ಮಾರನೇ ದಿನ ಮಂಗಳವಾರ ಮುಂಜಾನೆ ದೇವರೇಸಿ ಗುಡಿಗೆ ಹೋಗಿ ಪೂಜೆ ಮಾಡುತ್ತಿದ್ದ. ದೇವಿಯ ಮೈಮೇಲಿನ ಆಭರಣ ಕಳಚಿ ಮಜ್ಜನ ಮಾಡಿಸಿದ, ಮುಡಿಯುಡಿಸಿದ, ಮತ್ತೆ ತೊಡಿಸಬೇಕೆಂದು ನೋಡಿದರೆ ಆಭರಣಗಳೇ ಇರಲಿಲ್ಲ. ಅಲ್ಲಲ್ಲಿ ಹುಡುಕಾಡಿದ. ಮೊದಲು ಇದ್ದುವೆ? ಇಲ್ಲವೆ? ಎಂದು ನೆನಪು ಮಾಡಿಕೊಂಡ. ಇದ್ದವು. ಮಾತ್ರವಲ್ಲ, ಅವನ್ನು ಕಳಚಿಟ್ಟ ಸ್ಥಳವೂ ನೆನಪಿತ್ತು. ಆದರೆ ಆ ಸ್ಥಳದಲ್ಲಿ ಅವಿರಲಿಲ್ಲ. ಇರಲಾರದೆಂದು ಊಡಿಸಿದ ಸೀರಬಿಚ್ಚಿ ಜಾಡಿಸಿ ಹುಡುಕಿದ. ಸಿಕ್ಕಲಿಲ್ಲ. ಮತ್ತೆ ಉಡಿಸಿ ಮೂರ್ತಿಯ ಹಿಂದೆ ಮುಂದೆ ಹುಡುಕಿದ. ತನ್ನ ಧೋತ್ರದಲ್ಲಿರಬಹುದೇ ಎಂದು ಜಾಡಿಸಿಕೊಂಡ. ಯಾಕೆಂದರೆ ದೇವಿಯ ಸುತ್ತ ಕೆಲವು ಕಿಲಾಡಿ ಭೂತಗಳಿರುತ್ತವಲ್ಲ, ಅವು ಒಮ್ಮೊಮ್ಮೆ ಏನೇನೋ ಮಾಡಬಹುದು. ತನ್ನ ಧೋತರ ಕಚ್ಚಿ ಬಿಚ್ಚಿ ಹುಡುಕುತ್ತಿರುವಾಗ ಯಾರೋ ಕುಲು ಕುಲು ನಕ್ಕಂತಾಯಿತು. ತಿರುಗಿ ನೋಡಿದರೆ ಸುಂದರಿ! ಭೂತವೇ ಇವಳ ರೂಪದಲ್ಲಿ ಬಂದಿದೆಯೋ ಎಂದುಕೊಂಡು ಕೂಡಲೇ ತಾಯಿಯ ಚೌರಿ ಹಿಡಿದ. ಈ ಭೂತ ಮಾಯವಾಗಲಿಲ್ಲ. ಇನ್ನೂ ನಗುತ್ತಿದ್ದಳು. ಸದ್ಯ ಅವಳೇ ಬಾಯಿಬಿಟ್ಟು ಮಾತಾಡಿದಳು. “ನನಗ ಈ ಸರ ಹೆಂಗ ಕಾಣತೈತಿ” ಸರದಲ್ಲಿ ಎಣಿಸಿದರೆ ಹೆಬ್ಬೆರಳು ಗಾತ್ರದ ಇಪ್ಪತ್ತೊಂದು ಕವಡೆಗಳಿದ್ದವು. ಅದು ಅಲಂಕಾರಕ್ಕಾಗಿ ಹಾಕಿದ ಸರವಲ್ಲ. ದೇವಿ ಇಷ್ಟಪಟ್ಟಿದ್ದರೆ ಅಂಥ ಬಂಗಾರದ ಸರವನ್ನೆ ಊರಿನ ಜನ ಹಾಕಬಹುದಿತ್ತು. ಅವಳ ತೂಕದ ಬಂಗಾರದ ಮುಖ ಮಾಡಿಸಿಕೊಟ್ಟವರಿಗೆ ಒಂದು ಸರ ಮಾಡಿಸುವುದೇನು ದೊಡ್ಡದಲ್ಲ. ತಾಯಿ ದೇವತೆಗಳಿಗೆ ಹೆದರಿ ತನ್ನ ಇಪ್ಪತ್ತೊಂದು ಜನ ಮಕ್ಕಳನ್ನು ಸಂಜೆಯವರೆಗೆ ಆಡಬಿಟ್ಟು ಸೂರ್ಯಾಸ್ತಮವಾದೊಡನೆ ಅವರನ್ನು  ಕವಡೆಗಳಾಗಿ ಮಾರ್ಪಡಿಸಿ ಸರ ಮಾಡಿ ಕೊರಳಲ್ಲಿ ಧರಿಸುತ್ತಿದ್ದಳು! ಆ ಕವಡೆಗಳ ಸರವಿದು! ಪೂಜೆ ಮಾಡುವಾಗ ತಾಯಿಗೆ ಮಜ್ಜನ ಮಾಡಿಸಿದಂತೆ ಈ ಕವಡೆ ಸರವನ್ನೂ ಒಂದು ಸಲ ನೀರಿನಲ್ಲದ್ದಿ ಮತ್ತೆ ತೊಡಿಸುವ ಕ್ರಮವಿದೆ.

