ಇಷ್ಟೆಲ್ಲಾ ಹೇಳಿ ದತ್ತಪ್ಪನ ಬಗ್ಗೆ ಮಾತಾಡದಿದ್ದರೆ ಗೌಡನ ಚರಿತ್ರೆಯೇ ಅಪೂರ್ಣವೆನಿಸಬಹುದು. ಗೌಡ, ಕುಲಕರ್ಣಿ ಎಂಬುದರಿಂದಲ್ಲ. ಲೋಕದ ಯಾವದೇ ಅಣ್ಣ ತಮ್ಮಂದಿರ ಜೋಡಿಗಿಂತ ಇವರಿಬ್ಬರ ಸಂಬಂಧ ಹೆಚ್ಚು ಆಳವಾಗಿತ್ತು. ಲಗಮವ್ವನ ಕಥೆಗಳ ‘ರಾಜನ ಮಗ; ಮಂತ್ರಿ ಮಗ’ನಂತೆ ಇಬ್ಬರೂ ಕೂಡಿಯೇ ಬರೆದರು, ಆಡಿದರು; ಬೆಳೆದರು, ಸಾಹಸ ಮಾಡಿದರು, ವಯಸ್ಸಾದ ಮೇಲೆ ಊರುಗಾರಿಕೆಯ ಜವಾಬ್ದಾರಿ ಹೊತ್ತು ನಿಭಾಯಿಸಿದರು.

ನೂರು ಜನ ಗೌಡರ ಆಳ್ವಿಕೆಯಲ್ಲಿಯೇ ಯಾವಾಗಲೋ ದತ್ತಪ್ಪನ ಪೂರ್ವಿಕರು ಕರಿಮಾಯಿಯ ಪೂಜೆ ಮಾಡೋದಕ್ಕೆ ಬಂದು ಶಿವಾಪುರದ ಒಕ್ಕಲಾದರೆಂದೂ ಮುತ್ತಜ್ಜನ ಮಡಿ, ಮೈಲಿಗೆಯನ್ನು ಸಹಿಸದ ಕರಿಮಾಯಿ ಪೂಜಾರಿಕೆಯನ್ನು ಮತ್ತೆ ಶೂದ್ರರಿಗೆ ಕೊಟ್ಟಳೆಂದೂ ಒಂದು ಹಾಡಿದೆ. “ಬ್ರಾಮರಿಂದಲಿ ಪೂಜೆ ಸುದ್ದಾಗೋದಿಲ್ಲೆಂದು! ನಿನ್ನ ಪೂಜಾರಿಕಿ ಸೂದ್ರರಿಗಿ ಕೊಟ್ಟಿ” ಎಂದು. ಆದರೆ ದತ್ತಪ್ಪ ಇದನ್ನೊಪ್ಪುವದಿಲ್ಲ. ಸಾಮಾನ್ಯವಾಗಿ ಶೂದ್ರ ದೇವರುಗಳೆಲ್ಲ ಬ್ರಾಹ್ಮಣ ಪೂಜಾರಿಯನ್ನು ಬೇಡಿದರೆ ಕರಿಮಾಯಿ ಶೂದ್ರರನ್ನೇ ಕೇಳುವದೆಂದರೇನು? “ಹಾಂಗಲ್ಲ ತಗಿ, ಕುಲಕಣ್ಣಿಕೆ ಮಾಡಾಕಂತs ನಮ್ಮ ಪೂರ್ವಿಕರು ಇಲ್ಲಿಗೆ ಬಂದರು. ಹಾಗಂತ ಚಿಂತಾಮಣಿ ಹೇಳೇತಿ” ಎಂದು ಇವನ ಹೇಳಿಕೆ. ಕುಲಕರ್ಣಿಕೆಯ ‘ಜೊತೆಗೆ ಹೊತ್ತಿಗೆ ಹೇಳುವುದು, ವೈದ್ಯ ಮಾಡುವುದು – ಇವು ಆ ಮನೆತನಕ್ಕೆ ಪರಂಪರೆಯಿಂದ ಬಂದಿದೆ.

