ಸಾಲದ್ದಕ್ಕೆ ಇದೇ ಸಂದರ್ಭವೆಂದು ಎರಡೆಕರೆ ಹೊಲಾ ಕೇಳಲಿಕ್ಕೆ ಚಿಮಣಾ ಗೌಡನ ಮನೆಗೆ ಹೋದಳು. ದತ್ತಪ್ಪ ಬಹಿಷ್ಕಾರ ಹಾಕಿಬಿಟ್ಟ.

ಮುದುಕಪ್ಪ ಗೌಡನ ಸಾವಿಗೆ ಜನ ಮರುಗಿದರು. ಕಳ್ಳನಲ್ಲ, ಸುಳ್ಳನಲ್ಲ, ಅದೇನೋ ದೇಶಸೇವೆ ಅಂದ, ಚಳುವಳಿ ಅಂದ. ಗಾಂಧಿ ನೇರೂ ಅಂದ. ಅಂದ ಮಾತ್ರಕ್ಕೆ ಹೀಗೆ ಕೊಂದು ಹಾಕುವುದೇ? ಗುಡಸೀಕರ ಬಹುಮಾನದ ಆಸೆಯಿಂದ ಹೀಗೆ ಮಾಡಿದನೆಂದು, ಪೋಜುದಾರ ಇವನಿಗೆ ೫೦೦೦ರೂ. ಕೊಟ್ಟುದುನ್ನು ಕಣ್ಣಾರೆ ಕಂಡೆಬೆಂದು ಕೆಲವರೆಂದರು. ಜನ ಗುಡಸೀಕರನಿಗೆ ಹೆದರಿದರು. ಹೆಸರು ಹೇಳಿದರೆ ಸಾಕು ಪೋಲೀಸ್ ಪೋಜದಾರ ಅನ್ನುವ ಸೈತಾನನವ. ಅವನನ್ನು ತಡವೋದೂ ಪೋಜುದಾರನಿಗೆ “ಲೇ ಮಗನ” ಎಂದು ಬೈಯುವುದೂ ಸಮ ಎಂದರು.

ಚತುಷ್ಟಯರು ಇದ್ದದ್ದೂ ಆಮೋದಗೊಂಡರು. ಕೊಳವಿ ಮುಂದುಕಪ್ಪನ ಹೆಣ ಒಯ್ದ ಮಾರನೇ ದಿನ ಸುಪ್ರಭಾತದಲ್ಲಿ ಎದ್ದು ನೋಡುತ್ತಾರೆ. ಊರಿಗೂರೆ ಅವರಿಗೆ ಹೆದರುತ್ತಿದೆ. ಕರೆದು ಕರೆದು ಶರಣು ಹೇಳುತ್ತಿದೆ. ಈ ಹದಕ್ಕಾದ ಹೆದರಿಕೆ ಹಾಗೇ ಕ್ಷಣಭಂಗುರವಾಗಬಾರದೆಂದು ಹಂಚಿಕೆ ಹಾಕಿದರು. ಗುಡಸೀಕರನ ಬಗ್ಗೆ ಭಯಂಕರ ಕಥೆ ಕಟ್ಟಿದರು. ಪೋಲೀಸ್ ಪೋಜದಾರ, ಕಲೆಕ್ಟರ, ಮಾಮಲೇದಾರ, ಬೆಳಗಾವಿಯ ಈ ಅಧಿಕಾರಿಗಳೆಲ್ಲ ಗುಸೀಕರನಿಗೆ  ಪರಿಚಿತರೆಂದೂ, ಇವರು ಚೀಟಿ ಕಳಿಸಿದರೆ ಸಾಕು, ಸರಕಾರ ತುದಿಗಾಲಲ್ಲೇ ಮಿಲ್ಟ್ರೀ ಕಳಿಸುತ್ತಾರೆಂದು, ಮುದುಕಪ್ಪನಿಗೆ ಆಶ್ರಯ ಕೊಟ್ಟದ್ದಕ್ಕೆ ಸರಕಾರ ಇಡೀ ಊರು ಸುಟ್ಟುಬರಲು ಪೋಲೀಸ್ ಪಾರ್ಟಿ ಕಳಿಸಿತ್ತೆಂದೂ ಆದರೆ ನಮ್ಮ ಸರಪಂಚರಿಂದಾಗಿ ಮುದುಕಪ್ಪ ಹೋಗಿ ಊರು ಉಳಿಯಿತೆಂದೂ ಹೀಗೆ ಯದ್ವಾ ತದ್ವಾ ಊಹೆಗಳಿಗೆ ಕೈಕಾಲು ಮೂಡಿಸಿ ಕಥೆಮಾಡಿ, ಕಥೆಗೆ ಜೀವ ತುಂಬಿ ಊರ ಕಿವಿಗಳಲ್ಲೇ ಊರ ಕಿವಿಗಳಲ್ಲೇ ಊದಿಬಿಟ್ಟರು.

