ನಾಯೆಲ್ಯಾ ಬುದ್ಧಿಗಲಿತಾಗಿನಿಂದ ಹಾಕುತ್ತಿದ್ದುದು ಗೌಡನ ಹಳೆಯ ಅಂಗಿಗಳನ್ನೇ. ಅವನೊಮ್ಮೆಯೂ ಹೊಸ ಅಂಗಿ ಹೊಲಿಸಿಕೊಂಡವನೇ ಅಲ್ಲ. ಹೊಲಿಸಿಕೋ ಎಂದು ಕೊಟ್ಟರೂ ಕುಡಿಯುತ್ತಿದ್ದ. ಗೌಡನಿಗೆ ಬೇಸರವಾಯ್ತು. ಕತ್ತೆಯಂಥ ಕತ್ತೆ ಒಂದಾಣೆಯ ಹಗ್ಗ ಹರಿಯತ್ತದೆ. ನಾಯೆಲ್ಯಾ ಒಂದು ಅಂಗಿಯನ್ನಾದರೂ ಹರಿಯದಿದ್ದರೆ ಹೇಗೆ? ಅವನಳತೆಯ ಎರಡು ಹೊಸ ಅಂಗಿಗಳನ್ನು ಹೊಲಿಸಿಕೊಟ್ಟ.

ಹೊಸ ಅಂಗಿ ಹಾಕಿಕೊಂಡಾಗ ನಾಯಿಲ್ಯಾನನ್ನು ಹಿಡಿಯುವವರೇ ಇಲ್ಲ. ಊರ ತುಂಬ ವಿನಾಕಾರಣ ಅಡ್ಡಾಡಿ ಬಂದ. ಬರುಹೋಗುವವರ ಯೋಗಕ್ಷೇಮ ಕೇಳಿದ. ಕೆಲಸ ಮಾಡುವಾಗ ಅದನ್ನು ಕಳಚಿಟ್ಟಿದ್ದೇನು, ಹೆಂಡತಿ ಮುಟ್ಟ ಬಂದರೆ ಅವಳ ಹೊಲಸು ಕೈಗೆ ಮುನಿದದ್ದೇನು, ಮಲಗುವಾಗ ಕಂಬಳಿ ಝಾಡಿಸಿ ಝಾಡಿಸಿ ಹಾಸಿಕೊಂಡದ್ದೇನು! ಇವನ ಸಡಗರಕ್ಕೆ ಕೊಂಬು ಮೂಡಿಸಂತೆ ಸಾವಳಗಿಯ ಜಾತ್ರೆ ಬಂತು. ಊರಿಗಿಂತ ಮುಂಚೆಯೇ ಹೋದ, ಅಡ್ಡಾಡಿದ. ಜಾತ್ರೆಯ ಪ್ರತಿಯೊಬ್ಬರ ಅಂಗಿಯ ಜೊತೆ ತನ್ನ ಅಂಗಿ ಹೋಲಿಸಿಕೊಂಡ. ಆಯಿತು. ಜಾತ್ರೆಯೆಲ್ಲಾ ಮುಗಿದು ಮಾರನೇ ದಿನ ಗುಡಿಸಲಿಗೆ ಬಂದ, ನೋಡಿದರೆ ಬರೀ ಲಂಗೋಟಿಯಲ್ಲೇ ಇದ್ದ! ರಂಗಿ ಯಾಕೆಂದು ಕೇಳಿದರೆ ಹೀಗಾಯಿತಂತೆ:

