ಗುಡಸೀಕರ ಇತ್ತೀಚೆಗೆ ಕರಗಿದ್ದನ್ನು ಬಸವರಾಜು ಗಮನಿಸಿದ್ದ. ಇವನ ಗುಡಿಸಲ ಕಡೆ ಅವ ಬರಲೂ ಇಲ್ಲ. ದಾರಿ ನೋಡಿ ನೋಡಿ ಬಸವರಾಜೂ ತಾನೇ ತೋಟದ ಕಡೆ ಬಂದ. ಗುಡಸೀಕರ ಕೆಲಸ ಮಾಡಿಸುತ್ತಿದ್ದ. ಇಬ್ಬರೂ ಬಹಳ ಹೊತ್ತು ಮಾತಾಡಲಿಲ್ಲ. ಆಮೇಲೆ ಬಸವರಾಜೂ ತನ್ನ ಶಕ್ತಿಯುಕ್ತಿಗಳನ್ನೆಲ್ಲ ಉಪಯೋಗಿಸಿ ಗೌಡನೊಡನಾದ ಮಾತುಕತೆಗಳನ್ನು ಹೊರಡಿಸಿದ. ಗೌಡನ ಪ್ರಭಾವದಿಂದ ಗುಡಸೀಕರನನ್ನು ಹೊರಕ್ಕೆಳೆಯುವುದು ಕಷ್ಟವೇ. ಅದಕ್ಕಾಗಿ ಭಾವುಕನಂತೆ ಅಭಿನಯಿಸಿದ, ಎಲ್ಲೀ ಗೌಡ? ಎಲ್ಲೀ ಮುದುಕಪ್ಪ? ಯಾವುದಕ್ಕ ಯಾರ ಬಲಿ? ಎಂದು ಆಳಾಪ ಮಾಡಿದ. ಗೌಡನಿಗೆ ನಿನ್ನ ಬಗ್ಗೆ ಅಕರತೆ ಇದ್ದದ್ದೇ ನಿಜವಾದರೆ ಈತನಕ ಯಾಕೆ ಸುಮ್ಮನಿದ್ದ? ಈಗ ಸಿಕ್ಕುಬಿದ್ದಿದ್ದಾನೆ. ಎಡೆಕರೆ ಹೊಲ ಕಕ್ಕಬೇಕು. ಸಲದ್ದಕ್ಕೆ ಊರವರ ಮುಂದೆ ಅವಮಾನವಾಗಿದೆ. ಈಗ ಅವನಿಗಿರುವ ಉಪಾಯ ಒಂದೇ: ನಿನ್ನನ್ನು ಬುಟ್ಟಿಗೆ ಹಾಕಿಕೊಳ್ಳುವುದು. ನೀನೋ ಹಗುರ  ಮನಸ್ಸಿನವನು… ಹೀಗೇ ಗಾಂಧಿ, ಹಳ್ಳಿ, ಜನನಾಯಕ, ಏನೇನೋ ಅಂದ. ಏನಂದರೂ ಗುಡಸೀಕರನಲ್ಲಿ ಸರಪಂಚ ಮೂಡಲೇ ಇಲ್ಲ.

