ಹಗಲು ಹೊತ್ತಿನಲ್ಲಿ ಚತುಷ್ಟಯರ ಪ್ರಚಾರ ಕಾರ್ಯ ನಡೆದರೆ, ರಾತ್ರಿ ಹೊತ್ತು ಬಸವರಾಜೂನ ಸಂಚುಗಳು ನಡೆಯುತ್ತಿದ್ದವು. ಹಳ್ಳಿಯ ಕೊಳ್ಳೀ ಬೆಳಕಿನಲ್ಲಿ ಅವು ಜನಗಳ ಕಣ್ಣಿಗೆ ಬೀಳುತ್ತಿರಲಿಲ್ಲ.

ಮುಂಗಾರಿ ಬೆಳೆ ಬಂದಾಗಿತ್ತು. ಹಿಂಗಾರಿಯಿನ್ನೂ ಹೊಲಗಳಲ್ಲಿತ್ತು. ಈಗ ದೇವರೇಸಿಗೆ ಮೈತುಂಬ ಕೆಲಸ. ಓಡಾಡಿ ಆಯ ತರಬೇಕಿತ್ತು. ಸಂಜೆಯ ತನಕ ಕಣದಿಂದ ಕಣಕ್ಕೆ ಅಲೆದಾಡಿ ಗುಡಿಸಲಿಗೆ ಬಂದರೆ, ಕಂಬಳಿ ಚೆಲ್ಲಿಕೊಂಡು ಬಿದ್ದರೆ ಸಾಕಾಗಿತ್ತು. ಆದರೆ ಎಷ್ಟಂದರೂ ಚಪಲದ ಬಾಯಿ, ಕಂಠಮಟ ಕುಡಿಯಬೇಕೆನಿಸಿ ಒಣಗುತ್ತಿತ್ತು. ಒತ್ತ ಲಗಮವ್ವನಿಗೂ ಆಯ ಸಂಗ್ರಹಿಡುವ ಕೆಲಸ. ಭಟ್ಟಿಯಿಳಿಸುವುದು ಅವಳಿಂದ ಸಾಧ್ಯವಿರಲಿಲ್ಲ. ಅವಳು ಅಡಿಗೆ ಮಾಡಿಕೊಳ್ಳುವುದೇ ಅಪರೂಪವಾಗಿತ್ತು. ಹೊಲಗಳಲ್ಲಿ ರೈತರು ಕೊಡುವ ರೊಟ್ಟಿಯಿಂದಲೇ ತೃಪ್ತಳಾಗುತ್ತಿದ್ದಳು. ಇಷ್ಟು ದಿನ ಗುಡಿಸಲಲ್ಲಿ ದುರ್ಗಿಯಿರುತ್ತಿದ್ದಳು. ಲಗಮವ್ವ ಬೇಕೆನಿಸಿದರೆ ಒಂದು ರೊಟ್ಟಿ ಸಡಿಸಿಕೊಳ್ಳುತ್ತಿದ್ದಳು. ಈಗ ದುರ್ಗಿಯ ಬಳಕೆ ಕಮ್ಮಿಯಾಗಿತ್ತು.