ರಾತ್ರಿ ಬಯಲಾಟಕ್ಕೆ ಶೂದ್ರರ ಬಳಗದಲ್ಲಿ ಹೋಗಿ ಮುಂದಾಗಿಯೇ ಕೂತನಂತೆ. ಫಕ್ಕನೆ ಅಂಗಿಯ ಬಗ್ಗೆ ಚಿಂತೆ ಮೂಡಿತು. ಮಠದ ಹುಗ್ಗೀ ಪ್ರಸಾದ ಹೊಟ್ಟೆತುಂಬ ಗಚ್ಚಿನಂತೆ ಗಟ್ಟಿಯಾಗಿ ಇಳಿದಿತ್ತು. ಗೌಡ ಜಾತ್ರೆಗೆಂದು ಕೊಟ್ಟ ಚವಲಿಯಿಂದ ಹೆಂಡ ಕುಡಿದಿದ್ದ. ಅಂಗಿಯ ಸಡಗರದಲ್ಲಿ ಹೆಚ್ಚಾಗಿಯೇ ಓಡಾಡಿದ್ದ. ಮಂಪರು ಬಂದು ಕಣ್ಣುಮುಚ್ಚತೊಡಗಿದವು. ಸುತ್ತ ನೋಡಿದರೆ ಒಬ್ಬ ಶೂದ್ರನಿಗೂ ಮೈಮೇಲೆ ತನ್ನಂಥ ಅಂಗಿಯಿಲ್ಲ. ಒಮ್ಮೆ ನಿದ್ದೆ ಹತ್ತಿತೋ – ತನ್ನ ನಿದ್ದೆ ಸಾಮಾನ್ಯವೆ? ಮರದ ತುಂಡಿನಂತೆ ಬಿದ್ದ – ಎನ್ನೋಣ, ಆಮೇಲೆ ತನ್ನ ಅಂಗಿಯನ್ನು ಯಾರಾದರೂ ಕಳಚಿಕೊಂಡರೆ? ನಿದ್ದೆ ಮಾಡುವುದೇ – ಬೇಡ ಎನ್ನೋಣ. ಬರೋ ನಿದ್ದೆ ಹೇಳಿ ಕೇಳಿ ತನ್ನಪ್ಪಣೆ ಕೇಳಿ ಬರುತ್ತದೋ? ಆದ್ದರಿಂದ ಅಂಗೀ ಕಳಚಿ ಬಗಲಲ್ಲಿ ಗಟ್ಟಿಯಾಗಿ ಹಿಡಿದಿಟ್ಟುಕೊಂಡು ಬಯಲಾಟ ನೋಡಿದರೆ, ಮೈಗೆ ತಂಗಾಳಿ ಸವರಿ ಇತ್ತ ನಿದ್ದೆಯೂ ಬರುವುದಿಲ್ಲ; ಒಂದು  ವೇಳೆ ಬಂದರೂ ಬಗಲಲ್ಲಿಯ ಅಂಗಿಯನ್ನಾದರೂ ಕಿತ್ತುಕೊಳ್ಳುವಾಗ ತನಗೆ ಎಚ್ಚರವಾಗೇ ಆಗುತ್ತದೆ! ಹೀಗೆಂದುಕೊಂಡು ಅಂಗೀ ಕಳಚಿ ಮುದ್ದೆಮಾಡಿ ಬಗಲಲ್ಲಿ ಗಟ್ಟಿಯಾಗಿ ಹಿಡಿದು, ಅವಚಿಕೊಂಡು ಕೂತ. ನಿದ್ದೆಯೂ ಬಂತು. ಮುಂದಿನ ಕತೆ ನಿಮಗೆ ಗೊತ್ತೇ ಇದೆ. ನಾಯಲ್ಯಾ ತನ್ನ ಮೊದಲನೇ ಅಂಗಿ ಕಳಕೊಂಡದ್ದು ಹೀಗೆ.

