ಶಿಂಗಾರ ಮೈಯವಳು ಬಂಗಾರ ಮುಖದವಳು
ಬಲಗೈ ಭಾಷೆ ಎಡಗೈ ನಂಬಿಕೆ ಕೊಟ್ಟು ಕಾಪಾಡಲಿ.

ಮೊದಲ ಸೊಲ್ಲಿಗೆ ಕರಿಮಾಯಿಗೆ ಸಾವಿರೊಂದು ನಮಸ್ಕರಿಸಿ ಹೇಳಬೇಕಾದರೆ

ಮೂರು ಲೋಕಕ ಅಧಿಕ
ಕರಿಮಾಯಿ ಕಾರಣಿಕ
ತಿಳಿದೀತು ಹ್ಯಾಂಗ ಮರತೇಕ ||

ಎನ್ನುವ ಲಗಮವ್ವನ ಹಾಡು ಈ ಬಂಗಾರ ಮುಖ ನೋಡಿದರೆ ಅಕ್ಷರಶಃ ನಿಜವೆನಿಸುತ್ತದೆ.

ಭಯದಿಂದಲೇ, ಕೋಪದಿಂದಲೋ ಅಗಲವಾಗಿ ಕಿವಿಯವರೆಗೆ ತೆರೆದ ಕಣ್ಣುಗಳು, ಉಸಿರಾಡಿಸುತ್ತಿದೆ ಎನಸುವಂಥ ಎಸಳು ಮೂಗು, ನಕ್ಕು ನಕ್ಕು ಈಗಷ್ಟೇ ಸುಮ್ಮನಾದ, ಇಲ್ಲವೇ ಇನ್ನೇನು ನಗುತ್ತಾಳೆನಿಸುವಂಥ ತುಟಿಗಳು, ಚೂಪುಗದ್ದ, ಮೇಲೆ ಬಹುಶಃ ಎಳೆಬೆವರಿನಿಂದ ಹಣೆಗಂಟಿದ ಸುರುಳಿ ಸುರುಳಿ ಮುಂಗುರುಳು, ಅವುಗಳ ಮೇಲೆ ಹದಿನೆಂಟು ರತ್ನದ ಹರಳುಗಳಿರುವ ಕಿರೀಟ – ಒಮ್ಮೆ ನೋಡಿದರೆ ಸಾಕು ಕಣ್ಣು ತುಂಬುತ್ತದೆ, ಎದೆ ಕೂಡ! ಊರವರಿಗೆ ಇದರ ಬಗ್ಗೆ ಎಷ್ಟು  ಮಾಯೆಯೆಂದರೆ – ದಿಟ್ಟಿಸಿ ನೋಡಿದರೆ ಎಲ್ಲಿ ಬಿರಿದೀತೋ ಎನ್ನುವ ಭಾವ. ಅದಕ್ಕೇ ಶೀಗೆ ಹುಣ್ಣಿಮೆ, ರಂಡಿಹುಣ್ಣಿಮೆ, ಮುತ್ತೈದೆ ಹುಣ್ಣಿಮೆ – ಈ ಮೂರು ದಿನ ಬಿಟ್ಟರೆ ಉಳಿದ ದಿನಗಳಲ್ಲಿ ಅದನ್ನು ಗೌಡನ ಮನೆಯಲ್ಲೇ ಇಟ್ಟಿರುತ್ತಾರೆ.

ಬಸಿರಿಯರ ಕನಸಿನಲ್ಲಿ ತಾಯಿಯ ಈ ಬಂಗಾರ ಮುಖ ಮೂಡಿಬಂದರೆ ಗಂಡು ಸಂತಾನ ಖಾತ್ರಿ. ಕೆಲವರ ಕನಸಿನಲ್ಲಿ ಈ ಮುಖ ಮಾತಾಡಿದ್ದೂ ಉಂಟು. ಬಾಗಿ ನಡೆದವರ ಭಾಗ್ಯವಂತೆಯಾಗಿ, ಬೇಡಿದ ವರ ಕೊಟ್ಟದ್ದು ಉಂಟು. ಹೆಚ್ಚೇನು ಇದು ಈ ಊರಿಗೆ ಸೊಕ್ಕು, ಅಭಿಮಾನ, ವಿದ್ಯೆ, ಬುದ್ಧಿ, ಭಯ, ಭಕ್ತಿ ಎಲ್ಲಾ ಕೊಟ್ಟದ್ದುಂಟು. ಸಣ್ಣವಳಲ್ಲ ಈ ಬಂಗಾರ ಮುಖದವಳು.

