ಊರ ಚರಿತ್ರೆಯಂತೆಯೇ ಕರಿಮಾಯಿಯ ಚರಿತ್ರೆಯೂ ಅಸ್ಪಷ್ಟವಾಗಿಯೇ ಇದೆ. ಸಿಕ್ಕುವ ಲಗಮವ್ವನ ಹಾಡು, ದತ್ತಪ್ಪನ ಚಿಂತಾಮಣಿ ಹಾಗೂ ಕರಿಮಾಯಿಯ ಹಾಲೀ ಇರುವ ಆರಾಧನೆ, ಆಚರಣೆಗಳ ವಿವರಗಳಿಂದ ಅವಳ ಚರಿತ್ರೆ ಹೀಗಿರಬಹುದೆಂದು ತಿಳಿಯುತ್ತದೆ:

ಅನಾದಿ ಕಾಲದಲ್ಲಿ ಧರಣಿಯ ಮೇಲೆ, ದೇವ ದಾನವರ “ವಿದ್ದ”ದಿಂದಾಗಿ ಪಾಪ ಅಧಿಕವಾಯಿತು. ಮಳೆ ಬೀಳದ ಹಾಗೆ, ಬೆಳೆ ಏಳದ ಹಾಗಾಗಿ ಲೋಕದ ಮಂದಿಗೆ ಸಂಕಟವೂ ಜಡೆಮುನಿ ಮುಂತಾದ ಸಾಧು ಸತ್ಪುರುಷ ಸಜ್ಜನ ಋಷಿಮುನಿಗಳ ಜಪತಪಕ್ಕೆ ಕಂಟಕವೂ ಉಂಟಾಯಿತು. ಆಗ ಭೂಮಿತಾಯಿ ಶಿವಪಾರ್ವತಿಯರ ಬಳಿ ಹೋಗಿ ಕಾಪಾಡಬೇಕೆಂದು ಸೆರಗೊಡ್ಡಿ ಬೇಡಿದಳು. ಕೂಡಲೇ ಶಿವನು ತನ್ನ ಹಣೆಯ ಬೆವರನ್ನು ಸೀಟಿ ಭೂಮಿಯ ಮೇಲೆ ಚೆಲ್ಲಿದನು. ಆ ಕ್ಷಣವೇ ಅದೊಂದು ಅದ್ಭುತವಾದ ಸ್ತ್ರೀ ರೂಪ ತಾಳಿತು. ಅವಳೇ ಕರ್ರೆವ್ವ ತಾಯಿ.

ಆಗ ಬಿರುಬೇಸಿಗೆ. ಬಿಸಿಲಿನ ಧಗೆ ತಡೆಯದೆ ಕರ್ರೆವ್ವ ನೀರಡಿಸಿದಳು, ನೀರಿಗಾಗಿ ಹುಡುಕುತ್ತಿರುವಾಗ “ಅಯ್ಯೋ, ಕಾಪಾಡ್ರೋ, ಗಂಡಸಾದರ ಶಿವ ಅಂದೇನು, ಹೆಂಗಸಾದರೆ ಪಾರ್ವತಿ ಅಂದೇನು, ಕಾಪಾಡ್ರೋ” ಎಂಬ ಸ್ವರ ಕೇಳಿಸಿತು. ಕರ್ರೆವ್ವ ಹೋಗಿ ನೋಡಿದರೆ ಒಬ್ಬ ಮುನಿ ದೈತ್ಯರಿಗೆ ಹೆದರಿ ಓಡಿ ಹೋಗುವಾಗ ಕಲ್ಲೆಡವಿ ಆಳವಾದ ಬಾವಿಯಲ್ಲಿ ಬಿದ್ದಿದ್ದ, ಅವನನ್ನು ಹೇಗೆ ಕಾಪಾಡಬೇಕು? ಕೊನೆಗೆ ಸುತ್ತ ಯಾರೂ ಇಲ್ಲದ್ದನ್ನು ನೋಡಿ, ಉಟ್ಟ ದಟ್ಟಿಯನ್ನೇ ಕಳೆದು ಬಾವಿಯಲ್ಲಿಳಿಬಿಟ್ಟಳು, “ಕಣ್ಣುಮುಚ್ಚಿ ದಟ್ಟಿ ಹಿಡಿ. ನಾ ತಗಿ ಅಂಬೋ ತನಕ ಕಣ್ಣು ತೆಗೀಬೇಡ: ತಗಿದರೆ ಸಿಗಿದೇನೆಂದು” ಹೇಳಿದಳು. ಅವನು ಬಿಟ್ಟ ದಟ್ಟೆಯ ಆ ತುದಿ ಹಿಡಿದ. ಈ ತುದಿಯಿಂದ ಎಳೆದಳು.

