ನಿಂಗೂ ಈ ಊರಿನ ನಪುಂಸಕ. ಇತ್ತ ಪುರುಷನಲ್ಲದ, ಅತ್ತ ಹೆಂಗಸಲ್ಲದ ಎರಡರಲ್ಲಿ ಒಂದೂ ಆಗದ ನಿರ್ಭಾಗ್ಯ. ಹಾಗಂತ ಆ ಬಗ್ಗೆ ಅವನಿಗೆ ದುಃಖವಿದೆಯೆಂದಲ್ಲ. ಹಾಗೆ ನೋಡಿದರೆ ಇಡೀ ಊರಲ್ಲಿ ಜನರ ವಯಸ್ಸು, ಅಂತಸ್ಸು ಲಿಂಗಭೇದಗಳನ್ನು ಗಮನಿಸದೆ ಚೇಷ್ಟೆ ಮಾಡಿ ನಗಬಲ್ಲವನು ಅವನೊಬ್ಬನೇ, ತಾಯಿ ಇರಲಿಲ್ಲ. ತಂದೆ ಗಟಿವಾಳಪ್ಪನೇ ತಂದೆ, ತಾಯಿ ಎರಡೂ ಆಗಿ ಹುಡುಗನನ್ನು ಬೆಳೆಸಿದ್ದ, ಆದರೆ ಹುಡುಗನ ಚೇರಾಪಟ್ಟೆ, ನಡವಳಿಕೆ ದೊಡ್ಡವನಾದಂತೆ ಹೆಂಗಸರದೆಂದು ಸ್ಪಷ್ಟವಾಗತೊಡಗಿತು. ಸರಿಕರು ಚೇಷ್ಟೆ ಮಾಡಿದರು, ದೊಡ್ಡವರು ಬೈದರು; ಅದೇನು ರಿಪೇರಿ ಆಗಲಿಲ್ಲ, ನಿಂಗ್ಯಾ ಇದ್ದದ್ದು ನಿಂಗಿ ಎಂದೂ ಆಗದೆ ಎರಡರ ನಡುವಿನ ನಿಂಗೂ ಆದದ್ದು ಹೀಗೆ.

ಮದುವೆ ಮಾಡಿದರೆ ಎಲ್ಲ ಸರಿ ಹೋಗುತ್ತದೆಯೆಂದು ಜನ ಗಟಿವಾಳಪ್ಪನಿಗೆ ಬುದ್ಧೀ ಹೇಳಿದರು. ಅವನಿಗೂ ಗಂಡು ರೊಟ್ಟಿ ದಿಂಡು ಬೇಳೆ ತಿಂದು ಸಾಕಾಗಿತ್ತು. ಬೇಗನೇ ಮನೆಗೆ ಸೊಸೆ ಬಂದರೆ ಒಂದಿಷ್ಟು ಬೆಂದ ಅಡಿಗೆ ತಿನ್ನಬಹುದಲ್ಲಾ ಎಂದೋ, ಮಗ ಸುಧಾರಿಸಬಹುದೆಂದೋ ಅಂತೂ ತನ್ನ ಹೆಂಡತಿಯ ಸಂಬಂಧಿಕರಲ್ಲಿಯೇ ಒಂದು ಕನ್ಯಾ ಶೋಧಿಸಿ ಮಗನಿಗೆ ಅಂದರೆ ಸದರಿ ನಿಂಗೂನಿಗೆ ಮದುವೆ ಮಾಡಿಬಿಟ್ಟ.

ಮದುವೆ ಮಾಡುವದೇನೋ ತನ್ನ ಕೈಯಲ್ಲಿತ್ತು, ಮಾಡಿದ. ಮುಂದೆ? ಸೊಸೆ, ಅವಳ ಹೆಸರು ಗೌರಿ, ನಡೆಯಲಿಕ್ಕೆ ಬಂದಳಲ್ಲ, ಒಂದೆರಡು ದಿನ ನಿಂಗೂ ಮನೆಯಲ್ಲಿ ಮಲಗಿದ. ಆ ಮಾರನೇ ದಿನದಿಂದ ಮತ್ತೆ ಹೊರಗಡೆ ಕಟ್ಟೆಯ ಮೇಲೆ ಮಲಗತೊಡಗಿದ, ಹಬ್ಬಕ್ಕೆಂದು ತೌರಿಗೆ ಹೋದ ಗೌರಿ ತನಗೆ “ರಾತ್ರಿ ಸುಖ” ಇಲ್ಲವೆಂದು ನೆಪ ಹೇಳಿ ಗಂಡನ ಮನೆಗೆ ತಿರುಗಿ ಬರಲು ನಿರಾಕರಿಸಿದಳು. ಗಟಿವಾಳಪ್ಪನೇ ಏನೇನೋ ಹತ್ತು ಸುಳ್ಳು ಹೇಳಿ ಕರೆತಂದಾಯಿತು.

ಮತ್ತೆ ಅದೇ ಸುಖ. ಆದರೆ ಆಮೇಲೆ ಸೊಸೆ ಮತ್ತೆ ತೌರು ನೆನೆಸಲಿಲ್ಲ. ನಿಂಗೂ ಒಂದು ದಿನವೂ ರಾತ್ರಿ ಮನೆ ಸೇರಲಿಲ್ಲ. ಊರಲ್ಲಿ ಗಟಿವಾಳಪ್ಪ ಸೊಸೆಯನ್ನು ಇಟ್ಟುಕೊಂಡಿದ್ದಾನೆಂದು ಸುದ್ದಿ ಕೇಳಿ ಬರತೊಡಗಿದವು. ಸರಿಕರು ನಿಂಗೂನಿಗೆ ಛೀ ಅಂದರು. ಥೂ ಅಂದರು. ಏನಂದರೂ ನಿಂಗೂ ನಿರಂಬಳಾಗಿ ಹೊರಗೇ ಮಲಗುತ್ತಿದ್ದ, ನಿಂಗೂ ಈ ಬಗ್ಗೆ ಯೋಚಿಸಲಿಲ್ಲವೆಂದಲ್ಲ. ಮುಖದ ಗೆರೆ ಕಾಣಿಸಿದಂತೆ ಗೆರೆ ಕೊರೆಯುವ ಚಿಂತೆ ಕಾಣಿಸುತ್ತದೆಯೇ? “ಇದರಲ್ಲಿ ಪಾಪ, ಗೌರಿಯ ತಪ್ಪೇನಿದೆ? ಇರೋ ತಪ್ಪೆಲ್ಲಾ ಅಪ್ಪಂದು. ಅಪ್ಪನಾಗಿ ಸೊಸೆಯನ್ನೇ ಸೇರುತ್ತಾನಲ್ಲಾ ನಾಚಿಕೆ ಬೇಡವೇ? ಆಗಲೇ ಗೋರಿಗೆ ಹೋಗೋ ವಯಸ್ಸಾಯಿತು. ಒಟ್ಟು ತಾನು ಮದುವೆಗೆ ಒಪ್ಪಿದ್ದೇ ತಪ್ಪು. ತಾನೆಲ್ಲಿ ಒಪ್ಪಿದೆ? ಅಪ್ಪನೇ ಅಲ್ಲವೇ ಒತ್ತಾಯದಿಂದ ಒಪ್ಪಿಸಿದ್ದು? ಆತ ಹಾಗೆ ಯಾಕೆ ಒತ್ತಾಯ ಮಾಡಿದ ಅಂತ ಈಗ ತಿಳಿಯುತ್ತದೆ. ಮದುವೆ ಮಾಡಿಕೊಳ್ಳದಿದ್ದರೆ ಈ ಅಪವಾದವಾದರೂ ಇರುತ್ತಿರಲಿಲ್ಲ, ಈಗ ತನ್ನ ಹೆಸರು; ತಂದೆಯ ಬಾಯಿಗೆ ಮೊಸರು!

