ರಂಡಿ ಹುಣ್ಣಿವೆ’ಯಿನ್ನೂ ನಾಕು ದಿನ ಇತ್ತು. ಅಂದು ಮಧ್ಯಾಹ್ನ ಬೇಸಿಗೆಯಂಥ ಬಿಸಿಲು ಬಿದ್ದು ದನಕರು ಕರೆಯಲ್ಲಿ ಬಿದ್ದು ತಂಪಿನ ಅಮಲಿನಲ್ಲಿದ್ದವು. ಹೊಲಗಳಲ್ಲಿದ್ದವರು ಒಣ ಕನಿಕೆಯ ಗೂಡು, ಮರ, ಮರೆಯ ನೆರಳುಗಳಲ್ಲಿ ಆಶ್ರಯ ಪಡೆದಿದ್ದರು. ಭೂಮಿ ಸೀಮೆಯ ಸುತ್ತಮುತ್ತ ಎತ್ತ ನೋಡಿದರೂ ಬಿಸಿಲುಗುದುರೆಗಳ ಓಟ ಕಾಣಿಸುತ್ತಿತ್ತು. ಊರಿನಲ್ಲಿ ಜನ ಕಟ್ಟೆಗಳ ಮೇಲೆ, ಪಡಸಾಲೆಯಲ್ಲಿ ತಂಪಾಗಿ ಕೂತಿದ್ದರು. ಉರಿ ಬಿಸಿಲಿನ ಪ್ರತಾಪ ಎಷ್ಟು ತೀವ್ರವಾಗಿತ್ತೆಂದರೆ ಮಾತಾಡುವುದಕ್ಕೆ ಕೂಡ ಮನಸ್ಸಾಗುತ್ತಿರಲಿಲ್ಲ. ಹೀಗಾಗಿ ಹಗಲಾದರೂ ರಾತ್ರಿಯಷ್ಟೇ ಊರು ನಿಶ್ಯಬ್ದವಾಗಿತ್ತು.

ಅಷ್ಟರಲ್ಲಿ ಊರವರು ಹಿಂದೆಂದೂ ಕೇಳರಿಯದ, ಊಹಿಸಬರದ, ಕಲ್ಪಿಸಬರದ ವಿಕಾರ ಸ್ವರ ಕಿವಿಯಲ್ಲಿ ಗೂಟ ಜಡಿದಂತೆ, ಇಡೀ ಊರು ಸಿಡಿದು ಸ್ಫೋಟಗೊಂಡಂತೆ, ಗುಡ್ಡ ಉರುಳಿ ಮೈಮೇಲೆ ಬಿದ್ದಂತೆ ಕೇಳಿಸಿ ಊರಿಗೂರೇ ಕೆಲವು ಕ್ಷಣ ದಿಗ್ಭ್ರಮೆಗೊಂಡಿತು. ಮಲಗಿದ್ದವರು ದುಃಸ್ವಪ್ನ ಕಂಡಂತೆ ಚಕ್ಕನೆ ಎದ್ದು ಕೂತರು. ಕೆರೆಯಲ್ಲಿದ್ದ ದನಗಳು ಬೆದರಿ, ಹೊರಗೋಡಿದವು. ಅನೇಕರ ಸೀರೆ ಧೋತ್ರಗಳು ಒದ್ದೆಯಾದವು. ಮಕ್ಕಳು ಕಿಟಾರನೆ ಕಿರುಚಿದವು. ಲಗಮವ್ವ ಹೇಳಿದ್ದು ನಿಜವೇ ಎನ್ನುವುದಾದರೆ,  ಕರಿಮಾಯಿಯ ಮೂರ್ತಿ ಈ ದನಿ ಕೇಳಿ ಗಕ್ಕನೆ ಹಾರಿ ಕುಪ್ಪಳಿಸಿ, ಮುರಿದ ಕೈ ಜಾರಿ ಕೆಳಗೆ ಬಿತ್ತಂತೆ! ಲಗಮವ್ವ ಅದನ್ನು ಮತ್ತೆ ಅವಳ ಕೈಯಲ್ಲಿಟ್ಟು ನೋಡಿದಾಗ ಮೂರ್ತಿ ಸಣ್ಣದಾಗಿ ಬೆವರಿತ್ತಂತೆ!  ಕೆರೆಯ ಸುತ್ತಲಿನ ಗಿಡಮರಗಳಲ್ಲಿ ಕೂತ ಹಕ್ಕಿ ಪಕ್ಕಿಗಳು ಏನೋ ಆಘಾತವಾದಂತೆ ಕಿರ್‌ರ್ ಎಂದು ಕಿರುಚುತ್ತ ಹಾರಾಡತೊಡಗಿದವು! ಏನೇನೂ ಅತಿಶಯೋಕ್ತಿಯಲ್ಲದೆ ವರ್ಣಿಸಬೇಕೆಂದರೆ ಮನೆಗಳಲ್ಲಿ ಒಬ್ಬರೂ ಉಳಿಯದೆ ಊರಿಗೆ ಊರೇ ಹೊಟ್ಟೆ ತೊಳೆಸಿ ವಾಂತಿ ಮಾಡಿಕೊಂಡಂತೆ ಎಲ್ಲ  ಜನ ಹಿರಿಕಿರಿಯರೆನ್ನದೆ, ಗಂಡು ಹೆಣ್ಣೆನ್ನದೆ ಬೀದಿಗೆ ಬಂದರು! ಮೊದ ಮೊದಲು ಅದರ ದನಿ ಮಾತ್ರ ಕೇಳಿಸಿ, ಅನಂತರ “ನಿಮ್ಮ ಹೋಟು ಯಾರಿಗೆ? ಗುಡಸೀಕರ ಸಾಹೇಬರಿಗೆ” ಎಂಬ ಶಬ್ದಗಳು ಕೇಳಿದ್ದರಿಂದ ಸ್ವಲ್ಪ ನೆಮ್ಮದಿಗೊಂಡು ದನಿಬಂದ ಕಡೆಗೆ ಕೂತ ನಿಂತವರೆಲ್ಲ ನುಗ್ಗಿದರು. ಗುಡಸೀಕರ ಮೈಕ್ ತರಿಸಿ ಮಟ ಮಟಾ ಮಧ್ಯಾಹ್ನದ ಹೊತ್ತಿನಲ್ಲಿ ಮಾರಾಯಾ, ಕರಿಮಾಯಿ ಅವನ ಹೊಟ್ಟೆ ತಣ್ಣಗಿಡಲಿ, ಚುನಾವಣೆಯ ಪ್ರಚಾರ ಒದರಿಸುತ್ತಿದ್ದ.

