ಚುನಾವಣೆ ಆ ಸಣ್ಣ ಹಳ್ಳಿಗೆ ವಿಚಿತ್ರವಾಗಿ ಕಂಡಿತು. ಚತುಷ್ಟಯರ ಹಿರಿಯರು ಗೌಡರ ವಿರುದ್ಧ ನಿಂತುದಕ್ಕೆ ಬೈದು ಬುದ್ಧಿ ಹೇಳಿದರು. ಅದೇನು ಭಂಡತನವೋ, ಒಳಕ್ಕಿಳಿವ ಹೆಂಡವೋ ನಿಂತರೆ ತಪ್ಪೇನೆಂದು ಸಾಧಿಸಿದರು, ಹ್ಯಾಗೂ ಸೋಲುತ್ತವೆ, ನಿಂತರೆ ನಿಂತುಕೊಳ್ಳಲೆಂದು ಅವರೂ ಸುಮ್ಮನಾದರು. ಇಷ್ಟಾಗಿಯೂ ಊರ ಜೀವನ ನೆಮ್ಮದಿಯಾಗೇ ಇತ್ತು. ಚುನಾವಣೆಯ ಹುಳ ಕೊರೆಯುತ್ತಿದ್ದುದು ಇವರ ತಲೆಯಲ್ಲಿ ಮಾತ್ರ.

ಸರಕಾರೀ ಕಚೇರಿಯಿಂದ ಹುರಿಯಾಳುಗಳ ಹೆಸರು ಸ್ಥಿರಪಟ್ಟ ಬಗ್ಗೆ ಪತ್ರ ಬಂತು. ಶ್ರೀ ಪರಗೌಡಾ ಶಿವಗೌಡಾ ನಾಯಕ, ಶ್ರೀ  ದತ್ತೋಬಾ ದೋಂಡೋಬಾ ಕುಲಕರ್ಣಿ, ಶ್ರೀ ಬಾಳಪ್ಪ ಬಸವಂತಪ್ಪ ಮುಗಳಿ, ಶ್ರೀ ಬಸೆಟ್ಟಿ ಪರಮಸೆಟ್ಟಿ ಪುಗಸೆಟ್ಟಿ, ಶ್ರೀ ನಿಂಗಪ್ಪಾ ಹೊಲೇರ, ದೇವರೇಸಿ ಇವರು ಐದು ಜನ ಒಂದು ಪಕ್ಷವಾದರೆ ಶ್ರೀ ಜಿ.ಎಂ. ಗುಡಸೀಕರ ಬಿ.ಎ.ಎಲ್.ಎಲ್.ಬಿ., ಶ್ರೀ ಸಿ.ಬಿ.ರಮೇಸ್, ಶ್ರೀ ಎಂ. ವಾಯ್ ಮೆರೆಮಿಂಡ, ಶ್ರೀ ಡಿ.ಬಿ. ಸಾತೀರ, ಶ್ರೀ ಎಸ್. ಎಸ್. ಕಡ್ಲಿ (ಅಂದರೆ ಕಳ್ಳ ಸಿದರಾಮ) ಇವರು ಇನ್ನೊಂದು ಪಕ್ಷವಾದರು.

ಜನ ಚುನಾವಣೆ ಅರಿಯದವರಲ್ಲ. ಈ ಹಿಂದೊಮ್ಮೆ ಒಂದು ನಡೆದಿತ್ತು. ಹೂಡಿದ ಎತ್ತು, ಗುಡಿಸಲ ಚಿತ್ರಗಳ ಮಧ್ಯೆ. ಹೂಡಿದ ಎತ್ತು ನಮ್ಮ ತಂದೆ ಇದ್ದ ಹಾಗೆ. ಅದಕ್ಕೇ ಹೋಟು ಬರೆಯೋಣ ಎಂದು ಗವಡ ಹೇಳಿದ್ದರಿಂದ  ಹೊಗಿ ಹೋಟು ಬರೆದು ಬಂದಿದ್ದರು. ಈ ಸಲ ಗುಡಸೀಕರನ ಗುಂಪಿಗೆ ತಕ್ಕಡಿಯ ಗುರುತನ್ನು ಕೊಡಲಾಗಿತ್ತು.

