ಇದು ವಿಚಿತ್ರ ಹಂಗಾಮು, ಮಹಾನವಮಿಯ ಅಮವಾಸ್ಯೆಯಿಂದ ಶೀಗಿ ಹುಣ್ಣಿಮೆಯ ತನಕ ರೈತರಿಗೇನೂ ಕೆಲಸವಿರುವುದಿಲ್ಲ. ಕಳೆ ತೆಗೆಯಬೇಕಾದ್ದಿಲ್ಲ; ಬೆಳೆಯ ಕಾಳಜಿ ಮಾಡಬೇಕಾದ್ದಿಲ್ಲ. ಬೆಳೆಯ ಗಂಟಲಲ್ಲಿದ್ದ ಕಾಳು ಈ ಅವಧಿಯಲ್ಲೇ ಹೊರಕ್ಕೆ ಬರುತ್ತದೆ. ಈಗ ಭೂಮಿಯನ್ನು ನೋಡುವುದೇ ಚಂದ – ತುಂಬು ಬಸರಿಯ ಹಾಗೆ ಕಾಣಿಸುತ್ತದೆ. ನಿಜ ಹೇಳಬೇಕೆಂದರೆ ಬಸರಿಯಂತಹ ಸುಂದರಿ ಈ ಪ್ರಪಂಚದಲ್ಲೇ ಇಲ್ಲ. ಹೆಣ್ಣು ನಿಮಗೆ ಮಾಯೆ ಅನಿಸುವುದೇ ಆವಾಗ. ಅತ್ಯಂತ ಅದ್ಭುತವಾದ, ಮಾತಿಗೆ ಮೀರಿದ ಮಾದಕತೆ, ತೃಪ್ತಿ ಅವಳ ಅಂಗಾಂಗಗಳಲ್ಲಿ ಮೂಡಿರುತ್ತದೆ. ಆ ದಿವ್ಯ ಸೌಂದರ್ಯದ ಎದುರು ಮನುಷ್ಯ ಮಗುವಾಗುತ್ತಾನೆ.  ಭೂಮಿಯ ಈಗಿನ ಸೌಂದರ್ಯವೂ ಅಂಥದೇ, ಗರ್ಭದ ನಿಧಿ ಚಡಪಡಿಸುವುದನ್ನು ಸಂತೋಷಿಸುತ್ತ, ಮೌನವಾಗಿರುವ ಈಗಿನ ಭೂಮಿಯನ್ನು ನೋಡಿ ‘ದೇವರನ್ನು ಕೊಂಡಾಡೋಣ’ ಎನಿಸುತ್ತದೆ.

ಈಗ ಮುಟ್ಟಾದ ಹೆಂಗಸರು ಹೊಲದ ಕಡೆ ಸುಳಿಯಬಾರದು. ಗಂಡಸರು ಹಾದರ ಮಾಡಬಾರದು. ಕಾಲ್ಮರಿ ಹಾಕಿಕೊಂಡು ಮೆಣಸಿನ ಹೊಲದಲ್ಲಾಗಲಿ, ಬಳ್ಳಿಗಳಲ್ಲಾಗಲೀ ಹಾಯಬಾರದು.

ಇದು ರೈತರಿಗೂ ಗೊತ್ತು. ಆದ್ದರಿಂದಲೇ ಬಸುರಿಯ ಬಯಕೆಯನ್ನೀಡೇರಿಸುವಂತೆ ಥರಾವರಿ ಅಡಿಗೆ ಮಾಡಿಕೊಂಡು ಹೊಲಗಳ ತುಂಬ ಚೆರಗ ಚೆಲ್ಲಿ ಬರುತ್ತಾರೆ. ಈಗಿನ ಆಕಾಶ ಬಲು ಶುಭ್ರ; ಹಗಲಾಗಲಿ, ರಾತ್ರಿಯಾಗಲಿ, ಹಗಲಾದರೆ ಹಸನಾದ ಬಿಸಿಲು, ಸೂರ್ಯ ನಕ್ಕ ಹಾಗೆ. ರಾತ್ರಿಯಾದರೆ ಆಕಾಶದ ತುಂಬ ಹುರಿದರಳು ಚೆಲ್ಲಿದಂತೆ ನಕ್ಷತ್ರಗಳು ಇಕಾ ನನ್ನ ಬೆಳಕು, ಅಕಾ ನಿನ್ನ ಮಿಣುಕು! ಸಾಲದ್ದಕ್ಕೆ ಮೆತ್ತಗೆ ಒತ್ತೊತ್ತಿ ಮುತ್ತುವ ಥಂಡಿ.

ಥಂಡಿ ಎಂದೊಡನೆ ವಿರಹಿಗಳ ಪ್ರೇಮ, ಪ್ರೇಮಿಗಳ ಕಾಮ, ಕಾಮಿಗಳ ಭೋಗ ಜಾಸ್ತಿಯೆಂಬಂಥ ವರ್ಣನೆಗಳನ್ನು ಕೇಳಬೇಡಿರಿ. ಅದೆಲ್ಲ ಬಾತಿಗೆ ಬಾರದ ಕಾವ್ಯಗಳಲ್ಲಿ, ಕಾವ್ಯಗಳ ಅರಮನೆಗಳಲ್ಲಿ ಮಾಡುವುದಕ್ಕೆ ಕೆಲಸವಿಲ್ಲದ  ನಗರಗಳಲ್ಲಿ ನಡೆದೀತು. ಯಾವುದಕ್ಕೂ ಒಂದೊಂದು ಋತುಮಾನವಿದೆ. ಇದಂತೂ ಕುಚೇಷ್ಟೆಗಳಿಗೆ ಹೇಳಿ ಮಾಡಿಸಿದ ಹಂಗಾಮಲ್ಲ.

ಈಗ ದೇವರೇಸಿಯ ಮುಖ ನೋಡುವುದೇ ಚಂದ. ಹಿಂದೆ ಮೊಳಕಾಲ ಮಟ ಉದ್ದನೆಯ ಜಡೆಬಿಟ್ಟುಕೊಂಡು ಹಣೆತುಂಬ ಬಂಡಾರ ಬಳಿದುಕೊಂಡು ಒಂದು ಹೆಗಲಿಗೆ ಗೊಂಗಡಿ ಇನ್ನೊಂದಕ್ಕೆ ಬಂಡಾರ ಚೀಲ ತೂಗು ಬಿಟ್ಟುಕೊಂಡು ಉಧೋ ಎಂದು ಹೊರಡುತ್ತಾನೆ. ಊರ ಸೀಮೆಯ ಗುಂಟ ಭಂಡಾರ ಚೆಲ್ಲುವುದೇ ಅವನ ಕಾರ್ಯಕ್ರಮ. ಹೊಲಹೊಲಕ್ಕೆ ಹೋಗಿ ಆತ ಹೆಂಗಸಿನ ಥರ ಕೂತು ‘ಹಂಗ ಮಗನ ಹಿಂಗ ಮಗನ’ ಎನ್ನುತ್ತ ಕೂತಿದ್ದರೆ ಭಾವುಕ ರೈತನಿಗೆ ಸ್ವಥಾ ಕರಿಮಾಯಿಯೇ ತಮ್ಮ ಹೊಲಕ್ಕೆ ಬಂದಂತಾಗುತ್ತದೆ. ಹಸಿರು ಭೂಮಿಯ ಚಂದ ನೋಡಲೋ, ತಾಯಿಯ ಬಂಡಾರ ಮುಖದ ಅಂದ ನೊಡಲೋ! ಜನ ಕೃತಜ್ಞತೆಯಿಂದ ತುಂಬಿ ಸೂಸುತ್ತಾರೆ.