ಇತ್ತ ಬಹಿಷ್ಕಾರದಿಂದ ಯಾರೂ ವಿಚಲಿತರಾಗಲಿಲ್ಲ. ಸುಂದರಿಗೂ ಇದರಿಂದೇನಾಗಬೇಕಿದೆ? ಕುಲದವಳಲ್ಲ; ಹೆಣ್ಣು ಗಂಡು ಆಗಬೇಕಾದ್ದಿಲ್ಲ. ತಿರುಗಿ ಕೇಳಿದರೆ ಊರವಳಲ್ಲ. ಕೆಲಸಕ್ಕಂತೂ ಹೋಗಬೇಕಾದ್ದಿಲ್ಲ. ಆದರೆ ಬಹಿಷ್ಕಾರದ ಕಹಿ ಅನುಭವ ಗುಡಸೀಕರನಿಗೆ ಆಮೇಲೆ ಆಗತೊಡಗಿತು. ಚತುಷ್ಟಯರು ಹೇಳಿ ಕಳಿಸಿದರೂ ಭೇಟಿಯಾಗದೆ ನೆಪಹೇಳಿ ತಲೆ ತಪ್ಪಿಸಿಕೊಳ್ಳತೊಡಗಿದರು. ತೋಟದ ಕೆಲಸಕ್ಕೆ ಆಳುಗಳು ಸಿಗದಾದರು. ಎದುರು ಬಂದರೂ ಜನ ಮಾತಾಡಿಸದಾದರು. ಗಂಡಸಾದ ಇವನಿಗೇ ಈ ರೀತಿ ಅನುಭವ ಬರಬೇಕಾದರೆ ಅವನ ತಾಯಿ – ತಂಗಿಯರ ಸ್ಥಿತಿ ಕೇಳುವುದೇ ಬೇಡ. ಇವನ ಮುಖ ನೋಡಿದೊಡನೆ ತಾಯಿ ಮುಖಕ್ಕೆ ಸೆರಗುಹಾಕಿ ಆಳುತ್ತಿದ್ದಳು. ಗುಡಸೀಕರ ಕೊನೆಗೆ  ಬಸವರಾಜನೊಂದಿಗೆ  ಆಪ್ತವಾಗಿ ಮಾತಾಡಿದ. ಸುಂದರಿಯನ್ನು ಕಳಿಸಿದ ಹೊರತು ಗತಿಯಿಲ್ಲವೆಂದ.

ಸುಂದರಿಯನ್ನು ಒಪ್ಪಿಸಬೇಕಾದರೆ ಕುರಿಕೋಣ ಬೀಳಬೇಕಾಯಿತು. ನಿಜ ಏನಿತ್ತೋ, ಹೊರಗೆ ಮಾತ್ರ ಬಸಿರಾದದ್ದು ಗುಡಸೀಕರನಿಗೇ ಎಂಬಂತಿದ್ದಳು. ಮದುವೆ ಹೆಂಡತಿಯಂತೆ ತನ್ನನ್ನು ನಡೆಸಿಕೊಳ್ಳಬೇಕಾದ್ದಿಲ್ಲ. ಅವ ಬೇಕಾದರೆ ಬೇರೆ ಮದುವೆಯಾಗಲಿ, ತನ್ನನ್ನು ಈಗಿದ್ದಂತೆ ಇಟ್ಟುಕೊಂಡರೆ ಸಾಕು, ಎಂದು ಒಂದೆರಡು ಬಾರಿ ಹೇಳಿದ್ದಳು. ಗುಡಸೀಕರ ಸ್ವಲ್ಪ ಹೃದಯ ತೆರೆದು ಮಾತಾಡಿದರೆ ತನ್ನನ್ನು ಧಾರೆಯೆರೆಯಲು ಸಿದ್ಧಳಾಗಿದ್ದಂತೆ ಅಭಿನಯಿಸಿದಳು. ಗೌಡನ ಬಾಗಿಲಲ್ಲಿ ಹೋಗಿ ಕೂರು ಎಂದು ಬಸವರಾಜು ಹೇಳಿದಾಗ ಅವಳೊಪ್ಪಿದ್ದೇ ಈ  ಕಾರಣಕ್ಕೆ. ಈ ಮೂಲದಿಂದಾದರೂ ಅವನಿಗೆ ತನ್ನ ಪ್ರೀತಿ ಖಾತ್ರಿಯಾಗಲಿ ಎಂದು.

