ಮಾರನೇ ಮುಂಜಾನೆ ಕೈ ಮಾರು ಹೊತ್ತೇರಿರಬೇಕ, ಗೌಡನ ಮನೆಯಿಂದ ನಾಯೆಲ್ಯಾನಿಗೆ ಕರೆ ಬಂತು. ಎಲ್ಯಾ ಇದನ್ನು ಊಹಿಸಿಕೊಂಡೇ ಊರಿಗಿಂತ ಮುಂಚೆ ಎದ್ದು, ತೋಟಕ್ಕೆ ಹೋಗಿದ್ದ. ಹಳಬ ಅಲ್ಲಿಗೂ ಬಂದ. ಇನ್ನು ಉಳಿಗಾಲವಿಲ್ಲ. ಬೈಸಿಕೊಳ್ಳುವುದಕ್ಕೆ ಮೈ ಬಿರುಸು ಮಾಡಿಕೊಂಡೇ ಬಂದ.

ಗೌಡರ ಮನೆಯಲ್ಲಾಗಲೇ ಜನ ತುಂಬಿತ್ತು. ಹಿರಿಯರಿದ್ದರು. ಭರಮ, ಅವನವ್ವ ಇದ್ದರು. ಆಶ್ಚರ್ಯವೆಂದರೆ ಮನೆಯ ಹೊರಗಡೆ ಕಟ್ಟೆಯ ಮೇಲೆ ಸರಪಂಚ ಕೂತಿದ್ದ. ಚತುಷ್ಟಯರಿದ್ದರು. ನಾಯೆಲ್ಯಾನನ್ನು ನೋಡಿದೊಡನೆ ಕಳ್ಳ ನಕ್ಕ. ನಾಯೆಲ್ಯಾ ಒಳಕ್ಕೆ ದೀನನಾಗಿ ಹೋಗಿ ದನಗಳ ಹಕ್ಕೆಯಲ್ಲಿ ನಿಂತ.

ವಿಚಾರಿಸುವುದೇನಿದೆ? ‘ಭರಮ ಹೇಳಿದ್ದು ಖರೆ ಏನೋ?’ ಎಂದು ಗೌಡ ಕೇಳಿದ. ನಾಯೆಲ್ಯಾ ದೊಪ್ಪನೆ ಕೆಳಗೆಬಿದ್ದು;

“ತಪ್ಪಾತ್ರಿ ಎಪ್ಪಾ, ನಶೇದಾಗ ಏನೇನೋ ಆತು. ನಾ ಎಂದೂ ಹಿಂಗ ಮಾಡಿದಾಂವಲ್ಲ. ಸರಪಂಚ ಅದೆಂಥಾದೋ ಭಿರಂಡಿ ಕೊಟ್ಟರು. ಹೊಸಬ ಸೊಲಪ ಹೆಚ್ಚ ಗದ್ದಲಾ ಮಾಡಿತರಿ.”

ಎಂದು ತಪ್ಪನ್ನೆಲ್ಲಾ ಭಿರಂಡಿಯ ಮೇಲೆ ಹಾಕಿದ. ಗುಡಸೀಕರನ ಸುದ್ದಿ ಈತನಕ ಆ ಜಗಳದಲ್ಲಿ ಕೇಳಿಸಿರಲಿಲ್ಲ. ಅಥವಾ ಯಾರಿಗೂ ಅನಿಸುವಂಥಾದ್ದೇ. ಯಾಕೆಂದರೆ ಅಂಗಿಯೆಲ್ಯಾ ಕುಡಿಯುವುದೇನೂ ಗುಟ್ಟಿನ ಸುದ್ದಿಯಲ್ಲ. ಅಥವಾ ಅದು ಸುದ್ದಿಯೇ ಅಲ್ಲ. ಮೀನು ನೀರು ಕುಡಿಯುತ್ತದೆ. ಎಂಬಂತೆ. ಆದರೆ ಒಂದು ಸಲವೂ ಈ ರೀತಿ ಹದ್ದು ಮೀರಿದವನಲ್ಲ. ಅನೀತಿಯೆಂದು ಊರವರು ಯಾವುದಕ್ಕೆ ಉಗುಳಿನಲ್ಲಿ ಬರೆದಿಟ್ಟರೋ ಆ ಸೀಮೆಗೆ ಮರೆತು ಕೂಡ ಕಾಲಿಟ್ಟವನಲ್ಲ. ಅಂಥವನು ಈ ರೀತಿ ಮಾಡಿರೋದರಲ್ಲಿ ಏನೋ ವಿಶೇಷ ಪ್ರೇರಣೆ ಇರಬೇಕೆಂದೂ ಎಲ್ಲರಿಗೂ, ಭರಮನಿಗೂ ಅನಿಸಿತು. ಇದಕ್ಕೆಲ್ಲ ಮಾತು ಕೊಟ್ಟಂತೆ ದತ್ತಪ್ಪ ಬಾಯಿಬಿಟ್ಟ.