ದಿನದಿನಕ್ಕೆ ಹುಣ್ಣಿವೆ ಸಮೀಪ ಬರತೊಡಗಿತ್ತು. ಈ ಹುಣ್ಣಿಮೆಯ ದಿನ ನಡೆಯುವ ಪೂಜೆ ತಾಯಿಯೇ ಆದಿಯಲ್ಲಿ ಹೇಳಿ ವರ್ಷದ ಮೂರು ಮುಖ್ಯ ಪೂಜೆಗಳಲ್ಲಿ ಒಂದು. ಈ ಪೂಜೆಯನ್ನು ತಾಯಿಯನ್ನು ಎಷ್ಟೆಷ್ಟು ತೃಪ್ತಿಪಡಿಸಿದರೆ ಅಷ್ಟಷ್ಟು ರಾಶಿ ಹುಲುಸಾಗುತ್ತದೆ. ಮಹಾನವಮಿಯಂದು ಸೀಮೆ ಕಟ್ಟಲಿಕ್ಕೆ ಹೋದ ತಾಯಿ ಅಂದರೆ ದೇವರೇಸಿ ಹುಣ್ಣಿಮೆಯ ಮನ್ನಾದಿನ ಗೌಡನ ತೋಟಕ್ಕೆ ಬರುತ್ತಾಳೆ. ಆ ದಿನ ತಾಯಿಗೆ ಗೌಡನ ಮನೆಯಿಂದಲೇ ಊಟ. ಅದಕ್ಕೂ ನಿಯಮಗಳಿವೆ. ಗಂಡುಳ್ಳ ಗರತಿ, ಕೋಳಿ ಕೂಗುವಾಗಲೇ ಎದ್ದು ತಣ್ಣೀರಲ್ಲಿ ಜಳಕಮಾಡಿ ಒದ್ದೆಬಟ್ಟೆಯಲ್ಲೇ ಅಡಿಗೆ ಮಾಡಬೇಕು. ಆ ಗರತಿ ಎದ್ದಾಗಿನಿಂದ ಹಿಡಿದು ಖುದ್ದಾಗಿ ಹೋಗಿ ತೋಟದಲ್ಲಿಯ ತಾಯಿಗೆ ಬಡಿಸುವ ತನಕ ಒಬ್ಬರ ಜೊತೆ ಮಾತನಾಡಕೂಡದು, ಕಣ್ಣಿಟ್ಟು ಒಬ್ಬರ ಮುಖ ನೋಡಕೂಡದು. ಇದು ತಲೆತಲಾಂತರದಿಂದ ನಡೆದುಬಂದ ಪದ್ಧತಿಯಾದ್ದರಿಂದ ಊರವರು ಅಂಥ ಗರತಿಯನ್ನು ಮಾತಾಡಿಸುವುದಿಲ್ಲ. ಆಕೆ ಸುಳಿಯುವ ಸ್ಥಳದಲ್ಲಿ, ಆ ಸಮಯದಲ್ಲಿ ಯಾರೂ ಕಾಲಿಕ್ಕುವುದೂ ಇಲ್ಲ.

ಮೂರೂ ಸಂಜೆಯಾಯಿತೆಂದರೆ ತಾಯಿಗೆ ಅಂದರೆ ದೇವರೇಸಿಗೆ ಸೆರೆಯ ಅಪ್ಪಣೆಯಾಗಬೇಕು. ಅದು ಲಗಮವ್ವನ ಜವಾಬ್ದಾರಿ. ಅದಕ್ಕಾಗಿ ಮೂರು ಹೊಸ ಪರವಾಣಗಳೇ ಆಗಬೇಕು. ಮೊದಲು ಒಂದು ಪರಿವಾಣದ ತುಂಬ ಹಾಕಿಕೊಟ್ಟರೆ ತಾಯಿ ಒಂದೇ ಗುಟುಕಿಗೆ ಇಡೀ ಪರಿವಾಣ ಬರಿದು ಮಾಡುತ್ತಾಳೆ. ಆಮೇಲೆ ಇನ್ನೊಂದು, ಮತ್ತೊಂದು. ಮೂರನ್ನೂ ಮುಗಿಸಿ ತಾಯಿ ಚಕಾರ ಶಬ್ದ ಎತ್ತದೆ ಹ್ಯಾಗಿದ್ದರೆ ಹಾಗೇ ಬೆನ್ನು ಮೇಲಾಗಿ ಬಿದ್ದು ಬಿಡುತ್ತಾಳೆ. ಲಗಮವ್ವನ ಹಾಸಡಿನಲ್ಲಿ ತಾಯಿ ಮೂರು ಗುಟುಕು ಸೆರೆ ಕುಡಿದಳೆಂದು ವರ್ಣನೆ ಬರುತ್ತದಲ್ಲ, ಆ ಮೂರು ಗುಟುಕು ಎಂದರೆ ಇಂಥವು; ಎಷ್ಟೆಂದರೂ ಮಹಾತಾಯಿ; ದೊಡ್ಡವರದೆಲ್ಲ ದೊಡ್ಡದೇ.

ಅದೇ ದಿನ ಮಧ್ಯಾಹ್ನದ ಹೊತ್ತು ರೈತರು ಊದಿ ಬಾರಿಸುತ್ತ ಮರದ ದೊಡ್ಡ ದೊಡ್ಡ ದಿಮ್ಮಿಗಳನ್ನು ತಗೊಂಡು ಗುಡಿಯ ಪೌಳಿಯಲ್ಲಿ ಕೊಂಡ ಮಾಡಿ ಅದರಲ್ಲೆಸೆದು ಬೆಂಕಿ ಹಚ್ಚಿ  ಬರುತ್ತಾರೆ. ಒಮ್ಮೆ ಹಾಗೆ ಹೊರಗೆ ಬಂದರೆ ನಾಳೆ ತಾಯಿಯ ಜೊತೆಗೇ ಕಾಲಿಡಬೇಕು. ಅಲ್ಲಿಯ ತನಕ ಒಂದು ಹುಳು ಕೂಡ ಒಳಗೆ ಸುಳಿಯಬಾರದು.

ಮೊದಲೇ ಕೆಂಡದಂಥ ದೇವಿ; ಮಡಿ ಮೈಲಿಗೆ ಸರಿಯಾಗಿ ಪಾಲಿಸಬೇಕು. ಮಾರನೇ ದಿನ ತಾಯಿಯ ಬಂಗಾರ ಮೂರ್ತಿಯೊಂದಿಗೆ ಮೆರವಣಿಗೆ ಬಂದು ಕಾರಣಿಕವಾದರೆ ಅಂದಿನ ಉತ್ಸವ ಮುಗಿದಂತೆ.

ಆಯ್ತು; ಕರಿಮಾಯಿ ಸೀಮೆಕಟ್ಟಿ ಬಂದು ಗೌಡನ ತೋಟದಲ್ಲಿ ಬೀಡುಬಿಟ್ಟಿದ್ದಳು. ಬೆಳಗಿನ ಊಟೋಪಚಾರ ಮುಗಿದಿತ್ತು. ಸಮಯ ಬಾರಾಬಜೆಯಾಗಿದ್ದಿತು. ಗುಡಿಸಲಲ್ಲಿ ದುರ್ಗಿಯನ್ನು ಕೂರಿಸಿ ಲಗಮವ್ವ ಹೊಲಕ್ಕೆ ಹೂ, ಹುಲ್ಲು, ಜೋಳದ ಗರಿ ತರುವುದಕ್ಕೆ ಹೋದಳು. ದುರ್ಗಿ ಒಬ್ಬಳೇ ಆದಳಲ್ಲ ಮತ್ತೆ ಮತ್ತೆ ಹೊರಗೆ ಬಂದು ಗುಡಸೀಕರ ಬಂದಿದ್ದಾನೆಯೇ ಎಂದು ನೋಡಿದಳು. ತಾನು ಈ ಹಿಂದೆ ಕಳಿಸಿದ ಸಂದೇಶ ತಲುಪಿದೆಯೇ? ಸಂಜೆ ಗುಡಿಕಡೆ ಬರುತ್ತಾನೊ? ಅಥವಾ ಚಿಮಣಿ ಇರುವಾಗಿ ತನ್ನನ್ನು ಬಯಸುತ್ತಾನೊ? ಹಾಗಿದ್ದರೆ ಹೋಳೀಹಬ್ಬದಲ್ಲಿ ದುಡ್ಯಾಕೆ ಕೊಟ್ಟು ಕಳಿಸಿದ್ದು? ಹೀಗೆ ಅಚಿತ್ರೋ ವಿಚಿತ್ರ ತರ್ಕದಲ್ಲಿ ಮುಳುಗಿದ್ದಳು. ಅವಳು ಆಗಾಗ ಹೊರಬಂದು ಒಳಹೋದುದನ್ನು ಬಸವರಾಜು ಗಮನಿಸಿದನೇ ಹೊರತು ಗುಡಸೀಕರನಿಗೆ ಇದರ ತುದಿಬುಡ ತಿಳಿಯಲೇ ಇಲ್ಲ.

