ಆ ಊರಿನ ಜನಗಳ ತಲೆಯಲ್ಲೀಗ ಬೆಳೆ, ಭೂಮಿಗಳನ್ನು ಬಿಟ್ಟು ಬೇರೆ ವಿಚಾರ ಸುಳಿಯುವುದೇ ಸಾಧ್ಯವಿಲ್ಲ. ಪ್ರಕೃತಿಯೇನೋ ಸಮೃದ್ಧವಾಗಿ ಕೊಟ್ಟುಬಿಟ್ಟಿತ್ತು. ಮಳೆಯನ್ನು, ಬೆಳೆಯನ್ನು, ಕಳೆಯನ್ನು ಕೂಡ, ಬೆಳೆಕಳೆ ಬೇರ್ಪಡಿಸಬೇಕು. ಸಮೃದ್ಧಿಯನ್ನು ಹತೋಟಿಯಲ್ಲಿಟ್ಟುಕೊಂಡು ಗಟ್ಟಿಮುಟ್ಟಾದದ್ದಕ್ಕೆ, ಬೆಳೆಯುವ ಅವಕಾಶ ಕಲ್ಪಿಸಬೇಕು. ಮೈಕೈ ಮುರಿದು ಈಗ ದುಡಿದರೇ ಉಂಟು, ಇಲ್ಲದಿದ್ದರಿಲ್ಲ. ದಿನ ಹೆಚ್ಚುಕಮ್ಮಿಯಾದರೆ ಬೆಳೆ ಕೈಬಿಟ್ಟಂತೆ ಲೆಕ್ಕ. ಸಣ್ಣ ದೊಡ್ಡವರೆನ್ನದೇ, ಹೆಂಗಸು ಗಂಡಸೆನ್ನದೇ ಎಲ್ಲರೂ ಹೊಲಗಳಿಗೆ ಹೋಗುತ್ತಿದ್ದರು. ಬೆಳಗಿಂದ ರಾತ್ರಿಯ ತನಕ ಮೈಬಗ್ಗಿಸಿ ರಟ್ಟೆಮುರಿದು ದುಡಿಯುತ್ತಿದ್ದರು. ಇನ್ನು ಹರಟೆ ಹೊಡೆಯುವುದೆಲ್ಲಿ ಬಂತು? ಸರಿಯಾಗಿ ಮೈತುರಿಸಿಕೊಂಡೇನೆಂದರೂ ಸಮಯವಿರಲಿಲ್ಲ ಯಾರಿಗೂ. ಹಾಗೆ ದುಡಿದು ಕತ್ತಲೆ ಮಾಡಿ ಮನೆಗೆ ಬಂದರೆ ಹಸಿದ ಹೊಟ್ಟಿಗಿಷ್ಟು ತಂಗಳೋ, ಬಿಸಿಯೋ ಕೂಳು ಬಿದ್ದರಾಯ್ತು. ಆಮೇಲೆ ನೆಲ ಸಿಕ್ಕೀತೋ, ಇಲ್ಲವೋ ಅಂತ ಸಿಕ್ಕಸಿಕ್ಕಲ್ಲಿ ಸಿಕ್ಕ ಹಾಗೆ ಬಿದ್ದು ಗೊರಕಿ ಹೊಡೆಯುತ್ತಿದ್ದರು. ಈಗ ದುಡಿಯದವರೆಂದರೆ ಗುಡಸೀಕರ, ಬಸವರಾಜು ಮತ್ತು ಚಿಮಣಾ – ಮೂವರೇ.

