ಸುಂದರಿ ಕೈ ಎತ್ತಿ “ಚಿಗರಿಗೆ ನೀರ ಹಾಕ್ರೆಲೇ” ಎಂದು ಕಿರಿಚಿದಳು. ದೇವರೇಸಿಯ ಕೈಯ ಪಂಜು ಕಳಚಿ ಹಾಗೇ ಕೆಳಕ್ಕೆ ಬಿತ್ತು. ಹತ್ತಿರಿದ್ದವರಿಗೆ ಅವಳ ಮಾತು ಕೇಳಿಸಿತು. ದೂರಿದ್ದವರಿಗೆ ಕೇಳಿಸಲಿಲ್ಲ. ಏನು, ಏನೆಂದು ಅವರಿವರಿಂದ ತಿಳಿದುಕೊಂಡರು. ಕೂಡಲೇ ದತ್ತಪ್ಪ ಕೈ ಮೇಲೆತ್ತಿ “ಇದು ಗುಡಸ್ಯಾನ ದೇವರಪೋ” ಎಂದು ಕೂಗಿದ. ಜನ ದೇವಿಯೆಂದರು. ಹೊಯ್ಮಾಲಿಯೆಂದರು. ಹಾ ಎಂದರು, ಹೋ ಎಂದರು. ದೇವರೇಸಿ,

“ದೇವೀ ನನ್ನ ಕೈ ಬಿಟ್ಟಳ್ರೋss”

– ಎಂದು ಕಿರುಚುತ್ತ ಭೂತ ಕಂಡ ಮಗುವಿನಂತೆ ರಭಸದಿಂದ ಜನಗಳನ್ನು ಆ ಈ ಕಡೆ ತಳ್ಳಿ ಹೊರಗೋಡಿಬಿಟ್ಟ. ಜನ ಹೋ ಎಂದು ಗಾಬರಿಯಲ್ಲಿ ಕಿರುಚುತ್ತಿದ್ದಂತೆ ಗೌಡ “ಸತ್ತಗಿತ್ತಾನ ಬಾರೋ ದತ್ತೂ” ಎಮದು ಕಿರಿಚಿ ದೇವರೇಸಿಯ ಬೆನ್ನುಹತ್ತಿದ. ದತ್ತಪ್ಪನೂ ಓಡಿದ. ಅವರ ಹಿಂದಿನಿಂದ ಕೆಲವು ಕುಸ್ತೀ ಹುಡುಗರೂ, ಇನ್ನು ಕೆಲವರೂ ಓಡಿದರು. ಬಸವರಾಜು ಯಾವುದೋ ಪರಿಯಿಂದ ಗರ್ಭಗುಡಿ ಸೇರಿದವನು ಯಾರಿಗೂ ಗೊತ್ತಾಗದಂತೆ ಹೆಜ್ಜೇನಿನ ಮೂರು ಹುಟ್ಟುಗಳಿಗೆ ಉದ್ದ ಕೋಲಿನಿಂದ ಬೀಸಿ ಹೊಡೆದ. ಒಂದೊಂದೇ ಏಟಿಗೆ ಮೂರು ಹುಟ್ಟುಗಳು ಕತ್ತರಿಸಿ ನೆಲಕ್ಕೆ ರೊಪ್ಪೆಂದು ಬಿದ್ದವು. ಬಿದ್ದ ಹುಟ್ಟುಗಳ ಸುತ್ತ ಹಸಿ ನೆತ್ತರಿನಂತೆ – ಜೇನುತುಪ್ಪ ಹುಳು ಸಮೇತ ಚಿಲ್ಲೆಂದು ಸಿಡಿಯಿತು. ಆಘಾತದಿಂದ ತತ್ತರಿಸಿದ ಹುಳುಗಳು ಗೊಂಯೆಂದು ಭಗ್ಗನೆ ಹೊಗೆಯೆದ್ದಂತೆ – ಹೊರಬಿದ್ದು ಸಿಕ್ಕಸಿಕ್ಕವರನ್ನು ಸಿಕ್ಕಸಿಕ್ಕಲ್ಲಿ ಕಚ್ಚತೊಡಗಿದವು.

ಕಿರುಚಾಟ, ಕೂಗಾಟ, ಒದರಾಟ, ಅಯ್ಯೋ ಅಪ್ಪಾ,ಅವ್ವಾ, ತಾಯೀ, ಕರಿಮಾಯೀ ಎಂದು ಜನ ಮರೆ ಎಲ್ಲಿದ್ದರಲ್ಲಿಗೆ ಹೋ ಎಂದು ಒಡತೊಡಗಿದರು. ಬಿದ್ದರೋ, ಎದ್ದರೋ, ತುಳಿದರೋ, ತುಳಿಸಿಕೊಂಡರೋ – ಬಟ್ಟೆ ಕಿತ್ತೆಸೆದರು, ಸೀರೆ ಬಿಚ್ಚಿ ಎಸೆದರು, ಹೊಯ್ಕೊಂಡರೂ, ಹೊಡಕೊಂಡರೂ ಹುಳ ಬಿಡದೆ ಅಟ್ಟಿಸಿಕೊಂಡು ಹೋಗಿ ಎಲ್ಲೆಂದರಲ್ಲಿ, ಒಬ್ಬೊಬ್ಬರಿಗೆ ಸಾವಿರ ಸಾವಿರ ಮುತ್ತಿ, ಒಂದನ್ನು  ಒರೆದರೆ ಅದರ ನೆತ್ತರಿನಿಂದ ಸಾವಿರ ಹುಟ್ಟಿ, ಜೀವದ ಪರಿವೆಯಿಲ್ಲದೆ ಹೆಂಗಸರು ಮಕ್ಕಳೆನ್ನದೆ, ಬಿದ್ದವರೆದ್ದರೆನ್ನದೆ, ಹೊಕ್ಕಲ್ಲಿ ಬಿಡದೆ, ಬಿದ್ದಲ್ಲಿ ಸೋದೆ ಗೊಂಯೆಂದು, ಹುಯ್ಯೆಂದು ಕಚ್ಚಿದುವು.