ಚತುಷ್ಟಯರು ಕೈಯಿಂದ ಹಣ ಖರ್ಚು ಮಾಡುವಂಥದೇನೂ ಇರಲಿಲ್ಲ, ಗುಡಸೀಕರನ ದಯದಿಂದ. ಆದ್ದರಿಂದ ನಾಲ್ವರೂ ಧಾರಾಳಿಗಳಾದರು. ಬಾತಾಡಿಸಿದವರಿಗೆಲ್ಲ ಬೀಡಿ ಕೊಡುತ್ತ ತಮಗೇ ಹೋಟು ಹಾಕಬೇಕೆಂದರು. ಬಸವರಾಜು ಬೆಳಗಾವಿಯಿಂದ ಒಬ್ಬ ಪೇಂಟರನನ್ನು ಗೊತ್ತುಮಾಡಿ ತಂದ. ಬಂದವನು ಗುಡಸೀಕರನ ಮನೆಯ ಸುಣ್ಣಬಣ್ಣದ ಗೋಡೆಯ ಮೇಲೆ ದೊಡ್ಡ ತಕ್ಕಡಿಯ ಚಿತ್ರ ಬರೆದು “ನಿಮ್ಮ ಹೋಟು ತಕ್ಕಡಿಗೆ” ಎಂದು ಬರೆದಿದ್ದ.

ಬಣ್ಣದಿಂದ ಬರೆದ ಆ ಚಿತ್ರ ಎಷ್ಟು ದೂರದಿಂದ ನೋಡಿದರೂ ಒಡೆದು ಕಾಣುತ್ತಿತ್ತು. ಜನ ಗುಡಸೀಕರನ ಮನೇ ಮುಂದೆ ನಿಂತು, ನಡೆದಾಡಿ ನೋಡಿ ನೋಡಿ ಬಂದರು. ಚಿತ್ರಗಾರ ಪುಕ್ಕಟೆ ಬರೆಯುವುದು ಗೊತ್ತಾದೊಡನೆ ಬಸವರಾಜನಿಗೆ ವಿನಂತಿಸಿಕೊಂಡು ಜನ ತಂತಮ್ಮ ಮನೆ ಗೋಡೆಗಳ ಮೇಲೆ ಅಂಥವೇ ಚಿತ್ರ ಬರೆಸಿದರು. ಹೀಗಾಗಿ ಪ್ರತಿ ಮನೆಯ ಗೋಡೆಯ ಮೇಲೆ ಚಿತ್ರದ ತಕ್ಕಡಿ ಗೂಗತೊಡಗಿತು. ಮಕ್ಕಳು “ನಮ್ಮ ಮನೆ ತಕ್ಕಡಿ ದೊಡ್ಡದು, ನಿಮ್ಮದು ಸಣ್ಣದೆಂದ ತಂತಮ್ಮಲ್ಲಿ ಜಗಳಾಡತೊಡಗಿದವು. ಕೆಲವು ಸ್ಥಳಿಕ ಕಲಾವಿದರು ಬರೀ ತಕ್ಕಡಿಯಲ್ಲಿ ಹಣ್ಣು, ತೆಂಗಿನಕಾಯಿ, ವೀಳ್ಯದೆಲೆ ಬರೆದರು. ಇನ್ನೊಬ್ಬ ಕಲಾವಿದ ಒಂದು ಪರಡಿಗೆಯಲ್ಲಿ ಹಕ್ಕಿಯನ್ನೂ ಇನ್ನೊಂದರಲ್ಲಿ ರೂಪಾಯಿಗಳನ್ನೂ ಬರೆದ. ಗೌಡನ ಪಕ್ಷದವರು ಬರೆಸಲಿಲ್ಲವಾದ್ದರಿಂದ ಮರದ ಚಿತ್ರ ಮೂಡಲೇ ಇಲ್ಲ. ಆದರೆ ಗೌಡನ ಪಕ್ಷದ ಸಂಕೇತ ಮರವೆಂದು ಗುರುತಾದೊಡನೆ ತಂತಮ್ಮ ಮನೆಗಳ ತಕ್ಕಡಿಯಲ್ಲಿ ಮರ ಕೂರಿಸಿದಂತೆ, ಅದರ ಮೇಲೆ ಹಕ್ಕಿ ಕೂತ ಹಾಗೆ, ಅದರ ನೆರಳಿನಲ್ಲಿ ದನ ನಿಂತಂತೆ, ಕೆರೆಯಲ್ಲಿ ಕರಿಮಾಯಿ ಕಮಲದ ಹೂ ಹಿಡಿದಿದ್ದಂತೆ ಚಿತ್ರ ಬರೆದರು. ಹೀಗಾಗಿ ಇಡೀ ಊರು ತಕ್ಕಡಿ ಮರಗಳ ವಿಚಿತ್ರ ಪ್ರದರ್ಶನದಂತೆ ಕಾಣುತ್ತಿತ್ತು.