ಸುಂದರಿಗೆ ಇದೆಲ್ಲ ಯಾವ ಲೆಕ್ಕ? ದೇವರೇಸಿ ಗಡಬಡಿಸಿ ದೇವಿಯ ಹಿಂದೋಡಿ ಒದ್ದೆ ಧೋತ್ರ ಸುತ್ತಿಕೊಳ್ಳುತ್ತಿದ್ದ. ಅಷ್ಟರಲ್ಲಿ ದೂರದಿಂದ ದತ್ತಪ್ಪ ಬರುತ್ತಿರುವುದು ಕಾಣಿಸಿತು. ದೇವರೇಸಿಗೆ ಏನು ಮಾಡಬೇಕೆಂದು ತೋಚದಾಯಿತು. ದತ್ತಪ್ಪನು ಮೊದಲೇ ತೀಕ್ಷ್ಣ ಬುದ್ಧಿ. ದೇವಿಗೆ ನಮಸ್ಕರಿಸುವಾಗ ಕತ್ತಿನಲ್ಲಿ ಸರ ಇಲ್ಲದ್ದು ಕಂಡರೆ, ಕಂಡು ಸರ ಎಲ್ಲಿ ಎಂದು ಕೇಳಿದರೆ, ಏನು ಹೇಳುವುದು? ಹೊರಗೆ ಗುಡಿಯನ್ನು ಬಲಗೊಳ್ಳುತ್ತಿದ್ದ ದತ್ತಪ್ಪನಿಗೆ ಕಾಣದಂತೆ ಅವಳ ಹತ್ತಿರ ಹೋಗಿ ಸರ ಕೊಡುವಂತೆ ಕೈಸನ್ನೆಯಿಂದಲೇ ಕೇಳಿದ. ಇವಳೂ ಕೈಸನ್ನೆಯಿಂದಲೇ ಕೊಡುವುದಿಲ್ಲವೆಂದು ಹೇಳುವಷ್ಟರಲ್ಲಿ ದತ್ತಪ್ಪ ಒಳಬಂದ. ದೇವರೇಸಿ ಹಾಗೇ ಅವಳ ಬಾಯಿಮುಚ್ಚಿ ಕುರಿಮರಿಯಂತೆ ಅವಳನ್ನು ಹಿಡಿದುಕೊಂಡು, ದೇವಿಯ ಮರದ ಮೂರ್ತಿಯ ಕೆಳಗಡೆ ಡೊಗ್ಗಿ ಅಡಗಿದ. ದತ್ತಪ್ಪನಿಗೆ ಇದ್ಯಾವುದೂ ತಿಳಿಯಲಿಲ್ಲ. ತಾನು ತಂದ ಹೂಗಳನ್ನು ದೇವಿಯ ಮೇಲೆ ಚೆಲ್ಲಿ ಅಡ್ಡಬಿದ್ದು ಹೊರಟುಹೋದ.

