ಮಾರನೇ ದಿನದಿಂದ ಹೊಲದಲ್ಲಿ ವಿಚಿತ್ರ ಚಟುವಟಿಕೆ ಕಂಡು ಬಂತು. ನಿನ್ನಿನ ಮಳೆಯ ಪ್ರಚಂಡ ಹೊಡೆತ ತಾಳದೆ ಜೋಳ ಭತ್ತಗಳು ಅಲ್ಲಲ್ಲಿ ಮಲಗಿದ್ದವು. ಅವನ್ನೆಲ್ಲ ಕಟ್ಟುತ್ತಿದ್ದರು. ಈಗ ಸೇಂಗಾ ಬೆಳೆ ಹಾಗೇ ಬಿಟ್ಟರೆ ಇಳಿದ ಕಾಯಿ ಮೊಳಕೆಯೊಡೆಯುವ ಸಂಭವವಿತ್ತು. ಕೆಲವೆಡೆ ಹೊರೆಹೊರೆ ಬಳ್ಳಿ ಕೊಚ್ಚಿಹೋಗಿತ್ತು. ಹೊಲ ಹೊಲದ ಅರ್ಧರ್ಧ ಬೆಳೆ ನೀರಲ್ಲೇ ನಿಂತಿದ್ದವು. ಸಜ್ಜೆಯ ತೆನೆ ಬಿಡಿಸಿಕೊಳ್ಳುತ್ತಿದ್ದರು. ಅಡಗಾಳು ಕೊಯ್ದುಕೊಂಡರು. ಜೋಳದ ಸ್ಥಿತಿ ಮಾತ್ರ ಅನಿಶ್ಚಿತವಾಗೇ ಇತ್ತು.

ಗುಡಿಸಲಲ್ಲಿ ಬಸವರಾಜೂ ಮಾತ್ರ ಸುಂದರಿ ಹೇಳಿದ್ದನ್ನು ಕೇಳಿ ತಬ್ಬಿಬ್ಬಾಗಿ ಕುಳಿತಿದ್ದ. ಅವಳು ಬಸಿರಾಗಿದ್ದಳು. ಗುಡಸೀಕರನಿಗೆ ಈ ಸುದ್ದಿ ಗೊತ್ತಾದರೆ ಅವನು ಸಿಡಿಯುವ ಸಂಭವವಿತ್ತು. ಎಲೆಕ್ಷನ್ ಸಮಯದಲ್ಲೇ ಹೀಗಾದರೆ ಹೇಗೆ? ವಿರೋಧಿಗಳು ಇದನ್ನು ಉಪಯೋಗಿಸಿಕೊಳ್ಳಬಹುದು. ಗುಡಸೀಕರ ಇಂಥಾದ್ದಕ್ಕೆ ಎದೆಗೊಡುವವನಲ್ಲ. ಒಳಗೊಳಗೇ ಪುಕ್ಕಲು ಸ್ವಭಾವದವ. ಈಗಿದ್ದ ಹಾಗೆ ಚುನಾವಣೆಯ ಬಗ್ಗೆ ಅವನಲ್ಲಿ ಭಾರೀ ಉತ್ಸಾಹವೇನೂ ಇರಲಿಲ್ಲ. ಗೌಡನ ಅನ್ಯಾಯಗಳನ್ನು ನೆನಪಿಸಿ ಸೇಡಿಗಾಗಿ ಅವನ ಮನಸ್ಸು ಮಸೆಯುತ್ತ, ಎಲೆಕ್ಷನ್ ಎನ್ನುತ್ತ ತಮ್ಮ ಅಗತ್ಯವನ್ನು ಮನದಟ್ಟು ಮಾಡಿಕೊಡುತ್ತ ಮತ್ತೆ ಮತ್ತೆ ಇವರೇ ಪಂಪು ಹೊಡೆಯಬೇಕಾಗಿತ್ತು. ಅಲ್ಲದೆ ಸುಂದರಿಯ ಮೈ ಮೊದಲಿಗಿದ್ದ ಆಕರ್ಷಣೆ ಈಗ ಅನಿಗುಳಿದಿರಲಿಲ್ಲ.

