ಪಂಚಾಯ್ತಿ ಆಗಿ ಆರು ತಿಂಗಳಾಗಿತ್ತು ಅಥವಾ ಅಂದಾಜು ಅದರ ಎಡಬಲ ಇದ್ದೀತು. ಆಗೊಂದು ಘಟನೆ ನಡೆಯಿತು. ಗುಡಸೀಕರನಿಗೆ ಗೌಡನ ಬಗ್ಗೆಯೂ ಅಸಮಾಧಾನವಾಯ್ತು.

ಬೆಳಗಾವಿಯಿಂದ ಕ| ಗಂ| ಸಾಲೆಗೆ ಇನ್‌ಸ್ಪೆಕ್ಟರೊಬ್ಬರು ಬಂದಿದ್ದರು, ರಾತ್ರಿ ಸಾಲೆ ಸುರು ಮಾಡಲಿಕ್ಕೆ. ಬಂದವರು ಗುಡಸೀಕರನ ಮನೆಯಲ್ಲೇ ಇಳಿದುಕೊಂಡರು. ಹಳ್ಳಿಯ ಹುಂಬರಿಗೆ ಈ ಮೂಲಕ ಒಂದಿಷ್ಟು ಒಳ್ಳೆಯದಾಗುತ್ತಲ್ಲಾ, ಅದೂ ತನ್ನಿಂದ – ಎಂದು ಗುಡಸೀಕರನೂ ಹಿರಿಹಿರಿ ಹಿಗ್ಗಿಬಿಟ್ಟ. ಆ ದಿನ ರಾತ್ರಿ ಸಭೆ ಕರೆಯಲಾಯಿತು. ಈ ಸಭೆಗೆ ಗೌಡನೂ ಬಂದಿದ್ದ.

ಈ ಸಲದ ಸಭೆ ಕ| ಗಂ| ಸಾಲೆಯಲ್ಲಿತ್ತು. ಟೇಬಲ್ಲಿನ ಹಿಂದೆ ಒಂದು ಕುರ್ಚಿ, ಒಂದು ಗಡಂಚಿ ಮಾತ್ರವಿತ್ತು. ಗೌಡ ದತ್ತಪ್ಪ ಹಿರಿಯರು ಹೋಗಿ ಕೆಳಗೆ ಹಾಸಿದ ಗುಡಾರದ ಮೇಲೆ ಕೂತರು. ಊರಿಗಿದ್ದದ್ದು ಇದೊಂದೇ ಕುರ್ಚಿ ಎಂಬ ವಿಚಾರ ನಿಮಗೆ ಗೊತ್ತಿದೆ. ಜನ ಸೇರಿಯಾದ ಮೇಲೆ ಗುಡಸೀಕರ ಹಾಗೂ ಇನ್ಸ್‌ಪೆಕ್ಟರ್ ಬಂದರು. ಗುಡಸೀಕರ ಮುಂದೆ ಬಂದು ಕುರ್ಚಿಯ ಮೇಲೆ ಕೂತ. ಇನ್ಸ್‌ಪೆಕ್ಟರರಿಗೆ ಗಡಂಚಿ ಬಿಟ್ಟ. ಈ ಹೊಸ ಬಗೆಯ ಪೀಠ ನೋಡಿ, ಅದರ ಆದ್ರವಾದ ಮೂರೇ ಕಾಲು ನೋಡಿ ಇನ್ಸ್‌ಪೆಕ್ಟರರಿಗೆ ಗಾಬರಿಯಯಿತೋ ಏನೋ, ಅದನ್ನು ಬಿಟ್ಟು ಅವರು ಜನಗಳೊಡನೆ ಕೆಳಗೆ ಕೂರಲು ಬಂದುಬಿಟ್ಟರು. ಇದನ್ನು ನೋಡಿ ಗೌಡರಿಗೆ ಸಹಿಸುವದಾಗಲಿಲ್ಲ. ಗುಡಸೀಕರನಿಗೆ “ಏ ತಮ್ಮಾ ಅವರೆಷ್ಟಂದರೂ ನಮ್ಮೂರಿಗೆ ಬಂದವರು. ಅವರು ಕುರ್ಚಿ ಮ್ಯಾಲೆ ಕುಂದರಲಿ ನೀ ಬೇಕಾದರ ಗಡಂಚಿಮ್ಯಾಲೆ ಕುಂದರು” ಎಂದು. ಈ ಮಾತು ಕೇಳಿ ಗುಡಸೀಕರ ಸುಟ್ಟು ಹುರುಪಳಿಸಿದ ಅರಳಿನಂತಾದ. ಬಂದವರ ಮುಂದೆ ಈ ರೀತಿ ಅವಮಾನವೇ? ತಾನು ಕಲಿತದ್ದೆಷ್ಟು? ಈ ಇನ್ಸ್‌ಪೆಕ್ಟರ್ ಕಲಿತದ್ದೆಷ್ಟು? ಈ ಹುಂಬರಿಗೆ ಇದೆಲ್ಲ ತಿಳಿಯಬಾರದೆ? ಎಲ್ಲಾ ಒಂದೇ ಊರಿನವರೆಂದ ಮೇಲೆ ತಮ್ಮವನನ್ನು ಮೇಲೆತ್ತಬೇಕೊ? ಹೀಗೆ ಅವಮಾನಿಸಿ ಮೇಲೆ ಹೋಗುವವನನ್ನು ಕೆಳಕ್ಕೆ ತಳ್ಳಬೇಕೊ? ಏನೇ ಬುದ್ಧಿ, ರೀತಿ ಹೇಳಲಿ, ಬಂದವನ ಮುಂದೆ ಹೀಗೆ ಹೇಳುವದೇ? ಹೀಗೆ ಅಲೋಚನೆ ಮಾಡಿದಷ್ಟೂ ಕೋಪ ಬಂತು. ಕೋಪ ಮಾಡುತ್ತ ಕೂರುವ ಸಮಯವಲ್ಲ. ಕೆಳಗೆ ಕುಳಿತ ಇನ್ಸ್‌ಪೆಕ್ಟರರಿಗೆ “ಬರ್ರಿಬರ್ರಿ ಮ್ಯಾಲ ಬರ್ರಿ” ಎಂದು ಕೂತಲ್ಲಿಂದಲೇ ಹೇಳುತ್ತ ಕೂತ, ತಾನು ಗೌಡನ ಮಾತಿಗೆ ಸೊಪ್ಪು ಹಾಕದವನಂತೆ.

