ಸರ್ಕಾರಿ ಕಾಗದ ಬಂದಿತಲ್ಲ, ಅಗಷ್ಟೇ ಗುಡಸೀಕರ ಬೆಳಗಾವಿಯಲ್ಲಿ ಎಲ್.ಎಲ್.ಬಿ. ಮುಗಿಸಿ ಬಂದಿದ್ದ. ವಕೀಲಿ ಸುರುಮಾಡಬೇಕೆಂದರೆ ಅದು ಶಿವಾಪುರದಂಥ ಊರಿನಲ್ಲಿ ಹೇಗೆ ಸಾಧ್ಯ? ಅದಕ್ಕವನು ಬೆಳಗಾವಿಗೆ ಹೋಗಿರಬೇಕು. ಆದರೆ ಆಗೆಲ್ಲ ಸ್ವಾತಂತ್ರ್ಯ ಚಳುವಳಿಯ ಕಾಲ. ಕೋರ್ಟ್ ಕಛೇರಿಗಳೇ ಸುಟ್ಟು ಹೋಗುತ್ತಿದ್ದಾಗ ಇವನ ವಕೀಲಿ ಯಾರು ಕೇಳಬೇಕು? ಅದೇ ವರ್ಷ ಅವ ತಂದೆ ತೀರಿಹೋದುದರಿಂದ ಊರಿನಲ್ಲೇ ಹೊಲಮನೆ ನೋಡಿಕೊಂಡು ಇರಬೇಕಾಯ್ತು; ಇದ್ದ. ಆತ ಹಾಗೆ ಇದ್ದದ್ದು ಗೌಡನಿಗೆ ಅನುಕೂಲವಾಗಿಯೇ ಕಂಡಿತು. “ಹೇಗೂ ಪಂಚಾಯ್ತಿ ಮಾಡಿಕೊಳ್ಳಿರಿ” ಎಂದು ಸರ್ಕಾರಿ ಪತ್ರ ಬಂದಿದೆ. ಅದಕ್ಕೆಲ್ಲ ಇಂಗರೇಜಿ ಓದುಬರಹ ಬಲ್ಲವರಿದ್ದರೆ ಒಳ್ಳೆಯದು. ತಮ್ಮಂಥವರಿಂದೇನಾದೀತು? ಇಂಥದಕ್ಕೆ ಗುಡಸೀಕರನೇ ಯೋಗ್ಯನೆಂದು ತೀರ್ಮಾನಿಸಿ ಹಾಗೆಂದು ಊರ ಹಿರಿಯರಿಗೂ ಪಂಚರಿಗೂ ಹೇಳಿಬಿಟ್ಟ.

“ಏನಂಬೋ ಮಾತು ಗೌಡರ, ಇನ್ನs ತಲೀಮ್ಯಾಲಿನ ಮಾಂಸ ಆರಿಲ್ಲ. ಅವಕ್ಕೆಲ್ಲಾ ಇಂಥಾ ಜವಾಬ್ದಾರಿ ಹೊರಿಸಿದರ ತಡದಾವೇನ್ರೀ?” ಎಂದು ಅನೇಕರು, ಯಾಕೆ – ದತ್ತಪ್ಪ ಕೂಡ – ಕೇಳಿದ್ದರು. “ಒಂದಿಷ್ಟು ದಿನಾ ಆದಮ್ಯಾಲ ತಾವs ದಾರಿಗೆ ಬರ್ತಾರ. ಊರಗಾರಿಕಿ ಹೋಗಬರೋದೆಲ್ಲಾ. ಇನ್ನ ಮ್ಯಾಲ ಅವರಿಗೇ ಸೇರಬೇಕಾದ್ದಲ್ಲೇನ್ರೋ?” ಎಂದು ಗೌಡ ಎಲ್ಲರನ್ನೂ ಒಪ್ಪಿಸಿದ್ದ.

