ಇದರ ಪರಿಣಾಮವಾಗಿ ಹಿಂಡು ಹಿಂಡು ಪೊಲೀಸರು ಊರು ಹೊಕ್ಕರು. ಯಾವುದಕ್ಕೋ ಬಂದವರು ಇನ್ಯಾವುದಕ್ಕೋ ತಗಲಿಕೊಂಡರು.

ಮಾರನೇ ದಿನವೇ ಗುಡಸೀಕರ ಸರಿಕರೊಂದಿಗೆ ಬೆಳಗಾವಿಗೆ ಹೋದ ಮುಂದೆ ಎರಡು ಮೂರು ದಿನ ಬರಲೇ ಇಲ್ಲ. ಇಲ್ಲೀತನಕ ಹಿರಿಯರು ಚತುಷ್ಟಯರನ್ನು ಲೆಕ್ಕಕ್ಕೇ ಹಿಡಿದಿರಲಿಲ್ಲ. ಬಂದೊಡನೆ ಗುಡಸೀಕರನಿಂದ ಬೇರೆ ಇರೋದಕ್ಕೆ ತಾಕೀತು ಮಾಡಬೇಕೆಂದುಕೊಂಡರು. ಶಿವನಿಂಗನಿಗೆ ಹೆದರಿ ಊರುಬಿಟ್ಟಿದ್ದಾರೆಂದೇ ಜನ ಆಡಿಕೊಂಡರು.

ಗುಡಸೀಕರ ಚತುಷ್ಟಯರ ಸಮೇತ ಬಂದಿಳಿದ. ಆಶ್ಚರ್ಯವೆಂದರೆ ಒಬ್ಬರ ಕಣ್ಣ ಬಳಿಯೂ ಚಿಂತೆಯ ಗೆರೆಯಿರಲಿಲ್ಲ. ಸಾಲದ್ದಕ್ಕೆ ಗೆದ್ದವರಂತೆ ಹುಮ್ಮಸ್ಸಿನಿಂದಿದ್ದರು. ಕುದುರೆಗೆ ಹಿಂಸೆ ಮಾಡಿದ್ದು ಅವರಿಗೆ ಸಾಮಾನ್ಯ ವಿಷಯವಾಗಿತ್ತು. ನಿಂಗೂ ತಡೆಯದೆ ಕಳ್ಳನ ಬಳಿಹೋಗಿ “ಮೂಕ ಪ್ರಾಣೀನ್ನ ಹಾಂಗ ಬಡ್ಯಾಕೆ ತಿಳೀಲಿಲ್ಲೇನೊ? ತಡಿ, ನಿಮಗ ಗೌಡ್ರ ಬುದ್ಧಿ ಕಲಸ್ತಾರ” ಎಂದು ಹೇಳಿದಾಗ ಕಳ್ಳ “ಯಾರು ಯಾರಿಗಿ ಬುದ್ಧಿ ಕಲಸ್ತಾರ ನೋಡೀಯಂತ ತಡಿ” ಅಂದಿದ್ದ.

ಮಾರನೇ ದಿನ ಕೋಳಿ ಕೂಗಿ ಬೆಳಗಾಯಿತು. ಝಮಝಮು ಥಂಡಿಯ ದಿನಗಳಾದ್ದರಿಂದ ಜನ ಏಳುವುದು ತಡವೇ. ‘ಕರಿಮಾಯೀ, ಎಂದು ಮೈಮುರಿದು ಕಣ್ಣು ತಿಕ್ಕುತ್ತ ಹೊರಗೆ ಬಂದರೆ – ರಸ್ತೆಗಳಲ್ಲಿ, ಸಂದಿಗೊಂದಿಗಳಲ್ಲಿ ಬಂದೂಕು ಹಿಡಿದ ಹಿಂಡು ಹಿಂಡು ಪೋಲೀಸರಿದ್ದರು!’ ಧಸ್ ಎಂದು ಎದೆ ಹಿಡಿದುಕೊಂಡು ‘ಕರಿಮಾಯೀ’ ಎಂದವರೇ ಒಳಗೋಡಿ ಬಾಗಿಲಿಕ್ಕಿಕೊಂಡರು. ಇಷ್ಟೊತ್ತಿನಲ್ಲಿ ಊರಲ್ಲಿ ಉರಿಹಚ್ಚಿ ಕಾಸಿಕೊಳ್ಳುವ ಮಕ್ಕಳ ಗಲಾಟೆಯೇನು? ಕೋಳಿಗಳ ಕೂಗಾಟವೇನು, ಹುಡುಗಿಯರು ನೀರು ತರುವ ಸಡಗರವೇನು, ನೋಡುವ ಹುಡುಗರ ಚಡಪಡಿಕೆಯನು, ದೀಡೀ ಮಾತೇನು, ಧಿಮಾಕಿನ ಉತ್ತರಗಳೇನು, ಎಲ್ಲ ಸ್ತಬ್ಧವಾಗಿ ಒಲಗೊಳಗೇ ಪಿಸುಗುಟ್ಟಿ ನಿಟ್ಟುಸಿರಿನಲ್ಲಿ ಮಾತಾಡಿಕೊಂಡರು. ಯಾಕೆಂದು ಯಾರಿಗೂ ತಿಳಿಯದು. ಗೌಡನನ್ನೂ, ಶಿವನಿಂಗನನ್ನೂ ಹಿಡಿಸುವ ಸಲುವಾಗಿ ಗುಡಸೀಕರ ಪೋಲೀಸ್ ಪಾರ್ಟಿ ತಂದಾನೆಂದು ಊಹಿಸಿದರು.