ಗುಡಸೀಕರನ ಹೊಲದ ಕೆಲಸ ಆಳುಗಳು ಮಾಡುತ್ತಿದ್ದರು. ಬಸವರಾಜನಿಗಂತೂ ಸಿಗರೇಟು ಸೇದುವುದು, ರೇಡವೇ ಕೇಳುವುದು, ಗುಡಸೀಕರನ ತೋಟದ ಕಡೆ ಅಡ್ಡಾಡಿ ಬರುವುದು ಇಷ್ಟು ಬಿಟ್ಟರೆ ಬೇರೆ ಕೆಲಸವಿರಲಿಲ್ಲ. ಅವನ ಬೆಳಗಾವಿಉ ಪ್ರತಾಪ ಕೇಳುವುದಕ್ಕೆ ಈಗ ಒಬ್ಬನೂ ಸಿಕ್ಕುತ್ತಿರಲಿಲ್ಲ. ಜನ ಎಲ್ಲ ಮಲಗಿ ನಿದ್ರಿಸುತ್ತಿದ್ದರೆ ಈ ಮೂವರೇ ಭೂತಗಳ ಹಾಗೆ ಎಚ್ಚೆತ್ತಿದ್ದು, ಏನೇನೋ ಹಲಬುತ್ತಿದ್ದರು. ಚಿಮಣಾಳ ಪೂರ್ವ ವೃತ್ತಾಂತವೂ ಅಸ್ಪಷ್ಟವಾಗೇ ಇದೆ. ಬಸವರಾಜು ಮತ್ತು ಚಿಮಣಾ ಇಬ್ಬರೇ ಮಾತಾಡಿದಾಗಿನ ಕೆಲವು ಸಂಭಾಷಣೆಗಳಿಂದ ಅವಳ ಜೀವನ ಹೀಗಿತ್ತೆಂದು ತಿಳಿಯುತ್ತದೆ: ಅವಳ ಹೆಸರು ಸುಂದರಿಯೆಂದು. ಅಲತಗಿ ಸೀತವ್ವನ ಬಳಿ ಚಿಮಣಾ ವೃತ್ತಿ ಕಲಿತಳಂತೆ. ಆದರೆ ಸುತ್ತಲಿನ ಯಾವುದೇ ಹಳ್ಳಿಗೆ ಬಯಲಾಟಕ್ಕೆ ಬಂದವಳಲ್ಲ. ಹೆಸರು ಮಾಡಿಕೊಂಡವಳಲ್ಲ. ಸುಂದರವಾದ ಮೈಯೊಂದೇ ಸದ್ಯಕ್ಕೆ ಅವಳಿಗಿದ್ದ ಚಿಮಣಾ ಲಕ್ಷಣ. ವಯಸ್ಸಿನ ಮದ ನೆತ್ತಿಗೇರಿದ ದುರ್ಬಲ ಕ್ಷಣದಲ್ಲಿ ಬಸವರಾಜೂನ ವಶವಾಗಿರಬೇಕು. ಸೀತವ್ವನ ಮನೆ ಬಿಟ್ಟು ಒಂದೆರಡು ನಾಟಕ ಕಂಪನಿ ಸೇರಿದ್ದಳಂತೆ. ಸಿನೆಮಾ ನೋಡಿದ್ದಳಂತೆ, ಗಳಿಸಿದ್ದಳಂತೆ. ಗಳಿಸಿದ್ದನ್ನು ಉಂಡುಟ್ಟು ಖರ್ಚುಮಾಡಿದ್ದಳಂತೆ. ಅಂಥಾ ಚಿಕ್ಕ ವಯಸ್ಸಿನಲ್ಲೇ ಅವಳು ಉಂಗುಟಕ್ಕೆ ಹಾಕಿ ಹರಿದ ಹೆಚ್ಚಿನ ಸೀರೆಗಳ ಸಂಖ್ಯೆಯೇ ಒಂದು ಡಜನ್ನಾಗಿತ್ತಂತೆ!

ಬೆಳಗಾವಿಯಲ್ಲಿದ್ದಂಥ ಹಲ್‌ಚಲ್ ಭಾವನೆಗಳಿಗೆ ಇಲ್ಲಿ ಅವಕಾಶವಿರಲಿಲ್ಲ. ಉಟ್ಟು ತಿರುಗಲಿಕ್ಕಿಲ್ಲ, ನಗಾಡಿ ಮೆರೆದಾಡುವಂತಿಲ್ಲ. ಹಾಕಿಕೊಟ್ಟ ಚಹದಂಗಡಿ ಸರಿಯಾಗಿ ನಡೆಯಲಿಲ್ಲ. ಒಂದೆರಡು ಸಲ ಬಸವರಾಜನಿಗೆ ತನ್ನ ಅಸಮಾಧಾನ ತಿಳಿಸಿದಳು. ಅವನು ತಾಳು ವ್ಯವಹಾರ ಮುಗಿಯಲಿ ಎಂದು ಹೇಳುತ್ತಲೇ ಇದ್ದ. ಆ ವ್ಯವಹಾರ, ಅದೇನಿತ್ತೋ, ಬಹುಶಃ ತಾನು ಇಷ್ಟು ದಿನ ಇಲ್ಲಿ ಇದ್ದದ್ದಕ್ಕೆ ಗುಡಸೀಕರನಿಂದ ಪ್ರತಿಫಲ ವಸೂಲಿ ಮಾಡುವುದೇ ಇದ್ದೀತೆಂದು ಭಾವಿಸಿದ್ದಳು.

ಇನ್ನೂ ಜಾಸ್ತಿ ಬೇಸರವಾದದ್ದು ಸದಾ ತನ್ನನ್ನು ಗುಡಿಸಲಿನಲ್ಲಿ ಕೊಳೆ ಹಾಕಿದ್ದಕ್ಕೆ. ಕಣ್ಣಿಬಿಚ್ಚಿದ್ದ ಮಣಕಿನಂತೆ ಅಡ್ಡಾಡಿದವಳು. ಠಸಿ ಉಂಡು ತಿರುಗಿದವಳು. ಇಲ್ಲಿ ಸದಾ ಒಲೆಯ ಗುಡಸೀಕರನ ಕೈಹಿಡಿದ ಹೆಂಡತಿಯೆ? ಇವನು ಹಾಕಿದ ಕೂಳಿಗೆ ಹೇಳಿದಂತೆ ಕೇಳಿಕೊಂಡು ಒಲ್ಲದ ಮನಸ್ಸಿನಿಂದ ಯಾಕಿರಬೇಕು? ಗುಡಸೀಕರ ಬಾಯಿ ತುಂಬ ಬಡಿವಾರ ಆಡುತ್ತಿದ್ದ. ತಾಕತ್ತಿಲ್ಲದೆ ಮೈಪರಚಿಕೊಳ್ಳುತ್ತಿದ್ದ. ಹೆಂಗಸರ ಹಾಗೆ ಚಾಡಿ ನುಡಿಯುತ್ತಿದ್ದ. ಹೊಂಚುತ್ತಿದ್ದ. ಇಷ್ಟು ದುಡ್ಡು, ವಯಸ್ಸು, ಅಂತಸ್ತು ಇದ್ದವನು ಹ್ಯಾಗಿರಬೇಕು? ಔದಾರ್ಯವಿದೆ, ವ್ಯರ್ಥ ಸೋರುತ್ತದೆ. ಮಾನ, ಮರ್ಯಾದೆ ದುಡ್ಡಿನಿಂದ ಸಿಗುವುದೆಂದು ಭ್ರಮಿಸಿದವ. ಅಥವಾ ಅದೂ ನಿಜವಿದ್ದೀತು, ಕೆಲವರಿಗೆ. ತನಗಲ್ಲ. ದಿಲ್‌ದಾರ್‌ತನಕ್ಕೆ ದುಡ್ಡು ಬೇಕು. ಹಾಗಂತ ದುಡ್ಡು ಸುರಿದು ದಿಲ್‌ದಾರನೆಂದೆನಿಸಿಕೊಳ್ಳುವುದೂ ಕ್ಷುದ್ರತನ. ಅದು ನಡವಳಿಕೆಯ ಮೇಲೆ ಒತ್ತಡ ಹೇರುವ ನೆತ್ತರಲ್ಲೇ ಇದ್ದಿರಬೇಕು. ಅಥವಾ ಸುತ್ತು ಬಳಸಿ ಯಾಕೆ? ಗುಡಸೀಕರ ತಾನು ಹತ್ತಬಯಸುವ ಕುದುರೆಯಲ್ಲ. ಬಸವರಾಜನೇನೋ ಗಂಡಸು ಖರೆ. ಆದರೆ ಅವನು ಅದಕ್ಕೂ ಬೆಲೆ ಕೇಳುತ್ತಿದ್ದ.

