ಮಾರನೇ ದಿನ ದತ್ತಪ್ಪ, ಕೈಮಾರು ಹೊತ್ತೇರಿರಬೇಕು, ಗುಡಸೀಕರನ ಮನೆಗೆ ಬಿಜಯಂಗೈದ. ಗುಡಸೀಕರ ಮಹಡಿಯ ಮೇಲೆ ಕೂತು ದನಿಮಾಡಿ ಇಂಗ್ಲಿಷ್ ಓದುತ್ತಿದ್ದ. ಅವನ ತಾಯಿಗೂ ತಂಗಿಗೂ ಆಶ್ಚರ್ಯವಾಯಿತು; ದತ್ತಪ್ಪ ತಮ್ಮ ಮನೆತನಕ ಬರುವುದೆಂದರೇನು? ಗಿರಿಜ ಮಹಡಿ ಹತ್ತಿ ದತ್ತಪ್ಪ ಬಂದುದನ್ನು ತಿಳಿಸಿಬಂದಳು. ಒಳಗಿನಿಂದ ಗೌರವ್ವ ಸಂಭ್ರಮದಿಂದ ಮುದುಕಿ ಹೊರಗೆ ಬಂದಳು. “ಬರ್ರಿ ಬರ್ರೀಯೆಪ” ಎನ್ನುತ್ತ ಜಮಖಾನ ಹಾಸಿದಳು. ದತ್ತಪ್ಪ “ಹೂಂ ಮಗಳು ವಯಸ್ಸಿಗಿ ಬಂದಾಳ; ಚೆಲೋ ವರ ನೋಡಿ ಕೊಡಬೇಕಿಲ್ಲೊ” ಎನ್ನುತ್ತ ಕೂತ. ಗಿರಿಜಾ ನಾಚಿ ಒಳಗೋಡಿದಳು. “ನೀವs ನೋಡಿ ಅದರದ್ದೊಂದ ಮದವೀ ಮಾಡಿಬಿಡಿರಿ” ಎಂದು ಮುದುಕಿ ಹೇಳುತ್ತಿದ್ದಂತೆ ಗುಡಸೀಕರ ಕೆಳಗಿಳಿದು ಬಂದ! ತಾಯಿ ಒಳಗೆ ಹೋದಳು.

“ಏನು? ದತ್ತಪ್ಪನವರು ಮನೀತನಕ ಬಂದಿರಿ?” ಎನ್ನುತ್ತ ಗಡಂಚಿಯ ಮೇಲೆ ಕೂತ. ದತ್ತಪ್ಪ ಬಂದುದಕ್ಕೆ ತಾಯಿ, ತಂಗಿ ಸಡಗರ ಮಾಡಿದ್ದು ಸರಿಬರಲಿಲ್ಲ. ಹಾಗೆಂದು ಬಾಯಿಬಿಟ್ಟು ಹೇಳಲಾರ. ಆದರೆ ಆತ ಬಂದುದಕ್ಕೆ ಏನೋ ಮಹತ್ವದ ಕಾರಣ ಇರಬೇಕೆಂದು ಊಹಿಸಿದ. ಬಹುಶಃ ನಿನ್ನೆ ನಾಯೆಲ್ಯಾ ಸೆರೆಕುಡಿದು ಸುಟ್ಟುಕೊಂಡು ಸತ್ತದ್ದು, ಇದಕ್ಕೆಲ್ಲ ತಾನೇ ಹೊಣೆಯೆಂದು, ಆ ತಪ್ಪನ್ನೆಲ್ಲ ತನ್ನ ಮೇಲೆ ಹೊರಿಸಲು ಬಂದಿರಬಹುದೆಂದುಕೊಂಡ. ಸ್ವಲ್ಪ ಅಧೀರನೂ ಆದ. ಜಾರಿಕೊಳ್ಳಲು ಕೊಡಬೇಕಾದ ಜವಾಬುಗಳನ್ನೆಲ್ಲ ತಯಾರು ಮಾಡಿಕೊಂಡ. ಹ್ಯಾಗೆ ಸುರುಮಾಡೋದು ಎಂದು ದತ್ತಪ್ಪ ಕೂತ. ಈ ಹುಡುಗ ತಮ್ಮ ಪೈಕಿ ಅಲ್ಲ ಅನ್ನಿಸಿತು. ಹಾಗೆ ಎಷ್ಟಂತ ಕೂರುತ್ತಾನೆ?