ಗೌಡ ಮಾತ್ರ ಆಳಾಗಲೇ ಇಲ್ಲ. ಬೆನ್ನಿಗೆ ಬಿದ್ದವನ ಕಾಪಾಡಲಾಗದ ದುಃಖ ಒಂದು ಕಡೆ. ಇದಕ್ಕೆಲ್ಲ ಗುಡಸೀಕರ ಕಾರಣನೆಂಬ ಸಿಟ್ಟು ಇನ್ನೊಂದು ಕಡೆ. ಹೀಗೆ ಇಬ್ಬಂದಿಯಾಗಿ ಕಿಚ್ಚಿನೊಳಗಿನ ಕೇಡೆಯಂತೆ ಚಡಪಡಿಸಿದ. ದೋತರ ಸೆರಗಿನಲ್ಲಿ ಮುಖ ಹುದುಗಿಸಿ ಮುದಿ ಹೆಂಗಸಿನ ಹಾಗೆ ಅತ್ತ. ಬರಬರುತ್ತ ಮುದುಕಪ್ಪ ಸತ್ತದ್ದು ಹಿಂದಾಗಿ, ಶಿವನಿಂಗ ಕಳೆದುಹೋದ ಹೆಂಗಸಿನ ಹಾಗೆ ಅತ್ತ. ಬರಬರುತ್ತ ಮುದುಕಪ್ಪ ಸತ್ತದ್ದು ಹಿಂದಾಗಿ, ಶಿವನಿಂಗ ಕಳೆದುಹೋದ ದುಃಖ ಮುಂದಾಯಿತು. ಕುಂದರಗಿ ಮಠಕ್ಕೆ ಹೋದ ಆಳು ಅಲ್ಲಿದ್ದ ಮಂದಿಯೆಲ್ಲ ಮಾಯವಾದ ಸುದ್ದಿ ತಂದಿದ್ದ. ಊರೂರಿಗೆ ಬೀಗರಿಗೆ ಹೇಳಿ ಕಳಿಸಿದ. ಶಿವನಿಂಗ ಬರಲಿಲ್ಲ. ಶಿವನಿಂಗನ ಸುದ್ದಿ ಬರಲಿಲ್ಲ. ಮೂಕರ್ಜಿಯಲ್ಲಿ ತನ್ನ ಹೆಸರು ಇದ್ದುದಕ್ಕೆ ಹೆದರಿ ಹುಡುಗ ಏನಾದರೂ ಓಡಿದನೋ ನೇಣು ಹಾಕಿಕೊಂಡನೋ ಎಂದೂ ಊಹಿಸಿದ. ಕರಿಮಾಯಿಗೆ ಮರೆಹೊಕ್ಕ. ತಾಯಿಯೇನೋ ತಿರುಗಿ ಬಂದೇ ಬರುತ್ತಾನೆಂದು ಹೇಳಿದಳು. ಮಗನನ್ನು ಕಣ್ಣಾರೆ ಕಾಣುವ ತನಕ ನಂಬದಾದ. ಶಿವಸಾನಿ ಮಗನ ಹೆಸರು ಜಪಿಸುತ್ತ ಕೂಳು, ನೀರುಬಿಟ್ಟು ಬರೀ “ಶಿವನಿಂಗಾ” ಎಂದು ಹಲಬುತ್ತ ಮೂಲೆ ಹಿಡಿದಳು. ಹ್ಯಾಗಿದ್ದವಳು ಒಂದೇ ವಾರದಲ್ಲಿ ಸೊರಗಿ ಸೊರಗಿ ಸಣ್ಣಾದಳು. ಮೂಲೆಯ ಕೋಲಾದಳು. ಕಡ್ಡಿಯಾದಳು. ಸಾಲದ್ದಕ್ಕೆ ಚಿಮಣಾ ಬಂದು ಮನೇ ಮುಂದೆ ದುಂಬಡಿ ಹಾಕಿದಳು. ಅದು ಹೀಗೆ:

ಒಂದು ದಿನ ಗೌಡ ಬೆಳಿಗ್ಗೆದ್ದು ಕೆರೆಯಲ್ಲಿ ಮಿಮದು ಕರಮಾಯಿಗೆ ಅಡ್ಡಬಿದ್ದು ಮನೆಕಡೆ ಬಂದ. ಆಗಷ್ಟೇ ಬೆಳಕಾಗುತ್ತಿತ್ತು. ಅಲ್ಲಲ್ಲಿ ಜನ ಅಂಗಳ ಗುಡಿಸುತ್ತಿದ್ದರು. ಕೋಳಿ ಬಿಡುತ್ತಿದ್ದರು. ದನ ನೀರಿಗೆ ಬಿಡುತ್ತಿದ್ದರು. ಎದ್ದವರು ಗೌಡನಿಗೆ ಶರಣು ಹೇಳುತ್ತಿದ್ದರು. ಆ ರಸ್ತೆ ದಾಟಿ ತನ್ನ ಮನೆಕಡೆ ತಿರುಗಿದ.

ಆ ರಸ್ತೆಯಲ್ಲಿ ಅಷ್ಟು ಚಟುವಟಿಕೆ ಇರಲಿಲ್ಲ. ತನ್ನ ಮನೇ ಮುಂದೆ ನಾಕೈದು ಜನ ಹೆಂಗಸರಿದ್ದರು. ಧಾಪುಗಾಲು ಹಾಕಿದ. ಗೌಡ ಬಂದುದನ್ನು ನೋಡಿ ಹೆಂಗಸರು ಬದಿಗಾದರು. ನೋಡಿದರೆ ಸುಂದರಿ ತೊಲೆ ಬಾಗಿಲು ಹೊಸ್ತಿಲಕ್ಕೆ ಎಡತೊಡೆ ಅನಿಸಿ, ಅದರಗುಂಟ ಎಡಗೈ ಹಬ್ಬಿಸಿ, ಅದಕ್ಕೆ ಬಲಗೈ ಕಟ್ಟಿಕೊಂಡು ಕೂತಿದ್ದಳು. ಗೌಡನಿಗೆ ತಕ್ಷಣ ಏನು, ಎತ್ತ ಹೊತ್ತಾಗಲಿಲ್ಲ. ಒಳಗೆ ತನ್ನ ಹಿರಿಯ ಹೆಂಡತಿ, ನಿಜಗುಣೆವ್ವನ ತಾಯಿ ನಿಂತಿತ್ತು. ಎಲ್ಲರನ್ನೂ ಕುರಿತಂತೆ “ಏನು” ಅಂದ. ಒಬ್ಬ ಅವ್ವಕ್ಕ “ಯಾಡ್ಯೆಕರೆ ಹೊಲಾ ಕೇಳಾಕ ಬಂದಾಳ್ರಿ” ಎಂದಳು. ಗೌಡ ಒಳಕ್ಕೆ ಹೆಜ್ಜೆ ಹಾಕಿದ.