ಆಯ್ತು: ಕೊನೆಗೂ ಗೌಡನ ಇಚ್ಛೆಯಂತೆ ಚುನಾವಣೆಯಿಲ್ಲದೇ ಗುಡಸೀಕರ ಸರಪಂಚ (ಚೇರ್ಮನ್) ಆಗಿಯೂ ತನ್ನ ಸರಿಕರಾದ, ಶಿವಾಪುರದ ಕನ್ನಡ ಗಂಡು ಮಕ್ಕಳ ಶಾಲಾದ ಒಂದೆರಡು ಇಯತ್ತೆ ಕಲಿತುಬಿಟ್ಟ ನಾಲ್ಕು ಹುಡುಗರನ್ನು ಮೆಂಬರರಾಗಿಯೂ ನೇಮಿಸಲಾಯಿತು. ಕರಿಮಾಯಿ ಗುಡಿಯ ಹಿಂಭಾಗದ ಖಾಲಿಬಿದ್ದ ನಗಾರಿಖಾನೆಯನ್ನು ಪಂಚಾಯ್ತಿ ಆಫೀಸೆಂದೂ ಕರೆಯಲಾಯಿತು. ಆದರೆ ಇದರಿಂದ ಊರಲ್ಲಿ ಕೆಲವು ಬದಲಾವಣೆಗಳಾದುದು ನಿಜ:

(ಆ) ಗುಡಸೀಕರನ ಅಡ್ಡ ಹೆಸರು “ಗುಡಸ್ಯಾಗೋಳ” ಎಂದು. ಕುಲಕರ್ಣಿ ದತ್ತಪ್ಪನ ದಪ್ತರುಗಳಲ್ಲಿದ್ದದ್ದೂ ಇದೇ ಹೆಸರು. ಜನ ಅದನ್ನು ಸಂಕ್ಷೇಪಿಸಿ “ಗುಡಸ್ಯಾ” ಅನ್ನುತ್ತಿದ್ದರು, ಅವರಪ್ಪ ಜೀವಂತವಾಗಿದ್ದಾಗ ಅನೇಕರಿಗೆ ಬಡ್ಡಿಗೆ ಹಣ ಕೊಟ್ಟು ಅವರ ಮನೆ ಮುರಿದು ಮಠ ಮಾಡಿ ಗುಡಿಸಿದವನಾದ್ದರಿಂದ ಜನ “ಗುಡಸು” ಎಂದೇ ಕರೆಯುತ್ತಿದ್ದರು. ಈಗ ಸರಪಂಚ ಆದ ಮೇಲೆ ಅದು “ಗುಡಸೀಕರ್” ಎಂದು ಬದಲಾಯಿತು. ಹಾಗೂ ಇನ್ನೂ ಪೂರ್ವೀ ಹೆಸರಿನಿಂದಲೇ ಕರೆದವರನ್ನು ಹೀನಾಯವಾಗಿ ಬೈದು ಅವಮಾನಿಸಲಾಯಿತು. ಆದ್ದರಿಂದ ನಾವೂ ಸದರಿ ಗುಡಸುನನ್ನು ಗುಡಸೀಕರನೆಂದೇ ಕಥೆಯಲ್ಲಿ ಸಂಬೋಧಿಸೋಣ.