ಬಸವರಾಜು ಉಪಾಯವಾಗಿ ಗುಡಿಸಲಕಟ್ಟೆಯ ಮೇಲೆ ಗುಡಸೀಕರನನ್ನು ಕೂಡಿಸಿಕೊಂಡು ಸ್ವಲ್ಪ ಹೊತ್ತು ಅದು ಇದು ಮಾತಾಡಿದ, ಮೆಲ್ಲಗೆ ಒಳಗಿದ್ದ ಚಿಮಣಾಳಿಗೆ ಕೇಳಿಸದಂತೆ ವಿಷಯ ತೆಗೆದ. ಒಬ್ಬ ಹುಡುಗಿ ಇವನಿಗಾಗಿ ಹಸಿದು ನಿಂತುದನ್ನು ರಸವತ್ತಾಗಿ ಬಣ್ಣಿಸಿದ. ಗುಡಸೀಕರನ ಆಸಕ್ತಿ ಕೆರಳಿತು. ಯಾರು ಯಾರೆಂದು ಪೀಡಿಸಿದ. “ಯಾರಿರಬೇಕು ಹೇಳು ನೋಡೋಣ” ಎಂದು ಆಟವಾಡಿದ. ಕೊನೆಗೆ “ಈಗ ಕಣ್ಣು ಮುಚ್ಚಿಕೊ. ತೋರಿಸ್ತೀನಿ” ಎಂದು ಒತ್ತಾಯ ಮಾಡಿ ಕಣ್ಣು ಮುಚ್ಚಿಸಿ, ಅವನ ಕೈಗೊಂದು ಅಡಿಕೆ ಕೊಟ್ಟು ಎದುರಿಗೆ ಎಸೆದರೆ ಅದು ಬಿದ್ದಲ್ಲಿ ಅವಳಿರುತ್ತಾಳೆಂದು ಹೇಳಿದ. ಗುಡಸೀಕರ  ಕಣ್ಣು ಮುಚ್ಚಿ ಅಡಿಕೆ ಎಸೆದ. ಅದು ಆಗಷ್ಟೆ ಹೊರಗೆ ಬಂದ ದುರ್ಗಿಯ ಮುಂದೆ ಬಿತ್ತು. ನಾಚಿ ಅಡಿಕೆ ತಗೊಂಡು ಒಳಗೋಡಿದಳು. ಗುಡಸೀಕರನಿಗೆ ಹೌದಲ್ಲಾ ಎನಿಸಿತು. ಆದರೆ ಉತ್ಸಾಹಿತನಾಗಲಿಲ್ಲ. ಬಸವರಾಜು ಇದನ್ನು ಗ್ರಹಿಸಿದ.

ಆಗುವ ಮೋಜು ಹೇಗೂ ಆದೀತು. ಬರಲಿರುವ ಚುನಾವಣೆಯ ಹೆಸರಿನಲ್ಲಿ ಇದು ನಡೆಯಲೇಬೇಕೆಂಬುದನ್ನು ಖಾತ್ರಿ ಮಾಡಿದ.

“ಮುಂದಿನ ಹಾದಿ ಹೆಂಗ?”

“ಅದು ನನ್ನ ಜವಾಬ್ದಾರಿ.”

ಹೌಹಾರಿದಳು ದುರ್ಗಿ. ಸೂರ್ಯ ಮುಳುಗಲೊಲ್ಲ. ಸಂಜೆಯಾಗಲೊಲ್ಲದು. ಕಾಲು ನೆಲಕ್ಕೆ ಊರಲೊಲ್ಲವು. ಮನಸ್ಸು ನಿಂತಲ್ಲಿ ನಿಲ್ಲಲೊಲ್ಲದು. ಹೊರಗೆ ಬಂದು ಸೂರ್ಯನನ್ನು ಶಪಿಸಿದಳು. ಒಳಗೆ ಹೋಗಿ ಕುಳಿತಳು. ಕೂರದೆ ನಿಂತಳು. ನಿಲ್ಲದೆ ನಡೆದಾಡಿದಳು ನಡೆದಾಡದೆ ಕೂತಳು. ನಿಂತಳು. ಹರಿದಾಡಿದಳು. ನಿಟ್ಟುಸಿರು ಬಿಟ್ಟುಬಿಟ್ಟು ಎದೆಯ ಏರಿಳಿವುಗಳನ್ನು ಅಳೆದಳು. ಅಂತೂ ಸಂಜೆಯಾಯ್ತು. ಗುಡಿಸಲಲ್ಲಿ ಲಗಮವ್ವ ಇರಲಿಲ್ಲ. ರೈತರು ಕೊಂಡಕ್ಕೆ ದಿಮ್ಮಿ ಚೆಲ್ಲಿ ಬೆಂಕಿ ಹಚ್ಚಿ ಬಂದುದನ್ನು ವಾಲಗದ ಸಪ್ಪಳದಿಂದಲೇ ತಿಳಿದಿದ್ದಳು. ಹೊತ್ತೂ ಸಂಜೆಯಾಗಿತ್ತು. ಮೈಯಲ್ಲಿ ಬೆದೆಯಿತ್ತು. ಮನಸ್ಸಿನಲ್ಲಿ ಉಮೇದಿಯಿತ್ತು. ಇನ್ನು ಅವಳನ್ನು ತಡೆಯುವವರು ಯಾರು?

ಗುಡಿಯ ಹಿಂಭಾಗದ ಮರಗಳ ಬಳಿ ಹೋಗಿ ಅತ್ತಿತ್ತ ನೋಡಿದಳು. ಯಾರಿರಲಿಲ್ಲ. ಮತ್ತೆ ಮತ್ತೆ ನೋಡಿಬಂದಳು. ಇನ್ನೂ ಬಂದಿರಲಿಕ್ಕಿಲ್ಲವೇ? ಸುಳ್ಳು ಸುಳ್ಳೇ ಅಡಿಕೆ ಎಸೆದನೇ? ಎಂದೆಲ್ಲ ಚಿಂತಿಸಿದಳು. ಬಂದಾನೆಂದು ಅಲ್ಲೇ ಕುಳಿತಳು. ಬೇಸತ್ತು ಮತ್ತೆ ಹುಡುಕಿ ಬಂದಳು. ಕೊನೆಗೆ ಗುಡಿಯ ಮುಂದುಗಡೆ ಹಾದು ಬರುತ್ತಿದ್ದಾಗ ಹಿಂದಿನಿಂದ ಯಾರೋ ಕದ್ದು ಕರೆದಂತಾಯ್ತು ತಿರುಗಿ ನೋಡಿದಳು. ಗುಡಿಯ ಒಳಭಾಗದ ಕತ್ತಲಲ್ಲಿ ನಿಮತು ಕೈಬೀಸಿ ಕರೆಯುತ್ತಿದ್ದ. ಈ ದಿನ ಯಾರೂ ಗುಡಿಯೊಳಕ್ಕೆ ಬರುವುದಿಲ್ಲವೆಂದು ಗೊತ್ತು. ಒಂದು ಕ್ಷಣ ಹೋಗುವುದೇ ಬೇಡವೇ ಎಂದು ಯೋಚಿಸತ್ತ ನಿಂತಳು. ತಲೆಯಲ್ಲಿ ಗಾಳಿ ತುಂಬಿದ ಹಾಗೆ ಮಡಿಮೈಲಿಗೆ ಯಾವುದನ್ನೂ ಗಣನೆಗೆ ತಾರದೆ ಬರದಿಂದ ಒಳಹೊಕ್ಕಳು. ಬಂದು ಸಿಕ್ಕೊಡನೆ ಅಮಾತ ಅವಳನ್ನೆತ್ತಿ ದೇವೀಮೂರ್ತಿಯ ಹಿಂಭಾಗಕ್ಕೊಯ್ದ. ಅವರ ಗುಮುರಿಗೆಗೆ ತಾಯಿಯ ಮರದ ಮೂರ್ತಿ ಗಡಗಡ ನಡುಗಿ ಖಡ್ಗ ಹಿಡಿದ ಬಲಗೈ ಮುರಿದು ಕೆಳಗೆ ಬಿತ್ತು. ಕತ್ತಲಲ್ಲಿ ಅದ್ಯಾವುದೂ ಗೊತ್ತಾಗಲಿಲ್ಲ. ಅಥವಾ ಗೊತ್ತಾಗುವ ಸ್ಥಿತಿಯಲ್ಲಿ ಇಬ್ಬರೂ ಇರಲಿಲ್ಲ. ಕೊಂಡದ ಬೆಂಕಿ ಧಗಧಗ ಉರಿಯುತ್ತಿತ್ತು.

