ಚುನಾವಣೆ ಅನಿವಾರ್ಯವಾಗಿತ್ತು. ಗುಡಸೀಕರನಿಗಂತೂ ಊರೊಳಗಿನ ತನ್ನ ಸ್ಥಾನಮಾನ ಮಂದಿಗಲ್ಲ, ತನಗೇ ಖಾತ್ರಿಯಾಗಬೇಕಿತ್ತು. ಹಿರಿಯರ ಔದಾರ್ಯದಿಂದ ದೊರೆತ ಸರಪಂಚಗಿರಿಯ ಸುಖ ಕಂಡುಂಡದ್ದದಾಗಿತ್ತು. ಇವು ಪೂರಕ ವಿಚಾರಗಳು; ಅಥವಾ ಹೊತ್ತಿದ ಬೆಂಕಿಯಲ್ಲಿ ಆಗಾಗ ಬೀಳುತ್ತಿದ್ದ ಹುಲ್ಲಿನ ಗರಿಗಳು. ಮುಖ್ಯವಾಗಿ ಸುಂದರಿಯನ್ನು ಗೌಡ ಕೂಡಿದ್ದು ಹುಡುಗನ ಆಳದಲ್ಲಿ ಹುಣ್ಣು ಮಾಡಿತ್ತು. ಚಡಪಡಿಸಿದ, ಒದ್ದಾಡಿದ, ದಿನಕ್ಕಿಂತ ಹೆಚ್ಚು ಕುಡಿದ, ಹೆಚ್ಚು ಸೇದಿದ, ವೀರಾವೇಶದಿಂದ ಹೊಗೆಬಿಟ್ಟ, ಚತುಷ್ಟಯರನ್ನು ಕರೆದು ‘ಗಂಡಿಗ್ಯಾಗೋಳ್ರಾ’ ಎಂದು ಬೈದ. ಚತುಷ್ಟಯರಿಗೇನೋ ಸುದ್ದಿ ಗೊತ್ತಾಯ್ತು. ಆದರೆ ಅವರು ನಂಬಲಿಲ್ಲ. ಹಾಗಂತ ಆಡಿಕೊಳ್ಳಲಿಲ್ಲ. ಅವನ ಕಾಟ ತಡೆಯಲಾರದೆ ಗುಡಸೀಕರನೊಂದಿಗೆ ಅಷ್ಟು ಜನ ಒಮ್ಮೆ ಸೇರಿ ಒಮ್ಮೆ ಗೌಡನ ಮುದಿ ಕುದುರೆ ಗುಡಸೀಕರನ ತೋಟ ಹೊಕ್ಕು ಮೇಯುತ್ತಿದ್ದಾಗ ಅಟ್ಟಿಸಿಕೊಂಡು ಹೋಗಿ ಹೊಡೆದರು, ಕಡಿದರು, ಕಲ್ಲು ಹೇರಿದರು. ಕೊನೆಗೆ ಕೆರೆಯ ಕೆಸರಲ್ಲಿ ಸಿಕ್ಕಿಕೊಳ್ಳುವಂತೆ ಮಾಡಿದರು. ಸಾಲದೆಂದು ನಿಸ್ಸಹಾಯಕವಾಗಿ ಒದ್ದಾಡುತ್ತಿದ್ದ ಆ ಪ್ರಾಣಿಯ ಪೃಷ್ಟದಲ್ಲಿ ಉದ್ದನೆಯ ಗೂಟ ಜಡಿದ ಗುಡಸೀಕರ.

ಸಂಜೆಯೇ ಗೌಡನಿಗೆ ಸುದ್ದಿ ತಿಳಿಯಿತು. ಅಭಿಮಾನ ಕೆರಳಿತು. ಬಾಯಿಯಿಲ್ಲದ ಪ್ರಾಣಿಗೆ ಈ ರೀತಿ ಚಿತ್ರಹಿಂಸೆ ಮಾಡುವುದೆಂದರೇನು? ಸುತ್ತ ಹದಿನಾಲ್ಕು ಹಳ್ಳಿಯಲ್ಲಿ ಈತನಕ ಯಾರೂನೂ ಗೌಡನ ಎದುರಿಗೆ ನಿಲ್ಲುವ ಧೈರ್ಯ ಮಾಡಿರಲಿಲ್ಲ. ಹಾದಿ ಬೀದಿಯ ಹುಡುಗರು ಹೀಗೆ ಮಾಡುವಂತಾಯಿತಲ್ಲ. ದಿನೇ ದಿನೇ ಇವನ ಉರವಣಿಗೆ ಜಾಸ್ತಿಯಾಯಿತೇ ವಿನಾ ತಿಳುವಳಿಕೆ ಮೂಡಲಿಲ್ಲ. ತನ್ನ ಸಹನೆಯಿಂದ ಬುದ್ಧಿ ಕಲಿಯಲಿಲ್ಲವಲ್ಲ. ಕೂಡಲೇ ದತ್ತಪ್ಪನಿಗೆ ಕರೆಹೋಯ್ತು.