ಸುಂದರಿ ತುಂಬ ತಡವಾಗಿ ಸುದ್ದಿ ಹೇಳಿದ್ದಳು. ಉಳಿದವರಿಗೆ ಗೊತ್ತಾಗುವ ಮುನ್ನವೇ ಈ ಮುಳ್ಳು ತೆಗೆಯಬೇಕಾಗಿತ್ತು. ಹೇಗೆಂದು ಹೊಳೆಯಲೊಲ್ಲದು. ಗುಡಸೀಕರನ ಸ್ವಭಾವ ಅವಳು ಅರಿಯದವಳಲ್ಲ. ಅರಳಿಗಂಟಿನ ಮೇಲೆ ಲಗ ಹೊಡೆದವ ಬಸಿರೆಂದರೆ ಮಾರುದ್ದ ಹಾರುವುದರಲ್ಲಿ ಅನುಮಾನವೇ ಇರಲಿಲ್ಲ. ಬೇರೆ ಸೂಳೆಯರಿಗೆ ತಡೆದೀತು. ತನ್ನಂಥವರಿಗೆ ಇದು ಸಲ್ಲದೆಂದು ತೀರ್ಮಾನಿಸಿದ್ದಳು. ಈ ಶನಿಕಾಟವನ್ನು ನಿವಾರಿಸಲು ಏನೆಲ್ಲ ಉಪಾಯ ಮಾಡಲು ಸಿದ್ಧಳಾದಳು. ಹ್ಯಾಗಾದರೂ ಮಾಡಿ “ಈ ಪಾಪ ತೆಗಿ” ಎಂದು ಬಸವರಾಜನಿಗೆ ಮೊರೆಯಿಟ್ಟಳು. ಬಸವರಾಜನೂ ಹತಾಶನಾಗಿ ನಿಂಗೂನನ್ನು ಮೊರೆಹೊಕ್ಕ.

ಗರ್ಭಪಾತದ ವಿದ್ಯೆಯಲ್ಲಿ ನಿಂಗೂನನ್ನು ಬಿಟ್ಟಿರಿಲ್ಲವೆನ್ನುವುದೂ ನಿಜವೇ. ಅದಕ್ಕೇ ಕಳ್ಳ ಬಸುರಿನ ಸುದ್ದಿಗಳು ಅವನಿಗೆ ತಿಳಿದಷ್ಟು ಊರಲ್ಲಿ ಯಾರಿಗೂ ಗೊತ್ತಿಲ್ಲ. ಬಸವರಾಜೂ ಹೇಳಿದ್ದನ್ನೆಲ್ಲ ನಿಂಗೂ ಕೇಳಿಕೊಂಡ. ಯಾರು ಯಾರಿಗೆ ಎಂದು ಕೇಳದೆ, ಕೇಳಿ ತಿಳಿದುಕೊಳ್ಳದೆ ನಿಂಗೂ ಮದ್ದು ಕೊಟ್ಟನಾದರೂ ಹ್ಯಾಗೆ? ಬಸವರಾಜು ದುಃಖ ಅಭಿನಯಿಸಿ ಸಂಕಟ ತೋಡಿಕೊಂಡ. ಆದರೆ ಬಸಿರಾದವಳು ಸುಂದರಿ ಎಂದು ಹೇಳಲಿಲ್ಲ, ದುರ್ಗಿ ಎಂದಿದ್ದ… ಅಷ್ಟೇ ಫರ್ಕಾಗಿತ್ತು ಸತ್ಯದಿಂದ ಅವನ ಒದ್ದಾಟ ನೋಡಿ ನಿಂಗೂನಿಗೂ ಕರುಣೆ ಬಂತು. ಅಡವಿಗೆ ಹೋಗಿ ತಾನೇ ಗಿಡಮೂಲಿಕೆ ತಂದು, ಕುಟ್ಟಿ ರಸಮಾಡಿ ಕುಡಿಯಬೇಕೆಂದೂ, ಕುಡಿದಾಗ ಒಳಗೆ ಸಂಕಟವಾಗಿ ಸ್ವಲ್ಪ ಕೂಗಾಡಬಹುದಾದದ್ದರಿಂದ ಹೊಲದ ಕಡೆ ಕರೆದುಕೊಂಡು ಹೋಗಿ ಕುಡಿಸು ಎಂದೂ ಹೇಳಿದ. ತನ್ನ ಜೊತೆ ಆಗಿದ್ದರೆ ಇವೆಲ್ಲ ತಾಪತ್ರಯ ಇರುತ್ತಿರಲಿಲ್ಲವೆಂಬ ಮಾತನ್ನು ಹೇಳದಿರಲಿಲ್ಲ.