ತಾನು ಹೇಳಿದಂತೆ ಗುಡಸೀಕರ ಬಂದಿರಬಹುದೆಂದುಕೊಂಡು ನಿಂಗೂ ಗುಡಿಯ ಹಿಂದಿನ ಮರದ ಗುಂಪಿನಲ್ಲಿ ಹೋಗಿ ಹುಡುಕಿದ, ಯಾರೂ ಇರಲಿಲ್ಲ. ಎಲ್ಲಾ ಸುಳ್ಳು ಎಂದುಕೊಂಡು ಗುಡಿಯ ಬದಿಯ ಹಾದಿಯಿಂದ ಬರುತ್ತಿರುವಾಗ ಗುಡಿಯಲ್ಲಿ ಯಾರೋ ಹೆಣ್ಣು ನರಳುತ್ತಿದ್ದಂತೆ ಕೇಳಿಸಿತು. ಗರ್ಭಗುಡಿಯಲ್ಲಿ ಏನೋ ಅಕೃತ್ಯ ನಡೆದಿರಬಹುದೆಂಬುದನ್ನು ಊಹಿಸುವುದು ಅವನಿಗೆ ಅಸಾಧ್ಯವಾಯ್ತು. ಹೇಳಿ ಕೇಳಿ ಹುಣ್ಣಿಮೆ, ಇಂದು ಗುಡಿಯಲ್ಲಿ ಭೂತ ಸೇರುತ್ತವೆಯೆಂಬುದು ಗೊತ್ತಿತ್ತಲ್ಲ. ಗಾಬರಿಯಾಯ್ತು. ಅಷ್ಟು ದೂರ ಓಡಿ ಹೋಗಿ ಪೌಳಿಯ ಬಾಗಿಲಿನಿಂದ ಗುಡಿಯ ಕಡೆ ನೋಡಿದ. ಕೊಂಡದಲ್ಲಿ ಆಗಷ್ಟೇ ಹೊತ್ತಿಸಿದ ಬೆಂಕಿ ಉರಿಯುತ್ತಿತ್ತು. ಜ್ವಾಲೆಯೊಳಗಿನಿಂದ ಗರ್ಭಗುಡಿ ಥರಥರ ನಡುಗಿದಂತೆ ಕಾಣುತ್ತಿತ್ತು. ಅಯ್ಯಯ್ಯೋ ಎಂದು ಓಡಿದ. ‘ಗುಡ್ಯಾಗ ಹೆಣ್ಣದೆವ್ವ ನರಳಾಕ ಹತ್ತಿತ್ರೋ, ಸ್ವತಾಃ ಕಿವೀಲೆ ಕೇಳಿದೆ’ ಎಂದು ಸುದ್ದಿ ಹಬ್ಬಿಸಿದ.

ತಿರುಗಿ ಗುಡಿಸಲಿಗೆ ಬಂದಾಗಲೇ ದುರ್ಗಿಗೆ ಅರಿವು ಮೂಡಿತು. ಈ ತನಕ ಮಹಾಪೂರದ ಸೆಳವಿಗೆ ಸಿಕ್ಕವಳು ಈಗ ಹೊರಗೆ ಬಂದಂತಾಗಿತ್ತು. ಇಂದ್ರಿಯಗಳು ತಂತಮ್ಮ ಸ್ಥಳಕ್ಕೆ ಬಂದು ಸಹಜ ವ್ಯಾಪಾರಕ್ಕೆ ತೊಡಗಿದವು. ಹುಡುಗಿ ನಡುಗುತ್ತಿದ್ದಳು. ತೊಡೆಗಳಲ್ಲಿ ಹಸಿನೆತ್ತರು ಸೋರ್ಯಾಡಿತ್ತು. ಒರಸಿಕೊಂಡಳು. ಕರಿಮಾಯಿಯ ಗುಡಿಯಲ್ಲಿ ಆಗಬಾರದ್ದು ಆಗಿಹೋಗಿತ್ತು. ತಾಯಿಯ ಮರದ ಉಗ್ರಮುಖ, ಆಯುಧ ಹಿಡಿದ ಕೈ ನೆನೆಪಾದವು. ಮೈ ತುಂಬಿದ ದೇವರೇಸಿಯ ಮುಖ ನೆನಪಾಯ್ತು. ನಡುಕ ಇನ್ನೂ ಜಾಸ್ತಿಯಾಯ್ತು. ಬೇರೆ ದಿನಗಳಲ್ಲಾದರೆ ಹೇಗೋ ನಡೆದೀತು. ಇವು ಮಡಿ ಮೈಲಿಗೆಯ ದಿನಗಳು. ನಾಳೆ ತಾಯಿ ಗುಡಿಗೆ ಬರಲಿದ್ದಾಳೆ. ಮೈಲಿಗೆಯಾಯ್ತು. ತನಗಿನ್ನು ಉಳಿಗಾಲವಿಲ್ಲ. ದೇವೀ ನಾಳೆ ತನ್ನನ್ನಳೆದು ತಲೆಯ ಮೇಲೆ ಬೆಂಕಿಯಿಡುವುದು ಖಂಡಿತ, ಅಯ್ಯೋ, ಘಾತವಾಯಿತೆಂದು ಬೆದರಿದಳು. ಜೀವ ಕೈಯಲ್ಲಿ ಹಿಡಿದುಕೊಂಡು ಚಾಪೆಯ ಮೇಲೆ ಮುದ್ದೆಯಾಗಿ ಬಿದ್ದಳು. ಕಿವಿಗೆ ಕೇಳಿಸುವಷ್ಟು ಗಟ್ಟಿಯಾಗಿ ಎದೆ ಹೊಡೆದುಕೊಳ್ಳುತ್ತಿತ್ತು.

ಬಸವರಾಜು ಬಂದಾಗ ಗುಡಸೀಕರ ಚಿಮಣಾಳ ಜೊತೆ ಮಾತಾಡುತ್ತ ಕೂತಿದ್ದ. ಬಸವರಾಜು ವಿಜಯದ ಉನ್ಮಾದದಲ್ಲಿದ್ದ! ‘ಹಲೋ ಸರಪಂಚ್’ ಎಂದು ದಿನಕ್ಕಿಂತ ಎತ್ತರದ ದನಿಯಲ್ಲಿ ಮಾತಾಡುತ್ತ ಒಳಗೆ ಹೋದ. ಚಡ್ಡಿಗೆ ಹಸೀ ರಕ್ತ ಅಂಟಿತ್ತು. ಬದಲಿಸಿ ಬಾಟ್ಲಿ ತಗೊಂಡೇ ಬಂದ. ತೃಪ್ತಿ ಮುಖ ತುಂಬಿ ಹೊರಸೂಸುತ್ತಿತ್ತು. ಜೋರು ಮಾಡಿ ಗುಡಸೀಕರನಿಗೆ ಸುರಿದ. ಚಿಮಣಾಳಿಗೆ ಇನ್ನಷ್ಟು ಸುರಿದ ಮಾತಿಗೊಮ್ಮೆ ‘ಓಲ್ಡ್ ಬಾಯ್’ ಎನ್ನುತ್ತ ಗುಡಸೀಕರನ ಭುಜ ತಟ್ಟಿದ. ಗೆದ್ದವನಂತೆ ಆಗಾಗ ದೊಡ್ಡ ದನಿ ತೆಗೆದು ನಕ್ಕ. ದಣಿದಿದ್ದನಲ್ಲ, ಕಪ್ಪೆ ನುಂಗಿದ ಸರ್ಪದಮತೆ ಸುಂದಾಗಿ ಕೂತಲ್ಲೇ ಒರಗಿದ.

