ಗುಡಸೀಕರ ತಲೆಯಲ್ಲಿ ಕಾರ ಹುಣ್ಣಿವೆ, ಚಹದಂಗಡಿಯ ಹುಳ ಕೊರೆಯುತ್ತಿದ್ದರೆ ಇತ್ತ ಆತ ಕೊಟ್ಟ ಒಂದು ರೂಪಾಯಿಯ ನೋಟು ದುರ್ಗಿಯ ಎಳೆಯ ಎದೆಯನ್ನು ಕೊರೆಯುತ್ತಿತ್ತು.

ಗುಡಸೀಕರ ಕೊಟ್ಟ ಹತ್ತರಲ್ಲಿ ಕೊನಗೆ ಒಂದು ರೂಪಾಯಿ ಅದೂ ನಿಂಗೂನ ದಯದಿಂದ ದುರ್ಗಿಗೆ ದಕ್ಕಿತ್ತು. ಅದನ್ನು ಮಲಿಕಟ್ಟಿಗೆ ಸೇರಿಸಿದೊಡನೆ ಹೊಸ ಪ್ರಾಯಕ್ಕಿಂತ ಈ ನೋಟಿನ ಭಾರವೇ ಹೆಚ್ಚಾಗಿ ಎದೆ ಬಿಗಿಯಿತು. ಹುಚ್ಚು ಹುಡುಗಿ ಗಾಳಿ ತುಂಬಿದ ಎಳೆಗರವಿನಂತೆ ಒಳಗೊಮ್ಮೆ ಹೊರಗೊಮ್ಮೆ ವಿನಾಕಾರಣ ಅಡ್ಡಾಡಿದಳು. ಈಗಷ್ಟೆ ರೆಕ್ಕೆ ಮೂಡಿದ ಇಟ್ಟೆ ಅಕಾ ಅಲ್ಲಿ, ಇಕಾ ಇಲ್ಲಿ ಎಲೆ ಎಲೆಗೆ ಹೂ ಹೂವಿಗೆ ಮೇಲಕ್ಕೆ ಕೆಳಕ್ಕೆ ಹಾರಾಡುವಂತೆ ನೆಲಕ್ಕೆ ಕಾಲೂರದೆ ಹರಿದಾಡಿದಳು. ಲಗಮವ್ವನ ಕಣ್ಣು ತಪ್ಪಿಸಿ, ಕತ್ತಲಲ್ಲಿ ಕೈಹಾಕಿ ಹಾಕಿ ನೋಟು ಮುಟ್ಟಿ ಮುಟ್ಟಿ ನೋಡಿದಳು. ಅಯ್ ಶಿವನ; ಮೈ ಬಿಸಿಯೇರಿ ಅಂಗಾಲಿನಿಂದ ನೆತ್ತಿಯ ತನಕ ವಿಷ ಏರಿ, ತೊಡೆಬೆವರಿ, ಎದೆಕುಪ್ಪಸ ತಿಟ ತಿಟ ಎನ್ನುತ್ತಿತ್ತು.

ಲಗಮವ್ವ ಊಟಕ್ಕೆ ಕರೆದರೆ ಬರೀ ಊಟದ ಅಭಿನಯ ಮಾಡಿ ಮಲಗಿದಳು. ಬಿಗಿದ ನರನರಗಳನ್ನು ಜಗ್ಗಿಜಗ್ಗಿ ಸಡಿಲು ಮಾಡಲೆಂಬಂತೆ ಒಡಮುರಿದು ಹಾಸಿಗೆಯ ತುಂಬ ತೋಳು ಕಾಲುಗಳನ್ನು ಉದ್ದುದ್ದಕ್ಕೆ ಚಾಚಿ ಆಕಳಿಸಿದಳು. ಈಜು ಬಾರದ ಪಾಪ; ಎಳೇ ಹುಡುಗಿ, ಬಿಸಿ ನೀರ ಹೊಳೆಯ ಮಹಾಪೂರದ ತಿರುಗಣಿಯ ಇಕ್ಕಟ್ಟಿನಲ್ಲಿ ಸಿಕ್ಕು ವಿಲಿವಿಲಿ ಒದ್ದಾಡಿದಳು. ಹಾಸಿಗೆಯಲ್ಲಿ ಅರಿಯದ ಬಾಲಿ, ಬೆನ್ನು ಮೇಲಾಗಿ ಬಿದ್ದಕೊಂಡು, ನಾಕೈದು ಸಲ ಎದೆಯಿಂದ ತಲೆದಿಂಬು ಗುಮ್ಮಿ ಗುಮ್ಮಿ ಎದೆಯ ಘನ ಕರಗಿಸಲೆಳಸಿದಳು. ಹಗುರಾದಂತಾಗಿ ಹಾಗೇ ಬಿದ್ದುಕೊಂಡಳು. ನಿದ್ದೆಯಲ್ಲೊಂದು ಕನಸುಕಂಡಳು:

