ಬೆಳಗಾಯಿತು. ಆದಿ ಊರವರು ದಿನಕ್ಕಿಂತ ಹೆಚ್ಚು ಖುಷಿಪಡಬೇಕಾಗಿತ್ತು. ಯಾಕೆಂದರೆ ಅದು ಕರಿಬೇಟೆಯ ದಿನ. ಕರಿಬೇಟೆ ಕ್ಷತ್ರಿಯ ನಾಯಕರ ಹಬ್ಬ. ಗೌಡನೂ ಅದೇ ಕುಲದವನು. ತರುಣ ನಾಯಕರೆಲ್ಲ ನಿನ್ನೆಯೇ ಬೇಟೆಯಾಡಲಿಕ್ಕೆ ಹೋಗಿದ್ದರಲ್ಲ. ಈ ಹೊತ್ತು ಅವರು ಬಂದೊಡನೆ ಬೇಟೆಯ ಮೆರವಣಿಗೆ ಮಾಡಿ ಗೌಡನಿಗೊಂದು ಪಾಲು ಕೊಟ್ಟು ಮನೆಗಳಿಗೆ ಹೋಗುತ್ತಾರೆ. ಇಂದು ರಾತ್ರಿ ನಾಯಕರ ಮನೆಗಳಲ್ಲೆಲ್ಲ ಮಾಂಸದ ಅಡಿಗೆ, ಊಟ ಮಾಡಿ ಎಲ್ಲರೂ ಕರಿಮಾಯಿ ಗುಡಿಯಲ್ಲಿ ಸೇರುತ್ತಾರೆ. ತಾಜಾ ಭಟ್ಟಿಸೆರೆ ಕುಡಿಯುತ್ತ ಸೂಳೆಯರ ಬೇಟೆ ಬೇರೆಯವರು ಕುಣಿಯುವುದಿಲ್ಲ. ಆದರೆ ಉಳಿದವರು ವಿನೋದ ನೋಡುವ ಅವಕಾಶ ತಪ್ಪಿಸಿಕೊಳ್ಳುವದಿಲ್ಲ.

ಹಾಡುಗಳ ತುಂಬ ಬೇಟೆಯ ಸಾಹಸದ ವರ್ಣನೆಗಳೇ, ಅವೆಲ್ಲ ಪದ್ಧತಿಯ ಹಾಡುಗಳು, ಹುಡುಗರು ಬೇಟೆಯಲ್ಲಾದ ಹಸಿಗಾಯಗಳುಳ್ಳ ಕರಿಯ ಬರಿ ಮೈಗಳನ್ನು ಉಬ್ಬುಬ್ಬಿಸಿ ತೋರುತ್ತ ಮದ ಉಕ್ಕುವ ಎಳೇ ಸೂಳೆಯರ ಸಂದಿಗೊಂದಿಗಳನ್ನು ಕಣ್ಣಿನಿಂದ ಬಗಿಯುತ್ತ, ಸೆರೆಯ ನಶೆಯಲ್ಲಿ ಸೊಂಟ ತೇಲಿಸುತ್ತ ಕುಣಿಯುತ್ತಿದ್ದರೆ ನೋಡುವ ಹೆಣ್ಣುಕಣ್ಣುಗಳೆಲ್ಲ ಕನಸುಗಳನ್ನು ಹಡೆಯುತ್ತವೆ. ಅಷ್ಟೊಂದು ಹಸಿದ ಕಣ್ಣುಗಳಿಗೆ ಗುರಿಯಾಗುವ ಅವಕಾಶವನ್ನು ಯಾವ ಮತಿವಂತ ಪರಿಪಾಠವೂ ಇದೆ. ಈ ಸಲ ಯಾರು ಬಂದಿದ್ದಾರೆ, ಹ್ಯಾಂಗಿದ್ದಾರೆ, ಎಂಬೆಲ್ಲ ಕುತೂಹಲಗಳು ನೋಡುವವರಲ್ಲಿ ಇರುತ್ತಿದ್ದವು. ಅಷ್ಟೇ ಅಲ್ಲ, ಇನ್ನೂ ಹದಿನೈದು ದಿನ ಹಬ್ಬ ಇರುವಾಗಲೇ ನಾಯಕರ ಹುಡುಗರ ಭೇಟಿಯಾದರೆ “ಏನಪಾ ನಾಯಕಾ, ಈ ವರ್ಷ ಯಾ ಊರ ಸೂಳೇರ್ನ ಕರಸ್ತೀರೋ?” ಎಂದೆಲ್ಲ ಕೇಳುತ್ತಿದ್ದರು.

ಆದರೆ ಈ ದಿ ಕೊನೇ ಪಕ್ಷ ಸುದ್ದಿ ತಿಳಿದವರಿಗಂತೂ ಆ ಉತ್ಸಾಹ ಉಳಿದಿರಲಿಲ್ಲ. ಗೌಡ ಎಂದಿನಂತೆ ಬೆಳಿಗ್ಗೆದ್ದು ಕೆರೆಯಲಿ ಜಳಕ ಮಾಡಿ ಕರಿಮಾಯಿಗೆ ಕೈ ಮುಗಿದು ಮನೆಗೆ ಬಂದ. ನ್ಯಾರೆ ಮಾಡಿ ತೋಟದ ಕಡೆ ಹೊಂಟವನು ನಿಂಗೂನ ತೋಟಕ್ಕೆ ಹೋದ. ಹುಡುಗರ ಕೆಲಸ ನೋಡಿ           ‘ಭಲೆ’ ಎಂದುಕೊಂಡು ಹಾಗೇ ತನ್ನ ತೋಟಕ್ಕೆ ಹೋದ. ಲಗಮವ್ವನನ್ನು ಕರೆಸಿದ. ಅವಳಿಂದ ಒಂದು ಕಾಯಿ ಸೆರೆ ತರಿಸಿ ಕುಡಿದು ಹೊರಸಿನ ಮೇಲೆ ಕೂತ. ಶಿವಸಾನಿ ಮಾತಾಡಿಸಿದ್ದು. ಅವನ ಗಮನಕ್ಕೆ ಬರಲಿಲ್ಲ.