ಕೋಳಿ ಕೂಗುವ ಮುನ್ನವೇ ಲಗಮವ್ವ ಎದ್ದು ಜಳಕ ಮಾಡಿದ್ದಳು. ಮಡಿ ಉಟ್ಟು ಸಾಮಗ್ರಿ ಸೇರಿಸಿ ಪಕ್ಕದ ಇಬ್ಬರು ಗರತಿಯರನ್ನು ಎಬ್ಬಿಸಿದಾಗ ಕೋಳಿ ಕೂಗಿತು. ಮೂವರು ಗುಡಿಗೆ ಹೋದರು. ಕೊಂಡದಲ್ಲಿಯ ಮರದ ದಿಮ್ಮಿಗಳು ಸು‌ಟ್ಟು ನಿಗಿನಿಗಿ ಕೆಂಡವಾಗಿದ್ದವು. ಕರಿಮಯಿಗೆ ಈ ದಿನ ವಿಶೇಷ ಅಲಂಕಾರ. ಕತ್ತಿನಿಂದ ಸೊಂಟದ ತನಕ ಅವರೆಯ ಹೂ ಅಂಟಿಸುತ್ತಾರೆ. ಅದು ತಾಯಿಯ ಹಳದಿ ಕುಪ್ಪಸದಂತೆ ಕಾಣಿಸುತ್ತದೆ. ಸೊಂಟದಿಂದ ಕೆಳಗೆ ಪಾದದ ತನಕ ಸಾಲಾಗಿ ಜೋಳದ ಗರಿಗಳನ್ನು ಅಂಟಿಸುತ್ತಾರೆ. ಅದು ತಾಯಿಯ ಗರಿಗರಿ ಹಸಿರು ನೆರಿಗೆಯಂತೆ ಕಾಣುತ್ತದೆ. ಉಳಿದಂತೆ ತರತರದ ಹೂವಾಭರಣಗಳನ್ನು ಅಂಟಿಸುತ್ತಾರೆ. ಕತ್ತಿನ ತುಂಬ ಚೆಂಡು ಹೂ ಮಾಲೆ ಅಂಟಿಸುತ್ತಾರೆ. ಮೆರವಣಿಗೆ ಬಂದಾಗ ಮೇಲೆ ಬಂಗಾರದ ಮುಖ ಕೂರಿಸುತ್ತಾರೆ. ಈ ಶೃಂಗಾರ ನೋಡುವವರ ಕಣ್ಣು ತುಂಬುತ್ತದೆ. ಆ ಹೂವು, ಆ ಗರಿ, ಬಂಗಾರದ ಆ ಮುಖ – ತಾಯಿ ಈ ದಿನ ಸಮೃದ್ಧಿ ದೇವತೆಯ ಅವತಾರ ತಾಳಿದಂತಿರುತ್ತದೆ. ಹೀಗೆ ಮೈ ಶೃಂಗಾರವಾಗುವ ಹೊತ್ತಿಗೆ ಸೂರ್ಯೋದಯವಾಗುತ್ತದೆ.

ಬೆಳಗಿನ ಬೆಳಕಿನಲ್ಲಿ, ತಾಯಿಯ ಮರದ ಮೂರ್ತಿಯ ಕೈ ಮುರಿದಿತ್ತಲ್ಲ. ಲಗಮವ್ವನಿಗೆ ಕಂಡಿತು. ಜೀವ ಜಲ್ಲೆಂದಿತು. ಎರಡೂ ಕೈ ಎದೆಯ ಮೇಲಿಟ್ಟುಕೊಂಡು ‘ಅಯ್ಯೋ ತಾಯಿ’  ಎಂದಳು. ನೋಡಿ ಎಲ್ಲರೂ ಗಾಬರಿಯಾದರು. ಮುರಿದ ಕೈ ಖಡ್ಗ ಸಮೇತ ದೂರ ಸಿಡಿದು ಬಿದ್ದಿತ್ತು. ಅದರ ಬಳಿಯಲ್ಲೇ ನೆತ್ತರು ಸೋರ್ಯಾಡಿತ್ತು! ಶೃಂಗಾರದ ಸಡಗರದಲ್ಲಿ ತಾವೇ ಕೈಮುರಿದವೋ ಎಂದುಕೊಂಡರು. ಹಾಗೆ ನೆನಪಾಗಲಿಲ್ಲ. ತಾಯಿ ಮುನಿದಳು ಎಂದರು. ಅಪಶಕುನ ಎಂದರು. ಲಗಮವ್ವ ಅಡರಾಸಿ ಗೌಡನ ಬಳಿಗೆ ಓಡಿದಳು.

ಗೌಡನ ಮನೆಯಲ್ಲಾಗಲೇ ಹಿರಿಯರು ಸೇರಿದ್ದರು. ಆರತಿಯ ಮುತ್ತೈದೆಯರು ಬಂದಿದ್ದರು. ಶಿಷ್ಯಮಕ್ಕಳು ಡೊಳ್ಳುಬಾರಿಸತೊಡಗಿದ್ದರು. ಕಾಳೀಸಿಂಗ ದಿಕ್ಕಿಗೊಮ್ಮೆ ಮುಖಮಾಡಿ  ಕಾಳೀ ಊದಿದ್ದ. ಇನ್ನೂ ದತ್ತಪ್ಪ ಬಂದಿರಲಿಲ್ಲ. ಅಷ್ಟರಲ್ಲಿ ಲಗಮವ್ವ ಓಡಿಬಂದಳು. ಗೌಡನ ಕಿವಿಯಲ್ಲಿ ತಾಯಿಯ ಕೈಮುರಿದ ಸುದ್ದಿ ಹೇಳಿದಳು. ಕೇಳಿ ಗೌಡನ ಕೈಕಾಲಲ್ಲಿಯ ಶಕ್ತಿಯೇ ಉಡುಗಿತು. ಎಲ್ಲರಿಗೆ ಅಲ್ಲೇ ಇರಹೇಳಿ, ದೂರಬರುತ್ತಿದ್ದ ದತ್ತಪ್ಪನಿಗೆ ‘ಬಾ’ ಎಂದಷ್ಟೇ ಸನ್ನೆ ಮಾಡಿ ಗುಡಿಯ ಕಡೆ ಧಾವಿಸಿದ. ಲಗಮವ್ವ ಹಾಗೇ ಬೆನ್ನು ಹತ್ತಿದಳು.

ನೋಡಿ ಆಘಾತವಾಯ್ತು. ಗೌಡ ಲಗಮವ್ವನನ್ನು ನೋಡಿದ. ನಮ್ಮಿಂದ ಆದದ್ದಲ್ಲವೆಂದಳು. ಸದ್ಯ ದೇವೀ ಬರೋತನಕ ಹ್ಯಾಗೋ ಅಂಟಿಸಿ ಆಮೇಲೆ ಸರಿಪಡಿಸಿದರಾಯ್ತೆಂದು ದತ್ತಪ್ಪ ಸೂಚಿಸಿದ. ಬರೋಬರಿಯೆಮದು. ಆ ಕೈ ಮೊದಲಿನಂತೆ ಕೂರಿಸಿ ಸಣ್ಣೆಳೆ ಹುರಿಯಿಂದ ಬಿಗಿದರು. ಗೊತ್ತಾಗದಿರಲೆಂದು ಆ ಭಾಗದಲ್ಲೆರಡು ಹೂವಿನ ಮಾಲೆ ಇಳಿಬಿಟ್ಟರು. ಹೇಗೆ ಏನು ಮಾಡಿದರೂ ಎದೆ ಹೊಡೆದುಕೊಳ್ಳುವುದು ನಿಲ್ಲಲಿಲ್ಲ. ಮೈಲಿಗೆಯಾಗಿರಬೇಕೆಂದು ಸಂಶಯ ಬಂತು. ಗೌಡ ಲಗಮವ್ವನನ್ನು ಪ್ರತ್ಯೇಕ ಕರೆದು ಕೇಳಿದ. ಅವಳು ಇಲ್ಲವೆಂದು ಕರಿಮಾಯಿಯ ಆಣೆ ಮಾಡಿದಳು. ಅಲ್ಲದೆ ಲಗಮವ್ವನೇನೂ ಇದನ್ನೆಲ್ಲ ಅರಿಯದವಳಲ್ಲ, ದೇವರ ಜವಾಬ್ದಾರಿಗಳನ್ನು ಅವಳಿಗೆ ಹೇಳಿಕೊಡಬೇಕಾದದ್ದಿದೆಯೆ! ಹಳಹಳಿ ತಡೆಯಲಾರದೆ ಕೇಳಿದ್ದ. ಅಷ್ಟೆ. ಉಳಿದವರನ್ನು ಕೇಳಿದ ಕಣ್ಣಗಲಮಾಡಿ. ಅವರು ಹೆದರಿ ಓಡಿಹೋಗಿ ತಾಯಿಯ ಭಂಡಾರ ಮುಟ್ಟಿದರು. ಇದನ್ನು ನಿರ್ಧರಿಸುತ್ತ ಕೂರಲು ಸಮಯವೂ ಇದಲ್ಲ. ದೇವರು ಬರುವುದರೊಳಗೆ ನೆಲ ಸಾರಿಸಿ ಇನ್ನೊಮ್ಮೆ ಮಡಿಯಾಗಿ ಗದ್ದಿಗಿ ಪೂಜೆ ಮಾಡೆಂದು ಲಗಮವ್ವನಿಗೆ ಹೇಳಿ ದತ್ತಪ್ಪ, ಗೌಡ ಹೋದರು.

