ಗುಡಸೀಕರ ಕೊಟ್ಟ ಹತ್ತರ ಹಗರಣ ಸೆರೇದಂಗಡಿ ತೆಗೆಯಬೇಕೆಂಬ ನಿರ್ಧಾರದಲ್ಲಿ ಕೊನೆಗೊಂಡಿತು.

ಗುಡಸೀಕರನ ಹಿಂಬಾಲಕರು, ಅಂದರೆ ಗ್ರಾಮ ಪಂಚಾಯತಿಯ ಇತರೇ ಮೆಂಬರರೆಂದರೆ – ಕಳ್ಳ ಸಿದರಾಮ, ಅಂಡೂರಾಮಯ್ಯ, ಜಿಗಸೂ ಸಾತೀರ ಹಾಗೂ ಆಯೀ ಮೆರಮಿಂಡ, ಇವರೂ ಗುಡಸೀಕರನ ಸರಿಕರೆ, ಕೂಡಿ ಕಲಿತವರೆ. ಆದರೆ ಗುಡಸೀಕರ ಬೆಳಗಾವಿಗೆ ಹೆಚ್ಚಿನ ಶಿಕ್ಷಣಕ್ಕೆ ಹೋದ. ಇವರು ಹೋಗಲಿಲ್ಲ, ಅಷ್ಟೆ. ಇವರನ್ನು ದತ್ತಪ್ಪ ಒಮ್ಮೆ “ಚತುಷ್ಟಯರು” ಎಂದು ಕರೆದ; ಬಹುಶಃ ಮಹಾಭಾರತದ ದುಷ್ಟ ಚತುಷ್ಟಯದ ನೆನಪಾಗಿ. ಈಲೂ ಅವನು ನಾಲ್ವರನ್ನೂ ಒಟ್ಟಾಗಿ ಕರೆಯುವುದು ಹೀಗೆಯೇ, ನಾವು ಇನ್ನು ಮೇಲೆ ನಮ್ಮ ಕಥೆಯಲ್ಲಿ ಅವರನ್ನು ಹಾಗೇ ಕರೆಯೋಣ.

ಆದರೆ ದುಷ್ಟ ಚತುಷ್ಟಯಕ್ಕೂ ಇವರಿಗೂ ಅರ್ಥಾತ್ ಸಂಬಂಧವಿಲ್ಲ ಮೊದಲನೆಯದಾಗಿ ಇವರು ದುಷ್ಟರಲ್ಲ. ಊರಿನ ಇತರೆಯವರಿಗಿಂತ ಭಿನ್ನರಲ್ಲ. ಅಷ್ಟಿಷ್ಟು ಕಲಿತದ್ದರ ಬಗ್ಗೆ ಸ್ವಲ್ಪ ಸೊಕ್ಕಿದೆ. ಅಷ್ಟೂ ಇಲ್ಲದಿದ್ದರೆ ಹ್ಯಾಗೆ? ಇನ್ನೊಬ್ಬರು ಹಿಂದೆ ಒತ್ತದ ಹೊರತು ಮುಂದೆ ಹೆಜ್ಜೆ ಹಾಕುವವರಲ್ಲ. ಹೆಜ್ಜೆಹಾಕಿದ ಮೇಲೆ ಒದಗುವ ಪರಿಣಾಮಗಳನ್ನು ಮನಸ್ಸಿಗೆ ಹಚ್ಚಿಕೊಳ್ಳುವವರೂ ಅಲ್ಲ., ಕಂದಕವೋ, ದಿನ್ನೆಯೋ, ಹೆಜ್ಜೆ ಹಾಕಿದರಾಯ್ತು, ಕಣ್ಣು ಮುಚ್ಚಿಕೊಂಡು. ಚತುಷ್ಟಯರೆಂದು ಒಟ್ಟಾಗಿ ಕರೆದರೂ ಇವರಲ್ಲಿ ಪ್ರತಿಯೊಬ್ಬರಿಗೂ ತಮ್ಮದೇ ಆದ ವ್ಯಕ್ತಿತ್ವವಿದ್ದುದನ್ನು ನಿರಾಕರಿಸಲಾಗದು.

ಇವರಲ್ಲೆಲ್ಲ ಕಳ್ಳ ಸಿದರಾಮ ನೋಡುವುದಕ್ಕೂ ಧಾಂಡಿಗನಾದವನು. ಚಿಕ್ಕಂದಿನಲ್ಲಿ ಕಳ್ಳತನ ಮಾಡುವಾಗ ಸಿಕ್ಕಿಬಿದ್ದು ತನ್ನ ಹೆಸರಿಗೆ ವಿಶೇಷಣ ಅಂಟಿಸಿಕೊಳ್ಳಬೇಕಾಯಿತು. ಆದರೆ ಅದಲ್ಲ ಅವನ ವೈಶಿಷ್ಟ್ಯ. ಅಂಗಾಲಿನಿಂದ ನೆತ್ತಿಯ ತನಕ ಅವನು ನಟ. ಯಾವುದೇ ನೀರಸ ಘಟನೆಯನ್ನು ರಸವತ್ತಾಗಿ, ನಾಟಕೀಯವಾಗಿ ಕೇಳುವವರ ಕಣ್ಣಿಗೆ ಕಟ್ಟುವಂತೆ ಹೇಳಬಲ್ಲವನಾಗಿದ್ದ. ಒಮ್ಮೆ ಗುಡಸೀಕರ ದಿನಪತ್ರಿಕೆ ಓದಿ “ನೋಡೋ ಕಳ್ಳ; ಜಿನ್ನಾ ಬಂದು ಗಾಂಧೀಜಿಗೆ ಭೇಟ್ಯಾಗಿದ್ದನಂತ. ಮುಸಲ್ಮಾನರಿಗೇ ಒಂದು ಪ್ರತ್ಯೇಕ ದೇಶ, ಪಾಕಿಸ್ತಾನ ಬೇಕಂತ ಕೇಳಿದನಂತ” ಎಂದು ಹೇಳಿದ ಹತ್ತೇ ಹತ್ತು ಶಬ್ದದ ಈ ಸಂಗತಿಯನ್ನು ಕಳ್ಳ ಮೆರೆಮಿಂಡನಿಗೆ ಹೇಳಿದ್ದು ಹೀಗೆ:

ದೇಶದಾಗ ಏನೇನ ನಡದೈತಿ ಗೊತ್ತೈತೇನಲೇ? ಮೊನ್ನಿ ಮಂಗಳವಾರ ದಿನ ಗಾಂಧೀ ಗುಡಸಲದಾಗ ಕುಂತಿದ್ನಂತ, ಸೇಂಗಾ ತಿನ್ನಕೋತ. ಅಷ್ಟೊತ್ತಿಗೆ ಜಿನ್ನಾ ಬಂದ. “ಶರಣರೀ ಗಾಂದೆಪ್ಪ” ಅಂದ.

“ಬಾರೋ ಜಿನ್ನಾ ಸಾಬ, ಬಾ ಕುಂದರ ಬಾ., ಎಲ್ಲಾ ಆರಾಮ? ಮಳಿ ಬೆಳಿ ಹೆಂಗ ನಿಮ್ಮ ಕಡೆ?”

– ಅಂದ (ಗಾಂಧೀಜಿ)

(ಜಿನ್ನಾ) “ಎಲ್ಲಾ ಆರಾಮೈತಿ ಖರೆ: ನಮ್ಮ ಹುಡುಗೋರು ಭಾಳ ತಕರಾರ ತಗ್ಯಾಕ ಹತ್ಯಾವರಿ. ನೂರ ವರ್ಷ ಕೂಡಿದ್ದರೂ ಅಣ್ಣಾ ತಮ್ಮಾ ಬ್ಯಾರ್ಯಾಗೋದೇನೂ ತಪ್ಪಾಣಿಲ್ಲ. ಅದಕ್ಕ ಈಗs ದೇಶದಾಗ ನಮ್ಮಗಷ್ಟ ಪಾಲಾ ಕೊಡಸಂತ ಗಂಟಬಿದ್ದಾರ.”

“ನಿನಾಪ್ನ! ಬ್ಯಾರ್ಯಾಗಿ ಏನ ಸುಖ ಉಣತೀರಿ? ಕೂಡಿದ್ದರs ನೆರಿ ಹೊರಿ ನಾಕ ಮಂದಿ ಹೆದರತಾರ, ಏನಪಾ. ಕೂಡಿದ್ದ ಅಣ್ಣತಮ್ಮರಿಗೆ ಹುಲಿ ಹಾದಿ ಬಿಡತೈತಿ. ಇಂದs ಬ್ಯಾರೆ ಆದರೆ ಇಲೀ  ಹಂತಾ ಇಲಿ ಅಂಜಾಕಿಲ್ಲಾ. ಅಕ್ಕಪಕ್ಕ ನಿಮ್ಮನ್ನ ನುಂಗಿ ನೀರು ಕುಡೀತಾರ. ಎಚ್ಚರಲೇ ಪಾಲಾ ಬೇಡಂತ ಹೇಳವರಿಗೆ. ಇಲ್ಲದಿದ್ದರ ಕರತಾ, ಬುದ್ಧೀ ರೀತಿ ಹೇಳೋಣು.

– ಎಂದರಂತೆ ಗಾಂಧೀಜಿ! ಈ ಕಳ್ಳ ಸಿದರಾಮ ನಟ ಭಯಂಕರನೆನ್ನುವುದಕ್ಕೆ ಇದಕ್ಕಿಂತ ಹೆಚ್ಚಿನ ಉದಾಹರಣೆ ಬೇಕೆ?