ಹೊತ್ತು ಮೇಲೇರಿತು. ಮಧ್ಯಾಹ್ನವಾಗಿ ಇಳಿಹೊತ್ತಾಯಿತು. ಹೊತ್ತು ಹೆಚ್ಚಾದಂತೆ ಹೆಚ್ಚುಹೆಚ್ಚು ಮಂದಿಗೆ ಸುದ್ದಿ ಗೊತ್ತಾಯಿತು. ಕೆಲವರು ಕುತೂಹಲ ತಾಳದೇ ನಿಂಗೂನ ತೋಟದ ಕಡೆ ಹೋಗಿಬಂದರು. ನೀರು ತರುವ ಹೆಂಗಸರು ಕೆರೆಯಲ್ಲಿ ಗುಸುಗುಸು ಮಾತಾಡಿದರು. ಯಾರು ಸಿಕ್ಕರೂ “ಸುದ್ದಿ ಖರೆಯೇs? ಹೆಂಗಾತಂತ?” ಎಂದು ಕೇಳುವ, ಹೇಳುವ ಆತುರ ಇರುತ್ತಿತ್ತು. ಎಲ್ಲರಿಗೂ ಈ ದಿನ ಮಾತಾಡುವ ಚಪಲ. ಗೌಡನಿಗೂ, ಗುಡಸೀಕರನಿಗೂ ಮಾರಾಮಾರಿಯಾಯಿತೆಂದೂ ಕೈ ಕೈ ಹತ್ತಿತೆಂದೂ, ಗೌಡನನ್ನು, ದತ್ತಪ್ಪನನ್ನು ಜೇಲಿನಲ್ಲಿ ಇಡದಿದ್ದರೆ ತನ್ನ ಹೆಸರು ಗುಸೀಕರನೇ ಅಲ್ಲವೆಂದು ಗುಡಸೀಕರ ಕರಿಮಾಯಿಯ ಮೇಲೆ ಆಣೆ ಇಟ್ಟಿದ್ದಾನೆಂದೂ – ಹೀಗೆ ಯದ್ವಾತದ್ವಾ ಊಹೆಗಳಾಗಿ, ಊಹೆಗಳು ಕಥೆಯಾಗಿ, ಕಥೆಗಳೇ ನಿಜಘಟನೆಗಳಾಗಿ ಸಾಯಂಕಾಲವಾಗುವದರೊಳಗೆ ನಿಂಗೂ ಕಥಾನಾಯಕನಾಗಿ, ಅವನ ಸುತ್ತ ಕಥೆ ಹಬ್ಬಿ, ಆ ಕಥೆಯ ನೂರಾರು ಪಾಠಾಂತರಗಳು ನಾನಾ ನಮೂನೆಯ ಹೊಸಹೊಸ ವಿವರಗಳೊಂದಿಗೆ ಬಾಯಿಗೊಂದು ಬಣ್ಣ ತಳೆಯುತ್ತ ಹಬ್ಬತೊಡಗಿದವು.

ಆದರೆ ಹಬ್ಬ ನಿಲ್ಲಿಸಬೇಕೆಂದು ಕೆಲವರು ಅಂದುಕೊಂಡರು. ಈ ಗ ಹೇಳಿದ್ದರೆ ನಾಯಕರ ಹುಡುಗರು ಸಿದ್ಧರಗುತ್ತಿದ್ದರೊ ಇಲ್ಲವೋ. ಯಾಕೆಂದರೆ ಈ ದಿನ ಊರ ವತಿಯಿಂದ ದುರ್ಗಿ ಕುಣಿಯುವವಳಿದ್ದಳು. ಪಕ್ಕದ ಪಾಶ್ಚಾಪೂರದಿಂದ ಸುಂದರಿ ಬಂದಿದ್ದಳು. ಸತ್ತವರು ಯಾವ ದೊಡ್ಡ ಸಜ್ಜನರೆಂದು ಹಬ್ಬ ಇಲ್ಲಿಸಬೇಕು? ಅಲ್ಲದೇ ನಿಲ್ಲಿಸುವದಾಗಿದ್ದರೆ ಗೌಡ ಹೇಳುತ್ತಿದ್ದ. ಕರಿಮಾಯಿಯ ವಾಕ್ಯ ಆಗುತ್ತಿತ್ತು. ಹೀಗೆ ಅವರ ತಲೆಯಲ್ಲಿ ವಿಚಾರ ಹೊಳೆಯುತ್ತಿರುವಾಗಲೇ ಬೇಟೆಗಾರರು ಮೆರವಣಿಗೆಯಲ್ಲಿ ಬಂದರು.