ಅವ ದೂರ ಹೋದ ಎಂದು ಖಾತ್ರಿಯಾದ ಮೇಲೆ ದೇವರೇಸಿ ಎದ್ದು “ಛೇ, ಎಷ್ಟು ಹೆದರ‍್ಸಿದಿ. ಕೊಡ ಕೊಡ ಸರ ಕೊಡು” ಅಂದ. ಇಂಥ ಚೇಷ್ಟೆಯನ್ನು ದೇವರೇಸಿಯೇನು,  ಆ ಊರಿನ ಯಾರೂ  ಸಹಿಸುವುದು ಸಾಧ್ಯವಿಲ್ಲ. ದೇವರೇಸಿಗೆ ಸಿಟ್ಟುಬಂತು. “ಕೊಡ್ಡೀಯೋ….” ಎಂದು ಅನ್ನುವಷ್ಟರಲ್ಲಿ ಯಾವುದೋ ಮಾಯೆಯಿಂದ ಬಸವರಾಜು ಹಾಜರಾದ. ಸುಂದರಿ ಮುಸಿ ಮುಸಿ ನಗುತ್ತ “ಕೊಡೋದಿಲ್ಲ” ಎಂದು ಹೇಳಿ ಇವನ ಹಿಂದಿನ ಜಡೆ ಎತ್ತಿ ಬೆನ್ನಿಗೆ ಅಪ್ಪಳಿಸಿ ಓಡಿಹೋದಳು. ಬಸವರಾಜ ಬಂದ ಹಾಗೇ ಮಾಯವಾದ.

ದೇವರೇಸಿಗೆ ಆಕಾಶವೇ ಕಳಚಿ ತಲೆಮೇಲೆ ಬಿದ್ದ ಹಾಗಾಯಿತು. ಇದೇನಿದು? ಬೆಂಕಿ ಕೆಂಡದಂಥ ದೇವಿಯ ಜೊತೆಗೆ ಚೇಷ್ಟೆಯೇ? ಓಡಿ ಬೆನ್ನುಹತ್ತಿ ಹೋಗಿ ಸರ ಕಸಿದು ತರುವುದು ತರವಲ್ಲ ಎಂದುಕೊಂಡ. ಗಡಿಬಿಡಿಯಿಂದ ಪೂಜೆ ಮಾಡಿದ. ಕತ್ತು ಕಾಣದ ಹಾಗೆ ತಾಯಿಗೆ ಸೀರೆ ಸುತ್ತಿದ. ಎವ್ವಾ ಎಂದು ಅಡ್ಡಬಿದ್ದ. ಕಣ್ಣಲ್ಲಿ ದಳ ದಳ ಕಣ್ಣೀರು ಹರಿಯಿತು. ತಪ್ಪಾಯಿತೆಂದು ಗಲ್ಲ ಬಡಕೊಂಡ. ಕಿವಿಗೆ ಹರಳು ಹಚ್ಚಿಕೊಂಡ. ಸರ ಸಿಕ್ಕಮೇಲೆ ಇವರ ಮುಖ ನೋಡುವುದಿಲ್ಲವೆಂದು ಆಣೇ ಪ್ರಮಾಣ ಮಾಡಿಕೊಂಡ. ಮತ್ತೆ ಮತ್ತೆ ಅಡ್ಡಬಿದ್ದ. ಅವನ ಉರಸಿರಗೋ, ಗಾಳಿಗೋ ಹಚ್ಚಿಟ್ಟ ದೀಪ ಆರಿತು. ಜೀವ ಗಕ್ಕನೆ ಗಂಟಲಿಗೆ ಬಂದು ಹಾದಂತಾಗಿ “ಅಯ್ಯೋ, ಎವ್ವಾ” ಎಂದು  ಕುಕ್ಕರಿಸಿದ. ಬಯಿ ಒಣಗಿತು. ಕೈಕಾಲಲ್ಲಿಯ ಶಕ್ತಿ  ಉಡುಗಿಹೋಯ್ತು. ತಡವರಿಸಿಕೊಂಡು ಎದ್ದು ಮತ್ತೆ ದೀಪಹಚ್ಚಿ ತನ್ನ ಗುಡಿಸಲಿಗೆ ನಡೆದ.