ಬಯಲಾಟಗಳಲ್ಲಿ ಖಳನಾಯಕರ, ಅದರಲ್ಲೂ ರಾಕ್ಷಸರ ಪಾತ್ರ ವಹಿಸುವುದೆಂದರೆ ಅವನಿಗೆ ಬಲು ಸುಖ. ಆ ಪಾತ್ರ ವಹಿಸಿದ. ಒಂದಿಬ್ಬರು ಹಳೇ ನಟರು ಅಟ್ಟದ ಮೇಲೆ ಬಂದು ಗರ್ಜಿಸಿದಾಗ, ಗರ್ಭಿಣಿಯರ ಗರ್ಭಪಾತವಾಯಿತೆಂಬಂಥ ಕಥೆ ಕೇಳಿದ್ದ. ತನ್ನ ಜೀವಮಾನದಲ್ಲಿ ತನ್ನ ಪಾತ್ರ ನೋಡಿ ಕೊನೇ ಪಕ್ಷ ಒಬ್ಬ ಗರ್ಭಿಣಿಯಾದರೂ ಗರ್ಭಪಾತ ಮಾಡಿಕೊಳ್ಳುವ ಹಾಗಾಗಬೇಕೆಂದು ಇವ ಆಸೆ. ಅದಕ್ಕಾಗಿ ಒಬ್ಬನೇ ಇದ್ದಾಗಲೆಲ್ಲ ಅಂಥ ಗರ್ಜನೆಯನ್ನೇ ಅಭ್ಯಾಸ ಮಾಡುತ್ತಿದ್ದ! ಬಂಜೆಯರಿಗೆ ಗೆಜ್ಜೆ ಕಾಲಿನ ಮಕ್ಕಳನ್ನು ಕೊಡುವ ಕರಿಮಾಯಿ ಅವನ ಆಸೆ ಈಡೇರಿಸದಿರಲಿ.

ಎರಡನೆಯವನೇ ಅಂಡೂ ರಾಮಯ್ಯ ಉರ್ಫ್ ರಮೇಸ. ಇವನ ಮೂಲ ನಾಮಾಂಕಿತ ರಾಮಯ್ಯ ಎಂದು. ಅವನ ಅಂಡು ಇರಬೇಕಾದ ಪ್ರಮಾಣಕ್ಕಿಂತ ದೊಡ್ಡವಾಗಿರುವುದರಿಂದ ಈ ವಿಶೇಷಣ ಸೇರಿಕೊಂಡಿತು. ಗುಡಸ್ಯಾಗೋಳ ಹೋಗಿ ಗುಡಸೀಕರ ಆದಂತೆ ಪಂಚಾಯ್ತಿ ಮೆಂಬರ್ ಆದ ಮೇಲೆ ಇವನೂ ಅಂಡೂ ರಾಮಯ್ಯ ಹೋಗಿ ರಮೇಸ ಆದ. ಹಾಗೇ ಸಹಿ ಕೂಡ ಮಾಡುತ್ತಿದ್ದ. ಗುಡಸೀಕರನಿಗೆ ಜನ ಹೆದರುತ್ತಿದ್ದರು. ಹಾಗೆಂದು ಕರೆದರು. ಇವ ಹೆಸರು ಬದಲಾಯಿಸಿದರೂ ಜನ ಮಾತ್ರ ಇವನನ್ನು ಅಂಡೂ ರಾಮಯ್ಯ ಎಂದೇ ಕರೆಯುತ್ತಿದ್ದರು. ಇಂಗ್ಲಿಷ್ ಕಲಿತವನಲ್ಲ. ಆದರೂ ಮಾತಿಗೊಮ್ಮೆ “ಎಸೆಸ್” ಎನ್ನುತ್ತಿದ್ದ. ಮತ್ತು ಹಾಗೆ ಎಸೆಸ್ ಎನ್ನುವ ಅವಕಾಶಕ್ಕಾಗಿ ತನ್ನ ಯಾವುದೇ ಅಭಿಪ್ರಾಯಿ ಬದಲಿಸಲೂ ಸಿದ್ಧನಿದ್ದ.

ಮೂರನೆಯವ ಆಯೀ ಮರೆಮಿಂಡ. ಇವನ ಎಡಗಣ್ಣು ಸಣ್ಣದಾಗಿ ಆಗಾಗ ಕಣ್ಣೀರು ಸುರಿಸುತ್ತಿದ್ದುದರಿಂದ ಒಂದು ಕಣ್ಣಿನಿಂದ ಅತ್ತಂತೆಯೂ ಇನ್ನೊಂದರಿಂದ ನಕ್ಕಂತೆಯೂ ಕಾಣಿಸುತ್ತಿದ್ದುದೊಂದೇ ಇವನ ವಿಶೇಷ. ಕೊನೆಯವ ಜಿಗಸು ಸಾತೀರ. ಇವನ ತಾಯಿ ನಡೆಯುವಾಗ ಹೆಜ್ಜೆ ಗತಿಗೆ ತಕ್ಕಂತೆ ಅವಳ ಜೋಡೆದೆ ಟನಕ್ ಟನಕ್ ಜಿಗಿಯುತ್ತಿದ್ದವು. ಆದ್ದರಿಂದ ಅವಳಿಗೆ ಮಂದಿ ಮೂಲ ಹೆಸರು ಬಿಟ್ಟು ಕೊನೆಗೆ ಮರೆತು, ಜಿಗಸೂ ಎಂದೇ ಕರೆಯುತ್ತಿದ್ದರು. ತಾಯಿಯಿಂದ ಮಗನಿಗೂ ಜಿಗಸೂ ಸಾತೀರನೆಂದೇ ಹೆಸರು ಬಂತು. ಇದ್ದ ನಾಲ್ವರಲ್ಲಿ ಕ‌ಚ್ಚೆ ಹರಕುತನದ ಖ್ಯಾತಿ ಇವನೊಬ್ಬನಿಗೇ ಇತ್ತು. ಅದು ಹೀಗೆ: ಎಳೆಯರ ಕಳ್ಳ ಹಾದರದ ಕೇಸುಗಳನ್ನು ಹ್ಯಾಗೋ ಹೊಂಚಿ ಪತ್ತೆಹಚ್ಚುತ್ತಿದ್ದ. ಅವರು ಕ್ರಿಯೆಯಲ್ಲಿ ಸಿಕ್ಕುಬಿದ್ದೊಡನೆ ಹುಡುಗಿಯೊಬ್ಬಳನ್ನೇ ಪ್ರತ್ಯೇಕಿಸಿ ಅವಳ ತಂದೆ – ತಾಯಿಗಳಿಗೆ ಹೇಳುವುದಾಗಿ ಬೆದರಿಸುತ್ತಿದ್ದ. ಹಾಗೂ ಅದರ ಪ್ರಯೋಜನವನ್ನು ಚಕ್ರಬಡ್ಡಿ ಸಮೇತ ಪಡೆಯುತ್ತಿದ್ದ.

ಇವರಿಗೆಲ್ಲ ಒಂದು ಸಾಮಾನ್ಯ ವಿಷಯವೆಂದರೆ ಊರಿನ ಎಲ್ಲರಂತೆ ಇವರು ಹಣವಂತರಲ್ಲ. ಹಣ ಆಕಸ್ಮಾತ್ ಕಂಡರೋ ಬೆಳಗಾವಿಯ ಕನಸುಗಳಿಂದ ಉದ್ರಿಕ್ತರಾಗುತ್ತಿದ್ದರು. ಗುಡಸೀಕರ ಈ ದಿನ ಕೊಟ್ಟ ಹತ್ತು ರೂಪಾಯಿಗಳಿಂದ ಹುಚ್ಚುಹತ್ತುವಷ್ಟು ಪರವಶರಾದದ್ದು ಈ ಕಾರಣಕ್ಕೇ.

ಕಳ್ಳ ಸಿದರಾಮ ಗುಡಸೀಕರ ಕೊಟ್ಟ ಹತ್ತು ರೂಪಾಯಿಗಳನ್ನು ತಗೊಂಡು ಹೊರಬಿದ್ದು ಇನ್ನೂ ಹತ್ತು ಹೆಜ್ಜೆ ಇಟ್ಟಿರಲಿಲ್ಲ. ಅಂಡೂರಾಮಯ್ಯ ಉರ್ಫ್ ರಮೇಸ ಬಂದು ಕೂಡಿಕೊಂಡ. ಬಂದವನು ಐದು ರೂಪಾಯಿ ದುರ್ಗಿಗೆ ಕೊಟ್ಟು ಇನ್ನೈದಯ ಕುಡಿಯೋಣವೆಂದು ಸೂಚನೆ ಕೊಟ್ಟ. “ಹೀಂಗೆ ಹೇಳ್ತೀಯೇನೋ? ಸರಪಂಚಗ ಹೇಳ್ತೀನ್ನೋಡು” ಎಂದು ಸಿದರಾಮ ಹೇಳಿದೊಡನೆ “ಎಸೆಸ್” ಎನ್ನುತ್ತ ತಣ್ಣಗಾದ. ಅಷ್ಟರಲ್ಲಿ ಜಿಗಸೂ ಸಾತೀರ ಇವರನ್ನು ಕೂಡಿಕೊಂಡು” ನೀವಿಬ್ಬರೊಳಗೆ ಒಬ್ಬನೂ ನಂಬಿಗಸ್ತನಲ್ಲಂತ: ಒಬ್ಬ ಕಳ್ಳ, ಇನ್ನೊಬ್ಬ ಕುಡುಕ. ನನ್ನ ಕೈಗಿ ಕೊಡು, ನಾನs ದುರ್ಗಿಗೆ ಕೊಡತೀನಿ” ಎಂದು ಹೇಳಿದ ಉಳಿದಿಬ್ಬರು ಏಳರಲ್ಲಿ ಹುಟ್ಟಿದವರೆ? “ನಾನೇ ಕೊಡುತ್ತೇನೆಂದು ಕಳ್ಳ ಹೇಳಿದ. ಎಸೆಸ್ ನಾನು ಸಾಕ್ಷಿ ಹೇಳುತ್ತೇನೆಂದು ರಮೇಶ ಹೇಳಿದ. ಅಷ್ಟರಲ್ಲಿ ಆಯೀಮೆರೆಮಿಂಡನೂ ಅವರನ್ನು ಕೂಡಿಕೊಂಡ. “ಏ, ನಿಮ್ಮ ಮ್ಯಾಲ ಸರಪಂಚಗ ನಂಬಿಕಿಲ್ಲಂತ. ನೀನs ಇಸಕೊಂಡ ಹೋಗಿ ದುರ್ಗಿಗೆ ಕೊಡಂತ ಹೇಳ್ಯಾರ, ಕೊಡಲೇ ಕಳ್ಳ” ಎಂದ.