(ಬ) ಗುಡಸೀಕರನ ಮನೇ ಮುಂದೆ “ಜಿ.ಎಚ್. ಗುಡಸೀಕರ, ಬಿ.ಎ., ಎಲ್.ಎಲ್.ಬಿ, ಗ್ರಾಮ ಪಂಚಾಯಿತಿ ಸರಪಂಚ ಬೆಳಗಾಂ ಡಿಸ್ಟ್ರಿಕ್ಟ್” – ಎಂಬುದಾಗಿ ಒಂದು ಇಂಗ್ಲಿಷ್ ಬೋರ್ಡ್ ಬಂತು. ಗುಡಸೀರನನ್ನು ಬಿಟ್ಟು ಅದನ್ನು ಯಾರೂ ಓದಲಿಲ್ಲ. ಮತ್ತು ಓದುವದು ಸಾಧ್ಯವಿರಲಿಲ್ಲ. ಊರವರೆಲ್ಲ ಅವನ ಮನೆಯ ಮುಂದೆ ತಾಸರ್ಧತಾಸು ನಿಂತು, ನಿಂತು ಆ ಬೋರ್ಡು ನೋಡಿಬಂದರು. ಹಚ್ಚಿದ ಹದಿನೈದು ದಿನಗಳಂತೂ ದಿನಬೆಳಗಾದರೆ ಮಕ್ಕಳ ಹಿಂಡೊಂದು ಆ ಬೋರ್ಡು ನೋಡುತ್ತ ನಿಂತಿರುತ್ತಿತ್ತು. ಅದನ್ನು ಓದಿದವರಿಗೆ ಐನೂರು ರೂಪಾಯಿ ಬಹುಮಾನ ಕೊಡುವುದಾಗಿ ಇಷ್ಟರಲ್ಲೇ ಗುಡಸೀಕರ ಡಂಗುರ ಸಾರಲಿದ್ದಾನೆಂದು ಹೊಲಗೇರಿಯಲ್ಲಿ ಸುದ್ದಿಯಿತ್ತು.

(ಕ) ಪಂಚಾಯ್ತಿ ಆಫೀಸಿನಲ್ಲಿ ಕೆಲಸವಂತೂ ಇರಲಿಲ್ಲವಲ್ಲ; ಅಥವಾ ಇದ್ದರು ಇವರಿಗೆ ಗೊತ್ತಿರಲಿಲ್ಲವಲ್ಲ; ಆದ್ದರಿಂದ ಮೆಂಬರರು ಮೀಟಿಂಗ್ ಕೂಡಿದಾಗೊಮ್ಮೆ ಇಸ್ಪೀಟಾಟ ಆಡುತ್ತಿದ್ದರು. ಹೀಗಾಗಿ ಇಸ್ಪೀಟಾಟಕ್ಕೆ ‘ಮೀಟಿಂಗ್’ ಎಂಬ ಹೊಸ ಹೆಸರು ಬಂತು. ಮತ್ತು ಸದರಿ ಮೀಟಿಂಗುಗಳು ಒಮ್ಮೊಮ್ಮೆ ರಾತ್ರಿ ಹನ್ನೆರಡು ಗಂಟೆಯವರೆಗೂ ನಡೆಯುತ್ತಿದ್ದವು.

(ಡ) ಇದರಲ್ಲಿ ಗುಡಸೀಕರ್ ಸಂತೋಷಗೊಳ್ಳುವ ಸಂಗತಿಗಳೂ ಇದ್ದವು. ಇವರೇನು ಬರೆಯುತ್ತಿದ್ದರೊ, ಬಿಡುತ್ತಿದ್ದರೋ ಸರ್ಕಾರದವರಂತು ಇವರಿಗೆ ಪತ್ರ ಬರೆಯುತ್ತಿದ್ದರಲ್ಲ, ಬಂದ ಪತ್ರಗಳು ಇಂಗ್ಲಷಿನಲ್ಲಿರುತ್ತಿದ್ದವು. ಗುಡಸೀಕರ ಆ ಪತ್ರವನ್ನು ಎಲ್ಲರೆದುರಿಗೆ ಜೋರಿನಿಂದ ಓದುತ್ತಿದ್ದ; ಓದುತ್ತಿದ್ದನಲ್ಲ ಅಂತೂ ಒಂದು ವಿಚಿತ್ರ ಟಿಸ್‌ಪಿಸ್ ಮಾಡುತ್ತಿದ್ದನಲ್ಲ. ಜನ ಬೆಕ್ಕಸಬೆರಗಾಗಿ ತೆರೆದ ಬಾಯಿ ತೆರೆದಂತೆ ಕೇಳುತ್ತ ಕೂರುತ್ತಿದ್ದರು.

