ಗೌಡ ಗುಡಸೀಕರನನ್ನು ನೋಡಿ ದೈನಾಸ ಪಡುತ್ತಿದ್ದರೆ ಅತ್ತ ಕೊಳವಿಯ ಮುದುಕಪ್ಪ ಗೌಡ ಕರಿಮಾಯಿಗೆ ಕಡೇ ಶರಣು ಮಾಡಿದ.

ಇದು ಗುಡಸೀಕರನ ಪ್ರಥಮ ಗೆಲುವಾಗಿತ್ತು. ಆ ದಿನ ಸುಂದರಿ ಪೋಜದಾರನ ಸೇವೆಗೊದಗಿ ತಡಮಾಡಿ ಗುಡಿಸಲಿಗೆ ಬಂದಳು. ಆ ಏಳೂ ಜನ ತಮ್ಮ ಗೆಲವನ್ನು ಭರ್ಜರಿಯಾಗಿ ಅದ್ಧೂರಿಯಿಂದ ಒದ್ದೊದ್ದೆಯಾಗಿ ಆಚರಿಸಿದರು. ಆ ಗೆಲುವಿಗೆ ಕಾರಣಳಾದ ಸುಂದರಿಯನ್ನು ಬಸವರಾಜೂನನ್ನು ಗುಟಕಿಗೊಮ್ಮೆ ಸ್ಮರಿಸಲಾಯಿತು. ಸುಂದರಿಗಂತೂ ನೆಲದ ಮೇಲೆ ಕಾಲೂರದಷ್ಟು ಹೌಶಿಯಾಗಿತ್ತು. ತನ್ನ ಸಂಚು ಫಲಿಸಿದ್ದಕ್ಕೆ ಗುಡಸೀಕರ ತನ್ನ ಗುಣಗಾನ ಮಾಡುತ್ತಿದ್ದದ್ದಕ್ಕೆ. ಮೈತುಂಬ ರೋಮಾಂಚನಗೊಂಡಳು. ಕುಡಿತದ ಅಮಲಿನಲ್ಲಿ ಆ ದಿನ ಗೌಡ ಹೇಳಿದ ಮಾತುಗಳನ್ನು ಪುನಃ ಅವನಂತೇ ಹೇಳಿ ಗುಡಸೀಕರನನ್ನು ನಗಿಸಿದಳು.

ಅದೇ ದಿನ ಊರ ಹಿರಿಯರ ಸಭೆ ದತ್ತಪ್ಪನ ನೇತೃತ್ವದಲ್ಲಿ ಸೇರಿತು. ಗೌಡ ಬಂದಿರಲಿಲ್ಲ. ಸುಂದರಿಗೆ ಬಹಿಷ್ಕಾರ ಹಾಕುವದೆಂದು ತೀರ್ಮಾನಿಸಿದರು. ಎಲ್ಲಕ್ಕಿಂತ ಹೆಚ್ಚಾಗಿ ಅದೇನೋ ಎಲೆಕ್ಷನ್ ಅಂತಿದ್ದನಲ್ಲ ಅದಕ್ಕೆ ಈ ಸಲ ತಾವೂ ನಿಲ್ಲಬೇಕೆಂದು ಗೊತ್ತುಮಾಡಿಕೊಂಡರು.

ಮಾರನೇ ದಿನ ಮುಂಜಾನೆ ತಮ್ಮ ತೀರ್ಮಾನವನ್ನು ಗೌಡನಿಗೆ ತಿಳಿಸಿದರು. ಗೌಡ ಸುಮ್ಮನಾದ. ಅವರು ಹೋದ ಮೇಲೆ ಗುಡಸೀಕರನನನ್ನು ಕರೆತರಲಿಕ್ಕೆ ಹಳಬನನ್ನು ಓಡಿಸಿದ.