ಇವರು ಬಾಯಿ ಬಿಟ್ಟು ಆಡದಿದ್ದರೂ ಏನೋ ಅಚಾತುರ್ಯವಾಗಿದೆಯೆಂದು ಕೂಡಿದ ಮಂದಿ, ಅವರ ಮುಖ ನೋಡಿಯೇ ಮನಗಂಡರು. ಗೌಡನ ಮನೆಯಲ್ಲಿದ್ದ ಬಂಗಾರ ಮುಖವನ್ನು ತಂದು ಪಲ್ಲಕ್ಕಿಯಲ್ಲಿಟ್ಟರು. ಮೆರವಣಿಗೆ ಗೌಡನ ತೋಟಕ್ಕೆ ಹೋಯಿತು. ಅಲ್ಲಿ ಕೂತ ತಾಯಿಯನ್ನು ತಿರುಗಿ ಗುಡಿಗೆ ತರಬೇಕಾದರೆ ನಾಕು ತಾಸು ಹೊತ್ತೇರಿತು.

ಮೆರವಣಿಗೆ ಪೌಳಿಯ ಹತ್ತಿರ ಬರುವಷ್ಟರಲ್ಲಿ ಊರ ಮಂದಿ ಅಲ್ಲಿ ಸೇರಿದ್ದರು. ದುರ್ಗಿ ಬಂದಿರಲಿಲ್ಲ. ಸುಂದರಿ, ಬಸವರಾಜು, ಗುಡಸೀಕರ ಇವರೂ ಬಂದಿದ್ದರು. ಮೋಜು ನೋಡುವುದಕ್ಕೆ ಬಸವರಾಜು ಬಂದಿದ್ದ. ಗುಡಸೀಕರನಿಗೆ ಭಕ್ತಿಯೇನೋ ಇತ್ತು. ಬಸವರಾಜನ ಎದುರಿಗೆ ಅದನ್ನು ತೋರದೆ ಒತ್ತಾಯಕ್ಕೆ ಬಂದ ಹಾಗೆ ಬಂದಿದ್ದ. ಮೆರವಣಿಗೆ ಪೌಳಿಯ ಸಮೀಪಕ್ಕೆ ಬರುತ್ತಿತ್ತು. ಪೂಜಾರಿಯ ಮೈತುಂಬ ಕಂಬಳಿ ಹೊದಿಸಿದ್ದರು. ಪಲ್ಲಕ್ಕಿಯ ಕೋಲಿನ ಮೇಲೆ ಎಡಗೈ ಇಟ್ಟು ತೇಲಾಡುತ್ತಿದ್ದಂತೆ ಮೆರವಣಿಗೆಯಲ್ಲಿ ನಡೆದುಬರುತ್ತಿದ್ದ. ಪೌಳಿಯ ಬಾಗಿಲು ಅಷ್ಟು ದೂರ ಇದೆಯೆಂದು ಹರಕೆ ಹೊತ್ತ ಇಪ್ಪತ್ತು. ಮೂವತ್ತು ಭಕ್ತರು. ಗಂಡು – ಹೆಣ್ಣುಮಕ್ಕಳೆನ್ನದೆ ಬೆನ್ನು ಮೇಲಾಗಿ ಅಡ್ಡಬಿದ್ದಿದ್ದರು. ಎಲ್ಲರೂ “ಚಾಂಗು ಭಲೇ” ಎಂದು ಕಿರುಚಿ ನಾಗಲೋಟದಿಂದ ಗುಡಿಯ ಕಡೆ ಓಡಿದರು. ಡೊಳ್ಳಿನವರು ಡೊಳ್ಳು ಬಾರಿಸುತ್ತ, ಚೌರಿಯವರ ಚೌರಿ ಬೀಸುತ್ತ. ಕಾಡುಕೂಗುಗಳನ್ನು ಕಿರಿಚುತ್ತ ಪೌಳಿಯ ಬಾಗಿಲ ತನಕ ಓಡಿದರು. ದೇವಿಯ ಮಹಿಮೆಯೆಂದರ ಇದು; ಅಡ್ಡಬಿದ್ದ ಭಕ್ತರ ಮೇಲೆ ಇಡೀ ಮೆರವಣಿಗೆ ಓಡಿದರೂ ಒಬ್ಬರಿಗೊಂದು ಕಾಲು ತಾಕಲಿಲ್ಲ. ನಿಜ ಹೇಳಬೇಕೆಂದರೆ ಒಂದು ಹೆಜ್ಜೆ ಇಟ್ಟಿದ್ದರೆ ಅಲ್ಲೇ ಜಜ್ಜಿಯಾಗುವಂಥ ಮಕ್ಕಳಿದ್ದವು. ಆ ಹುಚ್ಚು ಓಟದಲ್ಲಿ ಹಾಗೆ ತುಳಿಯುವುದು ಅಸಂಭವವೂ ಅಲ್ಲ. ಇಲ್ಲದಿದ್ದರೆ ಜನರ ಭಕ್ತಿ ಸುಳ್ಳೆ? ‘ಗುಂಡು ತೇಲಿಸುವಾಕೆ, ಚೆಂಡು ಮುಳುಗಿಸುವಾಕಿ’ ಎಂಬ ಲಗಮವ್ವನ ಹಾಡು ಸುಳ್ಳೆ?

ಈ ದಿನ ಅದೇನು ಮಾಯೆಯೋ ಪೌಳಿಯ ಬಾಗಿಲಿಗೆ ಪಲ್ಲಕ್ಕಿ ಬಂದು ಥಟ್ಟನೆ ನಿಂತುಬಿಟ್ಟಿತು. ಪಲ್ಲಕ್ಕಿ ಹೊತ್ತವರು ಒಳಹೋಗಬೇಕೆಂದರೆ ಕಾಲು ಏಳಲೊಲ್ಲವು! ದೇವರೇಸಿಯ ರಟ್ಟೆಗೆ ಕೈಹಾಕಿ ನಡೆಸಿಕೊಂಡು ಹೋದೇವೆಂದರೂ ಜಗ್ಗಲಿಲ್ಲ. ಎಲ್ಲರಿಗೂ ಭಯ, ಆಶ್ಚರ್ಯವಾಯಿತು. ಇಂಥದೇನೋ ಆಗುತ್ತದೆಂದು ಗೌಡ, ದತ್ತಪ್ಪ, ಲಗಮವ್ವನಿಗೆ ತಿಳಿದಿತ್ತು. ಒಂದು ಒಡೆಯುವಲ್ಲಿ ಹತ್ತು ತೆಂಗಿನಕಾಯಿ ಒಡೆದರು, ಹತ್ತೂ ದಿಕ್ಕಿಗೆ ಲಿಂಬಿಯ ಹಣ್ಣೆಸೆದರು. ಸಾಮಾನ್ಯವಾಗಿ ಪಲ್ಲಕ್ಕಿ ಪೌಳಿಗೆ ಬರುತ್ತಲೂ ತಾಯಿ ದೇವರೇಸಿಯ ಮೈತುಂಬುವುದು ವಾಡಿಕೆ. ಆದರೆ ಮೈತುಂಬಿ ಹೀಗೆ ನಿಲ್ಲುವುದಿಲ್ಲ. ಓಡೋಡುತ್ತ ಹೋಗಿ ಕೊಂಡಕ್ಕೆ ಪ್ರದಕ್ಷಿಣೆ ಹಾಕಬೇಕು.