ಒಂದು ಸಲ ‘ಮುನಿಯೆಲ್ಯಾ’ ಅಂದರೆ ಅದೇ ಅವನ ಕರಿನಾಯಿ ಇತ್ತಲ್ಲಾ, ಅದಕ್ಕೆ ಅದೇನು ಸ್ಫೂರ್ತಿ ಉಕ್ಕಿತೋ ಮಧ್ಯರಾತ್ರಿ, ಅಮಾವಾಸ್ಯೆ ಕತ್ತಲಲ್ಲಿ ಜೋರಿನಿಂದ, ಊರ ನಿಶ್ಯಬ್ದತೆ ಸೀಳಿ ಎರಡಾಗುವಂತೆ ಕಿರಿಚಿತು. ಕೇಳಿದ ಊರ ನಾಯಿಗಳು ಫಕ್ಕನೆ ಎಚ್ಚತ್ತು ತಂತಮ್ಮ ಸ್ಥಳಗಳಲ್ಲೇ ನಿಂತುಕೊಂಡು ಹೊಲಗೇರಿಯ ಕಡೆ ಮುಖಮಾಡಿ, ಜಿಗ್ಗಾಲು ಕೊಟ್ಟು ಕೂಗಲಾರಂಭಿಸಿದವು. ಎಷ್ಟು ಹೊತ್ತಾದರೂ ಅವುಗಳ ಸೊಲ್ಲು ನಿಲ್ಲಲೊಲ್ಲದು. ಯಾರೋ ಕಳ್ಳ ನುಗ್ಗಿರಬೇಕೆಂದು ಮಲಗಿದ್ದವರು ಎದ್ದರು. ನೋಡಿದರೆ ಯಾರೂ ಇರಲಿಲ್ಲ. ಅವಾವಾಸ್ಯೆಯಲ್ಲವೆ? ಕರಿಮಾಯಿ ಈ ದಿನ ಸಂಚಾರ ಕೈಗೊಂಡು ಕೆಟ್ಟ ದೆವ್ವಗಳಿಂದ ಊರು ಕಾಯುತ್ತಾಳೆ. ಬಹುಶಃ ನಾಯಿಗಳಿಗೆ ತಾಯಿಯೇ ಕಂಡಿರಬೇಕೆಂದು ಜನ ಭಾವಿಸಿಕೊಂಡು ಮತ್ತೆ ಮಲಗಿದರು.

ಆದರೆ ನಾಯೆಲ್ಯಾ ಈ ಸಂದರ್ಭ ಬಳಸಿಕೊಂಡ. ಯಾರು ಏನೆಂದು ಜನ ಹುಯ್ಯಲೆದ್ದಾಗಲೇ ಈತ ಮಾದರ ಭರಮನ ಗುಡಿಸಲಿಗೆ ನುಗ್ಗಿ ಪಡಸಾಲೆಯ ಕೋಳೀ ಬುಟ್ಟಿಗೆ ಕೈಹಾಕಿ, ಸಪ್ಪಳ ಮಾಡದೆ ಒಂದು ಕೋಳೀ ತಂದು ಅದರ ಕತ್ತು ಹಿಸುಕಿ ತನ್ನ ಗುಡಿಸಲಲ್ಲಿಟ್ಟು ಮತ್ತೆ ಸಾಜೋಗರಂತೆ ಹೊರಬಂದು, ಯಾರು? ಏನು? ಎಂದು ಎಲ್ಲರಂತೆ ಸೋಜಿಗ ನಟಿಸುತ್ತ ಅವರ ಜೊತೆ ನಿಂತ. ಕೆಲಹೊತ್ತಾಗಿ ಒಳಗೆ ಬಂದರೆ ರಂಗಿ, ಆ ಹೊತ್ತಿನಲ್ಲೇ ಎದ್ದು ಆಗಲೇ ನೀರು ಕಾಸಿ ಕೋಳಿ ಅದ್ದಿಬಿಟ್ಟಿದ್ದಳು. ಬೆಳಗಾಗುವುದರೊಳಗೆ, ತನ್ನ ಹೆಂಡತಿಗೂ ಗೊತ್ತಿಲ್ಲದಂತೆ ಕೋಳಿ ಮುಗಿಸಿಬಿಡಬೇಕೆದು ಇವನ ಲೆಕ್ಕ. ರಂಗಿ ನಾಯಲ್ಯಾನ ಹೆಂಡತಿಯಲ್ಲವೆ?  ಒತ್ತಿ ಬಂದ ನಿರಾಸೆ, ಸಿಟ್ಟು ತಡಕೊಂಡು ಒಲೆಯ ಮುಂದೆ ಕೂತ.