“ತಮ್ಮಾ, ನಿನ್ನ ಜೊತೆ ಒಂದಷ್ಟು ಮಾತಾಡೋದಿತ್ತಲ್ಲ”

“ಅದೇನ ಇಲ್ಲೇ ಆಗಲೆಲ್ಲ.”

“ನೋಡಪಾ, ನಾವೆಲ್ಲಾ ಹಿರೇರು ಕೂಡಿ ಪಂಚಾಯ್ತಿ ಮಾಡಿಕೊ ಅಂತ ನಿನ್ನ ಕೈಯಾಗ ಕೊಟ್ಟಿವಿ. ಊರಿಗೇನಾರ ಹಿತ ಮಾಡ್ತಿ ಅಂತಂದ್ವಿ. ಅದೇನೋ ಆಗಲಿಲ್ಲ. ಊರವರೆಲ್ಲಾ ತಿರುಗಿ ನೀವs ತಗೊಳ್ರಿ ಅಂತ ನಮಗ ಹೇಳಾಕ ಹತ್ಯಾರ. ಅದಕ್ಕ ನೀನs ಮುಂದಾಗಿ ಕೊಟ್ಟುಬಿಡು.”

ಗುಡಸೀಕರ ಇದನ್ನು ನಿರೀಕ್ಷಿಸಿರಲಿಲ್ಲ. ಈಗ ಸರಿಯಾಗಿ ಉತ್ತರ ಕೊಡದಿದ್ದರೆ ತಾನು ಸೋತಂತೆ

“ನೋಡ್ರಿ, ಬೇಕಾದಾಗ ಕೊಡಾಕ, ಬ್ಯಾಡಾದಾಗ ತಗೊಳ್ಳಾಕ ಪಂಚಾಯ್ತಿಯೇನೂ ನಿಮ್ಮ ಮನಿ ಆಸ್ತಿ ಅಲ್ಲ, ಅದು ಊರುಗಾರಿಕೆ ವಿಷಯ. ಪಂಚಾಯ್ತಿ ಜಾರಿಗೆ ಬರಬೇಕಾದರೂ ಒಂದಷ್ಟು ನೇಮ ಅದಾವ, ಕಾಯ್ದೆ ಕಾನೂನು ಅದಾವ. ಅದರ ಪ್ರಕಾರ ಆಗೇತಿ. ಈಗ ತತಾ ಅಂದರ ಎಲ್ಲಿಂದ ಕೊಡೋಣು? ಇನ್ನ ಆರೆಂಟ ತಿಂಗಳಿಗಿ ಇಲೆಕ್ಷನ್ ಬರತೈತಿ. ನೀವೂ ನಿಂತಕೊಳ್ರಿ, ನಾವೂ ನಿಂತಕೋತೀವಿ.”

“ಖರೆ” – ಅಂದ ದತ್ತಪ್ಪ.

“- ನನ್ನ ಮನಿ ಆಸ್ತಿ ಅಲ್ಲ, ನಿನ್ನ ಮನೀದು ಅಲ್ಲ. ಕಾಯ್ದೆ ಕಾನೂನಂದಿ; ಅದ್ಯಾವ ಕಾಯ್ದೆ ಕಾನೂನಿಲ್ಲದs ನಿನ್ನ ಕೈಗೆ ಕೊಟ್ಟಿವಿ. ಆಗ್ಯಾಕ ನಿನಗ ಕಾಯ್ದೆ ಕಾನೂನ ನೆನಪಾಗಲಿಲ್ಲಪಾ?”

ದತ್ತಪ್ಪನ ಅಕ್ರಮವಾದಕ್ಕೆ ಎದುರುತ್ತರ ಕೊಡುವುದು ಕಷ್ಟವೇ.

“ಊರವರೆಲ್ಲಾ ಕೂಡಿ ಕೊಟ್ಟಿರಿ; ಅದಕ್ಕ ಅದು ಕಾಯ್ದೆಶೀರ ಆತು. ಇಗ ನೀವೊಬ್ಬರs ಕೇಳಾಕ ಬಂದಿರಲ್ಲಾ. ಅದಕ್ಕ ಕಾಯ್ದೆ ನೆನಪಾತು.”

