ಬಹುಶಃ ಇದು ನಿಜವೋ ಏನೋ. ಯಾಕೆಂದರೆ ಪಂಚಾಯ್ತಿ ಆಗಿ ಒಂದೆರಡು ತಿಂಗಳಾಗಿರಬೇಕು – ತನ್ನ ಕನಸನ್ನು ನನಸಾಗಿಸುವ, ತನ್ನ ಹಳ್ಳಿಯನ್ನು ಬೆಳಗಾವಿಯಾಗಿಸುವ ಪ್ರಥಮ ಹೆಜ್ಜೆ – ಊರನ್ನು ಸ್ವಚ್ಛವಾಗಿಡುವ ಯೋಚನೆ ಹೊಳೆಯಿತು. ಅದಕ್ಕಾಗಿ ರಾತ್ರಿ ಕರಿಮಾಯಿಯ ಗುಡಿಯಲ್ಲಿ ಒಂದು ಸಭೆ ಕರೆಯಲಾಯಿತು.
ಊರವರು ಬಂದರೆ ಕಂಡದ್ದೇನು? ಸಾಲೆಯ ಟೇಬಲ್ ಇಲ್ಲಿಗೆ ಬಂದಿದೆ. ಅದರ ಹಿಂದೆ ಮಾಸ್ತರ ಕೂರುತ್ತಿದ್ದ ಕುರ್ಚಿಯಿದೆ. ಊರಲ್ಲಿದ್ದುದು ಅದೊಂದೇ ಕುರ್ಚಿ. ಅದರ ಹಿಂದೆ ಗೌಡರ ಮನೆಯ ಕಾಳಿನ ಚೀಲ ಇಡುವ ಗಡಂಚಿಯಿದೆ. ಅದರ ಪಕ್ಕದಲ್ಲಿ ಗುಡಸೀಕರನ ಮನೆಯ ಗಡಂಚಿಯಿದೆ. ಪ್ರಶ್ನೋತ್ತರ ಮಾಸ್ತರ ಟೇಬಲ್ಲಿನ ಮುಂದೆ ನಿಂತು ಬಂದವರನ್ನೆಲ್ಲ “ಬರ್ರಿ, ಬರ್ರಿ” ಎಂದು ಸ್ವಾಗತಿಸುತ್ತಿದ್ದ. ಕೆಲವರು ಹೊಯ್ಕಿಗೆ ಬಂದರೆ ಕೆಲವರು ಕಾಳಜಿಯಿಂದ ಬಂದರು. ಅಂತೂ ದತ್ತಪ್ಪ, ಬಸೆಟ್ಟಿ, ಬಾಳೂ ಪೂಜಾರಿಯಿಂದ ಮೊದಲುಗೊಂಡು ನಿಂಗೂ, ಹಜಾಮರ ಲಗಮನವರೆಗೆ ೫೦ – ೬೦ ಜನ ಬಂದರು. ಅಲ್ಲಿಯರೆಗೆ ನಗಾರಿಖಾನೆ ಯಾ ಪಂಚಾಯ್ತಿ ಆಫೀಸಿನಲ್ಲಿದ್ದ ಗುಡಸೀಕರ ಹಾಗೂ ಅವನ ಮೆಂಬರರು ಸಾಲಾಗಿ ಬಂದು, ಮುಂದಿನ ಕುರ್ಚಿಯಲ್ಲಿ ಗುಡಸೀಕರನೂ ಹಿಂದಿನ ಗಡಂಚಿಗಳ ಮೇಲೆ ಒಂದರ ಮೇಲೆ ಇಬ್ಬಿಬ್ಬರಂತೆ ಮೆಂಬರರೂ ಕೂತರು.
