ಗೌಡ ದಿನದಂತೆ ಒಂದು ದಿನ ಬೆಳಿಗ್ಗೆದ್ದು ಕೆರೆಯಲ್ಲಿ ಜಳಕ ಮಾಡಿ ಮನೆಗೆ ಬಂದ. ಅಂಗಳದಲ್ಲಿ ನಾಯೆಲ್ಲ್ಯಾ ಆಗಲೇ ಗಳೇ ಸಾಮಾನು ತಯಾರು ಮಾಡಿಕೊಂಡು ಎತ್ತುಹೂಡುತ್ತಿದ್ದ. ಗೌಡ ಅವನಿಗೆ “ಕೆಳಗಿನ ಹೊಲದ ನೆಲ ಇನ್ನೂ ಬಿರುಸಾಗಿರುವುದರಿಂದ ಬಳೆಸಾಲಕ್ಕೆ ಬದಲು ಇನ್ನೊಮ್ಮೆ ಕುಂಟಿ ಹೊಡೆಯುವುದಕ್ಕೆ ಹೇಳುತ್ತಿದ್ದ. ಪ್ರಶ್ನೋತ್ತರ ಮಾಸ್ತರ ಆಗಷ್ಟೇ ಎದ್ದು ಹೊರಕಡೆಗೆ ಹೊರಟಿದ್ದವನು ಗೌಡನನ್ನು ಕಂಡೊಡನೆ ಚರಿಗೆ ಸಮೇತ ಎರಡೂ ಕೈ ಜೋಡಿಸಿ “ಎದ್ದಿರಾ ಗೌಡರೇ?” ಎಂದ. “ನೀವೆದ್ದಿರಾ ಮಾಸ್ತರ?” ಎಂದು ಗೌಡ ಕೇಳಿ ಪ್ರತಿ ನಮಸ್ಕಾರ ಮಾಡಿದ. ಅಷ್ಟರಲ್ಲಿ ಗುಡಸೀಕರ ಕೆರೆಯ ಕಡೆಯಿಂದ ಈ ಕಡೆಗೆ ಬರುತ್ತಿದ್ದದು ಕಾಣಿಸಿತು. ಮಾಸ್ತರ ಬರುತ್ತಿದ್ದ ಗುಡಸೀಕರನನ್ನು ನೋಡಿಯೂ ನೋಡದಂತೆ ನಿವಾರಿಸಿ, ಹಾದಿ ಬಿಟ್ಟು, ಸಂದಿಯೊಂದರಲ್ಲಿ ತೂರಿ ಮರೆಯಾದ. ಗುಡಸೀಕರ ಇದ್ಯಾವುದನ್ನು ಗಮನಿಸಲಿಲ್ಲವೇನೋ ಎಂಬಂತೆ ತನ್ನ ಮನೆಗೆ ಹೋದ.