ಆ ಮನೆತನದ ವಿದ್ಯೆ, ಬುದ್ಧಿ, ವೈದ್ಯ ಇವೆಲ್ಲವನ್ನೂ ಒಳಗೊಂಡ ಒಂದೇ ಒಂದು ಪುಸ್ತಕ ಆ ಮನೆತನದಲ್ಲಿದೆ. ಅದೇ “….ಚಿಂತಾಮಣಿ”, ಅದು ಯಾವುದರ ಚಿಂತಾಮಣಿಯೆಂದ ಅವನಿಗೂ ತಿಳಿಯದು. ಯಾಕೆಂದರೆ ಚಿಂತಾಮಣಿಯೆಂದೇ ಊರಲ್ಲಿ ಅದರ ಖ್ಯಾತಿಯಿತ್ತು. ಗೌಡ ಆಗಾಗ ಸಮಸ್ಯೆ ಉಂಟಾದಾಗ “ಇದಕ್ಕೆ ನಿನ್ನ ಚಿಂತಾಮಣಿ ಏನ ಹೇಳತೈತಿ?” ಎನ್ನುತ್ತಿದ್ದ. ಇವನು ಗಂಭೀರವಾಗಿಯೇ ಅದನ್ನು ಓದುತ್ತಿದ್ದ. ದತ್ತಪ್ಪನ ಓದುವ ಶೈಲಿಯೂ ಅವನದೇ – ಅವನ ಚಿಂತಾಮಣಿಯಂತೆ. ಮೂಗಿನ ತುದಿಗೆ ಕನ್ನಡ ಏರಿಸಿ, ಭಯಭಕ್ತಿಗಳಿಂದ ಚಪ್ಪಾಗಳಿ ಹಾಕಿಕೊಂಡು, ನಮಸ್ಕಾರ ಮಾಡಿ, ಪುಸ್ತಕ ತೆರೆದು ಒಂದೊಂದೇ ಸಾಲು ಓದುತ್ತಿದ್ದ. ಒಂದು ಸಾಲು ಮುಗಿದೊಡನೇ ಅಲ್ಲಿಗೆ ವಾಕ್ಯ ಮುಗಿಯಲಿ, ಬಿಡಲಿ, ಶಬ್ದ ಮುಗಿದಿರಲಿ, ಮುಗಿಯದಿರಲಿ ಕಣ್ಣಮುಚ್ಚಿ ಸುಮ್ಮನೇ ಕೂತು ಆ ಸಾಲಿನ ಅರ್ಥವನ್ನು ಮೊದಲು ತಂತಾನೇ ತಿಳಿದುಕೊಂಡು ಆಮೇಲೆ ಎರಡನೆ ಸಾಲಿಗೆ ಹೋಗುತ್ತಿದ್ದ. ಅದೂ ಎಂಥ ವಿಚಿತ್ರ ಪುಸ್ತಕ ಎಂದರೆ, ಯಾರು ಏನು ಕೇಳಿದರೂ ಅದರಲ್ಲಿ ಬರೋಬ್ಬರಿ ಉತ್ತರ ಸಿಕ್ಕುತ್ತಿತ್ತು. ಅದರಲ್ಲಿಯ ಸಾಲುಗಳಿಂದ ಯಾವಾಗ ಬೇಕೋ ಆವಾಗ ಸಂದರ್ಭಕ್ಕೆ ತಕ್ಕ ಅರ್ಥ ಹಿಂಡುತ್ತಿದ್ದ. ಹೀಗಾಗಿ ಪುಸ್ತಕ ಹಿಡಿದಾಗ ಇವನ ಕೈ ನಡುಗುತ್ತಿತ್ತಲ್ಲ. ಇವನ ಅರ್ಥಕ್ಕೆ ಆ ಚಿಂತಾಮಣಿಯೇ ನಡುಗಿದ ಹಾಗೆ ಕಾಣುತ್ತಿತ್ತು.