ಊರು ರಂಗು ರಂಗಾಗಿ ಕಂಡಿತಲ್ಲ, ಹಳೆಯ ಮಂದಿ ಅವರೂ ಸೋಜಿಗಪಟ್ಟರೇ, ಆನಂದಪಟ್ಟರೇ, ನೆವದಲ್ಲಿ ನೆವ ಊರಾದರೂ ಚೆಂದಾಯಿತಲ್ಲ ಎಂದು. ಆದರೆ ಅವರಿಗೆಂದೂ ತಮ್ಮ ಯಶಸ್ಸಿನ ಬಗ್ಗೆ ಸಂದೇಹ ಬರಲಿಲ್ಲ, ಜನಕ್ಕೂ.

ಇತ್ತ ಚತುಷ್ಟಯರು ಅಂದಂದಿನ ಪರಿಣಾಮಗಳನ್ನು ಚಿರ್ಚಿಸಲು ಪ್ರತಿದಿನ ಗುಡಿಸಲಿನಲ್ಲಿ ಸೇರುತ್ತಿದ್ದರು. ನಾಳೆ ಮಾಡಬೇಕಾದ ಕೆಲಸಗಳನ್ನು ಬಸವರಾಜು ವಿವರಿಸುತ್ತಿದ್ದ. ಅವನ ತಂತ್ರಗಳ ಬಗ್ಗೆ ಈಗ ಗುಡಸೀಕರನಲ್ಲೂ ನಂಬಿಕೆ ಮೂಡಿತ್ತು. ಯಾಕೆಂದರೆ ತಕ್ಕಡಿಯ ಚಿತ್ತ ಬರೆಸುವ ಮೂಲವಿಚಾರ ಆತನದೆ. ಈಗಂತೂ ಅವನ ಮಾತೇ ಮಾತು. ಪ್ರಚಾರ ಮಾತ್ರ ಏಕಪಕ್ಷೀಯವಾಗಿತ್ತು. ಈ ತನಕ ಮಂದಿಗೆ ಬೀಡಿಕೊಟ್ಟು, “ನಮಗೆ ಹೋಟು ಹಾಕ್ರಿ” ಎಂದು ಹೇಳುತ್ತಿದ್ದವರು. ಈಗ ಸಿಗರೇಟು ಹಂಚತೊಡಗಿದರು. ಒಂದು ದಿನ ಬಸವರಾಜು ಇದ್ದಕ್ಕಿದ್ದಂತೆ ಬೆಳಗಾವಿಗೆ ಹೋಗಿ ಇನ್ನೂರು, ಮುನ್ನೂರು ಬಾಡಿತಂದು, ಗಿರಿಜಾ ಮೂಲಕ ಹೆಂಗಸರಿಗೆ ಗೋಪ್ಯವಾಗಿ ಹಂಚಿ, ಆ ಎಲ್ಲರಿಂದಲೂ ಗುಡಸೀಕರ ಪಾರ್ಟಿಗೇ ಹೋಟು ಹಾಕುವಂತೆ ಕರಿಮಾಯಿಯ ಆಣೇ ಮಾಡಿಸಿದ್ದ.