ಕುದುರೆಯನ್ನು ಕೆಸರಲ್ಲಿ ಸಿಕ್ಕಿಸಿದ ಸುದ್ದಿ ಆಗಲೇ ಕುಸ್ತಿ ಹುಡುಗರಿಗೆ ತಿಳಿದು ಓಡಿದ್ದರು. ಕೆಲವರು ಅದನ್ನು ಗಳ ಹಾಕಿ ಎತ್ತುವ ಪ್ರಯತ್ನದಲ್ಲಿದ್ದರೆ, ಇನ್ನೂ ಕೆಲವರು ಗುಡಸೀಕರನನ್ನೂ, ಚತುಷ್ಟಯರನ್ನೂ ಹುಡುಕುತ್ತಿದ್ದರು.

ಹೊತ್ತು ಮುಳುಗಿ ಆಗಷ್ಟೆ ಕತ್ತಲಾಗಿತ್ತು. ಗೌಡ, ದತ್ತಪ್ಪ ಆ ವಿಷಯವಾಗೇ ಮಾತಾಡುತ್ತ ಕುಳಿತಿದ್ದರು. ಅಷ್ಟರಲ್ಲಿ ಹುಡುಗರು ಕುದುರೆಯನ್ನು ನಿಧಾನವಾಗಿ ನಡೆಸಿಕೊಂಡು ಬಂದರು. ಅದರ ತೊಡೆ ಗಡಗಡ ನಡುಗುತ್ತಿದ್ದವು. ಮೈತುಂಬ ಬಾಸಳೆದ್ದು, ಕುಂಡಿ ನೆತ್ತರಾಡಿತ್ತು. ಕುದುರೆ ನಿಲ್ಲಲಾರದೆ ಮುಂಗಾಲೂರಿ ಕುಸಿದು ಬಿದ್ದುಬಿಟ್ಟಿತು. ಗೌಡ ಕೋಪದಿಂದ ನಡುಗಿದ. ದತ್ತಪ್ಪನ ಕಣ್ಣಲ್ಲಿ ನೀರಾಡಿ ಚಟ್ಟನೇ ಎದ್ದು “ಎಲ್ಲಿದ್ದಾರ ಆ ಹೊಲ್ಯಾರು?” ಅಂದ. ಗೌಡ ತಕ್ಷಣ ಎದ್ದ.

ಗುಡಸೀಕರನ ತಾಯಿ ಆಗಷ್ಟೆ ಲಾಟೀನಿನ ಗ್ಲಾಸು ಒರೆಸಿ ದೀಪ ಹಚ್ಚಿ ತೂಗು ಹಾಕುತ್ತಿದ್ದಳು. ಕಿವಿಯ ಮೇಲೆ ಸಿಡಿಲಪ್ಪಳಿಸಿದಂತೆ “ಎಲ್ಲಿದ್ದೀಯಲೇ ಗುಡಿಸ್ಯಾ?” ಎಂದು ಕೇಳಿಸಿತು. ನೋಡಿದರೆ ಇಡೀ ಬಾಗಿಲು ತುಂಬಿಕೊಂಡು ಗೌಡ ನಿಂತಿದ್ದ. ಮುದುಕಿಗೆ ತುದಿಬುಡ ಒಂದೂ ತಿಳಿಯದೆ ಏನೂ ಮಾತಾಡಬೇಕೆಂದೂ ತೋಚದೇ “ಬರ್ರಿ ಎಪ್ಪಾ” ಎನ್ನುತ್ತಾ ಉತ್ತರಕ್ಕೂ ಕಾಯದೆ “ಏ ಗಿರ‍್ಜಾ” ಎಂದು ಕೀರಲಿ, ಕುಸಿಯುತ್ತಿದ್ದ ತೊಡೆ ಸಾವರಿಸಿಕೊಂಡು ಒಳಸರಿದು ಬಾಗಿಲಿಗೆ ಒರಗುವಷ್ಟರಲ್ಲಿ ಗೌಡ: “ನಿನ್ನ ಮಗಾ ಎಲ್ಲಿದ್ದಾನಬೇ?” ಎಂದ. ಗೌಡನ ಕೋಪವನ್ನು ಹಿಮದೆಂದೂ ಕಂಡರಿಯದ ಮುದುಕಿಗೆ ಏನಾಯಿತೆಂದು ತಿಳಿಯುವ ಮೊದಲೇ ಗೌಡ ಮುದುಕಿಗೆ ಸಮೀಪ ಬಂದಿದ್ದ. ಹಿಂದೆ ದತ್ತಪ್ಪ ನಿಂತಿದ್ದ. ತನ್ನ ಮಗ ಏನೋ ಅನಾಹುತ ಮಾಡಿದ್ದಾನೆಂದೂ, ಈಗ ಸಿಕ್ಕರೆ ಅವನನ್ನು ಮುರಿಯುವರೆಂದೂ ಭಯವಾಗಿ ತಕ್ಷಣ ತಲೀಮೇಲಿನ ಸೆರಗನ್ನು ನೆಲಕ್ಕೆ ಒಡ್ಡಿ, “ಎಪ್ಪಾ, ಅವ ನನ್ನ ಮಗ ಅಲ್ಲ; ನಿನ್ನ ಮಗ ಅಂತ ತಿಳಿ” ಎಂದು ತಲೆ ಬಾಗಿದಳು. ಗೌಡ ಮನುಷ್ಯರೊಳಗೆ ಬಂದ. ಅಲ್ಲೇ  ಮೇ‌ವಿನ ಪೆಂಟೆಯ ಮೇಲೆ ಕುಸಿದ. ದತ್ತಪ್ಪ ನಡೆದುದನ್ನೆಲ್ಲ ಹೇಳಿದ. ಮುದುಕಿಯೂ ಬೈದಳು. ನೀವೇ ಬುದ್ಧಿ ಹೇಳಬೇಕೆಂದು ಅಂಗಲಾಚಿದಳು.

