ಆ ದಿನವೇ ಅಂಗೀಯೆಲ್ಯಾನನ್ನು ಕರೆಸಿ ಗೌಡ ಗದರಿಕೊಂಡ. ಇನ್ನು ಮೇಲೆ ಭಿರಂಡಿ ಕುಡಿಯಬಾರದೆಂದು ಕರಿಮಾಯಿ ಭಂಡಾರ ಮುಟ್ಟಿಸಿ ಆಣೆ ಮಾಡಿಸಿದ. ಆದರೆ ಅಂಗೀಯೆಲ್ಯಾನಿಗೆ ನಾಯೆಲ್ಯಾ ಎಂದು ಹೆಸರಿಲ್ಲವೆ? ನಾಯಿ ಬಾಲದಂತೆ ಮತ್ತೆ ವಂಕಾದ. ಕರಿಮಾಯಿ ಆಣೆಗೂ ಸುಳ್ಳು ಬಿದ್ದ. ಅದು ಹೀಗಾಯಿತು:

ಗುಡಸೀಕರ ನಾಯೆಲ್ಯಾನಿಗೊಂದು ಕುರಿ ಕೊಟ್ಟನಲ್ಲ, ಹಳೇ ಜನ ಏನಾದರೂ ಅಂದುಕೊಳ್ಳಲಿ, ಚತುಷ್ಟಯರ ಕಣ್ಣಲ್ಲಿ ಮಾತ್ರ ಬಹಳ ದೊಡ್ಡ ಕುಳವಾದ. ‘ಎಂಥಾ ದಿಲ್‌ದಾರ್ ಆಸಾಮಿ,’ ಎಂದುಕೊಂಡರು. ನಾಯೆಲ್ಯಾನ ಬಗ್ಗೆ ಗುಡಸೀಕರನಿಗೆ ನಿಜವಾಗಿ ಅನುಕಂಪ ಮೂಡಿತು. ಹೇಗೂ ದಂಡದ ಕುರಿಹಬ್ಬ ಮಾಡುತ್ತಾರಲ್ಲಾ. ಆ ದಿನ ಅವನಿಗೆ ನೀರಿನ ಬದಲು ನಿಜವಾದ ಬ್ರಾಂದಿ ಕೊಡಬೇಕೆಂದು ಅಂತಃಕರಣ ಪೂರ್ವಕ ಅಂದುಕೊಂಡ.

ಆದರೆ ನಾಯೆಲ್ಯಾನನ್ನು ನೆನೆದು ಎಲ್ಲರೂ ನಕ್ಕರು; ಬರೀ ನೀರು ಕುಡಿದೇ ಮಗ ಎಂಥಾ ಅವತಾರ ಮಾಡಿದನಲ್ಲ – ಎಂದರು. ನಡೆದ ಘಟನೆಯನ್ನು ಕಲ್ಪಿಸಿ ಅಭಿನಯಿಸಿ ನಕ್ಕರು. ಒಂದಕ್ಕೆ ಒಂಬತ್ತು ಒಗ್ಗರಣೆ ಹಾಕಿ ನಕ್ಕರು. ನಿಜ ಹೇಳಬೇಕೆಂದರೆ ಬಿದ್ದು ಬಿದ್ದು ನಕ್ಕರು.

ಹಾಗೆ ಬಿದ್ದು ಬಿದ್ದು ನಗುವುದಕ್ಕೆ ಚತುಷ್ಟಯರಿಗೆ ಅಡ್ಡಖುಶಿಯ ಇನ್ನೊಂದು ಕಾರಣವೂ ಇತ್ತು. ಪ್ರಶ್ನೋತ್ತರ ಮಾಸ್ತರ ತಮಗೆ ಹೆದರುತ್ತಾನೆಂದು ತಿಳಿದೊಡನೆ ಚತುಷ್ಟಯರ ದಿನಚರಿಯಲ್ಲಿ ಒಂದಂಶ ಹೆಚ್ಚಾಗಿ ಸೇರಿಕೊಂಡಿತು. ಮೊನ್ನೆ ಮಾಸ್ತರನನ್ನು ಪೀಡಿಸಿದರಲ್ಲ, ಅದರ ಮಾರನೇ ದಿನ ಕಳ್ಳ ಬೇಕೆಂದೇ ಮಾಸ್ತರನಿಗೆ ಭೇಟಿಯಾಗಿ “ಏನ್ರೀ ಮಾಸ್ತರ” ಅಂದ. ಪಾಪ, ಮಾಸ್ತರ ‘ನಮಸ್ಕಾರರೀ ಸಾಹೇಬರ’ ಎಂದು ಹಲ್ಲು ಕಿಸಿದ. ತನಗೆ ಹಾಗು ಗುಡಸೀಕರನಿಗೆ ಮಾತ್ರ ಈ ಮಾಸ್ತರ ‘ಸಾಹೇಬರ’  ಎನ್ನುತ್ತಾನೆಂದು ಕಳ್ಳನ ಖುಶಿ. ಇದ ಕೇಳಿ ಮೆರೆಮಿಂಡ ನೆಟ್ಟಗೆ ಕ|| ಗಂ|| ಸಾಲೆಗೇ ಹೋದ. ಮಾಸ್ತರ ಇವನಿಗೂ ಸಾಹೇಬರ ಎಂದು ಹಲ್ಲು ಗಿಂಜಿದ. ಮೆರೆಮಿಂಡನಿಗೆ ಸಂಕೋಚವಾಗಿರಬೇಕು.

“ಸರಪಂಚ ಸಾಹೇಬರಿಗೆ ನಮಸ್ಕಾರ ಮಾಡಿದಿರಿಲ್ಲೋ?”

– ಅಂದ.

“ಸರಪಂಚರಿಗಿ ನಮಸ್ಕಾರ? ದಿನಾ ಮಾಡತೀನಲ್ಲರಿ”

– ಎಂದ ಮಾಸ್ತರ.

“ಗೌಡ್ರು ಭೇಟಿ ಆಗಿದ್ದರೇನ್ರಿ?”

“ಗೌಡ್ರ ಭೇಟಿ? ಆಗಿದ್ದರಲ್ಲ, ನಮಸ್ಕಾರ ಮಾಡಲಿಲ್ಲರಿ”

ಮೆರೆಮಿಂಡ ಮನಸ್ಸಿನಲ್ಲೇ ಪಾಪ ಅಂದುಕೊಂಡ. ತಪ್ಪು ತಿಳಿದಾರೆಂದೋ ನಮಸ್ಕಾರ ಮಾಡಿಸಿಕೊಳ್ಳಲಿಕ್ಕೇ ಬಂದಾನೆಂದೋ ಭಾವಿಸಬಾರದಲ್ಲ.