ಕನ್ನಡಕ ಹಾಕುತ್ತಿದ್ದನಲ್ಲ, ಅವನ ಕಣ್ಣು ಮಂದವಾಗಿದ್ದವೆಂದು ಇದರರ್ಥವಲ್ಲ. ಅವರಪ್ಪ ಕನ್ನಡಕ ಹಾಕಿಕೊಂಡು ಆ ಪುಸ್ತಕ ಓದುತ್ತಿದ್ದ. ಆದ್ದರಿಂದ ಇವನೂ ಹಾಗೇ ಓದುತ್ತಿದ್ದ ಅಷ್ಟೇ.ಆ ಕನ್ನಡಕ ಅವನಿಗೆ ಅಂಜನದಷ್ಟು ಪ್ರಭಾವಶಾಲಿಯಾಗಿ ಕಂಡಿತು. ಯಾಕೆಂದರೆ ಕನ್ನಡಕ ಹಾಕಿದಾಗ ಪುಸ್ತಕದಲ್ಲಿ ಇಲ್ಲದ ಅರ್ಥಗಳೂ ಅವನಿಗೆ ಕಾಣಿಸುತ್ತಿದ್ದವು.

ಹಾಗಂತ ಓದುಬರಹದಲ್ಲಿ ದತ್ತಪ್ಪ ದಡ್ಡನೆಂದಲ್ಲ. ತಮ್ಮ ಹೌದೆಂಬೋ ಹಂಗಾಮದಲ್ಲಿ ಅವನೊಂದು ಕಾವ್ಯ ಕೂಡ ಮಾಡಿದ್ದ ಸಂಗತಿ ಅನೇಕರಿಗೆ ತಿಳಿದಿಲ್ಲ. ನಾಕನೇ ಇಯತ್ತೆ ಇತಿಹಾಸದಲ್ಲಿ ದಿಲ್ಲಿಯನ್ನಾಳಿದ ಬಾಬರನೆಂಬ ದೊರೆ “ಬಾಬರ ನಾಮಾ” ಎಂಬುದಾಗಿ ಒಂದು ಆತ್ಮಚರಿತ್ರೆ ಬರೆದಿದ್ದ ಸಂಗತಿಯನ್ನು ಓದಿದ್ದ. ಹಾಗೇ ತಾನೂ ಯಾಕೆ ತನ್ನ ಆತ್ಮಕಥೆ ಬರೆಯಬಾರದು? ಎನ್ನಿಸಿತು. ಪಾಪ; ಮೂರು ತಿಂಗಳು, ಹಗಲು ರಾತ್ರಿ ಕೂತು ಭಾಮಿನಿ ಷಟ್ಪದಿಯಲ್ಲಿ ಮುನ್ನೂರು ಪುಟದ ಆತ್ಮಕಥೆ “ದತ್ತಾತ್ರೇಯನಾಮ” ಬರೆದೇಬಿಟ್ಟ! ಅದನ್ನಿನ್ನು ಯಾರಿಗಾದರೂ ಓದಬೇಕಲ್ಲ. ಗೌಡನ ಒಡ್ಡೋಲಗಕ್ಕೆ ತಗೊಂಡು ಹೋದ. ಆಸ್ಥಾನ ಕವಯಿತ್ರಿ ಲಗಮವ್ವನೂ, ಮಹಾಪಂಡಿತ ಪ್ರಶ್ನೋತ್ತರ ಮಾಸ್ತರನೂ ಆಗಲೇ ಆಸೀನರಾಗಿದ್ದರು. ‘ದತ್ತಾತ್ರೇಯನಾಮಾದ’ ಕಥೆ ಹೀಗೆ ಸುರುವಾಗುತ್ತದೆ.

ಶಿವಾಪುರದಲ್ಲಿ ಕಲಿಕಾಲ ಪ್ರವೇಶಿಸಿ, ಭಕ್ತಿ ನಾಶವಾಗಿ ಪಾಪ ಹೆಚ್ಚಾಯಿತು. ಕರಿಮಾಯಿ ಶಿವನ ಬಳಿ ಓಡಿಹೋಗಿ “ ನಿನ್ನ ಅವತಾರ ತೋರಿಸಿ ಪಾಪದಿಂದ ನನ್ನ ಊರನ್ನು ಪಾರುಮಾಡು” ಎಂದು ಮೊರೆಯಿಟ್ಟಳು. ಕೂಡಲೇ ಶಿವ ದತ್ತಾತ್ರೇಯನೆಂಬ ಗಣನನ್ನು ಕರೆದು “ಶಿವಾಪುರದಲ್ಲಿ ಜನಿಸಿ ಭಕ್ತಿಯ ಬೆಳಗಿ ಬಾ” ಎಂದು ಕಳಿಸಿದನಂತೆ. ಅವನೇ ನಮ್ಮ ದತ್ತಪ್ಪನಂತೆ!