“ಹಂಗಾದರ ಈಗೂ ಊರಮಂದೀನೆಲ್ಲಾ ಕೂಡಿಸಿ ಈ ಮಾತು ಹೇಳಸಂತೀಯೇನು?” ದತ್ತಪ್ಪನಿಗಿದು ಅಸಾಧ್ಯವಿಲ್ಲ. ಊರ ಮಂದಿ ಕೂಡಿ ಒತ್ತಾಯ ಮಾಡಿದರೆ ತಾನು ಹಿಂದೆ ಸರಿಯಲೇಬೇಕಾಗಬಹುದು. ಅಲ್ಲದೆ ಊರಿನಲ್ಲಿ ತನ್ನ ಬೆನ್ನಕಟ್ಟುವ ಜನ ಆ ನಾಲ್ಕು ಜನ ಮೆಂಬರರನ್ನು ಬಿಟ್ಟರೆ ಯಾರೂ ಇರಲಿಲ್ಲವೆನ್ನುವುದು ಅವನಿಗೆ ಗೊತ್ತು. ಅದೆಲ್ಲಿಂದ ಈ ಪೀಡೆ ಗಂಟುಬಿತ್ರೋ ಎಂದುಕೊಂಡ.

“ನೋಡ್ರಿ, ನಿಮಗ್ಯಾಕ ಪಂಚಾಯ್ತಿ ಮ್ಯಾಲ ಕಣ್ಣು ಬಿದ್ದಾವಂತ ಗೊತ್ತಾಗೇತಿ. ಮೊದಲು ಪಂಚಾಯಿತಿ ಬಂದಾಗ ಅದೇನಂತ ನಿಮಗ ಗೊತ್ತಿರಲಿಲ್ಲ. ಬಿಟ್ಟಕೊಟ್ಟಿರಿ. ಈಗ ನಾವಷ್ಟು ಊರಾಗ ಮುಂದ ಬರಾಕ ಹತ್ತಿದೇವಲ್ಲ. ಅದಕ್ಕ ಹೊಟ್ಟೀಕಿಚ್ಚ ಸುರುವಾಗೇತಿ. ನಮಗಿದೆಲ್ಲಾ ತಿಳಿಯೋದಿಲ್ಲವೆನ್ನ ಬ್ಯಾಡ್ರಿ.”

ಹುಡುಗನ ಭ್ರಮ ಕೇಳಿ ದತ್ತಪ್ಪ ಮನಸ್ಸಿನಲ್ಲಿ ಬಾಯಮೇಲೆ ಬೆರಳಿಟ್ಟುಕೊಂಡು ಭಲೇ ಅಂದ.

“ಹೌಂದಪಾ, ನೀ ಮುಂದ ಹೊಂಟೀದಿ, ನಾವು ಹಿಂದ ಉಳದೀವಿ. ನಾವಷ್ಟ ಮುಂದ ಬರಾಕ ನಮ್ಮ ಕೈಗಿ ಪಂಚಾಯ್ತಿ ಕೊಡತೀಯೇನು?”

ಮಾತಿನ ವ್ಯಂಗ್ಯವನ್ನು ತಂತಾನೇ ಸಂತೋಷಿಸುತ್ತ ಕೇಳಿದ ದತ್ತಪ್ಪ. ಇನ್ನೂ ಏನೇನು ಹೇಳುತ್ತಿದ್ದನೋ, ಅಷ್ಟರಲ್ಲಿ ಗುಡಸೀಕರ ಭಾರೀ ಜಗಳವಾದಂತೆ – ಏರುದನಿಯಲ್ಲಿ ಅವನ ಮಾತನ್ನು ಕತ್ತರಿಸಿದ –

’ಅದೆಂಗರಿ? ಹೇಳಲಿಲ್ಲಾ ಇಲೆಕ್ಷನ್ ಬರಲೆಂತ? ಆಳಬೇಕಂತ ಹೇಳಿ ಊರಗಾರಿಕಿ ಗುತ್ತಿಗಿ ತಗೊಂಡಿದಿರೇನು? ಇಷ್ಟ ದಿನ ಆಳಿದಿರಿ, ಸಾಕಾಗಲಿಲ್ಲ? ಇನ್ನ ಹೊಸಬರಿಗಷ್ಟ ಚಾನ್ಸ್ ಕೊಡರಿ.”

“ಚಾನ್ಸ್ ಕೊಟ್ಟೀವಲ್ಲಪಾ, ಕೊಟ್ಟಿದ್ದಕ್ಕ ಊರಿಗೇನ ಹಿತ ಮಾಡಿದಿ?”