ಮೇಲೆ ಬಂದನೋ ಇಲ್ಲವೋ, ಮುನಿಯ ಚಪಲಕ್ಕೇನೆನ್ನೋಣ – ಕಣ್ಣು ತೆರೆದ, ಎದುರಿಗೆ ಬೆತ್ತಲೆ ಮಾಯೆ! ಚಿತ್ತ ಚಂಚಲವಾಗಿ ಚೆಲ್ಲಿಹೋಯಿತು. ತಕ್ಷಣ ಕರ್ರೆವ್ವ ತನ್ನ ಕಠಾರಿಯಿಂದ ನೆಲದ ಮೇಲೆ ಏಳು ಅಡ್ಡಗೆರೆ ಕೊರೆದು, “ದಾಟಿ ಬಂದರೆ ಮೀಟಿ ಒಗೆದೇನು” ಎಂದಳು ಜಡೆಮುನಿಗಳು ಹೆರಿದರೆಂದು ತೋರುತ್ತದೆ: ಸುಮ್ಮನೆ ನಿಂತರು. ಕರ್ರೆವ್ವ ಸೀರೆ ಉಟ್ಟಾದ ಮೇಲೆ ಜಡೆಮುನಿ ಆಕೆ ಕೊರೆದ ಏಳೂ ಗೆರೆಗಳಲ್ಲಿ ತನ್ನ ರಕ್ತ ಸುರಿಸಿದನೆಂದೂ, ಅವು ನೆತ್ತರ ನದಿಯಾಗಿ ಹರಿದವೆಂದೂ ಅಷ್ಟೂ ನದಿ ದಾಟಿ ಬಂದು ಕರ್ರೆವ್ವನ್ನು ವರಿಸಿದನೆಂದು ಅವಳಿಗೆ ‘ಕರಿಮಾಯಿ’ ಎಂದು ಹೆಸರಿಟ್ಟು ಮದುವೆಯಾದನೆಂದು ತಿಳಿಯುತ್ತದೆ.

ಇವರು ಬಾಳ್ವೆ ಮಾಡಿದ್ದು ಜಂಬೂ ದ್ವೀಪದ ಶ್ರೀರಾಮ ಕ್ಷೇತ್ರದ ಮೇಲನಾಡಿನ ಶಿವಾಪುರದ ಬಳಿಯ ಅಡವಿಯಲ್ಲಿ! ಈಗ ಈ ದಂಪತಿಗಳಿಗೆ ಇಬ್ಬಗೆಯ ಶತ್ರುಗಳು ಹುಟ್ಟಿಕೊಂಡರು. ಕರ್ರೆವ್ವ ದೈತ್ಯರ ಕುಲದವಳಾಗಿ ದೇವಕುಲದ ಜಡೆಮುನಿಯನ್ನು ಮದುವೆಯಾದುದು ತಪ್ಪೆಂದು ದೈತ್ಯರು ಸಾಧಿಸಿದರು. “ಈ ಶೂದ್ರಕನ್ಯೆ”ಯನ್ನು ಮದುವೆಯಾಗಿ ಜಡೆಮುನಿ ತಮ್ಮ          ‘ಉಚ್ಚಕುಲ’ವನ್ನು ಕುಲಗೆಡಿಸಿದುದರಿಂದ ಇಬ್ಬರನ್ನೂ ಸಂಹರಿಸಿ ಬಿಡಬೇಕೆಂದು ದೇವತೆಗಳು ಛಲ ಹಿಡಿದರು. ಆಗ ಕರಿಮಾಯಿ ತುಂಬು ‌ಗರ್ಭಿಣಿ.