“ನೋಡ್ರಿ, ನಾಯೆಲ್ಯಾ ಕುಡುಕ ಖರೆ. ಆದರ ಎಂದೂ ಹದ್ದು ಮೀರಿರಲಿಲ್ಲ. ಸೆರೆ ಅಂದರ ಜೊಲ್ಲ ಸುರಸತಾನ ಅಂದಮ್ಯಾಲ ನಾವs ಸ್ವಲ್ಪ ಎಚ್ಚರದಿಂದ ಇರಬೇಕಾಗತದ.

ಬರೀ ಲಗಮೀ ಬಟ್ಟಲ ಸೆರೆ ಕುಡದs ಮಗಾ ಎಪರಾ ತಪರಾ ಬೀಳತಾನ. ಇನ್ನ ಪರದೇಶಿ ಭಿರಂಡಿ ಅಂದರೆ ಹೆಂಗಾಗ ಬ್ಯಾಡ?”

ಹೋಳೀ ಹುಣ್ಣಿಮೆ ದಿನ ತನ್ನ ಮಗನನ್ನು ಗುಡಸೀಕರ ಹೊಡೆದ ಸೇಡು ಬಾಳೂನಲ್ಲಿ ಇನ್ನೂ ಇತ್ತು,

“ಹೌಂದರಿ. ಗ್ರಾಮಪಂಚಾಯ್ತಿ ಯಾಕ ಮಾಡಿದಿವಿ? ಮಂದಿ ಪರದೇಶೀ ಭಿರಂಡಿ ಕುಡ್ಯಾಕ ಕಲೀಲೆಂತ ಮಾಡಿದಿವೊ? ಊರಿಗಿಷ್ಟು ಒಳ್ಳೇದಾಗಲೆಂತ ಮಾಡಿದಿವೋ? ಮೊದಲs ಮಳ್ಳಮಂದಿ ಅವಕ್ಕೆಲ್ಲಾ ಹಿಂಗ ಚಟ ಕಲಿಸಿದರೆ ಹೆಂಗ ಹೇಳ್ರಿ?”

ಎಂದೂ ಬಾಯಿ ಹಾಕದ ಬಸೆಟ್ಟಿಯೂ ಇಂದು ಬಾಯಿ ಹಾಕಿದ, “ನನ್ನ ಕೇಳಿದರ, ನಾಯೆಲ್ಯಾ ಕೊಡಬೇಕಾದ ದಂಡಾ ಸರಪಂಚನ ಕೊಡಬೇಕಾಗತೈತ್ರಿ”s ಗೌಡ ಏನೂ ಹೇಳದಾದ. ಯಾಕೆಂದರೆ ನಾಯೆಲ್ಯಾ ಇದ್ದದ್ದು ಗೌಡನ ಮನೆಯಲ್ಲಿ, ಆಳಾಗಿ. ಆದ್ದರಿಂದ ದತ್ತಪ್ಪನ ಕಡೆ ನೋಡಿದ. ಹೇಗೋ ಇಬ್ಬರಿಗೂ ಸಮಾಧಾನವಾಗುವ ಒಂದು ತೀರ್ಮಾನ ನೀನೇ ಕೊಡು ಎಂಬರ್ಥದಲ್ಲಿ. ಆದರೆ ದತ್ತಪ್ಪ ತುಟಿ ಬಿಚ್ಚುವುದರೊಳಗೆ ದೇವರೇಸಿ ತೀರ್ಮಾನ ನೀನೇ ಕೊಡು ಎಂಬರ್ಥದಲ್ಲಿ. ಆದರೆ ದತ್ತಪ್ಪ ತುಟಿ ಬಿಚ್ಚುವುದರೊಳಗೆ ದೇವರೇಸಿ ತೀರ್ಮಾನ ಹೇಳಿಬಿಟ್ಟಿದ್ದ.

“ಮಾದಕ ಕುಲಕ್ಕ ಅಪಮಾನ ಮಾಡಿಧಾಂಗಾಗೇತಿದು, ಕುಲ ಅಂದಮ್ಯಾಲ ಸಣ್ಣದರಾಗ, ಮುಗ್ಯಾಣಿಲ್ಲ, ಒಂದು ಕುರಿ ದಂಡ ಕೊಡಲಿ.”

ಅಂಗೀಯೆಲ್ಯಾನ ಕಿಮ್ಮತ್ತೆಷ್ಟು? ಕುರಿ ಅಂದರೆ ಅವನೆಲ್ಲಿಂದ ಕೊಡತ್ತಾನೆ? ದೇವರೇಸಿಗಿದು ಗೊತ್ತಿಲ್ಲದೆ ಇಲ್ಲ. ಆದರೆ ಸಾಮಾನ್ಯವಾಗಿ ಇಂಥ ಕೇಸುಗಳಲ್ಲಿ ಕಟ್ಟುವ ದಂಡವೇ ಇದು. ದೇವರೇಸಿಯ ಬಾಯಿಂದ ಮಾತು ಹೊರಬಿದ್ದ ಮೇಲೆ ಯಾರೇನು ಹೇಳಿಯಾರು? ಆದರೆ ಕುರಿ ಯಾರು ಕೊಡಬೇಕು? ಎನ್ನುವುದೇ ಪ್ರಶ್ನೆ. ದೇವರೇಸಿ ಮೊದಲೇ ಮುಗ್ಧ. ನಾಯೆಲ್ಯಾನ ಹೆಸರಿನಲ್ಲಿ ಒಂದು ಕುರಿ ವಸೂಲಾಗಲಿ, ಏನಂತೆ? ಕುಲದವರೆಲ್ಲ ಕೂಡಿ ಮಾಂಸ ತಿಂದು ಎಷ್ಟೋ ದಿನಗಳಾಯ್ತು. ಈಗಲಾದರೆ ಬಾಯಿ ಹೊಸಲಾದರೂ ಹರಿದುಹೋದೀತು.

ಕುರಿ ಎಂದೊಡನೆ ಅಂಗೀಯೆಲ್ಯಾ ಭೂಮಿಗೇ ಕುಸಿದ. ಮಾತಾಡಲಿಕ್ಕೆ ಆಗಲೊಲ್ಲದು. ತನ್ನ ಕಡೆ ಯಾರು ನೋಡಿದರೆ ಅವರಿಗೆ “ಕಾಪಾಡ್ರಿ” ಎಂಬ ಸೂಚನೆ ಬರುವಂತೆ ಕೈ ಕೈ ಮುಗಿದ. “ಕುರಿ ಎಂದ ಕೊಡ್ತೀಯೋ?”

ಎಂದು ಮತ್ತೆ ದೇವರೇಸಿಯೇ ಬಾಯಿ ಹಾಕಿದ.

“ಎಪ್ಪಾ, ತಪ್ಪಾತ್ರಿ, ಇದೊಮ್ಮೆ ಎಲ್ಲಾ ಹೊಟ್ಯಾಗ ಹಾಕ್ಕೊಂಡ ಮಾಫೀ ಮಾಡರಿ.”

– ಎನ್ನುತ್ತಾ ಅಂಗೀಯೆಲ್ಯಾ ಸರ್ವದೈವಕ್ಕೆ ಅಡ್ಡಬಿದ್ದ. ಅಡ್ಡಬಿದ್ದರೆ ಕುರಿ ಬರುತ್ತದೆಯೊ?

ಆದರೆ ಹೇಗೆ ಒತ್ತಾಯ ಮಾಡುತ್ತಾರೆ? ತಕ್ಷಣ ಅಂಗೀಯೆಲ್ಯಾ ನೆಲದ ಮೇಲಿನ ಒಂದೆರಡು ಸಣ್ಣ ಹಳ್ಳ ಆರಿಸಿಕೊಂಡು, ಎಡಗೈಯಿಂದ ಬಲಗಿವಿ, ಬಲಗೈಯಿಂದ ಎಡಗಿವಿ ಹಿಡಿದುಕೊಂಡು ಒಂದೆರಡು ಬಾರಿ ಕೂತು ಎದ್ದ. ಕೂತು ಎದ್ದರೆ ಕುರಿ ಬರುತ್ತದೆಯೊ?

“ಬೇಕಾದರ ಎಪ್ಪಾ, ಮನೀತನಕ ಕುಂಡೀ ಎಳೀತೀನ್ರಿ”

ಹಾಗೆ ಎಳೆದರೆ ಕುರಿ ಬರುವುದೊ? ಬಂತು! “ನೋಡಲೇ ಅಂಗೀಯೆಲ್ಯಾ….” ಎಂದು ದನಿ ಹಾಕುವುದರಲ್ಲಿದ್ದ ಅಷ್ಟರಲ್ಲಿ ಕಳ್ಳ ಒಳಗೆ ಬಂದು “ನಾಯೆಲ್ಯಾ, ಸರಪಂಚರ ಕುರಿ ಕೊಡತಾರಂತ ಬಿಡಲೇ” ಎಂದ. ಅಂಗೀಯೆಲ್ಯಾ ಕೂಡಲೇ ಹೊರಗೋಡಿದ ಗುಡಸೀಕರನ ಕಾಲು ಹಿಡಿಯಲಿಕ್ಕೆ. ಪಂಚರು ಕೊಡಲಿ ಎಂದರು. ಗೌಡ ಸುಮ್ಮನಾದ, ದತ್ತಪ್ಪನೂ.