“ಹುಡ್ರಿಗೆ ಇತಿಹಾಸ, ಭೂಗೋಳ ಚೆಂದಾಗಿ ಕಲಸ್ರಿ” – ಎಂದು ಉಪದೇಶ ಮಾಡಿ ಹೋದ. ಅನಂತರ ಆ ನಾಲ್ವರಲ್ಲಿ ಯಾರು ಭೇಟಿಯಾದರೂ ಮಾಸ್ತರ ಕೂಡಲೇ “ನಮಸ್ಕಾರರೀ ಸಹೇಬರ, ಗೌಡ್ರಿಗಿ ನಮಸ್ಕಾರ ಮಾಡಲಿಲ್ಲರಿ” – ಎಂದು ಹೇಳುತ್ತಿದ್ದ ಚತುಷ್ಟಯರಿಗೆ ಒಂದು ಕಡೆ ಹೆಮ್ಮೆ; ಯಾಕೆಂದರೆ ಕಲಿಸಿದ ಗುರುವಿನಿಂದಲೇ ನಮಸ್ಕರಿಸಿಕೊಳ್ಳುವ ಭಾಗ್ಯ ಬಂದದ್ದಕ್ಕೆ; ಗುರುವಿನ ತಲೆಮೇಲೆ ಕೈಯಿಟ್ಟ ಶಿಷ್ಯರು ತಾವಾದದ್ದಕ್ಕೆ. ಇನ್ನೊಂದು ಕಡೆ ಕೆಡುಕೆನಿಸುತ್ತಿತ್ತು. ಎಷ್ಟೆಂದರೂ ಹಳೇ ಶಿಷ್ಯರಲ್ಲವೆ? – ಪಾಪ ಎನಿಸುತ್ತಿತ್ತು. ಸೈ, ಅಂದಿನಿಂದ ಅವನಿಗೆ ಪ್ರಶ್ನೋತ್ತರ ಮಾಸ್ತರ ಎಂಬ ಹೆಸರು ಹೋಗಿ “ಪಾಪ ಮಾಸ್ತರ” ಎಂದು ಹೆಸರು ಬಂತು. ಒಂದು ದಿನ ಅಷ್ಟೂ ಚತುಷ್ಟಯರು ಒಂದೆಡೆ ಸೇರಿ ಸಾಲೆಗೆ ಹೋದರು. ಇವರಿಗೆ ಆಶ್ಚರ್ಯ ಕಾದಿತ್ತು. ಹೋದೊಡನೆ ಪಾಪ ಮಾಸ್ತರನಷ್ಟೇ ಅಲ್ಲ ಹುಡುಗರೆಲ್ಲ ಕೈಮುಗಿದು ಎದ್ದು ನಿಂತರು. ತಾವು ಚಿಕ್ಕಂದಿನಲ್ಲಿ ಸಾಲೆಯಲ್ಲಿದ್ದಾಗಲೂ ಯಾರಾದರೂ ಇನ್ಸ್‌ಪೆಕ್ಟರ ಬಂದರೆ ಗೌಡ, ದತ್ತಪ್ಪ ಬಂದರೆ ಹೀಗೆ ಎದ್ದು ನಿಲ್ಲುತ್ತಿದ್ದರು. ಈಗ ಹುಡುಗರು ಎದ್ದು ನಿಂತುದ್ದನ್ನು ‘ನೋಡಿ ಅವರಿಗೆ ಎಷ್ಟು ಸಂತೋಷವಾಗಿತ್ತೆಂದರೆ ಅಂದಿನಿಂದ ವಿನಾಕಾರಣ ನಗತೊಡಗಿದ್ದರು.

ಗುಡಸೀಕರ ಕುರಿ ಅಂದರೆ ಕುರಿ ಕೊಳ್ಳಲು ದುಡ್ಡು ಕೊಟ್ಟಿದ್ದನಲ್ಲ ಮಾರನೇ ದಿನವೇ ಮಾದಿಗರು ಆ ಕುರಿಹಬ್ಬ ಇಟ್ಟುಕೊಂಡಿದ್ದರು. ನಾಯೆಲ್ಯಾ ಹಬ್ಬದ ಸಡಗರದಲ್ಲಿದ್ದರೆ ಗುಡಸೀಕರ ಚಡಪಡಿಕೆಯಲ್ಲಿದ್ದ. ಪಕ್ಕದ ಹಳ್ಳಿ ಹುಡುಗರು ಕಾರ ಹುಣ್ಣಿಮೆಯಂದು ಗೌಡನ ಮುಂದೆ ಆಡುವುದಕ್ಕಾಗಿ ಒಂದು ಆಟ ಕಲಿಯುತ್ತಿದ್ದರು. ಈ ಸುದ್ದಿ ಕೇಳಿ ಇವನ ಮನಸ್ಸು ಅವಿಶ್ರಾಂತವಾಯಿತು.

ಪಂಚಯ್ತಿ ಆಫೀಸಿಗೆ ಪಾಪ ಮಾಸ್ತರನನ್ನು ಕರೆಸಿದ. ಚತುಷ್ಟಯರೂ ಹಾಜರಾದರು. ‘ಕಾರ ಹುಣ್ಣಿಮೀ ದಿನ ಆಡಾಕ ಒಂದ ಆಟ ಕಲಸರಿ’ ಎಂದು ಕಣ್ಣಂಚಿನಲ್ಲಿ ಕನಸು ತುಳುಕುತ್ತ ಆಜ್ಞೆ ಮಾಡಿದ. ಪಾಪ ಮಾಸ್ತರ ಎಂದೂ ನಾಟಕ ಮಾಡಿದವನಲ್ಲ, ಮಾಡಿಸಿದವನಲ್ಲ, ಬಹಳವಾದರೆ ತನ್ನ ಜೀವಮಾನದಲ್ಲಿ ನಾಕೈದು ನಾಟಕ ನೋಡಿದ್ದನಷ್ಟೆ. ಅಲ್ಲದೆ ಅವನ ವಯಸ್ಸೂ ಇಂಥ ಖುಶಿ ಮೋಜಿಗೆ ಮೀರಿದ್ದಾಗಿತ್ತು. “ಅದೆಂಗಾದೀತರಿ? ಆಗೋಣಿಲ್ಲ” ಅಂದ. ತನಗೆಂಥ ನಾಟಕ ಬಂದೀತು? ಬರೋಣಿಲ್ಲವೆಂದ. ಪರಿಪರಿಯಾಗಿ ಹೇಳಿದ, ಅಂಗಲಾಚಿದ. ಆದರೆ ಮಾಸ್ತರ ಆಗೋಣಿಲ್ಲ ಎಂದರೆ ನಾಟಕವಾಡುವ ತಮ್ಮ ಅವಕಾಶ ತಪ್ಪುವುದಲ್ಲಾ ಎಂದು ಚತುಷ್ಟಯರ ತವಕ. ಅವರೂ ಒತ್ತಾಯ ಮಾಡಿದರು. ಬೇಡಿದರು. ಕೊನೆಗೆ ಉಪಾಯ ಗೊತ್ತೇ ಇದೆ – ‘ಸ್ವಥಾ ಸರಪಂಚ ಸಾಹೇಬರ ಕೇಳತಾರಂದರ ಕಿಮ್ಮತ್ತಿಲ್ಲೇನು? ಇಂದು ಮ್ಯಾಲಿನವರಿಗೆ ಬರದ ಹಾಕಿದರ ನಿಮ್ಮ ಗತಿ ಏನಾದೀತು?” ಏನಾಗುತ್ತಿತ್ತೋ, ಪಾಪ ಮಾಸ್ತರನಂತೂ ಹೆದರಿದ.