ಈ ಊರಲ್ಲಿ ಕಗಂಸಾಲೆ (ಕನ್ನಡ ಗಂಡು ಮಕ್ಕಳ ಶಾಲೆ) ಸುರುವಾದಾಗಿನಿಂದ ಇಲ್ಲಿದ್ದವನು ಅವನೊಬ್ಬನೇ ಮಾಸ್ತರ. ವಯಸ್ಸಾಗಿತು. ಪಕ್ಕದ ಊರಿನವನು. ಹೆಂಡತಿ, ಮಕ್ಕಳು ಕೂಡ ಉಂಟಂತೆ. ಬಂದು ಇಷ್ಟು ವರ್ಷವಾದರೂ ಸಂಸಾರವನ್ನು ತನ್ನ ಹಳ್ಳಿಯಲ್ಲೇ ಬಿಟ್ಟು ಇಲ್ಲೊಂದು ಹಳೆಯ ಮನೆಯಲ್ಲಿದ್ದ. ಶನಿವಾರ ಒಪ್ಪತ್ತು ಸಾಲೆ ಮಾಡಿ ಊರು ಬಿಟ್ಟರೆ ಮತ್ತೆ ಅವನ ದರ್ಶನವಾಗುವುದು ಮಂಗಳವಾರ ಮಧ್ಯಾಹ್ನವೆ. ಅವನ ಬಗ್ಗೆ ವಾರದಾಗ ಮೂರದಿನ ಬಂದ ಹೋಗಾಂವ ಎಂದು ಹುಡುಗರು ಕದ್ದು ಹಾಡುತ್ತಿದ್ದರು. ಸೋಮವಾರ ಸಂತೇ ದಿನವಾದ್ದರಿಂದ ಸರಕಾರದ ಅಪ್ಪಣೆಯಿಲ್ಲದೆ ತಾನೇ ರಜಾ ಘೋಷಿಸುತ್ತಿದ್ದ. ಬಂದು ಇಷ್ಟು ದಿನವಾದ್ದರಿಂದ ಅವನೇನು ಈ ಊರಿನಲ್ಲಿ ಬೇರುಬಿಡಲೇ ಇಲ್ಲ. ಸದಾ ಒಂದು ಕಾಲು ಇಲ್ಲಿ, ಇನ್ನೊಂದು ಕಾಲು ಹಳ್ಳಿಯಲ್ಲಿ. ತಾನಾಯಿತು, ತನ್ನ ಸಾಲೆಯಾಯಿತು. ಅಲ್ಲದೆ ಇಂದೋ, ನಾಳೆಯೋ ನಿವೃತ್ತನಾಗಬೇಕು. ಇದ್ದಷ್ಟು ದಿನ ಎಲ್ಲರಿಗೆ ಬೆಲ್ಲದ ಹೇರಾಗಿದ್ದು ಹೋದರಾಯಿತು ಎಂದು ಊರಿನ ಉಸಾಬರಿಯಲ್ಲಿ ತಲೆಹಾಕುತ್ತಲೇ ಇರಲಿಲ್ಲ.

ಪರಿವೂರಿನವನಲ್ಲವೇ? ಈ ಊರ ಯಾರ್ಯಾರ ನೀರು ಎಷ್ಟೆಂದು ಅವನಿಗೆ ಕೊನೆಯ ತನಕ ತಿಳಿಯಲೇ ಇಲ್ಲ. ತಿಳಿದುಕೊಳ್ಳಲು ಅವನು ಯತ್ನಿಸಲೂ ಇಲ್ಲ. ಆದ್ದರಿಂದ ಯಾರು ಕಂಡರೂ ಅವರಿಗೆ ಕೈ ಜೋಡಿಸಿ ಅತಿ ವಿನಯ ಪ್ರದರ್ಶಿಸುತ್ತ, ಅವರಿಗೆಲ್ಲ ಖಾತ್ರಿಯಾಯಿತೋ ಇಲ್ಲವೋ ಎಂದು ಹಲ್ಲುಗಿಂಜುತ್ತ, ಮಾತಿಗೊಮ್ಮೆ ರೀ ರೀ ಎನ್ನುತ್ತ ಅವರ ಯೋಗಕ್ಷೇಮ ಕೇಳುತ್ತಿದ್ದ. ಹಾಗೆ ಕೇಳಿದ್ದು ಎಲ್ಲಿ ಸಾಲ ಕೇಳಿದಂತಾಯಿತೋ ಎಂದು, ಅಥವಾ ಪಾಪ, ಅವರಿಗೇಕೆ ಉತ್ತರ ಹೇಳುವ ತಾಪತ್ರಯವೆಂದು ತಾನೇ ಉತ್ತರವನ್ನೂ ಹೇಳುತ್ತಿದ್ದ. ಉದಾಹರಣೆಗೆ ಶಿವಾಪುರದ ಒಬ್ಬ ಸಜ್ಜನ ಭೇಟಿಯಾದನೆನ್ನೋಣ, ಕೂಡಲೇ ಮಾಸ್ತರನು “ನಮಸ್ಕಾರರಿ, ಹೆಂಗ, ಆರಾಮ ಇದ್ದೀರಾ?” ಎಂದು ಕೇಳಿ, “ಆರಾಮ ಇರಬೇಕಲ್ಲ, ಮಕ ನೋಡಿದರs ತಿಳೀತೈತಿ” ಎಂದು ಉತ್ತರವನ್ನು ತಾನೇ ಹೇಳುತ್ತಿದ್ದ.