“ಇಷ್ಟ ದಿನ ಹೇತ ರಟ್ಟ ಮಾಡೀರಿ. ಅದನ್ನ ತೊಳ್ಯಾಕ ಒಂದಷ್ಟ ದಿನ ಬ್ಯಾಡ?” ಗುಡಸೀಕರನ ಏರುದನಿ ಕೇಳಿ ಜಗಳವಾಡುತ್ತಿದ್ದಾರೆಂದು ಅವನ ತಾಯಿ ಒಳಗಿನಿಂದ ಬಂದಳು. ಗಿರಿಜಾ ದೂರ ನಿಂತು ಕೇಳುತ್ತಿದ್ದಳು. ಆಸುಪಾಸು ಹಾದುಹೋಗುತ್ತಿದ್ದವರು ಹೊರಬಾಗಿಲಲ್ಲಿ ನಿಂತು ಇದೇನೆಂದು ಕೇಳುತ್ತಿದ್ದರು. ಗುಡಸೀಕರನಿಗೆ ಭಂಡ ಧೈರ್ಯ ಬಂತು. ಬಾಯಿಗೆ ಬಂದ ಹಾಗೆ ಮಾತಾಡತೊಡಗಿದ. ಹೊರಗೆ ನಿಂತ ಒಬ್ಬ ಹುಡುಗನಿಗೆ ಪಂಚಾಯ್ತಿ ಮೆಂಬರರನ್ನು ಕರೆತರಲಿಕ್ಕೆ ಹೇಳಿದ. ತಾನು ಊರಿಗೆ ಎಷ್ಟೆಲ್ಲ ಹಿತ ಮಾಡಬೇಕೆಂದರೂ ಹಳೇ ಹದ್ದುಗಳು ಅಡ್ಡಿಬರುತ್ತವೆಯೆಂದ; ಈ ಊರಾಗಲೇ ಬೆಳಗಾವಿಯಾಗಿರುತ್ತಿತ್ತು – ಎಂದ. ಪೋಜುದಾರನ ಎದುರಿಗೆ ಅವಮಾನ ಮಾಡಿದ್ದಕ್ಕೆ ಅಂದ. ಹೀಗೆ ಬಿಟ್ಟೂ ಬಿಡದೆ ಮಾತಾಡುವುದಕ್ಕೆ ಕಾರಣ ಹೀಗೇ ಚತುಷ್ಟಯರು ಬರುವ ತನಕ ನಡೆಸಿ ಅವರು ಬಂದರೋ ತಲೆಗೊಬ್ಬ ಒಂದೊಂದು ಮಾತಾಡಿದರೂ ದತ್ತಪ್ಪನ ಬಾಯಿ ಕಟ್ಟಿಹೋಗುತ್ತದೆ – ಎಂದು ಹೊಂಚಿದ್ದ.

ಅವನೆಂದುಕೊಂಡಿದ್ದಂತೆ ಚತುಷ್ಟಯರೂ ಬಂದರು. ಮನೇ ಮುಂದೆ ಆಗಲೇ ಹಿಂಡು ಜನ ಸೇರಿದ್ದರು. ಏನು ಯಾಕೆ – ಯಾರಿಗೂ ತಿಳಿಯುತ್ತಿರಲಿಲ್ಲ. ಬರೇ ಗುಡಸೀಕರನ ಬಾಯಿ ಕೇಳಿಸುತ್ತಿತ್ತು. ದತ್ತಪ್ಪ ಅವನ ಚಿಕ್ಕತನದ ವಾಚಾಳಿತನದೊಂದಿಗೆ ಆಟವಾಡುತ್ತ ಕೂತುಬಿಟ್ಟ. ಬಂದ ಚತುಷ್ಟಯರು ದತ್ತಪ್ಪನಿಗೆ ನಮಸ್ಕಾರ ಮಾಡಿ ಮೂಲೆ ಸೇರಿದರು. ಆಗಾಗ ಹಲ್ಲು ಕಿಸಿದರು; ಹಸ್ತ ಹೊಸೆದರು. ಅವರನ್ನು ಕೆಣಕುತ್ತ, “ಕೇಳಿದಿರೇನ್ರೊ? ನಾವೆಲ್ಲ ಸೇರಿ ಊರ ಹಾಳಮಾಡಿದಿವಂತ. ಅದಕ್ಕ ಪಂಚಾಯ್ತಿ ಬಿಟ್ಟಕೊಡರಿ ಅಂತ ಹೇಳಾಕ ಬಂದಾನ” ಎಂದು ಹೇಳಿ ದತ್ತಪ್ಪನ ಕಡೆಗೂ ತಿರುಗಿ “ಹೋಗ್ರಿ; ಎಲೆಕ್ಷನ್ ಆಗಲಿ; ಅಲ್ಲೇ ತೀರ್ಮಾನವಾಗಲಿ” ಎಂದ. ಕೂಡಿದವರಿಗೆ ವಿಷಯವೇನೆಂದು ತಿಳಿಯಿತು. ಚತುಷ್ಟಯರು ಉತ್ತರ ಹೊಳೆಯದ ಸಾಲೆ ಮಕ್ಕಳಂತೆ ಸುಮ್ಮನೆ ಕೈಕಟ್ಟಿಕೊಂಡು ನಿಂತರು. ಕೂಡಿದವರಲ್ಲೊಬ್ಬ “ಹೌಂದಪಾ, ಹಿರೇರ ಹೇಳಿಧಾಂಗ ಕೇಳಬೇಕು” ಅಂದ. ಗುಡಸೀಕರನಿಗೆ ಇನ್ನೂ ಸಿಟ್ಟುಬಂತು – “ಹಿರೇತನ ಮಾಡಾಕ ನಿನ್ನ ಕರಸಲಿಲ್ಲಪಾ; ಮೊದಲ ನನ್ನ ಮನೀ ಬಿಟ್ಟು ಹೊರಬೀಳು” ಅಂದ.

