ಶಿವಾಪುರದ ಪರಗೌಡನಿಗೀಗ ಅರವತ್ತು ಅರವತ್ತೈದು ವಯಸ್ಸು. ಅದು ಹೆಚ್ಚಲ್ಲ. ಅವನ ಆಕೃತಿ ನೋಡಿದರೆ, ಅಮಲೇರಿದಂತೆ ಸದಾ ಕೆಂಪಡರಿದ, ಆದರೆ ನಗುವ ಕಣ್ಣು, ನೇರ ಮೂಗು, ಎರಡೂ ಅಂಚಿನಲ್ಲಿ ತಗ್ಗುತೋಡಿ ಕೊನೆಗೊಳ್ಳುವ, ಗೆರೆಯಲ್ಲಿ ಬರೆದಂಥ ತುಟಿ, ಮನಸ್ವೀ ಬೆಳೆದ ಮೀಸೆ, ತುಂಬುಗೆನ್ನೆಯ ದುಂಡು ಮುಖ, ದಾಡಿ ಬೋಳಿಸುತ್ತಿದ್ದುದೇ ಕಡಿಮೆ, ತಲೆಗೆ ರುಂಬಾಲಿದ್ದರೆ ಇತ್ತು. ಇಲ್ಲದಿದ್ದರೆ ಬಗಲಿನಲ್ಲಿರುತ್ತಿತ್ತು. ಕಿವಿಯಲ್ಲಿ ಬಂಗಾರದ ವಾಲೆ, ಬಲಗೈ ಬೆರಳಿಗೆ ನಾಲ್ಕುಂಗುರ, ಆರಡಿ ಎತ್ತರದ ಅಜಾನುಬಾಹು ಆಕೃತಿಯನ್ನು  ಒಮ್ಮೆ ನೋಡಿದವರು ಅವನನ್ನಾಗಲೀ, ಅವನ ಹೆಸರನ್ನಾಗಲೀ ಮರೆಯುವದೇ ಅಸಾಧ್ಯ. ಇಷ್ಟು ವಯಸ್ಸಾದರೂ ದೇಹದ ಒಂದು ಭಾಗದಲ್ಲಿಯೂ ಚರ್ಮ ಜೋತು ಬಿದ್ದಿರಲಿಲ್ಲ. ಒಂದು ನೆರಿಗೆ ಮೂಡಿರಲಿಲ್ಲ.

ನಕ್ಕಾಗಂತು ಗೌಡನನ್ನು ನೊಡುವದೇ ಚಂದ. ಗೌರವರ್ಣದ ಆ ಮುಖದಲ್ಲಿ ಅಚ್ಚ ಬಿಳಿಯ ದಾಳಿಂಬರದ ಬೀಜದಂಥ ಹಲ್ಲಿನ ಸಾಲು. ಬಹಳ ರಮಣೀಯವಾಗಿರುತ್ತಿತ್ತು. ಬೇರೆಯವರಿಗೆ ಕೊಡ್ಲಿ ಕುಡಗೋಲು ಅಸ್ತ್ರಗಳಾದರೆ ಗೌಡನಿಗೆ ಅವನ ನಗೆಯೇ ಅಸ್ತ್ರ. ಆ ನಗೆಯಿಂದ  ಅವ ಬೇಕಾದ ಶತ್ರುಗಳನ್ನು ಹಾದಿಗೆ ತಂದಿದ್ದ, ಅವನ ಹತ್ತಿರ ಜಗಳವಾಡ ಬಂದ ಕೊಳವಿಯ ಮುದುಕಪ್ಪ ‌ಗೌಡ ಅವನ ನಗೆಗೆ  ಮಾರುಹೋಗಿ ಗೌಡ ಹೇಳಿದಂತೆ ಕೇಳಿಕೊಂಡು ತಿರುಗಿ ಹೋದನಂತೆ. ‘ಜಗಳ ಮಾಡದs ಹಾಂಗ ಯಾಕ ಬಂದ್ಯೋ?’ ಎಂದು ಊರವರು ಕೇಳಿದರೆ “ಏನು ಮಾಡ್ಲೋ? ನಕ್ಕುಬಿಟ್ಟ” ಎಂದು ಹೇಳಿದನಂತೆ. ಅವಕಾಶ ಸಿಕ್ಕಾಗ ಯಾವ ಹೆಂಗಸೂ ಅವನ್ನನ್ನೊಮ್ಮೆ ಕದ್ದು ನೋಡದಿರುವುದು  ಸಾಧ್ಯವಿಲ್ಲ. ಬಸೆಟ್ಟಿಯ ಹೆಂಡತಿ, ಒಮ್ಮೆ ರಾತ್ರಿ ಗೌಡನ ಹೆಸರಿನಲ್ಲಿ ಅದೇನೋ ಕನವರಿಸುತ್ತಿದ್ದಳಂತೆ. ಬಸೆಟ್ಟಿಗೆ ಎಚ್ಚರವಿತ್ತು. ಎದ್ದು ಕೂತು “ಆ ಗೌಡನ್ನೋಡಿದರ ನಮ್ಮಂಥ ಗಂಡಸರಿಗೇ ಹೆಂಗೆಂಗೋ ಆಗತೈತಿ; ಇನ್ನು ಇಂಥವಕ್ಕೇನು” ಎಂದುಕೊಂಡು ಮತ್ತೆ ಮಲಗಿದನಂತೆ.