ಕಂಬಳಿ ಹಾಸಿದವನೇ ದೊಪ್ಪನೇ ಬಿದ್ದ. ಎವ್ವಾ ಎನ್ನುತ್ತಾ ಹೊರಳಾಡಿ ಮುಳು ಮುಳು ಅತ್ತ. ನಾಕು ತಾಸು ಹೊತ್ತೇರಿ ಜ್ವರ ಬಂದು, ಕರಿಮೈ ಕಾದ ಹಂಚಿನಂತೆ ಸುಡುತ್ತಿತ್ತು. ಅತ್ತು ಅತ್ತು ಕಣ್ಣು ಕೆಂಪಗೆ ಕಾದಿದ್ದವು. ಅಂಥ ಜ್ವರದಲ್ಲಿ ಎದ್ದು ಬಸವರಾಜೂನ ಗುಡಿಸಲಿಗೆ ಹೋಗಿ ಬಂದ. ಬಸವರಾಜೂ ಇದ್ದ. ಸುಂದರಿ ಇಲ್ಲವೆಂದೂ ಗುಡಸೀಕರನ ಹೊಲಕ್ಕೆ ಹೋಗಿರುವಳೆಂದೂ, ರಾತ್ರಿ ಬರವಳೆಂದೂ, ಹೇಳಿದ. ಹೊಲಕ್ಕೆ ಹೋಗಿ ಕೇಳುವಂತಿರಲಿಲ್ಲ. ಜನಕ್ಕೆ ಗೊತ್ತಾದರೆ ಕಷ್ಟ. ಈ ಮಧ್ಯೆ ಯಾರು ಯಾವಾಗ ಗುಡಿಯ ಕಡೆ ಹೋಗಿ ತಾಯಿಯ ಕತ್ತಿನಲ್ಲಿ ಸರ ಇಲ್ಲದ್ದನ್ನು ಪತ್ತೆ ಹಚ್ಚುತ್ತಾರೋ ಎಂಬ ಭಯ. ಜ್ವರದಿಂದ ತಲೆ ಸಿಡಿಯತೊಡಗಿತ್ತು. ದೇವಿಯ ಮುಂದಿನ ದೀಪವಾರಿತ್ತು. ತಾನಿಂದು ಸಾಯುವುದೇ ಖಾತ್ರಿ ಎಂದುಕೊಂಡ. ಒಳ್ಳೆಯದೇ, ತನ್ನ ಮೇಲೆ ಹರಲಿ ಬರುವುದಿಲ್ಲ. ಅನ್ಯಾಯವಾಯಿತೇನೋ ಹಿಡಿದು ಸುಂದರಿಯ ಕೆನ್ನೆಗೆರಡು ಬಿಟ್ಟು ಸರ ಕಸಿಯಬೇಕಾಗಿತ್ತು. ಅವರಲ್ಲಿ ಹೆಂಡ ಖಂಡ ತಿಂದದ್ದು ಹೇಲುಚ್ಚಿ ತಿಂದಂತಾಯಿತೆಂದು ಪಶ್ಚಾತ್ತಾಪಪಟ್ಟ. ಈಗ ಬಂದಿದ್ದಾಳೆಂದು ಮಧ್ಯಾಹ್ನ ಇನ್ನೊಮ್ಮೆ ಅವರ ಗುಡಿಸಲಿಗೆ ಹೋದ. ಈಗಲೂ ಬಸವರಾಜ ಇಲ್ಲವೆಂದ. ದೇವರೇಸಿ ಹಾಹೂ ಎನ್ನದೆ ತಿರುಗಿದ. ಹತ್ತು ಹೆಜ್ಜೆ ನಡೆಯುವಷ್ಟರಲ್ಲಿ ತಲೆ ತಿರುಗಿದಂತಾಯಿತು. ಊಟವಿಲ್ಲ, ಬಿಸಿಲು, ಮಾನಸಿಕ ಯಾತನೆ ಬೇರೆ, ಬಂದವನೇ ತನ್ನ ಗುಡಿಸಲ ಮುಂದೆ ಕುತುಕೊಂಡು ವಾಂತಿ ಮಾಡಿಕೊಂಡ. ಕೊನೆಯಲ್ಲಿ ಒಂದಿಷ್ಟು ರಕ್ತ ಬಿತ್ತು. ತಾಯಿ ರಕ್ತ ಕಾರಿಸುತ್ತಿದ್ದಾಳೆ ಎಂದುಕೊಂಡ. ಒಳಗೆ ಹೋಗಿ ತಾಯಿಗೆ ನಮಸ್ಕರಿಸುವಂತೆ ಬೆನ್ನು ಮೇಲಾಗಿ ಹಾಗೇ ಬಿದ್ದುಕೊಂಡ.