ತೆಂಗಿನಕಾಯಿ ಲಿಂಬಹಣ್ಣಿಗೂ ತಾಯಿ ಜಗ್ಗಲಿಲ್ಲ. ಹೀಗೆಂದೂ ಆಗಿರಲಿಲ್ಲ. ವಾದ್ಯದವರು ಸ್ತಬ್ಧರಾದರು. ಮೈತುಂಬಿದ ತಾಯಿ ವಿಚಿತ್ರವಾಗಿ ನಡುಗುತ್ತಿದ್ದಳು. ಗೌಡ ಗಪ್ಪನೆ ತಾಯಿ ಕಾಲು ಹಿಡಿದು “ಮಕ್ಕಳ ತಪ್ಪ ಹೊಟ್ಯಾಗ ಹಾಕ್ಕೊಳ್ಳs ಎವ್ವಾ” ಎಂದ. ಜನ ವಿಸ್ವಯದಿಂದ ಮೂಕರಾಗಿದ್ದರು. ಗೌಡ ಕಾಲು ಬಿಡಲೇ ಇಲ್ಲ. ತಾಯಿ ಬಾಯಿ ಬಿಡಲಿಲ್ಲ. ದತ್ತಪ್ಪನೂ ಬಗ್ಗಿ ಕಾಲು ಹಿಡಿದು “ತಾಯೀ, ಏನ ತಪ್ಪಾಗೇತ್ಯೋ ನಮಗ್ಗೊತ್ತಿಲ್ಲ, ಕೇಳಿದ ತಪ್ಪದಂಡ ಕೊಡತೀವು, ಒಳಗೆ ಬಾ” ಎಂದ. ತಾಯಿಗೊಮ್ಮೆಲೆ ಆವೇಶ ಬಂದಂತೆ ಕಾಲುಹಿಡಿದವರನ್ನು ತಳ್ಳಿ ಹಾಹಾ ಎಂದು ಕಿರುಚುತ್ತ ಒಳಕ್ಕೆ ಓಡಿದಳು.

ಸಾಮಾನ್ಯವಾಗಿ ಒಳಗೆ ಹೋದೊಡನೆ ಓಡೋಡುತ್ತಲೇ ಆಗಲಿ, ಕೊಂಡವನ್ನು ಮೂರು ಸಲ ಪ್ರದಕ್ಷಿಣೆ ಹಾಕಬೇಕು. ಆಗಲೇ ಮುಡಿಪು ಕಟ್ಟಿಕೊಂಡ ಭಕ್ತರು ಕೆಂಡದಲ್ಲಿ ಉಪ್ಪು ಸುರಿಯುತ್ತಾರೆ. ಆಮೇಲೆ ತಾಯಿ ಕೊಂಡ ಹಾಯಬೇಕು. ಭಕ್ತಿ ಕಮ್ಮಿಯಾದ ಜನರನ್ನು ಗುರುತಿಸಿ ಓಡಿಹೋಗಿ ಅವರನ್ನು ಎಳೆದು ತಂದು ಕೆಂಡದಲ್ಲಿ ಓಡಾಡಿಸಬೇಕು. ಆಮೇಲೆ ಖಡ್ಗದಿಂದ ನಾಲಿಗೆ ಇರಿದುಕೊಳ್ಳುತ್ತಾಳೆ, ಅಲಗಿನಿಂದ ಹೊಟ್ಟೆ ಕಡಿದುಕೊಳ್ಳುತ್ತಾಳೆ. ಬಹುಶಃ ಇದು ನಂಬಿಕೆ ಕಡಿಮೆಯಾಗದಂತೆ ನೋಡಿಕೊಳ್ಳುವ ವಿಧಾನವಿದ್ದೀತು. ಆದರೆ ಭಕ್ತರು ಇದಕ್ಕೆ ಅವಕಾಶ ಕೊಡುವುದಿಲ್ಲ. ಶಾಸ್ತ್ರರೀತ್ಯಾ ಒಂದೆರಡು ಸಲ ಅಲಗು ಹಾಯುವುದರೊಳಗೇ ಓಡಿಹೋಗಿ ಅಲಗು, ಖಡ್ಗಗಳನ್ನು ಕಸಿದುಕೊಳ್ಳುತ್ತಾರೆ. ಗೊತ್ತಿದ್ದೂ ತಾಯಿಯ ಪರೀಕ್ಷೆ ಮಾಡುವುದೆಂದರೇನು?

ಈ ಸಲ ಹಾಗಾಗಲಿಲ್ಲ. ತಾಯಿ ಓಡೋಡುತ್ತ ಹೋಗಿ ಗುಡಸೀಕರನ ಹೆಲಗಮೇಲೆ ಕೈಹಾಕಿ ನಿಂತ ಬಸವರಾಜನ ಜುಟ್ಟು ಹಿಡಿದು ದರದರ ಎಳೆದು ತಂದಳು. ಜನ ಹೌಹಾರಿ ಹೋ ಎನ್ನುವುದರೊಳಗೆ ಉಪ್ಪು ಸುರಿಯದ ಕೊಂಡದಲ್ಲಿ ಬಸವರಾಜನನ್ನು ವೀರಾವೇಶದಿಂದ ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಓಡಾಡಿಸತೊಡಗಿದಳು. ಕೊಂಡದಂಚಿಗೆ ಖಡ್ಗಹಿರಿದು ನಿಂತಿದ್ದವನ ಖಡ್ಗ ಕಸಿದುಕೊಂಡು ಹೊಟ್ಟೆಯ ಮೇಲೆ, ನಾಲಗೆಯ ಮೇಲೆ ಹೊಡೆದುಕೊಳ್ಳುತ್ತ ರಭಸದಿಂದ ಹರಿದಾಡತೊಡಗಿದಳು. ಲಗಮವ್ವನ ಭಾವುಕ ಕಣ್ಣುಗಳಂತೂ ತಾಯಿಯ ಪೂರ್ವೀ ಅವತಾರವನ್ನೇ ಕಂಡವು. ಬಿಟ್ಟಿದ್ದರೇನೇನು ಆಗಲಿತ್ತೋ ಕುಸ್ತಿ ಹುಡುಗರು ಕೆಂಡದ ಕೊಂಡದಲ್ಲೇ ಧುಮುಕಿ ತಾಯಿಗೆ ತೆಕ್ಕೆ ಹಾದು ಬಸವರಾಜನನ್ನು ಬಿಡಿಸಿದರು. ಬಿಟ್ಟಿದ್ದೇ ತಡ ಬಸವರಾಜು ಕೊಂಡದಿಂದ ಜಿಗಿದುಹೋಗಿ ಅಲ್ಲೇ ಕುಸಿದು ಬಿದ್ದ. ಮುಡಿಪು ಕಟ್ಟಿದ್ದ ಭಕ್ತರು ಅವಸರವಸರವಾಗಿ ಕೊಂಡದಲ್ಲಿ ಉಪ್ಪು ಸುರಿದರು. ಕೂಡಲೇ ತಾಯಿ ಓಡಿಹೋಗಿ ಮುಳ್ಳಾವಿಗೆಯ ಮೇಲೆ ಹತ್ತಿನಿಂತಳು;

