ಸುಂದರಿಯನ್ನು ಕಳಿಸಿದೊಡನೆ ದತ್ತಪ್ಪ ಗೌಡನೊಂದಿಗೆ ಅವನ ಮನೆಗೆ ಹೋದ. ವಿಷಯ ಇಬ್ಬರಿಗೂ ಗೊತ್ತಾಗಿತ್ತು. ಆ ಹುಡುಗ ತನ್ನ ಮನೆಗೆ ಬೇಲಿ ಹಚ್ಚಿ ಹೆಂಟಾ ಬಡಿಯುತ್ತಾನೆಂದು ಮಾತಾಡಿಕೊಂಡರು. ಅವನಿಗೆ ತಿಳುವಳಿಕೆ ಹೇಳಲು ಸಾಧ್ಯವಾಗದ್ದಕ್ಕೆ ಗೌಡ ಮರುಗಿದ. ಆ ಮುದುಕಿಗಾದರೂ ಬುದ್ಧಿ ಇರಬಾರದೆ? ಮಗ ಹೇಳಿದ ಹಾಗೆ ಕುಣಿಯೋದಕ್ಕೆ ಇದು ವಯಸ್ಸೆ? ಎಂದ. ಯಾರಿಗೂ ಬುದ್ಧಿ ಕಲಿಸುವ ದಾರಿ ಚಿಂತಾಮಣಿಯ ದತ್ತಪ್ಪನಿಗೆ ಅರಿದಲ್ಲ.

ನೋಡೂ, ಅವಗ ಬುದ್ಧಿ ಕಲಿಸಾಕ ಒಂದ ಹಾದಿ ಅದ. ನಿನ್ನ ಕಬೂಲಿದ್ದರ….”ಅದೇನಪಾ?”

“ಸುಂದರೀನ ಬಸರ ಮಾಡ್ಯಾನಂತ ಒಂದ ಮೂಕರ್ಜಿ ಹೆಟ್ಟಿದರ ನೋಡಪಾ, ಹುಡುಗ ನಾವ ಹೇಳಿಧಾಂಗ ಕೇಳಿಕೊಂತ ಬಿದ್ದಿರತಾನ.”

ಉಪಾಯವೇನೋ ಬರೋಬರಿ. ಆದರೆ ರಾಡಿ ಸೋಸಬೇಕಲ್ಲ? ಪೋಲೀಸರು ಬರೋದು, ಗುಡಸೀಕರನನ್ನು ಹೊಡೆಯೋದು, ನ್ಯಾಯ ಮಾಡೋದು, ಪಂಚಾತಿ ಅನ್ನೋದು ಸಾಕ್ಷಿ ನೀ ಹೇಳು, ನಾ ಹೇಳು – ಈ ಗದ್ದಲ ಸೋಸುವುದಿರಲಿ ಮುದುಕಪ್ಪ ಗೌಡ ಸರ್ಕಾರದ ಕಣ್ಣುತಪ್ಪಿಸಿ ತನ್ನ ಮನೆಯಲ್ಲಿದ್ದಾಗ ಪೊಲೀಸರು ಬರೋದು ತಮ್ಮ ಹಿತದೃಷ್ಟಿಯಿಂದ ಕೂಡ ಒಳ್ಳಯದಲ್ಲ. ಏನೋ ಮಾಡಹೋಗಿ ಏನೇನೋ ಆಗುವ ಬಾಬತ್ತಿವೆಯಲ್ಲ. “ಬ್ಯಾಡ ತಗಿ” ಅಂದ. ದತ್ತಪ್ಪನಿಗೆ ಕೂಡಲೇ ಖಾತ್ರಿಯಾಯ್ತು. ಮುದುಕಮ್ಮನಿಗೆ ಬುದ್ಧಿ ಹೆಳಿದರೋ? ಮುದುಕಿ ಮಾತು ಕೇಳ್ಯಾಳು, ಹುಡುಗ ಕೇಳಬೇಕಲ್ಲ? ಅವರವರ ಕರ್ಮ ಎಂದು ಇಬ್ಬರೂ ಸುಮ್ಮನಾದರು. ಅಲ್ಲಿಗದು ಮುಗಿಯಿತೊ?

ಜನರ ಬಾಯಲ್ಲಿ ಚಿಗಿಯಿತು. ದಿನಕ್ಕೊಂದು ಚಂದಾಗಿ ಗುಸುಗುಸು ಸುರುವಾಯಿತು. ಮುಂಗಾರಿ ಬೆಳೆ ಬಂದು ಒಂದು ನಿಲುಗಡೆಗೆ ಬಂದುದರಿಂದ ಚಾಡಿ ಹೇಳುವುದಕ್ಕೆ ಅವರಿಗೆ ಸಮಯವೂ ಇತ್ತು. ಆಡಿಕೊಂಡು ನಗಾಡಿದರು, ಚತುಷ್ಟಯರನ್ನು ಕೀಟಲೆ ಮಾಡಿದರು. ವ್ಯಂಗ್ಯದ ಪದ ಕಟ್ಟಿ ಹಾಡಿದರು. ಆದರೆ ಆ ಪದಗಳು ಗುಡಸೀಕರನಿಗಾಗಲಿ, ಬಸವರಾಜನಿಗಾಗಲಿ ತಿಳಿಯಲೇ ಇಲ್ಲ. ಚತುಷ್ಟಯರಿಗೆ ತಿಳಿಯುತ್ತಿತ್ತು. ಅವರು ಹೇಳಲಿಲ್ಲ. ಹೀಗಾಗಿ ಹಾಡಿನ ಚಮತ್ಕಾರಕ್ಕೆ ಇವರು ನಕ್ಕರು. ತಿಳಿಯದ ಇವರ ದಡ್ಡತನಕ್ಕೆ ಹುಡುಗರು ನಕ್ಕರು.