ಒಂದು ದಿನ ಜಡೆಮುನಿ ತಪಸ್ಸು ಮಾಡುತ್ತಿರಬೇಕಾದರೆ ಕರಿಮಾಯಿ ನೀರಿಗೆ ಹೋಗಿರಬೇಕಾದರೆ ದೇವತೆಗಳು ಬಂದು ಕುಲಗೆಟ್ಟ ಜಡೆಮುನಿಯನ್ನು ಕೊಂದರು. ಅಂದು ಹುಣ್ಣಿಮೆ. ಕರಿಮಾಯಿ ಆ ದಿನ ವಿಧವೆಯಾದುದರಿಂದ ಆ ದಿನಕ್ಕೆ ರಂಡಿ ಹುಣ್ಣಿಮೆಯೆಂದು ಹೆಸರಾಯಿತು. ದೇವತೆಗಳು ಅಲ್ಲಿಗೂ ತೃಪ್ತರಾಗದೆ ಜಡೆಮುನಿಯ ಸಂತಾನವನ್ನು ನಾಶಪಡಿಸಬೇಕೆಂದು ಕರಿಮಾಯಿಯ ಗರ್ಭಕ್ಕೆ ಗುರಿಯಿಟ್ಟು ಹೊರಟರು. ಕರಿಮಾಯಿ ತುಂಬಿದ ಗರ್ಭ ಹೊತ್ತುಕೊಂಡು ದೇವತೆಗಳನ್ನು ಎದುರಿಸಲಾರದೆ ಅಡವಿ ಪಾಲಾದಳು. ತ್ರಿಕಾಲ ಜ್ಞಾನಿಗಳಾದ ದೇವತೆಗಳಿಗೆ ಕರಿಮಾಯಿಯಿರುವ ಠಿಕಾಣ ಗೊತ್ತಾಯಿತು. ಅವಳಿಗೆ ಅನ್ನ ನೀರು ಸಿಕ್ಕದ ಹಾಗೆ ಮಾಡಿದರು. ತಾಯಿ ಕಲ್ಲು ಕುದಿಸಿ ತಿಂದಳು. ಮುಳ್ಳು ಬೇಯಿಸಿ ತಿಂದಳು.

ಅಟ್ಟಿಸಿಕೊಂಡು ಬಂದ ದೇವತೆಗಳನ್ನು ನಿವಾರಿಸಿ ಪಾರಾಗಿ ಮಾವಿನ ತೋಪಿನಲ್ಲಿ ಹುದುಗಿಕೊಂಡು ಕೂತಿದ್ದಳು. ಜೋತುಬಿದ್ದ ಹುಳಿ ಮಾವಿನ ಗೊಂಚಲು ನೋಡಿ, ಬಯಕೆ ಮೂಡಿ ಬಾಯಿ ನೀರೂರಿತು. ಅವು ಕೈಗೆಟಕುವಂತಿರಲಿಲ್ಲ. ಹೋಗಿ ಕಷ್ಟಪಟ್ಟು ಕಲ್ಲಿನ ಮೇಲೆ ಕಲ್ಲು ಪೇರಿಸಿ, ಅದರ ಮೇಲೆ ಹತ್ತಿ ಇನ್ನೇನು ಮಾವಿನ ಗೊಂಚಲು ಸಿಕ್ಕಿತೆಂಬಾಗ “ಕಾಯಿ ಹರಿದೀಯೇ ಹಾದರಗಿತ್ತಿ” ಎಂಬ ದನಿ ಕೇಳಿಸಿತು. ನೋಡಿದರೆ ಒಂದು ಕಡೆ ದೇವತೆಗಳು ಬಿಲ್ಲು ಬಾಣ ಹಿಡಿದು ತನ್ನ ಗರ್ಭಕ್ಕೆ ಗುರಿಯಿಟ್ಟು ನಿಂತಿದ್ದಾರೆ! ಹಾ ಎನ್ನುವುದರೊಳಗೆ ಸಾವಿರದೊಂದು ಬಾಣಗಳು, ಸಾವಿರದೊಂದು ಗದೆಗಳು ಕರಿಮಾಯಿಯ ಗರ್ಭಕ್ಕೆ ತಾಗಿ, ತಾಯಿ ಕಿಟಾರನೆ ಕಿರಿಚಿಕೊಂಡಳು.