ಗೌಡ ನ್ಯಾರೆ ಮಾಡಿ ಹೊರಕ್ಕೆ ಬಂದಾಗ ಪಡಸಾಲೆಯಲ್ಲಾಗಲೇ ದತ್ತಪ್ಪ ಹಾಜರಾಗಿದ್ದ. ಬಾಳಪ್ಪ ಆಗಷ್ಟೇ ಬಂದ. ಮನೆಯ ಮುಂದೆ ಜನ ಸೇರಿದ್ದರು. ಎಲ್ಲರ ದೃಷ್ಟಿಗಳನ್ನು ನಿವಾರಿಸುತ್ತ ಚಿಮಣಾ ಕೂತಿದ್ದಳು. ಎಸಳು ಮುಖದ ಹುಚ್ಚು ಹುಡುಗಿ. ಕುಣಿಸಿದರೆ ಕುಣಿಯುತ್ತಾಳೆ. ಕುಣಿಯೋದರ ಬೆಲೆ ಏನೆಂದರಿಯದೆ ಅವಳು ಕೂತ ಭಂಗಿ, ಧೈರ್ಯ ಮೊಂಡುತನಗಳೆಲ್ಲ ಅವಳ ಆಕೃತಿಗೆ ಭಾರವಾಗಿ, ಅಸಹಜವಾಗಿ, ಕಂಡವು, ಇವಳ ಮೇಲೆ ಸಿಟ್ಟಿಗೇಳುವುದೂ ಕಷ್ಟವೆ’ ಎಳೇ ಕೂಸು ಬಲಿತವರ ಅಭಿನಯ ಮಾಡಿದಂತಿತ್ತು. ಇಂಥ ಸಂದರ್ಭಗಳಲ್ಲಿ ಯಥಾಪ್ರಕಾರ ಬಾಯಿ ಹಾಕುವವನು ದತ್ತಪ್ಪನೇ.

“ಏನವಾ? ಯಾಕ ಬಂದಿ? ಜಗಳಾ ಮಾಡಾಕ?” ಎಂದು ದತ್ತಪ್ಪ ಕೇಳಿದರೆ ಆ ಹೊಯ್ಮಾಲಿ ಹೇಳುತ್ತಾಳೆ –

“ನಾ ಏನ ಜಗಳ ಮಾಡಾಕ ಬಂದಿಲ್ರಿ. ಗೌಡರು ಯಡ್ಡೆಕೆರೆ ಹೊಲ ಬರಕೊಡ್ಲಿ. ಥಣ್ಣಗ ನಾ ಹೋಗತೇನ.”

ದತ್ತಪ್ಪನಿಗೆ ಹೊಯ್ಕಾಯಿತು. ಅಡಡಡ ಎಂದು ಆಶ್ಚರ್ಯ ನಟಿಸುತ್ತಿದ್ದರೆ ಬಾಳಪ್ಪನಿಗೆ ತಡೆಯಲಾಗಲಿಲ್ಲ.

“ಅದೇನ ಅಡಡಡ ಅಂತೀಯೊ? ಈ ರಂಡೀ ಮೂಗ ಮಲಿ ಕೋದ ಅಡವಿಗಟ್ಟಿ ಬರೋಣ್ನಡಿ.”

ಸುಂದರಿಗೆ ತಡೆಯುವುದಾಗಲಿಲ್ಲ.

“ಯಾಕ? ಈ ಕಡೆ ಹಗುರ ಅಂತೆ ತಿಳಿಕೊಂಡಿರೇನ? ಹೋಗಿ ನಾನೂ ಫೋಜುದಾರನ್ನ ಕರಕೊಂಬರ‍್ತೇನ.”

“ಫೋಜದಾರಂದರ ಸರಕಾರಲ್ಲವಾ. ಕೋರ್ಟಿಗಿ ಹೋಗಿ ಅಲ್ಲಿಂದ ಬೇಕಾದರ ಜಜ್‌ಮೆಂಟಾಗಿ ಬಂದರ ಕೊಡಾಕ ಬಂದೀತ. ಪೋಲೀಸ್ ಪೋಜದಾರರೆಲ್ಲಾ ಜಜ್‌ಮೆಂಟ್ ಕೊಡತಿದ್ದರೆ ಹೆಂಗ? ನೀ ಬೇಕಾದರ ಕೋರ್ಟಿಗಿ ಹೋಗು.”