ಇತ್ತ ದಿನ ಅಲ್ಲ. ಕಾಲವಲ್ಲ, ಧೀನ್ ಅಂದ ಹಾಗೆ ಸುಂದರಿಯ ಸಡಗರ ಕಟ್ಟುಮೀರಿತ್ತು. ಗುಡಸೀಕರ ಮತ್ತೆ ಸಿಕ್ಕ ಸಂಭ್ರಮದಲ್ಲಿ ಮೈಮರೆತು ಖಬರಗೇಡಿಯಾಗಿದ್ದಳು. ಅವಳನ್ನು ಹಿಡಿಯುವುದೇ ಕಷ್ಟವಾಗಿ ಕಣ್ಣಿ ಬಿಚ್ಚಿದ ಉಡಾಳ ದನದಂತೆ ಮೈ ಉಮೇದಿಯನ್ನು ಕೇರಿಯ ತುಂಬ ತುಳುಕಿದಳು. ನೆಲ ಗುಡಿಸುವ ಹಾಗೆ ನೆರಿಗೆ ಹೊಡೆದು ಇಪ್ಪತ್ತು ರೂಪಾಯಿಯ ಶಾಪೂರಿ ಸೀರೆ ಉಟ್ಟು ಮೆರೆದಳು. ಬಾಡಿಯ ಎದೆಯಲ್ಲೆರಡು ಚೂಪಾದ ಚೂರಿ ಇಟ್ಟುಕೊಂಡು ಗುಡಸೀಕರನ ಕಣ್ಣಿರಿದಳು. ಸೊಂಟಕ್ಕೆ ಬೆಂಕಿ ಹಚ್ಚಿದಳು. ಮೂಗಿನ ದಿಗರಿನಲ್ಲಿ ಕೆಳಗಿನ ನೆಲ ಮರೆತಳು. ಜನ ಕುಕ್ಕದಿರಲಿಲ್ಲ. ಆದರೆ ಹೇಳಿ ಕೇಳಿ ಸೂಳೆಯಾದ್ದರಿಂದ, ಅದೂ ಪರವೂರವಳಾದ್ದರಿಂದ ಅನ್ನುವಷ್ಟು ಅಂದು ಸುಮ್ಮನಾದರು. ಆದರೆ ಮೂಗಿನ ಮೂಗುತಿಯಲ್ಲೇ ನದರ ನೆಟ್ಟ ಸುಂದರಿಗೆ ಈ ಮಾತು ಕೇಳಿಸಲಿಲ್ಲ. ಚೈನಿಯ, ಪ್ರೇಮದ, ಕಾಮದ, ಸುಖದ ಉನ್ಮಾದದಲ್ಲಿ ಹುಚ್ಚು ಕುದುರೆಯಾಗಿದ್ದಳು. ಏರಿದವನ ಖರೆ, ಖೊಟ್ಟೆ, ತಿಳಿಯದೆ, ಗೊತ್ತುಗುರಿ ಗೊತ್ತಿಲ್ಲದೆ ಮೂಗಿನ ಮುಂದಿನ ದಿಕ್ಕಿಗೆ, ಎದುರು ತಗ್ಗಿರಲಿ, ದಿನ್ನೆಯಿರಲಿ, ಏಳಲಿ, ಬೀಳಲಿ, ಓಟಕ್ಕೆ ಸಿದ್ಧವಾಗುತ್ತಿದ್ದಳು. ಆದರೆ ಅವಳಿಗೂ ತಿಳಿದಿರಲಿಲ್ಲ. ತನ್ನ ನಿಜವಾದ ಸವಾರ ಯಾರೆಂದು.

ಇತ್ತ ಬಸವರಾಜು ಜಾತ್ಯಾ ಕಮ್ಮಾರನಂತೆ ಕುಲುಮೆಯಲ್ಲಿ ಅನೇಕ ಕಬ್ಬಿಣ ಹಾಕಿ ಕಾಸುತ್ತಿದ್ದ. ಚತುಷ್ಟಯರಿಂದ ತಿದಿ ಊದಿಸುತ್ತಿದ್ದ. ಇದ್ದಿಲು ಹಾಕುತ್ತಿದ್ದ. ಕಬ್ಬಿಣ ಕಾದೊಡನೆ ಗುಡಸೀಕರನಿಂದ ಹೊಡೆಸಿ ಏನೋ ಸಾಮಾನು ಮಡುತ್ತಿದ್ದ. ಆದರೆ ಮಾಡಿದ ಸಾಮಾನು ಯಾರಿಗೆ ಯಾವ ಕೆಲಸಕ್ಕೆ ಉಪಯೋಗ ಬೀಳುತ್ತದೆಂಬುದು ಮಾತ್ರ ಬೇರೆಯವರಿಗೆ ತಿಳಿಯುತ್ತಲೇ ಇರಲಿಲ್ಲ. ಅವನ ಕುಲುಮೆಯಲ್ಲಿ ಅನೇಕ ದಿನಗಳಿಂದ ಬಿದ್ದಿದ್ದ ಸಲಾಕೆಯೊಂದಿತ್ತು. ಹೊಸ ಮಿದು ಕಬ್ಬಿಣವೊಂದು ಬಂದು ಸೇರಿತ್ತು. ಅದೇನು ಸಾಮಾನು ಮಾಡುತ್ತಾನೋ ನೋಡೋಣ.