ಒಂದೆರಡು ಗಳಿಗೆಯಲ್ಲಿ ಗುಡಿ ಇದ್ದಕ್ಕಿದ್ದಂತೆ ಖಾಲಿಯಾಗಿ ದೂರದಲ್ಲಿ ಹೆಂಗಸರು ಮಕ್ಕಳ ಅಳುವಿನ ದನಿ, ಊರನಾಯಿಗಳು ವಿಕಾರವಾಗಿ ಊಳಿಡುವ ದನಿ ಮಾತ್ರ ಕೇಳಿಸುತ್ತಿತ್ತು.

ಶಿಶು ಮಕ್ಕಳು ಕಡಿದಷ್ಟು ಕಡಿಯಲೆಂದು ಅಲ್ಲೇ ಕಂಬಳಿಗಳಲ್ಲಿ  ಮುದ್ದೆಯಾಗಿ ಬಿದ್ದಿದ್ದರು. ಗುಡಸೀಕರನೂ ಒಬ್ಬನ ಕಂಬಳಿಯಲ್ಲಿ ಹಾಗೆ ಅವಿತಿದ್ದವನು ದೈವವಶಾತ್ ಎಂಬಂತೆ ದೇವಿಯ ಬಂಗಾರದ ಮುಖದ ನೆನಪಾಯಿತು. ಹುಳ ಇನ್ನೂ ಕಡಿಮೆಯಾಗಿರಲಿಲ್ಲ. ಕಡಿಮೆಯಾಗುವ ಲಕ್ಷಣಗಳೂ ಕಾಣಲಿಲ್ಲ. ಗೌಡ, ದತ್ತಪ್ಪ ಇವರೂ ಯಾರಿರಲಿಲ್ಲ. ಬಿದ್ದುಕೊಂಡೇ ಶಿಶು ಮಕ್ಕಳನ್ನು ಉದ್ದೇಶಿಸಿ ದೇವಿಯ ಬಂಗಾರದ ಮುಖದ ಬಗ್ಗೆ ಹೇಳಿದ. ಆಗ ಅವರಿಗೂ ನೆನಪಾಯಿತು ಏಳಿರೆಂದು ಒಂದಿಬ್ಬರನ್ನು ಎಬ್ಬಿಸಿ ಕಚ್ಚುತ್ತಿದ್ದ ಹುಳ ಗಮನಿಸದೆ ಗರ್ಭಗುಡಿಯೊಳಗೆ ಓಡಿಹೋಗಿ ತಾಯಿಯ ಬಂಗಾರದ ಮುಖವನ್ನು ಜೋರಿನಿಂದ ಕಿತ್ತುಕೊಂಡ. ಕಿತ್ತ ರಭಸಕ್ಕೆ ತಾಯಿಯ ಇಡೀ ಮೂರ್ತಿ ರುಂಡವಿಲ್ಲದೆ ಬರೀ ಮುಂಡ ಮಾತ್ರ ಧೊಪ್ಪನೆ ನೆಲಕ್ಕೆ, ಬೆನ್ನು ಮೇಲಾಗಿ ಕೈಕಾಲೂರಿ ಬಿದ್ದುಬಿಟ್ಟಿತು. ಗುಡಿಯಲ್ಲಿದ್ದ ಫಲ ಚೆಲ್ಲಾಪಿಲ್ಲಿಯಾಗಿ ಬಿದ್ದವು. ಅಲ್ಲಿದ್ದವರ ಜೀವ ಹಾರಿಹೋದಂತಾಯ್ತು. ನಾಳೆ ಸರಿಪಡಿಸಿದರಾಯ್ತೆಂದು ಉಟ್ಟ ಧೋತ್ರದಲ್ಲಿ ತಾಯಿಯ ಮೂರ್ತಿ ಬಚ್ಚಿಟ್ಟುಕೊಂಡು ಆಭರಣಗಳನ್ನಾಯ್ದುಕೊಂಡು ಶಿಶು ಮಕ್ಕಳೊಂದಿಗೆ ಮನೆಗೆ ಓಡಿದ. ಓಡಿ ಬಂದವರಲ್ಲಿ ಬಸವರಾಜೂ ಕೂಡ ಒಬ್ಬನಾದದ್ದು ಮನೆಗೆ ಬಂದಮೇಲೆ ತಿಳಿಯಿತು.

