ ನಾಚಿ ಮುಖ ಕೆಳಗೆ ಹಾಕಿದ. ಇನ್ನೇನು ನಾಳೆಯೋ, ನಾಡಿದ್ದೋ ಪ್ರಾಯ ಬರಬೇಕು. ಎಳಸು ಎಳಸಾಗಿ ಜಾತ್ಯಾ ಹೋರಿಯಂತೆ ಬೆಳೆದಿದ್ದ. ಗೆರೆ ಬರೆದಂತೆ ಚಿಗುರುಮೀಸೆ; ಈಗಷ್ಟೇ ಒಡೆದ ಹಾಗೆ. ಕೆನ್ನೆ ಮುಖ ಮಿರಿಮಿರಿ ಮಿಂಚಿ ಗೌಡನ ಪ್ರಾಯ ನೆನಪಿಸುತ್ತಿದ್ದ. ಇಷ್ಟಗಲ ಹೊಳೆ ಹೊಳೆವ ಕದ್ದುನೊಡುವ ಬೆರಗಿನ ಕಣ್ಣಿನ ಚೆಲುವನ್ನು ನೋಡಿ ನಕ್ಕು ಎರಡೂ ಕೈ ಮೇಲೆತ್ತಿ ಹಾ ಎಂದು ಆಕಳಿಸಿ ಮೇಲೆದ್ದಳು. ಮಳೆ ಸಣ್ಣಾಗಿ ಹನಿಯತೊಡಗಿತು.

ಶಿವನಿಂಗ ಮುಂದೆ ಮುಂದೆ ನಡೆದ. ಇವಳಿಗೋ ಸಮತೋಲ ಉಳಿಯಲೊಲ್ಲದು, ನಡಿಯಲಾರೆ, ನಿಲ್ಲಲಾರೆ; ತೂರಾಡುತ್ತ, ತಪ್ಪು ಹೆಜ್ಜೆಯಿಡುತ್ತ ನಡೆದಳು. ಅಷ್ಟು ದೂರ ನಡೆಯುತ್ತಿದ್ದವನು ಬಿದ್ದಾಳೆಂದು ಮತ್ತೆ ಹಿಂದೆ ಬರುತ್ತಿದ್ದ. ನಿಲ್ಲುತ್ತಿದ್ದ. ದೊಡ್ಡ ಹನಿಯ ಮಳೆ ಜೋರಾಗಿ ಸುರಿಯತೊಡಗಿತು. ಹುಡುಗ ಓಡುತ್ತಿದ್ದ, ಹಿಂದಿರುಗಿ ನಿಲ್ಲುತ್ತಿದ್ದ. ಇಬ್ಬರೂ ಆಗಲೇ ಒದ್ದೆಯಾಗಿದ್ದರು.