ಆದರೆ ಜಾತ್ಯಾ ಕಸಬೇರಿಗೂ, ಇವಳಿಗೂ ವ್ಯತ್ಯಾಸವಿತ್ತು. ದುಡ್ಡಿಗಾಗಿ ಇವಳೊಮ್ಮೆಯೂ ಕಾಳಜಿ ಮಾಡಲಿಲ್ಲ. ಬರುತ್ತದೆ, ಹೋಗುತ್ತದೆ. ಅಥವಾ ಅದು ಬರೋದೇ ಹೋಗೋದಕ್ಕೆ. ಬಂದ ಗಿರಾಕಿ ಕೊಟ್ಟರೆ ಕೈ ಒಡ್ಡಿದಳು. ಕೊಡದಿದ್ದರೆ ಸುಮ್ಮನಾಗುತ್ತಿದ್ದಳು. ಕೊಟ್ಟಾಗ ಖುಷಿಪಡಲಿಲ್ಲ. ಕೊಡದಿದ್ದಾಗ ಕೊರಗಲಿಲ್ಲ. ಅವಳ ಈ ಸ್ವಭಾವ ಬಸವರಾಜುನಿಗೆ ಬಹಳ ಅನುಕೂಲವಾಗಿತ್ತು. ಗಿರಾಕಿಗಳ ಕೊಡು ಕೊಳ್ಳುವ ವ್ಯವಹಾರ ತಾನು ನೋಡಿಕೊಂಡು ಹಸಿದ ಮೈಯನ್ನಷ್ಟೇ ಇವಳ ಬಳಿಗೆ ಕಳಿಸುತ್ತಿದ್ದ. ಅವನಿಗೆ ಬಂದ ಗಿರಾಕಿಯ ಜೇಬು ಕಾಣಿಸುತ್ತಿತ್ತು. ಇವಳಿಗೆ ಮೈ ಕಾಣುತ್ತಿತ್ತು. ಇವಳ ತೊಡೆಗೆ ಈಡಾಗುವ ಸೊಂಟ ಈ ಭೂಮಿಯ ಮೇಲೆ ಹುಟ್ಟಿಲ್ಲವೆಂದೇ ಅವನ ತೀರ್ಮಾನ. ಅದನ್ನೇ ಮುಂದೆಮಾಡಿ ಶೋಷಿಸುತ್ತಿದ್ದ. ಅವಳೋ ಅತೃಪ್ತ ಜೀವ. ತನಗೇನು ಬೇಕೆಂಬುದು ಗೊತ್ತಲ್ಲದೇ ಹುಡುಕುತ್ತಿದ್ದಳು.