ಹಳಬ ಬಂದಾಗ ಗುಡಸೀಕರ ಸುಂದರಿಯ ಗುಡಿಸಲಲ್ಲಿದ್ದ. ಗೌಡರು ಕರಯುತ್ತಿದ್ದಾರೆಂದು ಹಳಬ ಹೇಳಿದ್ದೇ ತಡ, ಹುಡುಗ ಹುರುಪಾದ. ಬಸವರಾಜೂನ ಭುಜ ಎರಡೆರಡು ಬಾರಿ ಬಾರಿಸಿ “ನೋಡಿದಿ? ಹೇಗೆ ಹಾದಿಗಿ ಬಂದ!” ಎಂದಂದು ಗಟ್ಟಿಯಾಗಿ ನಕ್ಕ. ಸುಂದರಿಗೆ ಕಣ್ಣುಹಾರಿಸಿ ನಕ್ಕ. ಹಾಳಾದವರು ಆ ಚತುಷ್ಟಯರಿರಲಿಲ್ಲ. ಸಾಮೂಹಿಕವಾಗಿ ಚಪ್ಪಾಳೆ ತಟ್ಟಿ ನಗಬಹುದಿತ್ತು. ನಗುವ ಸಂಭ್ರಮದಲ್ಲಿ ಹಳಬ ಕಂಡಿರಲೇ ಇಲ್ಲ. ಕಂಡೊಡನೆ “ನನಗ ಸಡವಿಲ್ಲಾ ಬೇಕಾದವರ ಅಂವಗs ಬಾ ಅಂತ ಹೇಳ” ಎಂದ. ಈ ಸೊಕ್ಕನ್ನು ಹಳಬ ನಿರೀಕ್ಷಿಸಿರಲಿಲ್ಲ. ಆಗಲೆಂದು ಹೋದ. ಗುಡಸೀಕರನ ಸೊಕ್ಕು ಕೆಳಕ್ಕಿಳಿಯದಾಯಿತು. ತಾನೆಂಥ ಮಹತ್ವದ ಯುದ್ಧಗೆದ್ದೆನಲ್ಲ ಎಂದುಕೊಂಡ. ಗೌಡನಲ್ಲಿಗೆ ಹೋಗಬಹುದಾಗಿತ್ತೇನೋ, ಹೋಗಿದ್ದರೆ ಗೌಡನ ಸೋಲನ್ನು ಕಣ್ಣಾರೆ ನೋಡಿ ಕಿವಿಯಾರೆ ಕೇಳಬಹುದಾಗಿತ್ತು. ಯಾಕೆ ಕರೆಸಿದ್ದಾನು? ಊರವರ ಮುಂದೆ ಮೀಸೆ ಮೊಂಡಾದದ್ದು ಒಂದು ಕಡೆ; ಎರಡೆಕರೆ ಜಮೀನು ಕಕ್ಕಬೇಕಾದ್ದು ಇನ್ನೊಂದು ಕಡೆ. ಅಪಸಾತಿ ಮಾಡಿಕೊಳ್ಳೋಣ ಎಂದಿರಬೇಕು. ಮಗನಿಗೆ ಈಗಲಾದರೂ ತಿಳಿಯಿತಲ್ಲ, ತಾನು ಯಾರು ಅಂತ. ಇನ್ನು ಮೇಲಾದರೂ ಬಾಯಿ ಮುಚ್ಚಿಕೊಂಡು ಇದ್ದರೆ ಬರೋಬರಿ. ಇಲ್ಲದಿದ್ದರೆ ಮೂಗಿಗೆ ಮೂಗುದಾರ ಪೋಣಿಸದಿದ್ದರೆ ನನ್ನ ಹೆಸರು ಗುಡೀಕರನೆಂದು ಯಾಕಿರಬೇಕು?

ಹಿಂಗೆಂದು ಒಳಗೊಳಗೇ ಮಾತಾಡಿಕೊಳ್ಳುತ್ತ, ಹೊರಗೆ ನಗುತ್ತ ತೋಟದ ಕಡೆ ಕಾಲು ಹಾಕಿದ. ನಡೆದಾಡುವಾಗ ಕೂಡ  ವಿಚಿತ್ರ ಹೌಸಿ ಅವನೊಳಗೆ ಹರದಾಡತೊಡಗಿತ್ತು. ರೆಕ್ಕೆ ಬೀಸಿ ಹಾರಿ ಹೋದಂತೆ ತೋಟಕ್ಕೆ ಹೋದ. ಕಬ್ಬಿನ ತೋಟದಲ್ಲಿ ನಾಲ್ಕೈದು ಮಂದಿ ಆಳುಗಳು ಮೇವು ಬಳಿಯುತ್ತಿದ್ದರು. ಸೀದಾ ಅಲ್ಲಿಗೇ ಹೋದ.