“ಬಂದ ನೋಡ್ರೆಲೇ ನಂಬಿಗಸ್ಥ! ಅಲ್ಲಪಾ, ನಿನ್ನ ಮ್ಯಾಲ ಅಷ್ಟ ವಿಶ್ವಾಸ ಇದ್ದಿದ್ದರ ನಿನ್ನ ಬಿಟ್ಟ ನನ್ನ ಕೈಯಾಗ ಯಾಕ ಕೊಡತ್ತಿದದರು ರೊಕ್ಕಾನ? ಹೋಗ ಹೋಗಲೇ” ಎಂದು ಕಳ್ಳ.

ಯಾರೊಬ್ಬರೂ ಸಿದ್ದರಾಮನನ್ನು ಬಿಟ್ಟು ಅಗಲಲೊಲ್ಲರು. ಕಳ್ಳನಂತೂ ಅಷ್ಟೂ ಹಣ ದುರ್ಗಿಗೆ ಕೊಡುವುದಿಲ್ಲವೆನ್ನುವುದು ಖಾತ್ರಿ. ಯಾಕೆಂದರೆ ಅವರ ದೇವರ ಗುಣ ಅವರಿಗೆ ಗೊತ್ತಿಲ್ಲವೆ? ಹ್ಯಾಗೋ ಮಾಡಿ ಕಳ್ಳ ಉಳಿಸಿಕೊಳ್ಳುವ ದುಡ್ಡಿನಲ್ಲಿ ನಾಲ್ವರೂ ಕುಡಿಯಬೇಕೆಂದು ಮೂವರ ಹಂಚಿಕೆ. ಎಷ್ಟೆಂದರೂ ಸರಪಂಚ ದುರ್ಗಿಯ ಹತ್ತಿರ ಹೋಗಿ ದುಡ್ಡಿನ ಬಗ್ಗೆ ವಿಚಾರಿಸಲಾರ. ಅಷ್ಟಾಗಿ ಎಂದೋ ವಿಚಾರಿಸಿದರೆ ಅವಳು ಸುಳ್ಳು ಹೇಳಿದಳೆಂದೋ, ಮರೆತಿದದಾಳೆಂದೋ ಹೇಳಿ ಪಾರಾಗಬಹುದು. ಎಷ್ಟೆಲ್ಲ ಕಲ್ಪಕ ಶಕ್ತಿಯಿದ್ದವರು ಒಂದು ಹುಸಿ ಹೇಳಲಿಕ್ಕಾಗುವುದಿಲ್ಲವೆ?

ಆದರೆ ಕಳ್ಳನ ತರ್ಕವೇ ಬೇರೆ. ಈ ನರಿಗಳನ್ನು ಓಡಿಸಿ ತಾನೊಬ್ಬನೇ ದುರ್ಗಿಯ ಹತ್ತಿರ ಹೋಗಿ ಐದು ಕೊಟ್ಟು ಮಿಕ್ಕ ಐದರಲ್ಲಿ ಬೆಳಗಾವಿಗೆ ಹೋಗಿ ಮಜಾ ಮಡಿಬರಬೇಕೆಂದು ಅವನ ಉಪಾಯ. ಆದರೆ ಅವರೋ ಬಿಟ್ಟುಹೋಗುವ ಲಕ್ಷಣಗಳೇ ಕಾಣಿಸುತ್ತಿಲ್ಲ. ದಿನಾ ಮಾತಿಗೊಮ್ಮೆ “ಕಳ್ಳ, ಕಳ್ಳ” ಎನ್ನುತ್ತಿದ್ದವರು ಇಂದು ಬಾಯ್ತುಂಬ “ಸಿದರಾಮಾ” ಎಂದು ಕರೆದರು. ಇಲ್ಲದ ಸದ್ಗುಣಗಳನ್ನು ಅವನ ಮೇಲೆ ಹೇರಿದರು. ಹಿಂದಿನ ಅನೇಕ ಘಟನೆಗಳಲ್ಲಿ ಹಾಸ್ಯಾಸ್ಪದನಾಗಿದ್ದ ಅವನನ್ನು ನಾಯಕನನ್ನಾಗಿಸಿ ಬಣ್ಣಕಟ್ಟಿ ವರ್ಣಿಸಿದರು. ಜಿಗಸು ಸಾತೀರ ಸಿದರಾಮನನ್ನು ಬೆಳಗಾವಿಗೆ ಕರೆದೊಯ್ದು ಅಲ್ಲಿ ತನ್ನ ಕರ್ಚಿನಲ್ಲಿ ಸಿನಿಮಾ ತೋರಿಸುವುದಾಗಿ ಭರವಸೆ ಕೊಟ್ಟ. ಬೆಳಗಾವಿಯ ಹುಡುಗಿಯರ ಜೋಡು ಹೆಳಲುಗಳನ್ನೂ, ಹೆಳಲಿನ ಕೊನೆಯ ಟೇಪುಗಳನ್ನೂ ವರ್ಣನೆ ಮಾಡಿದ. ನಿಜ ಹೇಳಬೆಕೆಂದರೆ ಅವನು ಒಂದು ಬಾರಿಯೂ ಬೆಳಗಾವಿ ಕಂಡವನಲ್ಲ. ಆ ಹತ್ತು ರೂಪಾಯಿಗೆ ಕಳ್ಳನಂತೂ ಬಿಸಿಸಲಾರದ ಗಂಟು. ಯಾಕೆಂದರೆ ಹಣ ಅವನಲ್ಲೇ ಇದೆ. ಆತ ತನ್ನನ್ನೂ ಖರ್ಚು ಮಾಡುವುದರಲ್ಲಿ ಸೇರಿಸಿಕೊಳ್ಳಬೇಕೆಂದು ಮೂವರ ಹವಣಿಕೆ. ದಿನಾ ಬೆಳಗ್ಗೆದ್ದು ಪರಸ್ಪರ ಮುಖ ನೋಡುವವರು ಅವರವರ ಗೆರೆ ಅವರವರಿಗೆ ಗೊತ್ತಿಲ್ಲವೆ? ಸದರಿ ಮಾತುಗಳನ್ನು ಹೇಳುವವರೂ ನಂಬಿರಲಿಲ್ಲ. ಸಿದರಾಮ ಮೊದಲೇ ಕಳ್ಳ; ಅವನ್ಯಾಕೆ ನಂಬುತ್ತಾನೆ? ಅವರಿಂದ ಪಾರಾಗುವುದಕ್ಕಾಗಿ.

“ತಗಿ, ತಗಿಯೋ, ಈಗs ಹೋಗಿ ದುರ್ಗಿಗಿ ಕೊಟ್ಟ ಬರ್ತೀನಿ.”

ಎಂದು ಧಾಪುಗಾಲು ಹಾಕಿ ನಡೆದ. ಆದರೆ ಅವರ್ಯಾರೂ ತಿರುಗಲಿಲ್ಲ. ಬೆನ್ನಹತ್ತಿದರು.

ಹಾಗೇ ನಡೆದುಕೊಂಡು ಸಿದರಾಮನ ಮನೆಯ ತನಕ ಬಂದರು. ಸಿದರಾಮ ನಟನಲ್ಲವೆ? – ಮನಸು ಬದಲಿಸಿದಂತೆ ಮಾಡಿ –

“ಛೇ, ಹಸವಾಗೇತಿ, ಊಟಾ ಮಾಡಿ ಆಮ್ಯಾಲ ದುರ್ಗಿಗಿ ಕೊಟ್ಟ ಬರ್ತೀನಿ.” ಎಂದು ಹೇಳಿ ಮನೆಯೊಳಕ್ಕೆ ನಡೆದ. ಅಂಡೂ ರಾಮಯ್ಯ ಉರ್ಫ್ ರಮೇಸನಿಗೆ ಸಿಟ್ಟುಬಂತು.

“ಏ ಕಳ್ಳಾ ದುರ್ಗಿಗೆ ರೊಕ್ಕಾ ಕೊಡತೀಯೋ? ಇಲ್ಲಾ ಸರಪಂಚಗ ಹೇಳಂತಿಯೋ?”

ಅಂದ. ಸಿದರಾಮ ಹೇಳ್ಹೋಗೊ ಎಂದು ಹೇಳಿ, ಅವನು ಖಂಡಿತ ಹೇಳುವುದಿಲ್ಲವಾದ್ದರಿಂದ ನೆಮ್ಮದಿಯಿಂದಲೇ ಒಳಗೆ ಹೋದ. ರಮೇಸನ ಮಾತನ್ನು ಅಲ್ಲೇ ದಾರಿಯಲ್ಲಿ ಹೋಗುತ್ತಿದ್ದ ನಿಂಗು ಕೇಳಿಸಿಕೊಂಡು ಸುಮ್ಮನೇ ದಾಟಿಹೋದ.

ಮೂವರೂ ಸಿದರಾಮ ಮನಯ ಮುಂದೆ ಧರಣಿ ಕೂತರು. ಸಿದರಾಮ ಹೊರ‍ಗೆ ಬರಲಿಲ್ಲ. ಇವರು ಏಳಿಲ್ಲ. ಆಯೀ ಮೆರೆಮಿಂಡ,

“ಏ ನೀವು ಹೋಗಿ ಲಗು ಊಟಾ ಮಾಡಿ ಬರ್ರಿ. ಆಮ್ಯಾಲ ನೀವು ಕುಂದರ್ರಿ, ನಾ ಹೋಗಿ ಬರ್ತೀನಿ. ಈ ಮಗಾ – ಏನ ಮಾಡತಾನ ನೋಡೇ ಬಿಡೋಣೂ.” – ಎಂದ. ಉಳಿದಿಬ್ಬರಿಗೆ ಇದು ಸೈಯೆನಿಸಿತು. ಐದೇ ಮಿನಿಟಿನಲ್ಲಿ ಊಟಾ ಮಾಡಿ ತಿರುಗಿ ಬರುವುದಾಗಿ ಹೇಳಿ ಅವರಿಬ್ಬರೂ ಹೋದರು.