ಸರಿಕ ದೇವತೆಗಳಾದ ಚಿಂಚಲಿ ಮಾಯವ್ವನಿಗೆ ಹಳಹಳಿ, ಲೋಕಾಪುರದ ದ್ಯಾಮವ್ವನಿಗೆ ಹೊಟ್ಟೆಕಿಚ್ಚು, ಸವದತ್ತಿ ಎಲ್ಲವ್ವನಿಗೆ ಮತ್ಸರಕೊಟ್ಟಳು. ಬಾಗಿ ನಡೆದ ಭಕ್ತರಿಗೆ ತೂಗುತೊಟ್ಟಿಲು ಬೆಳ್ಳಿಬಟ್ಟಲಿನ ಭಾಗ್ಯಕೊಟ್ಟಳು. ಇರುವೆ ಮೊದಲಾಗಿ, ಆನೆ ಕಡೆಯಾಗಿ ಎಂಬತ್ತನಾಲ್ಕು ಲಕ್ಷ ಜೀವನ ಕೊಟ್ಟಳು. ಬೇಲಿಗೆ ಹಸಿರು, ಮಳಲಿಗೆ ನೀರು, ಸೂರ್ಯನಿಗೆ ಬಿಸಿಲು, ಚಂದ್ರನಿಗೆ ಬೆಳ್ದಿಂಗಳು ಕೊಟ್ಟಳು.

ದಿಟ್ಟಿಸಿ ನೋಡಿದವರಿಗೆ ಕುರುಡು, ಬರಡಿಗೆ ಹಯನು, ಬಂಜೆಯರಿಗೆ ಮಕ್ಕಳು, ಮಕ್ಕಳಿಗೆ ಛಲ, ಛಲಕ್ಕೊಂದು ಗುರಿ, ಗುರಿಗೆಂಟು ಸಾಧ್ಯತೆ ಕೊಟ್ಟಳು, ಎಳೆಯರಿಗೆ ಬಿಗಿದ ಸೊಂಟ ಕೊಟ್ಟಳು; ಸೊಂಟದ ತುಂಬ ಸೂಸುವ ಪ್ರಾಯ ಕೊಟ್ಟಳು; ‌ಪ್ರಾಯಕ್ಕೆ ತುಳುಕಾಟ ಕೊಟ್ಟಳು, ತುಳುಕಾಟಕ್ಕೆ ಸ್ವಚ್ಛಂದ, ಹಾದರ ಕೊಟ್ಟಳು, ವಯಸ್ಸಿಗೆ ಬುದ್ಧಿಕೊಟ್ಟಳು, ಬುದ್ಧಿಗೆ ತೃಪ್ತಿಕೊಟ್ಟಳು, ತೃಪ್ತಿಗೆ ಸಾವು ಕೊಟ್ಟಳು. ಹೆಚ್ಚೇನು? ಯಾರಿಗೇನು ಕೊಡಬೇಕೆಂದು ತಿಳಿಯದೆ, ಕೊಡುವ ಉತ್ಸಾಹದಲ್ಲಿ ಸಮೃದ್ಧಿಯ ಹಡೆದ ತಾಯಿ, ಕೆಲವರಿಗೆ ಕಳ್ಳಬುದ್ಧಿಯನ್ನೂ ಕೊಟ್ಟಳು.

ಇಂಥಾ ಬಂಗಾರದ ತಾಯಿ ಆದಿಗೆ ಆದಿಯ ಹಡೆದವ್ವ, ಕಡೆಯ ಕಡೆ ಗೊತ್ತಿರದವ್ವ, ಇದಿಮಾಯಿ, ಘೋಡಗೇರಿಯ ಕಂಬಾರ ಬಸವಣ್ಣೆಪ್ಪನ ಮಗ, ಭುಸನೂರುಮಠದ ಸಂಗಯ್ಯನ ಶಿಷ್ಯ, ಸಾವಳಿಗೆ ಶಿವಲಿಂಗೇಶ್ವರ ಮಠದ ಸಿದ್ದರಾಮ ಸ್ವಾಮಿಗಳು ಭಕ್ತ – ಚಂದ್ರಶೇಖರನಿಗೆ ಬರೆಯುವ ಬುದ್ಧಿಕೊಟ್ಟಳು. ಹಾಗೆಯೇ ಓದುಗರಿಗೆ ತೂಗು ತೊಟ್ಟಿಲು, ಬೆಳ್ಳಿ ಬಟ್ಟಲದ ಭಾಗ್ಯ, ಮಕ್ಕಳ, ಫಲಪುತ್ರ ಸಂತಾನದ ಸೌಭಾಗ್ಯ ಕೊಡಲಿ.