ತುಸು ಹೊತ್ತು ಕೂರುವುದರಲ್ಲೇ ಕುದಿಯಿತೋ ಇಲ್ಲವೋ ನೋಡೋಣವೆಂದು ಒಂದು ಹೋಳು ತೆಗೆದು ರಂಗೀ ಹಾಗೇ ತಿಂದಳು ಈಗ ಕೋಪ ಅಸಹನೀಯವಾಯಿತು.

“ಏ ಬೇಬರಿಸಿ, ಕದ್ದುಕೊಂಬಂದವ ನಾನು. ನನಗ ತೋರಿಸದ ಬಕ್ಕರಸಾಕ ಸುರು ಮಾಡಿದಿ?’

“ಸುಮ್ ಕುಂದರಬಾರದ? ಕುದ್ದsತ್ಯೋ ಇಲ್ಲೊ ನೋಡತೀನಿ”

“ಯಾಕ? ನನಗ ತಿಳೀತಿರಲಿಲ್ಲೆನು?”

“ಏ ಭಾಡ್ಯಾ, ಬಾಯಿ ಮುಚ್ಚಿಕೊಂಡು ಕುಂದರತೀಯಾ? ಮಾದರ ಭರಮ್ಯಾಗ ಹೇಳಂತೀಯಾ?”

ಎನ್ನತ್ತಾ ಇನ್ನೊಂದು ಹೋಳು ತಿಂದಳು. ಬಾಯಿ ಮಾಡುವಂತಿಲ್ಲ, ಬಿಡುವಂತಿಲ್ಲ. ಬಾಯಿ ಮಾಡಿದರೆ ರಂಪಾಟ ಮಾಡಿ ಭರಮ್ಯಾನಿಗೆ ಹೇಳಿದರೆ ಆಶ್ಚರ್ಯವಿಲ್ಲ. ಬಾಯಿ ಮುಚ್ಚಿಕೊಂಡಿದ್ದರೆ ಕುದಿಯುವ ಮೊದಲೆ ಈ ರಂಡಿ ಗಡಿಗೆಯ ಬುಡಸಮೇತ ಮುಗಿಸಿಬುಡುವುದರಲ್ಲಿ ಸಂಶಯವಿಲ್ಲ. ಆಗಲೆಂದು ಇವನೂ ಒಂದು ಹೋಳು ತಿಂದ. ಸೇಡಿನೆಂದೆಂಬಂತೆ ಅವಳೂ ತಿಂದಳು. ಇವನೂ ತಿಂದ. ಹೀಗೆ ಕುದ್ದಿದೆಯೋ, ಅಲ್ಲವೋ ನೋಡುವುದರಲ್ಲೇ ಅರ್ಧ ಕೋಳಿ ಮುಗಿಯಿತು. ಕುದಿಸಿ ಮಸಾಲೆ ಹಾಕಿ, ಚಂದಾ ಮಾಡಿ ತಿನ್ನುವುದು ಹಾಗಿರಲಿ, ಬರೀ ಕುದಿಯುತ್ತಿದ್ದ ಮಾಂಸ ಕೂಡ ತನಗೆ ಸರಿಯಾಗಿ ಸಿಗುತ್ತಿಲ್ಲ, ಎನಿಸಿತು. ಈ ಸ್ಪರ್ಧೆಯಲ್ಲಿ ರಂಗಿ ಸರಿಯಾಗಿ ಮೂಳೆ ಕೂಡ  ಉಗುಳುತ್ತಿರಲಿಲ್ಲ! ಏನೋ ಕೊನೆಯ ಉಪಾಯವೆಂದು “ಏ, ಹಾದರಗಿತ್ತಿ, ಕೂಸಿಗೊಂದೀಟ ಬಿಡತೀಯೋ ಇಲ್ಲೋ?” ಅಂದ.