ಬೆಳದಿಂಗಳ ಮಾಯೆ ಆವರಿಸಿ ಊರಂತೂರು ತೇಲುಗಣ್ಣು, ಮೇಲುಗಣ್ಣಾಗಿ ನಿದ್ರಿಸುತ್ತಿದ್ದಾಗ ಇವಳೊಬ್ಬಳೇ ಕಿಲಕಿಲ ನಗುತ್ತ ಕೆರೆಯ ದಂಡೆಯ ಬಂಡೆಗಳ ಮೇಲೆ ಥೈ ಥೈ ಥೈ ಗೆಜ್ಜೆಯ ಹೆಜ್ಜೆಯೂರಿ ಓಡಾಡುತ್ತಿರುವಾಗ ಗುಡಸೀಕರ ಬಂದು ಇವಳನ್ನು ಅಮಾತ ಎತ್ತಿ ಗೊಂಬೆಯಂತೆ ಮೇಲೆ ಹಾರಿಸಿ ಆಕಾಶದಲ್ಲಿ ಬಿಟ್ಟೊಡನೆ –

ಹೋ ಬಿದ್ದೆನೆಂಬಾಗ ಕೆಳಕ್ಕೆ ಹುಲ್ಲಿನ ಬಣಿವೆ –
ಧಪ್ಪೆಂದು ಅಂಗಾತ ಬಿದ್ದು ಎದೆ ಹೊಮ್ಮಿ ಕುಪ್ಪಸ ಹರಿದು
ಖೊಖ್ಖೋಖ್ಖ್ ಎಂದು ಬಯಲಾಟದ ರಾವಣನಂತೆ ನಗುತ್ತ ಸಿಗರೇಟು ಸೇದಿ
ಬಿಳಿಹೊಗೆ ಬಣಿವೆ ಸೇರಿ, ನೂರ್ಮಡಿಯಾಗಿ
ಬಣಿವೆ ತುಂಬ ಹೊಗೆಯಾಗಿ
ಊರ ತುಂಬಾಗಿ
ತನ್ನ ಮೈಮೇಲೆ ಯಾರೋ ಪಸಪಸ ತುಳಿಯುತ್ತ
ಚೆಂಡಾಟವಾಡುವಾಗ – ಎವ್ವಾ ಸತ್ತನೇ ಎಂದು
ಚೀರಿ –

– ಎಚ್ಚರಾಯ್ತು. ಎದೆ ಹಿಡಿದುಕೊಂಡು ಮೇಲೆದ್ದು ಕೂತಳು. ಕೆನ್ನೆ, ಕತ್ತಿನ ಮೇಲೆ, ಹಣೆ ಮೂಗಿನ ಮೇಲೆ ಮೂಡಿದ ಬೆವರನ್ನು ಒರೆಸಿಕೊಂಡಳು. ಹೋಗಿ ನೀರು ಕುಡಿದು ಬಂದಳು. ಪಕ್ಕದ ಗುಡಿಸಲಲ್ಲಿ ದೇವರೇಸಿ ಬಿಕ್ಕುತ್ತಿದ್ದುದು ಕೇಳಿಸಿತು.