ಇದಕ್ಕೆ ತಕ್ಕ ಹಾಗೆ ಗೌಡ ರಸಿಕ ಕೂಡ. ಹಾಗಂತ ಹದ್ದು ಮೀರಿದವನಲ್ಲ; ಕುಡಿತ ಒಂದು ಬಿಟ್ಟರೆ. ಒಂದಲ್ಲ, ಎರಡಲ್ಲ, ಬಾಸಿಂಗಬಲದ ಮದುವೆಗಳೇ ನಾಲ್ಕಾಗಿದ್ದವು. ಮೊದಲಿನ ಮೂವರು ಹೆರಿಗೆಯಲ್ಲೇ ಸತ್ತು. ಊರವರ ನೆನಪಿನಲ್ಲೂ ನಮ್ಮ ಕಥೆಯಲ್ಲೂ ಹೆಸರು ಸಹ ಉಳಿಸಿಕೊಳ್ಳದೆ. ನಾಲ್ಕನೆಯವಳು ನಿಜಗುಣೆವ್ವ. ಕೊಳವಿಯ ಮುದುಕಪ್ಪಗೌಡನ ತಂಗಿ ಆದರೆ ನಿಜಗುಣೆವ್ವನೂ ಸತ್ತಳು….ಅದು ಹೀಗೆ:

ಮದುವೆಯಾಗಿ ಕೆಲ ದಿನಗಳಾದ ಮೇಲೆ ಆಕೆ ಗಂಡು ಹೆತ್ತಳು ನಿಜ; ಆದರೆ ಕೂಸು ಸತ್ತು ಬಾಣಂತಿ ಬದುಕಿದಳು. ಗೌಡನಿಗೆ ಆಗ ಹೊಳೆದುಬಿಟ್ಟಿತು: ಇದ್ದಷ್ಟು ದಿನ ಮೊಳಕೈವರೆಗೆ ಸೋರುವಂತೆ ಸುಖವುಂಡು ಸತ್ತರಾಯಿತು, ಎಂದು ಹೀಗೆಂದು ದುಂದು ದುಂದಾಗಿ ಬದುಕತೊಡಗಿದ. ಆ ಅವಧಿಯ ಅವನ ರಸಿಕತನದ ಕಥೆಗಳೇ ನೂರೆಂಟಿವೆ. ಒಂದೆರಡನ್ನು ಸ್ವಥಾ ಲಗಮವ್ವ ಕವಿಮಾಡಿ ಹಾಡಿದ್ದಾಳೆ. ಗೌಡನೇನೋ ಗಂಡಸು, ಬಿಚ್ಚಿಬಿಟ್ ಕುದುರೆಯ ಹಾಗೆ ಇರಬಲ್ಲ; ನಿಜಗುಣೆವ್ವ? ತನ್ನಿಂದ ಈ ಮನೆತನದ ದೀಪ ಆರುವಂತಾಯಿತಲ್ಲಾ? ಎಂದು ಒಳಗೊಳಗೇ ಹಣ್ಣಾದಳು, ಒಣಗಿ ಉತ್ತತ್ತಿಯಾದಳು, ಗಂಡಹೆಂಡಿರ ಬುದ್ಧಿ ಓಡದಿದ್ದೆರೇನಾಯಿತು? ಕುಲಕಣ್ಣಿ ದತ್ತಪ್ಪನ ಚಿಂತಾಮನೀ ಬುದ್ಧಿ ಸುಮ್ಮನಿರುವದೇ? “ತಾಯವರs” ಎಂದು ನಿಜಗುಣೆವ್ವನ ಬಳಿ ಬಂದ ಲೋಕಾಭಿರಾಮವಾಗಿ ಅದು ಇದು ಮಾತಾಡಿದ. ಪುರಾಣವಾಡಿದ, ದೃಷ್ಟಾಂತ ಹೇಳಿದ. ದತ್ತಕದ ಮಾತೆತ್ತಿದ ‘ಹ್ಯಾಂಗೂ ಬ್ಯಾಡರ ಶಿವಿಗೆ ಗೌಡನಿಂದ ಹುಟ್ಟಿದ ಮಗನಿದ್ದಾನಲ್ಲಾ ಅವನ್ನs ಯಾಕ ದತ್ತಕ ತೊಗೋಬಾರದು?’ ಎಂದೂ ಹೇಳಿಬಿಟ್ಟ.

ಶಿವಿಯ ಮಗ ಶಿವನಿಂಗ ಗೌಡನಿಗೇ ಹುಟ್ಟಿದವನೆಂಬ ಗುಲ್ಲು ಗುಟ್ಟಿನದಲ್ಲ. ಗೌಡನಿಗಾಗಿ ಶಿವಿ ಮಾಡಿಕೊಂಡ ಗಂಡನನ್ನೇ ಬಿಟ್ಟು ತೌರುಮನೆಯಲ್ಲೆ ಉಳಿದಿದ್ದಳು. ನಿಜಗುಣೆವ್ವನೇ ಹಟಹಿಡಿದು ಜಗಳವಾಗಿ ಶಿವ ಗೌಡ ತೋಟದ ಕಡೆ ಹೋಗದ ಹಾಗೆ ಬಂದೋಬಸ್ತ ಮಾಡಿದ್ದಳು. ಮೊದಲೇಟಿಗೇ ದತ್ತಪ್ಪನ ಮಾತನ್ನು ಗೌಡತಿ ಒಪ್ಪಲಿಲ್ಲ, ದತ್ತಪ್ಪ ಬಿಡಲಿಲ್ಲ. ಒಂದೆರಡು ದಿನ ಕಳೆದು ಪೂಜಾರಿಯ ಬಾಯಿಂದಲೂ ಹೇಳಿಸಿಬಿಟ್ಟ, ಆ ಪೂಜಾರಿಗೆ ಯಾವಾಗ ದೇವಿ ಮೈ ತುಂಬುತ್ತದೆ, ಯಾವಾಗಿಲ್ಲ ಎಂದು ಹೇಳುವದೇ ಕಷ್ಟ. ತಾನು ಆಡುವದೇನು ದೇವಿ, ನುಡಿಯುದೇನೆಂದು ಅವನಿಗೂ ತಿಳಿಯದು. ಆಯಿತು, ಕರಿಮಾಯಿಯ ಅಪ್ಪಣೆಯಾಯಿತೆಂದು ಗೌಡ್ತಿ ಒಪ್ಪಿದಳು. ದತ್ತಕವೂ ಆಗಿಬಿಟ್ಟಿತು.