ಎಲ್ಲರ ಮುಖ ಬಾತುಹೋಗಿ ಗುರುತು ಸಿಗದಾಗಿತ್ತು. ಬಸವರಾಜೂನ ಕಣ್ಣು, ಸೊಂಡಿ, ಕಿವಿ ಎಲ್ಲಾ ಉಬ್ಬಿ ಬಾಯಿ ತೆರೆದಾಗ ಲಗುಮವ್ವನ ಹಾಡಿನ ದೈತ್ಯನಂತೆ ಕಾಣುತ್ತಿದ್ದ. ಈಗ ಮಾತಾಡಿ ಪ್ರಯೋಜನವಿರಲಿಲ್ಲ. ಒಬ್ಬೊಬ್ಬರೂ ಮೈ ಪರಚಿಕೊಳ್ಲುವ ಕೆಲಸದಲ್ಲಿ ನಿರತರಾಗಿದ್ದರು. ಒಳಗೆ ಗಿರಿಜಾ ಸಣ್ಣಾಗಿ ಅಳುತ್ತಿದ್ದಳು. ದೂರದಲ್ಲಿನ್ನೂ ಜನರ ನರಳಾಟ ಕೇಳಿಸುತ್ತಿತ್ತು. ನಾಯಿಗಳು ಊಳಿಡುತ್ತಿದ್ದವು. ಗೌಡ, ದತ್ತಪ್ಪ ಈಗ ಬಂದಾರು ಆಗ ಬಂದಾರೆಂದು ಬಂದೊಡನೆ ಈ ಮುಖ, ಆಭರಣಗಳನ್ನೂ ಅವರಿಗೊಪ್ಪಿಸಿ ಜವಾಬ್ದಾರಿ ತೀರಿಸಿಕೊಳ್ಳಬೇಕೆಂದು ದಾರಿನೋಡುತ್ತ, ಮೈಪರಚಿಕೊಳ್ಳುತ್ತ ಗುಡಸೀಕರ ಕುತ. ಬಹಳ ಹೊತ್ತಾದರೂ ಯಾರೂ ಬರುವ ಸುಳಿವು ಕಾಣಲಿಲ್ಲ. ತಾವೆಲ್ಲಾ ಇಲ್ಲಿದ್ದರೆ ಅವರಿಗೆ ದೇವಿಯ ಮುಖ ಇಲ್ಲಿದ್ದುದ್ದು ತಿಳಿಸುವುದಾದರೂ ಹ್ಯಾಗೆ? ಬಂದಿದ್ದ ಶಿಶು ಮಕ್ಕಳನ್ನು ಗೌಡ, ದತ್ತಪ್ಪರ ಮನೆಗೆ ಕಳುಹಿಸಿದ. ಅವರ ಅಳುಮುಖ ನೋಡಿ ಗುಡಸೀಕರನ ಕರುಳು ಕಿತ್ತು ಬಾಯಿಗೆ ಬಂದಂತೆ ಗಂಟಲು ತುಂಬಿ ಬಂತು. ಬಸವರಾಜ ಇಲ್ಲದಿದ್ದರೆ ಅತ್ತುಬಿಡುತ್ತಿದ್ದನೋ ಏನೋ! ಅವ ಮಿಕಿ ಮಿಕಿ ಇವನನ್ನೇ ನೋಡುತ್ತಿದ್ದ. ಅವನಿಗೂ ಅನಿರೀಕ್ಷೀತ ಆಘಾತವಾದಂತಿತ್ತು.

ಒಂದು ತಾಸು ಹಾದಿ ನೋಡಿದ. ಯಾರೂ ತನ್ನ ಮನೆ ಕಡೆ ಬರುವ ಲಕ್ಷಣ ಕಾಣಿಸಲಿಲ್ಲ. ಗಡಿಯಾರ ನೋಡಿಕೊಂಡ. ಆಗಲೇ ಮೂರು ಗಂಟೆಯಾಗಿತ್ತು. ಬಸವರಾಜು ಕೂತಲ್ಲೇ ಮಲಗಿ ಗೊರಕೆಹೊಡೆಯುತ್ತಿದ್ದ. ದೇವಿಯ ಮುಖ ಕಣ್ಣು ತೆರೆದುಕೊಂಡು ಪಲ್ಲಂಗದ ಮೇಲೆ ಹಾಗೇ ಕೂತಿತ್ತು. ತಗೊಂಡು ಹೋಗಿ ತನ್ನ ದೇವರ ಮನೆಯ ತಿಜೋರಿಯಲ್ಲಿಟ್ಟು ಬೀಗ  ಹಾಕಿಬಂದ. ಇನ್ನೂ ಯಾರೂ ಬರಲಿಲ್ಲ.