ಅವರು, ಮರೆಯಾಗುವುದಷ್ಟೇ ತಡ ಮೆರೆಮಿಂಡ ಸಿದರಾಮನ ಮನೆಯೊಳಕ್ಕೆ ನುಗ್ಗಿದ. ಊಟ ಮಾಡುತ್ತಿದ್ದ ಅವನ ಮುಂದೆ ಕೂತು.

“ಏ, ಅವರಿಬ್ಬರೂ ಮನೀಗಿ ಹೋಗ್ಯಾರ. ನಾವಿಬ್ಬರೂ ಹೋಗಿ ಕೊಟ್ಟ ಬರೋಣು ಬಾರೋ”

– ಎಂದ, ಸಿದರಾಮ ಜಗ್ಗಲಿಲ್ಲ. ಕೈಗೆ ಸಿಕ್ಕ ಸೌಭಾಗ್ಯ ಯಾರು ಕೊಡುತ್ತಾರೆ? ಅಷ್ಟರಲ್ಲಿ ಸಿದರಾಮನ ತಾಯಿ “ಏನ್ರೋ ಅದು?” ಎನ್ನುತ್ತಲೂ ಮೆರೆಮಿಂಡ “ಹೊರಗಿರತೇನ ಬಾ” ಎನ್ನುತ್ತ ಹೊರಗೋಡಿದ.

ಕೆಲ ಹೊತ್ತಾದ ಬಳಿಕ ರಮೇಸ, ಸಾತೀರ ಬಂದು ಮೆರೆಮಿಂಡನನ್ನು ಕೂಡಿಕೊಂಡರು, “ಇನ್ನ ನೀ ಊಟ ಮಾಡಿ ಬಾ” ಎಂದರೆ ತನಗೆ ಹಸಿವಾಇಲ್ಲ ಎಂದು ಅಲ್ಲೇ ಕೂತ. ಮೂರೂ ಅಲ್ಲೇ ಕೂತರು. ವಾರಿಗೆಯವರೆಲ್ಲ ಬಣ್ಣ ಎರಚಾಡಿದರೂ ಈ ಮೂವರು ಅಲ್ಲೇ ಕುಳಿತರು. ಸಿದರಾಮ ಹೊರಬರಲಿಲ್ಲ. ಇವರು ಏಳಲಿಲ್ಲ. ಹೆಚ್ಚೇನು ಕೂತು ಕೂತು ಕಟ್ಟೆಗೆ ತಮ್ಮ ಅಂಡುಗಳನ್ನು ಬೆಸೆದುಬಿಟ್ಟರು.

ಇಳಿಹೊತ್ತಿನಲ್ಲಿ ನಿಂಗೂ ಗುಡಸೀಕರನಿಗೂ ಛೀಮಾರಿ ಹಾಕಿ ಬಂದಾಗಲೂ ಈ ತ್ರಿಮೂರ್ತಿಗಳು ಇನ್ನೂ ಅಲ್ಲೇ ಪ್ರತಿಷ್ಠಾಪನೆಗೊಂಡಿದ್ದರು. ನಿಂಗೂ ಸೀದಾ ಒಳಗೆ ಹೋದ. ಕಳ್ಳ ಪಡಸಾಲೆಯಲ್ಲಿ ಮಲಗಿದ್ದ. ಮುಸುಕು ತೆಗೆದ ಅಲುಗಿಸಿದ, ಕೂಗಿದ, ಏಳಲಿಲ್ಲ ನಿಜವಾಗಿ ನಿದ್ದೆ ಹತ್ತಿದವನನ್ನು ಎಬ್ಬಿಸಬಹುದು. ಸುಳ್ಳು ಸುಳ್ಳೇ ನಿದ್ದೆ ಮಾಡುವಂತೆ ಬಿದ್ದವನನ್ನು ಎಬ್ಬಿಸುವುದು ಹೇಗೆ? ಆದರೂ ಇಂಗೂ ಜಾಣ “ಯಾಕೆ ಗುಡಸೀಕರ ಈ ಕಡೆ ಬಂದೆಲ್ಲಾ?” ಎಂದ ಕೂಡಲೇ ಕಳ್ಳ ಕಿತ್ತುಕೊಂಡೆದ್ದ. ಎದ್ದನಲ್ಲಾ, ನಿಂಗೂ ಚಪ್ಪಾಳೆತಟ್ಟಿ ನಗುತ್ತಿದ್ದುದನ್ನು ನೋಡಿದೊಡನೆ ಚೇಷ್ಟೆಯ ಅರಿವಾಯ್ತು. ತಾನೂ ನಕ್ಕ. ನಿಂಗೂ ಎಲ್ಲ ಗೊತ್ತಿದ್ದವರಂತೆ.

“ಸರಪಂಚ ದುರ್ಗಿಗಿ ಕೊಡಂತ ಎಷ್ಟು ರೊಕ್ಕ ಕೊಟ್ಟಾನೋ?”

ಅಂದ. ಕಳ್ಳ ಗಾಬರಿಯಾದ.

“ನಿನಗ ಯಾರ ಹೇಳಿದರೊ?”

“ಎಲ್ಲಾ ಗೊತ್ತೈತಿ ಹೇಳೊ”

ಕಳ್ಳನಿಗೂ ನಿಂಗೂನಿಗೂ ಅಕ್ಷರಶಃ “ಲಂಗೋಟಿ ಗೆಳೆತನ.” ನಿಂಗೂ ಇತ್ತೀಚೆಗೆ ಸೀರೆ ಉಟ್ಟಾಗಿನಿಂದ ಅದು ಇನ್ನೂ ಗಾಢವಾಗಿತ್ತು. ಆದ್ದರಿಂದ ಕಳ್ಳ ಊರವರಿಗೆ ನೂರಕ್ಕೆ ನೂರು ಸುಳ್ಳು ಹೇಳಿದರೆ ನಿಂಗೂನಿಗೆ ನೂರಕ್ಕೆ ಮೂರರಷ್ಟಾದರೂ ನಿಜ ಹೇಳುತ್ತಿದ್ದ. ಯಾವ್ಯಾವುದೋ ದುರ್ಬಲ ಕ್ಷಣಗಳಲ್ಲಿ ಏನೇನೋ ಕೊಡುವುದಾಗಿ ಕಳ್ಳ ಭರವಸೆ ಕೊಟ್ಟಿದ್ದ. ಅವುಗಳನ್ನು ನಿಂಗೂ ನಂಬುತ್ತಿರಲಿಲ್ಲ. ಆದರೂ ಪರಸ್ಪರ ಕಂಡಾಗ ಇಬ್ಬರ ಅಂತಃಕರವೂ ಮಾತಿಗೆ ಮೀರಿದ ಒಂದು ಥರದಲ್ಲಿ ಮಿಡಿಯುತ್ತಿತ್ತು.

ಕಳ್ಳ ಈಗ ಗುಡಸೀಕರ ದುರ್ಗಿಗೆ ಕೊಡಲು ಹೇಳಿದ ಹಣದ ವಿಆರವಾಗಿ ನಿಜವನ್ನೇ ಹೇಳಿದ. ಆದರೆ ಹತ್ತರ ಬದಲು ಐದು ರೂಪಾಯಿಯೆಂದು ಹೇಳಿದ, ಅಷ್ಟೆ. ಇವನ ಒಳಗನ್ನು ಒಡನುಡಿಸುವ ತಂತ್ರ ಇಂಗೂನಿಗೂ ಗೊತ್ತು. ಹತ್ತೆಂದು ಹೇಳಿಸಿದ. ಆಗಲೂ ನಿಂಗೂ ನಂಬದಿದ್ದಾಗ ಐದರ ಎರಡು ನೋಡು ಕಿಸೆಯಿಂದ ತೆಗೆದು ತೋರಿಸಿ ಗಪ್ಪನೆ ಮತ್ತೆ ಕಿಸೆಗೇ ಇಳಿಸಿದ. ನಿಂಗೂನ ಬಾಯಲ್ಲಿ ನೀರೂರಿತು.

“ಏ ಕಳ್ಳ ನನಗೊಂದು ಬಾಡಿ (ಬ್ರೇಸಿಯರ್) ಕೊಡಿಸಲೇ”

ಎಂದು ಹೇಳುತ್ತ ಸರ್ರನೆ ಸರಿದು ಸಲಿಗೆಯಿಂದ ಅವನ ಹೆಗಲ ಮೇಲೆ ಕೈಹಾಕಿ ಅಂಗಲಾಚಿದ. ಕಳ್ಳಿಗೆ ದಿಗಿಲಾಯಿತು. “ಛೇ, ತಗಿಯೋ ನಿ!” ಎಂದು ದೂರು ಸರಿಸಲು ನೋಡಿದ. ನಿಂಗೂ ತಾನೇ ದೂರ ಸರಿದು,

“ನೋಡೋ ಬಾಡಿ ತಂದ ಕೊಟ್ಟೇ, ಬರೋಬ್ಬರಿ, ಇಲ್ಲದಿದ್ದರ ಗುಡಸೀಕರಗೂ ಹೇಳತೀನಿ. ದುರ್ಗಿಗೂ ಹೇಳ್ತೀನ್ನೋಡು.”

ಅಂದ. ಈ ಕಳ್ಳ ದಾರಿಗೆ ಬರಲೇ ಬೇಕಾಯಿತು.