ಒಂದು ದಿನ ದೇವರೇಸಿ ಹೊಲದಿಂದ ಮೂರು ಸಂಜೆಗೇ ಬಂದ. ಬಸವರಾಜು ಮೆತ್ತಗೆ ದೇವರೇಸಿಯ ಗುಡಿಸಲಲ್ಲಿ ಕಾಲಿಟ್ಟ.  ನೋಡ ನೋಡುತ್ತಿದ್ದಂತೇ “ತಾಯೀ” ಎಂದು ಬಂದವನೇ ಕಾಲು ಹಿಡಿದ. ಅವನ ಬಗ್ಗೆ ದೇವರೇಸಿಗೇನೂ ಸಿಟ್ಟಿರಲಿಲ್ಲ. ಅಸಮಾಧಾನವೂ ಇರಲಿಲ್ಲ. ಆದರೆ ಆತ ತನ್ನ ಗುಡಿಸಲಿಗೆ ಬಂದಾನೆಂದು ಕನಸು ಮನಸಿನಲ್ಲಿಯೂ ಧೇನಿಸದವನಲ್ಲ. ತಾನಾಗಿ ಗುಡಿಸಲಿಗೆ ಬಮದನಲ್ಲ, ಬಂದವನು ಕಾಲು ಹಿಡಿದನಲ್ಲ, ದೇವರೇಸಿಗೆ ಸಂತೋಷವೇ ಆಯ್ತು. ಇಂಗರೇಜಿ ಕಲಿತವರು ತನ್ನನ್ನು ನಿರ್ಲಕ್ಷ್ಯ ಮಾಡುತ್ತಾರೆಂದು ಮನಸ್ಸಿನಲ್ಲಿ ಸ್ವಲ್ಪ ಅಸಮಾಧಾನ ಕೂಡ ಇತ್ತು. ಗುಡಸೀಕರ  ಒಮ್ಮೆಯೂ ಇವನ ಕಾಲು ಮುಟ್ಟಿರಲಿಲ್ಲ. ತಾಯೀ ಅಮದಿರಲಿಲ್ಲ. ಈತನಾದರೆ ಗುಡಸೀಕರನಿಗಿಂತ ಸ್ವಲ್ಪ ಹೆಚ್ಚು ಕಲಿತಿರಬೇಕೆಂದೇ ಅನೇಕರು ಮಾತಾಡಿಕೊಂಡಿದ್ದರು. ಈಗ ಇವನೇ ಬಂದು ಕಾಲುಹಿಡಿದು,  ಕೊಡಬೇಕಾದ ಗೌರವ ಕೊಟ್ಟಿದ್ದನಲ್ಲ, ಆ ಮಾತು ನಿಜವೆನ್ನಿಸಿತು. ಆದರೆ ಕೂಡಲೇ ಏನು ಮಾಡಬೇಕು? ಏನು ಮಾತಾಡಬೇಕೆಂದು ತೋಚಲಿಲ್ಲ. ಎದ್ದು ಹೋಗಿ ಮೂಲೆ ನೆಲುವಿಗಿದ್ದ ಬಂಡಾರ ಚೀಲತಂದು ಅವನ ಹಣೆಗಂಟಿಸಿ ಕೂತ. ಬಸವರಾಜು ಕೈಮುಗಿದೇ ಕೂತ. “ತಾಯೀ ನಮ್ಮ ಗುಡಿಸಲ ತನಕ ಪಾದಾ ಬೆಳೆಸಿ, ನಮ್ಮ ಸೇವಾ ಒಪ್ಪಿಸಿಕೋಬೇಕು” ಅಂದ. ದೇವರೇಸಿಗೆ ಇನ್ನೂ ದಿಗಿಲು. ಅವನ ಬರವಿನ ಹಾಗೆ ಅವನ ಈ ಮಾತನ್ನೂ ಆತ ನಿರೀಕ್ಷಿಸಿರಲಿಲ್ಲ. ಹೂಂ ಎನ್ನಬೇಕೆ? ಇಲ್ಲ ಅನ್ನಬೇಕೆ? ಈ ಅಡ್ಡದಿನ ಅಡ್ಡ ವೇಳೆಯಲ್ಲಿ ಸೇವೆ ಒಪ್ಪಿಸಿಕೊಳ್ಳೋದಂದರೇನು? ಗುಡಿಸಲ ತನಕ ಬರಬೇಕಂತ ಅಲ್ಲವೇ ಹೇಳಿದ್ದು? ಹೋಗಿ ಅದೇನು ಸೇವೆಯೋ ನೋಡೋಣವೆಂದುಕೊಂಡು “ಆಗಲಿ” ಅಂದ. ಬಸವರಾಜು ಎದ್ದುನಿಂತ ಕೈ ಮುಗಿದುಕೊಂಡೇ, ಅವನು ಹೋಗದೆ ಅಲ್ಲೇ ನಿಂತದ್ದನ್ನು ನೋಡಿ ಬಹುಶಃ ಈಗಲೇ ಬಾ ಅಂತಿದ್ದಾನೆಂದು ದೇವರೇಸಿಯೂ ಎದ್ದ. ಬಸವರಾಜು ಮುಂದೆ ಹೊರಟ. ದೇವರೇಸಿ ಬೆನ್ನುಹತ್ತಿದ.

ಕಂಬಳಿ ಹಾಸಿತ್ತು. ತಾಯಿ ಗದ್ದಿಗೆಗೊಂಡಳು. ಬಸವರಾಜು ಒಳ ಹೊರಗೆ ಓಡಾಡುತ್ತ, ಸಂಭ್ರಮ ಮಾಡುತ್ತ ಒಂದು ಹರಿವಾಣ ತುಂಬ ವಿಸ್ಕಿ ಸುರಿದು ತಾಯಿಗಿತ್ತ. ತಾಯಿಗೆ ಹಿಗ್ಗೋ ಹಿಗ್ಗು. ಈಗ ಹದಿನೈದಯ ದಿನಗಳಿಂದ ಮುಟ್ಟಿರಲಿಲ್ಲವಲ್ಲ, ಕುಡಿಯೋದನ್ನ ಬಿಟ್ಟು ವರ್ಷವಾದಂತಾಗಿತ್ತು. ಅಲ್ಲದೆ ಈ ತನಕ ಕುಡಿದದ್ದು ಕಂಟ್ರಿ ಸೆರೆ; ಅದೂ ಲಗಮವ್ವ ಮಡಿದ್ದು. ಇದಾದರೆ ಥಳ ಥಳ ಹೊಳೆಯುವ ಬಣ್ಣದ ಬಾಟ್ಲಿಯಲ್ಲಿಟ್ಟದ್ದು, ತನ್ನದುರಿಗೇ ಅದನ್ನು ಒಡೆದದ್ದು. ಮುಂದಿಡುವುದೇ ತಡ ತಾಯಿ ಒಂದೇ ಗುಟುಕಿಗೆ ತಳಕ್ಕೊಂದು ಹನಿ ಕೂಡ ಬಿಡದೆ ಮುಗಿಸಿದಳು. ಕರುಳಿನಲ್ಲಿ ಭಗ್ಗನೇ ಬೆಂಕಿ ಹೊತ್ತಿದಂತಾಗಿ ಕಿವಿ, ಮೂಗು ಬಾಯಿಗಳಲ್ಲಿ ಬಿಸಿ ಗಾಳಿ ಸೂಸಿತು. ಆಮೇಲೆ ಒಳಗೆ ಹೋಗಿ ಹರಿವಾಣದ ತುಂಬ ಖಂಡದ ಪಲ್ಯ, ಏಳೆಂಟು ರೊಟ್ಟಿ ತಂದು ಮುಂದಿಟ್ಟ, ತಾಯಿಯ ಕಣ್ಣರಳಿ, ಮೂಗರಳಿ, ಆ ಈ ನೋಡದೆ ಪಟಪಟ ತಿನ್ನತೊಡಗಿದಳು.