“ರಸ ಕೊಟ್ಟರಾತ ಬಿಡs”

ಎನ್ನುತ್ತ ಮತ್ತೆ ಮುಕ್ಕಿದಳು. ಇನ್ನು ತನಗೊಂದು ಮೂಳೆಯೂ ದಕ್ಕುವುದಿಲ್ಲವೆಂದು ಖಾತ್ರಿಯಾಗಿ ತಕ್ಷಣವೇ ಅವಳ ಕೈ ಹಿಡಿದು,

“ಇನ್ನೊಂದು ತುತ್ತ ಬಾಯಿಗೆ ಹಾಕಿದರ ಕರಿಮಾಯಿ ಆಣಿ”

ಅಂದ. ಅವಳೂ ಇವನಿಗೆ ಕರಿಮಾಯಿ ಆಣೆ ಹಾಕಿದಳು. ಒಗ್ಗರಣೆ ಹಾಕಿ ಪಲ್ಯ ಮಾಡುವ ತನಕ ಯಾರೂ ಮಾಂಸ ಮುಟ್ಟಕೂಡದೆಂದಾಯಿತು. ಆದರೆ ಆಣೆ ಪಾಲಿಸುವದರ ಬಗ್ಗೆ ಇಬ್ಬರಿಗೂ ನಂಬಿಕೆಯಿಲ್ಲ. ಆಣೆಯ ಭರಾಟೆಯಲ್ಲಿ ನಾಯೆಲ್ಯಾ ರಂಗಿಗಿಂತ ಮಾಂಸದ ಗಡಿಗೆಗೆ ಹೆಚ್ಚು ಸಮೀಪ ಬಂದಿದ್ದ! ಗೊತ್ತಾದೊಡನೆ ಅವನು ತಿನ್ನದ ಹಾಗೆ, ಆದರೆ ಪ್ರೀತಿಯೆಂದೆಂಬಂತೆ ಗಪ್ಪನೆ ತನ್ನ ನಳಿದೋಳ್ಗಳಿಂದ ನಾಯೆಲ್ಯಾನನ್ನು ಬಳಸಿ ಈಚಲುಮರಕ್ಕೆ ಕಾಡುಬಳ್ಳಿ ಸುತ್ತಿದಂತೆ ತಬ್ಬಿಕೊಂಡು ಕೂತಳು.

ಮಾಂಸ ಕುದಿಯಿತು. ನೀರು ಬಸಿದು ಒಂದೆಡೆಯಿಟ್ಟು ಒಗ್ಗರಣೆ ತಯಾರಿ ನಡೆದಾಗ ಬಾಗಿಲಲ್ಲಿದ್ದ ಮುನಿಯೆಲ್ಯಾ ಗುರ್ ಎಂದಿತು. ಯಾರೋ ಬಂದದ್ದು ಸ್ಪಷ್ಟವಿತ್ತು. ಹೋಗಿ ಕದ ತೆಗೆದು ನೋಡೆಂದು ಹೆಂಡತಿಗೆ ಹೇಳಿದ. ನೀನೇ ನೋಡೆಂದು ಅವಳು ಹೇಳಿದಳು. ನೀನು ತಾನು ಎನ್ನುವಷ್ಟರಲ್ಲಿ ಗೌಡ “ಮುನಿಯೆಲ್ಯಾ” ಎಂದು ಕೂಗಿದ್ದು ಕೇಳಿಸಿತು. ಗಡಬಡಿಸಿ, ಬಿಟ್ಟು ಓಡಿಹೋದರೆ ಈ ಹಾಳು ರಂಡೆ ಮುಗಿಸಿಬಿಡಬಹುದೆಂದು ತಕ್ಷಣ ಅವಳ ಕೈ ಹಿಡಿದುಕೊಂಡೆ ಹೋಗಿ ಬಾಗಿಲು ತೆಗೆದ. ಹೊರಗಾಗಲೆ ಮೂಡಲು ಹರಿಯತೊಡಗಿತ್ತು.