ತಕ್ಷಣ ದತ್ತಪ್ಪ ಎದ್ದು ನಡೆದುಬಿಟ್ಟ. ಮಂದಿಗೆ ಗುಡಸೀಕರ ದತ್ತಪ್ಪನಿಗೇ ಮನೆಬಿಟ್ಟು ಹೊರಬೀಳೆಂದು ಹೇಳಿದಂತೆನಿಸಿತು. ಅವರೂ ಸಿಟ್ಟಾಗಿ ತಲೆಗೊಂದು ಮಾತಾಡುತ್ತ ಚದುರಿದರು. ಚತುಷ್ಟಯರು ಮಾತಾಡದ್ದೊಂದು ಕಡೆ, ಮಂದಿಯಲ್ಲೊಬ್ಬ ನಡುವೆ ಬಾಯಿಹಾಕಿದ್ದಿನ್ನೊಂದು ಕಡೆ, ಇನ್ನಷ್ಟು ಮಾತಾಡಿಸಿಕೊಳ್ಳಲು ದತ್ತಪ್ಪ ಕೂರಲಿಲ್ಲದ್ದ ಮತ್ತೊಂದು ಕಡೆ – ಎಲ್ಲ ಕೂಡಿ ಗುಡಸೀಕರನ ತಲೆ ಕಾವೇರಿತು. ಅವನ ತಾಯಿಗೂ ಅಸಮಾಧಾನವಾಯ್ತು; ದತ್ತಪ್ಪ ಮನೆಗೆ ಬಂದಾಗ ಗೌರವದಿಂದ ಮಗ ನಡೆದುಕೊಳ್ಳಲಿಲ್ಲವಲ್ಲಾ, ಇದ್ಯಾಕೆ ಹೀಗೆ ಮಾಡಿದನೆಂದು ಬಗೆಹರಿಯಲಿಲ್ಲ. ಅಲ್ಲದೆ ದತ್ತಪ್ಪ ಶಾಂತವಾಗೇ ಮಾತಾಡಿದ್ದ. ಎದುರಿನ ಕಣ್ಣುಗಳನ್ನು ಎದುರಿಸಲಾರದೆ, ಅಟ್ಟ ಹತ್ತಿ ತನ್ನ ಬಿಟ್ಟು ಉಳಿದೆಲ್ಲ ದತ್ತಪ್ಪ ಇಲ್ಲವೆ ಗೌಡನೆಂಬಂತೆ ಬಾಯಿ ತುಂಬ ಬೈಯುತ್ತ ಅಡ್ಡಾಡತೊಡಗಿದ.