ಸೇಂಗಾ ಬೆಳೆ ದಾಟುವುದು ಕಷ್ಟವಾಗಲಿಲ್ಲ. ಜೋಳದ ಬೆಳೆಯಲ್ಲಿ ಹೊಕ್ಕಾಗ ಸಮತೋಲ ಹಿಡಿಯಲಾರದೆ ಬೆಳೆಯ ಮೇಲೆ ಬೀಳುತ್ತ ಏಳುತ್ತ ನಡೆದಳು. ಮೊದಲೇ ಎರೇ ನೆಲ, ನೀರು ಹರಿದಾಡಿ ಕೆಸರು ಜಾರಿಕೆಯಾಗಿತ್ತು. ಸರ್ರನೆ ಜಾರಿ, “ಎವ್ವಾ” ಎಂದು ಬಿದ್ದಳು. ಶಿವನಿಂಗ ಓಡಿಬಂದು. ದೂರದಲ್ಲೇ ನಿಂತ. ಸೀರೆ ಕೆಸರಾಗಿತ್ತು.  ಸಾವರಿಸಿಕೊಂಡೆದ್ದಳು. ಮೇಲೆ ಮಳೆ ಸುರಿಯುತ್ತಿತ್ತು.. ಒಳಗೆ ಹೊಟ್ಟೆಯಲ್ಲಿ ಸೆರೆ ನೆತ್ತಿಗೇರಿ ತುಳುಕುತ್ತಿ‌ತ್ತು. ಹಾಗೇ ನೆತ್ತಿಯ ಮೇಲೆ ಎರಡೂ ಕೈಹೊತ್ತು ತಪ್ಪು ಹೆಜ್ಜೆ ಹಾಕುತ್ತಲೇ “ಎಲ್ಲಿ ಕಾಣೆಲ್ಲಿ ಕಾಣೆ” ಎಂದು ಹಾಡು ತೊದಲುತ್ತಲೇ ಕುಣಿಯತೊಡಗಿದಳು. ಸುತ್ತಲ ಬೆಳೆ ಅವಳ ಕುಣಿತದ ಧಡಪಡಿಕೆಗೆ ಅತ್ತಿತ್ತ ವಾಲಿತು. ಎದೆ ಸೆರಗು ಜಾರಿ ಸೊಂಟಕ್ಕಂಟಿದ ಸೀರೆ ಇನ್ನೇನು ಕಳಚಲಿತ್ತು. ಶಿವನಿಂಗ ಗಾಬರಿಯಾಗಿ ಹಿಂದುರುಗಿ ಗುಡಿಸಲ ಕಡೆ ಓಡುವುದಕ್ಕೆ ಒಂದೆರಡು ಹೆಜ್ಜೆ ಧಾಪುಗಾಲು ಹಾಕಿದ್ದ. ಅಷ್ಟರಲ್ಲೇ ಸುಂದರಿ ಓಡಿಹೋಗಿ ಜೋರಿನಿಂದ ಅವನ ಸೊಂಟದ ಮೇಲೆ ಬಿದ್ದಳು. ಹುಡುಗ ಅನಿರೀಕ್ಷಿತ ಒದೆಗೆ ತತ್ತರಿಸಿ ಬಕ್ಕಬರಲೆ ಬೆನ್ನುಮೇಲಾಗಿ ಬಿದ್ದು ಕೆಸರು ಮುಕ್ಕಿದ. ಗಕ್ಕನೆ ಅಂಗಾತ ಹೊರಳಿ ಚಿಮಣಾಳನ್ನು ನೋಡಿ ಅವಕ್ಕಾದ! ಸೀರೆ ಜಾರಿತ್ತು. ತುಂಬಿಕೊಂಡ ಕೆಂಪು ಕೆಂಪಾದ ತೊಡೆಯ, ಒತ್ತೊತ್ತಿ ತಿಟಗುಡುವ ಕೆಂಪು ಚಡ್ಡಿಯ ತಳ್ಳಿಕೊಂಡು ಉಬ್ಬಿದ ದುಂಡುದುಂಡಾದ ನಿತಂಬ, ಸಣ್ಣ ನಡು, ಬಿಗಿದ ಕುಬಸದ ಕಟ್ಟಿಗೊಗ್ಗದ ಉಬ್ಬಿದೆದೆ – ಹೂನಗೆ ನಗುತ್ತ ತೊದಲಿ ಹಾಡುತ್ತ ತೇಲುಗಣ್ಣು ಮೇಲುಗಣ್ಣಾಗಿ ಕುಣಿಯುತ್ತಿದ್ದಳು. ಮೈಯಲ್ಲಿ ಬೆಂಕಿ ಹರಿದಾಡಿ ಸೊಂಟದಿಕ್ಕಟ್ಟಿನ ಹುರಿ ಬಿಗಿದು ಅಳ್ಳಳ್ಳಾಯ ಹೋರಿ ಹುಡುಗ ಹೊಸ ಸಡಗರಕ್ಕೆ ತಳ್ಳಂಕಗೊಂಡ. ಕಣ್ಣಿ ಕಿತ್ತಂತೆ ಒಂದೆರಡು ಬಾರಿ ಹುಕಿಯಿಂದುಕ್ಕುವಷ್ಟರಲ್ಲಿ ಚಿಮಣಾ ಅವನೆದೆಯ ಮೇಲೆ ಕೆಸರುಗಾಲೂರಿ ಹೊಸಕುವಾಗ ಜೋಲಿತಪ್ಪಿ ಬಿದ್ದಳು. ಹುಡುಗ ಏಳಬೇಕೆಂದಿದ್ದ. ಗಪ್ಪನೆ ತೆಕ್ಕೆಹಾದಳು. ಗಿಣಿ ಜೋಳದ ತೆನೆಗೆ ಜೋತುಬಿದ್ದು ತಿನ್ನುವಂತೆ ಎಳೆದೆಳೆದು ಕೆನ್ನೆ ಕಚ್ಚಿದಳು. ಇಬ್ಬರ ರಭಸಕ್ಕೆ ಸುತ್ತಲ ಜೋಳದ ಬೆಳೆ ಕಡಕಡಕಡ ಮುರಿಯಿತು.

ಮೋಡ ಒಡೆದವರಂತೆ ಖಡ್‌ಖಡಲ್ ಗರ್ಜಿಸಿ, ಘರ್ಷಿಸಿ ಗುಡಗಿ ಮಳೆ ಬಿತ್ತು. ಇಡೀ ಮುಗಿಲು ಹಾಗೇ ಹರಿದುಬಿದ್ದಂತೆ ಧೋಧೋಧೋ ಒಂದೇ ಸವನೆ ನೀರು ಸುರಿಯಿತು. ನೀರು ಬೇರಿನ ಸಂದಿಗೊಂದಿಗಿಳಿದು ಹರಿದಾಡಿತು. ರಭಸ ತಡೆಯದೆ ಬೆಳೆ ಚಡಪಡಿಸಿ ಒಲೆದಾಡಿತು. ಬೆಳೆಗೆ ಏನಾದರಾಗಲಿ ಮುಗಿಲು ಮೋಡ ಖಾಲಿಯಾಗುವ ತನಕ ಸುರಿಯಿತು. ನೆಲ ಕಣ್ಣುಮುಚ್ಚುವಷ್ಟು ತೃಪ್ತವಾಯಿತು.