ಒತ್ತೊತ್ತಿ ಉಕ್ಕಿಬರುವ ಅಲೋಚನೆಗಳಿಂದ, ಚಿಂತೆಗಳಿಂದ ಅಳು ಬಂತು. ಗಳಗಳ ಕಣ್ಣೀರು ಸುರಿಸಿದ. ಸುಂದರಿ ಮಾಡಿದ್ದು ಬಸವರಾಜೂನ ಕುತಂತ್ರದಿಂದಲೇ ಎಂದು ಖಾತ್ರಿಯಾಗಿತ್ತು. ಅದೆಲ್ಲ ತನಗಾಗಿ ಇದ್ದೀತು. ಆಸರೆ ಹಾಗೆ ಮಾಡಿದ್ದು ಸರಿಯಲ್ಲವೆಂದು ಅವನ ಒಟ್ಟು ಅಭಿಪ್ರಾಯವಾಗಿತ್ತು. ತನ್ನೊಬ್ಬನ ಅಧಿಕಾರದಾಹಕ್ಕಾಗಿ ಇಡೀ ಹಳ್ಳಿಯ ಪುರಾಣವನ್ನು ಬಲಿಗೊಡುವುದೂ ಅವನಿಗೆ ಬೇಕಿರಲಿಲ್ಲ. ಆದರೆ ಎಲ್ಲ ಅನಿರೀಕ್ಷಿತವಾಗಿ ಘಟಿಸಿಬಿಟ್ಟಿತ್ತು. ಗೌಡ ತನಗಿಂತ ಬಹಳ ದೊಡ್ಡವನೆನ್ನಿಸಿತು. ಬೆಳಿಗ್ಗೆ ದೇವಿಯ ಮುಖ ಒಪ್ಪಿಸಿ ಕ್ಷಮಾಪಣೆ ಕೇಳಬೇಕೆಂದುಕೊಂಡ. ತಾನು ಎಲ್.ಎಲ್.ಬಿ. ಪಾಸಾದಾಗ ಅವ ಸಕ್ಕರೆ ಹಂಚಿದ್ದನ್ನು, ಎಲೆಕ್ಷನ್ ಇಲ್ಲದೆ ಪಂಚಾಯ್ತಿ ತನ್ನ ಕೈಗಿತ್ತದ್ದನ್ನು, ಇತ್ತೀಚೆಗೆ ತೋಟದಲ್ಲಿ ತನ್ನನ್ನು ಕಂಡು ಅಂಗಲಾಚಿದ್ದನ್ನು ನೆನೆದುಕೊಂಡ. ಗುಡಿಯಲ್ಲಿ ನಡೆದ ಇಂದಿನ ಗೊಂದಲ ನೆನಪಿಸಿಕೊಂಡ. ದೇವಿಯ ಅಳು ಮಕ್ಕಳ ಅಳುಮುಖ ನೆನಪಿಸಿಕೊಂಡ. ಜನ ತನ್ನನ್ನು ಕ್ಞಮಿಸಲಾರರೆನ್ನಿಸಿತು. ಪಶ್ಚಾತ್ತಾಪದಿಂದ ಸುಟ್ಟು ಸುಣ್ಣವಾದ. ಬಹುಶಃ ಪಶ್ಚಾತ್ತಾಪದಿಂದಲೋ ಏನೋ ಎದೆ ಸ್ವಲ್ಪ ಹಗುರವಾಯ್ತು. ಅನವಿಗೇ ಗೊತ್ತಿಲ್ಲದಂತೆ ಕಣ್ಣುಮುಚ್ಚಿ ನಿದ್ರೆಹೋದ.

ಬೆಳಿಗ್ಗೆ ಯಾರೋ ಚಿಟ್ಟನೆ ಚೀರಿದ್ದು ಕೇಳಿಸಿತು. ಎಚ್ಚರವಾಗಿ ಕಣ್ಣು ತೆರೆದ. ಕೆಳಗೆ ತನ್ನ ತಾಯಿ ಕಿರುಚುತ್ತಿದ್ದಳು. ತಬ್ಬಿಬ್ಬಾಗಿ ಕೆಳಗಿಳಿದುಹೋದ. ಮುದುಕಿ ದೇವರ ಮನೆಕಡೆ ಕೈತೋರಿಸುತ್ತ ಎದೆ ಎದೆ ಬಡಿದುಕೊಂಡು ಅಳುತ್ತಿತ್ತು. ನೋಡಿದರೆ ತಿಜೋರಿಯ ಬಾಗಿಲು ತೆರೆದಿತ್ತು. ಒಳಗೆಲ್ಲ ಖಾಲಿ.

ಬಸವರಾಜು ಕರಿಮಾಯಿಯ ಬಂಗಾರದ ಮುಖದೊಂದಿಗೆ ಆಭರಣ, ಹಣ ತಗೊಂಡು, ಗಿರಿಜೆಯನ್ನು ಓಡಿಸಿಕೊಂಡು ಪರಾರಿಯಾಗಿದ್ದ.

* * *

ಅದಾಗಿ ಸರಿಯಾಗಿ ಒಂದು ತಿಂಗಳಾಯಿತು. ಇಂದು ಮುತ್ತೈದೆ ಹುಣ್ಣಿವೆ, ಹುಣ್ಣಿವೆಯಂದು ವಿಧವೆಯಾದ ತಾಯಿ ಕರಿಮಾಯೆ ಒಂದು ತಿಂಗಳ ಅವಧಿಯಲ್ಲಿ ಏಳೇಳು ಶಿರದ ಈರೇಳು ಭುಜಗಳ ದೈತ್ಯರನ್ನೂ, ದೇವತೆಗಳನ್ನೂ ಸಂಹರಿಸಿ ಮಕ್ಕಳ ಹಾಗೂ ಗಂಡನ ಜೀವ ಮರಳಿ ಪಡೆದುಕೊಂಡು ಹಿಂದುರುಗಿ ಬರುವ ದಿನ ಇದು. ತಾಯಿ ಬರಲೇ ಇಲ್ಲ.

ಧರಣಿಗೆ ದೊಡ್ಡವಳಾದ ಕರಿಮಾಯಿ ಆಡುವ ಮಕ್ಕಳಿಗೆ ತೂಗು ತೊಟ್ಟಿಲವಾದಳು. ಮುತ್ತೈದೆಯರಿಗೆ ಬಾಗಿನವ ಮೊರವಾದಳೂ. ಹಣ್ಣು ಮುದುಕರಿಗೆ ಊರುವ ಕೋಲಾದಳು. ಅನಾಥರಿಗೆ ಆಧಾರವಾದಳು. ಅವಳನ್ನು ನೆನೆದು ಕೈಲಿ ಹಿಡಿದ ಕೆಂಡ ಕೆಂದಾವರೆಯಾಯ್ತು. ಮಣ್ಣು ಚಿನ್ನವಾಯಿತು. ಹಿಟ್ಟು ಬೆಲ್ಲವಾಯಿತು. ಅಂಬಲಿ ಪಾಯಸವಾಯಿತು. ಜೋಪಡಿ ಅರಮನೆಯಾಯಿತು. ಇಂಥ ಮೂರು ಲೋಕಕ್ಕೆ ಅಧಿಕವಾದ ತಾಯಿ ಬರಲೇ ಇಲ್ಲ.