ಉಂಡು ಮಲಗುವ ಹೊತ್ತಿಗೆ ಎಲ್ಲರೂ ಗುಡಿಯ ಪೌಳಿಯಲ್ಲಿ ಸೇರಿದರು. ಮುದಿ ನಾಯಕರಿಗೆ ಎಷ್ಟೂ ಉತ್ಸಾಹವಿರಲಿಲ್ಲ. ಹಿಂದಿನ ಹಬ್ಬಗಳಲ್ಲಾಗಿದ್ದರೆ ಸ್ವಥಾ ಲಗಮವ್ವ ಉಟ್ಟ ಸೀರೆಯ ನೆರಿಗೆಗಳನ್ನು ಮುಂಗೈಯಲ್ಲಾಡಿಸುತ್ತ ಬೇಟೆಯ ಪದ ಹಾಡತೊಡಗಿದರೆ, ರಂಗೇರಿದಂತೆ ಆಕೆಯು ಮೈಯ ಹಿಂದು ಮುಂದಿನ ಉಬ್ಬುಗಳನ್ನು ತುಳುಕುತ್ತ ಹೆಜ್ಜೆ ಹಾಕುತ್ತಿದ್ದರೆ, ಬಚ್ಚಬಾಯಿಯ ಮುದುಕರೂ ತೆರೆದ ಬಾಯಿ ತೆರೆದಂತೆಯೇ ಕುಣಿಯತೊಡಗುತ್ತಿದ್ದವು. ಮುದಿ ಮೈಗಳಲ್ಲೂ ಲಯ ತುಳುಕಿಸುತ್ತಿದ್ದಳು ಲಗಮವ್ವ ತನ್ನ ಹಾಡುಗಾರಿಕೆಯಿಂದ. ಆದರೆ ಇಂದು ಗೌಡನೇನೋ ಬಂದಿದ್ದ; ಸುಮ್ಮನೇ ಕೂತಿದ್ದನಷ್ಟೇ ಅವನ ನಗೆಯ ಮಜ ಮಾಯವಾಗಿತ್ತು. ಒಂದು ವಿಶೇಷವೆಂದರೆ ಸಾಮಾನ್ಯವಾಗಿ ಹಬ್ಬಕ್ಕೆ ದತ್ತಪ್ಪ ಬರುತ್ತಿರಲಿಲ್ಲ. ಇಂದು ಅವನೂ ಬಂದಿದ್ದ. ಇದರಿಂದಾಗಿ ವಾತಾವರಣದ ಗಾಂಭೀರ್ಯ ಉಸಿರುಗಟ್ಟುವಂತಾಗಿತ್ತು.

ದುರ್ಗಿಯ ಹಾಡುಗಾರಿಕೆ ಸುರುವಾಯ್ತು. ಬೆಳ್ದಿಂಗಳ ಸುಖದ ಮದ ಈಗಷ್ಟೇ ಹುಡುಗರ ಮೈಗೆ ತಾಗತೊಡಗಿತ್ತು. ಅಷ್ಟರಲ್ಲಿ ಗೌಡ, ದತ್ತಪ್ಪ ಮೊದಲೇ ನಿರೀಕ್ಷಿಸಿದ್ದಂತೆ ಪೊಲೀಸ್ ಜೀಪಿನ ಬೆಳಕು ಗುಂಪಿನ ಮೇಲೆ ಬಿತ್ತು. ಸ್ತಬ್ಧರಾಗಿ ಕೂತವರೆಲ್ಲ ಎದ್ದುನಿಂತರು. ಗೌಡನೂ ಅವನ ಹಿಂದಿನಿಂದ ದತ್ತಪ್ಪನೂ ಎದ್ದೂ ಮುಂದೆ ಬರವದರೊಳಗೆ ಜೀಪು ಗುಡಿಯ ಹತ್ತಿರವೇ ಬಂದು ನಿಂತಿತು.

ನಡುವಯಸ್ಸಿನ ಫೌಜುದಾರನೊಬ್ಬ ಇಬ್ಬರು ಪೊಲೀಸ್‌ರೊಂದಿಗೆ ಇಳಿದು ಬಂದ. ಜನ  ಗಾಬರಿಯಾಗಿ ಮಿಕಿಮಿಕಿ ಇವರನ್ನೇ ನೋಡುತ್ತಿದ್ದರು. ಗೌಡ, ದತ್ತಪ್ಪ ಮುಂದೆ ಬಂದು ನಮಸ್ಕರಿಸಿದರು. ತಾವಿಬ್ಬರೂ, ಗೌಡ, ಕುಲಕರ್ಣಿ ಎಂದು ಪರಿಚಯ ಮಾಡಿಕೊಟ್ಟರು. ಇವರ ಮಾತು ನಿಲ್ಲಿಸಿ “ಈ ಮಂದಿ ಇಲ್ಯಾಕ ಸೇರ್ಯಾರ?” ಎಂದು ಫೌಜದಾರ ಕೇಳಿದ.

“ಇಂದ ಕರಿಬ್ಯಾಟಿ ಹಬ್ಲ; ಕುಣ್ಯಾಕ ಹತ್ಯಾರರಿ.”

“ಹಬ್ಬ?”

“ಹೌಂದರಿ.”

“ಇಂದೇನ ಹಬ್ಬ ಮಾಡೋ ಜರೂರಿಲ್ಲ.”

ಇಷ್ಟು ಹೇಳಿ ಪೋಜದಾರರ ತಿರುಗಿದ, ಕೂಡಲೇ ದತ್ತಪ್ಪ ಸಣ್ಣದಾಗಿಸಿದ ಲಾಟೀನು ದೊಡ್ಡದು ಮಾಡಿ ಮುಂದೆ ಮುಂದೆ ಚಾವಡಿಯ ಕಡೆ ನಡೆದ. ಫೋಜುದಾರ, ಅವನ ಹಿಂದೆ ಪೊಲೀಸರು ನಡೆದರು.

ಗೌಡ ಒಂದಿಬ್ಬರನ್ನು ಕರೆದು ಇನ್ನೇನೋ ಹೇಳಿ ಮುಂದೆ ಹೋಗುತ್ತಿದ್ದ ಫೋಜುದಾರನನ್ನು ಕೂಡಿಕೊಂಡ.