ಹೀಗೆ ಯೋಚಿಸುವಾಗ ಸಿಟ್ಟು ಬರುತ್ತಿತ್ತು. ಆದರೆ ಒಳಗೊಳಗೆ. ಇದಕ್ಕೆಲ್ಲ ತಾನೇ ಜವಾಬ್ದಾರಿಯೆಂಬ ಅರಿವೂ ಮುಳ್ಳಾಗಿ ಚುಚ್ಚುತ್ತಿತ್ತು; ಸಾಲದ್ದಕ್ಕೆ ಗೌರಿ ಗರ್ಭಿಣಿ ಬೇರೆ ಆಗಿಬಿಟ್ಟಳು. ಈಗ ಮಾತ್ರ ನಿಂಗೂನಿಗೆ ಹಿಂಸೆಯಾಗತೊಡಗಿತು. ಮಂದಿಯ ಮಾತು ಚುಚ್ಚತೊಡಗಿದವು.

ಒಂದು ದಿನ ಅಂದರೆ ಕರಿಬೇಟೆ ನಾಳೆ ಇದೆಯೆಂದರೆ ಇಂದು ಮಧ್ಯಾಹ್ನದ ಸಮಯ ತೋಟದ ಗುಡಿಸಲಲ್ಲಿ ನಿಂಗೂ ಕಂಬಳಿ ಹೊದ್ದುಕೊಂಡು ದಣಿದು ಮಲಗಿದ್ದ, ದಣಿಯಲಿಕ್ಕೆ ಕೆಲಸ ಎಲ್ಲಿ ಮಾಡಿದ್ದ? ಯಾರೋ ಚುಚ್ಚಿ ಮಾತನಾಡಿದ್ದರು. “ಹುಟ್ಟುವ ಕೂಸು ತಮ್ಮನೋ? ಯಾ ಮಗನೋ” ಎಂದು ತನ್ನ ಹೆಂಡತಿಯ ಯಾ – ತಾಯಿಯ ಬಗೆಗೆ ಉತ್ತರ ಕೊಡಲಾರದೆ ಅವಮಾನವನ್ನು ಸಹಿಸಲಾಗದೇ ಕಂಬಳಿ ಹೊದ್ದುಕೊಂಡು ಸುಮ್ಮನೇ ಬಿದ್ದುಕೊಂಡಿದ್ದ, ಹೊಲದಲ್ಲಿ ಹೆಂಡತಿಯೆಂಬಾಕೆ ಇದ್ದಳು. ತಂದೆಯೂ ಇದ್ದ. ಸ್ವಲ್ಪ ಹೊತ್ತಾದ ಮೇಲೆ ಹೆಂಡತಿ ಗುಡಿಸಲಲ್ಲಿ ಬಂದಳು. ಮುದುಕ ಇವಳು ಕೆಲಸ ಮಾಡುತ್ತಿದ್ದುದಕ್ಕೆ ಸಿಟ್ಟು ಮಾಡಿ “ಆರಾಮ ತಗೋ” ಎಂದು ಬಾಯಿಮಾಡುತ್ತ ಒಳಗೆ ಬಂದ. ಹೊದ್ದ ಕಂಬಳಿಯ ತೂತಿನೊಳಗಿಂದ ನಿಂಗೂನಿಗೆ ಇವರ ವ್ಯವಹಾರವೆಲ್ಲ ಕಾಣಿಸುತ್ತಿತ್ತು. ಬಸುರಿನ ಭಾರಕ್ಕೆ ಬಾಡಿದ್ದ ಗೌರಿ ಕಟ್ಟೆಯ ಮೇಲೆ ಹಾಗೇ ಅಡ್ಡಾದಳು. ಮುದುಕ ಸುಮ್ಮನಿರದೇ “ಯಾಕ? ದಣಿವಾತೇನು?” ಎನ್ನುತ್ತ ಸಮೀಪ ಹೋಗಿ ಅವಳ ಕಾಲು ತಿಕ್ಕತೊಡಗಿದ. ಕಾಲಮೇಲೆ ಕೈಯಾಡಿಸುತ್ತ ಬಾಲವಾಡಿಸುವ ನಾಯಾಗಿ, ಅವಳ ಕಾಲಿಗಂಟಿದ ಧೂಳಾಗಿ ಧೂಳಿಗಂಟಿದ ಹುಳುವಾಗಿ ಜೊಲ್ಲು ಸುರಿಸುತ್ತ, ಮಾಯೆ ಮಾಡತೊಡಗಿದ, ನಿಂಗೂನಿಗೆ ಹೇಸಿಕೆ ಬಂತು. ಎದ್ದು ಅವನ ಮುದಿಮುಖದ ಮೇಲೆ ಉಗುಳಬೇಕೆನ್ನಿಸಿತು.

“ಇಲ್ಲೇ ಮಲಗ್ಯಾನ ದೂರ ಸರಿ” ಎಂದಳು ಗೌರಿ.

“ಮಲಗಿದರೇನ ಮಾಡತಾನ. ತಡಿ ಬರತೇನ” ಎನ್ನುತ್ತ ಏನೋ ನೆನಪಾಗಿ ಬಾಗಿಲು ಹಾಕಿಕೊಂಡು ಹೊರಗೆ ಹೋದ. ಗೌರಿ ಆಯಾಸದಿಂದ ಹಾಗೇ ಕಣ್ಣು ಮುಚ್ಚಿದಳು. ನಿಂಗೂನ ಮನಸ್ಸಲ್ಲಿ ಎಲ್ಲಿಯ ಸೇಡು ಉಕ್ಕಿತ್ತೋ, ಕಣ್ಣುಮುಚ್ಚಿ ಕಣ್ಣು ತೆರೆಯುವುದರೊಳಗೆ, ಹಾ ಎನ್ನುವುದರೊಳಗೆ ಮೈಯಲ್ಲಿ ಮಿಂಚು ಸಂಚರಿಸಿ ಪಕ್ಕದಲ್ಲಿದ್ದ ಕುಡಗೋಲು ಮಸೆಯುವ ಕಲ್ಲನ್ನೆತ್ತಿ ಗೌರಿ ಹೊಟ್ಟಿಯ ಮೇಲೆ ಹೆಟ್ಟಿಬಿಟ್ಟ! ತಾಯಿ ಹಾ ಎಂದು ಬಿಟ್ಟ ಉಸಿರನ್ನು ಮತ್ತೆ ತಕ್ಕೊಳ್ಳಲೇ ಇಲ್ಲ. ಹೊಟ್ಟೆ ಹಿಡಿದುಕೊಂಡು ಒಂದೆರೆಡು ಬಾರಿ ಹೊರಳಾಡಿ ಒದ್ದಾಡಿ ಸತ್ತುಬಿಟ್ಟಳು.