ಬಾಡಿ ಅಂದರೇನೆಂದು ಕೇಳಿದ. ಬಾಡಿ ತರಿಸುವ ವಿಚಾರ ನಿಂಗೂನಿಗೆ ಇಂದು ನಿನ್ನಿನದಲ್ಲ. ಹಿಂದೆ ರಮೇಸ ಇದರ ವಿಚಾರವಾಗಿ ಅರ್ಧಗಂಟೆ ವರ್ಣಿಸಿ ಬೆಳಗಾವಿಯ ಹುಡುಗಿಯರೆಲ್ಲ ಇಂಥ ಫ್ಯಾಷನ್ ಮಡುತ್ತಾರೆಂದು ಹೇಳಿದ್ದ. “ನೀನೂ ಹಂಗಿರಬೇಕೋ ಇಂಗೂ” ಎಂದೂ ಅಂದಿದ್ದ. ಒಂದು ರೂಪಾಯಿ ರಮೇಸನಿಗೆ ಅವ ಬೆಳಗಾವಿಗೆ ಹೋಗುವಾಗ ಕೊಟ್ಟು “ಅದನ್ನು ಕೊಂಡು ತಾ” ಅಂದಿದ. ರಮೇಸ ಬಾಡಿ ತರದೆ, ಪೇಪರಲ್ಲಿಯ ಅದರ ಚಿತ್ರ ತಂದುಕೊಟ್ಟಿದ್ದ. ಅವ್ನು ಏಳೆಂಟು ಮಡಿಕೆ ಮಡಿಚಿ ಸದಾ ತನ್ನ ಮಲಿಕಟ್ಟಿಲ್ಲೇ ಇಟ್ಟಿರುತ್ತಿದ್ದ. ಕಳ್ಳ ಬಾಡಿ ಅಂದರೇನೆಂದೂ ಕೇಳಿದನಲ್ಲ, ಕೂಡಲೇ ಅದನ್ನು ತೆಗದು ತೋರಿಸಿದ. ಕಳ್ಳನಿಗೆ ನಗೆ ತಡೆಯಲಾಗಲಿಲ್ಲ. ನಿಂಗೂನಿಗೆ ಸ್ವಲ್ಪ ಮುಖಭಂಗವಾಯಿತು.

“ಯಾಕಲಾ, ನಾ ಇದ್ನ ತೊಡೂದ ಇನ್ನ ಮನಸ್ಸಿಗೆ ಬರಾಣಿಲ್ಲೇನು” ಅಂದ. ತಂದು ಕೊಡುವುದಾಗಿ ಕರಿಮಾಇಯ ಆಎ ಮಾಡಿ, ಹೊರಗೆ ಕಳಿಸಿದ, ಇನು ಈ ಹಣ ತನ್ನೊಬ್ಬನ ಋಣದಲ್ಲಿಲ್ಲ ಎಂದು ಖಾತ್ರಿಯಾಯ್ತು. ಎದ್ದು ಅಂಗೀ ಹಾಕಿಕೊಂಡು ಹೊರಬಂದ. ತ್ರಿಮೂರ್ತಿಗಳಿದ್ದರು. ಹೋಗಿ ಅವರನ್ನು ಸೇರಿಕೊಂಡ.

ಊರಂತೂರು ಬಣ್ಣ ಎರಚಾಡುತ್ತಿದ್ದರೆ ಈ ಮೆಂಬರ್ ಚತುಷ್ಟಯರು ಕೆರೆಯ ದಂಡೆಯ ಮೇಲೆ ಮೊಳಕಾಲ ಸುತ್ತ ಕೈಹೆಣೆದುಕೊಂಡು ಕೂತು, ಹತ್ತು ರೂಪಾಯಿಗಳನ್ನು ಹೇಗೆ ಹೇಗೆ ಖರ್ಚು ಮಾಡುವುದೆಂದು “ಮೀಟಿಂಗ್” ಮಾಡುತ್ತಿದ್ದರು. ಮುಂಜಾನೆಯ ಘಟೆಯಿಂದಾಗಿ ಸರಪಂಚ ಬಣ್ಣದಲ್ಲಿ ಪಾಲ್ಗೊಳ್ಳಲಿಲ್ಲ. ಹತ್ತು ರೂಪಾಯಿಯಿಂದಾಗಿ ಮೆಂಬರರು ಪಾಲ್ಗೊಳ್ಳಲಿಲ್ಲ. ಪಾಲ್ಗೊಂಡರೆ ಎಲ್ಲಿ ಕಳ್ಳ ತಪ್ಪಿಸಿಕೊಂಡು ಹೋಗುತ್ತಾನೋ ಎಂದು ಉಳಿದವರಿಗೆ ದಿಗಿಲು.

ಆಯ್ತು ಹೊತ್ತು ಮುಳುಗೋ ತನಕ ಅಲ್ಲೇ ಕೂತು. ಐದು ರೂಪಾಯಿಗೆ ಸೆರೆ ಕುಡಿಯುವುದೆಂದೂ, ಇನ್ನೈದು ದುರ್ಗಿಗೆ ಕೊಡುವದೆಂದು ಒಂದನೇ ತೀರ್ಮಾನವಾಯಿತು. ಆದರೆ ದುರ್ಗಿಗೆ ಕೊಡುವುದು ಹೇಗೆ? ಲಗಮವ್ವನಿಗೆ ಗೊತ್ತಾದರೆ ಪೂಜೆ ಮಾಡದೆ ಬಿಡುವ ಹೆಂಗಸಲ್ಲ. ಆದ್ದರಿಂದ ಅವಳು ಹೊರಗೆ ಹೋದಾಗ ದುರ್ಗಿಗೆ ಕೊಡಬೇಕೆಂದೂ ಆದರೆ ಹಾಗೆ ಕೊಡುವಾಗ ಉಳಿದ ಮೂವರೂ ಅಲ್ಲಿಯೇ ಹಜರಿರತಕ್ಕದ್ದೆಂದೂ ಎರಡನೇ ತೀರ್ಮಾನವಾಯಿತು. ಅಲ್ಲದೆ ದುರ್ಗಿಯ ಜೊತೆ ಒಂದೆರಡು ಮಾತು ಹೆಚ್ಚಾಗಿ ಆಡುವ ಅವಕಾಶವನ್ನು ಸಿದರಾಮನಿಗೆ ಸರ್ವಾನುಮತದಿಂದ ಕಲ್ಪಿಸಲಾಯಿತು.

ಸಾತೀರ ಮೇಲಿನ ತೀರ್ಮಾನ ಒಪ್ಪಿಕೊಂಡರೂ ಅವ ತಲೆಯಲ್ಲಿ ಹುಳುವಿನಂತೆ ಇನ್ನೊಂದು ವಿಚಾರ ಕೊರೆಯುತ್ತಿತ್ತು. ಐದು ರೂಪಾಯಿಯೆಂದರೆ ಸಣ್ಣ ಬಾಬತ್ತಲ್ಲ. ಕೊಡುವುದೇ ಹೌದಂತೆ ಹಾಗೇ ಕೊಟ್ಟದ್ದೇ ಆದರೆ ದುರ್ಗಿ ಯವುದಕ್ಕೂ ಒಪ್ಪಿಕೊಳ್ಲುವುದರಲ್ಲಿ ಸಂಶಯವಿಲ್ಲ. ಅವಳ ಒಪ್ಪಿಗೆಯನ್ನು ಯಾಕೆ ಸರಿಯಾಗಿ ಉಪಯೋಗಿಸಬಾರದು? ಎಂದುಕೊಂಡ.

“ನೋಡ್ರೋ, ಕೊಡೋದು ಖರೇ ಅಂದಮ್ಯಾಲೆ ಗಲಮವ್ವನ ಮನ್ಯಾಗ ಯಾಕ ಕೊಡಬೇಕು? ದುರ್ಗೀನ ಕರಿಮಾಯಿ ಗುಡೀ ಹಿಂದ ಕರಕೊಂಡ ಹೋಗಿ ನಾಕೂ ಮಂದಿ ಕೂಡಿ ಕೊಟ್ಟರ ಹೆಂಗ?”

ಅಂದ. ಸಾತೀರನ ಮನಸ್ಸಿನ ಹುಳಿಯ ವಾಸೆ ಎಲ್ಲರ ಮೂಗಿಗೂ ತಾಕಿತು. ಎಲ್ಲರಿಗೂ ಸರಿಯೆನ್ನಿಸಿ ರೋಮಂಚನಗೊಂಡರು. ಆದರೆ ರಮೇಸ ಒಂದು ತಿದ್ದುಪಡಿ ಮುಂದಿಟ್ಟ. ಐದು ರೂಪಾಯಿ ಸಿದರಾಮ ಒಬ್ಬನೇ ಕೊಡುವುದರ ಬದಲು ಚಿಲ್ಲರೆ ಮಾಡಿಸಿ, ಒಬ್ಬೊಬ್ಬರು ಒಂದೊಂದು ರೂಪಾಯಿ ಕೊಡಬೇಕೆಂದೂ, ಸಿದರಾಮ ಎರಡು ರೂಪಾಯಿ ಕೊಡುವುದೆಂದೂ ಸೂಚಿಸಿದ. ಸದರಿ ಕಳ್ಳನೇ ಮೊದಲು ದುರ್ಗಿಯನ್ನು ಸಾಧ್ಯವಾದರೆ ಕುಡಿಯುವದೆಂಬ ತಿದ್ದುಪಡಿಯೊಂದಿಗೆ ಒಪ್ಪಿ ಎದ್ದರು.

ಆಗಷ್ಟೇ ರಾತ್ರಿಯಾಗಿತ್ತು. ಜನ ಅಲ್ಲಲ್ಲಿ ಕಟ್ಟೆಯ ಮೇಲೆ ಕುಳಿತು ಅಂದಿ ಬಣ್ಣದ ಮೋಜುಗಳನ್ನು ಮಾತನಾಡಿಕೊಂಡು ನಗುತ್ತಿದ್ದರು. ಕೆಲವರು ಗುಡಸೀಕರ ಬಾಳೂನ ಮಗನನ್ನು ಹೊಡೆದ ಸುದ್ದಿ ಮಾತಾಡುತ್ತಿದ್ದರು. ಈ ಚತುಷ್ಟಯರು ಬಸೆಟ್ಟಿಯ ಅಂಗಡಿಯಲ್ಲಿ ಒಂದರ ಎರಡೂ ನೋಟು ಕೊಟ್ಟು ಒಂದೊಂದರ ಹತ್ತು ನೋಟಾಗಿಸಿಕೊಂಡರು. ಆ ಹತ್ತನ್ನೂ ಸಿದರಾಮ ಕಿಸೆಯಲ್ಲಿಟ್ಟುಕೊಂಡ ಲಗಮವ್ವನ ಮನೆಯ ಕಡೆ ಚಿತ್ತೈಸಿದರು.