ನಿಜ ಹೇಳಬೇಕೆಂದರೆ ಗುಡಸೀಕರ ಖಳನಾಯಕನಲ್ಲ. ಕಲಿತದ್ದರ ಬಗ್ಗೆ ಒಂದಿಷ್ಟು ಧಿಮಾಕಿತ್ತು. ಕಲಿತವರೇ ಇಲ್ಲದಲ್ಲಿ ಅದು ಹೆಚ್ಚಲ್ಲ. ಪ್ರಾಯದ ಮದ ಇತ್ತು. ಆ ವಯಸ್ಸಿಗೆ ಅದೂ ಹೆಚ್ಚಲ್ಲ. ಅಪ್ಪ ಗಳಿಸಿದ ದುಡ್ಡಿತ್ತು; ಆದರೆ ಧಾರಾಳತನವೂ ಇತ್ತು ಜನ ಅವನನ್ನೆಂದೂ ತಮ್ಮ ಶತ್ರುವೆಂದು ಭಾವಿಸಲಿಲ್ಲ. ಗೌಡನಿಗೂ ಅವನಿಗೂ ವಿರೋಧವಿದೆಯೆಂದು ತಿಳಿಯಲಿಲ್ಲ. ಹೆಚ್ಚೇನು, ಚತುಷ್ಟಯರೂ ಹಾಗೆ ನಂಬಲಿಲ್ಲ.

ಕಲಿತ ಪ್ರಾಯದ ಎಲ್ಲ ಹುಡುಗರಂತೆ ಅವನೂ ಆದರ್ಶದ ಬೆಂಕಿಯನ್ನು ಪದರಿಗೆ ಕಟ್ಟಿಕೊಂಡ. ಬೆಂಕಿಯ ಬೆಳಕಿನಲ್ಲಿ ಕನಸು ಕಮಡ. ಅದರ ಕಾವಿನಲ್ಲಿ ಹುರುಪುಗೊಂಡ. ಪ್ರಾಯದ ಎಳೆಯರನ್ನು ಲಗಮವ್ವ “ಇಸಾಮಿತ್ರನ್ಹಾಂಗ” ಎಂದಿದ್ದಾಳೆ, ತನ್ನ ಹಾಡಿನಲ್ಲಿ, ಅದು ನಿಜವೆ; ಇದ್ದ ವ್ಯವಸ್ಥೆಯ ಅರೆಕೊರೆ ಸರಿಪಡಿಸುವ ಆಸೆ; ಪುನಃ ಸೃಷ್ಟಿಸುವ ಬಯಕೆ. ಊರಿಗೆಲ್ಲ ತಾನೊಬ್ಬನೇ ಸುಶಿಕ್ಷಿತನಾದ್ದರಿಂದ, ಬೆಳಗಾವಿಯ ಲೋಕಜೀವನ ಕಂಡವನಾದ್ದರಿಂದ ತನ್ನ ಪಾಲಿನ ಹೊಣೆಗಾರಿಕೆ ಜಾಸ್ತಿಯೆಂದು ಮನಗಂಡಿದ್ದ. ದೇಶಕ್ಕೇ ದೇಶವನ್ನೇ ಬದಲು ಮಾಡುವುದು ತನ್ನಿಂದಾಗಲಿಕ್ಕಿಲ್ಲ ಖರೆ; ಕಲಿತವರಿಗೆ ಗಾಂಧೀಜಿ ಹೇಳಿಲ್ಲವೆ? ಹಳ್ಳಿಗಳಿಗೆ ಹೋಗಿರಿ – ಎಂದು. ಸರಿ, ತನ್ನ ಪಾಡಿಗೆ ತಾನು ತನ್ನ ಹಳ್ಳಿ ಸುಧಾರಿಸಿದರೆ ಸಾಕು, ಇದಕ್ಕಿಂತ ಸಾರ್ಥಕವಾದ ಕೆಲಸ ಇನ್ನೇನಿದೆ? ಚಳವಳಿ ಸೇರಲಿಲ್ಲ; ಆದರೆ ಗಾಂಧಿ ಹೇಳಿದಂತೆ ಖಾದಿ ಉಟ್ಟ; ತೊಟ್ಟ, ಇನ್ನೇನು, ಸ್ವಲ್ಪ ಕುಡಿಯುವ ಚಟ ಇತ್ತು. ಹಳ್ಳಿಗರ ಕಣ್ಣಲ್ಲಿ ಅದೊಂದು ದುಶ್ಚಟವೂ ಅಲ್ಲ. ಬಹುಶಃ ಗಾಂಧೀ ಬಂದು ಏನು ಕೇಳಿದರೂ ಇವನಲ್ಲಿ ಉತ್ತರಗಳಿದ್ದವು. ಆದರೆ ‘ಯಾಕೋ ಗುಡಸೀಕರ ಕುಡಿಯುತ್ತಿ?’ ಎಂದು ಕೇಳಿದ್ದರೆ ಮಾತ್ರ ನಿರುತ್ತರನಾಗುತ್ತಿದ್ದ. ಒಮ್ಮೊಮ್ಮೆ ಕರುಳಿಗಿಳಿದ ಚಟ ಬಿಡಲಾರದೆ ಅದಕ್ಕೂ ನೆಪ ಹುಡುಕುತ್ತಿದ್ದ. ಅದು ದೊಡ್ಡದಲ್ಲ, ಅವನ ಪ್ರಾಯದ ಮುಖದಲ್ಲಿಯ ಮೊಡವೆಯಂತೆ ಕಂಡೀತಷ್ಟೆ.