ಗೌರಿ ಹಾ ಎಂದು ಉಸಿರೆಳೆದದ್ದು ಗಟಿವಾಳಪ್ಪನಿಗೆ ಕೇಳಿಸಿ ಒಳಗೆ ಓಡಿಬಂದ. ಏನಾಯಿತೆಂದು ಹೆಣದ ಬಳಿ ಧಾವಿಸುವಷ್ಟರಲ್ಲಿ ನಿಂಗೂ ಸೂರಿನಲ್ಲಿದ್ದ ಚೂಪುಗೊಡಲಿ ಹಿಡಿದು ಮುದುಕನ ಗೋಣಿಗೇ ಇಕ್ಕಿಬಿಟ್ಟ. ರುಂಡ ಚಂಗನೆ ನೆಗೆದು ಸೊಸೆಯ ಪಾದದ ಕಡೆ ಉರಳಿ ಮುಂಡ ಮಾತ್ರ ಸೊಸೆಯ ಹಾಸಿಗೆ ಕಡೆಗೆ ಜಿಗಿದಾಡುತ್ತ ಧಾವಿಸತೊಡಗಿತು. ಅದೇನು ಭಯವೋ, ಆವೇಶವೋ ನಿಂಗೂ “ಹಾ ಹಾ” ಎಂದು ಕಿರುಚುತ್ತ ಎರಡೂ ಕೈ ಎತ್ತಿ ಮುಂಡದ ಜೊತೆ ಸ್ಪರ್ಧೆಗಿಳಿದಂತೆ ಕುಣಿಯತೊಡಗಿದ. ಇನ್ನೊಂದು ಕ್ಷಣ ಮುಂಡಹಾಗೇ ಕುಣಿದಿದ್ದರೆ ನಿಂಗೂನ ಗತಿ ಏನಾಗುತ್ತಿತ್ತೋ; ಅದರ ಕಾಲಿಗೆ ಸೊಸೆಯ ಹೆಣವಿದ್ದ ಕಟ್ಟಿ ತಾಗಿದೊಡನೆ  ಧೊಪ್ಪನೆ ಬೆನ್ನು ಮೇಲಾಗಿ ಬುಡ ಕಡಿದ ಮರದಂತೆ ಬಿದ್ದುಬಿಟ್ಟಿತು.

ಅದೇ ಆವೇಶದಲ್ಲೇ, ಚೂಪುಗೊಡಲಿ ಹಿಡಿದುಕೊಂಡೇ ನಿಂಗೂ ಹೊರಬಂದು ಊರಕಡೆ ಓಡತೊಡಗಿದ. ಮಧ್ಯೆ ಕಳ್ಳ ಬರದಿದ್ದರೆ ಏನಾಗುತ್ತಿತ್ತೋ. ಕಳ್ಳ ಸಿದರಾಮ “ಯಾಕಲೇ ನಿಂಗೂ ಏನಾತೊ? ಅಂದ, ನಿಂಗೂ ಈಗ ಮನುಷ್ಯನಾಗಿ ಅಲ್ಲೇ ಕುಸಿದುಬಿದ್ದ, ಎದೆ ಡವಡವ ಹೊಡೆದುಕೊಳ್ಳಲಾರಂಭಿಸಿತು. ಎಪ್ಪಾ ಎಂದು ಎದೆ ಎದೆ ಬಡಿದುಕೊಂಡು ಅಳಲಾರಂಭಿಸಿದ.

ನಿಂಗೂನ ಹುಯ್ಲಿನ ಅರೆ ಭಾಷೆ ಕೈ ಬಾಯಿಗಳ ಸನ್ನೆಗಳ ಮೇಲಿಂದ ಏನೋ ಅನಾಹುತವಾಗಿದೆಯೆಂದು ಊಹಿಸಿ “ಓಡಿಹೋಗಿ ಗೌಡ್ರ ಕಾಲ ಹಿಡಕೊಳ್ಳಲೇ” ಎಂದ. ಕೊಡ್ಲಿ ಅಲ್ಲೇ ಬಿಟ್ಟು ನಿಂಗೂ ಊರಿನತ್ತ ಓಡಿದ. ಕಳ್ಳ ಗುಡಿಸಿಲಿಗೆ ಹೋಗಿ ನೋಡಿದ. ಗುಡಿಸಲ ತುಂಬ ರಕ್ತ ಹರಿದಾಡಿತ್ತು. ಕಟ್ಟೆಯ ಮೇಲೆ ಬಕ್ಕಬರಲೆ ಬೆನ್ನು ಮೇಲಾಗಿ ಕಾಲು ಗೀಸಿಕೊಂಡು ಗಟಿವಾಳಪ್ಪನ ಹೆಣ ಬಿದ್ದುಬಿಟ್ಟಿತ್ತು. ಕಾಲ್ದೆಸೆ ಕೆಳಕ್ಕೆ ರುಂಡ ಬಿದ್ದಿತ್ತು. ಅದರಾಚೆ ಗೌರಿಯ ಹೆಣ ಕಣ್ಣು ಕಿಸಿದುಕೊಂಡೇ ಬಿದ್ದಿತ್ತು. ಕಣ್ಣಿಗೆ ಚಕ್ರ ಬಂದಂತಾಯ್ತು. ಕೂಡಲೇ ಕಳ್ಳ ಕಾಲಿಗೆ ಬುದ್ಧಿ ಹೇಳಿದ. ಇಳಿ ಹೊತ್ತಾಗಿತ್ತು. ಪಡಸಾಲೆಯಲ್ಲಿ ಗೌಡ ಕೂತುಕೊಂಡು ಮಗ ಶಿವನಿಂಗನಿಗೆ ಅದೇನೋ ವ್ಯವಹಾರ ಹೇಳುತ್ತಿದ್ದ. ನಿಂಗೂ ಓಡಿ ಬಂದವನೇ ಗೌಡನ ಕಾಲು ಗಟ್ಟಿಯಾಗಿ ಹಿಡಕೊಂಡು, “ಎಪ್ಪಾs ಎಪ್ಪಾss” ಎನ್ನುತ್ತ ಅವ ಪಾದಕ್ಕೆ, ತಪ್ಪಿದರೆ ನೆಲಕ್ಕೆ ತಲೆಯಿಂದ ಕುಟ್ಟಲಾರಂಭಿಸಿದ. ಗೌಡ ‘ಏನೋ’ ಅಂದರೂ ಇಲ್ಲ ‘ಎಂತೋ’ ಅಂದರೂ ಇಲ್ಲ; ಬರೀ “ಎಪ್ಪಾ ಎಪ್ಪಾ…” ಗೌಡ ನೋಡುವಷ್ಟು ನೋಡಿ ಅವನ ಜುಟ್ಟು ಹಿಡಿದು ಮೇಲೆತ್ತಿ ಕೆನ್ನೆಗೆರಡು ಬಿಗಿದ. ನಿಂಗೂ ಮತ್ತೆ ಮನುಷ್ಯರೊಳಗೆ ಬಂದ.