ಒಂದು ದಿನ ಮಧ್ಯಾಹ್ನ ಗುಡಸೀಕರ ಮನೆಯಲ್ಲಿ ಮಲಗಿದ್ದ. ತೋಟದ ಕಡೆ ಆಗಾಗ ಸಾಯಂಕಾಲ ಅಡ್ಡಾಡಲಿಕ್ಕೆ ಹೋಗುವುದಿತ್ತು. ಹೋದರೆ ಹೋದ; ಇಲ್ಲದಿದ್ದರೆ ಇಲ್ಲ. ಈ ಹೊತ್ತು ಬಹಶಃ ಹೋಗುವ ಸಂಭವ ಕಮ್ಮಿಯೆಂದು ಭಾವಿಸಿ ಬಸವರಾಜು ಗಿಡಮೂಲಿಕೆ ರಸದ ಬಟ್ಟಲು ತಗೊಂಡು ಸುಂದರಿಯನ್ನು ಕರೆದುಕೊಂಡು ಗುಡಸೀಕರನ ತೋಟಕ್ಕೆ ಹೋದ. ಸಮೀಪದಲ್ಲಿ ಯಾರೂ ಇರಲಿಲ್ಲ. ಮೊದಲು ಅವಳನ್ನು ಕಬ್ಬಿನ ಬೆಳೆಯಲ್ಲಿ ಹೊಗಿಸಿದ. ತಾನೂ ಹೋಗಬೇಕೆಂದಾಗ ಗೌಡನ ತೋಟದ ಬಾಂದಿನ ಮೇಲಿಂದ ಖಾದೀಧಾರಿಯೊಬ್ಬ ಇತ್ತ ಕಡೆಗೇ ಬರುತ್ತಿದ್ದ. ಅವನು ದಾಟಿಹೋಗುವ ತನಕ ಕಬ್ಬಿನ ಗಣಿ ಮುರಿದು ಸುಲಿಯುವ ನೆವಮಾಡಿ ನಿಂತ. ಅವನ್ನೆಲ್ಲೋ ನೋಡಿದಂತಿತ್ತು, ನೆನಪಾಗಲಿಲ್ಲ. ಆತ ಮರೆಯಾದೊಡನೆ ತಾನೂ ಕಬ್ಬಿನಲ್ಲಿ ಮಾಯವಾದ.

ಒಳಗೆ ಹೊಕ್ಕು ಅರ್ಧತಾಸಾಗಿರಬಹುದು. ಸುಂದರಿ “ಸತ್ತೆನೋ ಎಪ್ಪಾ” ಎಂದು ಕಿರುಚತೊಡಗಿದಳು. ಮದ್ದು ಹೊಟ್ಟೆಗಿಳಿದದ್ದೇ ತಡ ಒಳಗಿನಕರುಳು ಚುರುಗುಟ್ಟಿ ಹರಿದು ಚೂರು ಚೂರಾದಂತಾಗಿ, ವೇದನೆ ಸಹಿಸಲಾರದೆ ಬಿದ್ದು ಹೊರಳಾಡತೊಡಗಿದಳು. ಒಂದು ಕೈಯಿಂದ ಹೊಟ್ಟೆ ಕಿವುಚಿಕೊಳ್ಳುತ್ತ, ಇನ್ನೊಂದರಿಂದ ಬಾಯಿ ಬಾಯಿ ಬಡಿದುಕೊಳ್ಳುತ್ತ ಆಕಾಶ ಪಾತಾಳ ಒಂದು ಮಾಡುವಂತೆ ದೂರ ಗುಡಿಯ ಕರಿಮಾಯಿಯ ಮರದ ಮೂರ್ತಿಗೂ ಕೇಳಿಸುವಂತೆ ಒದರಾಡಿದಳು. ಬಸವರಾಜನಿಗೆ ದಿಕ್ಕೇ ತೋಚದಾಯ್ತು. ಕೈಕಾಲು ಲಟಪಟ ಬಡಿದು ವಿಲಿವಿಲಿ ಒದ್ದಾಡುತ್ತಿದ್ದಳು. ಸಾಯುವುದೇ ಖಾತ್ರಿಯಾಗಿ ಅವಳ ಬಳಿ ಸುಳಿಯುವುದಕ್ಕೂ ಗಾಬರಿಯಾಗಿ ತಲೆಯ ಬುದ್ಧಿ ಕಾಲಿಗಿಳಿದು ಬೆಳೆ, ಕಲ್ಲು, ಮುಳ್ಳೆನ್ನದೆ ಹಾರಿ ಓಡಿಬಿಟ್ಟ.