ಲಗಮವ್ವನ ಮನೆ ಕಂ ಬಾರಿನಲ್ಲಿ ಆಗಲೇ ನಿಂಗೂ ಕೂತಿದ್ದ. ಇವರ ದಾರಿ ನೋಡುತ್ತ. ಇಷ್ಟ ಯಾಕ ತಡಾ ಮಾಡಿದಿರೋ? ಬರ್ರಿ ಬರ್ರಿ” ಎನ್ನುತ್ತ ಅವನೇ ಇವರನ್ನು ಸ್ವಾಗತಿಸಿದ. ಕಳ್ಳನ ಜೀವ ಹುಳ್ಳಳ್ಳಗಾಯಿತು. ತೋರಗೊಡದೆ ಒಳಹೊಕ್ಕ. ಚಾಪೆಯ ಮೇಲೆ ನಾಲ್ವರೂ ಕೂತರು. ನಲ್ವರ ಕಣ್ಣುಗಳು ಟಕಮಕ ದುರ್ಗಿಯ್ನೇ ಹುಡುಕುತ್ತಿದ್ದವು. ಲಗಮವ್ವ “ಏನ್ರೋ?” ಅಂದಳು. ಕಳ್ಳ ಧೈರ್ಯದಿಂದ ಹೇಳಿದ.

“ನಾಕ ಕಾಯಿ ಸೆರೆ ಕೊಡಬೇ,”

“ಮೊದಲ ರೊಕ್ಕಾ ಕೊಡು.”

“ನಾವೆಲ್ಲಿ ಓಡಿಹೋಗ್ತೀವೇನಬೆ?”

ಎಂದ ಕಳ್ಳ.

“ಹೆಂಗೂ ಸರಪಂಚ ಕೊಟ್ಟಾನಲ್ಲ, ತಗದ ಬಿಸಾಕಲೇ”

ಅಂದ ನಿಂಗೂ. ಕಳ್ಳನಿಗೆ ಇನ್ನು ಗಾಬರಿಯಾದರೆ ಉಳಿದವರಿಗೆ ದಿಗಿಲಾಯಿತು. ನಾಲ್ವರ ಐದಯ ರೂಪಾಯಿ ಕೊಟ್ಟು ಐದು ಕಾಯಿ ತರಿಸಿದ, ನಿಂಗೂನಿಗೆ ಒಂದನ್ನು ಕೊಟ್ಟರು. ಅವನು ಕಳ್ಳನ ಬಳಿಯೇ ಕೂತು ಕುಡಿಯತೊಡಗಿದ. ಸಾತೀರ ಕಿಸೆಯಲ್ಲಿಯ ಸಿಗರೇಟು ಪಾಕೀಟು ತೆಗೆದು, ಅದರಲ್ಲಿಯ ಸೇದಿಬಿಟ್ಟ ಒಂದು ಸಿಗರೇಟು ತುಂಡು ತೆಗೆದು ಹೊತ್ತಿಸಿದ, ಒಂದನ್ನು ಕಳ್ಳನಿಗಿತ್ತ. ಸಾಮಾನ್ಯವಾಗಿ ಗುಡಸೀಕರ ಸೇದಿ ಬಿಟ್ಟ ತುಂಡುಗಳೆಲ್ಲ ಸಾತೀರನ ಬಳಿಯೆ ಇರುತ್ತಿದ್ದವು. ಅಷ್ಟರಲ್ಲಿ ದುರ್ಗಿ ಬಂದಳು, ಎಲ್ಲರಿಗೂ ಹುರುಪು ಬಂತು. ರಮೇಸ ಮೆರೆಮಿಂಡರೂ ಅಂಗಲಚಿ ತಲ ಒಂದೊಂದು ತುಂಡು ಪಡೆದು ಹೊತ್ತಿಸಿದರು.

ಕಾಯಿ ಬರಿದಾಗುತ್ತ ಬಂದಂತೆ ಅವರ ತಲೆ ನಾಲಿಗೆಗಳ ಸಮತೋಲ ತಪ್ಪತೊಡಗಿತು. ಈ ಮಧ್ಯೆ ಕಳ್ಳ ಏನೇನೋ ನೆಪದಿಂದ ದುರ್ಗಿಯ ಬಳಿ ಹೋಗಿ ತನ್ನಲ್ಲಿದ್ದ ನೋಟುಗಳನ್ನು ತೋರಿಸಿ ಬಂದಿದ್ದ. ಸಾತೀರ ತಾನೂ ಒಮ್ಮೆ ತೋರಿಸಿಕೊಂಡು ಬರುತ್ತೇನೆ ಎಂದು ಕೈ ಸನ್ನೆಯಿಂದಲೇ ಕೇಳಿದ. ಸನ್ನೆಯಿಂದಲೇ ಇವನೂ ನಿರಾಕರಿಸಿದ. ಹೊರಗಡೆ ಒಂದಿಬ್ಬರು ಗಿರಾಕಿಗಳು ಕೂತಿದ್ದರು. ಒಳಹೊರಗೆ ಓಡಾಡುತ್ತಿದ್ದ ದುರ್ಗಿ ಒಬ್ಬೊಬ್ಬರಿಗೆ ಒಂದೊಂದು ಥರ ಕಂಡಳು.

ಕಾಯಿಗಳು ಪೂರ್ತಿ ಬರಿದಾದ ಮೇಲೆ ಮುಂದೇನು ಎಂದು ಗುಸುಗುಸು ನಡೆಯಿತು. ಗುಡಿಯ ಹಿಂದೆ ಬರಲು ಕಳ್ಳನೇ ದುರ್ಗಿಗೆ ಹೇಳಬೇಕೆಂದು ಮೂವರೂ ಸೂಚಿಸಿದರು. ಕಳ್ಳನಿಗೆ, ಅದೇನೋ ಇಷ್ಟದ ಕೆಲಸವೆ. ಆದರೆ ಭಯ. ಹೇಗೂ ನಿಂಗೂನಿಗೂ ಕುಡಿಸಿದ್ದರಲ್ಲ. ಕಳ್ಳ ದುರ್ಗಿಗೆ ಹೇಳುವ ಜವಾಬ್ದಾರಿಯನ್ನು ನಿಂಗೂನಿಗೆ ಹೇಳಿದ. ನಿಂಗೂ ಗುಡಿಯ ಹಿಂದಿ ಪೌಳಿಯಲ್ಲಿ ನೀವೆಲ್ಲ ಕಾದಿರಬೇಕೆಂದೂ ಅಲ್ಲಿಗೆ ದುರ್ಗಿಯೊಬ್ಬಳನ್ನೇ ಕಳಿಸುವುದಾಗಿಯೂ ಹೇಳಿದ, ಎದ್ದರು.

ಹೊರಗಡೆ ಮಂದ ಬೆಳ್ದಿಂಗಳಿದ್ದರೂ ಪೌಳಿಯಲ್ಲಿ ಸುತ್ತ ಮರಗಳಿಂದಾಗಿ ಕತ್ತಲೆಯೇ ಇತ್ತು. ದುರ್ಗಿ ಈಗ ಬರುತ್ತಾಳೆ. ಆಗ ಬರುತ್ತಾಳೆಂದು ನೆನೆನೆನೆದು ನಾಲ್ವರು ತೊಡೆ ಬಿಗಿದು ಮೈ ಗರಂ ಆದವು. ರಮೇಶ ಓಡಿಹೋಗಿ ನಾಕೈದು ಸಲ ಒಂದಮಾಡಿ ಬಂದ. ಕಳ್ಳನಿನ್ನೂ ಎಲ್ಲರ ಕೈಗೆ ರೂಪಾಯಿ ಕೊಟ್ಟಿರಲಿಲ್ಲ. ಅವಳು ಬಂದಕೂಡಲೇ ಕೊಡುವುದಾಗಿ ಹೇಳಿ ಕಾಲ ತಳ್ಳುತ್ತಿದ್ದ. ಬಂದಳು!

ಕಳ್ಳ ಅವಸರದಲ್ಲಿ ಎ‌ಲ್ಲರಿಗೂ ಒಂದೊಂದು ರೂಪಾಯಿ ಕೊಟ್ಟ. ತಾನೂ ಒಂದನ್ನು ಹಿಡಿದುಕೊಂಡು ಇನ್ನೊಂದನ್ನು ಜೇಬಿನಲ್ಲೇ ಬಿಟ್ಟ. ಅವಳು ಸಮೀಪ ಬರುವದಷ್ಟೇ ತಡ “ತಗೋ ದುರ್ಗಿ” ಎಂದು ಕಳ್ಳ ಕೈಚಾಚಿದ. ಮುಂದೆ ತಾನು ಮಾಡಲಿರುವುದನ್ನು ನೆನೆದು ಆಗಲೇ ಅವನ ಬಾಯಿ ಒಣಗಿತ್ತು; ರಮೇಸ ಮುಂದೆ ಬಂದು “ಗುಡಸೀಕರ ಕೊಟ್ಟದ್ದಲ್ಲ, ನಂದು, ತಗೋ ದುರ್ಗಿ” ಎಂದು ಹಲ್ಲುಕಿರಿದ. ಆ ಕತ್ತಲೆಯಲ್ಲೂ ಅವನ ಹಲ್ಲುಗಳು ಸ್ಪಷ್ಟವಾಗಿ ಕಾಣುತ್ತಿದ್ದವು. ಸಾತೀರ, ಮೆರೆಮಿಂಡ ಹಾಗೇ ಕೈಚಾಚಿದರು. ಅಷ್ಟು ಹಣ ತಕ್ಕೊಂಡು ಸುಮ್ಮನೇ ನಿಂತಳು. ಯಾರೊಬ್ಬರಿಗೂ ಧೈರ್ಯ ಸಾಲದು, ಸುಮ್ಮನೆ ಹಿಂತಿರುಗಿದಳು. ಇನ್ನೇನು ಹೋಗುತ್ತಾಳಲ್ಲಾ ಎಂದವನೇ ಸಾತೀತ ಹಿಂದಿನಿಂದ ಹಾರಿ ತೆಕ್ಕೆ ಹಾದ. ಕೂಡಲೇ ಕಳ್ಳ, ರಮೇಸ ಹರಿಬಂದು ತಮತಮಗೆ ಅನುಕೂಲವದ ಚಪಲಗಳನ್ನು ತೀರಿಸಿಕೊಳ್ಳಲಿದ್ದರು. ಅಷ್ಟರಲ್ಲಿ ಲಗಮವ್ವನ ದನಿ ಕೇಳಿಸಿತು.