ಎಲ್ಲ ಕೇಳಿದ ಮೇಲೆ ಗೌಡ “ನೀ ಸೀದಾ ತೋಟಕ್ಕ ನಡಿ. ನಾವೂ ಬರತೇವ” ಎಂದು ನಿಂಗೂನನ್ನು ಕಳಿಸಿ ದತ್ತಪ್ಪನ ಮನೆಗೆ ಹೋದ. “ದತ್ತೊ ದಗದೈತಿ ಬಾ” ಎಂದು ಬಾಗಿಲಲ್ಲೇ ನಿಂತು ಕರೆದ. ಏನೋ ಅನಾಹುತವಾಗಿರಬೇಕೆಂದು ಊಹಿಸಿದ ದತ್ತಪ್ಪ ನಿಂತ ಕಾಲಮೇಲೆ ಏನು ಯಾಕೆ ಎನ್ನದೇ ಬೆನ್ನು ಹತ್ತಿದ.

ಗುಡಸೀಕರ ಉಂಡು ಮಲಗಿದ್ದವನು ಇನ್ನೂ ಎದ್ದಿರಲಿಲ್ಲ. ಕಳ್ಳ ಅವನನ್ನೆಬ್ಬಿಸಿ ನಡೆದ ಘಟನೆಯನ್ನು, ತಾನೇ ಹೆದರಿದ್ದರಿಂದ ಇರಬೇಕು, ಭಯಂಕರವಾಗಿ ವರ್ಣಿಸಿದ. ಗುಡಸೀಕರನಿಗೂ ಭಯವಾಯ್ತು. ನಿಧಾನವಾಗಿ ಸುಧಾರಿಸಿಕೊಂಡು, “ಗೌಡ್ರ ಕಾಲ ಹಿಡಕೋ ಅಂತ ನಾನs ಕಳಿಸಿದೆ” ಎಂದು ಕಳ್ಳ ಹೇಳಿದೊಡನೆ ಗುಡಸೀಕರನ ಮುಖದ ಮೇಲೆ ತಣ್ಣೀರು ಎರಚಿದಂತಾಯ್ತು.

“ಅಲ್ಲಲ್ಲೇ, ಇಂಥಾ ಕೇಸಿನ್ಯಾಗ ಗೌಡಗೇನ ತಿಳೀತೈತಿ?” ವಕೀಲ ನಾನೋ? ಗೌಡನೋ?”

“ನಿಮ್ಮನ್ನ ಬಿಟ್ಟ ಅವರೆಲ್ಲಿ ಹೋಗತಾರ ತಡೀರಿ; ಈಗ ಹೇಳಿ ಕಳಸ್ತಾರ” ಅಂದ. ಅದೂ ನಿಜವೇ. ಗೌಡನಿಗೆ ತಾನು ವಕೀಲಿ ಪಾಸಾದದ್ದು ಗೊತ್ತಿಲ್ಲವೆ? ಏನು ಮಾಡೋಣವೆಂದು ಕೇಳಲಿಕ್ಕೆ ಬಂದೇ ಬರುತ್ತಾರೆ. ಬಂದಾಗ ಹೋದರಾಯಿತು ಎಂದುಕೊಂಡು ಕುತೂಹಲ ತಾಳಿಕೊಂಡು ಸುಮ್ಮನೇ ಕೂತ.

ಗೌರಿ, ಗಟಿವಾಳಪ್ಪನ ಹೆಣ ನೋಡಿ ದತ್ತಪ್ಪನಿಗೇನು ಗೌಡನಿಗೂ ಭಯವಾಯಿತು. ತಕ್ಷಣ ಬಾಗಿಲು ಹಾಕಿ ಇಬ್ಬರೂ ಮುಂದಿನ ಹಾದಿ ಯೋಚಿಸುತ್ತ ಕೂತುಬಿಟ್ಟರು. ನಿಂಗೂ ತಪ್ಪು ಮಾಡಿದ ಖರೆ, ಆದರೆ ಗಟಿವಾಳಪ್ಪ ಗೌರಿಯರದೂ ತಪ್ಪೇ. ಅಲ್ಲೇ ಮಲಗಿದ್ದ ಮಗ ಕಾಣದಷ್ಟು ಕುರುಡರಾಗೋದೆಂದರೇನು? ಮನುಷ್ಯ ಸಹನೆಗೂ ಮಿತಿ ಇಲ್ಲವೆ? ಇಷ್ಟಲ್ಲದೆ ಇವರ ಆಸೆಗೆ ನಿಂಗೂ ಯಾವಾಗ ಅಡ್ಡಿ ಮಾಡಿದ್ದ? ಕಾಮ ಮುದುಕನ ಕಣ್ಣು ಕುಕ್ಕಿತು. ಸಿಟ್ಟು ನಿಂಗೂನ ಕಣ್ಣು ಕುಕ್ಕಿತು. ಇಬ್ಬರೂ ಕುರುಡರಾದರು. ಸತ್ತವರು ಸತ್ತು ಹೋದರು. ಇದ್ದವನ ಗತಿಯೇನು?

ಇಂಥ ಕೇಸುಗಳಲ್ಲಿ ಗೌಡನ ಮನಸ್ಸು ಹೇಗೆ ಓಡುತ್ತದೆಂದು ದತ್ತಪ್ಪ ಬಲ್ಲ. ಇಷ್ಟು ವರ್ಷ ಕೂಡಿದ್ದು ಊರುಗಾರಿಕೆ ಮಾಡಿ ಸುಸೂತ್ರ ಪಾರುಗಾಣಿಸಿದವರಲ್ಲವೆ? ಆದರೆ ಇಬ್ಬರ ತಲೆಯಲ್ಲೂ ಗುಡಸೀಕರ ತಪ್ಪಿ ಕೂಡ ಸುಳಿಯಲಿಲ್ಲ. ಬೇರೆ ದಿನಗಳಾಗಿದ್ದರೆ ಆ ಮಾತು ಬೇರೆ. ನಾಳೆ ಕರಿಬೇಟೆಯ ಹಬ್ಬ. ನಾಯಕರ ಹುಡುಗರು ಇಂದು ಬೇಟೆಯಾಡಲಿಕ್ಕೆ ಹೋಗುತ್ತವೆ. ಆ ಸಮಯವೂ ಹತ್ತಿರ ಬಂತು.