ಹೊರಗೆ ಗೌಡ ನಿಂತಿದ್ದ. ಗೌಡನೆದುರಿಗೆ ಹೆಂಡತಿಯನ್ನು ಹೇಗೆ ಹಿಡಿದಿರುತ್ತಾನೆ? ಬಿಟ್ಟ. ಎಡೆ ಹೊಡೆಯಬೇಕೆಂದು ತಾಕೀತು ಮಾಡಿ ಗೌಡ ಹೋದ. ಅತ್ತ ಗೌಡ ಹೋದ. ಇತ್ತ ನಾಯೆಲ್ಯಾ ಬಿಟ್ಟಬಾಣದ ಹಾಗೆ, ಅವಸರದಿಂದ ಒಳಗೆ ಬಂದು ನೋಡಿದರೆ ರಂಗಿ ಎಲ್ಲಾ ಮಾಂಸ ಕಬಳಿಸಿ ಕಟಲ್ ಕಟಲ್ ಎಂದು ಮೂಳೆ ಜಗಿಯುತ್ತಿದ್ದಳು. ನಾಯೆಲ್ಯಾನಿಗೆ ಅಳು ಬರುವಷ್ಟು ಕೋಪ ಬಂತು. ‘ಹಾದರಗಿತ್ತೇ’ ಎಂದು ಹಾರಿ ಅವಳ ತುರುಬಿಗೇ ಕೈ ಹಾಕಿ ಒದ್ದ. ಅವಳೋ ಛೇ, ಈ ಹತಭಾಗ್ಯನ ಅಂಗೀಗೆ ಕೈ ಹಾಕಿದಳು. ಸಿಟ್ಟಿನ ಭರದಲ್ಲಿ ಅಂಗಿ ಗಮನಿಸದೆ ರಪ್ಪೆಂದು ಹೊಡೆದ. ಅವಳು ಟರ್ರ ಎಂದು ಅಂಗಿ ಹರಿದಳು ಇನ್ನಷ್ಟು ಕೋಪ, ಇನ್ನಷ್ಟು ನಿರಾಶೆ, ಇನ್ನಷ್ಟು ನೋವಿನಿಂದ ಇನ್ನಷ್ಟು ಹೊಡೆದ. ಅವಳು ಅಂಗಿಯನ್ನು ಇನ್ನಷ್ಟು ಹರಿದು ತ್ಯಾಪೆ ಹಚ್ಚಲಿಕ್ಕೂ ಆಗದಂತೆ ಚಿಂದಿ ಚಿಂದಿ ಮಾಡಿ ಎಸೆದಳು!

ನ್ಯಾಯೆಲ್ಯಾ ಎರಡನೇ ಅಂಗಿಯಿಂದಲೂ ವಂಚಿತನಾದ ಈ ಕಥೆ ಕೇಳಿ ಜನ ನಕ್ಕರು. ಅಂದಿನಿಂದ ಅಂಗೀಯೆಲ್ಯಾ ಎಂದೂ ಧಾರಾಳವಾಗಿ ಇನ್ನೊಮ್ಮೆ ನಾಮಕರಣ ಮಾಡಿದರು. ಆಮೇಲೆ ಅವನಿಗೆ ಗೌಡನ ಅಂಗಿಗಳೇ ಗತಿ! ಗೌಡನ ದೊಡ್ಡ ಅಂಗಿ ಇವನ ಸಣಕಲು ಮೈಗೆ ಜೋತುಬೀಳುತ್ತಿತ್ತು. ಆದರೂ ಆತ ಬೇರೆ ಹೊಸ ಅಂಗಿ ಬಯಸಲಿಲ್ಲ. ಬರಬರುತ್ತ ಗೌಡನ ಜೊತೆಯಲ್ಲಿದ್ದಾಗ ಅಂಗೀಯೆಲ್ಯಾನಿಗೆ ಒಮ್ಮೊಮ್ಮೆ ಅಂದರೆ ಕುಡಿದಾಗ ಹೆಮ್ಮೆ ಕೂಡ ಅನಿಸುತ್ತಿತ್ತು. ಆಗೆಲ್ಲ ತನ್ನ ಹೆಂಡತಿ ರಂಗಿಗೆ ರಂಗಾಸಾನಿ ಎಂದು ಬಾಯಿತುಂಬ ಕರೆಯುತ್ತಿದ್ದ.