ಕಳಚಿದ ಗರ್ಭವನ್ನು ಉಡಿಯಲ್ಲಿ ಕಟ್ಟಿ ಸೊಂಟಕ್ಕೆ ಬಿಗಿದುಕೊಂಡಳು. ಅವಳ ಕಿರುಚುವಿಕೆ ಕೇಳಿ ಕೈಲಾಸದ ಶಿವ ನಡುಗಿ ತನ್ನ ನಂದಿಯನ್ನೂ ಪಾರ್ವತಿ ತನ್ನ ಹುಲಿಯನ್ನೂ ಇವಳ ಬಳಿಗೆ ಓಡಿಸಿದರು. ಕರಿಮಾಯಿ ಹುಲಿಯೇರಿ ದೇವ ದಾನವರನ್ನು ಅಟ್ಟಿಸಿಕೊಂಡು ಹೊಕ್ಕಲ್ಲಿ ಹೊಕ್ಕು, ಹರಿದಲ್ಲಿ ಹರಿದು ಬೇಟೆಯಾಡಲಾರಂಭಿಸಿದಳು. ಆರಾರು ಗಾವುದಕ್ಕೊಂದು ಹೆಜ್ಜೆಯನ್ನಿಟ್ಟು ದುರುಳರ ಮೇಲೆ “ವಿದ್ದ” ಹೂಡಿದಳು. ಕಾರಂಬೋ ಕತ್ತಲೆನ್ನದೆ, ಬೊರೆಂಬೋ ಮಳೆ ಗಾಳಿಯೆನ್ನದೆ ‘ಕಟ್ಟಿರೋ ಕಳ್ಳ ಲೌಡಿಮಕ್ಕಳ’ನ್ನೆಂದು ಮೆಟ್ಟಿಮೆಟ್ಟಿ ಕೊಂದಳು. ದೇವತೆಗಳು ಹೆದರಿ ದೇವಲೋಕ ಸೇರಿದರು. ದೈತ್ಯರೋ ಮಾಯಾವಿಗಳು. ಅವರ ಒಂದು ಹನಿ ರಕ್ತ ಬಿದ್ದಲ್ಲಿ ಸಾವಿರಾರು ದೈತ್ಯರಿದ್ದರು. ಕರಿಮಾಯಿಗೆ ಏನು ಮಾಡಬೇಕೆಂದು ತೋಚದಂತಾಯ್ತು. ಕೊನೆಗೆ ತನ್ನ ನಾಲಗೆಯನ್ನೇ ಭೂಮಿಯ ಮೇಲೆ ಚಾಚಿ ದೈತ್ಯರ ಸಂಹರಿಸಿದಳು. ರಕ್ತ ಬೀಳುಬೀಳುತ್ತಿದ್ದಂತೆ ನೆಕ್ಕಿದಳು. ತಾಯಿಯ ಮಹಿಮೆ, ಬಿದ್ದ ರಕ್ತ ಜೇನುತುಪ್ಪವಾಯಿತು! ಅಷ್ಟೂ ದೈತ್ಯರ ಶಿರ ತರಿದು ಶಿವನ ಬಳಿಗೆ ಹೋದಳು. “ಗಂಡನ ಜೀವ, ಮಕ್ಕಳ ಜೀವ ಕೊಡುವಿಯೊ? ನಿನ್ನನ್ನೇ ಮುಕ್ಕಲೋ? “ ಎಂದು ಕೇಳಿದಳು. ಶಿವ ಹೆದರಿ ಉಡಿಯಲ್ಲಿಯ ಇಪ್ಪತ್ತೊಂದು ಪಿಂಡಗಳಿಗೆ ಜೀವ ಬರಿಸಿದ. ಅವು ಇಪ್ಪತ್ತೊಂದು ಮಕ್ಕಳಾದವು, ಜಡೆಮುನಿಗೂ ಜೀವ ಬಂತು. ಆದಿನ ಕರಿಮಾಯಿ ಮುತ್ತೈದೆಯಾಗಿ ಕುಂಕುಮ ಹಚ್ಚಿಕೊಂಡಳು. ಅದಕ್ಕೆ ಮುತ್ತೈದೆ ಹುಣ್ಣಿಮೆಯೆಂದು ಈಗಲೂ ಹೇಳುತ್ತಾರೆ.

ಕರಿಮಾಯಿ ಮಕ್ಕಳು ಹಾಗೂ ಗಂಡನೊಂದಿಗೆ ತಿರುಗಿ ಭೂಲೋಕಕ್ಕೆ ಬಂದುದೇನೋ ಆಯಿತು. ಆದರೆ ಅವಳಿಗೆ ದುರುಳ ದೇವತೆಗಳ ಭಯ ಇದ್ದೇ ಇತ್ತು. ಆದ್ದರಿಂದ ಮಕ್ಕಳನ್ನು ಸಂಜೆಯ ತನಕ ಆಡಬಿಟ್ಟು ಸೂರ್ಯಾಸ್ತವಾದೊಡನೆ ಅವರನ್ನು ಕವಡೆಗಳಾಗಿ ಪರಿವರ್ತಿಸಿ ಸರ ಮಾಡಿ ಕತ್ತಿನಲ್ಲಿ ಧರಿಸಿಕೊಳ್ಳುತ್ತಿದ್ದಳು. ಅದರ ಗುರುತಿನ ಇಪ್ಪತ್ತೊಂದು ಕವಡೆಗಳ ಸರವೊಂದು ಮೂರ್ತಿಯ ಕತ್ತಿನಲಿ ಈಗಲೂ ಇದೆ, ಮುಂದೆ ನುಂಗಿದ ದೈತ್ಯರನ್ನು ಕಾರಿಕೊಂಡಳೆಂದೂ, ಅವರು ಜೇನುಹುಳುಗಳಾಗಿ ಹೊರಬಂದು ಅವಳ ಗಣಂಗಳಾದರೆಂದೂ ಕಥೆಯಿದೆ. ಗುಡಿಯಲ್ಲಿ ಮೂರು ಹೆಜ್ಜೇನಿನ ಹುಟ್ಟುಗಳಂತೂ ಈಗಲೂ ಇವೆ.

ಇಲ್ಲೀಗಿ ಹರ ಹರ ಇಲ್ಲೀಗಿ ಶಿವ ಶಿವ
ಇಲ್ಲೀಗಿ ನಮ ಕತಿ ಸಂಪೂರ್ಣವಾಯ್ತು

ಎಂದು ಲಗಮವ್ವನ ಹಾಡು ಇಲ್ಲಿಗೆ ಮುಗಿಯುತ್ತದೆ. ಮುಂದಿನ ಕಥಾಭಾಗ ಹೆಳವರು ಹೇಳುವ ಗೌಡನ ವಂಶಾವಳಿಯಲ್ಲಿದೆ.

ಇತ್ತ ಜಂಬೂ ದ್ವೀಪದ ಶ್ರೀರಾಮ ಕ್ಷೇತ್ರದ ಮೇಲನಾಡಿನ ಶಿವಾಪುರದಲ್ಲಿ ಆದಿಗೌಡ ಮಂದಿಮಾರ್ಬಲ ದಂಡುದಳವಾಯಿ ಕೋಟಿಕೊತ್ತಳ ಸಹಿತ ರಾಜ್ಯವಾಳುತ್ತಿದ್ದ. ಅವನ ಬಳಿ ಸಾವಿರದೊಂದು ಹಿಂಡುವ ಆಕಳಗಳಿದ್ದವು, ತುಂಬಿದ ಭಂಡಾರವಿತ್ತು. ತುಳುಕುವ ತಿಜೋರಿಯಿತ್ತು. ಹೌಂದೆನ್ನುವ ಮಂತ್ರಿ, ಬಾಗುವ ಪ್ರಜೆಗಳಿದ್ದರು. ಏನಿದ್ದರೇನು? ಮಕ್ಕಳ ಫಲಪುತ್ರಸಂತಾನವಿರಲಿಲ್ಲ. ಅಂಗೈಯಲ್ಲಿ ತಲೆಯಿಟ್ಟು ರಾಜರಾಣಿ ಭಾರೀ ದೊಡ್ಡ ದುಃಖ ಮಾಡಿದರು.