“ಬೆಳಿ ಚಿಲೋ ಆದಾವ್ರೆ?”

“ಚೆಲೋ ಇರದೇನ್ರಿ? ಕಂಡಾಪಟಿ ಮಳಿ ಆಗೇತಿ.”

ಎಷ್ಟೋ ಸಲ ಹೊಲ ಇಲ್ಲದವರಿಗೂ ಹೀಗೇ ಪ್ರಶ್ನೋತ್ತರಿಸಿ ದಾಟಿ ಹೋಗುತ್ತಿದ್ದ. ಅಲ್ಲದೆ ಅವನ ಯೋಚನಾಕ್ರಮವೂ ಹೀಗೇ ಇತ್ತು. ತಾನು ಏನು ಯೋಚನೆ ಮಾಡುತ್ತಿದ್ದೇನೆ ಎ‌ನ್ನುವುದು ತನಗೇ ಸ್ಪಷ್ಟವಾಗಿ ತಿಳಿದಿರಲೆಂದು ಯೋಚಿಸುವಾಗಲೆಲ್ಲ ಮಾತಾಡುತ್ತಲೇ ಯೋಚಿಸುತ್ತಿದ್ದ. ಏನೂ ಇಲ್ಲದೆ ಮಾತಾಡುವ ಜನ ಇಷ್ಟು ಸಿಕ್ಕರೆ ಬಿಟ್ಟಾರೆಯೆ? ಮಾಸ್ತರನು “ಪ್ರಶ್ನೋತ್ತರ ಮಾಸ್ತರನಾದದ್ದು” ಹೀಗೆ.

ಮಾಸ್ತರ ಈ ದಿನ ಮುಂಜಾನೆ ಗೌಡನಿಗೆ ನಮಸ್ಕರಿಸಿದ್ದನ್ನು ಗುಡಸೀಕರ ನೋಡದವನಂತೆ ನೋಡಿದ್ದ. ರಾತ್ರಿ ಮಾಸ್ತರನಿಗೆ ಪಂಚಾಯ್ತಿ ಆಫೀಸಿಗೆ ಬರಬೇಕೆಂಬ ಬುಲಾವ್ ಹೋಯಿತು. ಯಾವನಾದರೂ ಇನ್ಸ್‌ಪೆಕ್ಟರ್ ಬಂದಿದ್ದಾನೋ? ಯಾರಿಗ್ಗೊತ್ತು. ಏನಾದರೂ ಆರ್ಡರ್ ಬಂದಿದೆಯೋ? ಯಾರಿಗ್ಗೊತ್ತು – ಹೀಗೆ ತಂತಾನೆ ಪ್ರಶ್ನೋತ್ತರಿಸುತ್ತಲೇ ಬಂದ, ಗುಡಸೀಕರನೂ, ಅಷ್ಟು ದೂರದಲ್ಲಿ ಜಮಖಾನೆಯ ಮೇಲೆ ಚತುಷ್ಟಯರೂ, ಕುಡಿಯುತ್ತ, ಮೀಟಿಂಗ್ ಮಾಡುತ್ತ ಅಂದರೆ ಇಸ್ಪೀಟಾಡುತ್ತ ಕೂತಿದ್ದರು. ಹಾಗಿ ನೋಡಿದರೆ ಪಾಪ, ಮಾಸ್ತರನೇ ಅವರಿಗೆ ಒಂದು ಕಾಲಕ್ಕೆ ಒಂದೆರಡು ಅಕ್ಷರ ಹೆಳಿಕೊಟಟಿದ್ದವನು. ಅವನು ಕಲಿಸಿದ ತಿರುಕನ ಕನಸನ್ನು ಕಳ್ಳ ಇನ್ನೂ ಮರೆತಿಲ್ಲ. ಆದ್ದರಿಂದ ಚತುಷ್ಟಯರಿಗೆ ಮಾಸ್ತರನ ಮುಂದೆ ಮೀಟಿಂಗ್ ಮಾಡಲು ಸಂಕೋಚವಾಯ್ತು. ಆದರೆ ಗುಡಸೀಕರ ಸಿಟ್ಟಾದರೆ ಕಷ್ಟ, ಅಲ್ಲದೆ ವಿದೇಶೀ ‘ಭಿರಂಡಿ’ಯ ಒಂದೆರಡು ತೊಟಕು ಒಳಗಿಳಿದಿತ್ತು. ಅದೂ ಬೇಡ; ಈಗವರು ಊರಿನ ಗ್ರಾಮಪಂಚಾಯಿತಿ ಮೆಂಬರರಲ್ಲವೇ? ಗೌಡನನ್ನೇ ಎದರು ಹಾಕಿಕೊಂಡವರಿಗೆ ಮಾಸ್ತರ ಯಾವ ಲೆಕ್ಕ? ಕಲಿಗಾಲ ಬೇರೆ ಇವರ ಮುಖಾಂತರವೇ ಊರಿಗೆ ಕಾಲಿಟ್ಟಿತ್ತು. ಲಗಮವ್ವನ ಹಾಡಿನ ಪ್ರಕಾರ.