ಹೋಗುವ ಮುನ್ನ ಗೌಡನ ನಮಸ್ಕಾರ ಮಾಡಿ ಅವನಿಂದ ಕಾಯಿ ತಗೊಂಡು ಹೋಗುವದು ಪದ್ಧತಿ. ಅವರು ಗೌಡನ ಮನೆಗೆ ಹೋಗೋಣ, ಗೌಡ ಇಲ್ಲದಿರೋಣ, ಏನೇನೋ ಸಂಶಯಗಳೇಳೋಣ. ಆಗಲೇ ಈ ಸುದ್ದಿ ಎಷ್ಟು ಮಂದಿಗೆ ಗೊತ್ತಾಗಿದೆಯೋ, ಗೊತ್ತಾಗುವ ಮುನ್ನವೇ ಇದಕ್ಕೊಂದು ಮುಕ್ತಾಯ ಕೊಡಬೇಕೆಂದು ಇಬ್ಬರ ತವಕ. ಯೋಚಿಸುತ್ತ ಹೆಣ ಕಾಯುತ್ತ ಇಬ್ಬರೂ ಕೂತರು. ನಿಂಗೂ ಇನ್ನು ಬಂದಿರಲಿಲ್ಲ.

ಅಷ್ಟರಲ್ಲಿ ನಿಂಗೂ ಗುಡಸೀಕರ ಮತ್ತು ಕಳ್ಳ ಸಿದ್ದರಾಮನೊಂದಿಗೆ ಬಂದ. ದತ್ತಪ್ಪನ ಮೈಯುರಿಯಿತು. ಏನೋ ಮಾಡಿ ಈ ಮಗನ್ನ ಪಾರು ಮಾಡೋಣವೆಂದರೆ ಇದ್ದದ್ದೂ ಹೋಗಿ ಗುಡಸೀಕರನನ್ನು ಕರೆತಂದನಲ್ಲಾ ಎಂದುಕೊಂಡು ‘ಛೀ’ ಅಂದ. ಗೌಡನಿಗೆ ಅರ್ಥವಾಯಿತು. ಆದರೆ ಅವನಿಗೆ ಮನುಷ್ಯರ ಮೇಲೆ ಭಾರೀ ವಿಶ್ವಾಸ, “ಬಾ ಹುಡುಗಾ ನೀನೂ ಬಂದಿ, ಛೆಲೋ ಆತು” ಅಂದ. ಗುಡಸೀಕರ ನಿರ್ಲಕ್ಷ್ಯ ಮಾಡಿ ಗುಡಿಸಲ ಬಾಗಿಲು ತೆಗೆದು ಒಳಕ್ಕೆ ನೋಡಿ, ನೋಡಲಾರದೇ ಹೊರಗೆ ಬಂದ, ಗೌಡ “ಕೂಡ ಬಾ” ಅಂದ. ಹೋಗಿ ಕೂತ. ಕಳ್ಳನಿಗೆ ಬಾಗಿಲು ಹಾಕಲಿಕ್ಕೆ ಹೇಳಿದರು, ಹಾಕಿದ. ಗುಡಸೀಕರನೂ ಹೆಣ ನೋಡಿ ಬೆವರಿದ್ದ. ಹತ್ತು ನಿಮಿಷ ಯಾರೂ ಮಾತಾಡಲಿಲ್ಲ. ನಿಂಗೂನನ್ನು ಬಿಟ್ಟು ಉಳಿದವರೆಲ್ಲ ನಿಶ್ಚಲರಾಗಿ ಕಲ್ಲಿನಂತೆ ಕೂತುಬಿಟ್ಟರು. ನಿಂಗೂ ಮಾತ್ರ ಅವನ ಮುಖವನ್ನೊಮ್ಮೆ ನೋಡುತ್ತ ಕಣ್ಣೀರು ಸುರಿಸುತ್ತ ದೀನನಾಗಿ, ಹೆದರಿ ತನ್ನ ಗತಿಯೇನಾಗುವುದೋ ಎಂದು ಚಡಪಡಿಸುತ್ತಿದ್ದ.

ಕೊನೆಗೆ ಗೌಡನೇ ಬಾಯಿಬಿಟ್ಟ –

“ದತ್ತು ಗುಡಸಲಕ ಬೆಂಕಿ ಹಚ್ಚಿದರ ಹೆಂಗ?”

“ಬರೋಬರಿ” ಅಂದ ದತ್ತಪ್ಪ.

ದತ್ತಪ್ಪ ಸೈ ಅಂದರಾಯ್ತು. ಅದು ಸರಿಯಾದ ತೀರ್ಮಾನವೆಂದೇ ಗೌಡನ ಲೆಕ್ಕ “ನಿಂಗ್ಯಾ ಹೆಣ ಹೊರಗ ತಗೀಬ್ಯಾಡ. ಇಂದ ರಾತ್ರಿ ಗುಡಸಲಕ ಬೆಂಕಿ ಹಚ್ಚು. ಯಾರಿಗೇನೂ ಹೇಳಬ್ಯಾಡ. ಬೆಳಿಗ್ಗೆದ್ದ ಇಬ್ಬರೂ ಗುಡಸಲದಾಗ ಸುಟಗೊಂಡು ಸತ್ತರಂತ ಮಂದಿಗೆಲ್ಲಾ ಹೇಳು.”