ಶಿವಪೂಜೆಯಲ್ಲಿ ಕರಡಿ ಬಿಟ್ಟಂತಾಯ್ತು ನಾಯಕರ ಹುಡುಗರಿಗೆ. ಇನ್ನು ಕೆಲವರಿಗೆ ಇದು ಗುಡಸೀಕರನ ಕರಾಮತಿಯೆಂದು ಗೊತ್ತಾಯಿತು. ಗೌಡ, ದತ್ತಪ್ಪನನ್ನು ಜೇಲಿಗೆ ಒಯ್ಯತ್ತಾರೆಂದು ಕೆಲವರೆಂದರು. “ಯಾಕೆ? ಊರಗೇನು ಗಂಡಸರಿಲ್ಲೇನ?” ಎಂದು ಹುಡುಗರೆಂದರು. ತಮತಮಗೆ ಗುಜುಗುಜು ಮಾತಾಡಿಕೊಳ್ಳತೊಡಗಿದರು.

ಚಾವಡಿಗೆ ಹೋದೊಡನೆ ಫೋಜುದಾರ ನಿಂಗೂನನ್ನು ಕರೆತರುವಂತೆ ಹೇಳಿದ. ಊರಿನಲ್ಲಿ ಖೂನಿ ಆಗಿದ್ದರೂ ಹಬ್ಬ ಮಾಡುತ್ತಿದ್ದುದಕ್ಕೆ ಛೀಮಾರಿ ಹಾಕಿದ. ಖೂನಿ ಗೀನಿ ಏನೂ ಆಗಿಲ್ಲವೆಂದು, ಆಗಿದ್ದರೆ ತಾನು ಸುಮ್ಮನಿರಲಿಕ್ಕಾಗುತ್ತಿತ್ತೆ? ಹಬ್ಬ ಮಾಡಲಿಕ್ಕಾಗುತ್ತಿತ್ತೆ? ಗೌರಿ ಗಟಿವಾಳಪ್ಪ ಸತ್ತು ಹದಿನೈದಯ ದಿನವಾಯಿತೆಂದೂ, ಹೋರಿ ಗರ್ಭಕ್ಕೆ ಇರಿದು ಗೌರಿ ಸತ್ತಳೆಂದೂ ಒಂದೆರಡು ದಿನ ಜ್ವರ ಅಂತ ಮಲಗಿದವನು ಗಟಿವಾಳಪ್ಪ ಮೇಲೇಳಲೇ ಇಲ್ಲವೆಂದೂ ಗೌಡ ಹೇಳಿದ. ದತ್ತಪ್ಪ ಮಧ್ಯ ಮಧ್ಯ ಹೌದು ಹೌದೆಂದು ಸೇರಿಸಿ, ತನ್ನ ದಫ್ತರಿನಲ್ಲಿ ನಮೂದಿಸಿದ್ದಾಗಿ ಹೇಳಿದ.

ನಿಂಗೂ ಚಾವಡಿಗೆ ಬಂದಾಗ ಪೋಜುದಾರನಿಗೇನು, ಗೌಡ ದತ್ತಪ್ಪನಿಗೂ ದೂರ ನಿಂತಿದ್ದ ಜನಕ್ಕೂ ಹೊಯ್ಕಾಯಿತು. ಅವನಾಗಲೇ ಸೀರೆ ಉಟ್ಟು, ಕೈಬಳೆ ತೊಟ್ಟಿದ್ದ, ಅವನೂ ಬಂದು ಗೌಡ ಹೇಳಿದಂತೆ ಹೇಳಿದ. ಫೋಜದಾರ ಪೇಚಿನಲ್ಲಿ ಸಿಕ್ಕ. ಈ ನಪುಂಸಕ ಹುಡುಗ ಖೂನಿ ಮಾಡುವದು ಸಾಧ್ಯವಿಲ್ಲೆಂದು ಅವನ ಅನುಭವ ಸಾರಿ ಸಾರಿ ಹೇಳಿತು. ತನಗೆ ಬಂದ ಸುದ್ದಿಯಲ್ಲಿ ಏನೋ ಐಬಿದೆಯೆಂದು ಅನ್ನಿಸಿತು. ಅಷ್ಟರಲ್ಲಿ ನಾಯಕರ ಹಿರಿಯನೊಬ್ಬ ಹಬ್ಬ ಆಚರಿಸಲು ಪರವಾನಗಿ ಕೇಳಲು ಬಂದ. ಫೋಜುದಾರ ಅವನನ್ನೂ ಕೇಳಿದ. ಅವನು “ಛೇ ಛೇ ಖೂನಿ ಆಗಿದ್ದರೆ ಸೂತಕ ಆಗುತ್ತಿತ್ತು. ಸೂತಕದಲ್ಲಿ ಕರಿಬೇಟಿ ಹಬ್ಬ ಆಚರಿಸಲು ಬರುವದಿಲಲವೆಂದು, ಊರಲ್ಲಿ ಸೂತಕ ಇಟ್ಟುಕೊಂಡು ಕರಿಬೇಟೆಯ ನೈವೇದ್ಯವನ್ನು ಕರಿಮಾಯಿಗೆ ನೀಡಿದರೆ “ತಾಯಿ ಸುಮ್ಮನಿದ್ದಾಳೇನ್ರೀ ಸಾಹೇಬರs” ಎಂದೂ ಅಂದ. ಕರಿಮಾಯಿ ಬೆಂಕಿ ಕೆಂಡದಂಥವಳು. ಹೈಗೈ ಆದರೆ ನಾವೂ ಇಲ್ಲ ನೀವೂ ಇಲ್ಲ ಅಂದ. ಅಷ್ಟರಲ್ಲಿ ಊಟದ ತಯಾರಿ ಆಗಿತ್ತು “ಏಳ್ರೀ ಸಾಹೇಬರs” ಎಂದು ಗೌಡ ಹೇಳಿದರೆ “ಈಗ ನಿಂಗೂನ ಗುಡಿಸಲು ನೋಡಬೇಕು” ಎಂದು ನಾಳೆ ಮುಂಜಾನೆ ಹೋಗೋಣವೆಂದು ಗೌಡ, ಈಗಲೇ ಹೋಗಬೇಕೆಂದು ಪೋಜುದಾರ ಎದ್ದ.