ಇತ್ತ ಚತುಷ್ಟಯರು ಸುಮ್ಮನೆ ಕೂತಿರಲಿಲ್ಲ. ಸಾಲೆ ಮಕ್ಕಳ ಮೆರವಣಿಗೆಯಲ್ಲಿ ದಿನಾ ಮಾಲೆ ಹಾಕಿಕೊಂಡು ಕಂಡ ಕಂಡವರಿಗೆ ಬೀಡಿ ಸಿಗರೇಟು ಕೊಡುತ್ತ ಪ್ರಚಾರ ಮಾಡತೊಡಗಿದರು. ಎಲ್ಲಕ್ಕಿಂತ ಹೆಚ್ಚಾಗಿ ನಾಲ್ವರಿಗೆ ಪುಷ್ಕಳ ಸಿಕ್ಕುತ್ತಿದ್ದ ಭಾಷಣದ ಅವಕಾಶಗಳನ್ನು ಯಾರೂ ತಪ್ಪಿಸಿಕೊಳ್ಳುತ್ತಿರಲಿಲ್ಲ. ಇವರ ಭಾಷಣ ಕೇಳಲಿಕ್ಕೆ ಜನ ಬರಲಿ, ಬಿಡಲಿ, ಒಬ್ಬರಿರಲಿ, ಇಬ್ಬರಿರಲಿ, ಬಸವರಾಜು ಕಲಿಸಿದ ಸ್ಟೈಲಿನಲ್ಲಿ ನಿಂತುಕೊಂಡು ಭಾಷಣ ಮಾಡುತ್ತಿದ್ದರು. ಬರೀ ಒಬ್ಬಿಬ್ಬರು ಗಂಡಸರಿದ್ದ ಸಭೆಯಲ್ಲಿ ಚತುಷ್ಟಯರು “ನನ್ನ ನೆಚ್ಚಿನ ಬಂಧು ಭಗಿನಿಯರೇ” ಎಂದೇ ಸುರುಮಾಡಿ ಜೈಹಿಂದದಲ್ಲೇ ಮುಗಿಸುತ್ತಿದ್ದರು. ಮಕ್ಕಳು ಮೆರವಣಿಗೆ ಹೊರಟಾಗ “ಮುದಿಯರ ಕಾಲ ಮುಗೀತೂ, ತರುಣರ ಕಾಲ ಸುರುವಾತು, ಹಳಬರ ಗೊಡ್ಡು ನೀತಿಗೆ ಧಿಕ್ಕಾರ! ಹೊಸ ರೀತಿಗೆ ಜಯಕಾರ! ಏನೇ ಬರಲಿ, ಒಗ್ಗಟ್ಟಿರಲಿ,” ಇತ್ಯಾದಿ ಕಿರುಚುತ್ತಿದ್ದವು. ಚತುಷ್ಟಯರ ಪೈಕಿ ಇದ್ದುದರಲ್ಲೇ ಸ್ವಲ್ಪ ಸ್ವಂತಿಕೆಯಿದ್ದವರೆಂದರೆ ಕಳ್ಳ ಹಾಗೂ ರಮೇಸ. ಕಳ್ಳ ಉಳಿದವರಂತೆ ಭಾಷಣ ಸುರುಮಾಡಿ ಮುಗಿಸುತ್ತಿದ್ದರೂ ಮಧ್ಯದಲ್ಲಿ ದೃಷ್ಟಾಂತಗಳನ್ನು ಸೇರಿಸುತ್ತಿದ್ದ. ಅವನ ಭಾಷಣದ ಸಾಧ್ಯವಾದಷ್ಟು ಅಶ್ಲೀಲವಲ್ಲದ ಭಾಗವನ್ನು ಕೆಳಗೆ ಉದಾಹರಿಸಿದ್ದೇನೆ.

“ಒಬ್ಬಾಕಿ, ಒಳೆ ಚಂದ, ನವ ತರುಣಿ ಹುಡಿಗಿ ಇದ್ದಳಂತ. ಮದಿವ್ಯಾಗೋ ವಯಸ್ಸು ಬಂತು. ಯಾರನ್ನ ಮದಿವ್ಯಾಗಬೇಕು? ವಾರಿಗಿ ಹುಡುಗನ್ನ ಮದಿವ್ಯಾದರ ಅಂವಗ ರಾತ್ರಿ ಬರೋಬರಿ ಕೆಲಸಾ ಮಾಡಾಕ ಬರತೈತೋ ಇಲ್ಲೋ! ಅದಕ್ಕೆ ಒಬ್ಬಂವ ವಯಸ್ಸಾದ ಮುದುಕನ್ನ ಮದಿವ್ಯಾದರ, ಹೆಂಗೂ ಅನುಭವ ಇರತೈತಿ, ಕೆಲಸಾ ಬರೋಬರಿ ಮಾಡತಾನು!