ಅವರನ್ನು ಕೂರಿಸಿಕೊಂಡೇ ‘ಸೀತಾಪಹರಣ’ ನಾಟಕವಾಡುವುದೆಂದು ತೀರ್ಮಾನಿಸಿದರು. ಬೆಳಗಾವಿಯಿಂದ ವಿದ್ಯುದ್ದೀಪ, ಅಲಂಕಾರ, ವೇಷಭೂಷಣಗಳನ್ನು ಬಾಡಿಗೆ ತರಿಸುವುದೆಂದು ಮಾತಾಯ್ತು. ರಾವಣನ ಆಸ್ಥಾನದಲ್ಲಿ ಒಂದು ‘ಡ್ಯಾನ್ಸು ಹಾಕಿ, ಅದಕ್ಕಾಗಿ ಬೆಳಗಾವಿಯಿಂದ ಚಿಮಣಾಳನ್ನು ತರಿಸುವುದೆಂದಾಯಿತು. ಸ್ಥೂಲವಾಗಿ ಪಾತ್ರಗಳ ಹಂಚಿಕೆಯೂ ಆಯ್ತು. ಗುಡಸೀಕರ ಯಾವ ಪಾತ್ರವನ್ನೂ ವಹಿಸಲಿಲ್ಲ. ರಾವಣನ ಪಾತ್ರಕ್ಕೆ ಕಳ್ಳನನ್ನು ಬಿಟ್ಟು ಯಾರಿದ್ದಾರೆ? ರಾವಣ ಪಾತ್ರ ತನಗೆ ಖಚಿತವಾದ ಕೂಡಲೇ ಕಳ್ಳ ಸೀತೆಯ ಪಾತ್ರಕ್ಕೆ ನಿಂಗೂನನ್ನು ಶಿಫಾರಸು ಮಾಡಿದ. ಗುಡಸೀಕರ ಒಪ್ಪಲಿಲ್ಲ. ರಮೇಶನೇ ಸೀತೆಯಾದ. ನಾರದ ಹಾಗೂ ಹನುಮಂತ – ಈ ಎರಡೂ ಪಾತ್ರಗಳನ್ನು ಮೆರೆಮಿಂಡ ವಹಿಸಿಕೊಂಡ ಸಾತೀರ ಶಿವನಾದ. ಉಳಿದ ರಾಮ ಲಕ್ಷ್ಮಣ ಇತ್ಯಾದಿ ಪಾತ್ರಗಳನ್ನು ಊರಲ್ಲಿಯ ತಮಗೆ ಅನುಕೂಲದ ಹುಡುಗರಿಗೆ ಹಂಚಿದರು. ಪಾಪ ಮಾಸ್ತರನಿಗೂ ಒಂದು ಪಾತ್ರ ಕೊಡಬೇಕೆಂದು ಸೂಚನೆ ಬಂತು. ತಕ್ಷಣವೇ ಆತ ಎದ್ದು ಕೈಮುಗಿದು ಬೇಡವೆಂದ. ಬಿಟ್ಟರು. ಹೀಗೆ ನಾಟಕದ ವಿಚಾರ ಒಂದು ಗಟ್ಟಿಮುಟ್ಟ ಹಂತಕ್ಕೆ ಬಂದಾಗ ನಾಯೆಲ್ಯಾ ಬಂದ.

ಗುಡಸೀಕರನ ದಯದಿಂದ ನಾಯೆಲ್ಯಾ – ಒಂದು ಕುರಿ ದಂಡಕೊಟ್ಟನಲ್ಲ, ಮಾದಿಗರು ಇಂದೇ ಅದರ ಹಬ್ಬ ಇಟ್ಟುಕೊಂಡಿದ್ದರು. ಅದು ಕುಲದವರ ಹಬ್ಬವಾದುದರಿಂದ ಗುಡಸೀಕರ ಅಲ್ಲಗೆ ಹೋಗಬೇಕಾದ ಅಗತ್ಯವಿರಲಿಲ್ಲ. ಆದರೆ ಕುರಿ ಕೊಟ್ಟವನು ತಾನೆಂದು, ಅದೂ ಗೌಡನ ಆಳು ಮನುಷ್ಯನಿಗೆ ಕೊಟ್ಟವನೆಂದೂ ಕೂಡಿದ ಮಂದಿ ಔದಾರ್ಯದ ಕಟ್ಟಿನಲ್ಲಿ ತನ್ನ ರೂಪ ನೋಡಲೆಂದೂ ತಾನೂ ಬರುವುದಾಗಿ ಹೇಳಿದ. ನಾಯೆಲ್ಯಾ ದಂಡ ತೆತ್ತನಾದ್ದರಿಂದ ಮಾಂಸದಲ್ಲಿ ಅವನಿಗೂ ಒಂದು ಪಾಲು ಸಿಕ್ಕುವುದಿತ್ತು. ಮಂದಿ ಹಬ್ಬ ಮಾಡಿದರೇ ಕಾಲು ನೋಯುವ ಹಾಗೆ ಕುಣೊಯುವವನು. ಇನ್ನು ಈಗ ಕೇಳಬೇಕೆ? ಬಹಳ ಉತ್ಸಾಹದಿಂದಲೇ ಕರೆಯಬಂದ. ಓಡೋಡಿ ಬಂದಿದ್ದನೆಂದು ತೋರುತ್ತದೆ. ತೇಗಿತ್ತ,

“ಸಾಬರ, ಎಲ್ಲಾ ತಯಾರಾಗೇತಿ ಬರಬೇಕ್ರಿ”

ಅಂದ. ಅವನನ್ನು ನೋಡಿದೊಡನೆ ಚತುಷ್ಟಯರಿಗೆ ಮತ್ತೆ ನಗೆ ಬಂತು, ಸಾತೀರ ನಗುತ್ತ – “ನಾಯೆಲ್ಯಾ ಮನ್ನಿ ಫಾರಿನ್ ಭಿರಂಡಿ ಕುಡದೆಲ್ಲ ಮಗನ, ಹೆಂಗ್ಹೆಂಗ ಆತೊ?”