ರಾತ್ರಿಯೇ ತೋಟಕ್ಕೆ ಹೋದರು. ಹಿಂಡು ಜನ ಬೆನ್ನುಹತ್ತಿದರು. “ಬೆಂಕೀ ಹಚ್ಚಿದ ಗುಡಸಲೆಲ್ಲಿ” ಎಂದು ಫೋಜುದಾರ ಕೇಳಿದ. “ಎಲ್ಲೀ ಬೆಂಕಿ ಏನು ಕತೆ? ಇದೇ ನಿಂಗೂನ ತೋಟ, ಇದೇ ಗುಡಿಸಲು” ಎಂದು ಗೌಡ ಹೇಳಿದ. ಫೋಜದಾರನಿಗೆ ಇದ್ದದ್ದೂ ಹಣಗಲಾಯಿತು, ತಿರುಗಿ ಬಂದರು.

ಗೌಡನ ಮನೆಯಲ್ಲಿ ಊಟಕ್ಕೆ ಕೂತರು. ಹ್ಯಾಗೂ ಬೇಟೆಯ ಪಲ್ಯ ಇತ್ತು. ಅಸಲ ಸೆರೆಯಿತ್ತು. ಅದು ಒಳಕ್ಕೆ ಇಳಿಯಲಾರಂಭಿಸಿದಂತೆ ಫೋಜುದಾರನ ತಲೆ ತೂಗಲಾರಂಭಿಸಿತು. ಇತ್ತ ಹುಡುಗರ ಹಾಡು, ಕುಣಿತ ಸುರುವಾಯಿತು. ಬಹಶಃ ನಿರಾಸೆಯಿಂದಿರಬೇಕು. ಫೋಜುದಾರನ ತಲೆ ತಿರುಗಿತು. “ನಿಲ್ಲಸ್ರಿ ಅದನ್ನ” ಎಂದು ಊಟ ಮಾಡುತ್ತಲೇ ಕಿರುಚಿದ. ಗೌಡ ನಿಧಾನವಾಗಿಯೇ ಹೇಳಿದ.

“ಅದನ್ನ ನಿಲ್ಲಸಾಕ ನನಗಾಗಲಿ ನಿಮಗಾಗಲಿ ಹಕ್ಕಿಲ್ಲರೀ ಸಾಹೇಬರ.”

“ಏ ಗೌಡಾ, ನನಗ ಕಾಯ್ದೆ ಹೇಳಿಕೊಡ್ತಿ ಏನಲೇ? ಊರ ಗೌಡಾಗಿ, ಊರಾಗ ದೋ ಪಾರ್ಟಿ ಇಟಗೊಂಡು ಖೂನಿ ಮಾಡಿಸಿಕೊಂತ…”

“ಯಾವ ದೋ ಪಾರ್ಟಿ? ಎಲ್ಲಿ ಖೂನಿ? ಏನ ಸಾಹೇಬರ ಏನಂಬೋ ಮಾತಿದು?”

“ನನಗ್ಗೊತ್ತಲೇ ಚೇರ್ಮನ್ ಪಾರ್ಟಿ ಮಂದೀನ ಇಂದ ಹಬ್ಬದ ನೆವದಾಗ ನಾಯಕರ ಹುಡುಗರ ಕಡಿಂದ ಬಡಸಬೇಕಂತ…”

ಎಲ್ಲ ಅರೆಮಾತುಗಳಾಗಿದ್ದರಿಂದ ಗುಡಸೀಕರ ಏನೇನು ಹೇಳಿದ್ದಾನೋ ಎಂದು ಗೌಡಿನಿಗೂ ದಿಗಿಲಾಯಿತು. ಕ್ರಮಬದ್ಧವಾಗಿ ಫೋಜುದಾರನ ಜೊತೆ ಮಾತಾಡುವುದೂ ಸಾಧ್ಯವಿರಲಿಲ್ಲ. ಮತ್ತೆ ಫೋಜುದಾರನೇ ಬಾಯಿಬಿಟ್ಟ –

“ನೋಡ ಗೌಡಾ, ಊರಾಗ ಹೊಡದಾಟ ಆಗೋ ಛಾನ್ಸ್ ಇದ್ದಾಗ ಇಂತಾ ಹಬ್ಬಾ ಮಾಡಾಕ ಕೊಡಬಾರದಂತ ಗೊತ್ತಿಲ್ಲ ನಿನಗ? ನಿಲ್ಲಸ ಮೊದಲ…”

“ಸಾಹೇಬರ ಹೊಡದಾಟ ಬಡದಾಟ ಆದರ ಆ ಜವಾಬ್ದಾರೀ ನಂದು. ತಮ್ಮ ಪಾಡಿಗೆ ತಾವ ಹಡಿಕೊಂಡ ಕುಣೀತಾವ. ನೀವು ಆರಾಮ ನಿದ್ದೀ ಮಡರಿ.”