ಈಗ ಊರು ಬಿಡುವ ಯೋಜನೆ ಬಸವರಾಜು ಹೇಳಿದೊಡನೆ ಕಂಗಾಲಾದಂತೆ ಅಭಿನಯಿಸಿದಳು. ಗುಡಸೀಕರನ ಕಾಲು ಹಿಡಿದಳು. ನೀನೇ ಬಂದು ಗರ್ಭ ತೆಗೆಸು ಎಂದಳು. ನನಗೆ ನಿನ್ನ ಬಿಟ್ಟು ಯಾರೂ ದಿಕ್ಕಿಲ್ಲ. ಹಿಂದಿಲ್ಲ, ಮುಂದಿಲ್ಲ ಕಾಣಾ ಕಾಣಾ ನನ್ನನ್ಯಾಕೆ ಅಡವೀ ಹೆಣ ಮಾಡುತ್ತೀ – ಎಂದಳು. ಒಂದೆರಡು ದಿನ ಬೆಳಗಾವಿಯಲ್ಲಿದ್ದು ಗರ್ಭ ತೆಗೆಸಿಕೊಂಡು ಬರುವುದೆಷ್ಟೊ ಅಷ್ಟೆ – ಎಂದು ಸಮಾಧಾನ ಮಾಡಿದರು. ಹೋಗುವಾಗ ಮತ್ತೆ ಮತ್ತೆ ಗುಡಸೀಕರನ ಕಾಲು ಹಿಡಿದಳು. ಕಣ್ಣೀರಿನಿಂದ ಅವನ ಪಾದ ತೋಯ್ಸಿದಳು. ಕಾಲು ತಬ್ಬಿಕೊಂಡು ಅತ್ತಳು. ಕೊನೆಗೆ ಹೋಗಲೇಬೇಕಾಯಿತು; ಹೋದಳು. ಅವಳು ಹೋದದ್ದು ಗೊತ್ತಾಗಿ ಚತುಷ್ಟಯರು ಮೆಲ್ಲಗೆ ಅವನ ತೋಟದ ಕಡೆ ಸುಳಿದರು. ಜನ ಮಾತಾಡಿಸಿದರು. ಆಳು ಸಿಕ್ಕರು. ಜೀವನವೇನೋ ಯಥಾ ಸಾಂಗ ಸಾಗಿತ್ತು. ಆದರೆ ಹುಡುಗ ದಿನಕ್ಕಿಂತ ಹೆಚ್ಚು ಒಂಟಿಯಾದ. ಅದೇ ಮನೆ, ಅದೇ ತೋಟ, ಅದೇ ಜನ – ಥೂ ಎಂದು ಕುಡಿದ, ಸೇದಿದ, ಮಲಗಿದ, ಬಂದ. ಚತುಷ್ಟಯರೇನೋ ಆಗಾಗ ಬರುತ್ತಿದ್ದರು, ಅವರೊಂದಿಗೆ ಎದೆ ಬಿಚ್ಚಿ ಮಾತಾಡಲಾಗುತ್ತಿರಲಿಲ್ಲ, ನಿಂತು ನಿಂತು ಅವರೇ ಹೋಗುತ್ತಿದ್ದರು. ಈ ಮಧ್ಯೆ ಎಲೆಕ್ಷನ್ನಿಗೆ ನಿಲ್ಲುವವರು ತಮ್ಮ ಹೆಸರು ನಮೂದಿಸಬೇಕೆಂದು ಸರ್ಕಾರಿ ಕಾಗದ ಬಂತು. ಕಳ್ಳನ ಮೂಲಕ ಆ ಕಾಗದವನ್ನು ದತ್ತಪ್ಪನಿಗೆ ಕಳುಹಿಸಿಕೊಟ್ಟು ಸುಮ್ಮನೆ ಕೂತ. ಒಂದೆರಡು ದಿನಗಳಲ್ಲಿ ಹಳೆ ಹಿರಿಯರೆಲ್ಲ ಗೌಡನ ನೇತೃತ್ವದಲ್ಲಿ ಚುನಾವಣೆಗೆ ಹುರಿಯಾಳುಗಳಾಗಿ ತಮ್ಮ ಹೆಸರು ಕೊಟ್ಟದ್ದು ತಿಳಿದುಬಂತು. ಆಗಲೂ ಕೆಡುಕೆನಿಸಲಿಲ್ಲ. ಸಿಟ್ಟೂ ಬರಲಿಲ್ಲ. ಬಹಳವಾದರೆ ಆ ದಿನ ಹೆಚ್ಚಾಗಿ ಕುಡಿದ.