ನೀರು ಕೂಡ ಬೆರಸದೆ ಇಡೀ ಬಾಟ್ಲಿ ವಿಸ್ಕಿಯನ್ನು ಒಂದೇ ಗುಟುಕಿಗೆ ಸೇವಿಸಿದಾಗ ಬಸವರಾಜು ಕಣ್ಣಗಲಿಸಿ ಆಶ್ಚರ್ಯ ಸೂಚಿಸಿದ್ದರೆ ಚಿಮಣಾ ಕಣ್ಣರಳಿಸಿ ನಾಲಿಗೆ ಕಚ್ಚಿಕೊಂಡು ಹೊಯ್ಮಾಲಿ ಹೊಯ್ಯಗೊಂಡಳು. ಈಗ ದೇವರೇಸಿ ಪ್ರಾಣಿಗಳ ಹಾಗೆ ಸಪ್ಪಳ ಮಾಡುತ್ತ ಖಂಡ ತಿನ್ನುವುದನ್ನು ನೋಡಿ ಬಸವರಜು ಮುಗುಳುನಕ್ಕ. ಒಳಗಿದ್ದ ಸುಂದರಿ ಈಶ್ಶೀ ಎಂದು ಕಿಸ್ಸಕ್ಕನೆ ನಕ್ಕಳು. ದೇವರೇಸಿ ಮಾತ್ರ ಇದಾವುದರ ಪರಿವೆಯಿಲ್ಲದೆ ತಿನ್ನುತ್ತಿದ್ದ.

ಮೈಯಲ್ಲಿ ಸೊಂಟದ ಧೋತ್ರ ಬಿಟ್ಟರೆ ಒಂದು ಚೂರು ಬಟ್ಟೆಯಿರಲಿಲ್ಲ. ಖಂಡ ಹೆಂಡ ಎರಡೂ ಸೇರಿ ಮೈಮೇಲೆ ಧಾರಾಕಾರ ಬೆವರು ಸುರಿಯುತ್ತಿತ್ತು. ಮೊದಲೇ ಕರ್ರಗೆ ಕಬ್ಬಿಣದಂತಿದ್ದ ಮೈ, ಬೆವರಿನಿಂದ ಇನ್ನಷ್ಟು ಹೊಳೆಯತೊಡಗಿತ್ತು. ಆ ಮೈಕಟ್ಟಿಗೆ ಅರವತ್ತು ವರ್ಷ ಬಹಳವಾಯ್ತು. ಎದೆ, ರಟ್ಟೆಯ ಮಾಂಡಖಂಡ ಗಟ್ಟಿಗೊಂಡು ಹುರಿಯಾಗಿದ್ದವು. ಹಿಂದೆ ಮಾರುದ್ದ ಜಡೆ, ಮುಂದೆ ಗಡ್ಡ, ಹೆಂಗಸಲ್ಲದ ಗಂಡಸಲ್ಲದ ಆ ಆಕೃತಿ ವಿಶೇಷ ನೋಡಿ ಬಸವರಾಜನಿಗೆ ಮೋಜೆನಿಸಿತು. ಸುಂದರಿಗೂ ಮುಂದೆ ಬಂದು ದೇವರೇಸಿಯಿಂದ ನೋಡಿಸಿಕೊಳ್ಳಬೇಕೆಂದಳು. ತಾನು ಹೇಳದ ಹೊರತು