ಆ ದಿನ ಯಾರ ಬಾಯೊಳಗೆಲ್ಲ ಅದೇ ಮಾತು. ಉದ್ರೇಕಕರ ಕತೆಗಳಿಂದ, ಸುದ್ದಿಗಳಿಂದ, ಸಪ್ಪಳದಿಂದ, ಉರಿ ಬಿಸಿಲಿನಿಂದ ಊರು ದುಮುಗುಟ್ಟಿತು. ದುರ್ದೈವವೆಂದರೆ ಒಬ್ಬರ ಮಾತು ಒಬ್ಬರಿಗೆ ಕೇಳಿಸುತ್ತಿರಲಿಲ್ಲ. ಕಿರಿಚಿ, ಅಭಿನಯಿಸಿ, ಗಂಡಸರು ಗುಂಪುಗೂಡಿ,  ಹೆಂಗಸರು ಹೊರಕಡೆಗೆ ಹೋದಲ್ಲಿ ಮಾತಾಡಿಕೊಂಡರು. ಹಿರಿಯರೂ ಕೂಡ ಹೆಂಗಸರಂತೆ ಆಡಿಕೊಂಡರು. ಮೈಕ್ ಶಬ್ದವನ್ನು ಒಂಯ್ಕ್ ಒಂಯ್ಕ್ ಎಂದು ಅಣಕಿಸಿದರು. ಇದಕ್ಕೆಲ್ಲಾ ಎಷ್ಟು ಖರ್ಚು ಬಂದಿರಬಹುದೆಂದು ಅಂದಾಜು ಹಾಕಿದರು. ಅವರಪ್ಪ ಮಂದಿಯ ಗೋಣು ಮುರಿದು ಕೂಡಿದಿದ್ದನ್ನೆಲ್ಲ ಮಗ ಕಕ್ಕಲೆಂದರು. ಎಲ್ಲರೂ ಆ ದಿನ ತಡವಾಗಿ ಮಲಗಿದರು.

ಹಳೆಯ ಪಂಚರೀಗ ಚಿಂತೆ ಮಾಡಲೇಬೇಕಾಯಿತು. ಈ ತನಕ ಅವರಿಗೆ ತಮ್ಮ ಗೆಲುವಿನಲ್ಲಿ ಭರವಸೆಯೇನೋ ಇತ್ತು. ಆದರೆ ಎದುರಿನವರ ಪ್ರಚಾರ ತಂತ್ರಕ್ಕೆ ತಲೆಬಾಗದೆ ವಿಧಿಯಿರಲಿಲ್ಲ. ಹೆಂಗಸರಲ್ಲಿ ಬಾಡಿ ಹಂಚಿ ಆಣೆ ಮಾಡಿಸಿದ ಸುದ್ದಿ ಕಿವಿಗೆ ತಲುಪಿತ್ತು.  ಹುಣ್ಣಿಮೆಯ ಮಾರನೆ ದಿನ ಚುನಾವಣೆಯಿದ್ದುದೊಂದೆ ಅವಿರಿಗಿದ್ದ ಧೈರ್ಯ. ಆ ದಿನ ಹೆಂಗು ಬಂಗಾರದ ಮೂರ್ತಿ ಏಳುತ್ತದೆ. ದೇವರ ಕಾರಣಿಕವಾಗುತ್ತದೆ. ಕರಿಮಾಯಿ ಊರಿಗೊಂದು ಆಜ್ಞೆ ಕೊಟ್ಟೇ ಕೊಡುತ್ತಾಳೆ. ಅಂದರೆ ಅದು ತಮ್ಮ ಪರವಾಗೇ ಇರುತ್ತದೆಂದು ಇವರ ನಂಬಿಕೆ. ಹಾಗೆಂದು ಸುಮ್ಮನೆ ಕೂರುವುದ್ಯಾಕೆಂದು ಭೇಟಿಯಾದವರಿಗೆ ತಮ್ಮ ‘ಮರದ ಗುರುತಿಗೆ ಹೋಟ ಹಾಕ್ರೆಪಾ’ ಎಂದು ಅವರೂ ಹೇಳತೊಡಗಿದರು.

ಇತ್ತ ಗುಡಸೀಕರನಿಗೆ ಹುಣ್ಣಿಮೆಯ ಭಯ ಇರಲಿಲ್ಲವೆಂದಲ್ಲ. ಯಾಕೆಂದರೆ ನಿಂತ ಐವರಲ್ಲಿ ದೇವರೇಸಿಯೂ ಒಬ್ಬ. ಆದರೆ ಆ ಕಾಳಜಿ ನಿಮ್ಮದಲ್ಲ, ನನ್ನದೆಂದು ಬಸವರಾಜು ಹೇಳಿರಲಿಲ್ಲ.