ಇದಕ್ಕಿಂತ ವಿಚಿತ್ರವೆಂದರೆ ಪತ್ರಿಕಾವಾಚನ. ಗುಡಸೀಕರ ಮೂರೋ ಆರೋ ತಿಂಗಳಿಗೊಮ್ಮೆ ಬೆಳಗಾವಿಗೆ ಹೋಗಿ ಬರುತ್ತಿದ್ದ. ಹೋದಾಗೊಮ್ಮೆ ತಪ್ಪದೆ ಇಂಗ್ಲಿಷ್ ದಿನಪತ್ರಿಕೆ ತರುತ್ತಿದ್ದ. ಇನ್ನೊಮ್ಮೆ ಬೆಳಗಾವಿಗೆ ಹೋಗಿ ಹೊಸ ಪೇಪರ್ ತರುವವರೆಗೆ ಅದೇ ಗತಿ. ಮಧ್ಯಾಹ್ನ ಊಟವಾದ ಮೇಲೆ ಸಾಮಾನ್ಯವಾಗಿ ಒಬ್ಬನೇ ಮಹಡಿಯ ಮೇಲೆ ಕೂತು ಜೋರಿನಿಂದ, ಒಂದು ಕೂಗಳತೆಯವರೆಗೆ ಕೇಳಿಸುವಂತೆ ಓದುತ್ತಿದ್ದ. ಆಗಂತೂ ಆಜುಬಾಜೂ ಮನೆಯ ಅವ್ವಕ್ಕಗಳು ಮಕ್ಕಳು ಓಡಿ ಬಂದು ಕೆಳಗಡೆ ಗುಂಪು ಗುಂಪಾಗಿ ನಿಂತು ಅವನ ಟಿಸ್‌ಪಿಸ್‌ ಕೇಳುತ್ತಿದ್ದರು. ಇದು ಗೊತ್ತಾಗಿ ಗುಡಸೀಕರ ಇನ್ನಷ್ಟು ಗತ್ತಿನಿಂದ ಓದುತ್ತಿದ್ದ. ಇದರಿಂದಾಗಿ ಊರ ಹೆಂಗಸರಲ್ಲಿ ಕೆಲವು ಜನಪದ ಕಥೆಗಳು ಹುಟ್ಟಿ ಹಬ್ಬಿದವು:

(೧) ಗುಡಸೀಕರನ ಇಂಗ್ಲಿಷ್ ಕೇಳಿ ಬೆಳಗಾವಿಯ ಬಿಳೀ ಚರ್ಮದ ಒಬ್ಬ ಇಂಗ್ರೇಜಿ ಮೇಡಮ್ಮನು ನಡುರಸ್ತೆಯಲ್ಲೇ ಇವನನ್ನು ಅಡ್ಡಗಟ್ಟಿ ತನ್ನನ್ನು ಮದುವೆಯಾಗಬೇಕೆಂದು ಕೇಳಿಕೊಂಡಳಂತೆ! ಆದರೆ ಇವಳನ್ನು ಕಟ್ಟಿಕೊಂಡರೆ ತಾನು ತಂದೆತಾಯಿಗಳನ್ನು ಬಿಟ್ಟು ಪರದೇಶಕ್ಕೆ, ಸಮುದ್ರ ದಾಟಿ ಹೋಗಬೇಕಾಗುವದಲ್ಲಾ ಎಂದು ಒಲ್ಲೆ ಎಂದನಂತೆ.

(೨) (ಅ) ಗೋಕಾಕ ಫಾಲ್ಸದ ಮಾಲೀಕ, ಅವನೂ ಇಂಗ್ರೇಜಿಯವನೇ – ಮಗಳು ಒಂದು ದಿನ ಕಾರಿನಲ್ಲಿ ಕೂತು ಇವನು ಓದುವ ಕಾಲೇಜಿಗೆ ಹೋಗಿ ಮನೆಗೆ ಕರೆದೊಯ್ದಳು. ಅದೋ ಶಿವಾಪುರದಷ್ಟು ದೊಡ್ಡ ಬಂಗಲೇ! ಇಬ್ಬರೂ ಕೈಕೈ ಹಿಡಿದು ಕುಣಿಯುತ್ತಿದ್ದರಂತೆ. ಅಷ್ಟರಲ್ಲಿ ಅವಳ ತಂದೆ ಬಂದು “ಅಪ್ಪಾ ಗುಡಸೀಕರಾ, ನನ್ನ ಮಗಳ್ನ ಮದಿವ್ಯಾಗೋ, ನಿನಗ ಈ ಫಾಲ್ಸ್ ಎಲ್ಲಾ ಬರಕೊಟ್ಟ, ಮ್ಯಾಲ ನಿನ್ನ ಹಸರ ನೋಟಿನ್ಯಾಗ ಮುಚ್ಚತೀನೋ”. – ಎಂದು ಇಂಗ್ಲಿಷಿನಲ್ಲಿ ಹೇಳಿದನಂತೆ! ರೊಕ್ಕ ರೂಪಾಯಿ ಸಿಕ್ಕಾವು, ಒಮ್ಮೆ ಜಾತಿ ಕೆಟ್ಟರೆ ಹೋದ ಜಾತಿ ಸಿಕ್ಕುವದೇ? ಎಂದು ಯೋಚಿಸಿ ಗುಡಸೀಕರ “ಸಾಧ್ಯವಿಲ್ಲಾ” ಎಂದು ಇಂಗ್ಲೀಷಿನಲ್ಲಿ ಹೇಳಿದನಂತೆ!

(ಬ) ಈ ಕಥೆಯ ಇನ್ನೊಂದು ಪಾಠಾಂತರ ಕೆಳಗಿನ ಓಣಿಯಲ್ಲಿದೆ. ಅದರ ಪ್ರಕಾರ ಗುಡಸೀಕರ ಒಲ್ಲೆನೆಂದ ತಕ್ಷಣವೇ ಹುಡುಗಿ ಅತ್ತು ಕರೆದು ಇವನಿಗೊಂದು ಕೈಗಡಿಯಾರ ಕೊಟ್ಟು ಮುದ್ದಿಸಿದಳಂತೆ. ಈಗ ಗುಡಸೀಕರನ ಗಡಿಯಾರ ಇದೆಯಲ್ಲ, ಆ ಹುಡುಗಿಯೇ ಕೊಟ್ಟಿದ್ದಂತೆ. ಆಶ್ಚರ್ಯವೆಂದರೆ ಈ ಕಥೆಗಳು ಸ್ವತಃ ಗುಡಸೀಕರನ ಕಿವಿಯ ಮೇಲೆ ಬಿದ್ದಾಗಲೂ ಅಲ್ಲಗಳೆಯಲಿಲ್ಲ. ನಕ್ಕು ಸುಮ್ಮನಾದನಷ್ಟೇ. ಹೀಗಾಗಿ ಜನಪದ ಕಥೆಗಳೆಲ್ಲ ನಿಜವಾದ ಘಟನೆಗಳಾಗಿ ಬಿಟ್ಟವು.