ಆಡುವ ಮಾತಿನ್ನೂ ಬಾಯಲ್ಲೇ ಇದೆ; ಹಾಸಿದ ಸೆರಗು ಹಾಗೇ ಇದೆ. ಗುಡಸೀಕರ ಧಡಪಡಿಸಿ ಅಟ್ಟಿಸಿಕೊಂಡು ಬಂದ ಬೇಟೆಯ ಹಾಗೆ ಬಂದು ಅಡಿಗೆ ಮನೆಗೆ ದೌಡಯಿಸಿದ. ಗುರಿಯಿಟ್ಟ ಬಾಣದ ಹಾಗೆ ಶಿವಲಿಂಗ ಬೆನ್ನುಹತ್ತಿದ. ಏನು ಎತ್ತ ತಿಳಿಯದಲೇ, ಕೂತವರು ಮೇಲೇಳುವ, ಮೊದಲೇ ಗುಡಸೀಕರ ಅಡಿಗೆ ಮನೆಯಲ್ಲಿ ಕಿಟಾರನೆ ಕಿರಿಚಿದ. ಗಿರಿಜಾ, ಮುದುಕಿ ಏನಾಯಿತೆಂದು ತಿಳಿಯದಲೇ ಲಬೊಲಬೊ ಹೊಯ್ಕೊಳ್ಳುತ್ತ ಒಳನುಗ್ಗುವ ಮೊದಲೇ ಗೌಡ ಧಾವಿಸಿದ್ದ. ಗುಡಸೀಕರ ಒದರುತ್ತ ಹೊರಗೆ ಬಂದ. ಹಿಡಿದ ಗೌಡನನ್ನು ಶಿವನಿಂಗ ತಳ್ಳಿ ಹಾ ಎನ್ನುವುದರಲ್ಲಿ ಹಾರಿಬಂದು ಓಡುತ್ತಿದ್ದ ಗುಡಸೀಕರನನ್ನು ತೆಕ್ಕೆಹಾದು ಹಿಡಿದುಕೊಂಡು ಅಮಾತ ಎತ್ತಿ ನೆಲಕ್ಕೆ ರಪ್ಪನೆ ಅಪ್ಪಳಿಸಿದ. ಪಕ್ಕದ ಗೋಡೆ ಗೂಟ  ಲಟಕ್ಕನೆ ಮುರಿದು ವಿಲಿವಿಲಿ ಒದ್ದಾಡುತ್ತಿದ್ದ ಗುಡಸೀಕರನನ್ನು ಒದ್ದು ಬೆನ್ನು ಮೇಲಾಗಿ ಚೆಲ್ಲಿ ಪ್ಯಾಂಟಿಗೆ ಕೈ ಹಾಕಿದ. ಇಷ್ಟೆಲ್ಲ ರೆಪ್ಪೆ ತೆಗೆದಿಕ್ಕುವುದರೊಳಗೆ ಆಗಿಬಿಟ್ಟಿತ್ತು. ಮುದುಕಿ “ಎಪ್ಪಾ” ಎಂದು ಒದರುತ್ತ ಓಡಿಬಂದು ಮಗನ ಮೇಲೆ ಸಾಗರ ಬಿತ್ತು. ಒಳಗಿನಿಂದ ಗೌಡ “ಏ ಶಿವನಿಂಗಾ” ಎಂದು ಕಿರುಚಿದ. ದತ್ತಪ್ಪ ಓಡಿಹೋಗಿ ತೆಕ್ಕೆ ಹಾದ. ಅವನೊಂದಿಗೆ ಇನ್ನಷ್ಟು ಜನ ಬಂದು ಶಿವನಿಂಗನನ್ನು ಹಿಡಿದರು. ಊರಿಗೂರೇ ಅಲ್ಲಿ ಸೇರಿತ್ತು.