– ಅಂದ. ಆ ಘಟನೆ ನೆನಪಿಸಿಕೊಳ್ಳುವುದೂ ಬೇಡವಾಗಿತ್ತು. ಅವಮಾನಿತನಂತೆ ನಾಚಿಕೊಂಡು,

“ಎಲ್ಲಾ ಹುದಲಾ ಬಿದ್ದಾಂಗಿತ್ತ ಬಿಡರಿ”

“ಇನ್ನ ಮ್ಯಾಲ ಭಿರಂಡಿ ಕುಡಿಯಾಣಿಲ್ಲಂತ ಕರಿಮಾಯಿ ಆಣಿ ಮಾಡಿದೀಯಂತಲ್ಲ. ಹೌಂದೇನ?”

– ಅಂದ ಮೆರೆಮಿಂಡ.

“ಹೌಂದ್ರಿ ಗೌಡ್ರು ಆಣಿ ಮಾಡಿಸ್ಯಾರ”

“ಯಾರ ಕೊಟ್ಟರೂ ಕುಡಿಯಾಣಿಲ್ಲಾ?”

“ಒಟ್ಟ ಆ ಭಿರಂಡಿ ಸುದ್ದಿ ಎತ್ತಬ್ಯಾಡ್ರಿ ನನ್ನ ಮುಂದ.”

– ಅಂದ. ಗುಡಸೀಕರ ಮೆಲ್ಲಗೆ ನಾಯೆಲ್ಯಾನಿಗಾಗಿಯೇ ತೆಗೆದಿರಿಸಿದ್ದ ಬ್ರಾಂದಿ ಬಾಟ್ಲಿ ತೆಗೆದು, ಎತ್ತಿ ಮುಖದ ಮುಂದೆ ತೂಗುತ್ತ –

“ನೋಡ್ಲೆ ಮಗನ”

– ಅಂದ. ಪಾಪ ಮಾಸ್ತರನಿಗೆ ಅದೆಲ್ಲಿಂದ ವಾಸನೆ ಬಂತೋ, ಕೂಡಲೇ ಧೋತರದಿಂದ ಮೂಗು ಮುಚ್ಚಿಕೊಂಡ. ನಾಯೆಲ್ಯಾನ ಮನಸ್ಸು ಆಗಲೇ ಕರಗಿ ಬಾಟ್ಲಿಯ ಭಿರಂಡಿಯಷ್ಟೇ ತೆಳ್ಳಗಾಗಿತ್ತು. ಆದರೆ ಬಾಯಿಬಿಟ್ಟು ಹೇಳಲಾರೆ. ಮನಸ್ಸು ನಿಯಂತ್ರಿಸಿಕೊಳ್ಳುವವನಂತೆ, ಕಣ್ಣುಮುಚ್ಚಿ ತಂತಾನೇ ಮಾತಾಡಿಕೊಂಡವನಂತೆ ಗೋಣು ಹಾಕಿ “ಛೇಛೇ ಶಕ್ಯೆ ಇಲ್ಲ ತಗೀರಿ” ಅಂದ. ಗುಡಸೀಕರ ಸುಮ್ಮನಾಗಬಹುದಿತ್ತು. ಆದರೆ ಗೌಡನ ಎದುರಿನಲ್ಲಿ ಆಣೆ ಮಾಡಿದ್ದನಲ್ಲ, ಅದು ಅವನ ಹೊಟ್ಟೆಯೊಳಗೆ ಚಿಮಣಿಯೆಣ್ಣೆ ಸುರಿದಂತಾಯ್ತು. ನೊಂದುಕೊಂಡ ಕೂಡ. ಅಷ್ಟರಲ್ಲಿ ಪಾಪಮಾಸ್ತರ ಬಾಯಿಹಾಕಿದ –

“ಅಧೆಂಗ ಕುಡೀತಾನ್ರಿ? ಗೌಡ್ರ ಮುಂದ ಆಣೀ ಪ್ರಮಾಣ ಮಾಡ್ಯಾನಂತಲ್ಲ, ಬಿಟ್ಟಿದ್ದ ಪಾಡ ಆಗಲಿಲ್ಲ? ಆಗದೇನು? ಬಡವ, ಹೇಂತಿ ಮಕ್ಕಳದಾವಲ್ಲ? ಹೌಂದು. ಅದಕ್ಕೆ ಕುಡೀಬ್ಯಾಡಪಾ.”

– ಅಂದ, ನಾಯೆಲ್ಯಾ ಗುಡಸೀಕರ ಇಬ್ಬರನ್ನೂ ಟಕಮಕ ನೋಡುತ್ತ.

“ಛೇ, ಆ ಮಗ್ಗ ಎಂಥಾ ಆಣಿ ತಗೀರಿ” – ಅಂದ ಕಳ್ಳ.

“ನೀವs ಕೊಡಾಕ ನಿಂತರ ಗೌಡರ ಆಣಿ ಯಾಕ ತಡದೀತ? ಗೌಡರೇನ ಇಲ್ಲಿ ನೋಡಾಕ ಬರತಾರ? ಯಾರ ನಶೀಬ ಯಾರ ಕಂಡಾರ? ಕುಡಿಕುಡಿಯೋ ಮಗನs” – ಅಂದ ಕಳ್ಳ, ಆ ಭಾಗ್ಯ ತನಗಿಲ್ಲವಲ್ಲಾ ಎಂದು ಕೊರಗುತ್ತ, ಪಾಪ ಮಾಸ್ತರನಿಗೆ ಸಹಿಸುವುದಾಗಲಿಲ್ಲ.

