ಅನಾದಿ ಕಾಲದ ಶಿವಾಪುರದ ವರ್ಣನೆಯಲ್ಲಿ ಅತಿಶಯೋಕ್ತಿಯೇ ಇದ್ದೀತು. ಹಾಡುಗಳಲ್ಲಿ

ಅಗಲಾರು ಗಾವುದ
ನಿಡಿದೇಳು ಗಾವುದ
ಸುತ್ತಲು ತಿರುಗಿದರೆ
ಹನ್ನೆರಡು ಗಾವುದ||

ಎಂದು ಇದರ ವಿಸ್ತಾರವನ್ನು ವರ್ಣಿಸಲಾಗಿದೆ. ಅಲ್ಲದೆ

“ಕೆತ್ತುಗಲ್ಲಿನ ಕೋಟಿ ಮುತ್ತೀನ ತೋರಣ!
ಕೊತ್ತಳದ ವಿಸ್ತಾರ ಹೆಂಗ್ಹೇಳಲಿ!”

ಎಂದೂ ಆದಿ ಗೌಡನ ಕೋಟೆಕೊತ್ತಳದ ವರ್ಣನೆ ಇದೆ. ಅಲ್ಲದೆ ಊರ ಮಧ್ಯದಲ್ಲಿ ಬಾಳೆ, ಬಾಳೆಗಳಲ್ಲಿ ರಸಬಾಳೆ ಗಿಡ ನೂರು ಸಾಲಾಗಿ ರಂಜಿಸುವ ಸಾವಿರದ ಹೂದೋಟಗಳಿದ್ದುವಂತೆ! ಊರಿನ ಈಗಿನ ಸ್ವರೂಪ, ವಿಸ್ತಾರ ಗಮನಿಸಿದರೆ ಮೇಲಿನ ವರ್ಣನೆ ಅತಿಯಾಯಿತೆಂದು ಅನಿಸುತ್ತದೆ. ಅಲ್ಲದೇ ಅದರಲ್ಲಿರುವ ಕೋಟೆಕೊತ್ತಳಗಳಾಗಲಿ, ಹೂದೋಟಗಳಾಗಲಿ ಒಂದೂ ಇಲ್ಲ. ಅವುಗಳ ಗುರುತು ಕೂಡ ಇಲ್ಲ.

ಈಗಿದ್ದಂತೆ ಊರು ಚಿಕ್ಕದೇ. ಗ್ರಾಮಪಂಚಾಯಿತಿಯಾಗಿ ಈಗೀಗ ಎರಡು ವರ್ಷಗಳಾದುವಷ್ಟೆ. ಕೆಲವು ಹಾಡುಗಳಲ್ಲಿ “ಮೂರು ಮನಿ ಹಳ್ಯಾಗ ಊರ ದೇವತೆ ಎನಿಸಿ| ಕೋಣ ಕುರಿಗಳ ಕೊಯ್ಸಿ ಒಗಸ್ಯಾಡಿ ಬಿಟ್ಟಿ|” ಎಂದು ಕರಿಮಾಯಿಯ ವರ್ಣನೆ ಇರುವುದರಿಂದ ಮೊದಲು ಮೂರು ಮನೆಯಿದ್ದ ಊರು ಬೆಳೆದು ಪರಗೌಡನ ಆಳಿಕೆಯಲ್ಲಿ ಗ್ರಾಮ ಪಂಚಾಯಿತಿ ಆಗುವಷ್ಟು ದೊಡ್ಡದಾಗಿ ಬೆಳೆದಿದೆ ಎಂದು ತಿಳಿದರೆ ಸಾಕು.