ಕಾವ್ಯದ ಸುರವಿಗೇ ಗೌಡ ‘ಹೋ’ ಎಂದು ನಗಲಾರಂಭಿಸಿದ. ಗಲಮವ್ವ ಬಿದ್ದುಬಿದ್ದು ನಕ್ಕಳು. ದತ್ತಪ್ಪನಿಗೆ ಅವಮಾನವಾಯಿತು.

“ಏ ಗೌಡಾ, ನಿನ್ನ ಮಡ್ಡ ತಲೀಗ ಇಂಥಾ ಕಾವ್ಯ ಹೆಂಗ ತಿಳಿದೀತಲೇ” ಅಂದ. ಲಗುಮವ್ವನ ಕಡೆ ತಿರುಗಿ –

“ಇವಳ್ಹೆಂಗ ನಗತಾಳ ನೋಡೋ, ಏ ಹುಚರಂಡೇ, ನಿನ್ನ ಜನ್ಮದಾಗ ಒಂದ ಭಾಮಿನಿ ಷಟ್ಪದಿ ಬರಿಯೇ ಹೌದಂತೀನಿ, ಇಡೀ ಜಗತ್ತಿನ್ಯಾಗ ದೀಡ ಸಾವಿರ ಭಾಮಿನೀ ಷಟ್ಪದಿ ಯಾ ಮಗಾ ಬರದ್ದಾನ ತೋರಿಸಿಕೊಡೇ” ಎಂದು ಹೇಳುತ್ತ,

“ಗೌಡಾ, ನಿನಗೆ ಈ ಹುಚ್ಚರಂಡೀ ಹಾಡಿಗಿಂತ ತನ್ನ – ‘ದತ್ತಾತ್ರೇಯ ನಾಮಾ’ಕಡೇ ಆಯ್ತಲೋ!” ಎಂದು ಹೇಳಿಕೊಳ್ಳುತ್ತ ಅಲ್ಲಿ ನಿಲ್ಲದೇ ತನ್ನ ಕಾವ್ಯ ತಗೊಂಡು ಭರ್ರನೇ ಹೋಗಿಬಿಟ್ಟ. ಪ್ರಶ್ನೋತ್ತರಮಾಸ್ತರನಿಗೆ ಕಾವ್ಯ ಇಷ್ಟವಾಗಿತ್ತು. ಯಾಕೆಂದರೆ ಒಂದೇ ಒಂದು ಭಾಮಿನಿ ಷಟ್ಪದಿ ಹೊಸೆಯುವದು ಎಷ್ಟು ಕಷ್ಟ ಅಂತ ಅವ ಬಲ್ಲ. ಇನ್ನು ದೀಡ ಸಾವಿರ ಷಟ್ಪದಿಗಳೆಂದರೆ! ಆದರೆ ತನ್ನ ಅಭಿಪ್ರಾಯ ಹೇಳುವ ಮೊದಲೇ ದತ್ತಪ್ಪ ಎದ್ದುಹೋಗಿದ್ದ.

ಮುಂದೆ ಎಂಟುದಿನ ದತ್ತಪ್ಪ ಗೌಡನ ಮುಖ ನೋಡಲಿಲ್ಲ. ‘ದತ್ತಾತ್ರೇಯಾಮಾ’ದ ವಿಷಯ ಅಲ್ಲಿಗೆ ಎಲ್ಲರೂ ಮರೆತರು. ಯಾವಾಗಲೋ ಒಮ್ಮೆ ಲಗಮವ್ವ ಕೇಳಿದಾಗ ದತ್ತಪ್ಪ ಕಳೆದುಹೋಯ್ತೆಂದು ಹೇಳಿದ. ಅದು ಹೇಗೆ ಕಳೆದುಹೋಯ್ತೆಂಬ ಬಗೆಗೆ ಲಗುಮವ್ವ ಹೇಳುವದು ಹೀಗೆ:

ಕಾವ್ಯ ವಾಚನದ ಮಾರನೇ ದಿನವೂ ದತ್ತಪ್ಪ ಮತ್ತೆ ಗೌಡನಿಗೆ ದುಂಬಾಲು ಬಿದ್ದನಂತೆ! “ಇದರಾಗ ಅದೇನ ಕಸರೈತಿ ತೋರಿಸಿಕೊಡೋ ಅಂದನಂತೆ, ಗೌಡ “ಬಿಡೋ ದತ್ತೂ ಏನ ಹುಡುಗಾಟ” ಅಂದರೆ,

“ಲೇ ನೀನಲ್ಲೋ ನನ್ನ ಕಾವ್ಯಕ್ಕೆ ಭೇಷ್ ಅನ್ನೋವನು: ಕರಿಮಾಯಿ, ಕರಿಮಾಯಿ! ಬಾ ತೋರಸ್ತೀನಿ”

– ಎಂದವನೇ ಗೌಡನನ್ನು ದರದರ ಎಳೆದುಕೊಂಡು ಕೆರೆಗೆ ಹೋದನಂತೆ. ಮೈಯಲ್ಲಿ ಆವೇಶ ತುಂಬಿದವರಂತೆ ‘ಕರಿಮಾಯೀs’ ಎಂದು ಜೋರಿನಿಂದ ಕೂಗುತ್ತ ಎರಡೂ ಕೈಯಿಂದ ಕಾವ್ಯ ಹಿಡಿದು ಎತ್ತಿ,

“ಕರಿಮಾಯೀ ಈ ಕಾವ್ಯದಾಗ ಸತ್ವ ಇದ್ದರ ಇದನ್ನ ತೇಲಿಸು ಇಲ್ಲಾದರ ಮುಳುಗಸು” ಎಂದವನೇ ಕೆರೆಯಲ್ಲಿ ಕಾವ್ಯ ಬಿಟ್ಟುಬಿಟ್ಟ! ಆಹಾ, ಕರಿಮಾಯಿಯ ಮಹಿಮೆಯೆಂದರೆ ಇದಲ್ಲವೆ? ಕಾವ್ಯ ಮುಳುಗಿಬಿಟ್ಟಿತು!

– ಅಂತೆ. ಹೀಗೆಂದು ಲಗಮವ್ವ ಹೇಳುತ್ತಾಳೆ. ಇದರಲ್ಲಿ ಸುಳ್ಳೆಷ್ಟೋ, ಖರೆಯೆಷ್ಟೋ! ಅಂತೂ ಅಂದಿನಿಂದ ಲಗಮವ್ವನ ಹಾಡು ಹೌಂದು ಎಂದದ್ದಕ್ಕೆಲ್ಲ ಚಿಂತಾಮಣಿ ಅಲ್ಲವೆನ್ನುತ್ತದೆ. ಇಬ್ಬರಿಗೂ ವೈರವಿದೆಯೆಂದು ಇದರರ್ಥವಾಗಬಾರದು. ಅಷ್ಟೇ ಏನು, ಒಳಗೊಳಗೆ ಒಂದು ನಮೂನಿ ಸ್ನೇಹವೇ ಇದೆ. ದತ್ತಪ್ಪನ ಮನೆಯಲ್ಲಿ ಹೊಸ ಉಪ್ಪಿನಕಾಯಿ ಹಾಕಲಿ – ಆ ‘ಹುಚ್ಚರಂಡಿ’ಯನ್ನು ಕರೆಸಿ ಒಂದು ಗಡಿಗಿ  ಉಪ್ಪಿನಕಾಯಿ ಕೊಟ್ಟನೇ: ಹಬ್ಬಹರಿದಿನದ ಅಡಿಗೆಯಾಗಲಿ, ಆ ಹುಚ್ಚರಂಡಿಗೆ ಕರೆ ಹೋಯಿತೇ, ಲಗಮವ್ವನೂ ಅಷ್ಟೇ ಹೋಳಿ ಹಬ್ಬದಲ್ಲಿ “ಅಯ್ ನನ ಹಾರುವಾ” ಎನ್ನುತ್ತಾ ಅವನನ್ನು ಅಟ್ಟಿಸಿಕೊಂಡು ಹೋಗಿ ಬಣ್ಣ ಗೊಜ್ಜುವದು, ಚಂಡಿಕೆ ಮುಟ್ಟಿ ಲಟಿಕೆ ಮುರಿಯುದು ಯಾರಿಗೆ ಗೊತ್ತಿಲ್ಲ? ಹೋಗಲಿ “ಅಯ್ ನನ ಹಾರುವಾ” ಎಂದು ಅವಳೆಂದಾಗ ಅದರ ಶ್ಲೇಷೆಯನ್ನು ಜನಕ್ಕೆ ಹೇಳಿಕೊಡಬೇಕೋ?