ಈಗೀಗ ಗುಡಸೀಕರನ ಮೈ ಆಕರ್ಷಣೆ ನಂದಿತ್ತು. “ಸರಪಂಚರು” ಎಂದು ಬಹುವಚನದಲ್ಲಿ ಮಾತಾಡಿಸುತ್ತಿದ್ದವಳು ಈಗ ನೇರವಾಗಿ ಗುಡಸೀಕರನೆಂದು ಏಕವಚನದಲ್ಲೇ ಮಾತಾಡಿಸುತ್ತಿದ್ದಳು. ಅದು ಅವನ ಅಹಂಕಾರಕ್ಕೆ ಭಾರೀ ಪೆಟ್ಟಾಗಿತ್ತು. ಇದು ಕೂಡದೆಂದು ತಾನೇ ಅವಳಿಗೆ ಹೇಳಬೆಕೆಂದರೆ ಅದು ಹಗುರು ಬಾಯಿಯ ಹೆಂಗಸು. ನಾಲಗೆ ಬಿಗಿಹಿಡಿದು ಗೊತ್ತಿಲ್ಲ. ಸಟ್ಟನೇ ಏನಾದರೂ ಆಡಿಬಿಡುತ್ತಿತ್ತು. ಅದಕ್ಕೇ ಅವನು ಬಸವರಾಜುಗೆ ಹೇಳಿದ. ಇದು ಗೊತ್ತಾಗಿ ಇನ್ನೂ ಹೆಚ್ಚು ಅವನನ್ನು ನೋಯಿಸುತ್ತಿದ್ದಳು. ಒಮ್ಮೆ ಗುಡಸೀಕರ ಚತುಷ್ಟಯರೊಂದಿಗೆ ಕೂತಿದ್ದಾಗ ಕಳ್ಳ ಇವಳನ್ನೇ ಕದ್ದು ನೋಡುತ್ತಿದ್ದ. ಇವಳೂ ಪ್ರೋತ್ಸಾಹಿಸಿದಳು. ಕೊನೆಗೆ ಎಲ್ಲರ ಎದುರಿನಲ್ಲೇ “ಯಾಕೋ ಕಳ್ಳ ಹಂಗ ನೋಡತಿ ಬೇಕೇನ ಬಾ” ಎಂದಳು. ಗುಡಸೀಕರನ ಪಿತ್ಥ ನೆತ್ತಿಗೇರಿತು.

“ಯಾಕs ರಂಡೇ ಇದೇನ ಸೂಳೇರ ಮನಿ ಅಂತ ತಿಳಿದೇನ? ಹೇಳಿಧಾಂಗ ಕೇಳಿಕೊಂಡ ಸುಮ್ಮನ ಬಿದ್ದಕೊ”

ಎಂದ. ಇವಳೇನು ಕಮ್ಮಿ?

“ಯಾಕಲಾ ಭಾಡಕೌ? ನನ್ನ ಕೈಹಿಡಿದ ಮದಿವ್ಯಾದಿ? ರೊಕ್ಕಾ ಎಣಿಸಿಕೊಂಡ ತಂದಿ? ಇದ ಅನ್ನಾಣ ಅಂದಿ; ಇನ್ನೊಮ್ಮಿ ಹಿಂತಾ ಮಾತ ಅಂದರ ನಿನ್ನ ಕುರಿ ಮುರಧಾಂಗ ಮುರದೇನು.”

ಕೇಳಬೇಕೆ? ಏನು ಮಾಡುತ್ತಿದ್ದೇನೆಂದು ತಿಳಿಯದೆ ಗುಡಸೀಕರ ಕಾಲ್ಮರಿ ಹಿಡಿದು ಎದ್ದುನಿಂತ. ಇವಳು ‘ಹೊಡಿ’ ಎಂದು ಎದ್ದಳು. ಬಸವರಾಜು ಬರದಿದ್ದರೆ ಎಲ್ಲಿ ಮುಗಿಯುತ್ತಿತ್ತೋ! ಸದ್ಯ ಹೇಳಿಕಳಿಸಿದಂತೆ ಬಂದು ಇಬ್ಬರನ್ನೂ ಸಮಾಧಾನ ಮಾಡಿದ. ಆ ದಿನವೇ ಬಸವರಾಜೂನನ್ನು ಮನೆಗೆ ಕರೆದೊಯ್ದು, ಇನ್ನೂರು ರೂಪಾಯಿ ಕೊಟ್ಟು ಈಗಿಂದೀಗ ಇವಳನ್ನು ಬೆಳಗಾವಿಗೆ ಕಳಿಸಿಕೊಡೆಂದು ಹಟ ಹಿಡಿದ. ಆ ಇನ್ನೂರು ಕಿಸೆಗೆ ಹಾಕಿ ಮಾತುಗಳಿಂದ ಭರ್ತಿಮಾಡಿದ. ಹಾದಿಬೀದಿಯ ಸೂಳೆಯರಿಗೆ ಗೌಡ ಔದಾರ್ಯ ತೋರಿಸಬಲ್ಲನಾದರೆ ಚಿಮಣಾಳಿಗೆ ನೀಯಾಕೆ ತೋರಿಸಬಾರದು? ಅದು ದೊಡ್ಡದಲ್ಲ, ಅಥವಾ ಅದು ನಿನಗೆ ತಿಳಿಯುತ್ತದೆ; ಏನೋ ಸಿಟ್ಟಿನ ಕೈಯಲ್ಲಿ ಬುದ್ಧಿ ಕೊಟ್ಟು ಹೀಗೆ ಮಾಡಿದ್ದಾಳು. ಒಂದು ವೇಳೆ ಅವಳನ್ನು ಬೆಳಗಾವಿಗೆ ಕಳಿಸಿದರೆ ‘ಇವನೇನು ಇವಳನ್ನಾಳುತ್ತಾನೆ?’ ಅಂತ ದತ್ತಪ್ಪ ಹೇಳಿದ್ದು ನಿಜವಾಗಿ ಬಿಡುತ್ತದೆ. ಅದೂ ಬೇಡವದರೆ ಎಲೆಕ್ಷನ್ ಗೆಲ್ಲಲು ನಮಗವಳು ಬೇಕೇ ಬೇಕು – ಇತ್ಯಾದಿ.