“ನ್ಯಾಯೆಲ್ಯಾ ಏನಂತಾನ? ಒಲ್ಲೆ ಅಂತಾನ, ಮತ್ತ ಜೋರ ಯಾಕ ಮಾಡತೀರಿ? ಬ್ಯಾಡ ಬಿಡಿರಿ”

ಗುಡಸೀಕರ ಛಟ್ಟನೆ ಮೇಲೆದ್ದು –

“ಮಾಸ್ತರ, ಈಗ ನ್ಯಾಯೆಲ್ಯಾ ಕುಡದರ ಏನ ಜಿದ್ದ ಕಟ್ಟತೀರಿ”

ಹೇಳಿದ. ಮಾಸ್ತರ ದಂಗಾದ. “ಏನ ಕೊಟ್ಟೇನು? ಏನೂ ಇಲ್ಲರಿ” ಎಂದುಕೊಂಡು ಸುಮ್ಮನಾದ.

ಗುಡಸೀಕರ ಬಾಟ್ಲಿ ತೆಗೆದು ಪಾಪ ಮಾಸ್ತರನ ಕಡೆ ನಡೆದ. “ನಾ ಇನ್ನ ಹೋಗಲೇನ್ರಿ? ಹೋಗತೇನ್ರಿ” ಎಂದು ಕೈಮುಗಿದು ಎದ್ದು ನಿಂತ. ಗುಡಸೀಕರ “ನಿಲ್ಲರಿ” ಎಂದು ಚೀರಿ ಮಾಸ್ತರನ ಸಮೀಪ ಹೋದ. ಮಾಸ್ತರ ಮತ್ತೆ ಮೂಗು ಮುಚ್ಚಿಕೊಂಡ. “ಕೈ ಬಿಡಿರಿ” ಎಂದು ಗದರಿ ಹಿಡೀರೆಂದು ಒತ್ತಾಯದಿಂದ ಬಾಟ್ಲಿ ಅವರ ಕೈಗಿಟ್ಟ. ಮಾಸ್ತರ ಗಡಗಡ ನಡುಗತೊಡಗಿದ್ದ. ‘ನಾ ನಿಮಗ ಕಲಿಸಿದ ಮಾಸ್ತರ ಅಲ್ಲರೆ? ಬ್ಯಾಡ್ರಿ’ ಎಂದು ಬೆಬೆಬೆ ಹೇಳುತ್ತಿರುವಷ್ಟರಲ್ಲಿ ಗುಡಸೀಕರ ಮತ್ತೆ ಗದರಿದ.

“ನಿಮಗಲ್ಲ, ಹೋಗಿ ನ್ಯಾಯೆಲ್ಯಾಗ ಹಣಸರಿ. ಕುಡೀತಾನ. ನ್ಯಾಯೆಲ್ಯಾ ಬಗಸೀ ಒಡ್ಡಿ ಕುಡಿಯೋ ಮಗನ, ಇದೊಂದ ದಿನಾ” ಎಂದ. ನ್ಯಾಯೆಲ್ಯಾ ಧರ್ಮಸಂಕಟದಿಂದಲೆಂಬಂತೆ – ಅಥವಾ ಹೆಂಗೊ ಸಿಕ್ಕೇ ಸಿಗುತ್ತಾದ್ದರಿಂದ  ಇನ್ನಷ್ಟು ಒತ್ತಾಯ ಮಾಡಿಸಿಕೊಂಡರೆ ಇನ್ನಷ್ಟು ಹೆಚ್ಚು ದಕ್ಕೀತೆಂಬ ಉದ್ದೇಶದಿಂದಲೋ, ಆದರೆ ಎರಡನೇ ಉದ್ದೇಶವೇ ಗುಡಸೀಕರನಿಗೆ ಖಾತ್ರಿಯಾಗುವಂತೆ ಅಭಿನಯಿಸುತ್ತ “ಬ್ಯಾಡ್ರೀಯೆಪ” ಎಂದು ಹಲ್ಲುಕಿರಿದ. ಗುಡಸೀಕರ ನ್ಯಾಯೆಲ್ಯಾನ ಬಗ್ಗೆ ಬಹಳ ಮಿದುವಾಗಿದ್ದಂತೆ ಕಂಡಿತು –