ಪಕ್ಕದ ತೋಟದ ಗೌಡನಿಗೆ ಇದು ಕೇಳಿಸಿ ಕುಡಗೋಲು ಹಿಡಿದುಕೊಂಡೇ ಓಡಿ ಬಂದ. ಅವನೊಂದಿಗೆ ಖಾದೀಧಾರಿ ಮುದುಕಪ್ಪ ಗೌಡನೂ ಬಂದ ಗುಡಸೀಕರನ ಬೆಳೆ ಚಡಪಡಿಸುವಲ್ಲಿಗೆ ಓಡಿ ನೋಡಿದರೆ, ರಕ್ತ ಕಾರುತ್ತಾ ಸುಂದರಿ ಬಿದ್ದಿದ್ದಳು. ನಾಲಗೆ ಉಡುಗಿ ಹೋಗಿ ಗಂಟಲಿನಿಂದ ಗೊರ್ ಗೊರ್ ಶಬ್ದ ಮಾತ್ರ ಬರುತ್ತಿತ್ತು. ಸಾಯಲಿರುವ ಬಾಯಿಬಾರದ ಪ್ರಾಣೀಯ ಹಾಗೆ ಕೈಕಾಲು ಮಾತ್ರ ವಿಲಿವಿಲಿ ಒದ್ದಾಡುತ್ತಿದ್ದವು, ಮತ್ತೆ ಸ್ತಬ್ಧವಾಗುತ್ತಿದ್ದವು. ಗೌಡ ತಿರುಗಿ ನೋಡುವುದರೊಳಗೆ ಮುದುಕಪ್ಪ ಗೌಡ ದತ್ತಪ್ಪನನ್ನು ಕರೆತರಲು ಓಡಿಹೋಗಿದ್ದ. ಗೌಡ ಹೋದವನೇ ಅವಳ ಎಡಗೈ ಕಿರುಬೆಟ್ಟು ಹಿಸುಕಿದ. ಮತ್ತೆ ಒದ್ದಾಡಿತು. ಮತ್ತೆ ಹಿಸುಕಿದ. ಮತ್ತೆ ಒದ್ದಾಡಿತು. ಮತ್ತೆ ಹಿಸುಕಿದ ಒದ್ದಾಡಲಿಲ್ಲ. ಕಿವಿಯಲ್ಲಿ ಜೋರಿನಿಂದ ಊದ ತೊಡಗಿದ. ಊದಿಯೇ ಊದಿದ. ಜೀವ ಬರಲೊಲ್ಲದು, ಗೌಡ ಬಿಡಲೊಲ್ಲ. ಓಡಿ ಹೊರಟ ಜೀವ ಹಿಡಿದು ತರುವ ಹಾಗೆ ಊದುತ್ತಿದ್ದ. ಬಹಳ ಹೊತ್ತಾದ ಮೇಲೆ ಜೀವ ಬರುವ ಲಕ್ಷಣ ಕಂಡವು. ಮೈಯಲ್ಲಿ ಬಿಸಿ ಬಂತು. ಕರಿಬೆರಳು ಹಿಸುಕುತ್ತ “ಏ ಅವೂ, ಅವೂ” ಎಂದು ಕರೆದ. ಕಣ್ಣು ತೆರೆದೊಮ್ಮೆ ನೋಡಿ ಮತ್ತೆ ಮುಚ್ಚಿದಳು. ಸಧ್ಯ ಭಯವಿಲ್ಲ ಎಂದುಕೊಂಡ. ಇತ್ತ ಬಸವರಾಜ ದಿಕ್ಕೆಟ್ಟು ಸತ್ತೆನೋ, ಬದುಕಿದೆನೋ ಎಂದು ಬೇಟೆಗಾರನಿಂದ ಸ್ವಲ್ಪದರಲ್ಲೇ ತಪ್ಪಿಸಿಕೊಂಡ ಪ್ರಾಣಿಯ ಹಾಗೆ ಓಡಿ ಹೊರಟಿದ್ದನಲ್ಲ, ತೋಟದ ಅಂಚಿನಿಂದ ಗುಡಸೀಕರ ಅಡ್ಡಾಡಲಿಕ್ಕೆ ಈ ಕಡೆಗೇ ಬರುತ್ತಿದ್ದ. ದಂಗು ಬಡಿದವರಂತೆ ಓಡುತ್ತಿದ್ದ ಬಸವರಾಜೂನನ್ನು ಕಂಡ.

“ಏ ಬಸವರಾಜು” ಎಂದು ಕೂಡಿ ಬಹುಶಃ ಏನೋ ಅನಾಹುತವಾಗಿರಬೇಕೆಂದು ತಾನು ಅವನ ಕಡೆ ಓಡಿದ. ಬಸವರಾಜು ಸಿಕ್ಕೊಡನೆ “ಯಾಕೊ? ಏನಾಯ್ತೋ?” ಎಂದು ರಟ್ಟೆ ಹಿಡಿದು ಅಲುಗಿ ಕೇಳುತ್ತಲೂ ಬಸವರಾಜು ಏನು ಮಾಡುತ್ತಿದ್ದೇನೆಂದು ತಿಳಿಯದೆ ಗುಡಸೀಕರನನ್ನು ಕರೆದುಕೊಂಡು ಸುಂದರಿ ಬಿದ್ದಲ್ಲಿಗೆ ಧಾವಿಸಿ ಬಂದ.