ಅವರ್ಯಾರೂ ಇವನ ಅಭೀಪ್ರಾಯ ಅನುಮೋದಿಸುವವರಾಗಿರಲಿಲ್ಲ. ಇವ ತನ್ನ ಕಾಳಿ ಊದತೊಡಗಿದ. ತನಗೆ ಪರಿಚಿತರೆಂದು ಅಧಿಕಾರಿಗಳ ಕುಗೋತ್ರ ಹೆಸರು ಹೇಳಿದ. ಅವರೊಂದಿಗೆ ತನ್ನ ಸಲಿಗೆಯ ಪ್ರಸಂಗಗಳನ್ನು ಕಥೆಮಾಡಿ ಹೇಳಿದ. ಗೌಡ ಅಪಸಾತಿ ಮಾಡಿಕೊಳ್ಳಲು ಓಡಾಡುತ್ತಿದ್ದುದನ್ನು ದನಿ ಎತ್ತರಿಸಿ ಸ್ವಲ್ಪ ಉದ್ರೇಕಿತನಾಗಿಯೇ ಹೇಳಿದ. ತನ್ನ ಹೇಳಿಕೆಯಲ್ಲಿ ಗೌಡನನ್ನು ಹುಳಮಡಿ ತಾನೊಂದು ಆನೆಯಷ್ಟು ಎತ್ತರಕ್ಕೆ ಬೆಳೆದ. ಅಷ್ಟರಲ್ಲಿ ಗೌಡ ಅಲ್ಲಿಗೇ ಬಂದ. ಸರಪಂಚ ಮಾತಾಡಿಸಲಿಲ್ಲ. ತನಗೇನೂ ಆಗಿಲ್ಲವೆಂಬಂತೆ ಆಳುಗಳೊಂದಿಗೆ ಅದು ಇದು ಬಾತಿಗೆ ಬಾರದ್ದನ್ನಾಡುತ್ತ ನಿಂತ. ಆಳುಗಳಲ್ಲಿ ಒಂದಿಬ್ಬರು ಗೌಡನಿಗೆ ಶರಣು ಹೇಳಿದರು. ಗೌಡ ಬಂದವನು “ತಮ್ಮಾ, ನಿನ್ನ ಜೋಡಿ ಮಾತಾಡಬೇಕು ಗುಡಿಸಲ ಕಡೆ ಬರ‍್ತೀಯೇನು?” ಎಂದ. ಸರಪಂಚ ತಿರುಗಿ ಕೂಡ ನೋಡದೆ “ಅದೇನ ಮಾತ ಅದಾವ ಇಲ್ಲೇ ಹೇಳಬಹುದಲ್ಲಾ” ಅಂದ. ಗೌಡನ ಮನಸ್ಸು ಮುದುಡಿ ಆ ಮಾತಿನಷ್ಟೇ ಆಯ್ತು. ಆದರೆ ಗುಡಸೀಕರನ ಈ ನಡೆ ಅನಿರೀಕ್ಷಿತವಾಗಿರಲಿಲ್ಲ. ಅಭಿಮಾನವಿಲ್ಲವೆಂದಲ್ಲ. ವಿವೇಕ, ಅದಕ್ಕಿಂತ ಹೆಚ್ಚಾಗಿತ್ತು. “ಆಗಲಿ, ಬಿಡಪಾ, ಇಲ್ಲೇ ಮಾತಾಡೋಣು” ಎಂದು ಅಲ್ಲೇ ಬದುವಿನ ಮೇಲೆ ಕುಳಿತ. ಆಳುಗಳು ಆ ಅಂಚಿಗೆ ಹೋಗುತ್ತೇವೆ ಎಂದು ಹೇಳಿಕೊಂಡು ಎದ್ದುಹೋದರು.