ಹೀಗಂದರೆ ಗುಡಸೀಕರ ಸಣ್ಣ ಮನುಷ್ಯನೆಂದು ಇದರರ್ಥವಲ್ಲ. ಊರಿಗೆ ಒಳ್ಳೆಯದಾಗುವ ಕೆಲಸ ಮಾಡಬೇಕೆಂದು ಅಥವಾ ಅವನ ಮಾತಿನಲ್ಲಿಯೇ ಹೇಳುವುದಾದರೆ “ಊರು ಮುಂದೆ ತರಬೇಕೆಂದು” ಅವನಿಗೆ ನಿಜವಾಗಿಯೂ ಆಸೆಯಿತ್ತು. ತನ್ನ ಬಳಿ ಬಂದ ಮೆಂಬರರಿಗೂ ಕ| ಗಂ| ಸಾಲೆಗೂ ಹೋಗಿ ಚಿಕ್ಕ ಭಾಷಣಗಳ ರೂಪದಲ್ಲಿ ಅದನ್ನು ಸ್ಪಷ್ಟಪಡಿಸಿದ್ದ ಕೂಡ. ಅಲ್ಲವೇ ಅವನ ಬಗ್ಗೆ ಕೆಟ್ಟ ಅಭಿಪ್ರಾಯ ತಾಳಲಿಕ್ಕೆ ಜನಕ್ಕೆ ಕಾರಣಗಳಿರಲಿಲ್ಲ. ಏನೋ ಬೆಳಗಾವಿಯಲ್ಲಿ ಒಂದಿಬ್ಬರು ಇಂಗರೇಜಿ ಮೇಡಮ್‌ಗಳು ಇವನೆಂದರೆ ಬಿದ್ದು ಸಾಯುತ್ತಾರೆಂದೂ, ಅದಕ್ಕೆ ಇವನು ಆಗಾಗ ಬೆಳಗಾವಿಗೆ ಹೋಗುತ್ತಾನೆಂದೂ ಕಿಂವದಂತಿ. ವದಂತಿಗೇನು? ಕೈಯಿಲ್ಲ, ಕಾಲಿಲ್ಲ, ಹಬ್ಬುತ್ತವೆ. ಸಾಯುತ್ತವೆ. ಹಳ್ಳಿಯಲ್ಲಿ ಮಾತ್ರ ಒಬ್ಬರ ತೋರುಬೆರಳಿಗೆ ಗುರಿಯಾಗುವ ಕೆಲಸ ಮಾಡಿದವನಲ್ಲ, ಮಾತ್ರವಲ್ಲ, ಊರು ಮುಂದೆ ತರಬೇಕೆಂದವನು, ಊರು ಮುಂದೆ ತರುವದೆಂದರೇನು? ಈಗದು ಹಿಂದೆ ಉಳಿದಿದೆಯೆಂದು ಅರ್ಥವಲ್ಲವೇ? ಹಾಗೆ ಅದು ಹಿಂದೆ ಉಳಿದಿದೆಯೆಂದು ಗೊತ್ತಾದದ್ದೇ ಅವನೊಬ್ಬನಿಗೆ ಮಾತ್ರ, ಗೌಡ, ಬಸೆಟ್ಟಿ, ದತ್ತಪ್ಪ – ಇವರೇನು ಬೆಳಗಾವಿ ಅರಿಯದವರೇ? ಆದರೆ ಇವರ್ಯಾರಿಗೂ ತಮ್ಮ ಊರು ಬೆಳಗಾವಿಯಂತಿಲ್ಲ – ಎಂದು ಅನಿಸಲಿಲ್ಲ.

ಅವನಲ್ಲಿರುವ ಒಂದೇ ಒಂದು ಸಣ್ಣ ದೋಷವೆಂದರೆ, ಅದನ್ನು ದೋಷವೆಂದು ಹೇಳಿದ್ದು ದತ್ತಪ್ಪನೊಬ್ಬ ಮಾತ್ರ – ದತ್ತಪ್ಪನಿಗೇನು? ಪಿತ್ಥವಾದರೆ, ಯಾವದಕ್ಕೂ ದೋಷ ಎಂದಾನು, ಜನ ಹೇಳಬೇಕಲ್ಲ? – ಹೇಳಲಿ, ಬಿಡಲಿ, ಒಬ್ಬನಿಗಂತೂ ದೋಷವಾಗಿ ಕಂಡದ್ದು ನಿಜತಾನೆ? – ಸರಿ – ಅದನ್ನು ನೀವೂ ದೋಷವೆಂದು ಒಪ್ಪಿಕೊಳ್ಳುವಿರಾದರೆ? ಭಾಷಣವಿಲ್ಲದೇ ಯಾವದೇ ಕಾರ್ಯ ಸುರುವಾಗ ಕೂಡದು, ಸುರುವಾದರೆ ಮುಗಿಯಕೂಡದು – ಎಂಬ ನಂಬಿಕೆ.