ಸುಂದರಿಯ ತಲೆ ಗೌಡನ ತೊಡೆಯ ಮೇಲಿತ್ತು. ಒಂದು ಕೈಯಿಂದ ಅವಳ ಎಡಗೈ ಕಿರಿಬೆರಳು ಗಟ್ಟಿಯಾಗಿ ಹಿಡಿದು ಬಲಗೈಯಿಂದ ಗಾಳಿ ಹಾಕುತ್ತಿದ್ದ. ಇಬ್ಬರ ತಲೆ ಕೆದರಿತ್ತು. ಸುಂದರಿಯ ಸೀರೆ ಅಸ್ತವ್ಯಸ್ತವಾಗಿತ್ತು. ಸರಪಂಚ ಅಂಗಾಲಿನಿಂದ ನೆತ್ತಿಯ ತನಕ ಕುದಿಯತೊಡಗಿದ. ಈ ದೃಶ್ಯ ಕಂಡೊಡನೆ ಬಸವರಾಜನಿಗೆ ಹೋದ ಜೀವ ಬಂದಂತಾಯ್ತು. ಸುಂದರಿ ಸತ್ತಿರಲಿಲ್ಲ. ಗೌಡನ ತೊಡೆಯ ಮೇಲಿದ್ದಳು. ಕಂಡದ್ದೇ ತಡ ತನ್ನ ಮೂಲರೂಪಕ್ಕೆ ಬಂದ. ಬುದ್ಧಿ ಸಮತಲಗೊಂಡು ಚಕಮಕಿ ಕಿಡಿಯಂತೆ ‘ಐಡಿಯ’ ಹೊಳೆಯಿತು. ಕಿಡಿಗಣ್ಣು ಮಾಡಿಕೊಂಡು ತುಟಿ ಕಚ್ಚಿಕೊಂಡು ಸ್ವಹಿಂಸೆ ಮಾಡಿಕೊಳ್ಳುತ್ತಿದ್ದ ಗುಡಸೀಕರನ ಭುಜದ ಮೇಲೆ ಒಂದೆರಡು ಸಲ ತಟ್ಟಿ, ಅವರ ಗಮನ ತನ್ನ ಕಡೆ ಸೆಳೆಯಲು ಪ್ರಯತ್ನ ಮಾಡಿದ. ಗೌಡನೂ ಇವರನ್ನು ನೋಡಿರಲಿಲ್ಲ. ಕುಡಲೇ ಬಲಗಾಲು ಕುಟ್ಟಿ “ಗೌಡಾ, ಈ ಮುದಿ ವಯಸ್ಸಿನಾಗ ಇಂಥಾ ಕೆಲಸ ಮಾಡಾಕ ನಾಚಿಕೆ ಬರಲಿಲ್ಲಾ?” ಎಂದು ಗುಡುಗಿದವನೇ ಉತ್ತರಕ್ಕಾಗಿ ಕಾಯದೇ, ಗುಡಸೀಕರ ಹೋಗಿಬಿಟ್ಟ. ಕಿವಿಗೆ ಈ ಶಬ್ದ ಬೀಳುತ್ತಿದ್ದಂತೆ ಗೌಡ ತಲೆ ಎತ್ತಿ ನೋಡಿದ. ಏನಾಡುತ್ತಿದ್ದನೋ, ಏನು ಮಾಡುತ್ತಿದ್ದನೊ ಆಡಿದವನು ಅಲ್ಲೇ ಇದ್ದಿದ್ದರೆ, ಆಡಿದ್ದು ಅರ್ಥವಾಗಿದ್ದರೆ ನೋಡ ನೋಡುವಷ್ಟರಲ್ಲಿ ಆಡುವುದಕ್ಕೆ ಬಾಯಿ ತೆರೆಯುವಷ್ಟರಲ್ಲಿ ಇಬ್ಬರೂ ಮರೆಯಾಗಿದ್ದರು. ಸಾಯಲಿದ್ದವಳನ್ನು ಉಳಿಸಿದ್ದಕ್ಕೆ ತನಗೆ ಕೃತಜ್ಞತೆ ಬೇಡ, ತನ್ನ ಹುಡಿಗಿಯನ್ನೂ ನೋಡಿಕೊಳ್ಳದೆ, ಈ ರೀತಿ ಓಡಿಹೋದುದ್ದಕ್ಕೆ ಗೌಡನಿಗೆ ಕೆಡುಕೆನಿಸಿತು. ಗೌಡನಿಗೆ ಗುಡಸೀಕರನ ದನಿ ಕೇಳಿಸಿತ್ತೇ ಹೊರತು ಅವನೇನಾಡಿದ ಎಂದು ತಿಳಿದಿರಲಿಲ್ಲ. ಕೂಗಿ ಕರಯಬೇಕೆಂದುಕೊಂಡ. ಸುಂದರಿ ನರಳಿದಳು. ಬಿಟ್ಟೇಳುವ ಮನಸ್ಸಾಗಲಿಲ್ಲ. ಅಷ್ಟರಲ್ಲಿ ದತ್ತಪ್ಪ, ಗಲುಮವ್ವ, ಮುದುಕಪ್ಪ ಗೌಡ ಓಡಿ ಬಂದರು.