ಒಂದು ದಿನ, ಮಧ್ಯಾಹ್ನ ಆಗಷ್ಟೇ ತಿರುಗಿತ್ತು. ಚಿಮಣಾ ನೀರು ತರಲಿಕ್ಕೆ ಕೊಡ ತಗೊಂಡು ಕೆರೆಗೆ ಹೋದಳು. ಅಂಥ ಅಪವೇಳೆಯಲ್ಲಿ ಅಲ್ಲಿ ಯಾರಿದ್ದಾರೆ? ನೀರು ಹೊಡೆದು ಕೊವನ್ನೇನೋ ತುಂಬಿದಳು. ದೊಡ್ಡ ಕೊಡ, ಹೊರಲಾಗಲಿಲ್ಲ. ಹೀಗೆ ಯಾರಿಲ್ಲದಾಗ ಒಬ್ಬಳೇ ಬಂದವಳಲ್ಲ. ಯಾರಾದರೂ ಬಂದಾರಂದು ಕಾಯ್ದಳು. ಯಾರೂ ಬರಲಿಲ್ಲ. ಕೈಕಾಲು ಮುಖ ತಿಕ್ಕಿ ತಿಕ್ಕಿ ತೊಳೆದುಕೊಂಡಳು. ಅದೇನು ದುರ್ಬುದ್ಧಿ ಬಂತೋ, ಇಲ್ಲೇ ದಂಡೆಯಲ್ಲಿ ಈಜೋಣವೆಂದು ಇಳಿದು ನಾಕೆಂಟು ಹೆಜ್ಜೆ ಹೋದಳು. ಕಾಲ ನೆಲೆತಪ್ಪಿ ಕುಸಿದಳು. ಗಾಬರಿಯಿಂದ ಕೈಕಾಲು ಬಡಿಯುತ್ತ ಅಯ್ಯೋ ಎವ್ವಾ, ಎಪ್ಪಾ ಎನ್ನುತ್ತ ಚೀರಾಡುತ್ತ ಆಳದ ಕೆಳಗಿಳಿಯುತ್ತಿದ್ದಳು. ಗೌಡನ ಮಗ ಶಿವಲಿಂಗ ದೂರದಲ್ಲಿದ್ದವನು ಚೀರಾಟ ಕೇಳಿ ಓಡಿ ಬಂದು, ಬಂದವನೇ ಕೆರೆಗೆ ಧುಮುಕಿದ. ಚಿಮಣಾ ಇನ್ನೂ ನಡುನೀರಿಗೆ ಹೋಗಿರಲಿಲ್ಲವಾದ್ದರಿಂದ ಅವಳನ್ನು ಬದುಕಿಸುವುದು ತೊಂದರೆಯಾಗಲಿಲ್ಲ. ಶಿವಲಿಂಗ ಅವಳ ಸೋರುಮುಡಿ ಹಿಡಿದೆಳೆದ. ಅವಳೋ ಗಾಬರಿಯಾಗಿ ಶಿವಲಿಂಗನನ್ನು ತಬ್ಬಿ ನಡುವಿನತ್ತಲೇ ಎಳೆಯುತ್ತಿದ್ದಳು. ಇದ್ದೆಲ್ಲ ಬಲಪ್ರಯೋಗಿಸಿ ಅವಳ ಹಿಡಿತ ತಪ್ಪಿಸಿ ಎಳೆದ. ಹಾಗೇ ಹಿಡಿದುಕೊಂಡು ಈಜುತ್ತ ದಂಡೆಗೆ ತಂದು ಡಬ್ಬು ಮಲಗಿಸಿ ಬೆನ್ನ ಮೇಲೆ ಭಾರ ಹಾಕಿದ. ನೀರು ಹೊರಬಂತು. ಅಷ್ಟರಲ್ಲಿ ಬಸೆಟ್ಟಿ, ಮೆರೆಮಿಂಡ ಬಂದರು. ಎಲ್ಲರೂ ಸೇರಿ ಉಪಚರಿಸಿ ಮರಳಿ ಗುಡಿಸಲಕ್ಕೊಯ್ದು ಬಿಟ್ಟುಬಂದರು.

ಸ್ವಲ್ಪವೇ ಕೈತಪ್ಪಿದ್ದರೆ, ಶಿವಲಿಂಗ ಬರುವುದು ತಡವಾಗಿದ್ದರೆ ಚಿಮಣಾಳ ಕತೆ ಇಂದಿಗೇ ಮುಕ್ತಾಯವಾಗುತ್ತಿತ್ತು. ಈ ಯೋಚನೆ ಬಸವರಾಜನ ಒಳಗಿಗೆ ಇಳಿಯಲೇ ಇಲ್ಲ. ಅವನ ತಲೆಯಲ್ಲಿ ಬೇರೆ ಹುಳ ಕೊರೆಯುತ್ತಿ‌ತ್ತು. ನಿಂಗೂನಿಗೆ ಹೇಳಿ ಕಳಿಸಿದ್ದ. ನಿರ್ಲಿಪ್ತನಾಗಿ ಒಳಗೆ ಹೋಗಿ ಬೇಹೂಶ್ ಆಗಿ ಬಿದ್ದಿದ್ದ ಚಿಮಣಾಳ ಮೇಲೊಂದು ಬಟ್ಟೆ ಹೊದಿಸಿದ. ನಿಂಗೂ ಕರೆದದ್ದು ಕೇಳಿಸಿ ಹೊರಗೆ ಬಂದ.