ಎಲ್ಲರೂ ಎದ್ದುಹೋದ ಮೇಲೆ ಪಂಚರಿನ್ನೂ ಹಾಗೇ ಕೂತಿದ್ದರು. ಇದು ಹಿತವಲ್ಲ ಅನ್ನಿಸಿತು. ಅಂಗೀಯೆಲ್ಯಾನ ಬಗ್ಗೆ ಯಾರಿಗೂ ಚಿಂತೆಯಾಗಲಿಲ್ಲ. ಆದರೆ ಗುಡಸೀಕರ ಈ ರೀತ ಮಧ್ಯೆ ಪ್ರವೇಶಿಸಿದ್ದು ತಪ್ಪೆನಿಸಿತು. ಬಸೆಟ್ಟಿಯೇನೋ ಬರೋಬರಿ ಬಂದ. ಆದರೆ ಪಂಚರ ತೀರ್ಮಾನಕ್ಕಿಂತ ಮುಂಚೆ ಹೇಳಿ ಕಳಿಸಿದ್ದು ತಪ್ಪೆನಿಸಿತ್ತು, ಅಷ್ಟೆ. “ಇದು ಬರೋಬರಿ ಆಗಲಿಲ್ಲ.”

– ಅಂದ ದತ್ತಪ್ಪ, ಎಲ್ಲರೂ ಸುಮ್ಮನಿದ್ದರು. ಮತ್ತೆ ಅವನೇ ಮುಂದುವರಿಸಿದ. “ಏನೋ ಕಲ್ತ ಹುಡುಗ್ರು, ಊರಿಗೆ ಹಿತ ಮಾಡ್ಯಾವು ಅಂತ ಪಂಚಯ್ತಿ ಕೊಟ್ಟರ, ಇದು ಕಾಗೀ ಕೈಯಾಗ ಕಚೇರಿ ಕೊಟ್ಟಾಂಗಾತು. ತಿರುಗಿ ತಗೊಳ್ಳೋದs ಬರೋಬರಿ ಕಾಣತದ.”

“ಈಗ ಹೆಂಗ ಮಾಡೋಣಂದಿ?”

– ಬಾಳೂ ಕೇಳಿದ.

“ಹೆಂಗೇನು? ಪಂಚಾಯ್ತಿ ತಿರಿಗಿ ತಗೊಂಡ ನಾವು ಇಟ್ಟಕೋ ಬೇಕಷ್ಟ.”

– ಎಂದ ಬಸೆಟ್ಟಿ.

– ದುಡುಕ ಬ್ಯಾಡ್ರೆಪಾ. ಆ ಹುಡುಗೋರ್ನ ಹಾದಿಗಿ ತರಾಕಿ ಯಾವ ಹಾದೀನ ಇಲ್ಲೇನು?

– ಗೌಡ ಕೇಳಿದ. ಉಳಿದವರು ಒಪ್ಪಲಿಲ್ಲ. ಬಾಳೂ, ಬಸೆಟ್ಟಿಗಾದರೆ ಇನ್ನೂ ಆತುರ. ಹೆಂಗೂ ನಾವೇ ಪಂಚಾಯ್ತಿ, ಸರಪಂಚ – ಅಂತ ಮಾಡಿದ ಮೇಲೆ ನಾವೇ ಬೇಡ ಅಮದಾಗ ಹಿಂದೆಗೆಯಬೇಕೆಂಬುದೇ ಅವರ ವಾದ. ಅದಂತೂ ಸುಲಭದ ಮಾತಲ್ಲ ಎನ್ನುವುದು ಗೌಡನಿಗೆ ಗೊತ್ತು. ದತ್ತಪ್ಪನಿಗೆ ಗೊತ್ತು. ಕೊನೆಗೆ ಎಲ್ಲರ ಒಪ್ಪಿಗೆಯಂತೆ ಒಂದು ನಿಲುಗಡೆಗೆ ಬಂದರು. ದತ್ತಪ್ಪ ಹಿರಿಯ ಪಂಚರ ಪರವಾಗಿ ಗುಡಸೀಕರನ ಬಳಿಗೆ ಹೋಗಬೇಕು. ಗ್ರಾಮಪಂಚಾಯ್ತಿಗೆ ರಾಜೀನಾಮೆ ಕೊಡೋದಕ್ಕೆ ಹೇಳಬೇಕು.