ದತ್ತಪ್ಪ ನಾಡಿ ಹಿಡಿದು ನೋಡಿದ. ಹೆಚ್ಚು ಅರ್ಥವಾಗಲಿಲ್ಲ. ಕೂಡಲೇ ಗಿಡಮೂಲಿಕೆಯೊಂದರ ಹೆಸರನ್ನು ಲಗಮವ್ವನ ಕಿವಿಯಲ್ಲಿ ಹೇಳಿದ. ಲಗುಮವ್ವ ಓಡಿದಳು. ಮದ್ದು ಕುಡಿಸಿ ಸುಂದರಿಯನ್ನು ಖಬರಿಗೆ ತರುವುದಕ್ಕೆ ಒಂದು ತಾಸು ಹಿಡಿಯಿತು. ಅವಳು ಚೇತರಿಸಿಕೊಳ್ಳುವುದಕ್ಕೆ ಇನ್ನಷ್ಟು ಸಮಯ ಹಿಡಿಯಿತು. ಆಗಲೇ ಸಂಜೆಯಾಗಿತ್ತು. ಅವಳಿಗೆ ನಡೆಯುವ ಚೇತನ ಇರಲಿಲ್ಲ. ಲಗಮವ್ವ ನಡೆಸಿಕೊಂಡು ಅವಳ ಗುಡಿಸಲಿಗೆ ಮುಟ್ಟಿಸಬೇಕಾದರೆ ಆಗಲೇ ರಾತ್ರಿಯಾಗಿತ್ತು.

ಸುಂದರಿಯನ್ನು ಗುಡಿಸಲಿಗೆ ತಂದಾಗ ಗುಡಸೀಕರ ಇರಲಿಲ್ಲ. ಬಸವರಾಜು ಬಾಯಿ ಬಿಡಲಿಲ್ಲ. ಲಗಮವ್ವ ಅವಳನ್ನು ಒಳಗೊಯ್ದು ಮಲಗಿಸಿ ತನ್ನ ಗುಡಿಸಲಿಗೆ ಹೋದಳು. ಸುಂದರಿ ಸ್ವಲ್ಪ ಹೊತ್ತು ಬಿದ್ದುಕೊಂಡಿದ್ದು ಆಮೇಲೆ ಮೆಲ್ಲನೆದ್ದು ತನ್ನ ಟ್ರಂಕಿನಲ್ಲಿ ಹಳೆಯ ದಿನಪತ್ರಿಕೆಯೊಂದನ್ನೆತ್ತಿ ಬಸವರಾಜನಿಗೆ ಕೊಟ್ಟಳು. ಅರ್ಥಪೂರ್ಣವಾಗಿ ನಕ್ಕು ಒಳಕ್ಕೆ ಕರೆದಳು. ಅವನ ಕಿವಿಯಲ್ಲಿ ಪಿಸುಪಿಸು ಸಂಚು ಉಸುರಿ ಮಲಗಿಕೊಂಡಲೂ. ಗುಡಸೀಕರ ಬಂದ.