ಮಾಸ್ತರ ಮುದ್ದೆಯಾಗಿ ಮುಷ್ಟಿಯಷ್ಟೇ ಆಗಿ ಬಂದ. “ನಮಸ್ಕಾರರೀ ಸರಪಂಚ ಸಾಹೇಬರs” ಅಂದ. ಗುಡಸೀಕರ ಕತ್ತೆತ್ತಿ ಅವನ ಕಡೆ ನೋಡಲೇ ಇಲ್ಲ. ಉಳಿದವರು ಒಳಗೆ ಬರ್ರೀ ಅನ್ನಲಿಲ್ಲ. ಮಾಸ್ತರ ಬರುವ ಮುನ್ನವೇ ಉಳಿದವರಿಗೆ ಗುಡಸೀಕರ ಮುಂಜಾನೆ ನಡೆದದ್ದನ್ನೆಲ್ಲ ಹೇಳಿಬಿಟ್ಟಿದ್ದ. ಅವರು ಹಾಗೆ ಸುಮ್ಮನೆ ಕೂತರೋ ಇಲ್ಲವೋ ಮಾಸ್ತರನ ಜಂಘಾಬಲ ಕೈಕೊಟ್ಟಿತು. ಒಳಗೊಳಗೆ ಚಡಪಡಿಸಿದ. ಏನೇನೋ ಪ್ರಶ್ನೋತ್ತರಿಸಿಕೊಳ್ಳುತಿದ್ದುದು ಅವನ  ಹಸ್ತಾಭಿನಯದ ಮೂಲಕ ಸ್ಪಷ್ಟವಾಗುತ್ತಿತ್ತು. ಬಹುಶಃ ಕರೆಸಿರಲಾರರು, ಯಾರೋ ಬಂದು ಚೇಷ್ಟೆ ಮಾಡಿರಬಹುದೆಂದು “ಬರಲೇನ್ರಿ ಹಂಗಾದರ?” ಎಂದು ಕೇಳಿ “ಆಗಲಿ” ಎಂದು ತಾನೇ ಅಪ್ಪಣೇ ಕೊಟ್ಟಕೊಂಡು ನಡೆದ, ಕಳ್ಳನ ಗುರುಭಕ್ತಿ ಜಾಗೃತವಾಯಿತು.