ಗುಡಸೀಕರನಿಗೆ ಸಿಡಿಲು ಬಡಿದಂತಾಯ್ತು. ಇದು ಹೇಳಿ ಕೇಳಿ ಖೂನಿ ಕೇಸು. ಇದರಲ್ಲಿ ತಾನಲ್ಲದೇ ಇನ್ನು ಯಾರು ಸಲಹೆ ಕೊಡಬಲ್ಲರು? ಅದು ಬಿಟ್ಟು ಹಳ್ಳಿಯ ಗಮಾರ  ಮಿತಿ ಬೇಡವೆ? ಗೌಡನಿಗೆ ಬುದ್ಧಿ ಬೇಡವೆ? ತಾನು ಕೂತದ್ದನ್ನು ಮುದಿಯರಿಬ್ಬರೂ ಗಮನಿಸಲಿಲ್ಲ. ಈಗ ಕರೆಸುತ್ತಾರೆಂದು ತಾನು ಮನೆಯಲ್ಲಿ ಕೂತಿದ್ದರೆ ಕರೆಸಲೇ ಇಲ್ಲ. ಹೋಗಲಿ, ಹೆಂಗೋ ಕಳ್ಳನೇ ನಿಂಗೂನನ್ನು ತನ್ನ ಬಳಿಗೆ ಕರೆತಂದ. ತಾನಿಲ್ಲಿಗೆ  ಬಂದದ್ದಾಯಿತು. ಬಂದ ಮೇಲೂ ತನ್ನ ಬಗ್ಗೆ ಈ ನಿರ್ಲಕ್ಷ್ಯವೇ? ಈ ಕೇಸು ಕೋರ್ಟಿನಲ್ಲಿ ಗೆಲ್ಲಿಸಿ, ಇವರನ್ನೆಲ್ಲ ಪಾರುಮಾಡೋಣವೆಂದು ತಾನು ಯೋಚಿಸಿದರೆ, ಈ ಹದ್ದುಗಳು ತನ್ನನ್ನೊಂದು ಹುಲ್ಲುಕಡ್ಡಿಗೆ ಸಮಾನ ಮಾಡುವದೆಂದರೇನು? ಖೂನಿ ಅಂದರೇನು? ಸಣ್ಣ ಬಾಬತ್ತೆ? ಕೋರ್ಟಿದೆ, ಕಾನೂನಿದೆ, ಕಾಯ್ದೆ ಕಣ್ಣಲ್ಲಿ ಮಣ್ಣೆರಚುವ ಕೆಲಸವನ್ನು ಹಾಡಹಗಲೇ ಮಾಡುತ್ತಾನಲ್ಲ ಇವನ ಮುದಿ ಧೈರ್ಯ ಎಷ್ಟು? ಹೋಗಲೆ ತನ್ನನ್ನಾದರೂ ಕೇಳಿದನೆ? ದತ್ತೂನನ್ನು ಕೇಳಿದನಲ್ಲ! ಇವರಿಗೆ ಬುದ್ಧಿ ಕಲಿಸಲೇಬೇಕೆಂದು ಮನಸ್ಸಿನಲ್ಲಿಯೇ ತೀರ್ಮಾನಿಸಿಬಿಟ್ಟ ಗುಡಸೀಕರ.

“ಬೆಂಕಿ ಹಚ್ಚಿ ಕಾಯ್ದೆ ಕಾನೂನು ಯಾಕ ಮೈಮ್ಯಾಲ ಹಾಕ್ಕೋತೀರಿ? ಸುಮ್ಮನೆ ಪೋಜದಾರ್ನ ಕರಸಿ ಪಂಚನಾಮೆ ಮಾಡಸರಿ” ಅಂದ.

“ಕಾಯ್ದೇ ಕಾನೂನು ನಮಗೂ ಗೊತ್ತವ ಏನಪಾ, – ಅದರ…”

ಎಂದು ದತ್ತಪ್ಪ ಬಾಯಿ ಹಾಕಿದ. ಗೌಡ ಅಷ್ಟಕ್ಕೇ ತಡೆದು,

“ಕಾಯ್ದೆ ಕಾನೂನಂದರ ಸಣ್ಣ ಮಾತಲ್ಲಪಾ, ಕೆಟ್ಟ ಇಂಗರೇಜಿ ಸರಕಾರ, ಕೇಸ ಬೆಳಗಾಂವಿಗೆ ಹೋದರ ನಿಂಗೂ ಉಳಿಯಾಣಿಲ್ಲ, ಸುಮ್ಮನ ಎಲ್ಲಾರೂ ಕೂಡಿ ಒಬ್ಬಗ ತಿಳೀತು, ತಿಳೀಲಿಲ್ಲ ಅಷ್ಟರಾಗ ಮುಗಿಸಿಬಿಡೋಣ.

“ನಿಂಗೂ ಯಾಕ ಉಳಿಯಾಣಿಲ್ಲ”?

“ಯಾಕಂದರ ತಪ್ಪು ಮಾಡ್ಯಾನ – ಅದಕ್ಕ.”

“ತಪ್ಪು ಮಾಡಿದ್ದs ಖರೆ ಆದರ ಅನುಭವಿಸಲಿ.”

“ಅಂದರೇನು ನಿಂಗೂನ ಜೇಲಿಗೆ ಕಳಿಸಕೋಣಂತೀಯೇನು?”

“ಜೇಲಿಗಿ ಯಾಕ ಹೋಗಬೇಕು? ಅವನ ಪರವಾಗಿ ನಾ ವಕೀಲಿ, ಹಿಡೀತೀನಿ” ಎಂದು ಗುಡಸೀಕರ, ತನ್ನ ಮಾತಿನಲ್ಲಿಯ ವಿರೋಧ ಗುರುತಿಸದೆ. ಈ ಹುಡುಗ ಯಾರ ಪರವಾಗಿದ್ದಾನೆಂದು ದತ್ತಪ್ಪನಿಗೆ ತಿಳಿಯದಾಯ್ತು.

“ನೋಡಪ ಗುಡಸೀಕರ, ನೀ ವಕೀಲ್ಕಿ ಹಿಡೀತೀನಂತಿಯಲ್ಲಾ, ಬರೋಬರಿ. ಹಿಡದ ಏನ್ ಮಾಡತಿ? ವಾದಾ ಮಾಡಿ ನಿಂಗೂನ ಉಳಿಸಬೇಕೆಂತಿ! ಇಲ್ಲೇ ಈಗs ಉಳಿಸಲ್ಲ, ಹಾಂಗs ನೋಡಿದರ ಕೋರ್ಟೀಗಿ ಹೋದಮ್ಯಾಲ ಕೇಸ ಹಾಂಗ ಆದೀತು, ಹೀಂಗ ಆದೀತು – ಅಂತ ಹೇಳಾಕ ಬರತೈತೇನು? ನಿನ್ನ ಕೈಗೂ ಮೀರಿದ್ದದು. ವಾದಾ ಮಾಡತಿ, ಕೂರತಿ, ನಿಂಗೂನ ಏನ ಮಾಡಬೇಕಂತ ಹೇಳವರು ಯಾರು? ಜಜ್ಜ ಸಾಹೇಬನ? ನೀನ? ಖೂನಿ ಮಾಡ್ಯಾನಂದಮ್ಯಾಲ ಫಾಸಿ ಶಿಕ್ಷಾ ಆಗಬೇಕಂತ ಅಂದರ? ಆಗ ಏನ ಮಾಡತಿ?”

“ಹಾಗಂತ ಕಾಯ್ದೆ ಕಾನೂನು ಮೀರಾಕ ಆದೀತೇನ್ರಿ?”

“ಮೀರಾಕ ನಾವೇನೀಗ ಅನ್ಯಾಯ ಮಾಡಾಕ ಹತ್ತೀದೇವು?”

“ಹಾಗಂದರ ಖೂನಿ ಮಾಡಿದವರ್ನೆಲ್ಲಾ ನೀವು ಹೀಂಗ ಬಚಾವ ಮಾಡಿಕೋತ ಹೋದರ ನ್ಯಾಯ ನೀತಿ ಉಳಿದಾವು ಹೆಂಗ?”