ಆಗಲೇ ಸಂಜೆಯಾಗಿತ್ತು. ಹೊಲಗಳಿಂದ ರೈತರು ಬರುತ್ತಿದ್ದರು. ಆದರೆ ಯಾರೂ ಗುಡಿಸಲ ಕಟ್ಟೆಯ ಮೇಲೆ ನಿಂಗೂ ಮತ್ತು ಬಸವರಾಜು ಅನ್ಯೋನ್ಯವಾಗಿ ಕೂತದ್ದನ್ನು ಗಮನಿಸಲಿಲ್ಲ. ಜನರ ಹಾದಾಟ ಕಮ್ಮಿಯಾಗೋ ತನಕ ಬಸವರಾಜು ಏನೇನೋ ಹರಟೆ ಹೊಡೆದ. ನಿಂಗೂವಿಗೆ ಪ್ರಿಯವಾದ ಅನೇಕ ಸಂಗತಿಗಳನ್ನು ವರ್ಣಿಸಿದ. ನಿಂಗೂ ದಾಡಿ ಮಾಡಿಕೊಳ್ಳದ ಬಗ್ಗೆ ಆಕ್ಷೇಪಿಸಿದ. ಆತ ನ್ಯಾಯವಾಗಿ ಮಾಡಬೇಕಾದ “ಹೇರ್ ಸ್ಟೈಲ್” ಬಗ್ಗೆ ಮಾತಾಡಿದ. ಆಗಲೇ ರಾತ್ರಿಯಾಗಿ ಜನಸಂಚಾರ ಕಮ್ಮಿಯಾಗಿತ್ತು. ಒಳಗೆ ಕರೆದೊಯ್ದು ಕಪ್ಪು ತುಂಬ ಭಿರಂಡಿ ಕೊಟ್ಟ. ಕುಡಿದ ಮೇಲೆ ಒಳಗಿನ್ನೂ ದೀಪ ಹಚ್ಚಿದ್ದಿಲ್ಲ. ನಿಂಗೂನ ಕೆನ್ನೆಯ ಮೇಲೆ ಕೈತುರಿಸಿದ. ತಾನು ಹುಲಿಯ ಜೊತೆ ಆಟವಾಡತ್ತಿದದೇನೆಂಬುದು ಬಸವರಾಜುನಿಗೆ ಈ ತನಕ ಗೊತ್ತಾಗಿರಲಿಲ್ಲ. ಕೆನ್ನೆ ತುರಿಸಿದ್ದಷ್ಟೇ ತಡ ನಿಂಗೂ ಬೆದೆ ಬಂದ ಪ್ರಾಣಿಯಂತಾದ.  ಬಸವರಾಜೂನನ್ನು ಹಿಡಿದೆಳೆದಡರಿ ಇಕ್ಕಟ್ಟಿನ ಸಂಕಟಕ್ಕೆ ಬಾಯಿ ಬಂದು ಬಾಯಿ ಬಾಯಿ ಬಿಟ್ಟಂತಾಗಿ ಕೆಡವಿಕೊಂಡು ಬಿಟ್ಟ. ಬಸವರಾಜು ಲಬೊ ಲಬೊ ಹೊಯ್ಕುಳ್ಳುವುದೊಂದು ಬಾಕಿ. ಇಬ್ಬರೂ ಧಾಂಡಿಗ ಕುಳಗಳು ಕುಸ್ತಿ ಹಿಡಿದಂತೆ ಶಬ್ದವಾಗುವುದನ್ನು ಕೇಳಿ ಚಿಮಣಾಳಿಗೆ ಎಚ್ಚರವಾಗಿ ಯಾರವರಾ? ಎಂದಳು. ಇಬ್ಬರೂ ಮನುಷ್ಯರೊಳಗೆ ಬಂದರು.

ದೀಪ ಹಚ್ಚಿ ಅವನನ್ನು ದೂರ ಕೂರಿಸಿಕೊಂಡು ಯಾರಿಗೂ ಹೇಳುವುದಿಲ್ಲವೆಂಬ ಬಗ್ಗೆ ಆಣೆ ಪ್ರಮಾಣ ಮಾಡಿಸಿಕೊಂಡು ಬಸವರಾಜು ಎಲ್ಲಾ ಬಿಚ್ಚಿ ಹೇಳಿದ:

ಗುಡಸೀಕರನನ್ನು ನೋಡಿ ದುರ್ಗಿ ಪುಳಕಿತಳಾಗೋದನ್ನು ಬಸವರಾಜು ಗಮನಿಸಿದ್ದ. ಗುಡಸಲಿಗೆ ಅವ ಬಂದೊಡನೆ ಅವಳು ಸೊಮಡಿ ಸುಟ್ಟ ಬೆಕ್ಕಿನ ಹಾಗೆ ತನ್ನ ಗುಡಿಸಲ ಹಿಂದೆ ಮುಂದೆ ಏನೇನೋ ನೆವ ಒಡ್ಡಿ ಅಡ್ಡಾಡುತ್ತ ಎತ್ತರದ ದನಿಯಲ್ಲಿ ಲಗಮವ್ವನೊಂದಿಗೆ ಮತಾಡುತ್ತ ವಿನಾಕಾರಣ ನಗುತ್ತ ಕೂರದೆ ನಿಲ್ಲದೆ ಲಗಮವ್ವನೊಂದಿಗೆ ಮಾತಾಡುತ್ತ ಹಾರಾಡುತ್ತ ಪಾತರಗಿತ್ತಿಯಾಗುತ್ತಿದ್ದಳು. ಆತ ಇದ್ಯಾವುದನ್ನೂ ಗಮನಿಸಿರಲಿಲ್ಲ, ಒಂದು ದಿನ ಎಳೇ ಹುಡುಗನೊಬ್ಬನಿಂದ ಮಡಚಿದ ಎಲಡಿಕೆ ಕೊಟ್ಟು ಸರಪಂಚನಿಗೆ ಕೊಡುವಂತೆ ಹೇಳಿ ಕಳಿಸಿದ್ದಳು. ಅದು ತಪ್ಪಿ ಬಸವರಜುನಿಗೆ ಸಿಕ್ಕಿತು. ಬಿಚ್ಚಿ ನೋಡಿದರೆ ಎಲೆಯ ಮೇಲೆ ಸುಣ್ಣದಿಂದ X ಈ ಆಕಾರ ಬರೆಯಲಾಗಿತ್ತು.