“ಕುಂದರ್ರೀ ಮಾಸ್ತರ”

ಮಾಸ್ತರ ಕುಸಿದವರಂತೆ ಕೂತ. ಎಲ್ಲರೂ ತಂತಮ್ಮ ಇಸ್ಪೀಟ್ ಎಲೆಗಳ ಕಡೆಗೇ ನೋಡುತ್ತಿದ್ದರು. ರಮೇಸ ಕೇಳಿದ,

“ಏನ್ರೀ ಮಾಸ್ತರ, ಗೌಡನ ಜೋಡಿ ಅದೇನ ನಿಮ್ಮ ಸಲಿಗೆ?”

“ನಂದೇನ ಸಲಿಗಿ? ಏನೂ ಇಲ್ಲಲ್ಲಾ.”

“ಇರದಿದ್ದರ ಹರೀವತ್ತ ಅದ್ಯಾಕಷ್ಟ ಕೈ ಕೈ ಮುಗೀತಿದ್ದಿರಿ?”

“ಕೈ ಕೈ ಮುಗೀತಿದ್ದೇ? ಹೌಂದು, ಹರೀವತ್ತೆದ್ದಮ್ಯಾಲ ಎದ್ದಿರಾ ಅಂತ ಕೇಳಿದರ ತಪ್ಪ? ತಪ್ಪಲ್ಲ.”

ಮಾಸ್ತರ ತಪ್ಪ ತಪ್ಪಲ್ಲಂದನಲ್ಲ. ಸಾತೀರನ ಸೇಡು ಹೆಡೆ ತೆಗೆಯಿತು. ಯಾಕೆಂದರೆ ಚಿಕ್ಕಂದಿನಲ್ಲಿ ತಾನು ಏನು ಬರೆದು ತೋರಿಸಿದರೂ ಈ ಮಾಸ್ತರ ತಪ್ಪುತಪ್ಪು ಅಂತಿದ್ದ.

“ಏನ್ರಿ ತಪ್ಪಲ್ಲಂದರ? ಹುಡುಗೋರಿಗೆ ಚೆಲೋ ಸಾಲಿ ಕಲಸೋದ ಬಿಟ್ಟ ಎದ್ದವರ ಮನೀ ಮನೀ ಅಡ್ಡಾಡಿ ಎದ್ದಿರಾ? ಎದ್ದಿರಾ? ಅಂತ ಕೇಳಿಕೊಂಡ ತಿರಗತೀರಿ. ಹದಿನೇಳ ಆರಲಾ ಎಷ್ಟಂತ ಕೇಳಿದರ ಒಬ್ಬ ಹುಡುಗ್ಗೂ ಹೇಳಾಕ ಬರಲಿಲ್ಲ. ಇದs ಏನ್ರಿ ಸಾಲಿ ಕಲಿಸೋಣಿಕಿ? ವಾರದಾಗ ಮೂರ ದಿನಾ ಇಲ್ಲಿರತೀರಿ. ನಾಕ ದಿನಾ ನಿಮ್ಮೂರಾಗಿರ್ತೀರಿ. ಇಂದs ಗುಡಸೀಕರ ಸಾಹೇಬರ ಮ್ಯಾಲ ಬರದ ಹಾಕಿದರ ನಿಮ್ಮ ಗತಿ ಏನಾದೀತು?”

ಎದೆಯ ಮೇಳೆ ಏಕದಂ ಬಂಡೆ ಬಿದ್ದಂತೆ ಮಾಸ್ತರ ಒದ್ದಾಡಿದ. ಕೈಮುಗಿದು “ಇಲ್ಲರೀ, ಇಲ್ಲರೀ” ಅಂದ. ಮಾಸ್ತರನ ಮೇಲೆ ತನ್ನ ಮಾತಿನ ಪ್ರಭಾವ ಹೀಗಾದೀತೆಂದು ಸಾತೀರನಿಗೂ ಗೊತ್ತಿರಲಿಲ್ಲ, ಅವರಲ್ಲೆಲ್ಲ ಸ್ವಲ್ಪ ದಡ್ಡನೆಂದರೆ ಮೆರೆಮಿಂಡ. ಆದ್ದರಿಂದಲೇ ಅವನ ಕರುಳು ಕರುಗಿತು. ಎಷ್ಟೆಂದರೂ ಅಕ್ಷರ ಕಲಿಸಿದ ಗುರು ಅಲ್ಲವೆ? ಬಳಸಿ ಬಳಸಿ ಯಾಕೆ? ನೇರವಾಗೇ ಹೇಳಬಹುದಲ್ಲಾ.

“ಛೇ ಛೇ ಮಾಸ್ತರ ನೋಡರಿಲ್ಲೆ. ನಾಳಿಂದ ದಿನಾ ಹರವತ್ತೆದ್ದ ಗುಡಸೀಕರ ಸಾಹೇಬರ ಮನೀಗಿ ಹೋಗಿ ಎದ್ದಿರಾ ಅಂತ ಕೇಳಿ ಬರ್ರಿ. ಮೆಂಬರು ಯಾರಾದರೂ ಸಿಕ್ಕರ “ಎದ್ದೀರಾ?” ಅಂತ ಕೇಳ್ರ. ಆ ಗೌಡ, ದತ್ತೂ ಇದ್ದಾರಲ್ಲಾ, ಅವರನ್ನ ಇನ್ನ ಮ್ಯಾಲ ಮಾತಾಡಸಬ್ಯಾಡರಿ, ತಿಳೀತ?”

ಅಂದ. ಈ ನೇರ ಮಾತು ಗುಡಸೀಕರನಿಗೆ ಹಿಡಿಸಲಿಲ್ಲ.

“ದಿನಾ ಮುಂಜಾನೆ ಬ್ಯಾಡ, ನೋಡಪಾ, ಸಾಲಿ ಇರೋದು ಪಂಚಾಯ್ತಿ ಕೈಯಾಗ. ನಾವs ಮ್ಯಾಲ ಬರದ ಹಾಕಿದರೆ ನಾಳಿ ನಿಮ್ಮ ಗೌಡನೂ ನಿಮ್ಮನ್ನು ಉಳಸಾಕಿಲ್ಲ. ದತ್ತೂನೂ ಉಳಸಾಕಿಲ್ಲ. ನಿಮ್ಮ ಕಡಿಂದ ನಮಸ್ಕಾರ ಮಾಡಿಸ್ಕೋಬೇಕಂತ ಹಿಂಗ ಹೇಳಲಿಲ್ಲ ಮತ್ತ, ತಿಳಕೊಳ್ರಿ.”

ಮಾಸ್ತರ ಹುಚ್ಚನಂತಾದ. ಏಓ ಹೇಳಲು ಏಳುತ್ತಿದ್ದ ಏನು ಹೇಳಬೇಕೆಂದು ತೋಚದೆ ಕೂರುತ್ತಿದ್ದ. ಹಸ್ತಾಭಿನಯಕ್ಕಂತೂ ಮಿತಿಯೇ ಇರಲಿಲ್ಲ. ನೋಡಿದರವರಿಗೆ ಕೈ ಮೈ ಚಲವಲನ ಕಾಣೀಸುತ್ತಿತ್ತೇ ಹೊರತು ಅವನ ಮಾತು ಕೇಳಿಸುತ್ತಿರಲಿಲ್ಲ. ಮೆರೆಮಿಂಡನಿಗೆ ಬಹಳ ಕೆಡುಕೆನಿಸಿತು ಕಳ್ಳನಿಗೂ.