“ಥೂ ತುಡುಗ ಭಾಡೇರ್ಯಾ. ದುರ್ಗಿಗಿ ಲೊಡಂತ ಗುಡಸ್ಯಾ ಹತ್ತು ರೂಪಾಯಿ ಕೊಟ್ಟರ ಕುಡದ ಉಚ್ಚೀ ಹೋದಿರಿ. ಹೌಂದಲ್ಲ ಥೂ!”

ಎನ್ನುತ್ತ ಉಗಳಿದಳು. ನಿಂಗೂ ಹೋ ಹೋ ಹೋ ಎಂದು ಕೈಬಡಿದು ನಗುತ್ತ ಲಗಮವ್ವನತ್ತ ಓಡಿಹೋದ. ನಾಲ್ವರಿಗೂ ಈಗ ತಿಳಿಯಿತು, ತಮ್ಮ ಹತ್ತಿರ ಬಂದವಳು ದುರ್ಗಿಯಲ್ಲ, ನಿಂಗೂ ಎಂದು. ಅವಳು ಯಾವಾಗ “ತಡೀರಿ ಗುಡಸ್ಯಾಗ ಹೇಳತೇನ” ಎಂದು ಹೇಳುತ್ತ ಇವರ ಕಡೆ ನುಗ್ಗಿದಳೋ, ನಾಲ್ವರೂ ಹೆದರಿ ಕಾಲಿಗೆ ಬುದ್ಧಿ ಹೇಳಿದರು.

ನಿಂಗೂನಿಗೆ ಸಿಕ್ಕದ್ದು ಒಟ್ಟು ನಾಲ್ಕು ರೂಪಾಯಿ. ಮೂರನ್ನು ಲಗಮವ್ವನಿಗೆ ಕೊಟ್ಟು ಒಂದನ್ನು ತಾನಿಟ್ಟುಕೊಂಡಿದ್ದ. ಆದರೆ ಆಮೇಲೆ ದುರ್ಗಿಯನ್ನು ನೋಡಿ ಅವನಿಗೇನು ತಿಳಿಯಿತೋ, ಎಷ್ಟೆಂದರೂ ಹೆಂಗರುಳು. ತಾನಿಟ್ಟುಕೊಂಡ ರೂಪಾಯಿಯನ್ನು ಲಗಮವ್ವನಿಗೆ ತಿಳಿಯದಂತೆ ದುರ್ಗಿಗೆ ಕೊಟ್ಟ. ಅವಳು ಅದನ್ನು ತನ್ನ ಮಲಿಕಟ್ಟಿನಲ್ಲಿ ಬಚ್ಚಿಟ್ಟುಕೊಂಡಳು.

ಚತುಷ್ಟಯರು ಓಡೋಡುತ್ತ ಪಂಚಾಯ್ತಿ ಆಫೀಸಿಗೆ ಬಂದಾಗ ಗುಡಸೀಕರ ಒಬ್ಬನೇ ಕುಡಿಯುತ್ತ ಕೂತಿದ್ದ. ನಾಲ್ವರೂ ತೊಯ್ಸಿಕೊಂಡ ಕಾಗೆಗಳ ಹಾಗೆ ಮುದುಡಿ ಕೂತರು. ಯಾರೂ ಮಾತಾಡಲಿಲ್ಲ. ಗುಡಸೀಕರ ಮತಾಡದ್ದರಿಂದ ನಿಂಗೂ ಎಲ್ಲವನ್ನೂ ಹೇಳಿದ್ದಾನೇನೋ ಎಂದು ಕಳ್ಳನಿಗೆ ಸಂಶಯ ಬಂತು. ಸಾತೀರ ತನ್ನ ಪಾಡಿಗೆ ತಾನು ಗುಡಸೀಕರ ಎಸೆದ ಸಿಗರೇಟನ್ನು ಎಳೆಯುತ್ತಿದ್ದ. ಬಹಳ ಹೊತ್ತಾದ ಮೇಲೆ ಗುಡಸೀಕರನೇ ಕೇಳಿದ –

“ಕಳ್ಳಾ, ದುರ್ಗಿಗಿ ರೊಕ್ಕಾ ಕೊಟ್ಟೇನೋ?”

“ಕೊಟ್ಟೆ. ಆದರ ಲಗಮವ್ವನ ಸೊಕ್ಕ ಅಳತಿ ಮೀರಿತ್ರಿ”

ಎಂದ ಗಾಬರಿಯಿಂದ ರೊಕ್ಕದ ವಿಷಯ ಮರೆಹಾಕುತ್ತ. ಮೆರೆಮಿಂಡ ಬಾಯಿಹಕಿದ. “ಛೇ ಛೇ ಕಂಡಾಪಟಿ ಅಗ್ಗದ ಹೆಂಗಸದು. ಹೇಳಬಾರದ್ದ ನಾ ಏನ ಹೇಳ್ದೆ. ಸರಪಂಚ ಸಾಹೇಬರ ಮ್ಯಾಲ ನೀ ಹಾಂಗ ಪದ ಮಾಡಿದದ ತಪ್ಪಂತ ಹೆಳಿದರೆ ಮೈಯಾಗ ದೆವ್ವ ಬಂದಾಂಗ ಕೈ ಬಾಯಿ ಮಾಡಿ ಬಲ್ಹಾಂಗ  ಮಾತಾಡಾಕ ಹತ್ತಿದ್ಲು!” ರಮೇಸನಿಗೆ ಇಷ್ಟು ನೆಪ ಸಾಕಾಯಿತು.

“ಎಸೆ‌ಸ್. ಪಾಪ ಸಿದರಾಮ ಸರಪಂಚರ ಕೊಟ್ಟಾರ ತಗೋವಾ ಅಂತ ಹತ್ತ ರೂಪಾಯಿ ಕೊಟ್ಟರ ಐದು ರೂಪಾಯಿ ಅಲ್ಲೇನ? ನಿನ್ನ ಸರಪಂಚರ ನೀರ ಬಲ್ಲಿನ್ಹೋಗ” ಅಂತ ಒದರ್ಯಾಡ್ಯಾಕ ಹತ್ತಿದ್ದು!”

ತಾನಿನ್ನೂ ಮಾತಾಡಲಿಲ್ಲವಲ್ಲಾ ಎಂದು ಸಾತೀರ ಗಮನಿಸಿಕೊಂಡ –

“ಗೌಡ ಇಪ್ಪತ್ತಕೊಟ್ಟಾನ, ನಿನ್ನ ಸರಪಂಚ ಐದs ಅಲ್ಲೇನು ಕೊಟ್ಟದ್ದು? ಅಂದ್ಲು!”

ಅಂದ. ಎಲ್ಲಿ ಗುಡಸೀಕರ ಹೋಗಿ ಲಗಮವ್ವನ ಜೊತೆ ಜಗಳಾಡುವನೋ ಎಂದು – “ಬರಲಿ ನಿಮ್ಮ ಸರಪಂಚ ನನ್ನ ಹಂತ್ಯಾಕ. ಚೆಲೋಹಾಂಗ ಬುದ್ಧಿ ಕಲಿಸಿ ಕಳಸತೇನಂತಾಳಲಾ!”

ಎಂದೂ ಕಳ್ಳ ಸೇರಿದ. ಗುಡಸೀಕರ ಬಾಯಿ ತೆರೆಯಲಿಕ್ಕೆ ಅವಕಾಶ ಕೊಟ್ಟರೆ ಕೆಟ್ಟೇವೆಂಬಂತೆ ಒಬ್ಬರಾದ ಮೇಲೆ ಒಬ್ಬರು ಬಿಟ್ಟೂ ಬಿಡದೆ ಮಾತಾಡುತ್ತಿದ್ದರು. ಕೊನೆಗೆ ಗುಡಸೀಕರ –

“ಅಲ್ರೋ, ದುರ್ಗಿ ಕೈಯಾಗ ಕೊಡಂದರ ಲಗಮೀ ಕೈಯಾಗ ಯಾಕ ಕೊಟ್ಟಿರಿ?” ಎಂದು ಕೇಳಿದ ಅವರು ಹೇಳಿದ್ದನ್ನೆಲ್ಲ ನಂಬುತ್ತ.

“ಆಕಿಗೇ ಕೊಡಬೇಕಂತ ಹೋಗಿದ್ದೀವಿ. ಕರೆದ ಕೊಡಬೇಕಂದರ ಈ ಮುದಿರಾಚಿ ಬಂದ ಕೈ ಒಡ್ಡಿದಳ್ರಿ”

ಎಂದು ಇನ್ನೊಂದು ಸುಳ್ಳೆಸೆದ ಕಳ್ಳ. ಆದರೆ ಗುಡಸೀಕರ ನಂಬಿದನೆಂದು ಇವರಿಇನ್ನೂ ಖಾತ್ರಿಯಾಗಲೊಲ್ಲದು. ಬಾಯಿಗೆ ಬಂದಂತೆ ಲಗಮವ್ವನನ್ನು ಬಯ್ದರು. ಗೌಡ, ದತ್ತಪ್ಪನ ಹೆಸರು ತಂದರು. ಮಿಕ್ಕವರು ಮಾತಿಗೊಮ್ಮೆ ಕಳ್ಳನ ಸಜ್ಜಿಕೆ ಹೊಗಳಿದರು. ಕಳ್ಳ ಇವರನ್ನು ಹೊಗಳಿದ. ಕುಡಿದ ದೇಸೀ ದೇವರ ಪ್ರಭಾವವೋ, ಸರಪಂಚ ತಮ್ಮನ್ನು ನಂಬಲಿಲ್ಲವೆಂಬ ಭಯವೋ ಆಕಸ್ಮಾತ್ ಮುಂದೆ ಗೊತ್ತಾದಾಗಲೂ ತಮ್ಮ ಮೇಲೆ ಬರಬಾರದೆಂಬ ಮುಂಜಾಗ್ರತೆಯೋ ಅಂತೂ ಮಾತಾಡಿದರು. ಮಾತಾಡಿ ನಿಲ್ಲಿಸಿದರು. ಕೊನೆಗೆ ಗುಡಸೀಕರ ಹೇಳಿದ:

“ಈಗ ಲಗಮವ್ವನ ನೀರ ಇಳಿಸಬೇಕಲ್ಲಾ…”

ನಾಲ್ವರೂ ಈಗ ಹಗುರಾದರು ಗುಡಸೀಕರ ನಂಬಿದ್ದು ಖಾತ್ರಿಯಾಯಿತು ಒಬ್ಬ ಅವಳನ್ನು ಹೊಡೆಯೋಣವೆಂದ. ದುರ್ಗಿಯನ್ನು ಅಪಹರಿಸೋಣವೆಂದು ಇನ್ನೊಬ್ಬ, ಅವಳ ಸೆರೆ ಕದ್ದು ತರೋಣವೆಂದು ಮಗದೊಬ್ಬ ಇನ್ನೂ ಏನೇನೋ ಸೂಚನೆ ಬರುತ್ತಿದ್ದಾಗ ಗುಡಸೀಕರ ಒಂದು ವಿಚಾರ ಹೇಳಿದ.