ಹೊರಗೆ ಬರಕೂಡದೆಂದು ಬಸವರಾಜು ಹೇಳಿದ್ದ, ಸುಮ್ಮನಿದ್ದಳು ಬಹುಶಃ ಖಾರ ಜಾಸ್ತಿಯಾಗಿರಬೇಕು ಪಲ್ಯಕ್ಕೆ. ದೇವರೇಸಿಯ ಮೂಗು ಸೋರಿ ಕಣ್ಣೀರೂ ಅದರೊಂದಿಗೆ ಬೆರೆತು, ಬೆವರುಗೈಯಿಂದಲೇ ಅದನ್ನೆಲ್ಲ ಒರೆಸಿಕೊಳ್ಳುತ್ತ ಉಂಡ. ಉಂಡ ಮೇಲೆ ಗುಡಿಸಲು ನಡುಗಿ, ಪಕ್ಕದ ಗುಡಿಸಲ ಮಕ್ಕಳು ಹೆದರಿ ಚೀರುವ ಹಾಗೆ ಡರ್‌ರ್‌ರ್ ಎಂದು ಢರಿಕೆ ತೇಗಿದ, ಸುಂದರಿಗೆ ಅಸಹ್ಯವಾಯ್ತು.

ಊಟವಾದ ಮೇಲೆ ಬಸವರಾಜು ಮತ್ತು ಸುಂದರಿ ಇಬ್ಬರೂ ಒಳಗೊಳಗೇ ನಗುತ್ತ ತಾಯಿಗೆ ಅಡ್ಡಬಿದ್ದರು. ತಾಯಿ ಅವರ ಹಣೆಗೆ ಬಮಡಾರ ಹಚ್ಚಲಿಲ್ಲ. ಹರಕೆ ನುಡಿಯಲಿಲ್ಲ. ತೇಲುಗಣ್ಣು ಮಾಡಿಕೊಂಡು ‘ತಾಯೀ’ ಎನ್ನುತ್ತ ಎದ್ದಳು. ತೂಕ ತಪ್ಪಿತು. ಬಸವರಾಜು ಹೋಗಿ ಹಿಡಿದುಕೊಂಡು ಅವಳ ಗುಡಿಸಲು ತನಕ ಹೋಗಿ ಬಿಟ್ಟುಬಂದ.

ಆ ದಿನ ರಾತ್ರಿ ದೇವರೇಸಿಗೆ ಯಾರೋ ನೆತ್ತಿಯ ಮೇಲೆ ಕೊಡ್ಲಿಯಿಂದ ಏಟು ಹಾಕಿದಂತೆ ಕನಸಾಯಿತು. ಗಡಬಡಿಸಿ ಎದ್ದು ಕುತ. ಬಿಕ್ಕಲಾಗಲಿಲ್ಲ. ಕನಸಿನ ಅರ್ಥವೂ ತಿಳಿಯಲಿಲ್ಲ. ಆದರೆ ಮಾರನೇ ದಿನದಿಂದ ತಾಯಿಯ ಕೃಪಾದೃಷ್ಟಿ ಬಸವರಾಜೂನ ಗುಡಿಸಲ ಕಡೆ ಬೀಳತೊಡಗಿತು. ಬಸವರಾಜು ನಿರಾಸೆಗೊಳಿಸಲಿಲ್ಲ.