ಜನಗಳಿಗಾದರೆ ಗೌಡನ ಮಾತು ಸರಿ ಅನ್ನಿಸಿತು. ಊರಿಗೆ ಬಂದವರೆಂದ ಮೇಲೆ ಎಲ್ಲರೂ ಗೌರವ ಕೊಡಬೇಕಾದ್ದೇ. ನಾಳೆಯಿಂದ ಕೂರಬಹುದಲ್ಲ? ಕುರ್ಚಿಯೆನು ಓಡಿ ಹೋಗುತ್ತದೆಯೇ? ಅಥವಾ ಕೂತವನೇನು ತನ್ನೊಂದಿಗೆ ಕುರ್ಚಿ ಒಯ್ಯುತ್ತಾನೆಯೇ? ಅದೂ ಅಲ್ಲದೆ ಬಂದವರಿಗೆ ಪಾಪ, ಆಗಲೇ ಗುಡಸೀಕರನ ಅಪ್ಪನಷ್ಟು ವಯಸ್ಸಾಗಿದೆ. ವಯಸ್ಸಿಗಾದರೂ ಕಿಮ್ಮತ್ತು ಕೊಡಬೇಕಲ್ಲ? ಅಷ್ಟರಲ್ಲಿ ದತ್ತಪ್ಪ ಎದ್ದು ನೇರ ಹೋಗಿ ಇನ್ಸ್‌ಪೆಕ್ಟರ್ ಬಗಲಲ್ಲಿ ಕೈ ಹಾಕಿ “ಬರ್ರಿ ಸಾಹೇಬರ, ನೀವು ಇಲ್ಲಿ ಕೂತರ ಹೆಂಗ? ಗುಡಸೀಕರ ಎಷ್ಟಂದರೂ ನಮ್ಮ ಹುಡುಗ ಬರ್ರಿ” ಎಂದು ಎಬ್ಬಿಸಿ ಟೇಬಲಿನತ್ತ ಕರೆದೊಯ್ದ. ಈಗ ಗುಡಸೀಕರ ಎದ್ದು ಗಡಂಚಿಯ ಮೇಲೆ ಕೂರಲೇ ಬೇಕಾಯಿತು.

ಯಥಾಪ್ರಕಾರ ಪ್ರಶ್ನೋತ್ತರ ಮಾಸ್ತರರನ – ಇವನಿಗೆ ಪ್ರಶ್ನೋತ್ರರ ಮಾಸ್ತರನೆಂದು ಹೆಸರು ಹ್ಯಾಗೆ ಬಂತೆಂಬುದನ್ನು ಆಮೇಲೆ ಸಂದರ್ಭಾನುಸಾರ ಹೇಳೋಣ – ಸ್ವಾಗತ ಭಾಷಣವಾದ ಮೇಲೆ ಅಧ್ಯಕ್ಷರ ಅಂದರೆ ಗುಡಸೀಕರನ ಅಪ್ಪಣೆಮೇರೆಗೆ ಇನ್ಸ್‌ಪೆಕ್ಟರ್‌ರು ಅನಕ್ಷರಸ್ಥ ರೈತರಿಗೆ ರಾತ್ರಿ ಸಾಲೆ ಕಲಿಸುವ ಸರ್ಕಾರಿ ಯೋಜನೆಯ ಬಗ್ಗೆ ಮಾತಾಡಿದರು. ಇದಕ್ಕೆ ನೀವೆಲ್ಲ ಮುಂದಾಗಬೇಕೆಂದರು. ಗುಡಸೀಕರನಂಥ ಮೇಧಾವಿಗಳು ನೇತಾರರಾಗಿರುವ ಈ ಊರು ಬೇರೆ ಊರುಗಳಿಗಿಂತ ಹಿಂದೆ ಬೀಳಬಾರದು ಎಂದರು. ಇಂದಿನಿಂದಲೇ ಇಲ್ಲೇ ನಿಮ್ಮ ಹೆಸರು ದಾಖಲು ಮಾಡಿಕೊಳ್ಳುತ್ತೇನೆ. “ಲೋ ಮುದುಕಪ್ಪಾ, ನಿನ್ನ ಹೆಸರೇನು, ಹೇಳು” ಎಂದು ಗೌಡನನ್ನೇ ಕೇಳಿಬಿಟ್ಟರು.