“ಅಂದರ ಒಟ್ಟು ನಿಂಗೂಗ ಫಾಸಿ ಶಿಕ್ಷಾ ಆಗಲೆಂದೇನು?”

ಗುಡಸೀಕರ ನಿರುತ್ತರನಾದ. ಇವರ ಈ ಅನಿರೀಕ್ಷಿತ, ಸ್ವಚ್ಛಂದ ವಾದಕ್ಕೆ ಹೇಗೆ ಉತ್ತರ ಕೊಡಬೇಕೆಂಬುದೇ ತಿಳಿಯದಾಯ್ತು. ಕೋರ್ಟಿನಲ್ಲಿ ಆಗುವ ವಾಗ್ವದಕ್ಕಿಂತ ಬೇರೆಯದೇ ಆದ, ವಿಚಿತ್ರ ವಾದವಿದು. ಈ ವಾದ ಮುಂದುವರಿಸಬೇಕಾದರೆ ಮೊದಲು ತಾನೆಲ್ಲಿ ನಿಂತಿದ್ದೇನೆ ಅನುವದನ್ನು ಮನದಟ್ಟು ಮಾಡಿಕೊಳ್ಳಬೇಕು. ಬರೀ ನ್ಯಾಯ ನೀತಿ ಎಂದರೆ ನಿಂಗೂ ಜೇಲಿಗೆ ಹೋಗಬೇಕು, ಆದರೆ ತನಗೂ ಅದು ಬೇಕಿಲ್ಲ, ಹಾಳಾಗಿ ಹೋಗಲೆಂದರೆ ಈ ಮುದಿ ನರಿಗಳು ಕಾನೂನನ್ನು ತಮ್ಮ ಕೈಯಲ್ಲಿ ತಕ್ಕೊಂಡು ತಮಗೆ ಬೇಕಾದಂತೆ ಅರ್ಥೈಸುತ್ತ ಊರಿಗೆಲ್ಲ ಹುಸಿ ಪುಢಾರಿಗಳಾಗುತ್ತಿದ್ದಾರೆ!

“ನೋಡ್ರಿ ನಿಂಗೂ ಉಳೀತಾನೋ ಬಿಡತಾನೋ; ಆದರ ಕಾಯ್ದೆ ಕಾನೂನಂದರ ನಿಮ್ಮ ಕೈಯಾಗಿನ ಜನಿವಾರಲ್ಲ.”

ಎಂದು ದತ್ತಪ್ಪನಿಗೆ ಹೇಳಿಬಿಟ್ಟ, ಜಾತಿ ಆಡಿದನಲ್ಲಾ ಎಂದು ಗೌಡನಿಗೂ ವ್ಯಸನವಾಯಿತು. ಇನ್ನು ಸುಮ್ಮನಿದ್ದರೆ ದತ್ತಪ್ಪನ ಬಾಯಿ ಮುಚ್ಚುವದು ಕಷ್ಟ. ನಿಂಗೂನಿಗಾಗಲೇ ಗುಡಸೀಕರನ ಮೇಲೆ ಸಿಟ್ಟುಬಂದಿತ್ತು. ಇದೇನಿದು? ದಾರಿಯ ಪೀಡೆ ತಂದು ಮೈಮೇಲೆ ತೂರಿಕೊಂಡಂತಾಯಿತಲ್ಲಾ ಎಂದುಕೊಂಡ ಸ್ವಥಾ ಪಂಚಾಯ್ತಿ ಮೆಂಬರ ಕಳ್ಳನಿಗೂ ಅಸಮಾಧಾನವಾಯ್ತು.

“ಆಯ್ತಪ್ಪಾ ಈಗೇನ ಮಾಡೋಣಂದಿ?”

“ಏನಂದರ ಪೋಜದಾರ್ನ ಕರಸಿ ಪಂಚಾನಾಮೆ ಮಾಡ್ರಿ” ಈ ಹುಡುಗನಿಗೊಮ್ಮೆ ಕೊನೆಯ ಬಾರಿ ಬುದ್ಧಿ ಹೇಳಿ ನೋಡೋಣ ಅನ್ನಿಸಿತು ಗೌಡನಿಗೆ,

“ನೋಡಪಾ, ನಿಮ್ಮ ಶಹರದಾಗಿನ ಕಾಯ್ದೆ ಬ್ಯಾರೆ, ನಮ್ಮ ಹಳ್ಳಿ ಕಾಯ್ದೆ ಬ್ಯಾರೆ, ನಮ್ಮದು ನಿನಗೂ ಗೊತ್ತಿದ್ದಾಂಗ ಭಾಳ ಸರಳ. ಇಲ್ಲಿ ಜಗಳಾದರ ಇಲ್ಲೇ ನ್ಯಾಯ ಸಿಗಬೇಕು. ಇಲ್ಲೀ ಜಗಳದ ಮ್ಯಾಲ ಬೆಳಗಾಂವಿ ತೀರ್ಪು ತಂದ ಹೇರೇನಂತಿ, ಹೆಂಗ ಹೇಳು?”

“ಕಾಯ್ದೆದೊಳಗ ಹಳ್ಳೀದೊಂದು ಶಹರದ್ದೊಂದು ಅಂತ ಎರಡಿಲ್ಲರಿ.”

“ಇಲ್ಲದಿದ್ದರೆ ಮಾಡಬೇಕಪಾ. ಮತ್ತ ಖರೇ? ಸಿಕ್ಕೀತು ಹೆಂಗ ಹೇಳು? ಇಷ್ಟs ತಿಳಿ ಇಲ್ಲಿಂದ ಬೆಳಗಾಂವಿಗೆ ಕೇಸ ಒಯ್ತಿ. ನಿಂಗೂ ದೇವರಾಣಿ ಮಾಡಿ ಸುಳ್ಳ ಹೇಳತಾನ, ಹೇಳಸ್ತಾನ, ಆ ಸಾಕ್ಷಿ ನಂಬಿ ನೀ ವಾದ ಮಾಡತಿ. ನಿನ್ನ ವಾದ ಕೇಳಿ ಜಜ್‌ಸಾಬ ಜಜ್‌ಮೆಂಟ ಬರೀತಾನ. ಬಡ್ಡ್ಯಾಗ ಸುಳ್ಳ ಐತಿ, ತುದ್ಯಾಗ ಕುಂತವಗ ಖರೆ ಹೆಂಗ ಕಂಡೀತು ಹೇಳು?”