ಆಕಾಶ ಪಾತಾಳ ಒಂದು ಮಾಡಿ ಹುಡುಕಿದರೂ ಬಸವರಾಜು ಸಿಕ್ಕಲಿಲ್ಲ. ಪೊಲೀಸರಿಗೆ ಹೇಳಿ ಬಂದಿದ್ದರು. ಅವರಿಂದ ಈ ತನಕ ಯಾವ ಬಾತಮಿಯೂ ಬಂದಿರಲಿಲ್ಲ. ಆ ದಿನ ಗುಡಸೀಕರ ಬಂಗಾರದ ಮುಖ ತೆಗೆದಾಗ ರುಂಡವಿಲ್ಲದ ತಾಯಿಯ ಮೂರ್ತಿ ಬಕ್ಕ ಬರಲು ಕೈಕಾಲೂರಿ ಬಿದ್ದಿತ್ತು. ಅದನ್ನೆತ್ತಿ ಮುಂಡಕ್ಕೆ ಕಟ್ಟಿಗೆಯ ಮುಖವನ್ನಾದರೂ ಜೋಡಿಸಬೇಕಿತ್ತು. ಶುದ್ಧ ಮಾಡಿದಲ್ಲದೆ ಅದಾಗದು. ತಾಯಿಯೇ ಬರದಿದ್ದರೆ ಶುದ್ಧ ಮಾಡಿಯಾದರೂ ಏನು ಪ್ರಯೋಜನ? ಹೆದರಿಕೆಯಲ್ಲಿ ಲಗಮವ್ವನೂ ಗುಡಿಯ ಕಡೆ ಸುಳಿದಿರಲಿಲ್ಲ. ಅವಳೇನಾದರೂ ಈ ಪರಿಯಲ್ಲಿರುವ ತಾಯಿಯನ್ನು ಕಂಡಿದ್ದರೆ, ದೈತ್ಯರು ತಾಯಿಯ ರುಂಡ ಚೆಂಡಾಡಿದರೆಂದು ಅತ್ತಕೊಂಡು ಹಾಡುತ್ತಿದ್ದಳೋ ಏನೋ! ರಾತ್ರಿಯಾದೊಡನೆ ಒಬ್ಬಳೇ ಗುಡಿಸಲಲ್ಲಿ ಕೂತುಕೊಂಡು

ಎಲ್ಲೀ ಹೋದಳೆನ್ನಬ್ಯಾಡಿರೇ
ಕರಿಮಾಯಿ ನಿಮ್ಮ ಮನಸೀನಾಗ ಐದಾಳೆನ್ನಿರೇ |
ಎತ್ತ ಹೋದಳೆನ್ನಬ್ಯಾಡಿರೇ
ಕರಿಮಾಯಿ ನಿಮ್ಮ | ಚಿತ್ತದೊಳಗೈದಾಳೆನ್ನಿರೇ ||

ಎಂದೇನೋ ಹಾಡುತ್ತಿದ್ದಳು, ಬಹುಶಃ ತನ್ನ ಸಮಾಧಾನಕ್ಕಾಗಿ. ಆದರೆ ಅವಳ ದನಿ ವಿಕಾರವಾಗಿ ದೂರದಲ್ಲಿದ್ದವರಿಗೆ ಅದೊಂದು ನೊಮದ ಪ್ರಾಣಿಯ ಆಳಾಪದಂತೆ ಕೇಳಿಸುತ್ತಿತ್ತು.

ದೇವರೇಸಿ ಆ ದಿನ ಎಲ್ಲರನ್ನೂ ತಪ್ಪಿಸಿ ಕಾಡಿನಲ್ಲಿ ಮಾಯವಾದ. ಮೂರು ದಿನಗಳ ತರುವಾಯ ನೇಣು ಹಾಕಿಕೊಂಡ ಅವನ ಹೆಣ ಸಿಕ್ಕಿತ್ತಷ್ಟೆ. ತಾಯಿ ಇನ್ನೊಬ್ಬ ದೇವರೇಸಿಯನ್ನಾರಿಸಿಕೊಂಡು ಅವನ ಮುಖಾಂತರ ಬಂಗಾರದ ಮುಖದ ಸುಳಿವು ಕೊಟ್ಟಾಳು. ಇಲ್ಲವೆ ಬಸವರಾಜನಿಗೆ ನೆತ್ತರು ಕಕ್ಕಿಸಿ ಅವ ಓಡಿಬಂದು ವಾಪಸ್ಸು ಕೊಡುವಂತೆ ಮಾಡ್ಯಾಳೆಂದು ಎಲ್ಲರ ನಂಬಿಕೆಯಾಗಿತ್ತು. ಅಂಥ ಸುದ್ದಿ ಈಗ ಬಂದೀತು, ಆಗ ಬಂದೀತು, ಇಂದು ಬಂದೀತು, ನಾಳೆ ಬಂದೀತೆಂದು ಕಾದರು. ಬೆಳಗಾವಿಯ ಪತ್ರಿಕೆಗಳಲ್ಲಿ “ಶಿವಾಪುರದಲ್ಲಿ ಭಾರೀ ದರೋಡೆ, ಚಿನ್ನದ ಮೂರ್ತಿಯ ನಾಪತ್ತೆ” ಎಂಬ ತಲೆಬರಹದಡಿಯಲ್ಲಿ ಸುದ್ದಿ ಪ್ರಕಟವಾಯಿತಷ್ಟೆ. ಇದನ್ನು ನೋಡಿ ಜನ ತಮ್ಮ ಆಪ್ತರು ಸತ್ತ ಸುದ್ದಿ ಕೇಳಿದಂತೆ ಹೋ ಎಂದು ಅತ್ತರು. ಊರಿಗೆ ಊರೇ ಸತ್ತವರ ಮನೆಯಂತೆ ಬಿಕೋ ಎನ್ನುತ್ತಿತ್ತು.