“ನ್ಯಾಯೆಲ್ಯಾ, ಮಗನೇ, ನನ್ನ ಮಾನ ದೊಡ್ಡದೋ ನಿನ್ನ ಆಣಿ ದೊಡ್ಡದೊ? ಕುರಿ ಕೊಟ್ಟ ಉಪಕಾರ ಮರತೀದಿ ಏನೊ?” – ಎಂದ. ‘ನನ್ನ ಮಾನ ಎನ್ನುವಾಗ ಒಂದೆರಡು ಬಾರಿ ಎದೆಯನ್ನು ದಂದಂ ಗುದ್ದಿಕೊಂಡ. ಕೂಡಲೇ ನ್ಯಾಯೆಲ್ಯಾ – “ಬಿಡರೀಯೆಪ, ನೀವ್ಯಾಕಪ್ಪ ಮನಸಿಗಿ ಹಚ್ಚಕೋತೀರಿ? ತತರ್ರಿ” ಎಂದು ಬೊಗಸೆಯೊಡ್ಡಿದ. ಮಾಸ್ತರ ಗುಡಸೀಕರನ್ನೊಮ್ಮೆ,  ನ್ಯಾಯೆಲ್ಯಾನನ್ನೊಮ್ಮೆ ನೋಡುತ್ತ ಭೂತ ಕಂಡ ಮಕ್ಕಳಂತೆ ಪಿಳಿಪಿಳಿ ಕಣ್ಣು ಬಿಡುತ್ತ ನಿಂತಿದ್ದ. “ಹೂಂ ಮಾಸ್ತರ ಹನಸಿರಿ” ಎಂದು ರಮೇಶ ಆಜ್ಞೆಮಾಡಿದ. ಮಾಸ್ತರ ಇನ್ನೂ ತನ್ನ ಕರ್ಮ ಹಳೆದುಕೊಳ್ಳುತ್ತಾ ನಿಂತಾಗ ಗುಡಸೀಕರ “ಹೇಳಿದ್ದ ಕೇಳಿಸಲಿಲ್ಲೇನ್ರಿ?” ಅಂದ, ಪಾಪ ಮಾಸ್ತರ ಧಡಪಡಿಸಿ ಓಡಿಹೋಗಿ ಗಡಗಡ ನಡುಗುತ್ತ ಹನಿಸತೊಡಗಿದ. ಬಾಟ್ಲಿ ನಡುಗಿ ನ್ಯಾಯೆಲ್ಯಾನ ಅಂಗಿಯ ಮೇಲೆ ಬಿದ್ದಿತು. ನ್ಯಾಯೆಲ್ಯಾ ಅಂಗಿಯನ್ನೇ  ನೆಕ್ಕಿಕೊಂಡ. ಏನು ರುಚಿ! ಆತ ಹಾಗೆ ಮುಂಗೈ, ಅಂಗಿ ನೆಕ್ಕಿಕೊಂಡುದನ್ನು ನೋಡಿ ಗುಡಸೀಕರನಿಗೆ ಎಷ್ಟು ಆನಂದವಾಯಿತೆಂದರೆ ಓಡಿಹೋಗಿ ಮಾಸ್ತರನ ಕೈಯಲ್ಲಿಯ ಬಾಟ್ಲಿ ತಾನೇ ಕಸಿದುಕೊಂಡು “ಆs ಅನ್ನಲೇ” ಅಂದ. ನ್ಯಾಯೆಲ್ಯಾ ಮುಖ ಮೇಲೆ ಮಾಡಿ ಬಾಯಿ ತೆರೆದ. ಚತುಷ್ಟಯರು ಜೊಲ್ಲು ಸುರಿಸುತ್ತಿರಲಾಗಿ, ಗುಡಸೀಕರ ದಿಗ್ವಿಜಯದಿಂದೆಂಬಂತೆ ಖೊಖ್ಖೊಖ್ಖೊಕ್ ನಗುತ್ತಾ ನ್ಯಾಯೆಲ್ಯಾನ ಬಾಯಲ್ಲಿ, ಮುಖದಲ್ಲಿ, ಮೈಮೇಲೆ ಅಂಗಿಯ ಮೇಲೆ ಹನಿಸಿದ. ನ್ಯಾಯೆಲ್ಯಾನ ಹಸೀ ಹಸೀ ಭಿರಂಡಿಯನ್ನು ಹಾಗೇ ಕರುಳು ಚುರ್ರೆನ್ನುವಂತೆ ಕುಡಿದ. ಮೈಮೇಲಿನ ಅಂಗಿ ಒದ್ದೆಯಾಗಿತ್ತು. ಅದನ್ನೂ ನೆಕ್ಕಿಕೊಂಡ. ನೆಲಕ್ಕೆ ಬಿದ್ದಿತ್ತು. ಅಂಗೈಯಿಂದ ಸವರಿ ನೆಕ್ಕಿಕೊಂಡ. ಅವನು ಆ ಥರ ನೆಕ್ಕುತ್ತಿರುವುದನ್ನು ನೋಡಿ ನ್ಯಾಯೆಲ್ಯಾ ಇಲ್ಲಿಬಿದ್ದsತೆs ನೆಕ್ಕಲೇ ಎಂದು ಗುಡಸೀಕರ ತನ್ನ ಪಾದ ಒಡ್ಡಿದ. ನ್ಯಾಯೆಲ್ಯಾ ಅದನ್ನೂ ನೆಕ್ಕಿದ. ಉಳಿದವರೆಲ್ಲ ನಗುತ್ತಿದ್ದರು. ಕಳ್ಳ ರಾವಣನಂತೆ ನಗುವುದನ್ನು ಈಗಿನಿಂದಲೇ ತಾಲೀಮು ನಡೆಸಿದ. ಒಬ್ಬರಿಗಿಂತ ಒಬ್ಬರು ಹುಚ್ಚುಚ್ಚಾಗಿ ನಗುತ್ತಿರುವುದನ್ನು ನೋಡಿ ಮಾಸ್ತರರಿಗೆ ಗಾಬರಿಯಾಗಿ ಯಾರಿಗೂ ಗೊತ್ತಾಗದಂತೆ ಓಡಿಹೋದ. ಗೌಡನ ಮುಂದೆ ಆಣೆಮಾಡಿದ್ದು ನೆನಪಾಗಿ ಅದನ್ನು ಮರೆಯಲೆಂದೋ, ಗಾಬರಿಯಿಂದಲೇ ನ್ಯಾಯೆಲ್ಯಾ ತಾನೂ ಎಲ್ಲರ ಜೊತೆ ನಗತೊಡಗಿದ. ಮೆರಮಿಂಡನಿಗೆ ಅದೇನು ಹುರುಪು ಬಂತೋ, ಎದ್ದು ನಿಂತು ವೀರಾವೇಶದಿಂದ:

“ಗುಡಸೀಕರರಿಗೆ ಜಯವಾಗಲಿ, ಜೈಹಿಂದ್!” ಅಂದ. ಉಳಿದ ಮೂವರೂ ಜೈಹಿಂದ್ ಅಂದರು. ನ್ಯಾಯೆಲ್ಯಾ ‘ಕರೀಮಾಯಿ’ ಅಂದ ಗುಡಸೀಕರ “ಈಗಿಂದೀಗ ಬರತೀವು, ಮುಂದ ನಡಿ ಮಗನs” ಅಂದ. ನ್ಯಾಯೆಲ್ಯಾ ಓಡಿದ.