ಹೆಸರು ಕೊಡಲಿಕ್ಕೆ ಇನ್ನೊಂದು ದಿನದ ಅವಧಿಯಿತ್ತು. ಆ ದಿನ ಇಳಿ ಹೊತ್ತಿನಲ್ಲಿ ನಟಕೀಯವಾದ ರೀತಿಯಲ್ಲಿ ಗುಡಸೀಕರನ ತೋಟದ ಗುಡಿಸಲಿಗೆ ಬೆಂಕಿ ಬಿತ್ತು. ಗುಡಸೀಕರ ಅಲ್ಲೇ ಮಲಗಿದದವನು ಎದ್ದು ಪಾರಾದ. ಹಾನಿ ಹೆಚ್ಚಾಗಲಿಲ್ಲ. ಸುತ್ತಲಿನ ಜನ ಸೇರಿ ಆಗಿಂದಾಗ ನಂದಿಸಿದರು. ಆದರೆ ಗುಸೀಕರ ಗಾಬರಿಯಾದ. ಹಲ್ಲು ಮುರಿದ ಹಾವಿನಂತಾದ. ತನ್ನ ಸ್ಥಿತಿ ನೆನೆದು ಸಂತಾಪಗೊಂಡ. ಅದೇ ಸಮಯಕ್ಕ ಸರಿಯಾಗಿ ಬಸವರಾಜು ಬೆಳಗಾವಿಯಿಂದ ಬಂದಿಳಿದ.

ಬಂದವನು ರಾತ್ರಿ ತಾನೇ ಹೋಗಿ ಚತುಷ್ಟಯರನ್ನು ಗಿಡಿಸಲಿಗೆ ಕರೆತಂದ. ಆಘಾತದಲ್ಲಿದ್ದ ಗುಡಸೀಕರನನ್ನು ಸಾಂತ್ವನಗೊಳಿಸಿ ಒತ್ತಾಯದಿಂದ ಕರೆದು ತಂದ, ತಾನು ಈಗಷ್ಟೆ ಬೆಳಗಾವಿಯಿಂದ ತಂದ “ಫಾರಿನ್ ಭಿರಂಡಿ” ತೆರೆದ. ನಡೆದ ವಿದ್ಯಮಾನ ಅವನಿಗೆ ತಿಳಿಯದ್ದೇನಿದೆ? ಯಾಕೆಂದರೆ ಗುಡಸೀಕರನ ಗುಡಿಸಲಿಗೆ ಬೆಂಕಿ ಹಚ್ಚಿದವನೇ ಅವನು. ಯಾರಿಗೂ ಗೊತ್ತಾಗದಂತೆ ಮಾಡಿದ್ದ. ಅಷ್ಟೇ. ಗೊತ್ತಾಗುವ ಹಾಗೆ ಬೆಂಕಿ ಹಚ್ಚುವದಾದರೆ ಅದು ಬಸವರಾಜಿನಿಂದಲೇ ಯಾಕಾಗಬೇಕು? ಅದು ಇದು ಮಾತನಾಡುತ್ತ ಯಥಾವತ್ ಮೀಟಿಂಗ್ ಸುರುಮಾಡಿದ. ಒತ್ತಾಯ ಗುಡಸೀಕರನಿಗೆ ಕೈಯಾರೆ ಬ್ರಾಂದಿ ಕುಡಿಸಿ ತಾನೂ ಎಂಜಲು ಹೀರಿದ. ಪರದೇಶೀ ದೇವರನ್ನು ಎಲ್ಲರಿಗೆ ಹಂಚಿದ. ತನ್ನದನ್ನು ಎತ್ತಿಕೊಂಡು, ಗುಡಸೀಕರ ಸಾಹೇಬರ್ನ ಈ ಗತಿಗೆ ತಂದಿರಲ್ಲ,  ಆ ಸಂತೋಷಕ್ಕೆ ಕುಡಿಯಿರಂದು ತಾನೇ ಒಂದು ಗುಟುಕು ಹೀರಿ ಮುದಿ ಹೆಂಗಸಿನಂತೆ ಗಳಗಳ ಅಳತೊಡಗಿದ ಬಸವರಾಜು. ಚತುಷ್ಟಯರಿಗೆ ಕುಡಿಯಬೇಕೋ, ಬಿಡಬೇಕೋ ಒಂದೂ ಹೊಳೆಯಲೊಲ್ಲದು. ಮಿಕಿಮಿಕಿ ಮುಖ ನೋಡುತ್ತ ಕೂತರು.