ಎಂದ ಗೌಡ. ಫೋಜದಾರನ ನೆತ್ತರು ಕುದಿಯಲಾರಂಭಿಸಿತು. ಒಳಗಿನ ದೇಸೀ ದೇವಿ ತುಳುಕಲಾರಂಭಿಸಿದಳು. ತನ್ನ ಮುಂದೆ ಈ ಹಳ್ಳೀ ಗೌಡನ ಸೊಕ್ಕೆಷ್ಟು ಅಂದ. ಕೈತೊಳೆದು ಎದ್ದವನೇ ತೂರಾಡುತ್ತ ಬಾಗಿಲು ತೆಗೆಯಹೋದ. ಹೊರಗಡೆಯಿಂದ ಚಿಲಕ ಹಾಕಿದ್ದರು. ಬಾಗಿಲು ಎಳೆದ, ಜಗ್ಗಿದ, ಒದ್ದ. ಕಾಲಿಗೆ ಪೆಟ್ಟುತಾಗಿ ತಿರುಗಿ ಬಂದು ಅಲ್ಲೇ ಇದ್ದ ಹಾಸಿಗೆಯ ಮೇಲೆ ಕೂತ. ‘ಬಾಗಲಾ ತಗಸಲೇ’ಎಂದು ಒಂದೆರಡು ಬಾರಿ ಕಿರಿಚಿದ. ಪೊಲೀಸರಿಬ್ಬರೂ ಅತ್ತಿತ್ತ ಅಲೆದಾಡಿ ಹೊರಕ್ಕೆ ಹೋಗಲು ದಾರಿಯಿದೆಯೆ ನೋಡಿದರು. ಯಾರಾದರೂ ಹಾದಾಡುತ್ತಿದ್ದರೆ ಕರೆಯಬೇಕೆಂದು ಕಿಟಕಿಯಿಂದ ಇಣಿಕುತ್ತ ಚಡಪಡಿಸಿದರು.

ಗೌಡ ಇವರ ಒದ್ದಾಟ ನೋಡದಾದ. ಇವನ ನೆಮ್ಮದಿ ನೋಡಿ ಫೋಜದಾರನ ನೆಮ್ಮದಿ ಹದಗೆಟ್ಟಿತು.

“ಏ ಗೌಡಾ, ನಾ ಇರೋವಾಗ, ಇವರು ಹೆಂಗ ಹಬ್ಬ ಮಾಡತಾರ ನೋಡತೀನಿ, ನಿನ್ನೂ ನೋಡಿಕೋತೀನಿ…”

ಗೌಡ ಅದೇ ಸಮಾಧಾನದಿಂದ ಹೇಳಿದ –

ಸಾಹೇಬರ, ಈ ಊರಿನ ನರ ನಿಮಗ್ಗೊತ್ತಿಲ್ಲರಿ.”

“ಏ, ಇದು ನನ್ನ ಆಳಿಕೆ ಊರೋ…”

“ಅಲ್ಲ ಸಾಹೇಬರ, ನನ್ನ ಆಳಿಕೀದು. ನಾವೇನಾದರೂ ತಪ್ಪು ಮಾಡಿದರ ನಿಮ್ಮ ಆಳಿಕಿ. ಈಗ ಹಂತಾ ತಪ್ಪೇನೂ ಆಗಿಲ್ಲ. ಅಷ್ಟೂ ಮೀರಿ ನಿಮ್ಮ ಆಳಿಕಿ ತೋರಸ್ತೇವಂದರ, ನೋಡ್ರೀ, ಮೊದಲ ಹೇಳಿರತೀನಿ. ಅವು ಮೊದಲ ಹರೇದ ಸೊಕ್ಕೇರಿದ ಹುಡುಗರು, ಕಾಡ ಅಡ್ಡಾಡಿ ಬ್ಯಾಟಿ ತಂದಾವ, ಕುಡದ್ದಾವ. ಊರ ಸೂಳೇರಾಗಿದ್ದರ ಹೆಂಗೋ ನಡೀತಿತ್ತು; ಪರವೂರ ಸೂಳೇರ ಬಂದಾರ, ಅವರ ಮುಂದ ಕುಣ್ಯಾಕ ಹತ್ಯಾವ. ಅವರನ್ನ ನೀವು ಹೋಗಿ ತಡವಿದರ, ಖರೇ ಹೇಳತೀನ್ರಿ – ಮುಂದಿನ ಹೋನಾರಕ್ಕ ನಾನಂತೂ ಜವಾಬ್ದಾರಲ್ಲ.”

– ಅಂದ. ಫೋಜದಾರನ ಬಾಯಿ ಬಂದಾಯಿತು. ಮಲಗಿದ. ಅಷ್ಟರಲ್ಲಿ ಫೋಜದಾರ ನಿದ್ದೆ ಮಾಡುವುದನ್ನು ನೋಡಿದ ಪೊಲೀಸರು ತಾವೂ ಮಲಗಿಕೊಂಡರು. ಗೌಡ ಅವರನ್ನು ನೋಡಿ ಒಳಗೊಳಗೇ ನಕ್ಕ. ಎದ್ದು ಬಂದು ಕಿಟಕಿಯಲ್ಲಿ ಹಣಿಕಿಹಾಕಿದ. ದೂರದಿಂದ ಲಗಮವ್ವನ ದನಿ ಹುಡಗರ ಹುಯ್ಲಿನೊಂದಿಗೆ ಕೇಳಿ ಬರುತ್ತಿತ್ತು;

