ನಾಯೆಲ್ಯಾ ಬಲು ಮೋಜಿನವ. ಊರಿನಲ್ಲಿ ಅನೇಕ ವಿಕರಮಗಳ ಖ್ಯಾತಿಯಿದ್ದವ. ನಾಯೆಲ್ಯಾ, ಅಂಗೀಯೆಲ್ಯಾ ಎಂದು ಜನರೂಢಿಯಲ್ಲಿ ಜೋಡು ಹೆಡರಿದ್ದವನೆಂದರೆ ಇಡೀ ಊರಿನಲ್ಲಿ ಇವನೊಬ್ಬನೇ. ಜೀವಂತವಾಗಿದ್ದಾಗಲೇ ಗಾದೆ ಮಾತಾದವರು ಇಡೀ ಊರಿನಲ್ಲಿ ಇವನೊಬ್ಬನೇ. ಜೀವಂತವಾಗಿದ್ದಾಗಲೆ ಗಾದೆ ಮಾತಾದವರು ಇಡೀ ಊರಿನಲ್ಲಿ ನಿಂಗೂ ಮತ್ತು ನಾಯೆಲ್ಯಾ ಇಬ್ಬರೇ: “ನಾಯೆಲ್ಯಾಗ ಅಂಗೀ ಋಣ ಇಲ್ಲ, ನಿಂಗೂಗ ಹೇಂತಿ ಋಣ ಇಲ್ಲ”; ಯಾವುದಕ್ಕೂ ಋಣ ಬೇಕೆನ್ನುವ ಸಂದರ್ಭದಲ್ಲಿ ಜನ ಖಂಡಿತ ಈ ಗಾದೆ ಬಳಸುತ್ತಾರೆ. ಕುಡಿತಕ್ಕೆ ನಾಯೆಲ್ಯಾನನ್ನು ಬಿಟ್ಟರೆ ಇನ್ನಿಲ್ಲ.

ನಾಯೆಲ್ಯಾನ ಮೂಲ ಹೆಸರು ಮುನಿಯೆಲ್ಯಾ ಎಂದು. ಚಿಕ್ಕಂದಿನಿಂದ ಗೌಡನ ಮನೆಯಲ್ಲೇ ಚಾಕರಿ ಇದ್ದ. ಸ್ವಂತ ಗುಸಿಸಲಿದೆ, ಜಮೀನೂ ಇದೆ, ಒಂದೆಕರೆ ಹಿಂದೆ ಮೂರೆಕರೆ ಇದ್ದದ್ದು, ಇವನು ಕುಡಿದು ಅದೂ ಒಂದೆಕರೆ ಹಾಳು ಮಾಡಿಕೊಂಡಾನೆಂದು ಗೌಡ ಅದನ್ನು ತಾನೆ ಮಾಡತ್ತ ಅವನನ್ನು ಆಳಾಗಿ ನೇಮಿಸಿಕೊಂಡು ಆ ಕುಟುಂಬಕ್ಕೆ ಬೇಕಾದ ಕಾಳು ಕಡಿ ಪೂರೈಸುತ್ತಾನೆ. ಅದರಲ್ಲೆನು ಮೋಸವಿಲ್ಲ.

ನಾಯಕರ ಹುಡುಗರು ಬೇಟೆಗಾಗಿ ಪಳಗಿಸಿದ ಒಂದೆರಡನ್ನು ಬಿಟ್ಟರೆ ಶಿವಾಪುರದಲ್ಲಿ ನಾಯಿ ಸಾಕುವುದೇ ಗೊತ್ತಿಲ್ಲ. ಹಾಗಂತ ಬೀದಿ ನಾಯಿಗಳಿಗೇನೂ  ಆ ಊರಿನಲ್ಲಿ ಕೊರತೆಯಿಲ್ಲ. ಓಣಿಗೊಂದೊಂದು ಹಿಂಡಿಗೆ ಹಿಂಡೇ ಇದೆ. ಆ ನಾಯಿಗಳು ಎಲ್ಲರ ಮನೆ ಮುಂದೆ ಹೋಗಿ ಬಾಲ ಅಲ್ಲಾಡಿಸುತ್ತವೆ. ಧರ್ಮಾತ್ಮರು ಚೂರು ಪಾರು ರೊಟ್ಟಿ ಎಸೆಯುತ್ತಾರೆ. ಹೀಗಾಗಿ ಅವುಗಳಿಗೆ “ದೈವಾಚಾರೀ ನಾಯಿ”ಗಳೆಂಬ ಪ್ರತ್ಯೇಕ ನಾಮಕರಣವೇ ಇದೆ. ಅವುಗಳ ಮುಖ್ಯ ಕೆಲಸವೆಂದರೆ ರಾತ್ರಿ ಒದರುವುದು; ಅದಿಲ್ಲಾ ಊಳಿಡುವುದು. ಯಾವುದೇ ಓಣಿಯ ಯಾವುದೇ ನಾಯಿ, ಯಾವುದೋ ಕಾರಣಕ್ಕೆ ಸ್ವಲ್ಪ ಒದರಿದರೆ ಸಾಕು, ಊರಿನ ಉಳಿದ ನಾಯಿಗಳೆಲ್ಲ ಒಂದೆ ಸಮ, ಬಿಟ್ಟೂ ಬಿಡದೆ ಒದರಲಾರಂಭಿಸುತ್ತವೆ. ಒದರುವುದಕ್ಕೆ ಕಾರಣವಿರಲೇಬೇಕೆಂಬ ನಿಯಮವೂ ಅವಕ್ಕಿಲ್ಲ, ಹುಟ್ಟಿದ್ದೇ ಒದರುವುದಕ್ಕೆ. ಊರವರಿಗೂ ಇದು ಗೊತ್ತು. ಸಂಭಾಷಣೆಗಳಲ್ಲಿ ಅವುಗಳ ದೃಷ್ಟಾಂತ ಕೊಡುವುದುಂಟು. ಯಾಕೋ ದೈವಚಾರೀ ನಾಯಿ ಹಾಂಗ ಒದರತಿ? ಎಂದೋ ವಾಚಾಳಿಗೆ  ಅವ ಬಿಡಪಾ ದೈವಾಚಾರಿ ನಾಯಿ ಎಂದೋ, ಅವ ಸೈ – ದೈವಾಚಾರಿ ನಾಯಿ ಸೈ ಎಂದೋ ಹೇಳುವುದುಂಟು.

ಆ ಆನಾಮಿಕ ನಾಯಿಗಳಲ್ಲಿ ಒಂದು ಕರಿಯನಾಯಿ ಇತ್ತು. ಅದೇನು ವರ್ಣಸಾದೃಶ್ಯವೋ, ಸ್ವಭಾವಸಾದೃಶ್ಯವೋ, ಕರ್ಮಧರ್ಮ ಸಂಯೋಗವೋ ಮುನಿಯೆಲ್ಲ್ಯಾನನ್ನು ಕಂಡರೆ ಅದಕ್ಕೆ ವಿಪರೀತ ನಿಷ್ಠೆ. ಅನವಿನ್ನೂ ಅಷ್ಟು ದೂರದಲ್ಲ ಬರುತ್ತಿದದಾನೆಂದರೆ ಇಲ್ಲಿ ನಿಂತ ಅದು ಚಂಗನೆ ಹಾರಿ, ಓಡಿಹೋಗಿ, ಬಾಲ ಅಲುಗಿಸುತ್ತ ಪಾದ ಬಳಸಿ, ನೆಕ್ಕಿ ಕುಂಯ್, ಕುಂಯ್, ಕುಂಯ್ ಒರಲುತ್ತ ಅವನ ಮನೆತನಕ ಬೆನ್ನು ಹತ್ತುತ್ತಿತ್ತು. ಒಂದೆರಡು ಬಾರಿ ಉಂಡಾದ ಮೇಲೆ ಒಂದೋ ಎರಡೋ ಮೂಳೆ ಚೆಲ್ಲಿದ್ದನೋ ಇಲ್ಲವೋ, ಆ ಪ್ರಾಣಿ ಇವನನ್ನು ಜೀವಕ್ಕೇ ಅಂಟಿಸಿಕೊಂಡಿತ್ತು. ಇವನಂತೂ ಅದು ಹಿಂದಿನ ಜನ್ಮದಲ್ಲಿ ತನಗೆ ತಮ್ಮನೋ, ಮಗನೋ ಆಗಿದ್ದಿತೆಂದೇ ನಂಬಿದ. ಹಾಗಂತ ಮಂದಿಯ ಮುಂದೆ ಕುಡಿದಾಗಮ ಕುಡೀದಿದ್ದಾಗ ಕೂಡ ಆಡಿಯೂ ಆಡಿದ. ಅದು ಬಾಲವಲ್ಲಡಿಸಿ ತನ್ನ ನಿಷ್ಠೆ ಪ್ರದರ್ಶಿಸಿದಾಗೆಲ್ಲ ಇವನಿಗೆರಡು ಕೊಂಬು ಮೂಡಿದಂತೆ ಆಗುತ್ತಿತ್ತು. ಒಂದು