ಶಿವನಿಂಗ ಗೌಡನಿಗೆ ತಕ್ಕಮಗ. ಮನೆತನದ ಗೌರವ, ಹಕ್ಕು ಧಿಮಾಕುಗಳಿಗೆ ಯಾವಂದದಿಂದಲೂ ಕುಂದುಬರುವ ಹಾಗೆ ನಡೆದುಕೊಳ್ಳಲಿಲ್ಲ. ಹೊಟ್ಟಯಲ್ಲಿ ಹುಟ್ಟಿದ ಮಗನಿಗಿಂತ ಹೆಚ್ಚಾಗಿಯೇ ಗೌಡ್ತಿಯನ್ನು ನೋಡಿಕೊಂಡ. ಶಿವಿಗೆ ತೋಟದ ಗುಡಿಸಲಿನಲ್ಲಿಯೇ ವಾಸಕ್ಕೆ ವ್ಯವಸ್ಥೆ ಮಾಡಿದರು. ಗೌಡ್ತಿ ಶಿವನಿಂಗನ ತೊಡೆಯ ಮೇಲೆ ತಲೆಯಿಟ್ಟು, “ಗೌಡನನ್ನು ಬರೋಬರಿ ನೋಡಿಕೋ ಮಗಾ” ಎಂದು ಹೇಳಿ ಪ್ರಾಣಬಿಟ್ಟಳು. ಇದನ್ನು ಜನ ಮೆಚ್ಚಿಕೊಂಡರು.

ಗೌಡ ಹರೆಯದಲ್ಲಿ ಮಾಡಿದ ಕಾರುಬಾರನ್ನು ಎದೆಗೊಟ್ಟು ಒಪ್ಪಿಕೊಂಡನಲ್ಲ; ಕೊನೆಗೆ ಶಿವನಿಂಗನನ್ನು ಮಗನಾಗಿ ತಕ್ಕೊಂಡನಲ್ಲ! ಶಿವನಿಂಗ ಜಾತಿಯಲ್ಲಿ ಬಹಳ ಕಮ್ಮಿ, ತಾಯಿಯ ಕಡೆಯಿಂದ. ಆದರೇನು, ಗೌಡನ ಬೀಜ ತಾನೇ? ಗೌಡ್ತಿಯೂ ಅಷ್ಟೇ. ಮನಸ್ಸು ಮಾಡಿದ್ದರೆ ಅವಳ ಬಳಗದ ಬಳ್ಳಿಯೇನು ಸಣ್ಣದಲ್ಲ; ಅಣ್ಣನ ಮಗ, ತಮ್ಮನ ಮಗ, ಚಿಕ್ಕಪ್ಪನ ಮಗ, ತಂಗಿಯ ಮಗ – ಹೀಗೆ ಎಷ್ಟೆಲ್ಲ ಕರುಳಿನ ಹಂದರವಿದ್ದರೂ ಅವರನ್ನೆಲ್ಲ ಬಿಟ್ಟು ಶಿವನಿಂಗನನ್ನೇ ದತ್ತು ತೆಗೆದುಕೊಂಡಳಲ್ಲ – ಇದನ್ನು ಜನ ಮೆಚ್ಚಿದರು.

ನಿಜಗುಣೆವ್ವ ಸತ್ತ ಮೇಲೆ ಗೌಡ ನೆನಪುಗಳಿಗೆ ಹೆದರಿ ಊರಿನ ಮನೆಯಲ್ಲಿ ಮಲಗುವದನ್ನೇ ಬಿಟ್ಟು ತೋಟದ ಗುಡಿಸಲಲ್ಲೇ ಶಿವಿಯೊಂದಿಗೆ, ಈಗ ಶಿವಸಾನಿಯೊಂದಿಗೆ ಇರತೊಡಗಿದ. ಊರ ಮನೆಯಲ್ಲಿ ಶಿವನಿಂಗ ನಿಜಗುಣೆವ್ವನ ತಾಯಿಯೊಂದಿಗೆ ಇರುತ್ತಿದ್ದ.