ಬ್ಯಾಟಿ ಬ್ಯಾಟಿಯನಾಡಿದಾ |
ಬ್ಯಾಟರ ಹುಡುಗ
ಕಾಡ ಬ್ಯಾಟಿಯನಾಡಿದಾ ||

ಇಲ್ಲಿ ನಿಂತುಕೊಂಡೇ ಅವಳ ತುಳುಕಾಟ ಊಹಿಸಿದ, ಸೆರೆ ಸುರಿದ ಹಾಗೆ ಊರೆಲ್ಲ ಬೆಳ್ದಿಂಗಳಿಂದ ತೊಯ್ದು ಹೋಗಿತ್ತು. ಕೈಕಾಲು ಅಲುಗಿಸಲೂ ಆಗದಷ್ಟು ನಶೆಯೇರಿ ತೇಲುಗಣ್ಣ ಜೋಕಾಲಿಯಲ್ಲಿ ತೇಲುತ್ತ ಹಳ್ಳಿಗೆ ಹಳ್ಳಿಯೇ ಬಾಯಿಂದ ಸೆರೆ ಸಾಕಾಗಿ, ಈಗ ಕಿವಿಯಿಂದ ಹಾಡನ್ನು ಕೇಳುವಂತಿತ್ತು. ಫೋಜುದಾರ ಬಂದಾಗ ಊರು ಗಾಬರಿಯಾದದ್ದು ನಿಜ, ಬೆರಗಾದದ್ದು ನಿಜ. ಆದರೆ ಕುಡಿದ ಬೆಳ್ದಿಂಗಳು ಅಂಗಾಲಿ ತನಕ ಇಳಿದ ಮೇಲೆ ಮತ್ತೆ ಮೊದಲಿನ ತನ್ನ  ಸಹಜಸ್ಥಿತಿಗೆ ತಲುಪಿತು. ಬದುಕಿನ ಬಗೆಗಿನ ಅದೇ ಉತ್ಸಾಹ ಉಕ್ಕತೊಡಗಿತು. ಪೊಲೀಸರು ಈ ಹಳ್ಳಿಗೆ ಬಂದುದು ಇದೇ ಪ್ರಥಮ ಸಲವೂ ಅಲ್ಲ. ಹಿಂದೆ ಎರಡು ಮೂರು ಬಾರಿ ಸ್ವಾತಂತ್ರ್ಯ ಚಳವಳಿಗಾರರನ್ನು ಹುಡುಕುವ ನೆಪದಲ್ಲಿ ಬಂದಿದ್ದರು. ಹೇಗೆ ಬಂದರೂ ಹೊರಗಿನವರು ಹೊರಗೇ ಉಳಿದಿದ್ದರು.

ಫೋಜುದಾರನಿಗೆ, ಎಚ್ಚರಾದಾಗ ಮುಂಜಾನೆ ಬೆಳ್ಳಂಬೆಳಗಾಗಿತ್ತು. ಎದ್ದ, ಬಾಗಿಲು ತೆರೆದಿತ್ತು. ‘ಗೌಡ, ಕುಲಕಣ್ಣಿ ಎಲ್ಲಿ?’ ಎಂದು ಹಳಬನನ್ನು ಕೇಳಿದ, ಚಾವಡಿಯಲ್ಲಿ ತಮಗಾಗಿ ಕಾಯುತ್ತಿದ್ದಾರೆ ಎಂದನವ. ಬೆಳಗಿನ ವಿಧಿಗಳನ್ನು ಪೂರೈಸಿ ಚಾವಡಿಗೆ ಹೋದ. ಆಗಲೇ ಗೌಡ ನಿನ್ನೆ ರಾತ್ರಿ ಮನೆಯಲ್ಲಿ ನಡೆದುದನ್ನು ದತ್ತಪ್ಪನಿಗೆ ಹೇಳಿ ನಗಾಡುತ್ತಿದ್ದರು. ಫೋಜುದಾರ ಬಂದವನೇ ಅವರನ್ನು ಕರೆದುಕೊಂಡು ಇನ್ನೊಮ್ಮೆ ನಿಂಗೂನ ತೋಟಕ್ಕೆ ಹೋದ. ಅದೇ ನಿಂಗೂನ ಗುಡಿಸಲು ಎಂದು ಖಾತ್ರಿ ಮಾಡಿಕೊಂಡ.

ಅದೇ ಗುಡಿಸಲು ಹಾಗೇ ಇತ್ತು. ಗುಡಸೀಕರ ಬೆಳಗಾಂವಿಗೆ ಹೋದೊಡನೆ ಗೌಡ ಗುಡಿಸಲನ್ನು ಸುಡಿಸದೆ ಹಾಗೇ ಇಟ್ಟಿದ್ದ. ಹೆಣ ಮಣ್ಣುಅ ಮಾಡಿಸಿದ್ದ. ಗುಡಿಸಲನ್ನು ಹಸನು ಮಾಡಿಸಿ ಯಥಾಸ್ಥಿತಿಗೆ ತಂದಿದ್ದ. ಅದೀಗ ಎಷ್ಟು ಸಹಜವಾಗಿದ್ದಿತೆಂದರೆ ಅಲ್ಲಿ ಖೂನಿಯಾಯಿತೆಂದು ಫೋಜುದರನಿಗೇನು, ಸ್ವತಃ ಆ ಊರಿನವರೂ ನಂಬಲಾಗುತ್ತಿರಲಿಲ್ಲ.