ಸುಂದರಿ ಕರ್ಮವೆಂದು ಬಸುರನ್ನೊಪ್ಪಿಕೊಂಡಳು. ಮದ್ದಿನಿಂದ ಮೈ ನಿಶ್ಯಕ್ತಿಯಾಗಿತ್ತು. ಗುಡಿಸಲಿನಲ್ಲಿದ್ದುಕೊಂಡೇ ಇವರ ಮಾತು ಕೇಳುತ್ತಿದ್ದಳು. ಆ ಘಟನೆ ನಡೆದಾಗಿನಿಂದ ಗುಡಸೀಕರನ ಚೇರಾಪಟ್ಟಿಯಲ್ಲಿ ಬದಲಾಗಿತ್ತು. ಬರುತ್ತಿರಲಿಲ್ಲ. ಬಂದರೂ ತಪ್ಪಿಕೂಡಾ ತನ್ನ ಕಡೆ ನೋಡುತ್ತಿರಲಿಲ್ಲ. ನೋಡಿದರೂ ಅವನ ಕಣ್ಣಲ್ಲಿ ಕೋಪವಿರುತ್ತಿತ್ತು. ಬಸವರಾಜು ಮೊದಲಿನಂತೆಯೇ ಮತಾಡುತ್ತಿದ್ದ. ಒಮದೆರಡು ಕೊಡ ನೀರು ತರುತ್ತಿದ್ದ. ಅನ್ನ ಬೇಯಿಸುತ್ತಿದ್ದ. ತಾನೂ ತಿಂದು ಇವಳಿಗೂ ಹಾಕುತ್ತಿದ್ದ.

ಗುಡಸೀಕರನ ತಾಯಿಗೆ ಮಾತ್ರ ಮನೆ ನಡುಗಂಬ ತನ್ನ ನೆತ್ತಿಯ ಮೇಲೆ ಕಡಕೊಂಡು ಬಿದ್ದಷ್ಟು ಸಂಕಟವಾಯ್ತು. ಸುದ್ದಿಗಳೋ ದಿನಕ್ಕೊಂದು ಪರಿ ಬರುತ್ತಿದ್ದವು. ಮಗ ಕದ್ದು ಮದುವೆಯಾಗಿದ್ದಾನಂತೆ. “ಹೌಂದೇನ ಎವ್ವಾ?” ಎಂದೊಬ್ಬ ಮಗಳು ಕೇಳಿದರೆ, ಮೊಮ್ಮಗನ ಹೆಸರಲೇ ಆಸ್ತಿ ಮಾಡ್ಯಾನಂತ “ಹೌಂದೇನ ಎಕ್ಕಾ?” ಎಂದೊಬ್ಬ ತಂಗಿ ಕೇಳುತ್ತಿದ್ದಳು. ಸಕಾಲಕ್ಕೆ ಮದುವೆ ಮಾಡಿದ್ದರೆ ಇದೆಲ್ಲ ಯಾಕಿರುತಿತ್ತೆಂದು ಮುದುಕಿಯೊಬ್ಬಾಕೆ ಹೇಳದೆ ಬಿಡಲಿಲ್ಲ. ಮಗನೊಂದಿಗೆ ಇದನ್ನೆಲ್ಲ ಬಾಕಿ ಉಳಿಸದಂತೆ ಮಾತಾಡಬೇಕೆಂದರೆ ಅವನು ಸದಾ ಹುಬ್ಬುಗಂಟು ಹಾಕಿಕೊಂಡೇ ಇರುತ್ತಿದ್ದ. ಮುದುಕಿ ಬಾಯಿ ಬಿಟ್ಟರೆ ಗದರುತ್ತಿದ್ದ. ಗೌಡ, ದತ್ತಪ್ಪ ಯಾಕೊಮ್ಮೆ ಬುದ್ಧಿ ಹೇಳಬಾರದೆಂದಳು – ಅವರ ಮಾತು ಮಗ ಕೇಳುವುದಿಲ್ಲವೆಂದು ಗೊತ್ತಿದ್ದೂ, ಸತ್ತ ಗಂಡನ ನೆನೆದು ಅತ್ತಳು. ಓಣಿಯ ಅವ್ವಕ್ಕಗಳ ಮುಖ ಎದುರಿಸಲಾರದೇ ಮುದುಕಿ ಅಡಿಗೆ ಮನೆಯಲ್ಲಿ ‘ಕರೀಮಾಯೀ’ ಎಂದು ಕೈಹೊತ್ತು ಕೂತಳು.

ಅಣ್ಣ ಊಟಕ್ಕೆ ಮಾತ್ರ ಮನೆಗೆ ಬರುತ್ತಿದ್ದು ಉಳಿದೆಲ್ಲ ಸಮಯ ತೋಟದಲ್ಲೇ ಕಳೆಯುತ್ತಿದ್ದುದರಿಂದ ಮೊದಮೊದಲು ಆಗೀಗ ಬರುತ್ತಿದ್ದ ಬಸವರಾಜು ಸಮಯ ಸಾಧಿಸಿ ಹೆಚ್ಚೆಚ್ಚು ಸಲ ಹೆಚ್ಚೆಚ್ಚು ಹೊತ್ತು ಬರಲಾರಂಭಿಸಿದ್ದರಿಂದ ಗಿರಿಜಾ ಸನ್ನಿವೇಶದ ಅಸಲು ಪ್ರಯೋಜನವನ್ನು ಬಡ್ಡಿಸಮೇತ ಪಡೆದಳು.