“ನಾವೂ ಒಂದು ಸೆರೇದಂಗಡಿ ತಗದರ ಹೆಂಗ?”

“ಓಹೋ, ಬೇಕಾದರ ಅಂಗಡ್ಯಾಗ ನಾ ಕೂರತೀನಿ.”

ಎಂದು ಮೆರೆಮಿಂಡ ಮುಂದ ಬಂದ, ರಮೇಸನಿಗಾಗಲೇ ರೋಮಾಂಚನಗಳೆದ್ದಿದ್ದವು.

“ಎಸೆಸ್, ಈ ಲಗಮಿ ಭಟ್ಟೀಸೆರೆ ಮಾರಿದರ, ನಾವು ಫಾರಿನ್ ಬ್ರಾಂಡಿ ಮಾರೋಣು!”

ಆದರೆ ಈ ವಿಚಾರ ಸಾತೀರನಿಗೆ ಸರಿಬರಲಿಲ್ಲ.

“ಒಂದ ಗುಟಕ ಬ್ರಾಂಡಿ ಯಾರ ಕುಡೀತಾರೋ? ಈಡಾಗಿ ಸಗುವಂಥಾದ್ದ ಏನರೆ ಹೇಳು”

ಎಂದ ಕೂಡಲೇ ಕಳ್ಳ. “ಅದಕ್ಯಾಕ ಕಾಳಜೀ ಮಾಡತೀರೋ? ಬ್ರಾಂಡಿ ಒಳಗ ನಾವೂ ನೀರ ಹಾಕಿ ಈಡಮಾಡಿ ಮಾರೋಣು.”

ಎಂದೊಂದು ಪರಿಹಾರ ಸೂಚಿಸಿದ.

“ಎಸೆಸ್, ಫಾರಿನ್ ಬ್ರಾಂಡಿ ಅಂದ ನೀರ ಮಾರಿದರೂ, ಮಂದಿ ತಗೋತಾರ. ನಾವು ಬರೇ ಒಂದ ಬಾಟ್ಲೀದಾಗ ಐದಾರ ನೂರ ರೂಪಾಯಿ ಅಗ್ಗದೀ ಸಹಜೀಕ ದುಡೀತೇವು”

ಎಂದು ರಮೇಸ ತನ್ನ ವ್ಯವಹಾರಬುದ್ಧಿ ಪ್ರದರ್ಶಿಸಿದ. ಇಷ್ಟಾಯಿತಲ್ಲ. ಕಳ್ಳ ಗುಡಸೀಕರನನ್ನೇ ನೋಡುತ್ತ –

“ಅಂಡ್ಯಾಗ ಯಾರನ್ನ ಕುಂದರ್ಸೋಣಂದ್ರಿ?”

ಎಂದು, ತನಗೇ ಹೇಳುತ್ತಾನೆಂದು. ಗುಡಸೀಕರ ನಿಧಾನವಾಗಿ ಸಿಗರೇಟು ಸೇದುತ್ತ ಹೇಳಿದ:

“ಬೆಳಗಾವಿಂದ ಒಬ್ಬಾಕಿ ಚಿಮಣಾನ ತರೋಣು. ಅಂಗಡ್ಯಾಗಿಡೋಣು.”

ಬೆಳಗಾವಿ ಎನ್ನುತ್ತಲೂ ರಮೇಸ ಎಷ್ಟು ಉತ್ಸಾಹ ತಾಳಿದನೆಂದರೆ ಕೂತವನು ಎದ್ದು ಗುಡಸೀಕರನ ಬಳಿಹೋಗಿ,

“ಸಾಹೇಬರ, ಸಾಹೇಬರ, ಕಾರಹುಣಿವೀ ದಿನ ಹೆಂಗೂ ಅವರು ಚಿಮಣಾನ ತರತಾರಲ್ಲ ಆಗ? ಸುರು ಮಾಡೂಣ್ರಿ,”

ಅಂದ. ಗುಡಸೀಕರ ತಲೆಯ ತೀವ್ರತೆ ಇನ್ನೂ ಜಾಸ್ತಿಯಾಯ್ತು.

“ಚಿಮಣಾನ ಯಾಕ ತರ್ತಾರೋ?”

“ಆ ದಿನ ಆಟ ಗೀಟ ಮಾಡ್ತಾರಲ್ಲರಿ.”

ಗುಡಸೀಕರ ನಿಧಾನವಾಗಿ ಸಿಗರೇಟನ್ನೆಳೆದ. ವಿದೇಶೀ ಪರಮಾತ್ಮನನ್ನು ತನ್ನ ಜೀವಾತ್ಮದಲ್ಲಿ ಮೆಲ್ಲನೆ ಸುರಿದುಕೊಂಡು ಬಾಟ್ಲಿ ಖಾಲಿ ಮಾಡಿದ. ಸಮರಸ ಸಂಯೋಗವಾದಂತೆ ಆ ಈ ಕಡೆ ಅಡ್ಡಾಡುತ್ತಿದ್ದ ವಿಆರಗಳು ಏಕಮುಖವಾಗಿ ಸಂಘಟಿಸಿದವು. ತುಟಿ ಒರೆಸಿಕೊಂಡ. ಚತುಷ್ಟಯರು ಅವನ ಮುಖವನ್ನೇ ನೋಡುತ್ತಿದ್ದರು. ತನಗೆ ತಾನೇ ಒಮ್ಮೆ ತಲೆದೂಗಿ ಗತ್ತಿನಲ್ಲಿ ಕಚ್ಚಿಕೊಂಡಿದ್ದ ತುಟಿಗಳನ್ನು ಎರಡು ಮಾಡಿದ:

“ಅವರು ಆಟ ಮಾಡಲಿ, ಅಂದs ನಾವೂ ಒಂದು ನಾಟಕ ಮಾಡೋಣು. ಚಿಮಣಾ ನಮ್ಮಲ್ಲಿ ಬರಲಿ. ಅವರು ಬಯಲಿನಗ ಕುಣೀಲಿ. ನಾವು ಒಳೆ ನಿವಳ ಥೇಟರ್ ಹಾಕಿ ಲೈಟ, ಲೌಡ್ ಸ್ಪೀಕರ್ ತಂದ ನಾಟಕ ಮಾಡೋಣು, ನಾಟಕ ಮುಗಿದ ಮ್ಯಾಲ ಚಿಮಣಾ ನಮ್ಮಲ್ಲೇ ಇರಲಿ. ಸೆರೇದಂಗಡಿ ಬ್ಯಡಾ. ಚಾದ ಅಂಗಡಿ ತಗದ ಕೊಡೋಣೂ. ಏನಂತೀರಿ?”

ತಾನು ಈ ತಕ ಅನುಭವಿಸಿದ ಸೋಲು, ಅವಮಾನಗಳ ಸೇಡು ಈ ಉಪಾಯದಿಂದ ಸರಳಬಡ್ಡಿ, ಚಕ್ರಬಡ್ಡಿ ಸಮೇತ ತೀರಿದಂತಾಯಿತೋ? ಕಾರ ಹುಣ್ಣಿಮೆಯ ಬಯಲಾಟಕ್ಕೆ ಜನಹೋಗದೆ ತಮ್ಮ ನಾಟಕಕ್ಕೇ ಬಂದರೆ ಗೌಡನ ಕೊಂಬು ಮುರಿದಂತಾಯಿತೋ! ಚಿಮಣಾಳನ್ನು ತಂದು ಚಹದಂಗಡಿ ತೆರೆಯುವುದರಿಂದ ಲಗಮಿಯ ಸೊಕ್ಕು ಇಳಿದಂತಾಯಿತೋ! ಊರನ್ನು ಬೆಳಗಾವಿಯಾಗಿಸಲು ಪ್ರಥಮ ಹೆಜ್ಜೆ ಇಟ್ಟಂತಾಯಿತೋ! ಪುಳಕದ ಸೊಕ್ಕಿನಲ್ಲೇ ಮನೆಗೆ ಹೋದ.

ಊಟ ಮಾಡುವಾಗ ಅವನ ತಾಯಿ “ಏ ತಮ್ಮಾ, ಗಿರಿಜವ್ವಗ ಒಂದ ವರ ನೋಡಬೇಕಲ್ಲೋ. ಬೆಳದ ನಿಂತಾಳ. ಆಕಿ ವಾರಿಗೆಯವರಿಗೆಲ್ಲಾ ಮದಿವ್ಯಾಗಿ ಮಕ್ಕಳಾಗ್ಯಾವ. ಹಿರಿಯಾ ಇದ್ದಿದ್ದರ ಏನಾದರ ಒಂದ ಮಾಡ್ತಿದ್ದ. ಗೋಕಂವ್ಯಾಗ ಒಂದು ವರ ಐತೆಂತ…” ಹೀಗೆ ಏನೇನೋ ಹೇಳುತ್ತಿದ್ದಳು. ಅವನ ತಲೆಯಲ್ಲೀಗ ತಂಗಿಯ ಮದುವೆಯ ವಿಚಾರ ಸೇರುವುದು ಸಾಧ್ಯವೇ ಇರಲಿಲ್ಲ. ಹೇಳಿದ್ದಕ್ಕೆಲ್ಲ ಹಾಂಹೂಂ ಅಂದು ಮಹಡಿ ಹತ್ತಿದ.