ಹೀಂಗಿರಲಾಗಿ ಸಾವಿರದೊಂದು ಆಕಳು ದಿನಾ ಗಂಗಾಳ ಮಾತ್ರ ಹಿಂಡಿದವು. ಯಾಕೆಂದು ವಿಚಾರಿಸಲಾಗಿ ಸಾವಿರದೊಂದನೆ ಕೆಂದಾಕಳು ಹಿಂಡಲಿಲ್ಲವೆಂದಾಯಿತು. ಅದರ ಮೇಲೆ ನಿಗಾ ಇಟ್ಟ ರಾಜ ಅದರ ಹಿಂದಿನಿಂದಲೇ ಕಾಡಿಗೆ ಹೋದ. ನೋಡಲಾಗಿ ಒಂದು ಹುತ್ತದ ಮೇಲೆ ಹಾಲು ಕರೆಯುತ್ತಿತ್ತು. ಅದನ್ನು ಅಗಿಸಿದ. ಒಳಗೆ ಕರಿಮಾಯಿ ಕಾಣಿಸಿ “ನಿಲ್ಲೋದಕ್ಕೊಂದು ನೆಲಿ ಮಾಡು: ನೀ ಮಣ್ಣ ಮುಟ್ಟಿದರ ಚಿನ್ನ ಮಾಡತೀನಿ” ಎಂದಳು. ಈಗಿರುವ ದೇವೀ ಗುಡಿಯನ್ನು ಆಗಲೇ ಕಟ್ಟಿಸಿದ್ದು, ಗುಡಿ ಕಟ್ಟಿಸಿದ ಮೇಲೆ ರಾಜ ಮುಟ್ಟಿದ್ದೆಲ್ಲ ಚಿನ್ನ,ರನ್ನವಾಯಿತು. ಪಾವು ಬೆಳೆಯುವಲ್ಲಿ ಪಲ್ಲ ಬೆಳೆಯಿತು. ಸೇರು ಬೆಳೆಯುವಲ್ಲಿ ಹೇರು ಬೆಳೆಯಿತು. ವರ್ಷ ತುಂಬುವುದರೊಳಗಾಗಿ ರಾಣಿ ಗಂಡು ಹಡೆದಳು. ಆಗಲೇ ರಾಜ ತಾಯಿಗೆ ಚಿನ್ನದ ಮುಖ ಮಾಡಿಸಿದ. ಅದು ಈಗಲೂ ಇದೆ. ಶೀಗೆ ಹುಣ್ಣಿಮೆ ದಿನ ಈ ಮುಖ ಹಾಕಿ ಸಮೃದ್ಧಿ ಉತ್ಸವ ಆಚರಿಸುವ ಪದ್ಧತಿ ಇದೆ. ಇಂದಿನ ತನಕ ಆ ವಂಶದಲ್ಲಿ ನೂರು ಜನ ಗೌಡರಾದರು. ಅವರ ಪೈಕಿ ಇತ್ತೀಚಿನ ಕೆಲವರ ಹೆಸರುಗಳು ಮಾತ್ರ ಹೆಳವರ ಹಾಡಿನಲ್ಲಿವೆ. ಕೊನೆಯವನೇ ಪರಗೌಡ; ನೂರಾ ಒಂದನೇಯವ.

ಕರಿಮಾಯಿ “ಬಂಗಾರ ಮುಖದವಳು” ಎಂದು ವಿಶೇಷಣ ಬಂದುದೇ ಆದಿಗೌಡ ಮಾಡಿಸಿದ ಈ ಬಂಗಾರದ ಮುಖದಿಂದ. ಇದನ್ನು ಮಾಡಿದವನ ಹೆಸರಾಗಲಿ, ಊರಾಗಲಿ ಗೊತ್ತಾಗಿಲ್ಲ. ದಾಖಲೆಗಳೂ ಇಲ್ಲ. ಮೂರು ಕೊಪ್ಪರಿಗೆ ಚಿನ್ನದ ಕಸ, ಕಸರು ಸೋಸಿ ತೆಗೆದಾಗ ಒಂದು ಕೊಡ ಅಸಲು ಚಿನ್ನ ಸಿಕ್ಕಿತು. ಅದರಿಂದಾದ ಮೂರ್ತಿಯಿದು. ಕೆಲವರ ಪ್ರಕಾರ ತಂತಾನೇ ಉದ್ಭವಿಸಿದ್ದು. ನಂಬಿಕೆಗೆ ತಕ್ಕ ಹಾಗೆ ಆ ಬಂಗಾರದ ಮುಖವೂ ಅಷ್ಟೇ ಸುಂದರವಾಗಿದೆ.