ಖಬರು ಬಂದಾಗ ಸುಂದರಿ ಬಾಡಿದ ಎಳೆಬಾಳೆಯ ಸೊಪ್ಪಾಗಿದ್ದಳು. ಸೊಂಟದ ಹುರಿ ಸಡಿಲಾಗಿ ಸಣ್ಣಗೆ ನೋಯತ್ತಿತ್ತು. ತೇಗುಸಿರು ನಿಂತಿರಲಿಲ್ಲ. ಹುಲಿಯ ಬಾಯಿಂದ ತಪ್ಪಿಸಿಕೊಂಡು ಬಂದ ಹಾಗೆ ಮೈತುಂಬ ಗಾಯಗಳಾಗಿದ್ದವು. ಎದ್ದು ಕೆಸರು ಮೆತ್ತಿದ ಸೀರೆಯನ್ನೇ ಸುತ್ತಿಕೊಂಡಳು. ಶಿವನಿಂಗ ತಪ್ಪುಮಾಡಿದವನಂತೆ ಅಳುಮುಖ ಮಾಡಿಕೊಂಡು  ಮುದ್ದೆಯಾಗಿ ದೂರ ಕೂತಿದ್ದ. ಕೆಳದುಟಿ ನೆತ್ತರಾಡಿತ್ತು. ಕೆನ್ನೆ, ಕತ್ತಿನ ಮೇಲೆ ಹಲ್ಲಿನ ಗುರುತು ಮೂಡಿದ್ದವು. ಬೆರಗಿನ ಎಳೆತನದಲ್ಲೊಬ್ಬ ಗಡುಸು ಗಂಡಸನನ್ನು  ಸೃಷ್ಟಿಸಿದ ತೃಪ್ತಿಯಿಂದ ಮಾತಾಡದೆ ಮುಂದೆ ನಡೆದಳು. ಈತ ಮಂದಿ ನೋಡ್ಯಾರೆಂದು ಬಾಗಿ ಬೆನ್ನು ಹತ್ತಿದ.

ಜೋಳದ ಬೆಳೆ ದಾಟಿ ಬಂದರು.  ಹಳ್ಳ ತುಂಬಿ ಹರಿಯುತ್ತಿತ್ತು. ಶಿವನಿಂಗ ಮುಂದಾಗಿ ದಾಟಿದ. ಎದೆಮಟ ನೀರಿತ್ತು, ಸೆಳೆವಿತ್ತು. ಇವಳಿನ್ನೂ ಈಚೆ ದಡದಲ್ಲೇ ಇದ್ದಳು. ಅವಳಿಗೂ ಭಯ. ಕುಡಿದ ಮತ್ತಿನ್ನೂ ಇಳಿದಿರಲಿಲ್ಲ. ನೆತ್ತಿ ಭಾರವಾಗಿತ್ತು. ಕೈ ಹಿಡಿದು ದಾಟಿಸೆಂಬಂತೆ ಸನ್ನೆ ಮಾಡಿದಳು. ಶಿವನಿಂಗ ಸುಮ್ಮನೇ ನಿಂತ. “ಯಾರ ಮುಂದ ಹೇಳಾಣಿಲ್ಲ ಬಾ” ಎಂದಳು. ಸುತ್ತ ಮಂದಿ ಇಲ್ಲದ್ದನ್ನು ಖಾತ್ರಿ ಮಾಡಿಕೊಂಡು ಬಂದ ಕೈ ಹಿಡಿದ. ಹೌಹಾರಿದಂತೆ ಅಭಿನಯಿಸಿ “ಎತ್ತಿಕೊಂಡು ದಾಟಿಸಲ್ಲಾ” ಎನ್ನುತ್ತಾ ತಾನೇ ಅವನನ್ನು ಬಗ್ಗಿಸಿ ಹೆಗಲ ಮೇಲೆ ಕೂತಳು. ಅವಸರವಾಗಿಯೇ ದಾಟತೊಡಗಿದ. ಸುಂದರಿ ಅವನ ಕೆನ್ನೆಯ ಮೇಲಿನ ಹಲ್ಲಿನ ಗುರುತುಗಳನ್ನು ನೇವರಿಸುತ್ತಿದ್ದಳು. ಇನ್ನೇನು ದಾಟಲಿದ್ದರು ಅಷ್ಟರಲ್ಲಿ ಯಾರೋ ದೂರದಲ್ಲಿ “ಏ ಶಿವನಿಂಗಾ” ಎಂದು ಕರೆದದ್ದು ಕೇಳಿತು. “ಎಪ್ಪಾ ಯಾರೋ ಬಂದ್ರೋ” ಎಂದವನೇ ಅವಳನ್ನಲ್ಲೇ ಚೆಲ್ಲಿ ಚೆಂಗನೇ ಹಾರಿ ಕಬ್ಬಿನ ತೋಟದಲ್ಲಿ ಮಾಯವಾದ.