ನನ್ನ ನೆಚ್ಚಿನ, ಅಚ್ಚುಮೆಚ್ಚಿನ ಶಿವಾಪುರದ ಬಾಂಧವರೇ, ಹಾಂಗ ತಿಳಿಕೊಂಡ ಆಕಿ ಮುದುಕನ್ನ ಮದಿವ್ಯಾದಳಂತ! ರಾತ್ರಿ ಸಡಗರ ಮಾಡಿಕೋತ ಹ್ವಾದರ ಅಲ್ಲೇನೈತಿ? ಅನುಭವ ಇತ್ತ ಖರೆ! ಗೂಟ? ಆದ್ದಿರಿಂದ ನನ್ನ ಬಂಧು ಭಗಿನಿಯರೇ, ಆ ನವ ತರುಣಿ ಹಾಂಗ ಹಳೇ ಬುಡ್ಡಾಗೋಳಿಗಿ ಹೋಟ ಹಾಕಿ ಗೂಟ ಇಲ್ಲಬೇ ಅಂತ ಅಳಬ್ಯಾಡರಿ. ಜೈಹಿಂದ್.”

“ನನ್ನ ನಚ್ಚಿನ ಅಚ್ಚುಮೆಚ್ಚಿನ ಸಿವಾಪುರದ ಬಂಧು ಭಗಿನಿಯರೇ, ನಮ್ಮ ಕಳ್ಳರವರು ಹೇಳಿದ ಮಾತನ್ನು ಬರೋಬರಿ ತಿಳಕೊಳ್ಳರಿ. ಅವರು ಹೇಳಿದ ಕತೆ ಸುಳ್ಳಲ್ಲ. ಅದರೊಳಗ ನವತರುಣಿ ಅಂದರ ಹೋಟು ಹಾಕುವಂತಾ ನೀವು. ಬುಡ್ಡಾ ಅಂದರ ಗೌಡರ ಪಾರ್ಟಿ, ಮದಿವ್ಯಾಗೋದಂದರೆ ಹೋಟು ಹಾಕಿ; ರಾತ್ರಿ ಅಂದರೆ ಎಲೆಕ್ಷನ್ ಆದಮೇಲೆ ಅಮತ ಅರ್ತ. ಆ ನವ ತರುಣಿಯು ಯಾವ ರೀತಿ ಬುಡ್ಡಾನನ್ನು ಮದಿವ್ಯಾಗಿ ರಾತ್ರಿ ಗೂಟವಿಲ್ಲೆಂದು ಅತ್ತಳೋ, ಅದೇ ರೀತಿ ನೀವು ಗೌಡರ ಪಾರ್ಟಿಗೆ ಹೋಟು ಹಾಕಿ, ಬಂಧು ಭಗಿನಿಯರೇ, ಗೋಳಾಡಬ್ಯಾಡರಿ. ಮದುವೆ ಜೀವನದಾಗ ಮ್ಯಾಲಿಂದ ಮ್ಯಾಲ ಆಗೋದಿಲ್ಲ. ಈಗ ಆ ನವತರುಣಿ ಏನು ಮಾಡಬೇಕು? ಗೂಟಿಲ್ಲದ ಬುಡ್ಡಾ ಒಂದು ಕಡೆ, ನವ ಪ್ರಾಯ ತುಂಬಿ ತುಳುಕುವ ನವ ತರುಣ ಇನ್ನೊಂದು ಕಡೆ. ವಿಚಾರ ಮಾಡಿರಿ, ಏನು ಮಾಡಬೇಕು?”