ಗೌಡ ಮಾತು ಶುರುಮಾಡಿದ. “ನೋಡ ತಮ್ಮ, ನಮ್ಮ ಕಾಲ ಮುಗೀತು. ಇಲ್ಲಿ ತಂಕಾ ಒಂದ ಹದ್ದಬಸ್ತೀನಾಗ ಊರ ತಂದ ನಿನ್ನ ಕೈಯಾಗಿಟ್ಟಿವಿ. ನೀ ಕಲತಾಂವ. ಲೋಕಾ ತಿಳಿದಾಂವ…” ಹೇಳುತ್ತ ಗೌಡ ಸ್ವಲ್ಪ ಹೊತ್ತು ಸುಮ್ಮನಾದ. ಸರಪಂಚ ಆಗಲೇ ಅಳ್ಳಳ್ಳಕಾಗಿ ಗುಡಸೀಕರನಾಗಿತ್ತಿದ್ದ. ಗೌಡ ಮತ್ತೆ ಮುಂದುವರಿದ. “ನೀ ಬ್ಯಾರೇ ಅಲ್ಲ, ನನ್ನ  ಮಗಾ ಬ್ಯಾರೇ ಅಲ್ಲಪಾ, ನಿನಗ ಹಾಂಗ ತಿಳದ ಪಂಚಾಯ್ತಿ ಮಾಡಪಾ ಅಂತ ಊರ ನಿನ್ನ ಅಂಗೈಯಾಗಿಟ್ಟಿವಿ. ನಾ ನಿನಗ ಏನ ಕೆಟ್ಟ ಮಾಡೀನಿ ಹೇಳೋ ಎಪ್ಪಾ, ನನ್ನ ಕಂಡರ ವೈರೀನ ಕಂಡಾಂಗ ಮಾಡತಿ. ಏನಾರ ತಪ್ಪ ಆಗಿದ್ದರ ಹೇಳು, ನಿನ್ನ ಕಾಲಿಗೆ ತಲೀ ಕಟೀತೀನಿ. ನಿನ್ನ ಜೋಡೀ ಜಗಳ ಮಾಡೋ ವಯಸ್ಸನಂದ? ಇಂದಿಲ್ಲಿ; ನಾಳೆ ಗೋರ್ಯಾಗ ಇರಾವರು. ನೀವಾದರ ಇದs ಇನ್ನೂ ಚಿಗರವರು. ಹೂ ಕಾಯಿ ಹಣ್ಣಾಗುವರು. ಈ ಊರಿಗೆ ನಮ್ಮಂಥಾ ಮುದುಕರಲ್ಲಪಾ, ನೀ ಬೇಕು, ನಿನ್ನಂತವ ಬೇಕು, ಏನೊ ನಾಲಿಗಿ ತುಂಬ ಹಾಂಗ ಮಾಡ್ರೊ, ಹೀಂಗ ಮಾಡ್ರೊ ಅಂತ ಹೇಳತೀವು. ಕಣ್ಣಿಗಿ ದಿನಾ ಬೆಳಗಾದರ ಗೋರಿ ಕಾಣತೈತಿ, ಅದರ ಅಂಜಿಕ್ಯಾಗ ಏನಾರ ಆಡತಿದ್ದೇನಪಾ, ಬ್ಯಾಡಂದರ ಅದನೂ ಬಿಡತೀವು. ಅದರ ನಮ್ಮ ಮ್ಯಾಲಿನ ಸಿಟ್ಟಲೆ ಊರ್ಯಾಕ ಹಾಳಾಗಬೇಕೊ ಎಣ್ಣಾ? ಗುಡಿಸೀಕರ ಪೂರಾ ಕರಗಿಬಿಟ್ಟಿದ್ದ. ಪಾಪ, ಈ ಮುದುಕನ್ನ ತಾನು ಅಪಾರ್ಥ ಮಾಡಿಕೊಂಡಿದದೇನೆನಿಸಿತು. ಸ್ವಲ್ಪ ಅಂತಃಕರಣ ಬಿಚ್ಚಿ “ಇದನ್ನ ಹೆಂಗ ಮಾಡೋಣೂ” ಅಂತ ಕೇಳಿದರೆ ಸಾಕು. ಮುದುಕ ಉಬ್ಬುವವ. ಹೆಚ್ಚೇನು ಹಿರಿಯರಿಗೆ ಬೇಕಾದ್ದೂ ಅಷ್ಟೇ. ಹೇಳಿ ಕೇಳಿ ಹೆಗಲು ಬಿದದವರು. ಇನ್ನೆಷ್ಟು ದಿನ ಇದ್ದಾರು? ಇರೋ ತನಕ ಸ್ವಲ್ಪ ಮರ್ಯಾದೆ ಕೊಟ್ಟರೆ ತನಗೇನು ಕೊರತೆ ಬಿದ್ದೀತು? ಅದೊಂದು ಗ್ರಾಮ ಪಂಚಾಯ್ತಿ. ಹೋಗಿ ಕೇಳಿದರೆ ಈಗಲೂ ಎಲೆಕ್ಷನಿಲ್ಲದೆ ಹಾಗೇ ಕೂಡುವುದು ದೂರದ ಮಾತಲ್ಲ. ಗೌಡ ಮುಂದುವರಿಸಿದ:

“ಖರೆ ಹೇಳೋ ತಮ್ಮಾ, ನಾ ಆ ಚಿಮಣಾನ ಬಸರು ಮಾಡಿದ್ದ ಖರೆ ಮಾತ? ನೀ ನಿಮ್ಮಪ್ಪನ ಹೆಸರ ತಗೊಂಡ ಹೌಂದನ್ನು. ನಾ ಇಕ್ಕs ಈಗ ಎರಡೆಕರೆ ಜಮೀನೂ ಕೊಟ್ಟು ಬಿಡತೇನು: ಅಪ್ಪಾ ಸಾಯೋ ಕಾಲದಾಗ ನನ್ನ ಮ್ಯಾಲ ಹಿಂತಾದೊಂದ ಹರಲಿ ಹೊರಸ ಬ್ಯಾಡ.”

ಎನ್ನುತ್ತ ಕೂಡಲೇ ಗೌಡ ಕೈಮುಗಿದ. ಇಬ್ಬರ ಬಾಯಿ ಕಟ್ಟಿತು. ಹಮ್ಮು ಕರಗಿ ನೀರಾಗಿ ಹರಿದಂತೆ ಗುಡಸೀಕರನ ಕಣ್ಣೊಳಗಿಂದ ಎರಡು ಹನಿ ಉದುರಿದವು. ತಾನು ಇಲ್ಲವೆ ಬಸವರಾಜು ಇಬ್ಬರಲ್ಲಿ ಒಬ್ಬರ ಕಾರಭಾರಿಗೆ ಸುಂದರಿ ಬಸರಿಯಾದದ್ದು ಖಾತ್ರಿಯಾಗಿತ್ತು. ನಿಂಗೂ ನಿನ್ನೆ ಬಸವರಾಜೂನ ಭಾನಗಡಿ ಹೇಳಿದ್ದ. ಇದರಲ್ಲಿ ಬಸವರಾಜೂನ ಭಾಗವೇ ಹೆಚ್ಚಾದಂತಿತ್ತು. ಇಲ್ಲದಿದ್ದರೆ ಬಸರಿನ ಸುದ್ದಿ ಮೊದಲು ತನಗಾದರು ಹೇಳಬಹುದಿತ್ತೊ? ಗರ್ಭಪಾತದ ಸಂಗತಿಯನ್ನಾದರೂ ತಿಳಿಸಬಹುದಿತ್ತೊ?