ಕೆಲವರಿಗಾಗಲೇ ಅಸಮಾಧಾನವಾಯ್ತು. ಅದು ಪಾಪ, ಮಾಸ್ತರ ಕೂರೋ ಕುರ್ಚಿ; ಅದರ ಮೇಲೆ ಸ್ವತಃ ಗೌಡ ಕೂತಿರಲಿಲ್ಲ. ಗುಡಸೀಕರ ಅದರ ಮೇಲೆ ಕೂತಿದ್ದು ತಪ್ಪು ಎಂದು ದತ್ತಪ್ಪ ಒಳಗೊಳಗೇ ಅಸಮಾಧಾನಗೊಂಡ. ಅಷ್ಟರಲ್ಲಿ ಗುಡಸೀಕರ ಎದ್ದು “ಈಗ ಪ್ರಾರ್ಥನೆ: ಶಿವಾಪುರ ಕನ್ನಡ ಗಂಡುಮಕ್ಕಳ ಶಾಲೆಯ ಮಕ್ಕಳಿಂದ” ಎಂದು ಹೇಳಿ ಕೂತ. ನಾಕೈದು ಅರಿಯದ ಹಸುಳೆಗಳು ಬಂದು ಸಾಲಾಗಿ ಕೂತವರತ್ತ ಮುಖ ಮಾಡಿ ನಿಂತು, ಕೈ ಮುಗಿದು –
ಜಯವೆಂದು ಬೆಳಗೂವೆ ಗುಡಸೀಕರ ರೀಗೆ
ಗುಡಸೀಕರ ರೀಗೆ ಜನನಾಯ ಕರಿಗೆ
ಜಯವೆಂದು ಬೆಳಗುವೆ ||
ಎಂದು ಬೆದರಿದ ಅಪಸ್ವರದಲ್ಲಿ ಕಿರುಚಿದವು. ಆಮೇಲೆ ಸ್ವಾಗತ ಭಾಷಣ ಪ್ರಶ್ನೋತ್ತರ ಮಾಸ್ತರರಿಂದ, ಅದು ಮುಗಿದೊಡನೆ ಮಾಸ್ತರ ಹೋಗಿ ಒಂದು ದೊಡ್ಡ ಮಾಲೆ ತಂದು ಗುಡಸೀಕರನಿಗೆ ಹಾಕಿದ. ಅದಾದ ಮೇಲೆ ಸ್ವಲ್ಪ ಸಣ್ಣಸಣ್ಣ ಮಾಲೆಗಳನ್ನು ತಂದು ನಾಲ್ಕು ಜನ ಮೆಂಬರರಿಗೆ ಹಾಕಿದ. ಗುಡಸೀಕರನೇನೋ ಬೆಳಗಾವಿಯ ಸಭೆಗಳನ್ನು ನೋಡಿದವನಾದ್ದರಿಂದ ಮಾಲೆ ತೆಗೆದು ಮೇಜಿನ ಮೇಲಿಟ್ಟ. ಮೆಂಬರರು ಮಾತ್ರ ಹಾಕಿಕೊಂಡೇ ಕೂತರು, ಸಾಲಾಗಿ.
ಜನ ತಬ್ಬಿಬ್ಬಾದರು. ತಾವೇನು ನೋಡುತ್ತಿದ್ದೇವೆ, ಎಲ್ಲಿದ್ದೇವೆಂಬುದೇ ಕೆಲವರಿಗೆ ಮರೆತುಹೋಯ್ತು. ದತ್ತಪ್ಪನಿಗೆ ಹಿಡಿಸಲಾಗದ ನಗು. ಎಲ್ಲರಿಗೂ ಮಾಲೆ ಹಾಕಿ ಪ್ರಶ್ನೋತ್ತರ ಮಾಸ್ತರ ಕೆಳಗೆ ಕುಳಿತಿದ್ದು ನಿಂಗೂನಿಗೆ ಸರಿಬರಲಿಲ್ಲ. ಅದನ್ನು ಜೋರಿನಿಂದ ಹೇಳಿಯೂ ಬಿಟ್ಟ.
“ಮಾಸ್ತರ, ಪಾಪ ಎಲ್ಲರಿಗೂ ಮಾಲೀ ಹಾಕಿ ನಿಮಗs ಇಲ್ಲಂದರ ಹೆಂಗರೀs? ನೀವೂ ಒಂದು ಹಾಕ್ಕೊಂಡ ಗಡಂಚೀ ಮ್ಯಾಲ ಕುಂದರಬಾರದ?” ಎಂದ.
ದತ್ತಪ್ಪ ನಗುತ್ತ,
“ಛೇ ಛೇ ಅದ್ಹೆಂಗಾದೀತಪಾ? ಅವರು ಪಂಚಾಯ್ತಿ ಮೆಂಬರರು” ಅಂದ. ನಿಂಗೂನಿಗೆ ಸಮಾಧಾನವಾಗಲಿಲ್ಲ.