“ಗೌಡ ಸುಂದರಿಗೆ ಬಹಿಷ್ಕಾರ ಹಾಕಿದಾಗ ಮಂದೀ ಜೊತೆ ನೀವೂ ಗುಡಿಸಲ ಕಡೆ ಸುಳಿಯಲಿಲ್ಲವೆಂದು ಚತುಷ್ಟಯರನ್ನು ಬೈದ. ನಾಲಾಯಖರೆಂದ. ತಾಯ್ಗಂಡರೆಂದ. ಒಂದು ಕಡೆ ಬ್ರಿಟಿಷರು. ಇನ್ನೊಂದು ಕಡೆ ಗಾಂಧೀಜಿ. ಗೌಡನ ಪಾರ್ಟಿ ಬ್ರಿಟಿಷರಿದ್ದಂತೆ. ಗುಡಸೀಕರ ಗಾಂಧೀಜಿಯಿದ್ದಂತೆ. ಬ್ರಿಟಿಷರನ್ನೋಡಿಸಿ ಹಳ್ಳಿಗೆ ಸ್ವಾತಂತ್ರ್ಯ ತಂದುಕೊಡುವ ಪವಿತ್ರಕಾರ್ಯ ಗುಡಸೀಕರ ಮಾಡಿದ್ದು. ಆದರೆ ಅವನ ನಾಯಕತ್ವದಲ್ಲಿ ದುಡಿಯುವ ಯೋಗ್ಯತೆ ನಿಮಗಿಲ್ಲ. ನೀವೆಲ್ಲಾ ಗಂಡಿಗ್ಯಾಗೋಳ್ರೋ. ನೀವ ಗಂಡಸರಾಗಿದ್ದರ ಇಂದು ಗುಡಸೀಕರ ಸಾಹೇಬರ ಗುಡಿಸಲಕ್ಕ ಬೆಂಕೀ ಹಚ್ಚೋ ಧೈರ್ಯ ಯಾವನಾದರೂ ಮಾಡುತ್ತಿದದನೇನ್ರೋ” ಎನ್ನುತ್ತ ಪಕ್ಕದ ರಮೇಸನನ್ನು ಕೂಸಿನಂತೆ ಅವುಚಿಕೊಂಡು ಇನ್ನಷ್ಟು ಅತ್ತ. ಅವನನ್ನು ನೋಡಿ ಗುಡಸೀಕರನ ಕಣ್ಣಾಲಿಯಲ್ಲೂ ನೀರಾಡಿತು. ಗುಡಸೀಕರನೊಳಗೆ ಆಗಲೇ ನಸೆ ಉಕ್ಕತೊಡಗಿತ್ತು. ಸುಂದರಿಯನ್ನು ಹಿಂದಿರುಗಿ ಕಳಿಸಿದ್ದು ನಮ್ಮ ಸೋಲನ್ನು ಒಪ್ಪಿಕೊಂಡಂತಾಯಿತೆಂದ. ಇಡೀ ಊರಿಗೆನ ಗೊತ್ತಗುವಂತೆ ಸೋಲೊಪ್ಪಿದ ಮ್ಯಾಲೆ ಚುನಾವಣೆ ಯಾವ ಧಿಮಾಕಿಗೆ ಬೇಕು? “ ಈಗ ಸುಂದರಿ ಇರಬೇಕಾಗಿತ್ತೋ ಬಸವರಾಜೂ” ಎಂದು