ಕೈಯಲ್ಲಿ ಗಾಂಧೀಫೋಟೋ, ತಲೆಯಲ್ಲಿ ಹಳವಂಡ ಹೊತ್ತುಕೊಂಡು ಹಳ್ಳಿಗೆ ಬಂದ. ಆದರೆ ಹಳ್ಳಿಯಲ್ಲಿ ಜನ ಕಾಣಿಸಲಿಲ್ಲ; ಪ್ರಾಣಿಗಳಿದ್ದವು. ಅಂಕುಡೊಂಕಾದ ರಸ್ತೆಗಳು; ಗಟಾರಿಲ್ಲದ ಓಣಿಗಳು, ಕೊಳೆತು ಎಲ್ಲೆಂದರಲ್ಲಿ ನಾರುವ ತಿಪ್ಪೆಗಳು, ಧೂಳಿನಲ್ಲಿ ಉರುಳಾಡುವ ಕೂಸುಗಳು, ಕುನ್ನಿಗಳು, ಬೇಕಾಬಿಟ್ಟಿ ಅಡ್ಡಾಡುವ ನಾಯಿಗಳು, ದನಗಳು, ಜನಗಳು – ಕಂಡು ಅಪಾರ ಕರುಣೆ ಬಂತು. ಕೊಳೆ ತೊಳೆಯಬೇಕಾದ್ದೇ ಮೊದಲ ಕೆಲಸವೆಂದುಕೊಂಡ. ಅದಕ್ಕೆ ಅವಕಾಶವೂ ಸಿಕ್ಕಿತು.

ಪಂಚಾಯಿತಿಯಾಯ್ತು; ತಾನೇ ಸರಪಂಚನಾದ. ಸಭೆ ಮಾಡಿದ. ಅವನ ಸಭೆಗಳಿಗಾದ ಗತಿ ಹಿಂದೆ ನೋಡಿದ್ದೀರಿ. ಆದರೆ ನಿಂಗೂನ ಕೇಸಿನಲ್ಲಿ ಆಘಾತವೇ ಆಯ್ತು ಗುಡಸೀಕರನಿಗೆ. ಕಾಣಾಕಾಣಾ ಆದ ಖೂನಿಯನ್ನ ಹಾಡುಹಗಲೇ ಮುಚ್ಚುವುದೆಂದರೆ! ಖೂನಿಯೆಂದರೆ ಖೂನಿಯೇ. ಹೆಚ್ಚಲ್ಲ, ಕಮ್ಮಿಯಲ್ಲ. ಅದರ ತೀರ್ಮಾನ ಕೋರ್ಟಿನಲ್ಲೇ ಆಗಬೇಕು. ಕಾಯ್ದೆ ಹಳ್ಳಿಗೊಂದು, ಶಹರಕ್ಕೊಂದು ಇರುವುದಿಲ್ಲ. ಊರ ಗೌಡ, ಕುಲಕರ್ಣಿ ಈ ರೀತಿ ತಾವೇ ಕಾನೂನನ್ನು ಕೈಗೆ ತಕ್ಕೊಂಡರೆ ನ್ಯಾಯ ಉಳಿದೀತೆ? ಛೆ ಛೇ ಇದನ್ನು ಯೋಚಿಸುವುದೇ ಅಸಾಧ್ಯ. ಈತನಕ ಅವನಿಗೆ ಗೌಡ, ದತ್ತಪ್ಪನ ಬಗ್ಗೆ ಗೌರವ ಭಾವನೆ ಇರಲಿಲ್ಲ. ಅಸಮಾಧಾನವೂ ಇರಲಿಲ್ಲ. ಆದರೆ ಈಗ ಮಾತ್ರ ಕೋಪ ಬಂತು. ಕಾಪಾಡುವ ಹೆಸರಿನಲ್ಲಿ ಊರನ್ನು ಹಾಳು ಮಾಡುವವರು ಇವರೇ – ಎಂದುಕೊಂಡ. ಸಾಲದ್ದಕ್ಕೆ ಎಲ್ಲ ಕೂಡಿ ಫೋಜುದಾರನ ಎದುರಿಗೆ ಅವರಂತೇ ಮಾತಾಡಿದ್ದರು. ಜನ ಎಷ್ಟೆಲ್ಲ ಅಜ್ಞಾನದಲ್ಲಿದ್ದರೆ ಅಷ್ಟಷ್ಟು ಇವರಿಬ್ಬರೂ ದೇವತೆಗಳಾಗುತ್ತಾರೆ. ಅದಕ್ಕೆ ಇವರಿಗೆ ಜ್ಞಾನದ ಮಾತಾಡುವವರು ಬರ್ಷಣವಾಗುತ್ತಾರೆ. ತಾನು ಮುಂದೆ ಬಂದರೆ ಜನಕ್ಕೆ ತಿಳುವಳಿಕೆ ಕೊಟ್ಟರೆ ಇವರ ಮಹಿಮೆ ನಂದುವುದಲ್ಲಾ, ಅದಕ್ಕೇ ಇವರಿಗೆ ತನ್ನ ಬಗ್ಗೆ ಅಸೂಯೆ ಎಂದುಕೊಂಡ.

ಇವತ್ತೂ ಅಂಥದೇ ಆಘಾತವಾಗಿತ್ತು. ಎಲೆಕ್ಷನ್ನಿಲ್ಲದೆ ಹಿರಿಯರು ಪಂಚಾಯ್ತಿ ತನ್ನ ಕೈಗಿಟ್ಟದ್ದು ನಿಜ. ಆದರೆ ಅದಕ್ಕೆ ಕಾರಣ ಬೇರೆ. ಕಲಿತವರಿರಲಿಲ್ಲ; ಪಂಚಾಯ್ತಿ ಅಂದರೇನೆಂದು ಗೊತ್ತಿಲ್ಲ. ಬೇರೆ ದಿಕ್ಕಿಲ್ಲದೆ ತಟ್ಟೆಯೊಳಗಿಟ್ಟು ಕೈಗಿತ್ತರು. ಈಗ ತಿರುಗಿ ಕೇಳಿದರೆ? – ಹೊಸದಾಗಿ ಕಲಿತವರು ಬಂದರೋ? ದತ್ತಪ್ಪ ಊರವರನ್ನೆಲ್ಲ ಕೂಡಿಸಿ ಪಂಚಾಯ್ತಿ ಕೇಳಿದ ಎನ್ನೋಣ. ಗೌಡನಿಗೆ ಹೆದರಿ ಮಂದಿ ಕೈ ಎತ್ತಲೂಬಹುದು. ಹಾಗಾದರೆ ಅದು ಪಂಚಾಯ್ತಿ ಆಯ್ತೆ? ಊರಿನ ಪ್ರತಿಯೊಬ್ಬನಿಗೂ ಆಯ್ಕೆಮಾಡುವ ಸ್ವತಂತ್ರ ಹಕ್ಕಿದೆ. ಇವರಿಗೆ ಅದು ಬೇಕಿಲ್ಲ.

ಹೀಗೆ –

ಹಲವು ಹದಿನೆಂಟು ಥರ ಯೋಚಿಸಿದ. ಯಾವ ಮಗ್ಗುಲಿನಿಂದ ತಿಳಿದು ನೋಡಿದರೂ ತನ್ನದೇ ನಿಜ ಅನ್ನಿಸಿತು. ಒಂದಂತೂ ಅವನಿಗೂ ಖಾತ್ರಿಯಾಯ್ತು; ಹಿಂದಿನಂತೆ ಈ ಸಲ ಪಂಚಾಯ್ತಿಯನ್ನ ಅವರು ತಟ್ಟೆಯೊಳಗಿಟ್ಟು ಕೊಡೋದಿಲ್ಲ. ಎಲೆಕ್ಷನ್ ಗ್ಯಾರಂಟಿ. ಅದರ ತಯಾರಿ ಈಗಿನಿಂದಲೇ ಸುರುಮಾಡಬೇಕೆಂದ. ಕಾರಹುಣ್ಣಿಮೆ ದಿನ ನಾಟಕವಾಡುತ್ತೇವಲ್ಲಾ ಅದು ಎಲೆಕ್ಷನ್ ಗೆಲುವನ್ನು ಹತ್ತಿರ ತರಬೇಕು. ಎಂದುಕೊಂಡ.