ಈ ದಿನ ಚಿಮಣಾ ಕೆರೆಗೆ ಹೋದಳಲ್ಲ. ಬಸವರಾಜು ಒಬ್ಬನೇ ಬಾಗಿಲಿಕ್ಕಿಕೊಂಡು ಒಳಗೇ ಮಲಗಿದ್ದ. ತೋಟಕ್ಕೆ ಹೊರಟಿದ್ದ ಗುಡಸೀಕರ ಹಾಗೇ ಗುಡಿಸಲ ಮೇಲೆ ಹಾದು ಹೋಗೋಣವೆಂದು ಬಮದ. ಚಿಮಣಾ ಇರಲಿಲ್ಲವಲ್ಲ. ಸ್ವಲ್ಪ ಹೊತ್ತು ಕೂತಿದ್ದು, ಎದ್ದು ಹೋದ. ತನ್ನ ಗುಡಿಸಲಲ್ಲಿದ್ದ ದುರ್ಗಿಗೆ ಸರಪಂಚ ಬಂದದ್ದು ಕಂಡಿತ್ತು. ಚಿಮಣಾ ಇಲ್ಲದ್ದು ಗೊತ್ತಿತ್ತು. ಕೂಡಲೇ ಒಳಗೆ ಹೋದಳು. ಮತ್ತೆ ಹೊರಬಂದಳು. ಗುಡಸೀಕರ ಎದ್ದು ಹೋದುದನ್ನು ಅವಳು ಗಮನಿಸಲೇ ಇಲ್ಲ. ಒಳಗಡೆ ಇದ್ದಾನೆಂದೇ ತಿಳಿದು ಮುತ್ತುಗದ ಎಲೆಯಲ್ಲಿ ಸುಣ್ಣದಿಂದೊಂದು ಮಂಡಲ ಬರೆದು, ಅದರಲ್ಲೊಂದು ಚುಕ್ಕೆಯಿಟ್ಟು ಮೂರು ಮಲ್ಲಿಗೆ ಹೂವಿಟ್ಟು ಮಡಿಚಿ ಗುಡಿಸಲಲ್ಲಿ ಎಸೆದು ಓಡಿದ್ದಳು, ಇದೂ ಸಹಜವಾಗಿ ಬಸವರಾಜನಿಗೇ ಸಿಕ್ಕಿತು. ಶಹರದಲ್ಲಿ ಬೆಳೆದ ಅವನಿಗೆ ಈ ಸಂಕೇತಗಳ ಅರ್ಥ ಬಗೆಹರಿಯಲಿಲ್ಲ.

ಇಂಥ ಆಪ್ತ ವಿಷಯಗಳನ್ನು ಹಂಚಿಕೊಳ್ಳಲು ಅವನಿಗ್ಯಾರೂ ಇರಲಿಲ್ಲ. ಚತುಷ್ಟಯರು ಲಾಯಖ್ಖಲ್ಲ. ಈಗೀಗ ನಿಂಗೂ ಇವನಿಗೆ ಹತ್ತಿರವಾಗುತ್ತಿದ್ದ, ಹೊಲಕ್ಕೆ ಹೋದಾಗ ಒಮ್ಮೊಮ್ಮೆ ನಿಂಗೂನ ಗುಡಿಸಲ ಕಡೆಗೂ ಹೋಗುತ್ತಿದ್ದ. ಆದ್ದರಿಂದ ಅವನನ್ನು ಕರೆಸಿದ್ದ. ಈಗ ಇದರ ಅರ್ಥವೇನೆಂದು ಕೇಳಿದ.

“ಯಾಕ? ಯಾರುದರ ಹುಡುಗಿ ಗಂಟ ಬಿದ್ದೈತೇನ?” ಎಂದು ನಿಂಗೂ ಮತ್ಸರದಿಂದ ಕೇಳಿದ.

“ನನಗೆಲ್ಲೋ ಮಾರಾಯ ಗುಡಸೀಕರಗ ಗಂಟ ಬಿದ್ದಾಳ.”

“ಯಾರವಳು?”