“ಹೋಗ್ರಿ ಮಾಸ್ತ ಇನ್ನ”

ಎಂದು ಗುಡಸೀಕರನ ಪರವಾಗಿ ಅಪ್ಪಣೆ ಕೊಟ್ಟ. ಬದುಕಿದೆ ಎಂದು ಮಾಸ್ತರ ಒಂದೇ ನೆಗೆತಕ್ಕೆ ಪಂಚಾಯ್ತಿ ಆಫೀಸಿನಿಂದ ಹಾರಿಬಿಟ್ಟ. ಮನೆಗೆ ಬಂದು ಶಿಷ್ಯರೆ ಇವರು? ಚಂಡಾಲರು. ಎಂದು ತಂತಾನೇ ಪ್ರಶ್ನೋತ್ತರಿಸಿಕೊಂಡ. ಇನ್ನು ಮೇಲೆ ಇವರು ಸಭೆ ಮಾಡಿದರೆ ಕುರ್ಚಿ ಕೊಡಬೇಕೆ? ಸಾಧ್ಯವಿಲ್ಲ, ಎಂದುಕೊಂಡ, ಆದರೆ ಕೊಡದೆ ಇರುವುದು ಹೇಗೆ ಸಾಧ್ಯ? ಅದ್ದರಿಂದ ಕುರ್ಚಿಯ ಒಂದು ಕಾಲು ಮುರಿದುಬಿಡಬೇಕೆಂದೂ ನಿಶ್ಚಯಿಸಿಕೊಂಡು ತಂತಾನೇ ಸಮಾಧಾನಪಡಿಸಿಕೊಂಡ.

ಮಾಸ್ತರ ಹೋದೊಡನೆ ಗುಡಸೀಕರ ನಕ್ಕ. ಅವನ ಇಮ್ಮಡಿ ಇವರು ನಕ್ಕರು, ನಿಜ ಹೇಳಬೇಕೆಂದರೆ ಚತುಷ್ಟಯರಿಗೆ ಮೈತುಂಬ ಸಿಕ್ಕ ಸಿಕ್ಕಲ್ಲಿ ಪುಳಕವೆದ್ದಿತ್ತು. ಪಂಚಾಯ್ತಿ ಮೆಂಬರದಾಗಿನಿಂದ ಯಾರೂ ಈ ಥರ ಹೆದರಿರಲಿಲ್ಲ. ಅದೂ ಚಿಕ್ಕಂದಿನಲ್ಲಿ ಎಷ್ಟೊಂದು ಹೆದರಿಸಿದ್ದ ಮಾಸ್ತರ ಹೇಗೆ ಹೆದರುವುದೆಂದರೆ! ಒಬ್ಬೊಬ್ಬರೂ ಮಾತಾಡಿದ ಮಾತನ್ನು ವಿರೋಚಿತವಾಗಿ ಇನ್ನೊಮ್ಮೆ ಹೇಳಿ ನಕ್ಕರು. ಮಾಸ್ತರನ ಅಭಿನಯ ಮಾಡಿ ಮತ್ತೆ ನಕ್ಕರು. ಗುಡಸೀಕರ ಎಲ್ಲರಿಗೂ ಒಂದೊಂದು ಹನಿ ‘ಭಿರಂಡಿ’ ಸಿಡಿಸಿ ಉಳಿದುದನ್ನು ತಾನು ಬಗ್ಗಿಸಿಕೊಂಡು ಬಾಟ್ಲಿ ಖಾಲಿಮಾಡಿದ, ಮತ್ತೊಂದು ಹನಿ ಸಿಕ್ಕಿತಲ್ಲಾ ಎಂಬ ಸಂತೋಷಕ್ಕೆ ಮಗುದೊಮ್ಮೆ ನಕ್ಕರು. ಅಷ್ಟರಲ್ಲಿ ಗೌಡನ ಆಳು ನಾಯೆಲ್ಯಾ ಹಲ್ಲು ಕಿರಿಯುತ್ತ ಹಾಜರಾದ.