ಗುಡಿ ಪೂರ್ವಾಭಿಮುಖವಾಗಿದ್ದು ಕರಿಮಾಯಿಯ ಬೆನ್ನ ಹಿಂದೆ ಊರು ಹಬ್ಬಿದೆ. ಹೀಗಾಗಿ ಊರು ತಾಯಿಯ ಬೆ‌ನ್ನಿಗೆ ಬಿದ್ದಹಾಗೆ, ಅವಳ ಬೆನ್ನಿನ ಆಶ್ರಯದಲ್ಲೇ ಬೆಳೆದ ಹಾಗೆ ಕಾಣುತ್ತದೆ. ಗುಡಿಯ ಹಿಂದಿನಿಂದ ಊರಿನ ಒಂದೇ ಒಂದು ಪ್ರಮುಖ ರಸ್ತೆ ಪಶ್ಚಿಮಾಭಿಮುಖವಾಗಿ ಸಾಗಿ ಊರ ಚಾವಡಿಗೆ ಕೊನೆಗೊಳ್ಳುತ್ತದೆ. ಆ ಮುಖ್ಯ ರಸ್ತೆಗಂಟಿ ಸಣ್ಣಸಣ್ಣ ಸಂದಿಗೊಂದಿಗಳಿವೆ.

ಲಿಂಗವಂತರ ಬೀದಿ!
ಲಿಂಗವಂತರ ಬೀದಿ!
ಜಂಗಮರ ಬೀದಿಗಳು ನೂರು ಒಪ್ಯಾವು

ಎಂದು ಊರಿನ ವರ್ಣನೆಯೇನೋ ಇದೆ. ಆದರೆ ಹೊಲಗೇರಿಯನ್ನು ಬಿಟ್ಟರೆ ಉಳಿದಂತೆ ಎಲ್ಲಾ ಜಾತಿಯವರು ಬೇಕುಬೇಕಾದಲ್ಲಿ ಮನೆಮಾಡಿಕೊಂಡಿದ್ದಾರೆ. ಚಾವಡಿಯ ಎಡಕ್ಕೆ ಸುಳಿಯುವ ಸಂದಿಯ ಅಂಚಿನಲ್ಲಿ ಗೌಡನ ಮನೆಯಿದೆ. ದೊಡ್ಡ ಮನೆಯೇ, ಹಳೆಯದು. ಅಟ್ಟವೂ ಇದೆ. ಚಾವಡಿಯ ಬಲ ಸಂದಿಯಲ್ಲಿ ದತ್ತಪ್ಪನ ಮನೆ, ಸ್ವಲ್ಪ ಪ್ರತ್ಯೇಕವಾಗಿದೆ. ಊರಿಗಿರುವ ಏಕಮೇವ ಅಂದರೆ ನಮ್ಮ ಕಥಾನಾಯಕ ಮನೆಯಿದೆ. ಊರಲ್ಲಿ ಸ್ವಲ್ಪ ಆಧುನಿಕವೆನ್ನಿಸಿಕೊಳ್ಳಬಹುದಾದ, ಖರ್ಚು ಮಾಡಿ ಕಟ್ಟಿಸಿದ, ಶ್ರೀಮಂತರದೆನ್ನಬಹುದಾದ ಮನೆ ಇದೊಂದೇ.

ಇಲ್ಲಿಗೆ ಪುರವರ್ಣನೆ ನಿಲ್ಲಿಸಿ ಲಗಮವ್ವನ ಹಾಡಿನ ಚರಣಗಳಿಂದ ನಮ್ಮ ಕಥೆ ಸುರು ಮಾಡೋಣ:

ಅಲ್ಲೀಗಲ್ಲಿಗೆ ಕಥೆ ಮಲ್ಲೀಗೆ ವಾಸನೆಯು |
ಬಲ್ಲಂಥ ಜಾಣರಿಗೆ ಮಧುರವಣ್ಣಾ |
ಮುಂದೀನ ಕಥೆಯ ಅದರಂದsವ ಹೇಳುವೆನು |
ಕರಿಮಾಯಿ ನಮಗೆ ನೀ ವರವ ಕೊಡಮ್ಮಾ ||