ಗೌಡನ ತೊಡೆಯ ಮೇಲಿನ ಸುಂದರಿಯನ್ನು ನೋಡಿ ಗುಡಸೀಕರ ಹಿಂದಿರುಗಿ ಬಂದನಲ್ಲ. ಸೀದಾ ಮನೆಗೆ ಹೋದ. ಬಸವರಾಜು ಗುಡಿಸಲಿಗೆ ಬಂದ. ದಾರಿಯಲ್ಲಿ ಇಬ್ಬರೂ ಮಾತಾಡಲಿಲ್ಲ. ಪ್ರಾಯದ ತನ್ನ ಗಂಡಸುತನವನ್ನೇ ಮುದಿ ಗೌಡ ಪ್ರಶ್ನಸಿದಂತಾಗಿತ್ತು ಗುಡಸೀಕರನಿಗೆ. ಹಳೆಯ ಸೇಡುಗಳೆಲ್ಲ ಮರುಕಳಿಸಿ ಮೇಲೆದ್ದವು. ಅನ್ನ ಹಾಕಿದವನಿಗೇ ಸುಂದರಿ ಮೋಸ ಮಾಡಿದಂತಾಗಿತ್ತು. ಈ ಸುದ್ದಿ ಗೊತ್ತಾದರೆ ಇಡೀ ಊರು ವ್ಯಂಗ್ಯವಾಡಿ ಕೈತಟ್ಟಿ ನಗುವುದರಲ್ಲಿ ಸಂದೇಹವಿಲ್ಲ. ಅನೇಕ ಸಂದರ್ಭಗಳಲ್ಲಿ ಸೋತಿದ್ದು ನಿಜ. ಆದರೆ ಈ ಸೋಲು ಉಳಿದವುಗಳನ್ನು ಮೆಟ್ಟಿ ನಿಲ್ಲುವಂಥಾದ್ದು. ಗೌಡ ತನ್ನನ್ನು ಊರಲ್ಲಿ ಉಳಿಯಗೊಡಿಸಲಾರನೆಂದೇ ತೋರಿತು. ಚತುಷ್ಟಯರ ಮೇಲೂ ಸಿಟ್ಟುಬಂತು. ಅವರೋ ಲೋಲುಪರು. ಅದಾಗದೆ ಗಟ್ಟಿಮುಟ್ಟಾಗಿದ್ದರೆ ಅವರಿಂದ ಗೌಡನ ಹೆಣ ಹೊರಿಸಬಹುದಿತ್ತು. ಸಾಲದ್ದಕ್ಕೆ ಕುಸ್ತಿಯ ಹುಡುಗರು ಗೌಡನ ಪರವಾಗಿದ್ದರು. ಮಸಿ ಹತ್ತಿದ ಮುಖ ಮಂದಿಗೆ ತೋರಿಸೋದು ಹ್ಯಾಗೆ? ಮಿದುವಾದ ಉಪಾಯಗಳಿಂದ ಪ್ರಯೋಜನವಿಲ್ಲ ಅನ್ನಿಸಿತು. ಇಷ್ಟಕ್ಕೂ ಕಾರಣ ಈ ರಂಡೆ. ಇವಳನ್ನು ಗುಡಿಸಲಲ್ಲಿ ಕಟ್ಟಿಹಾಕಿ ಬೆಂಕಿ ಹಚ್ಚಬೇಕೆಂದುಕೊಂಡ. ನರಿಬುದ್ಧಿಯಲ್ಲಿ  ಗೌಡನನ್ನು ಮೀರಿಸುವುದು, ಎದುರಿಸುವುದೂ ಸಾಧ್ಯವಿಲ್ಲ. ಈಗುಳಿದದ್ದು ಒಂದೇ ಉಪಾಯವೆಂದುಕೊಂಡ; ಏಕ್ ಮಾರ್ ದೋ ತುಕಡಾ!

ಕಬ್ಬಿಣ ಸರಿಯಾಗಿ ಕಾಯಲೆಂದು ಕಾಯುವ ಕಮ್ಮಾರನಂತೆ ಈ ತನಕ ಸುಮ್ಮನಿದ್ದ ಬಸವರಾಜು ಈಗ ಏಟು ಹಾಕಿದ. ಅವನ ಮಾತೇ ಮಾತು. ‘ಹ್ಯಾಂಗ್ರೀ’ ಅಂದ. ಹೀಂಗ್ರಿ’ ಅಂದ. ಸುಂದರಿ ಕಟ್ಟಿಕೊಂಡ ಹೆಂಡತಿಯಲ್ಲ! ಅಂದ. ಸುಂದರಿ ಕಟ್ಟಿಕೊಂಡ ಹೆಂಡತಿಯಲ್ಲ! ಅಂದ. ‘ಸೂಳೆ’ ಅಂದ. ಸೂಳೆಗೆಲ್ಲಿಯ ನಿಷ್ಠೆ? ಅದು ದೊಡ್ಡದಲ್ಲ; ಗೌಡ ನಿಮ್ಮ ಸೂಳೆಗೆ ಕೈಹಾಕಿದರೆ ನೀವು ಅವನ ಸೂಳೆ ದುರ್ಗಿಗೆ ಕೈಹಾಕಿದರಾಯ್ತು. ಲೆಕ್ಕ ಬಡ್ಡಿಗೆ ಬಡ್ಡಿ ಚುಕ್ತಾ ಆದಂತೇ. ಆದರೆ ಇಂದಿನಂಥಾ ಲಾಭ ನಿಮಗೆ ಹಿಂದೆ ಆಗಿಲ್ಲ; ಮುಂದೆ ಆಗೋದು ಸಾಧ್ಯವಿಲ್ಲ. ಗೌಡ ಸುಂದರಿಗೆ ಕೈಹಾಕಿದ್ದು, ನಿಮ್ಮ ಮೇಲಿನ ಸೇಡಿನಿಂದ. ಈಗವಳು ಬಸುರಾಗಿದ್ದಾಳೆ.