ಇತ್ತ ಗೌಡನ ಮನೆಯನ್ನೂ, ತೋಟವನ್ನೂ, ಪೊಲೀಸರು ಸುತ್ತವರಿದಿದ್ದರು. ಬಾಗಿಲು ತೆರೆದೊಡನೆ ಮನೆ ತಲಾಶ್ ಮಾಡಿದರು. ಅಡಕಲ ಗಡಿಗೆ ಚೆಲ್ಲಿದರು. ಪೇರಿಸಿಟ್ಟ ಧಾನ್ಯದ ಚೀಲ ಚೆಲ್ಲಿದರು. ಅಡ್ಡಬಂದ ಶಿವನಿಂಗನನ್ನು ದೂಕಿ, ಅಟ್ಟದ ಮೇಲಿನ ಹೊಟ್ಟು ಕೆದರಿದರು. ಸುದೈವಕ್ಕೆ ಅಲ್ಲೇ ಇದ್ದ ಪೆಟ್ಟಿಗೆ ತೆರೆಯಲಿಲ್ಲ. ಅದರಲ್ಲಿ ಕರಿಮಾಯಿಯ ಬಂಗಾರದ ಮೂರ್ತಿಯಿತ್ತು. ಮೂಲೆ ಮೂಲೆಯ ಸಾಮಾನು ಚೆಲ್ಲಿ ಚಿಲ್ಲಾಪಿಲ್ಲಿ ದರೋಡೆಯಾದ ಮನೆಮಾಡಿ ಹೊರಗೆ ಹೋಗಿ ಮತ್ತೆ ಕಾವಲು ನಿಂತರು.

ಶಿವನಿಂಗ ತಂದೆಗೆ ಹೇಳಬೇಕೆಂದು ತೋಟಕ್ಕೋಡಿದರೆ ಅಲ್ಲೂ ಅದೇ ಹಾಡು, ಗುಡಿಸಲ ಹೊರಗಿನ ಹೊರಸಿನ ಮೇಲೆ ಪೋಜದಾರ ಕೂತಿದ್ದ. ಕಬ್ಬಿನ ಬೆಳೆ ಹೊಕ್ಕು, ಪೊಲೀಸರು ಹುಡುಕುತ್ತಿದ್ದರು. ಕೈ ಕೈ ಹೊಸೆಯುತ್ತ ಗೌಡ ನಿಂತಿದ್ದ. “ರೂಪಾಯಿ ಪಾಂಚ್ ಹಜಾರ್ ಬಹುಮಾನ ಕೊಡಸ್ತೇನ ಹೇಳ ಗೌಡಾ, ಕೊಳವಿ ಮುದುಕಪ್ಪನ್ನ ಎಲ್ಲಿಟ್ಟೀದಿ?” ಎಂದು ಪೋಜದಾರ ಗದರಿಸುತ್ತಿದ್ದ. “ನಂಗೊತ್ತಿಲ್ಲರೀ” ಎಂದು ಗೌಡ ಹೇಳುತ್ತಿದ್ದ.