ಎಂದ ದತ್ತಪ್ಪ, ಸುಂದರಿ ಬಿಡಲಿಲ್ಲ.

“ಹಿಂತಾ ಮಾತ ಪೋಜುದಾರನ ಮುಂದೆ ಯಾಕ ಬರಲಿಲ್ಲ? ಹೆಣ್ಣ ಬಾಳಿ ನನಗನ್ಯೇ ಮಾಡಿ ಬದಿಕೆನಂತೀರಿ?”

“ಹಂಗಂದರ ಹೋಗಿ ಅದ್ಯಾವ ಪೋಜದಾರನ್ನ  ಕರತರ‍್ತಿ ತಾ ಹೋಗ.”

ಎಂದ ಇವನೂ ಅಷ್ಟೇ ಒರಟಾಗಿ. ಹೆಂಗಸರ ನಡುವಿದ್ದ ನಿಂಗೂನಿಗೆ ತಡೆಯಲಾಗಲಿಲ್ಲ. “ಹರೀವತ್ತೆದ್ದ ಇದೇನ ಹಚ್ಚೀಯೆ ನನ್ನ ಸವತಿ. ಬಂದ ಕಾಲಲೆ ಜಾಗಾ ಬಿಡತೀಯೊ? ತುರುಬ ಹಿಡಿದ ಎಳದ ಒಗೀ ಅಂತೀಯೊ?”

“ಯಾಕಲಾ ಗಂಡಿಗ್ಯಾ ಭಾಡ್ಯಾ ಬಾ ಗಂಡಸಿದ್ದರ”

ಎಂದು ಇವಳು ನಿಂತಳು. ಗೌಡನಿಗಿನ್ನೂ ಸಿಟ್ಟು ಬರಲೊಲ್ಲದು. ಗೌಡ ಹೂಂ ಅಂದಿದ್ದರೆ ಅವಳನ್ನು ಹಾಗೇ ಹರಿದು ಚಿಂದಿಮಾಡಲು ಹುಡುಗರು ಸಿದ್ಧವಾಗಿದ್ದರು. ಬೆಳಿಗ್ಗೆದ್ದೊಡನೆ ಈ ಪರಿಯ ಹಗರಣ ಆ ಊರಿಗೆ ಹೇಳಿ ಮಾಡಿಸಿದ್ದಲ್ಲ. ಅಷ್ಟರಲ್ಲಿ ಲಗಮವ್ವ ಬಂದಳು. ಬಸೆಟ್ಟಿ ಬಂದ. ದೇವರೇಸಿ ಬಂದ. ಇನ್ನೇನು ಬೇಕು? ಈಗಲೇ ಇವಳಿಗೆ ಊರಿಂದ ಬಹಿಷ್ಕಾರ ಹಾಕಿಬಿಡೋಣವೆಂದು ಬಾಳು ಹೇಳಿದ. ಬಸೆಟ್ಟಿ ಹೌದೆಂದ. ಈತನಕ ಸುಂದರಿಗೆ ಧೈರ್ಯವಿತ್ತು. ಸರಪಂಚ ಇರೋ ತನಕ ತನಗೆ ಯಾರೇನು ಮಾಡಲಾದೀತೆಂಬ ಹಮ್ಮಿನಲ್ಲಿದ್ದಳು. ಆದರೆ ಈ ಬಹಿಷ್ಕಾರದ ಅಸ್ತ್ರ ಅವಳಿಗೆ ಹೊಸದು. ಹಾಗೆಂದರೇನೆಂದೂ ಅರಿಯಳು, ಏನೋ ಅಪಾಯ ಕಾದಿದೆಯೆಂದು ಹೆದರಿ ಎದ್ದುನಿಂತು,

“ನಾ ಹಡಬಿಟ್ಟಿ ಹೆಂಗಸಲ್ಲ. ಗೌಡನ… ಫಲ…” ಎಂದು ಹೇಳ ಹೇಳುತ್ತ ಕೂಡಿದ ಮಂದಿಯಲ್ಲಿ ಹೊಟ್ಟೆ ಮುಟ್ಟಿಕಂಡೊಡನೆ ಅವಳಿಗರಿವಾಗದಂತೆ ಕಣ್ಣೀರುಕ್ಕಿ ಗಂಟಲು ತುಂಬಿತು. ಬಿಕ್ಕಿ ಬಿಕ್ಕಿ ಕುಸಿದಳು. ಗೌಡನಿಗೆ ತಡೆಯಲಾಗಲಿಲ್ಲ.