ಯಾವ ಬದಿಯಿಂದ ನೋಡಿದರೂ ತಾನೇ ಸೋಲುತ್ತಿದ್ದೇನೆಂದು ಗುಡಸೀಕರನಿಗೆ ಅನ್ನಿಸಿತು. ದತ್ತಪ್ಪನಿಗೆ ಗೌಡನ ಅನುಭವ ಹೊಸದಲ್ಲ. ಗೌಡನ ಮಾತಿಗೆ ಮನಸ್ಸಿನಲ್ಲೇ ಭಲೇ ಅಂದ. ಗೌಡ ಮುದುವರಿಸಿದ –

“ನಾವೆಲ್ಲಾ ಮುದುಕರಾದಿವಪಾ: ನಮ್ಮ ಕಾಲ ಮುಗೀತು. ಇನ್ನ ಹಳ್ಳೀ ಕಾರಭಾರ ನೋಡಿಕೋಬೇಕಾದವ ನೀನು. ನಮ್ಮ ಕಾಲದ ಮಂದಿ ಸರಳ ಇದ್ದರು. ಹೇಳಿದ್ದ ಕೇಳತಿದ್ದರು. ನಮ್ಮ ಕಾಲದಾಗಂತೂ ನಾವು ಕೋರ್ಟು ಕಛೇರಿ ಕಟ್ಟಿ ಹತ್ತಲಿಲ್ಲ. ನೀ ವಕೀಲ ಪಾಸ ಮಾಡೀದಿ ಅಂತ ಈ ಮಂದೀನೆಲ್ಲಾ ಕೋರ್ಟಿಗಿ ಎಳದರ ಹೆಂಗ, ನೋಡು? ನರಮನಶ್ಯಾ ಮಾಡದ ಇನ್ನೇನ ದೇವರ ತಪ್ಪು ಮಡಾಕಾಗತೈತಿ? ತಪ್ಪು ಮಾಡಿದಾ ಅಂತ ಏಕದಂ ಕೊಲ್ಲಾಕ ನೀ ಯಾರು ಹೇಳು? ಮನಶ್ಯಾ ಬರೀ ಸಾಯಾಕs ಹುಟ್ಟಲಿಲ್ಲಪ್ಪಾ. ಬದುಕಾಕೂ ಹುಟ್ಯಾನ. ದೇವರ್ನ ನೋಡಲ್ಲ. ನಾವು ಮಾಡಿದ ತಪ್ಪ ನೋಡಿದರೆ ಒಂದs ಒಂದ ದಿನ ನಮ್ಮನ್ನ ಈ ಭೂಮಿ ಮ್ಯಾಗಿಡಬಾರದು. ಆದರೂ ಕರಿಮಾಯಿ ನಮ್ಮನ್ನೆಲ್ಲಾ ಇಟ್ಟಾಳಲ್ಲ? ಯಾಕ ಹೇಳು? ಯಾಕಂದರ ಸಾವಿನಕಿಂತಾ ಬದುಕ ದೊಡ್ಡದಪಾ….?”

ಇವರು ಅಂತಿಂಥ ವಾದಕ್ಕೆ ಮಣಿಯುವುದಿಲ್ಲವೆಂದು ಗುಡಸೀಕರನಿಗೆ ಖಾತ್ರಿಯಾಯ್ತು. ಇವರ ವಾದದಲ್ಲಿ ಹುರುಳಿಲ್ಲ. ನಿಜ, ಆದರೆ ಪ್ರತಿವಾದ ಹೇಗೆ ಹೂಡಬೇಕೆಂದು ತಿಳಿಯದಾಯ್ತು.

“ನೋಡರೀ, ಇಂದಿಲ್ಲ ನಾಳೆ ಈ ಸುದ್ದಿ ಪೊಲೀಸರಿಗೆ ಸಿಗೋದs. ಸಿಕ್ಕಿತು ಅಂದರ ನಿಂಗೂನ ಗತಿ ಬಿಡರಿ, ನೀವಿಬ್ಬರೂ ಈ ಕೇಸಿನ್ಯಾಗ ಸಿಗಬೀಳ್ತೀರಿ. ಈ ವಯಸ್ಸಿನಾಗ ನಿಮಗೆ ಜೇಲಾಗೋದಂದರ ಚೆಲೋ ಅಲ್ಲ; ತಿಳಿದ ನೋಡ್ರಿ.”

ದತ್ತಪ್ಪ ಈತನಕ ಬಾಯಿ ಮುಚ್ಚಿದ್ದೇ ಹೆಚ್ಚು.

“ಆತಪಾ ನಾವು ಜೇಲಿಗೂ ಹೋಗಾಕ ತಯಾರ, ಆದರ ನಿಂಗೂನ್ನ ಬಿಟ್ಟು ಕೊಡಾಕ ನಾವು ತಯಾರಿಲ್ಲ. ನಿಂಗೂ ಖೂನಿ ಮಾಡಬೇಕಂತ ಮಾಡಿಲ್ಲ. ಇನ್ನ ಮುಂದ ಮಾಡಾವನೂ ಅಲ್ಲ. ಏನೋ ಅಚಾನಕ ಆದದ್ದು. ನಾವಿಬ್ಬರೂ ಅವನ ಬೆನ್ನಿಗೆ ನಿಂದರಾವರs. ಬೇಕಂದರ ನೀ ಹೋಗಿ ಪೊಲೀಸರಿಗೆ ಹೇಳಿಕೊ ಹೋಗು.”

ಹಸಿ ಗೋಡೆಯಲ್ಲಿ ಹರಳು ನಟ್ಟಂತೆ ದತ್ತಪ್ಪನ ಈ ಮಾತು ಗುಡಸೀಕರನ ಎದೆಯಲ್ಲಿ ನಾಟಿಬಿಟ್ಟಿತು. ಈ ಮುದಿಯರಿಗೆ ಈ ಧೈರ್ಯವೇ? ಮಾತು ಬಿರುಸಾದ್ದು ಗೌಡನಿಗೂ ತಿಳಿದಿತ್ತು. ಕೂಡಲೇ ಹೇಳಿದ.

“ಆಯ್ತಪಾ; ನೀ ಅದೇನು ಶಿಕ್ಷಾ ಕೊಡ್ತಿ ಕೊಡು. ನೀ ಹೇಳಿದಾಂಗ ಕೇಳಾಕ ಹಚ್ಚತೀವಿ. ತಪ್ಪಿಗಿ ಶಿಕ್ಷಾ ಇಲ್ಲ ಅನಬ್ಯಾಡ. ಆದರ ಬೆಳಗಾಂವೀ ಮಂದಿ ನಮ್ಮ ಊರಿನ ಮನಶ್ಯಾಗ ಶಿಕ್ಷಾ ಕೊಡೋದು ಶಕ್ಯಿಲ್ಲ. ಏನಂತಿ?”

“ನಾ ಜಜ್ ಅಲ್ಲ. “

“ನಾವs ಮಾಡತೀವಲ್ಲ. ಬೇಕಂದರ ನಮಗೂ ಶಿಕ್ಷಾ ಕೊಡು. ನೀ ಹೇಳಿದ್ದಕ್ಕ ಎರಡಂದರ ನಮ್ಮ ನಾಲಿಗೆ ಕಳಚಿ ಬೇಳಲಿ; ಕರಿಮಾಯಿ ಆಣೀ, ಮತ್ತೈನೇತಿ?”

ಈ ತನಕ ನಿಂಗೂ ಬ