ಅಳುದನಿಯಲ್ಲಿ ರಾಗ ತೆಗೆದ. ಚತುಷ್ಟಯರಿಗಾಗಲೇ ಪಶ್ವಾತ್ತಾಪವಾಗಿತ್ತು. ಆದರೆ ಏನು ಹೇಳಬೇಕೆಂದು ಹೊಳೆಯಲೊಲ್ಲದು. ಈಗ ಕಣ್ಣೀರು ಸುರಿಸುವುದೇ ಯೋಗ್ಯವೆಂದು ಕಳ್ಳನ ಕಳ್ಳಬುದ್ಧಿಗೆ ಹೇಗೆ ಹೊಳೆಯಿತೋ – ‘ಏನೇ ಬರಲಿ ಒಗ್ಗಟ್ಟಿರಲಿ’ ಎಂದು ಹೇಳುತ್ತ ಅವನೂ ಅಳತೊಡಗಿದ. ಬಸವರಾಜು ಬಿಡಲಿಲ್ಲ. ಯಾಕೋ? ಒಗ್ಗಟ್ಟಿರಬೇಕು? ಎಲೆಕ್ಷನ್ನಿಗೆ ನಿಂತು ಒಟ್ಟಾಗಿ ದುಡಿಯೋದಾದರೆ ಒಗ್ಗಟ್ಟು ಬೇಕು. ಇಲ್ಲದಿದ್ದರೆ ಅದೇನು ಪ್ರಯೋಜನ? ಈತನಕ ಸುಮ್ಮನೇ ಕೂತಿದ್ದ ಮೆರೆಮಿಂಡನಿಗೆ ಅದೇನು ಸ್ಫೂರ್ತಿ ಉಕ್ಕಿತೋ. ಎದ್ದವನೇ ಮಂಡೆಗಾಲೂರಿ “ಈಗೇನಾಗೇತಿ? ಹೆಸರು ಕೊಡಾಕ ಇನ್ನ ಒಂದ ದಿನ ಐತಿ. ನಾಳಿ ಎಲ್ಲರೂ ಹೋಗಿ ಹೆಸರ ಕೊಟ್ಟ ಬರೋಣು” ಎಂದ. ‘ಥೂ’ ಎಂದು ಬಸವರಾಜು ವೀರಾವೇಶದಿಂದ ಉಗುಳಿದ. ‘ಏನಂತ ನಂಬಬೇಕ್ರೋ ನಿಮ್ಮನ್ನ? ಗಂಡಸರಂತೂ ಅಲ್ಲ, ನಿಂಗೂನ ಹಾಗೆಯೂ ಅಲ್ಲ, ಯಾಕೆಂದರಿ ರೋಬಾ ರೋಬ ಸೀರೀ ಉಟ್ಟ ಅಡ್ಡಾಡತಾನ. ನಿಮಗ ಆ ತಾಕತ್ತ ಇಲ್ಲ! – ಹೀಗೆ ಮಾತಿನಲ್ಲಿ ಚತುಷ್ಟಯರನ್ನು ಒಂದೊಂದೇ ಹಂತ ಕೆಳಗಿಳಿಸುತ್ತ ಹುಳ ಮಾಡಿದ. ಕಾಲಕಸ ಮಾಡಿದ. ಕೊನೆಗೆ ಕಸಕ್ಕಿಂತ ಕಡೆ ಅಂದ. ಅವರೂ ಹಾಗೆ ಕೂತರು.