ಬಹಳ ಹೊತ್ತಿನ ತನಕ ಇಬ್ಬರೂ ಮಾತಾಡಲಿಲ್ಲ. ಗುಡಸೀಕರ ಇಲ್ಲೀತನಕ ಒಂದು ಮಾತೂ ಆಡಿರಲಿಲ್ಲ. ಏನಾಡಬೇಕೆಂದು ಹೊಳೆಯಲೂ ಇಲ್ಲ ಈಗಲೂ ಗೌಡನೇ ಹೇಳಿದ. “ನೋಡು ತಮ್ಮಾ, ದಿನ ಬೆಳಗಾದರ ಒಬ್ಬರ ಮಾರಿ ಒಬ್ಬರ ನೋಡಾವರು ನಾವು. ನಿನ್ನ ನಿಟ್ಟುಸರಿಗೆ ನಾನs ಕರಗಬೇಕು. ನಂದಕ ನೀ ಕರಗಬೇಕು. ಬೆಳಗಾಂವಿ ಮನಿಶ್ಯಾ ಇಂದಿದ್ದ ನಾಳಿ ಹೋಗಾಂವಪಾ. ಅವರಿಬ್ಬರನ್ನು ಈಗಿಂದೀಗ ಹೊರಗ್ಹಾಕು. ನಿನಗ್ಹೆಂಗ ಬೇಕ ಹಾಂಗ ಊರ ಆಳಿಕೊ. ಖರೆ ಹೇಳ್ತನೋ ಎಪ್ಪಾ. ಸಡ್ಲ ಬಿಟ್ಟರೆ ಆಕೆ ಈ ಊರ ಅಳವೆತ್ತತಾಳ” ಅಂದು ಸುಮ್ಮನಾದ. ಮಾತುಕತೆಗೊಂದು ಮುಕ್ತಾಯವನ್ನಾದರೂ ಕೊಡಬೇಕಲ್ಲ. “ಆಗಲಿ, ನೀವೇನ ಕಾಳಜಿ ಮಾಡಬ್ಯಾಡರಿ, ನಡೀರಿ ಹೋಗೋಣು” ಅಂದ. ಮಾತಿನ್ನೂ ಬಾಯಲ್ಲಿಯೇ ಇತ್ತು. ಢಂ ಢಂ ಎಂದು ಗುಂಡು ಹಾರಿದ್ದು ಕೇಳಿಸಿತು. ಇಬ್ಬರೂ ತಬ್ಬಿಬ್ಬಾದರು. ಮುಖಾಮುಖ ನೋಡಿಕೊಂಡರು. ಗುಡಸೀಕರ ಸದ್ದುಬಂದ ಕಡೆ ಓಡಿದ. ಗೌಡನ ಕೈಕಾಲೇ ಹೋದವು. ಅಲ್ಲೇ ಕುಸಿದ. ಗುಡಸೀಕರ ಓಡಿ ಬಂದಾಗ ಕರಿಮಾಯಿಯ ಗುಡಿಯಲ್ಲಿ ಪೋಲೀಸರು ಓಡಾಡುತ್ತಿದ್ದರು. ಗುಮಡಿನ ಸಪ್ಪಳಕ್ಕೆ ತತ್ತರಿಸಿ ಜೇನು ಹುಟ್ಟೊಂದರ ಕಾಲುಭಾಗ ಕಳಚಿಬಿದ್ದಿತ್ತು. ಜೇನು ಚಿಲ್ಲನೆ ಸುತ್ತ ಸಿಡಿದಿತ್ತು. ಜೇನ್ನೊಣಗಳು ಎದ್ದು ಗುಂಯೆಂದು ಹುಯ್ಯಲೆಬ್ಬಿಸಿ ಪೋಲೀಸರನ್ನು ಅಟ್ಟಿಸಿಕೊಂಡೋಡಿ ಕಚ್ಚುತ್ತಿದ್ದವು…ಪೋಜದಾರ ಗುಡಸೀಕರನನನ್ನೂ ಗಮನಿಸದೆ, ಹುಳಗಳ ಕಾಟ ಲೆಕ್ಕಿಸದೇ ವಿಜಯೋನ್ಮಾದದಿಂದ ಕಿರಿಚಿ ಆಜ್ಞೆ ಮಾಡುತ್ತಿದ್ದ. ಜನ ಒಬ್ಬೊಬ್ಬರೇ ಓಡಿಬಂದು ದೂರದಲ್ಲೇ ನಿಂತುಕೊಂಡು ಪಿಳಿಪಿಳಿ ಕಣ್ಣುಬಿಡುತ್ತ ನೋಡುತ್ತಿದ್ದರು. ಕೊಳವಿಯ ಶ್ರೀ ಮುದುಕಪ್ಪ ಗೌಡನ ಹೆಣ ಬೊಕ್ಕಬೋರಲಾಗಿ ಬೆನ್ನು ಮೇಲಾಗಿ ಕರಮಾಯಿಯ ಕಡೆ ಮುಖಮಾಡಿ ತಾಯಿಗೆ ಕೊನೆಯ ಶರಣು ಹೇಳುವಂತೆ ಬಿದ್ದಿತ್ತು. ಹೊಟ್ಟೆಯ ಕೆಳಗೆ ನೆತ್ತರ ಮಡು ನಿಂತಿತ್ತು.