ಈಗ ಕರಿಮಾಯಿ ಹೆಸರು ಹೇಳುವುದಕ್ಕೇ ಹೆದರುತ್ತಿದ್ದರು. ಯಾರೊಬ್ಬರೂ ದನಿ ಎತ್ತರಿಸಿ ಮಾತಾಡುತ್ತಿರಲಿಲ್ಲ. ಊರ ಹೊರಗಿನಿಂದ ಯಾರು ಬಂದರೂ ಅವರನ್ನು ಮುತ್ತಿ ತಾಯಿಯ ಸುದ್ದಿಯೇನೆಂದು ಕೇಳುತ್ತಿದ್ದರು. ಒಬ್ಬರ ಮುಖದಲ್ಲೂ ಕಳೆಯಿರಲಿಲ್ಲ. ಪ್ರತಿಯೊಬ್ಬರ ಹೊಕ್ಕಳ ಬಳಿ ದೊಡ್ಡ ಗಾಯವಾಗಿ ಅದರ ವೇದನೆಯಿಂದ ಅತ್ತು ಅತ್ತು ಈಗಷ್ಟೇ ಸುಮ್ಮನಾಗಿದ್ದವರಂತೆ ಅಥವಾ ಉಕ್ಕುವ ದುಃಖವನ್ನು ತುಟಿಕಚ್ಚಿ ತಡೆದಂತೆ ಕಾಣಿಸುತ್ತಿದ್ದರು. ಕಣ್ಣಂಚಿನಲ್ಲಿ ತಾಯಿ ಸಿಕ್ಕಾಳೆಂಬ ಆಸೆ ಮಾತ್ರ ಹೊಳೆಯುತ್ತಿತ್ತು. ದಿನೇ ದಿನೇ ಅದೂ ಬಾಡತೊಡಗಿತ್ತು.

ಗೌಡ ಈ ಒಂದು ತಿಂಗಳ ಅವಧಿಯಲ್ಲಿ ತೊಗಲು ಜೊತು ಹೆಗಲು ಬಿದ್ದ ಮೈ ಮೇಲಿನ ನೊಣಕ್ಕೂ ಬಾಲ ಎತ್ತಲಾಗದ ಮುದಿ ಎತ್ತಿನಂತಾಗಿದ್ದ. ಕೂತರೆ ಕೂತ, ನಿಂತರೆ ನಿಂತ, ದಾಡಿ ಮಾಡಿಸಿಕೊಂಡರೆ ಮಾಡಿಸಿಕೊಂಡ, ಇಲ್ಲದಿದ್ದರಿಲ್ಲ, ಮಾತುಕೊಟ್ಟು ಹೋದ ತಾಯಿ ಬಂದಿರಲಿಲ್ಲ. ಮಗ ಶಿವನಿಂಗ ಮಂದಿರಲಿಲ್ಲ. ಶಿವನಿಂಗನ ಸುದ್ದಿ ಬಂದಿರಲಿಲ್ಲ, ‘ಕರಿಮಾಯಿಗೆ ಬೇಡ, ಸಾವಿಗಾದರೂ ನನ್ನ ಮೇಲೆ ಕರುಣೆ ಬರಬಾರದೇ?’ ಎಂದುಕೊಂಡು ಕಾಲ ನೂಕುತ್ತಿದ್ದ. ಆದರೆ ಸಾವಿಗೆಲ್ಲಿಯ ಕರುಳು? ಇದ್ದೊಂದು ಜೊತೆ ಶಿವಸಾನಿಯೂ “ಶಿವನಿಂಗಾ” ಎಂದು ಕಣ್ಣುಮುಚ್ಚಿದಳು. ಇನ್ನು ತನ್ನ ಸರದಿ. ಈಗಲೋ ಆಗಲೋ “ತಾಯೀ” ಎನ್ನುವುದಕ್ಕೆ ಸಿದ್ಧನಾಗಿ ಕೂತ, ಮಗನ ತೋರುವ ತಾಯಿ ಕರಿಮಾಯಿ ಮುತ್ತೈದೆ ಹುಣ್ಣಿಮೆಯೆಂದು ಉದ್ಭವಿಸುವಳೆಂಬ ನಂಬಿಕೆ ಮಾತ್ರ ಕಣ್ಣಲ್ಲೇ ಇತ್ತು. ಸದಾ ಮೊಳಕಾಲಿಗೆ ಕೈಕಟ್ಟಿ ಗುಡಿಯ ದೀಪ ಕಂಬದ ಕಟ್ಟೆಯ ಮೇಲೆ ಎದುರನ್ನೇ ನೋಡುತ್ತ ಕೂತಿರುತ್ತಿದ್ದ. ಅಗತ್ಯವಿದ್ದಾಗ ಮಾತ್ರ ಆಗೀಗ ಒಂದೆರಡು ಮಾತಾಡುತ್ತಿದ್ದ. ಮಾತಾಡಿದಾಗೊಮ್ಮೆ ಕಣ್ಣೀರು ಸುರಿಸುತ್ತಿದ್ದ. ಅವನನ್ನು ನೋಡಿದೊಡನೆ ಜನಕ್ಕೆ ಕಳೆದ ತಾಯಿಯ ನೆನಪಾಗಿ ದುಃಖ ಒತ್ತರಿಸಿ ಬರುತ್ತಿತ್ತು. ಅವನ ಗಂಟಲಲ್ಲಿ ಅನ್ನ ಇಳಿಸುವುದೇ ದತ್ತಪ್ಪನ ಸಮಸ್ಯೆಯಾಗಿತ್ತು.