ಊರ ಹಿರಿಯರೆಂದರೆ ಇವರೇ – ಗೌಡ, ದತ್ತಪ್ಪ, ಲಗುಮವ್ವ, ಪೂಜಾರಿ, ಬಾಳೂ, ಕಾಸೆಟ್ಟಿ: ಅದರಲ್ಲೂ ಮುಖ್ಯವಾಗಿ ಗೌಡ ದತ್ತಪ್ಪ, ಇವರ ಮೇಲಿನ ವಿಶ್ವಾಸದಿಂದ ಉಳಿದವರು ಹಿರಿತನಕ್ಕೆ ಹಾಜರಿದ್ದರೂ ಸೈ, ಇರದಿದ್ದರೂ ಸೈ – ಇವರು ಹೇಳಿದ್ದಕ್ಕೆ ಸೈಗುಡುತ್ತಿದ್ದರು. ಗೌಡ ವ್ಯವಹಾರ ತಿಳಿದವ. ವಹಿವಾಟು ಬಲ್ಲವ. ಜನಗಳನ್ನು ನಂಬುವವ. ದತ್ತಪ್ಪ ಸಿಡುಕಿನವ. ಸ್ವಲ್ಪ ವಾಚಾಳಿ. ಕವಿಯಾದುದರಿಂದ ವ್ಯಂಗ್ಯವನ್ನು ಬಲ್ಲ. ಜೊತೆಗೆ ಹಾಸ್ಯದ ಸೊಗಸುಗಾರ…. ಹೊರಗೆ ನಗಲಾಗದಿದ್ದರೂ ಒಳಗೆ ನಗುತ್ತಿದ್ದ. ಇನ್ನು ಜನ ಕುಳ್ಳರಲ್ಲ. ಮುಪ್ಪಿಗೂ ಬಾಗಿದವರಲ್ಲ, ಸೊಂಟ ನೆಟ್ಟಗಿರುವ, ಸಮಕರಿದು ವರ್ಣದವರು. ಕಣ್ಣಿನಲ್ಲಿ ನಂಬಿಕೆ, ರಾಡಿತನ ಎರಡೂ ಇರುತ್ತೆ. ಗೌಡ ದತ್ತಪ್ಪನ ಆಳಿಕೆಯಲ್ಲಿ ಅನ್ಯಾಯವಾಯಿತು ಅನ್ನಲಿಲ್ಲ. ಕಾಲ ಬದಲಾಯಿತು, ಅನ್ನಲಿಲ್ಲ ಕಲಿಕಾಲ ಕಾಲಿಟ್ಟಿತು ಅನ್ನಲಿಲ್ಲ – ಹಾಗಿದ್ದರು. ಸೇರು ಇದ್ದಲ್ಲಿ ಸೇರಾಯಿತು. ಒಂದಿದ್ದಲ್ಲಿ ನೂರಾಯಿತು. ಸಾವಿರವಾಯಿತು. ಊರು ಎಷ್ಟು ಸಮೃದ್ಧಿವಾಗಿ ಬೆಳೆಯಿತೆಂದರೆ – ಜನಸಂಖ್ಯೆ ಜಾಸ್ತಿಯಾಗಿ ನಿಮ್ಮ ಊರಿಗೊಂದು ಗ್ರಾಮಪಂಚಾಯಿತಿ ಮಾಡಿಕೊಳ್ಳಿರೆಂದು ಸರ್ಕಾರದಿಂದ ಕಾಗದ ಬಂತು.