“ಆದರೇನಾತರೀ? ಆ ಕುರ್ಚಿ ಮಾಸ್ತರನ ಸಾಲ್ಯಾಗಿಂದಲ್ಲ?” ಎಂದ. ಇದು ಹೀಗೇ ಮುಂದುವರಿದರೆ ಕಷ್ಟವೆಂದು ಗುಡಸೀಕರ ಭಾಷಣಕ್ಕೆ ಎದ್ದುನಿಂತು ಇರರ್ಗಳವಾಗಿ, ಓತಪ್ರೋತವಾಗಿ ಒಂದೂವರೆ ತಾಸು ಮಾತಾಡಿದ. ಹಜಾಮರ ಲಗಮ ನಡುವೇ ತಡೆಯದಿದ್ದರೆ ಭಾಷಣ ಇನ್ನೂ ಎಷ್ಟು ಹೊತ್ತು ಸಾಗುತ್ತಿತ್ತೊ? ಈವರೆಗಿನ ಭಾಷಣದ ಸಾರಾಂಶ ಇಷ್ಟು:
“ಇಂಡಿಯಾ ಹಳ್ಳಿಗಳ ದೇಶ. ಈ ದೇಶದಲ್ಲಿ ಏಳು ಲಕ್ಷ ಹಳ್ಳಿಗಳಿವೆ. ಪಟ್ಟಣ, ಶಹರಗಳು ಬೆರಳೆಣಿಕೆಯಷ್ಟು ಮಾತ್ರ. ಬ್ರಿಟೀಷರು ನಮ್ಮ ದೇಶವನ್ನು ಆಳಿ ಹೊಲಗೆಡಿಸುತ್ತಿದ್ದಾರೆ. ಅವರು ನೀಚರು. ಪರಕೀಯರು, ಅವರನ್ನು ಹೊಡೆದೋಡಿಸಲೇಬೇಕು. ಪ್ರತಿಯೊಂದು ಹಳ್ಳಿಯೂ ಶಹರವಾಗಬೇಕು. ಅಂದರೇ ಈ ದೇಶದ ಉದ್ಧಾರ ಸಾಧ್ಯ. ಶಹರವಾಗಬೇಕಾದರೆ ಏನು ಮಾಡಬೇಕು? ಹಳ್ಳಿಯನ್ನು ಸ್ವಚ್ಛವಾಗಿಡಬೇಕು. ಬೆಳಗಾವಿಯನ್ನು ನೋಡಿರಿ. ಅಲ್ಲಿನ ರಸ್ತೆಯ ಮೇಲೆ ತುಪ್ಪ ಬಿದ್ದರೂ ಬಳಿದುಕೊಂಡು ತಿನ್ನಬೇಕು. ಅಷ್ಟು ಸ್ವಚ್ಛ….
ಹಜಾಮರ ಲಗಮ ಭಾಷಣಕ್ಕೆ ಅಡ್ಡಿಮಾಡಿದ್ದೇ ಈ ಭಾಗದಲ್ಲಿ. ಅವನಿಗಾಗಲೇ ಸಭಿಕರು ಸುಮ್ಮನೆ ಕೂತಿದ್ದಕ್ಕೆ ಆಶ್ಚರ್ಯವಾಗಿತ್ತು. ತಡೆಯದೇ ಎದ್ದುನಿಂತು…
“ಅಲ್ಲಪಾ ಗುಡಸೀಕರ, ಬೆಳಗಾಂವಿ ಮಂದಿಗೇನೂ ಸಾಕಷ್ಟು ತುಪ್ಪ ಸಿಗತೈತಿ, ರಸ್ತಾದ ಮ್ಯಾಲ ಚೆಲ್ಲಿ ನೆಕ್ಕಿ ತಿಂತಿದ್ದಾರು. ನಮಗೆ ತಿನ್ನಾಕs ತುಪ್ಪಿಲ್ಲ. ಇನ್ನ ರಸ್ತಾದ ಮ್ಯಾಲ ಯಕ ಚೆಲ್ಲೋಣು?” ಅಂದ. ಇಂಥ ಅಜ್ಞಾನಕ್ಕೆ ಏನು ಹೇಳಬೇಕು?
“ಅಲ್ಲಲೇ, ಬೇಳಗಾಂವ್ಯಾಗಿನ ರಸ್ತಾ ಎಷ್ಟು ಹಸನ ಇರ್ತಾವಂತ ಹೇಳಾಕ ಹೇಳಿದೆ” ಎಂದ ಗುಡಸೀಕರ.