ಗುಡಸೀಕರನಿಗೆ ಇನ್ನೊಂದು ಆಘಾತವಾಯ್ತು. “ಬಸರಾಗ್ಯಾಳ?” ಎಂದು ಉದ್ಗಾರದಿಂದ ಪ್ರಶ್ನಿಸಿದ. ಬಸವರಾಜು ಮತ್ತೆ ತಣ್ಣಗೆ ನುಣ್ಣಗೆ ಮಾತಿನ ಬಲೆ ಹೆಣೆಯತೊಡಗಿದ! ಗೌಡ ಬಲೆಗೆ ಬಿದ್ದಂತಾಯ್ತು. ಇದು ಅವನ ಸೇಡಿನಳತೆಗೆ ಮೀರಿ ಆದದ್ದು. ಅದಕ್ಕೇ ಹೆದರಿ ಅವ ಹೊಟ್ಟೆಯಿಳಿಸುವ ಮದ್ದು ಕೊಟ್ಟದ್ದು!

“ಮದ್ದು ಕೊಟ್ಟ!”

“ಈಗ ಸುಂದರಿಯನ್ನು ಬಿಟ್ಟರೆ ಹ್ಯಾಗೋ ಮಾಡಿ ಗೌಡ ಅವಳ ಹೊಟ್ಟಯಿಳಿಸೋದು ಖಂಡಿತ. ನಾವು ಅವಳನ್ನು ನಮ್ಮ ಕೈಯಲ್ಲೇ ಇಟ್ಟುಕೊಂಡಿರಬೇಕು. ಆ ಕಡೆ ಎಲೆಕ್ಷನ್ ಭರಾಟೆ, ಈ ಕಡೆ ಒಂದು ಮೂಕರ್ಜಿ, ಗೌಡ ತನಗರಿವಿಲ್ಲದಂತೆ ಗೋರಿ ತೋಡಿಕೊಂಡಿದ್ದಾನೆ. ಜನ ಹುಚ್ಚರಲ್ಲ. ಅಥವಾ ಯಾವಾಗಲೂ ಹುಚ್ಚರಾಗಿರುವುದಿಲ್ಲ. ಸುಂದರಿ ಯಾರಿಗೇ ಬಸಿರಾಗಿರಬಹುದು. ಹೆಸರಂತೂ ಗೌಡನದೇ. ಇದು ಜನಕ್ಕೆ ಅರ್ಥವಾಗುವುದಿಲ್ಲ ಎನ್ನಬೇಡರಿ, ಅದೂ ಬೇಡ, ಗೌಡನ್ನ ಜೇಲಿಗೆ ಈಗಿಂದೀಗ ಕಳುಹಿಸುವಿರೇನು?”

“ಜೇಲಿಗೆ?”

ಬಸವರಾಜು ಎದ್ದವನೇ ಒಳಗೆ ಹೋಗಿ ಸುಂದರಿ ಕೊಟ್ಟ ದಿನಪತ್ರಿಕೆ ತಂದು ಗುಡಸೀಕರನ ಮುಂದೆ ಹಿಡಿದ. ಅದರಲ್ಲಿಯ ಮುದುಕನೊಬ್ಬನ ಫೋಟೊ ತೋರಿಸಿ ಅರ್ಥಪೂರ್ಣವಗಿ ನಕ್ಕ. ಕೊಳವೀ ಮುದುಕಪ್ಪ ಗೌಡಪ್ಪನನ್ನು ಜೀವಂತವಾಗಲಿ, ಇಲ್ಲವೆ ಕೊಂದಾಗಲಿ ತಂದುಕೊಟ್ಟವರಿಗೆ ೫೦೦೦ರೂ. ಬಹುಮಾನವೆಂದು ಸರ್ಕಾರೀ ಪ್ರಕಟಣೆಯಿತ್ತು. ಆಗಲೂ ಗುಡಸೀಕರನಿಗೆ ಅರ್ಥವಾಗಲಿಲ್ಲ. ‘ಹಹ್ಹಾಹ್ಹ! ಓಲ್ಡ್‌ಬಾಯ್ ಕೊಳವಿ ಮುದುಕಪ್ಪ ಸ್ವಾತಂತ್ರ್ಯ ಚಳುವಳಿಯಲ್ಲಿದ್ದಾನೆ! ಗೌಡ ತನ್ನ ಮನೆಯಲ್ಲಿ ಇವನನ್ನು ಅಡಗಿಸಿಟ್ಟಿದ್ದಾನೆ.”