ಒಂದಷ್ಟು ಸಮಯ ಯಾರೂ ಮಾತಾಡಲಿಲ್ಲ. ತಿರುಗಾ ಮುರುಗಾ ಬಸವರಾಜು ಮತ್ತು ಗುಡಸೀಕರ ಇಬ್ಬರೇ ಕುಡಿಯುತ್ತಿದ್ದರು. ವಾತಾವರಣ ದರಿದ್ರವಾಗುತ್ತಿತ್ತು. ಬಸವರಾಜು ಇದನ್ನು ನರೀಕ್ಷಿಸಿರಲಿಲ್ಲ, ಕೂಡಲೇ ಪಕ್ಕದ ರಮೇಸನ ಬೆನ್ನಮೇಲೆ ಚಪ್ಪನೆ ಒಂದೇಟು ಹೊಡೆದು “ಏನಂತಿ?” ಅಮದ. ಅವನೇನೂ ಅನ್ನಲಿಲ್ಲ. ಮತ್ತೆ ತಾನೇ ಅನ್ನತೊಡಗಿದ. ಊರ ಮಂದೀನ್ನ ಇದುರು ಹಾಕಿಕೊಂಡು ಎಲೆಕ್ಷನ್ನಿಗೆ ನಿಲ್ಲತಿರೇನು? ಅಷ್ಟ  ಗಂಡಸತನ ಇದ್ದರ ಕುಡೀರೆಂದು ಆಜ್ಞೆಮಾಡಿದ. ಆಸೆ ಹತ್ತಿಕ್ಕಿಕೊಂಡು ಉಳಿದವರು ಸುಮ್ಮನೇ ಕೂತರು. ಕೊನೆಗೂ ಕಳ್ಳ ನಿರ್ಧರಿಸಿಯೇ ಬಿಟ್ಟ.

“ತತಾ ನಾ ಗಂಸಾಗತೇನ.”

ಎಂದು ಬಟ್ಟಲಿಗೆ ಕೈ ಹಾಕಿದ. ಬಸವರಾಜು ಅವನ ಬಟ್ಟಲ ಮೇಲೆ ಕೈ ಇಟ್ಟು “ಕರಿಮಾಯೀ ಆಣೀ ಮಾಡು” ಎಂದ, ಹುದಲಿನಲ್ಲಿ ಸಗಬೀಳುತ್ತಿದ್ದುದರ ಅರಿವಾಯಿತು ಕಳ್ಳನಿಗೆ. ಈ ತನಕ ಬರೀ ಅರಳಿಗಂಟಿನ ಮೇಲೆ ಲಾಗಾ ಹಾಕಿದವ. ಹಾಕಿದ ಲಾಗಗಳಿಗೆ ಹೆಸರಂಟಿಸಿಕೊಂಡವ. ಕರಿಮಾಯಿಯ ಆಣೆ ಹುಡುಗಾಟಿಕೆಯ ಮಾತಲ್ಲ. ಅವಳ ಆಣೆ ಮಾಡುವುದೂ ಪದರಿನಲ್ಲಿ ಬೆಂಕಿ ಕಟ್ಟಿಕೊಳ್ಳುವುದೂ ಒಂದೇ, ಬಸವರಾಜು ಹತ್ತು ಕೇಳಬಹುದು. ಗುಡಸೀಕರ ಹತ್ತಕ್ಕೂ ಕತ್ತು ಹಾಕಬಹುದು. ಅವನಿಗೇನು ಹಿಂದೆ ಹೇಳವವರಿಲ್ಲ. ಮುಂದೆ ಕೇಳವವರಿಲ್ಲ. ಮನೆಯ ಮುಂಬಗಿಲಿನಿಂದ ಹಿತ್ತಲ ಬಗಿಲ ತನಕ ಅವನದೇ ಕಾರುಭಾರ. ತನಗಾದರೆ ಹೇಳ ಕೇಳುವ ಹಿರಿಯರಿದ್ದರು. ಹಿಂದೆ ಕರಿಮಾಯಿಯ ಸುದ್ದಿ ಬಂದಾಗ ಬಸವರಾಜೂನ ಜೊತೆ ಇವನೂ ನಕ್ಕಿದ್ದನೇನೋ ಹೌದು, ಆದರೆ ಆಣೆ ಮಾಡುವುದು ಬಂದೊಡನೆ ಹೆದರಿದ. ಇವರ ಮುಲ ಹಿಡಿದಷ್ಟು ಸಂತೋಷವಾಯ್ತು ಬಸವರಾಜನಿಗೆ. ಗುಡಸೀಕರನಿಗೆ ನಿರಾಸೆಯಾಯ್ತು. “ಇದೇನು ಆಗೋ ಮಾತಲ್ಲ, ಹೋಗೋ ಮಾತಲ್ಲ. ಬಿಡೋ ಬಸವರಾಜು” ಎಂದ. ಬಸವರಾಜು ಬಿಡಲಿಲ್ಲ. ಬಾಯಿ ಹಾಕಿದ. ಇನ್ನೊಂದು ಭಾಷಣ ಬಿಗಿದ. ದೇವತೆಗಳು ರಾಕ್ಷಸರ ಉದಾಹರಣೆ ಕೊಟ್ಟ. ಇದು ಕರಿಮಾಯಿಯ ಹೆಸರಿನಲ್ಲಿ ನಡೆಯುವ ಧರ್ಮಯುದ್ಧವೆಂದ. ಗೌಡ ದತ್ತಪ್ಪನಂತ ದೈತ್ಯರು ಜನರನ್ನು ಹೇಗೆ ಸುಲಿಯುತ್ತಿದ್ದಾರೆ ಇಂಥವರನ್ನ ಓಡಿಸಲು ತಾಯಿ ಕರಿಮಾಯಿಯೇ ಗುಡಸೀಕರನನ್ನು ಕರೆಸಿಕೊಂಡದ್ದಾಗಿಯೂ ಹೇಳಿದ. ಕರಿಮಾಯಿಯ ಅವನ ವರ್ಣನೆ ಕೇಳಿ ಕಳ್ಳ ಕಣ್ಣೀರು ತಂದ. ಏನು ಮಾಡುತ್ತಿದ್ದೇನೆಂದು ಗೊತ್ತಲ್ಲದೆ ಕಣ್ಣಲ್ಲಿ ಬಸವರಾಜೂನನ್ನೇ ಇಂಗಿಸಿಕೊಳ್ಳುತ್ತ ಕೆಳಕ್ಕೆ ನೆಲ ಬಡಿಯುತ್ತ,

“ಕರಿಮಾಯೀ ಆಣಿ, ಸರಪಂಚರ ಬೆನ್ನಿಗಿ ನಿಲ್ಲತೇನ ಕೊಡ” ಅಂದ. ಖಂಡಿತ ಅವನು “ಭಿರಂಡಿ”ಯ ಆಸೆಗಾಗಿ ಈ ಮಾತು ಆಡಿಲ್ಲವೆಂದು ಖಾತ್ರಿಯಾಯ್ತು. ಬಸವರಾಜು ತಕ್ಷಣ ಹೋಗಿ ಕಳ್ಳನನ್ನು ತಬ್ಬಕೊಂಡು ತಾನೇ ಕೈಯಾರೆ ಕುಡಿಸಿದ. ಉಳಿದವರೂ ಆಣೆ ಮಾಡಿದರು.

ತಾಸರ್ಧ ತಾಸು ಮೀಟಿಂಗ್ ಮಾಡಿ ಬಸವರಾಜು ಚತುಷ್ಟಯರನ್ನು ಅವಸರದಿಂದ ಎಬ್ಬಿಸಿದ ಯಾಕೆಂದು ಅಮಲಿನಲ್ಲಿದ್ದ ಅವರೂ ಕೇಳಲಿಲ್ಲ. ಗುಡಸೀಕರನೂ ಎದ್ದ “ಒಳಗ ಹಣಿಕಿ ಹಾಕೋ ರಾಜಾ, ನಿನಗಾಗಿ ಏನ ತಂದೆನ್ನೋಡು ಎಂದು ಹೇಳಿ ಗುಡಸೀಕರನ್ನು ಅಲ್ಲೇ ಬಿಟ್ಟು ಮಿಕ್ಕವರೊಂದಿಗೆ ಹೊರಬಂದು ಬಾಗಿಲಿಕ್ಕಿಕೊಂಡ. ಒಳಗೆ ಚಿಮಣಾ ಇದ್ದಳು.