“ಹೌಂದಪಾ ತುಪ್ಪಾ ಚೆಲ್ಲಿ ಚೆಲ್ಲಿ ನೆಕ್ಕತಾರ: ಅದಕ್ಕs ರಸ್ತಾ ಹಸನ ಇರ್ತಾವ. ನಾವ್ಯಾಕ ಹಾಂಗ ಮಾಡಬೇಕು?”
“ಏ ಲಗಮಾ, ಬಾಯಿ ಮುಚ್ಚಿಕೊಂಡ ಕುಂದರಲೇ?”
– ಎಂದು ಹೇಳಿ ಮತ್ತೆ ಭಾಷಣ ಸುರುಮಾಡಿದ. ಮುಂದೆ ಏನೇನು ಹೇಳಿದನೋ! ದತ್ತಪ್ಪ ಒಳಗೊಳಗೇ ನಗುತ್ತಿದ್ದ. ಆದರೆ ಉಳಿದ ಮಂದಿ ಲಗಮ ಹೇಳಿದ್ದೇ ಬರೋಬ್ಬರಿ ಎಂದರು. ರಸ್ತೆಯ ಮೇಲೆ ತುಪ್ಪ ಚೆಲ್ಲಿ ನೆಕ್ಕುವದೆಂದರೇನು? ಯಾವುದೋ ಒಂದು ಜಾತಿಯವರು ಹಾಗೆ ಮಾಡುತ್ತಿದ್ದಾರು. ಅದು ದೇವರ ಹರಕೆ ಇದ್ದೀತು. ಕುಲದ ಪದ್ಧತಿ ಇದ್ದೀತು. ಅದು ನಮ್ಮ ಕುಲದ ಪದ್ಧತಿಯಲ್ಲಿಲ್ಲ. ಎಂದಮೇಲೆ ನಾವ್ಯಾಕೆ ನೆಕ್ಕಬೇಕು? ಇವರ ವಿಚಾರಧಾರೆ ನಿಂತದ್ದು ಗುಡಸೀಕರನ “ನಮ್ರ ಸೂಚನೆ” ಕೇಳಿ ಬಂದಾಗ:
“ಈ ಊರನ್ನ ನಾವು ಬೆಳಗಾವಿಯಂತೆ ಸ್ವಚ್ಛವಾಗಿಡಬೇಕು. ಆದ್ದರಿಂದ ನಾವೀಗ ದಿನಾಲು ಊರು ಗುಡಿಸುವವರನ್ನು ನೇಮಿಸಿಕೊಳ್ಳುತ್ತೇವೆ. ಅದಕ್ಕಾಗಿ ಮನೆಗೆ ಒಂದೊಂದು ರೂಪಾಯಿ ತೆರಿಗೆ ಕೊಡಬೇಕು.
ತೆರಿಗೆ ಮಾತು ಬಂತೋ ಇಲ್ಲವೋ? – ಒಬ್ಬೊಬ್ಬರೇ ಎದ್ದು ಕುಂಡಿ ಜಾಡಿಸಿಕೊಳ್ಳುತ್ತ ಹೊರಟರು. ಗುಡಸೀಕರ ಒಬ್ಬಿಬ್ಬರ ಹೆಸರು ಹಿಡಿದು ಕೂಗಿ ಕೂರಿಸಲೆತ್ನಿಸಿದ. “ಇಕ್ಕಾ ಬರ್ತೀನಿ” ಎಂದು ಹೇಳುತ್ತ ಹೊರಟು. ಇದ್ದವರನ್ನಾದರೂ ಕೂರಿಸಬೇಕಾದರೆ ದತ್ತಪ್ಪ ಏಳಬೇಕಾಯಿತು.
“ಅಲ್ಲಪಾ ಗುಡಸೀಕರ, ಮನೀಗೊಂದೊಂದ ರೂಪಾಯಿ ಕೊಡೋ ಬದಲು, ಎಲ್ಲಾರೂ ತಮ್ಮತಮ್ಮ ಮನೀ ಅಂಗಳಾ ತಪ್ಪದ ಗುಡಿಸಿಕೊಂಡರೆ ಹೆಂಗ?”