ಈ ಒಂದು ತಿಂಗಳಲ್ಲಿ ಇನ್ನೂ ಏನೆಲ್ಲಾ ಆಯ್ತು ಊರಿನಲ್ಲಿ. ಈ ಮಧ್ಯೆ ಚಿಮಣಾ ತುಂಬು ಗರ್ಭಿಣಿಯಾಗಿ ಇದೇ ಊರಿಗೆ ಬಂದಿದ್ದಳು. ತಲೆ ಕೆದರಿ, ಮೈ ಸೊರಗಿ, ಕಡ್ಡಿಯಾಗಿ ಬರೀ ಚಿಂದಿ ಬಟ್ಟೆಯ ಉಬ್ಬಿದ ಬಸುರು ಮಾತ್ರ ಮುಂಚಾಚಿ ತೋರುತ್ತಿದ್ದ ಅವಳನ್ನು ಗುರುತಿಸುವುದೇ ಕಷ್ಟವಾಗಿತ್ತು. ಗುರುತು ಸಿಕ್ಕೊಡನೆ ಊರವರೆಲ್ಲ ಅವಳ ಸುತ್ತು ಮುತ್ತಿದರು. ಅವಳಿಂದ ಪ್ರಯೋಜನವಾಗುವಂತಿರಲಿಲ್ಲ. ಬಾಯಿ ಹೋಗಿತ್ತು. ಸಾಲದ್ದಕ್ಕೆ ಹುಚ್ಚು ಬೇರೆ. ಬಸವರಾಜು ಅವಳಿಗೂ ಮೋಸ ಮಾಡಿದ್ದ. ಅವಳ ಮೇಲೆ ಸಿಡಿದೆದ್ದೆರ ಏನಾದೀತು? ತಾಯಿಯೇ ಅವಳಿಗೆ ಸರಿಯಾದ ಶಿಕ್ಷೆ ಕೊಟ್ಟಳೆಂದು ಸುಮ್ಮನಾದರು. ತನ್ನ ಗುಡಿಸಲ ಮುಮದೆ ಸುಮ್ಮನೆ ನಾಯಿಯಂತೆ ಊಳಿಡುತ್ತ ಕೂರುತ್ತಿದ್ದಳು. ಯಾರಾದರೂ ಧರ್ಮಾತ್ಮರು ತುತ್ತು ಕೊಟ್ಟರೆ ತಿನ್ನುತ್ತಿದ್ದಳು. ಇಲ್ಲದಿದ್ದರೆ ಅಲ್ಲೇ ಬಿದ್ದಿರುತ್ತಿದ್ದಳು. ಅವಳಿಗೆ ಕರುಣೆ ತೋರಿಸುವಷ್ಟು ನೆಮ್ಮದಿ ಜನಕ್ಕಿರಲಿಲ್ಲ. ಅವರಿಗ್ಯಾರು ಕರುಣೆ ತೋರಿಸುತ್ತಿದ್ದರು?

ಇದ್ದುದರಲ್ಲಿ ಈ ದಿನವೇ ಗೌಡ ಸ್ವಲ್ಪ ಲವಲವಿಕೆಯಿಂದಿದ್ದ. ಇಂದು ಮುತ್ತೈದೆ ಹುಣ್ಣಿವೆಯಾದ್ದರಿಂದ ತಾಯಿ ತಿರುಗಿ ಬಂದು ಗದ್ದಿಗೆಗೊಳ್ಳುವ ದಿನ. ತಾಯಿ ಖಂಡಿತ ಈ ದಿನ ಬರುತ್ತಾಳೆ. ಇಲ್ಲವೆ ಯಾರದಾದರೂ ಮೈ ತುಂಬಿ ತಾನಿರುವ ಠಿಕಾಣವನ್ನಾದರೂ ತಿಳಿಸುತ್ತಾಳೆ. ಶವನಿಂಗನನ್ನೂ ಕರೆತರುತ್ತಾಳೆಂದು ಬಲವಂತವಾಗಿ ನಂಬಿದ್ದ. ಮುಂಜಾನೆಯಿಂದಲೇ ಗುಡಿಯ ದೀಪ ಕಂಬದ ಕಟ್ಟೆಯ ಮೇಲೆ ಕೂತಿದ್ದ. ಅವನೊಟ್ಟಿಗೆ ದತ್ತಪ್ಪನೂ ಕೂತಿದ್ದ.

ಗುಡಿಯ ಕಡೆ ಯಾರು ಸುಳಿದರೂ ಇಲ್ಲ ಮೈ ತುಂಬಿ ಬರುತ್ತಾರೆ, ಇಲ್ಲ, ಮೈ ತುಂಬಿದ ಸುದ್ದಿಯನ್ನಾದರೂ ತರುತ್ತಾರೆಂದು ನೋಡುತ್ತಿದ್ದರು. ಕೂಳು, ನೀರು ಮರೆತು, ದಿಕ್ಕು ದಿಕ್ಕುಗಳನ್ನು ಹಡ್ಡಿ ಹಡ್ಡಿ ನೋಡಿದರು. ಕಣ್ಣುಗಳಲ್ಲಿ ಆಸೆ ಹೊತ್ತಿಸಿಕೊಂಡು ಹುಡುಕಿದರು. ಸಂಜೆಯಾಗಿ ದನಕರು ಮನೆಗೆ ಬಂದವು. ಮುಳುಗುವ ಸೂರ್ಯನೊಂದಿಗೆ ಇವರ ಕಣ್ಣೊಳಗಿನ ಬೆಳಕೂ ನಂದಿ ಕಮ್ಮಿಯಾಯಿತು. ಮೂಡಣದಲ್ಲಿ ಚಂದ್ರ ಮೂಡಿದ. ತಾಯಿ ಬರುವ ಸಮಯ ಮೀರಿತು. ಬೆಳದಿಂಗಳು ಹೆಚ್ಚಾದಂತೆ ಬೂದಿ ಬಣ್ಣಕ್ಕೆ ತಿರುಗಿದ ಊರು ಬಿಳಚಿಕೊಂಡ ಕ್ಷಯರೋಗಿಯಂತೆ ಕಾಣುತ್ತಿತ್ತು. ದತ್ತಪ್ಪ ದೊಡ್ಡದಾಗಿ ನಿಟ್ಟುಸಿರುಬಿಟ್ಟು,