ಅಷ್ಟರಲ್ಲಿ ಸಭಿಕರಲ್ಲಿಯ ಒಬ್ಬ “ಹಾದರ ಮಾಡಬೇಕಪಾ” ಅಂದ. ರಮೇಸ ಅದನ್ನೇ ಮುಂದುವರಿಸಿದ.

“ನನ್ನ ನೆಚ್ಚಿನ ಅಚ್ಚುಮೆಚ್ಚಿನ ಬಂಧು ಭಗಿನಿಯರೇ, ಮೊದಲೇ ನವ ತರುಣನಾದ ಹುಡುಗನ್ನ ಮದಿವ್ಯಾಗಿದ್ದರೆ ಹಾದರ ಯಾಕೆ ಮಾಡಬೆಕಾಗಿತ್ತು? ಅದಕ್ಕೆ ನಮಗೇ ಹೋಟು ಹಾಕಿರಿ. ಜೈಹಿಂದ್!”

ಇವರು ಇಷ್ಟೆಲ್ಲ ಪ್ರಚಾರ ಮಾಡಿದ ಮೇಲೆ ಯಾರನಾದರೊಬ್ಬ “ಛೇ ಛೇ ನೀವೆಲ್ಲಾ ಗೌಡರ ಮುಂದಿನ ಕರುಗಳು. ಇನ್ನ ತಲೀ ಮ್ಯಾಲೀನ ಮಾಂಸ ಆರಿಲ್ಲಾ, ಚುನಾವಣಿ ಗೆಲ್ಲತಾರಂತ” ಹೀಗಂದರೆ ಸಾಕು ಪ್ರಚಾರ ಇನ್ನೂ ತೀವ್ರವಾಗುತ್ತಿತ್ತು.

ಬಹಳ ದಿನಗಳಿಂದ ಮನರಂಜನೆ ಕಾಣದಿದ್ದ ಊರಿಗೆ ಇದೆಲ್ಲ ಸೊಗಸಾಗೇ ಕಂಡಿತು. ಸೋಲು ಗೆಲವುಗಳ ಬಗ್ಗೆ ಗುಡಸೀಕರ ಮತ್ತು ಪಾರ್ಟಿಯವರು ಮನಸ್ಸಿಗೆ ಹಚ್ಚಿಕೊಂಡಂತೆ ಉಳಿದವರ್ಯಾರೂ ಹಚ್ಚಿಕೊಳ್ಳಲೂ ಇಲ್ಲ. ಮಗನನ್ನು ಕಳೆದುಕೊಂಡ ಚಿಂತೆಯಲ್ಲಿದ್ದ ಗೌಡನಿಗಾಗಲಿ, ಆ ಬಗ್ಗೆ ಸಹಾನುಭೂತಿಯಲ್ಲಿದ್ದ ಹಿರಿಯರಿಗಾಗಲಿ ಪ್ರಚಾರ ಮಾಡುವ ಬುದ್ಧಿ ಬರಲೇ ಇಲ್ಲ. ಅವರಿಗೂ ಪ್ರಚಾರದ ಈ ಹುಡುಗಾಟ ಮೋಜೆನಿಸಿತು. ಚುನಾವಣೆಯ ದಿನ ಸಮೀಪಿಸಿದಂತೆ ಗುಡಸೀಕರನ ಪಾರ್ಟಿಯವರ ಚಡಪಡಿಕೆ ಜಾಸ್ತಿಯಾಗುತ್ತಿತ್ತು. ಚಡಪಡಿಕೆಯಲ್ಲಿ ಒಮ್ಮೊಮ್ಮೆ ಅಲ್ಲದ್ದನ್ನೂ ಆಡುತ್ತಿದ್ದರು. “ಚಿಮಣಾನ ಬಸರ ಮಡಿದ ಗೌಡನಿಗೆ ಧಿಕ್ಕಾರ”. ಎಂದು ಮಕ್ಕಳಿಂದ ಒದರಿಸಿದರು. ಆದರೆ ಜನ ಛೀ, ಥೂ ಉಗುಳಿ ಹುಡುಗರನ್ನು ಹೊಡೆದದ್ದರಿಂದ ಅಷ್ಟಕ್ಕೇ ನಿಲ್ಲಿಸಿದರು.