ತೋಟದ ಗುಡಿಸಲ ಮುಂದಿನ ಚಕ್ಕಡಿಯಲ್ಲಿ ಗೌಡ ಕಂಬಳಿ ಚೆಲ್ಲಿಕೊಂಡು ಅಂಗಾತವಾಗಿ, ಎರಡೂ ಕೈ ತಲೆಗಿಂಬು ಮಾಡಿಕೊಂಡು ಮಲಗಿದ್ದ. ಶಿವಸಾನಿ ಕಾಲು ತಿಕ್ಕುತ್ತಿದ್ದಳು. ಭೂಮಿ ನಿಟ್ಟುಸಿರುಬಿಟ್ಟಂತೆ ಬೇಸಿಗೆಯ ಗಾಳಿ ಬಿಸಿಯಾಗಿತ್ತು. ಚಿಕ್ಕಿಯ ಮಂದ ಬೆಳಕಿನಲ್ಲಿ ಭೂಮಿ ನಿದ್ರಿಸಲಾರದೆ, ಎಚ್ಚರಿರಲಾರದೆ ಒದ್ದಾಡಿದಂತೆ ಗಿಡಮರ ಚಲಿಸುವ ಸದ್ದು ಆಗಾಗ ಕೇಳಿಸುತ್ತಿತ್ತು. ಅಷ್ಟರಲ್ಲಿ ಊರಿನಲ್ಲಿ ಗಂಡುಹೆಣ್ಣುಗಳೆಲ್ಲ ಕಿಟಾರನೆ ಕಿರುಚಿದ ದನಿ ಕೇಳಿಸಿತು. ಗೌಡ ಕಣ್ಣು ತೆರೆದ. ನಿಜವೋ, ಸುಳ್ಳು ಎಂದು ಕಿವಿಗೊಟ್ಟು ಕೇಳಿದ. ಶಿವಸಾನಿಯೂ ಕೇಳಿದಳು. ಹೌದು ಯಾರೋ ಕಿರುಚುತ್ತಿದ್ದರು. ಥಟ್ಟನೆ ಎದ್ದು ಕಂಬಳಿ ಹೆಗಲಿಗೇರಿಸುತ್ತಲೇ ಓಡಿದ. ಸೀದಾ ಮಾದರ ಹಬ್ಬವಾಗುವಲ್ಲಿಯೇ ಹೋದ. ಅಂಗೀಯೆಲ್ಯಾನ ಮೈಮೇಲೆ ಮಣ್ಣು ಗೊಜ್ಜುತ್ತಿದ್ದರು. ಲಗಮವ್ವ ಗುಡಸೀಕರನ ವಂಶಾವಳಿ ಉದ್ಧರಿಸುತ್ತಿದ್ದಳು. ಆಗಲೇ ಯಾರೋ ದತ್ತಪ್ಪನ ಬಳಿಗೂ ಓಡಿಹೋಗಿದ್ದರು. ಅಂಗೀಯೆಲ್ಯಾನ ಮೈ ಸುಟ್ಟುಹೋಗಿ ಎಡಭಾಗದ ಮೈಚರ್ಮ ಸುಲಿದು ಬಿದ್ದಿತ್ತು. ಇಡೀ ಮೈ ಬೆಂದ ಮಾಂಸದ ಹಾಗೆ ಬಿದ್ದಿತ್ತು. ನ್ಯಾಯೆಲ್ಯಾ ಆಗಾಗ ಬಾಯಿ ಬಾಯಿ ಬಿಡುತ್ತಿದ್ದುದರಿಂದ ಮಾತ್ರ ಜೀವವಿದೆಯೆಂದು ತಿಳಿಯಬೇಕಷ್ಟೆ. ಅಷ್ಟರಲ್ಲಿ ದತ್ತಪ್ಪನೂ ಓಡಿಬಂದ. ಮೊದಲು ಅವನನ್ನು ಗುಡಸಲಿಗೆ ಸಾಗಿಸಲಿಕ್ಕೆ ಹೇಳಿದ. ಹುಡುಗರಿಬ್ಬರು ಮೆಲ್ಲಗೆ ನ್ಯಾಯೆಲ್ಯಾನನ್ನು ಎತ್ತಿ ಅವನ ಗುಡಿಸಲ ಕಡೆ ನಡೆದರು. ಗೌಡನೂ ಬೆನ್ನಹತ್ತಿಹೋದ. ಅವರಿವರಿಂದ ವಿಷಯ ತಿಳಿಯಿತು.

ನ್ಯಾಯೆಲ್ಯಾ ಇಂದು ವಿಪರೀತ ಕುಡಿದಿದ್ದನೆಂದು, ಸರಪಂಚ ಹಾಗೂ ಮೆಂಬರರು ಕುರಿಹಬ್ಬ ನೋಡಲು ಬಂದಾಗ ತಾನೇ ಹಲಗೆ ಬಾರಿಸುವುದಾಗಿ ಕಸಿದುಕೊಂಡು ತೂರಾಡುತ್ತಾ ಬಾರಿಸತೊಡಗಿದನೆಂದೂ, ಗುಡಸೀಕರ ನಾಕಾಣೆ ಎಸೆದಾಗ, ಬಾರಿಸುತ್ತ ಅದನ್ನು ಹಣೆಗಂಟಿಸಿಕೊಳ್ಳಲು ಹೋದಾಗ ಅಲ್ಲೇ ಪಕ್ಕದಲ್ಲೇ ಇದ್ದ ಬೆಂಕಿಯಲ್ಲಿ ಬಿದ್ದನೆಂದೂ, ಎಷ್ಟೇ ಅವಸರದಲ್ಲಿ ಹೊರತೆಗೆದರೂ ಅಂಗಿ ಸೆರೆಯಲ್ಲಿ ತೊಯ್ದಿದ್ದರಿಂದ ಬೇಗನೇ ಆರಿಸಲಾಗಲಿಲ್ಲವೆಂದೂ ಹೇಳಿದರು. ಅವರವರ ಕರ್ಮ; ಗೌಡ ಸುಮ್ಮನೇ ಕೂತ.

ದತ್ತಪ್ಪ ಮಾಡುವ ಔಷಧಿಯನ್ನೆಲ್ಲ ಪೂರೈಸಿದ ಮೇಲೆ ಹೊರಗೆ ಬಂದ. ಮಾತಿಲ್ಲದೆ ಮುಂದೆ ಮುಂದೆ ನಡೆದ. ಗೌಡ ಹಿಂದಿನಿಂದ ಬಂದ. ದತ್ತಪ್ಪ ಏನಾದರೂ ಹೇಳುತ್ತಾನೆಂದು ಗೌಡನ ನಿರೀಕ್ಷೆ. ಹೊರಳುದಾರಿ ಬಂದೊಡನೆ ಗೌಡನಿಗೆ ನಿರಾಸೆಯಾಯ್ತು. ಗೌಡ “ದತ್ತೂ” ಅಂದ. ದತ್ತಪ್ಪ ತಿರುಗಿನಿಂತ. ಪಕ್ಕದಲ್ಲಿದ್ದ ಒಂದು ಬಂಡೆಯ ಮೇಲೆ ದತ್ತಪ್ಪ ಹೋಗಿ ಕೂತ. ಗೌಡನೂ ಕಂಬಳಿ ಚೆಲ್ಲಿಕೊಂಡು ಮೊಳಕಾಲಿಗೆ ಕೈಸುತ್ತಿ ಕೂತ. ಅವನೇ ಮಾತಾಡಲೆಂದು ದತ್ತಪ್ಪ ಕೂತ. ಏನು ಮಾತಾಡುವುದೆಂದು ಗೌಡ ಕೂತ. ಬಹಳ ಹೊತ್ತಿನ ತನಕ ಇಬ್ಬರೂ ಸುಮ್ಮನೇ ಕೂತರು. ಆ ಸಮಯದಲ್ಲಿ ಯಾರಾದರೂ ಹೆಂಗಸರು ಹೊರಗೆ ಬಂದು ಇವರನ್ನು ಕಂಡಿದ್ದರೆ ಭೂತಗಳೆಂದು ಖಂಡಿತ ಹೆದರುತ್ತಿದ್ದರು. ಅಷ್ಟೇ ಯಾಕೆ ಕಂಡವರು ಯಾರಾದರೂ ನಿನ್ನೆ ರಾತ್ರಿ ಈ ಬಂಡೇ ಮೇಲೆ ಗೌಡ, ದತ್ತಪ್ಪ ಕೂತಿದ್ದರೆಂದು ಹೇಳಿದರೆ ಯಾರೂ ನಂಬುತ್ತಿರಲಿಲ್ಲ.