– ಎಂದ. ಕೂತವರೆಲ್ಲ, “ಹೌದೆಂಬೋ ಮಾತಿದು” ಎಂದು ಕೂಡಲೇ ಮೆಚ್ಚುಗೆ ಸೂಚಿಸಿದರು. ಗುಡಸೀಕರನಿಗೆ ಅವಮಾನವಾಯ್ತು.
“ಅಲ್ಲರೀ ಪಂಚಾಯ್ತಿ ಆಫೀಸಂದರ ಅದಕ್ಕೊಬ್ಬ ಸಿಪಾಯಿ ಬೇಕು. ವಾರಕ್ಕೆರಡು ಬಾರಿ ಮೀಟಿಂಗ್ ಇರ್ತಾವ. ಅದರ ಲೆಕ್ಕಪತ್ರ ಬರ್ಯಾಕ ಒಬ್ಬ ಕಾರಕೂನ ಬೇಕು ಅದೆಲ್ಲಾ ಖರ್ಚು ಎಲ್ಲಿಂದ ತರಬೇಕು?” – ಎಂದ. ಜನ ಹುಚ್ಚರೋ? “ಓಹೋ ಇವರು ದಿನಾಲೂ ಮೀಟಿಂಗ್ (ಇಸ್ಪೀಟಾಟ) ಮಾಡ್ತಾರಲ್ಲಾ; ಆ ಲೆಕ್ಕ ಬರಕೊಳ್ಳಾಕ ಒಬ್ಬ ಕಾರಕೂನ, ಚಾ ಮಾಡಿಕೊಡಾಕ ಒಬ್ಬ ಸಿಪಾಯಿ ಬೇಕಂತ. ಹೋ ಹೊ ಹೊ” ಎನ್ನುತ್ತ ಉಳಿದವರೂ ಹೋಗಿಬಿಟ್ಟರು.
ಸಭಿಕರ ಪೈಕಿ ಈಗ ಉಳಿದವರೆಂದರೆ ಪ್ರಾರ್ಥನಾ ಪದ್ಯ ಹೇಳಿದ ಹುಡುಗರು; ಪಾಪ. ಎದ್ದುಹೋದರೆ ಮಾಸ್ತರ ಹೊಡೆಯುತ್ತಾನೆಂದು ಅವು ಎರಡು ಘಂಟೆಯಿಂದ ಕೈ ಕಟ್ಟಿಕೊಂಡು ಹೆದರಿ ಕಣ್ಣು ಕಿಸಿದುಕೊಂಡೇ ಕೂತಿದ್ದವು. ಇನ್ನೊಬ್ಬ ಪ್ರಶ್ನೋತ್ತರ ಮಾಸ್ತರ. ಗುಡಸೀಕರನಿಗೆ ಅವಮಾನವಾಗಿರಬಹುದು. ಆದರೆ ಹಿಂದಿನ ಸಾಲಿನಲ್ಲಿ ಮಾಲೆ ಹಾಕಿಕೊಂಡು ಕೂತ ಕಳ್ಳ ಸಿದ್ದರಾಮನಿಗೆ ಮಾತ್ರ ನಿರಾಸೆಯಾಯಿತು. ಯಾಕೆಂದರೆ ಅವನೇ ಕೊನೆಗೆ ವಂದನಾರ್ಪಣೆ ಮಾಡಬೇಕಾದ್ದು. ಮಾಸ್ತರರಿಂದ ಬರಸಿಕೊಂಡು ಈಗ ೧೫ ದಿನಗಳಿಂದ ಬಾಯಿಪಾಠ ಮಾಡಿದ್ದ. ಅದು ಹತ್ತು ಪುಟದಷ್ಟಿತ್ತು. ಮೊದಲಿನ ಐದು ಪುಟಗಳಲ್ಲಿ ಗುಡಸೀಕರನ ವರ್ಣನೆಯೂ, ಆರನೇ ಪುಟದಲ್ಲಿ “ನಮ್ಮ ಜನನಾಯಕನಾದ ಗುಡಸೀಕರ ಸಾಹೇಬರಿಗೆ ಅಪಾರ ಬೆಂಬಲ ಸೂಚಿಸಿದ್ದಕ್ಕೆ ಜನಗಳಿಗೆ ವಂದನಾರ್ಪಣೆಯೂ” ಇತ್ತು.
Leave A Comment