“ಹೌಂದವಾ ನನಗs ಬಸರಾಗೀದಿ ಹೌಂದಲ್ಲೊ? ಹಾಂಗಿದ್ದರ ನಮ್ಮ ಮನ್ಯಾಗ ಇದ್ದುಬಿಡು. ನಿನಗ ಹೊಲಾ ಯಾಕ ಬೇಕು?”

ಈಗ ತಾನು ಕೆಸರಲ್ಲಿ ಸಿಗಬಿದ್ದುದು ಅವಳಿಗೂ ಅರಿವಾಯಿತು. ಇನ್ನು ತನಗಿಲ್ಲಿ ಉಳಿಗಾಲವಿಲ್ಲ.

“ನಾ ಯಾಕ ನಿನ್ನ ಮನ್ಯಾಗಿರ‍್ಲಿ? ಮನಸ್ಸಿಗಿ ಬಂದಲ್ಲಿರ‍್ತೇನ.”

ಸುಂದರಿಗೆ ಸಹಾನುಭೂತಿ ತೋರಿಸುವವರು ಒಬ್ಬರೂ ಇರಲಿಲ್ಲ. ಇದೇ ಸಂದರ್ಭವೆಂದು ಗೌಡನನ್ನು ಕೇಳದೆ, ಕೇಳಿದರೆ ಮತ್ತೆ ರಾಡಿಯಾಗುವುದೆಂದು ಬಗೆದು ಬಹಿಷ್ಕಾರ ಘೋಷಿಸಿಯೇ ಬಿಟ್ಟ ದತ್ತಪ್ಪ. ಅಲ್ಲೇ ಇದ್ದೊಂದು ಕುಂಬಳಕಾಯಿಯನ್ನು ಒಡೆದು ಲಗಮವ್ವನಿಂದ ನೀರು ಬಿಡಸಿದ. ಸುಂದರಿ ಅದಕ್ಕಾಗಿ ಏನೋ ಮಾಡಹೋಗಿ ಏನೋ ಆಗಿ ಏನುತ್ತರ ಕೊಡಲೂ ತೋಚದೆ ಗಳಗಳ ಅಳುತ್ತ ಸರಪಮಚಗ ಹೇಳ್ತೇನೆನ್ನುತ್ತ ಅಟ್ಟಿಸಿಕೊಂಡ ಪ್ರಾಣಿಯ ಹಾಗೆ ಓಡಿದಳು. ಜನ ಇವಳಿಗೆ ಇದೇ ತಕ್ಕ ಪ್ರಾಯಶ್ಚಿತ್ತ ಎಂದರು. ದತ್ತಪ್ಪನಿಗೆ ಹೌದ್ಹೌದೆಂದರು. ಇದೆಲ್ಲ ಹದಿನೈದಿಪ್ಪತ್ತು ಎಣಿಸುವುದರೊಳಗೆ ಮುಗಿದುಹೋಗಿತ್ತು. ಜನ ಚೆದುರಿದ ಮೇಲೆ ಗೌಡ “ಅಲ್ಲಪಾ ಪರವೂರವಳು ಆಕೀ ಮ್ಯಾಲ ಹೆಂಗ ಬಹಿಷ್ಕಾರ ಹಾಕಾಕ ಬರತೈತಿ?” ಅಂದ.

ದತ್ತಪ್ಪ ಸಿಡಿದು,

“ನನ್ನ ಚಿಂತಾಮಣಿ ಸುಳ್ಳ ಹೇಳತದೇನು? ತಗಿ, ತಗಿ, ನಾ ಎನ್ನೂ ಜಳಕ ಮಾಡಿಲ್ಲ?” ಎನ್ನುತ್ತ ಮನೆಗೆ ಹೋದ.