ಕೂತ ಮಂದಿಗೇನು ಗುಡಸೀಕರನಿಗೂ ಕಸಿವಿಸಿಯಾಯ್ತು. ಸುಮ್ಮನೇ ಕೂತರೆ ಗದ್ದಲವಾಗುತ್ತಿತ್ತೋ ಏನೊ. ಗೌಡ ಚೌಕಾಶಿ ಮಾಡದೇ “ಪರಗೌಡ” ಎಂದುಬಿಟ್ಟ. ಇದರಿಂದ ಇನ್ಸ್‌ಪೆಕ್ಟರರಿಗೆ ಭಾರೀ ಸ್ಫೂರ್ತಿ ಬಂತು “ಏ ಅಜ್ಜಾ ನಿನ್ನ ಹೆಸರ್ಹೇಳು” ಎಂದು ದತ್ತಪ್ಪನನ್ನು ಕೇಳಿದ. ದತ್ತಪ್ಪ ಸುಮ್ಮನೇ ತನ್ನ ಹೆಸರು ಹೇಳಿದ. ಇಬ್ಬರೂ ಓದುಬರಹ ಬಲ್ಲವರೇ ಆದರೂ ಹೆಸರು ಕೊಡುವುದೆಂದರೇ? “ಅವರಿಗೆ ಓದಬರ್ಯಾಕೆ ಬರತೈತಿರಿ” ಎಂದು ಗುಡಸೀಕರ ಹೇಳಿದ. ಇನ್ಸ್‌ಪೆಕ್ಟರಿಗಾಗಲೆ ಅನುಮಾನ ಬಂತು. ಕೂಡಲೇ ಗುಡಸೀಕರನ ಕೈಗೆ ಪೆನ್ನುಕೊಟ್ಟು “ನೀವs ಬರದು ಬಿಡ್ರಿ” ಎಂದ. ಗುಡಸೀಕರ ಅಲ್ಲಿ ಕೂಡಿದ ಅನೇಕರ ಹೆಸರು ಬರೆದು ಅಧ್ಯಕ್ಷ ಭಾಷಣಕ್ಕೆ ಎದ್ದ.

“ಇಂಡಿಯಾ ದೇಶ, ಹಳ್ಳಿಗಳ ದೇಶ”ದಿಂದ ಸುರುವಾಗಿ ಬೆಳಗಾವಿಗೆ ಬಂತು ಈ ಸಲ ತುಪ್ಪದ ಉದಾಹರಣೆ ಮಾತ್ರ ಬರಲಿಲ್ಲ.  ಒಟ್ಟು ಸಭೆಯ ಕಾರ್ಯಕಲಾಪದಿಂದ ಗೌಡನಿಗೆ ಅಸಮಾಧಾನವೇನೂ ಆಗಲಿಲ್ಲ. ಆದರೆ ಗುಡಸೀಕರನ ಮನಸ್ಸಿನಲ್ಲಿ ಅದು ಗಟ್ಟಿಗೊಂಡು ಕೂತುಬಿಟ್ಟಿತು. ಕೊನೆಯ ವಂದನಾರ್ಪಣೆ ಮಾಸ್ತರನೇ ಮಾಡಿದ. ಅದರಲ್ಲಿ ಗುಡಸೀಕರನ ಬಗ್ಗೆ ಹೇಳುತ್ತ “ಯದಾ ಯದಾಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ” ಇತ್ಯಾದಿ ಹೇಳಿ ಹಳ್ಳಿಯ ಉದ್ಧಾರಕ್ಕೆ ಬಂದ ಅವತಾರ ಪುರಷನೇ ಗುಡಸೀಕರ ಎಂದೂ ಹೇಳಿಬಿಟ್ಟ. ಈ ಸಭೆಗಳಿಂದಾದ ಅಸಮಾಧಾನ ನಿಂಗೂನ ಕೇಸಿನಲ್ಲಿ ಸ್ಫೋಟಗೊಂಡಿತು.