“ಏಳು ಗೌಡಾ”

ಎನ್ನುತ್ತ ಗೌಡನ ಭುಜದ ಮೇಲೆ ಕೈಯಿಟ್ಟ. ಗೌಡ ಸುಮ್ಮನೆ ಎದ್ದ. ಎಲ್ಲಿದ್ದರೂ ಯಾವುದೋ ಮಾಯೆಯಿಂದ ಮುತ್ತೈದೆ ಹುಣ್ಣಿವೆ ದಿನ ಅವತರಿಸಿ ಬರುತ್ತೇನೆಂದ ತಾಯಿ ಮಾತಿಗೆ ತಪ್ಪಿದಳು!

ಬರುತ್ತಿರುವಾಗ ದಾರಿಯಲ್ಲಿ ದತ್ತಪ್ಪ ಒಮ್ಮೆಲೆ ಸ್ಫೂರ್ತಿಗೊಂಡಂತೆ “ಅಂದ್ಹಾಂಗ ಗೌಡಾ, ಲಗಮಿ ಯಾಕೋ ಬರಲಿಲ್ಲಲ್ಲ” ಎಂದ. ತಕ್ಷಣ ಗೌಡನ ಕಣ್ಣು ಹೊಳೆದವು. ಹೌಂದಲ್ಲ. ಎನಿಸಿತು. ಯಾರಿಗೆ ಗೊತ್ತು, ಅವಳ ಕೇರಿಯಲ್ಲಿ ತಾಯಿ ಅವತರಿಸಬಹುದು. “ಬಾ ನೋಡೋಣ”ವೆಂದು ಹೊಲಗೇರಿಯ ಕಡೆ ಧಾವಿಸಿದರು.

ಚಿಮಣಾಳ ಗುಡಿಸಲಲ್ಲಿ ಹೆಂಗಸರು ಕಿಕ್ಕಿರಿದು ನೆರೆದಿದ್ದರು. ತಡೆಯಲಾರದೆ ಇಬ್ಬರೂ ಓಡಿದರು. ಒಳಗೆ ಹೆಂಗಸರು ಸಡಗರ ಮಾಡುತ್ತಿದ್ದರು. ಲಗಮವ್ವನ ದನಿ ಕೇಳಿಸುತ್ತಿತ್ತು. ಹೆಂಗಸರು ಕಲಕಲ ಮಾತಾಡಿಕೊಳ್ಳುತ್ತಿದ್ದರು. ಏನೆಂದು ಕೇಳಿದರೆ ಒಬ್ಬಳಿಂದ ಚಿಮಣಾ ಹೆಣ್ಣು ಹಡೆದಿರುವಳೆಂದು ತಿಳಿಯಿತು. ಸಂಭ್ರಮದಲ್ಲಿದ್ದ ಒಳಗಿನವರಿಗೆ ಹೊರಗೆ ಗೌಡ, ದತ್ತಪ್ಪ ಬಂದದ್ದು ಗೊತ್ತಾಗಲೇ ಇಲ್ಲ. ಒಬ್ಬಳು “ಏ ಏ, ಇದರ ಮೂಗ ಥೇಟ್ ಗುಡಿಸ್ಯಾನ್ಹಾಂಗ ಐತಿ ನೋಡ” ಎಂದಳು. ಲಗಮವ್ವ “ಅಲ್ಲ ತಗಿ, ಇದರ ಮೂಗ, ಬಾಯಿ, ಚೇರಾಪಟ್ಟಿ ಎಲ್ಲಾ ಥೇಟ್ ಗೌಡನ್ಹಾಂಗ! ಗೌಡನ ರೂಪದಾಗ ಎದ್ದಿ ತಗಧಾಂಗೇತಿ” ಎಂದಳು. ಗೌಡ ನಿರಾಸೆಯಿಂದ ಮನೆ ಕಡೆ ಹೆಜ್ಜೆ ಹಾಕಿದ. ಆ ನಿರಾಸೆಯಲ್ಲೂ ದತ್ತಪ್ಪನ ತುಟಿಯಲ್ಲಿ ಮಂದಹಾಸ ಸುಳಿದಾಡಿತು.

ಇಲ್ಲೀಗಿ ಹರ ಹರ
ಇಲ್ಲೀಗಿ ಶಿವ ಶಿವ
ಇಲ್ಲೀಗಿ ನಮ ಕತಿ ಸಂಪೂರ್ಣವಾಯ್ತು ||
ಇಲ್ಲೀಗಿ ಹರ ಹರ ಇಲ್ಲೀಗಿ ಶಿವ ಶಿವ
ಇಲ್ಲೀಗಿ ನಮ ಕತಿ ಸಂಪೂರ್ಣವಾಯ್ತು ||