ಕಟ್ಟೀ ಫೋಜದಾರನೆಂದರೆ ಆ ಭಾಗದಲ್ಲಿ ಭಾರೀ ಹೆದರಿಕೆಯ ಹೆಸರು. ಆ ಹುದ್ದೆ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಮರಾಯ, ಭಯಂಕರ ಹೆಸರು ಮಾಡಿಕೊಂಡಿದ್ದ. ಚಳುವಳಿಯ ಹದಿನೆಂಟು ಹುಡುಗರ ಕಣ್ಣುಕಿತ್ತು ಮೂವತ್ತಾರು ಕಣ್ಣುಗುಡ್ಡೆಗಳನ್ನು ಗೋಲಿಮಾಡಿ ಇಂಗರೇಜಿಯವರೊಂದಿಗೆ ಆಡಿದ್ದನಂತೆ. ಅವನ  ರೂಪ ಇಂಥ ಕತೆಗಳನ್ನು ಸಮರ್ಥಿಸುವಂತಿತ್ತು. ಕರೀ ಮೈ, ದಟ್ಟ ಮೀಸೆ, ನೆಣಕೊಬ್ಬಿನ ಪೊಗರು,  ತನಗೆ ಎಲ್ಲರೂ ಅಂಜಬೇಕೆಂಬ ಛಲ, ಮೂಗು ದಪ್ಪ; ಮುಖದಲ್ಲಿ ಕರು ಮಲಗಿದಂತೆ. ಆದ್ದರಿಂದ ಆ ಮೂಗಿಗೆ ತುದಿಯಿಂದ ನೋಡಿದರೆ ಉಳಿದವರು ಅಲ್ಪರಾಗಿ ಇಲ್ಲವೇ ಅಸ್ಪಷ್ಟವಾಗಿ ಕಣಿಸುವುದು ಸ್ವಾಭಾವಿಕ. ಇವ ಕಾಲಿಟ್ಟ ಊರುಗಳಲ್ಲಿ ಇವನ ಖ್ಯಾತಿ ಹ್ಯಾಗೆ ಹಬ್ಬಿತ್ತೆಂದರೆ ಅಳುವ ಮಕ್ಕಳಿಗೆ ತಾಯಂದಿರು “ಕಟ್ಟಿ ಪೋಜದಾರನ ಕೈಯಾಗ ಕೊಡ್ತಿನ್ನೋಡ” ಎಂದು ಹೆದರಿಸುತ್ತಿದ್ದರಂತೆ! ಅದು ನಿಜವಿದ್ದೀತು; ಯಾಕೆಂದರೆ ಆ ಕರೀಮುಖದಲ್ಲಿ ಅವರ ಬಾಯಿ, ಕಣ್ಣು ಮಾತ್ರ ರಂಗು ಹೊಡೆದಂತೆ ಅಚ್ಚಕೆಂಪಗಿದ್ದವು. ಹೊಸದಾಗಿ ಫೋಜದಾರನಾಗಿದ್ದನಲ್ಲ, ತನ್ನ ಟೊಪ್ಪಿಗೆಯ ಧೂಳನ್ನು ಮೇಲಿಂದ ಮೇಲೆ ಕೊಡಹುತ್ತಿದ್ದ. ಅಷ್ಟೇ ಅಲ್ಲ – ಕಾಲ್ನಡಿಗೆ, ಹೊರಕಡೆಗೆ ಹೊರಟಾಗೆಲ್ಲ ಆ ಟೊಪ್ಪಿಗೆ ತೆಗೆದು ಒಬ್ಬ ಪೋಲಿಸನ, ಕೈಗಿತ್ತು ಬಕ್ಕದಲೆಯಲ್ಲೇ ಹೋಗುತ್ತಿದ್ದ.

ಗುಡಸೀಕರ ಹಿಂದುಮುಂದಿನ ಕಬರಿಲ್ಲದೆ ಮುದುಕಪ್ಪ ಗೌಡನನ್ನು ಹಿಡಿದುಕೊಡುವ ಸೂಚನೆ ಕೊಟ್ಟೊಡನೆ ಅಕಾ ನನ್ನ ಪ್ರಿಯ ಟೊಪ್ಪಿಗೆಗೆ ಒಂದು ತುರಾಯಿ ಬಂತೆಂದು ಬಂದ. ಇಡೀ ದಿನ ಎಲ್ಲಿಯೂ ಮುದುಕಪ್ಪನ ಪತ್ತೆಯಾಗಲಿಲ್ಲ. ಅವನ ಫೋಟೋ ತೋರಿಸಿ ಇವನನ್ನು ಕಂಡೀರೇನೆಂದು ಅನೇಕರನ್ನು ಕೇಳಲಾಯಿತು. ಬೆದರಿಕೆ ಹಾಕಿ ನೋಡಿದರು. ಬಹುಮಾನದ ಆಸೆ ಹಚ್ಚಿ ನೋಡಿದರು. ಎಲ್ಲರೂ ನಾ ಕಂಡಿಲ್ಲ. ನೀ ಕಂಡಿಲ್ಲ. ಕಂಡವರ ಕಣ್ಣು ಕಳೆಯಲೆಂದು ಕರಿಮಾಯಿಯ ಹೆಸರುಗೊಂಡರು ಕೆಲವರು.

ತನಗೂ, ಫೋಜುದಾರನ ಈ ದಾಳಿಗೂ ಸಂಬಂಧವಿಲ್ಲವೆಂಬಂತೆ ಗುಡಸೀಕರ ನಟಿಸಿದ. ಆದರೆ ಮುಚ್ಚಿಕೊಳ್ಳಲು ಸಾಧ್ಯವಾಗಲಿಲ್ಲ. ಆ ಮಧ್ಯಾಹ್ನ ಪೋಲೀಸರಿಗೆ ಗೌಡನ ಮನೆಯಲ್ಲಿ ಊಟವಾದರೆ ಫೋಜುದಾರನಿಗೆ ಗುಡಸೀಕರನ ಮನೆಯಲ್ಲಿ ವ್ಯವಸ್ಥೆಯಾಯಿತು. ಜನ ಮನಸ್ಸಿನಲ್ಲೇ ಅವನನ್ನು ಶಪಿಸಿದರು. ಕರಮಾಯಿಯ ಮೊರೆಹೊಕ್ಕರು.