ತಿರುಗಿ ಚಾವಡಿಗೆ ಬಂದು ಗುಡಸೀಕರನಿಗೆ ಬುಲಾವ್ ಕಳಿಸಿದ. ಅವನು ಇಲ್ಲವೆಂದು ತಿಳಿಯುತ್ತಲೂ ನಿನ್ನೆಯ ಸಿಟ್ಟೆಲ್ಲ ಅವನ ಮೇಲೆ ತಿರುಗಿತು. ಅವನೇ ಬಂದು  ಊರಿನಲ್ಲಿ ದೋ ಪಾರ್ಟಿ ಉಂಟೆಂದೂ, ತನ್ನ ಪಾರ್ಟಿಯವನನ್ನು ಗೌಡನ ಪಾರ್ಟಿಯ ನಿಂಗೂ ಕೊಂದು ಗುಡಿಸಲಲ್ಲಿಟ್ಟು ಬೆಂಕೀ ಹಚ್ಚಿ ಸುಟ್ಟನೆಂದೂ ಇದಕ್ಕೆ ಗೌಡನ ಬೆಂಬಲವಿತ್ತೆಂದೂ, ಇಂದಿನ ಹಬ್ಬದ ದಿನ ಅನೇಕರ ಖೂನಿ ಆಗಲಿವೆಯೆಂದೂ ವಕೀಲ ಓದಿದ್ದರೂ ದಡ್ಡತನದಿಂದ ಬಾಯಿಗೆ ಬಂದದ್ದನ್ನೆಲ್ಲ ಒದರಿ ಬರೆದುಕೊಟ್ಡಿದ್ದನಂತೆ. ಅದನ್ನೆಲ್ಲ ಹೇಳಿ ಫೋಜದಾರ, ಅವನೇನು ಕಮ್ಮಿ? – ಬಾಯಿಗೆ ಬಂದ ಹಾಗೆ ಬಯ್ದು ಹೊರಟ. ಹಾಲು ಕುಡಿದು ಹೋಗಬೇಕೆಂದು ಗೌಡ ವಿನಂತಿಸಿಕೊಂಡ. ನಾಲ್ಕೈದು ತತ್ತೀ ಒಡೆದು ತಿಂದು ಚರಿಗೆ ಹಾಲು ಕುಡಿದು ಫೋಜದಾರ ಜೀಪು ಹತ್ತಿದ. ಪೀಡೆ ಹೋಯಿತು. ಅವನ ಅತ್ತ ಹೋದೊಡನೇ ಸೀರೆ ಉಟ್ಟ ನಿಂಗೂನ್ನ ನೋಡಿ ಗೌಡ, ದತ್ತಪ್ಪ ‘ಹೋ, ಹೋ’ಎಂದು ನಕ್ಕರು.

ನಿನ್ನೆ ನಿಂಗೂನ ಚಡಪಡಿಕೆ ನೋಡಲಾರದೆ ಲಗಮವ್ವ “ಕರಿಮಾಯಿಗೆ ಬೇಡಿಕೊ, ಪಾರ ಮಾಡತಾಳು” ಎಂದಿದ್ದಳಂತೆ, ನಿಂಗೂ ಅವಳು ಹೇಳಿದಂತೆಯೇ “ಹಡದವ್ವಾ, ಇದರಿಂದ ನನ್ನ ಪಾರು ಮಾಡು, ಸೀರೀ ಉಟ್ಟ ನಿನ ಮುಂದ ಕುಣೀತೀನು” ಎಂದು ಬೇಡಿಕೊಂಡನಂತೆ. ಹೀಗೆ ಹರಕೆ ಹೊತ್ತವನು ಕರಿಮಾಯಿ ಪಾರು ಮಾಡುವ ತನಕ ಕೂಡ ಕಾಯದೆ ಸೀರೆ ಉಟ್ಟುಬಿಟ್ಟಿದ್ದ. ಕರಿಮಾಯಿಯ ಮಹಿಮೆಗೆ ಏನೆನ್ನೋಣ! ಅದರಿಂದ ಅವನಿಗೆ ಲಾಭವೇ ಆಗಿತ್ತು.

ಹೊರಗಿನ ಪೀಡೆ ಹೋಯಿತೇನೋ ನಿಜ. ಆದರೆ  ಗುಡಸೀಕರನ ಮನಸ್ಸಿನಲ್ಲಿ ಸೇಡುಳಿಯಿತು. ಆ ದಿನ ಫೋಜುದಾರನೊಂದಿಗೆ ಅವನೂ ಜೀಪಿನಲ್ಲಿ ಬಂದಿ‌ದ್ದ. ಆದರೆ ಜನಗಳನ್ನು ಎದುರಿಸಲಾರದೆ ದೂರದಲ್ಲೇ ಇಳಿದು ಕಳ್ಳದಾರಿಯಿಂದ ಮನೆಸೇರಿದ್ದ. ಇಲ್ಲವೆಂದು ತಂಗಿಯಿಂದ ಹೇಳಿಸಿದ್ದ. ಅಂದೇ ರಾತ್ರಿ ತಲೆಮರೆಸಿಕೊಂಡು ಬೆಳಗಾವಿಗೆ ಹೋಗಿ ಎಂಟು ದಿನ ಇದ್ದು ಊರಿಗೆ ಬಂದ. ಅವಮಾನದಿಂದ ವಿಕಾರಗೊಂಡ ಅವನ ಮುಖವನ್ನು ಗುರುತಿಸುವುದೇ ಕಷ್ಟವಾಗಿತ್ತು. ಬಂದ ಮೇಲೂ ತಾನೇನೂ ಮಾಡಿಲ್ಲದವನಂತೆ ಭಂಡತನದಿಂದಲೇ  ಇದ್ದ. ಜನ ಅನ್ನುವಷ್ಟು ಅಂದು ಸುಮ್ಮನಾದರು.

ಗೌಡ ಗುಡಸೀಕರನ ಬಗ್ಗೆ ಯೋಚಿಸಲೇಬೇಕಾಗಿತ್ತು. ಹುಡುಗ ಯಾವುದನ್ನೂ ತನ್ನ ಮೂಗಿನ ನೇರದಿಂದಲೇ ನೋಡುತ್ತಿದ್ದ. ಹಾಗೆ ನೋಡಿದಾಗ ಎದುರಿಗೆ ಏನಿದ್ದರೂ, ಊರು ಸಹ ಎರಡಾಗಿ ಕಾಣಿಸುತ್ತಿತ್ತು. ನಂತರ ಬಂದ ಹೋಳಿ ಹಬ್ಬದಲ್ಲಿ ಇದು ಗೌಡನಿಗೂ ಖಾತ್ರಿಯಾಗಿಬಿಟ್ಟಿತು.