ಬಗೆಯ ಅಹಂಕಾರ ಇನ್ನೂ ತಲೆಗೇರಿ, ಗೌಡ ತನ್ನೊಂದಿಗೆ  ಮಾತಾಡಿದಂತೆ ಈತ ಆ ನಾಯಿಯೊಂದಿಗೆ ಮಾತಾಡುತ್ತಿದ್ದ. ಅದನ್ನು ‘ಮುನಿಯೆಲ್ಯಾ’ ಎಂದು ಕರೆಯುತ್ತಿದ್ದ. ‘ಹಾಂಗ ಮಗನs’ ‘ಹೀಂಗ ಮಗನs’ ಎಂದು ಗೌಡನ ಅಭಿನಯ ಮಾಡುತ್ತ ಅದರೊಂದಿಗೆ ಹೆಚ್ಚುಗಾರಿಕೆ ಮೆರೆಯುತ್ತಿದ್ದ. ಅದೇನು ಸಂತೋಷವೋ ಅದನ್ನು ಬಲು ಖುಷಿಯಿಂದ ಅನುಭವಿಸುತ್ತಿದ್ದ. ಇವನು ಹೆಂಡ ಖಂಡ ತಂದಾಗ ಇವನ ಹೆಂಡತಿ ಪಾಲು ಬೇಡುತ್ತಿದ್ದರೆ ಇವನಿಗೆ ಭಾರೀ ಸಿಟ್ಟು ಬರುತ್ತಿತ್ತು. ನಾಯಿಗೆ ಮಾತ್ರ ಹಾಕಿದರೆ ಉಂಟು, ಹಾಕದಿದ್ದರೆ ಇಲ್ಲ. ನಿಷ್ಠೆ, ಪ್ರಾಮಾಣಿಕತೆ ಅಂದರೆ ಹಾಗಿರಬೇಕೆಂದು ಇವನ ಮತ. ಅದಕ್ಕೇ ಆತ ಆಗಾಗ ತನ್ನ ಹೆಂಡತಿ ರಂಗಿಗೆ ಈ ನಾಯಿಯ ಉದಾಹರಣೆ ಕೊಡುವಂತಾಯಿತು.

ಒಂದು ದಿನ ಮಧ್ಯಾಹ್ನ ಎಲ್ಯಾ ಗೌಡನ ತೋಟದಲ್ಲಿ ಕಬ್ಬಿಗೆ ನೀರು ಹಾಕಿಸುತ್ತಿದ್ದ. ಅಷಟರಲ್ಲಿ ಪಕ್ಕದ ಕಾಡಿನಿಂದ ಕುರುಬರ ಹುಡುಗ “ಅಯ್ಯೋ ಬರ್ರೋ ನನ್ನ ಕುರಿ…. ನನ್ನ ಕುರಿ ಮುರೀತೇತ್ರೋ” ಎಂದು ಚೀರುತ್ತಿದ್ದದ್ದು ಕೇಳಿಸಿತು. ಮುನಿಯೆಲ್ಯಾ ನಿಂತಲ್ಲೇ ಸಣಿಕೆ ಚೆಲ್ಲಿ ಆ ದಿಕ್ಕಿಗೆ ಓಡಿಹೋದ. ಪಕ್ಕದ ಹೊಲದ ಇನ್ನೂ ಆರೇಳು ಜನ ಇವನೊಂದಿಗೆ ಸೇರಿದರು. ಹೋಗಿ ನೋಡಿದರೆ ಅದೇ ಕರಿನಾಯಿ ಹಾರಿ ಹಾರಿ ಕುರಿಗಳನ್ನು ಮುರಿಯತೊಡಗಿದೆ! ಎರಡು ಕುರಿಗಳಾಗಲೇ ಅರೆ ಜೀವವಾಗಿ ಒದ್ದಾಡುತ್ತಿದ್ದರೆ ಇನ್ನೊಂದರ ಮೇಲೆ ಜಾತ್ಯಾ ಬೇಟೆಯ ನಾಯಿಯಂತೆ ಹಾರತೊಡಗಿದೆ! ಯಾರಾದರೂ ಹೊಡೆಯಹೋದರೆ ಅವರ ಮೇಲೆ ಹುಲಿಯಂತೆ ಹಾರಿ ಬರುತ್ತಿದೆ! ಪಾಪ ಎಂಥಾ ನಾಯಿ, ಏನಾಗಿ ಹೋಗಿದೆ! ಅದು ಈ ತನಕ ಬೆನ್ನುಹತ್ತಿ ಬೇಟೆ ಹಿಡಿದದ್ದಲ್ಲ, ಕಳ್ಳರನ್ನು ಪತ್ತೆಹಚ್ಚಿದ್ದಲ್ಲ, ಬಾಲವಿದ್ದುದರಿಂದ ಅಲುಗಾಡಿಸುತ್ತಿದ್ದು; ಬಾಯಿ ಇದ್ದುದರಿಂದ, ಬೊಗಳಿದ್ದು ಅಷ್ಟೆ. ಹೆಚ್ಚೇನು, ಅದೊಂದು ತನ್ನ ಬಾಲದ ಮೇಲೆ ಕೂತ ನೊಣವನ್ನು ಜೋರಿನಿಂದ ಜಾಡಿಸಿಕೊಂಡ ನಾಯಿಯಲ್ಲ. ಅಂಥಾ ನಾಯಿ ಇಂಥ ಪ್ರಚಂಡ ಕೆಲಸ ಮಾಡುವುದೆಂದರೇನು? ಏನೋ ಗುಟ್ಟಿರಬೇಕೆಂದು ಮುನಿಯೆಲ್ಯಾ ನಿಲ್ಲದೆ ಅದರ ಮೇಲೆ ಇವನೂ ನಾಯಿಯಂತೆ ಹಾರಿ ಹಿಡಿದುಕೊಂಡ. ಮನುಷ್ಯರ ಮೇಲೆ ಧಡಧಡಿತ ಬಾಯಿ ತೆರೆದು ಹಾರಿ ಬರುತ್ತಿತ್ತು. ಕೊನೆಗೆ ಎಲ್ಲರೂ ಪರೀಕ್ಷಿಸಿ ನೋಡಿದರು. ಮುನಿಯೆಲ್ಯಾ ಅದರ ಬಾಯಿ ಮೂಸಿ ನೋಡಿದ. ಹೆಂಡದ ವಾಸನೆ ಗೊಮ್ಮೆಂದು ಹೊಡೆಯಿತು. ಮುನಿಯೆಲ್ಯಾನ ನಾಯಿಯಲ್ಲವೆ? ಲಗಮವ್ವ ಕಾಡಿನಲ್ಲಿ ಬಚ್ಚಿಟ್ಟ ಹಳೇ ಬೆಲ್ಲದಲ್ಲಿ ಹಾಕಿದ್ದ ಭಟ್ಟಿ ಸೆರೆ ಯಥೇಷ್ಠ ಕುಡಿದಿತ್ತು. ಮುನಿಯೆಲ್ಯಾ ಇದನ್ನು ಹೇಳಿದಾಗ ಎಲ್ಲರೂ ಬಿದ್ದು ಬಿದ್ದು ನಕ್ಕರು. ಕುಡಿದಾಗ ನಾಯಿಯಂಥಾ ನಾಯಿ ಹೀಗಾಗಬೇಕಾದರ ಮುನಿಯೆಲ್ಯಾ ಸ್ವಲ್ಪ ಹುಚ್ಚನಂತಾಗುವುದು ಹೆಚ್ಚಲ್ಲ ಎಂದರು. ಇದು ಊರಿಗೆಲ್ಲ ಗೊತ್ತಾಗಿ ಅಂದಿನಿಂದ ನಾಯಿಗೆ ‘ಮುನಿಯೆಲ್ಯಾ’ ಎಂದು ಮುನಿಯೆಲ್ಯಾನಿಗೆ ‘ನಾಯೆಲ್ಯಾ’ ಎಂದೂ ಹೆಸರು ಬಂತು. ಯಾಕೆಂದರೆ ಅವನೂ ಭಟ್ಟಿ ಸೆರೆ ಕದಿಯುವುದರಲ್ಲಿ ನಿಸ್ಸೀಮ. ನಾಯಿಗೆ ಆ ಹೆಸರು ಒಪ್ಪಿಗೆಯೆಂದು ತೋರುತ್ತದೆ. ಮುನಿಯೆಲ್ಯಾ, ಮುನಿಯೆಲ್ಯಾ, ಎಂದಾಗಲೆಲ್ಲ ಬಾಲವಲ್ಲಾಡಿಸುತ್ತಿತ್ತು. ಮುನಿಯೆಲ್ಯಾ ಅರ್ಥಾತ್ ನಾಯೆಲ್ಯಾನಿಗಂತೂ ಆನಂದವೋ ಆನಂದ. ಯಾಕೆಂದರೆ ಕುರುಬರು ನಾಯಿ ಮುರಿದ ಕುರಿಯ ಒಂದು ತೊಡೆಯನ್ನು ಇವನಿಗೇ ಕೊಟ್ಟರು.