ಬಹಳ ಹೊತ್ತಾದ ಬಳಿಕ ದತ್ತಪ್ಪ ಬಾಯಿಬಿಟ್ಟ.

“ಗೌಡಾ, ಊರಾಗ ಮಾರಿ ಹೊಕ್ಕsದಲ್ಲೋ.”

ಗೌಡ ಸುಮ್ಮನಾದ.

“ನಾಳಿ ಮುಂಜಾನೆ ಅವನ ಮನೀಗೆ ಹೋಗಿ, ಪಂಚಾಯ್ತಿಗೆ ರಾಜೀನಾಮೆ ಕೊಡಂತ ಹೇಳಿಬರ‍್ತಿನಿ.”

– ಅಂದ. ಗೌಡ ಇನ್ನೂ ಸುಮ್ಮನಿದ್ದ.

“ಏನಾರ ಮಾತಾಡೊ”

ಗೌಡ ನಿಧಾನವಾಗಿ ತುಟಿಬಿಚ್ಚಿದ:

“ಜರಾ ವಿಚಾರಮಾಡೊ ದತ್ತೂ. ಅವನ ಕೈಯಿಂದ ಪಂಚಾಯ್ತಿ ತಗೊಂಡರೇನ ಬಂತು? ತಗೊಳ್ಳಾಕ ಅದೆಲ್ಲಿ ಐತಿ? ಒಂದು ವೇಳೆ ಕಸಗೊಂಡಿ ಅಂತ ತಿಳಿ; ಅವರೈದೂ ಮಂದಿ ಕೂಡತಾರ, ಮನ್ಯಾಗ ಕುಡೀತಾರ, ತಾವೂ ಕೆಡತಾರ, ಊರನ್ನೂ ಕೆಡಸ್ತಾರ. ಊರಾಗ ಪಂಚಾಯ್ತಿ ಇಲ್ಲಪಾ. ಗುಡಸ್ಯಾಗ ದುಡ್ಡ ಐತಿ, ಮದ ಐತಿ, ಆ ಹುಡುಗನ್ನ ಹಾದಿಗೆ ತರಾಕ ಏನಾರ ಹಾದಿ ಹುಡುಕು.”

ಗೌಡನ ಮಾತೂ ನಿಜವೇ. ನಿಜ ಹೇಳೋದಾದರೆ ಪಂಚಾಯ್ತಿ ಎಂಬುವುದೆಲ್ಲಿದೆ? ಜನ ಆ ಬಗ್ಗೆ ಗಂಭೀರವಾಗಿ ಯೋಚಿಸಿದವರೇ ಅಲ್ಲ. ನ್ಯಾಯೆಲ್ಯಾನಂಥವರು ಕುಡಿಯಲಿಕ್ಕೆ ಹೋಗಿ ಹುದಲಾ ಬೀಳುತ್ತಾರೆ. ಎದ್ದುಬರಲು ತಾಕತ್ತಿಲ್ಲದೆ ಒದ್ದಾಡುತ್ತಾರೆ; ಒಂದು ದಿನ ಸಾಯುತ್ತಾರೆ.

ಇಬ್ಬರಿಗೂ ಯಾವ ಹಾದಿ ಕಾಣಿಸಲಿಲ್ಲ. ಯಾರಿಗ್ಗೊತ್ತು? ಪಂಚಾಯ್ತಿ ಕಸಿದುಕಂಡರೆ ಅವನ ಹುಳ ತಗ್ಗಬಹುದು. ಅವಮಾನವಾಗಿ ಹಾದಿಗೆ ಬರಬಹುದು ಅಥವಾ ಏನಿಲ್ಲೆಂದರೂ ಈಗುಳಿದ ಹಾದಿಯಂತೂ ಅದೊಂದೇ. ತಾವಿಬ್ಬರೂ ಸತ್ತಮೇಲೆ ಏನೋ, ಎಂತೋ, ಅಂತೂ ಜೀವಂತವಿದ್ದಾಗಲಾದರೂ ಊರು ಹಾಳುಗೆಡವಬಾರದೆಂದುಕೊಂಡರು. ಎದ್ದರು. ಅಷ್ಟರಲ್ಲಿ ಹೊಲಗೇರಿಯಿಂದ ಮತ್ತೆ ಕಿರುಚಾಟ ಕೇಳಿಸಿತು. ನ್ಯಾಯೆಲ್ಯಾ ಸತ್ತಿದ್ದ!

ಮುನಿಯೆಲ್ಯಾ, ಮಾರಾಯ, ಕುಡಿದ, ತಿಂದ, ಬದುಕನ್ನು ಬಳಿದುಂಡ, ಕರಿಮಾಯಿಯನ್ನು ಕಂಡ, ಭೂತಗಳನ್ನು ಕಂಡ. ಕಂಡದ್ದನ್ನು ಕಥೆಮಾಡಿದ. ತಾನೇ ಕಥೆಯಾಗಿ ಊರವರ ನೆನಪಿಗೊಂದು ನೋವಾದ. ಮಾಯದ ಗಾಯವಾದ. ಕರಿಮಾಯಿಗೆ ಹೆಸರಿಟ್ಟ, ಹೆಂಡತಿಗೆ ಹೆಸರಿಟ್ಟ, ಸ್ವಯಂ ಮೂರು ಹೆಸರಿನಿಂದ ಹೆಸರುವಾಸಿಯಾದ. ಕರಿಮಾಯಿಯ ಆಣೆ ತಪ್ಪಿದರೆ ಏನಾಗುವುದೆಂಬುದಕ್ಕೆ ಉದಾಹರಣೆಯಾದ. ಅವನಿಗೆ ಗಣಪದವಿ ದಯಪಾಲಿಸಲೆಂದು ಕರಿಮಾಯಿಗೆ ಶರಣೆನ್ನೋಣ.