ಎಂದು ನಿಂಗೂ ಪೀಡಿಸಿ ಕೇಳಿದಾಗ ದುರ್ಗಿಯ ಹೆಸರು ಹೇಳಿದ. “ಕೊನೆಗೆ ಹುಣ್ಣಿಮೆಗೆ ಒಂದು ದಿನ ಮುಂಚೆ ಮೂರೂ ಸಂಜೆ ಗುಡೀ ಹಿಂದ ಬಾ” ಎಂಬುದಾಗಿ ಅದರರ್ಥ ಒಡೆದು ಹೇಳಿದ. “ ಹಾಗಿದ್ದರೆ ಇದಕ್ಕೆ ಒಪ್ಪಿಗೆ ಸೂಚಿಸುವುದು ಹ್ಯಾಗೆ?” ಎಂದ ಬಸವರಾಜು. ಸರಪಂಚ ಅವಳ ಕಡೆಗೊಂದು ಅಡಕೆ ಎಸೆದರೆ ಅದೇ ಒಪ್ಪಿಗೆ ಎಂದ ನಿಂಗೂ ಎದ್ದು “ಮನೀ ಕಡೆ ಬಾ” ಎಂದು ಬಸವರಾಜನಿಗೆ ಹೇಳಿ ಹೋದ.

ಆ ದಿನ ರಾತ್ರಿ ನಿದ್ದೆಯಿಲ್ಲದೆ ಮಗ್ಗುಲಿನಿಂದ ಮಗ್ಗುಲಿಗೆ ಹೊರಳಾಡಿದವರು, ಬಸವರಾಜೂ, ಚಿಮಣಾ ಮತ್ತು ದುರ್ಗಿ ಮೂವರೇ. ಚಿಮಣಾ ಅಂದಿನ ಘಟನೆಯಿಂದ ಬೆಚ್ಚಿ ಬಿದ್ದಿದ್ದಳು. ಬಸವರಾಜನ ಲೆಕ್ಕಾಚಾರದ ಮನಸ್ಸಿನಲ್ಲಿ ಚಕಮಕಿಯ ಕಿಡಿ ಹಾರ ತೊಡಗಿದ್ದವು. ಈ ತನಕ ಚಿಮಣಾಳನ್ನು ಹಿಂಡಿ ಹಿಂಡಿ ಪ್ರಯೋಜನ ಪಡೆದಿದ್ದ. ಈಗವಳು ಹಿಂಡಿದರೆ ರಸವೊಸರದಷ್ಟು ಒಣಗಿದ್ದಳು. ಅವಳನ್ನು ನಿವಾರಿಸಬೇಕಾಗಿತ್ತು. ಅದೂ ಉಪಾಯವಾಗಿ, ಲಾಭ ಸಿಕ್ಕುವಂತೆ. ಒಣಗಿದ್ದುದು ಉರುವಲಾಗಬೇಕು. ಇಲ್ಲಾ ಹೊಟ್ಟಾಗಬೇಕು. ಉರುವಲದಿಂದ ಒಲೆ ಉರಿಯುತ್ತದೆ. ಗುಡಸೀಕರನ ಒಲೆ ಈ ಉರುವಲದಿಂದ ಉರಿಯುವುದು ಸಾಧ್ಯವಿರಲಿಲ್ಲ. ಹೊಟ್ಟು ಹಾಕಿದರೆ ಹಿಂಡದ ದನ ಹೈನ ಕೊಡತ್ತದೆ.

ದುರ್ಗಿಗಾದರೆ ವಿಚಿತ್ರ ಕಾತರ. ಅದು ಮೈ ಕಾತರವೋ, ಮನಸ್ಸಿನ ಕಾತರವೋ ಹೇಳುವುದೇ ಬಿಗಿಯೆಂಬಷ್ಟು ಮೈ ಬಿಗಿದಿತ್ತು. ಮುಗ್ಧ ಹುಡುಗಿ, ಹಸೀ ಮಣ್ಣಿನಂತಿದ್ದಳು. ಹೇಗೆ ಮಿದ್ದಿದ್ದರೆ, ಹೇಗೆ ನಾದಿದರೆ ಹಾಗೆ ಹದ, ಹಾಗೆ. ಆಕಾರ ತಕ್ಕೊಳ್ಳಲು ಸಿದ್ಧಳಾದವಳು. ಅಬಾಯಿಯ ಖಾಸ ಮಗಳಲ್ಲ. ಸವದತ್ತಿಯ ಜೋಗತಿ ಎಲ್ಲವ್ವನ ಮಗಳು. ಅವಳು ಸಾಯುವ ಮುನ್ನ ದುರ್ಗಿ ಹತ್ತು ವರ್ಷದಾಕೆ. ಆಗಿನಿಂದಲೇ ತನ್ನ ಚಿಕ್ಕವ್ವ ಅಂದರೆ ಅಬಾಯಿಯ ಮನೆಯಲ್ಲೇ ಇದ್ದಳು. ಇನ್ನೇನು ವರ್ಷಾರು ತಿಂಗಳಲ್ಲಿ ಜೋಗತಿ ಬಿಡಬೇಕೆಂದು ಅಬಾಯಿ ಹೊಂಚಿದ್ದಳು. ಅಷ್ಟರಲ್ಲೇ ಇವಳು ಗುಡಸೀಕರನ ಹೆಸರಿನಲ್ಲಿ ಒಂಟಿಗಾಲಲ್ಲಿ ನಿಂತಿದ್ದಳು. ಮಧ್ಯೆ – ಬಸವರಾಜು ಪ್ರಯೋಜನದ ಲೆಕ್ಕ ಹಾಕುತ್ತಿದ್ದ. ಎಲ್ಲಿಂದೆಲ್ಲಿಗೆ ಸಂಬಂಧ?