ಗೌಡ ಓಡಿಬಂದು ಕಾಲುಹಿಡಿದ. ದತ್ತಪ್ಪ ಅವನ ಹಿಂದೆ ಕೂತ. ತಾಯಿಯ ಕೈಗೆ ಆಶೀರ್ವಾದದ ಕಾಯಿ ಕೊಟ್ಟರು. ಕೂಡಿದವರ ಕಿವಿ ಬಿರಿಯುವ ಹಾಗೆ ತಾಯಿ ಕಿಟಾರನೆ ಕಿರುಚಿದಳು. ಎಲ್ಲರೂ ಸ್ತಬ್ಧರಾದರು. ತಾಯಿ ಬಿಕ್ಕುತ್ತಿದ್ದಳು. ಗಂಟಲಲ್ಲಿ ಸಿಕ್ಕ ನುಡಿ ಹೊರಗೆ ಬರಲಾರದಾಗಿತ್ತು. ಅಪ್ರಿಯವಾದದ್ದನ್ನು ಹೇಳಲಿರುವಂತೆ, ಹೇಗೆ ಹೇಳಲೆಂಬಂತೆ, ಹೇಗೆ ಹೇಳದೇ ಇರಲೆಂಬಂತೆ ತಾಯಿ ಸಂಕಟಪಡುತ್ತಿದ್ದಳು. ಕೊನೆಗೆ ನಿರ್ಧರಿಸಿದಂತೆ –

“ಗೌಡೌs”

ಎಂದಳು. ಈಗ ಬಿಕ್ಕಲಿಲ್ಲ. ಸ್ವಲ್ಪ ಹೊತ್ತು ತಡೆದು ಕಾರಣಿಕ ಮುಂದುವರಿಸಿದಳು. “ಗೌಡೌ, ಚಿನ್ನದ ಕೂಸನ್ನ ಕಸಕೊಂಡು ಹೋದಾರು ಹುಷಾರಲೇss”

– ಎನ್ನುತ್ತ ತೆಂಗಿನಕಾಯಿ ಬಿಟ್ಟಳು. ಸುದೈವದಿಂದ ಕೆಳಗಡೆ ಬೀಳಲಿಲ್ಲ. ದತ್ತಪ್ಪ ಅದಕ್ಕಾಗೇ ಸಿದ್ಧನಾಗಿದ್ದವನು ಹಿಡಿದುಕೊಂಡ. ತಾಯಿ ಗರ್ಭಗುಡಿ ಹೊಕ್ಕಳು. ಕಾರಣಿಕದಿಂದ ಯಾರಿಗೂ ಸಂತೋಷವಾಗಲಿಲ್ಲ. ಜನ ಈ ದಿನ ಹೊಯ್ಕಿನ ಸರಮಾಲೆಯನ್ನೇ  ಕಂಡಿದ್ದರು. ತಾಯಿ ಪೌಳಿ ಬಾಗಿಲಿಗೆ ನಿಂತದ್ದೊಂದು, ಪ್ರದಕ್ಷಿಣೆ ಹಾಕದೆ ಕೊಂಡ ಹಾಯ್ದದ್ದಿನ್ನೋಂದು, ಊರಿಗೇನೂ ಸಂಬಂಧವಿಲ್ಲದ ಬಸವರಾಜೂನನ್ನು ಎಳೆದಾಡಿದ್ದಿನ್ನೊಂದು…. ಬಸವರಾಜು ಏನೋ ತಪ್ಪು ಮಾಡಿರಬೇಕೆಂದು ಕೆಲವರಂದರು. ದೇವೀ ನಿಂದೆ ಮಾಡಿರಬೇಕೆಂದು ಮತ್ತೆ ಕೆಲವರು. ಶಹರದ ಹುಡುಗ, ನಮಬಿಕೆ ಕಡಮೆ, ಅದಕ್ಕೇ ಹೀಗಾಯಿತೆಂದು ಇನ್ನು ಕೆಲವರು ಎಷ್ಟೆಲ್ಲ ಹೇಳಿಕೊಂಡರೂ ಯಾರಿಗೂ ಸಮಾಧಾನವಾಗಲಿಲ್ಲ.

ಬಸವರಾಜನಿಗೆ ಇನ್ನೂ ಜೀವದಲ್ಲಿ ಜೀವ ಇರಲಿಲ್ಲ. ಮೊದಲೇ ಇದು ಗೊತ್ತಾಗಿದ್ದರೆ ಮನಸ್ಸನ್ನು ಆ ರೀತಿ ಅಣಿಗೊಳಿಸಬಹುದಾಗಿತ್ತು. ಅಥವಾ ಬಾರದೇ ಇರಬಹುದಿತ್ತು. ದೇವಿಯ ಬಗ್ಗೆ ಭಕ್ತಿಯಿರಲಿಲ್ಲ, ನಿಜ. ಇಷ್ಟೆಲ್ಲ ರಾದ್ಧಾಂತಕ್ಕೆ ಅದು ಹೊಸದಾಗಿ ಹುಟ್ಟುವುದೂ ಅಸಂಭವವೇ. ಉಳಿದೆಲ್ಲರ ಮನಸ್ಸು ಒಂದನ್ನು ಚಿಂತಿಸಿದರೆ ಈತ ಬೇರೆ ರೀತಿ ಯೋಚಿಸುತ್ತ ಗುಂಪಿನಿಂದ ಒಡೆದು ಎರಡನೆಯವನಾಗಿದ್ದ. ಇದು ನಿಜ, ಇಂಥ ಶಿಕ್ಷೆ, ಈ ಅವಮಾನವನ್ನಾತ ನರೀಕ್ಷಿಸಿರಲಿಲ್ಲ. ತಾ ಮಾಡಿದ ಯಾವುದೋ ಅಕರ್ಮಕ್ಕೆ ಪಶ್ಚಾತ್ತಾಪ ಪಡುವಷ್ಟು ಸಂಸ್ಕಾರವೂ ಅವನಲ್ಲಿರಲಿಲ್ಲ. ಏನೋ ಮೋಜು ನೋಡಲು ಬಂದಿದ್ದ. ಖುಷಿಯಾಗಿ ತಂಪು ಕನ್ನಡಕ ಹಾಕಿ ಗುಂಪಿನಲ್ಲಿ ದುರ್ಗಿಯನ್ನು ಹುಡುಕುತ್ತ, ನಗಾಡುತ್ತ ನಿಂತಿದ್ದ. ನಿರಾಯುಧನ ಮೇಲೆ ಏಕದಂ ಶತ್ರು ಬಿದ್ದಂತೆ ದೇವರೇಸಿ ಎಳೆದೊಯ್ದ. ಮುಂದೆ ಬಿಡಿಸುವ ತನಕ ಏನಾಯಿತೋ, ಏನಿಲ್ಲವೋ ಒಂದೂ ಗೊತ್ತಾಗಲಿಲ್ಲ. ಅರಿವು ಬಂದದ್ದು  ದೇವರೇಸಿ ಬಿಟ್ಟಮೇಲೆಯೇ. ಬಿಟ್ಟಾಗ ಕೈಕಾಲು ನಾಲಗೆಯಲ್ಲಿ ಶಕ್ತಿಯಿರಲಿಲ್ಲ. ನಿಂತಲ್ಲೇ ಕುಸಿದಿದ್ದ. ತಾಯಿಯ ಕಾರಣೀಕ ಕೇಳುವುದನ್ನು ಬಿಟ್ಟು ಯಾರೂ, ಗುಡಸೀಕರನೂ ಇವನನ್ನು ಉಪಚರಿಸುವ ಗೋಜಿಗೆ ಹೋಗಲಿಲ್ಲ.

ಮುಂಗಾರಿ ಬೆಳೆ ಕುಯ್ಯುವುದಕ್ಕೆ ನಾಳೆಯಿಂದ ಸುರುವಾದ್ದರಿಂದ ಈ ದಿನ ಭಯಂಕರವೆನಿಸುವ ಘಟನೆ ಜರುಗಿಬಿಟ್ಟಿತ್ತು. ನಿಶ್ಚಿಂತರಾದ ಜನಗಳ ಮನಸ್ಸು ಈಗ ನಿಂತಲ್ಲಿ ನಿಲ್ಲದೆ ಚಂಚಲವಾಗಿತ್ತು. ಅಲ್ಲಲ್ಲಿ ಗುಂಪುಗೂಡಿ ಇದನ್ನು ಮಾತಾಡಿಕೊಂಡರು. ಯಾರು, ಎಂಥ ಮುಗ್ಧ, ಮೂರ್ಖ ವಿವರಣೆ ಕೊಟ್ಟರೂ ಜನ ಆಸಕ್ತಿಯಿಂದ ಕೇಳುತ್ತಿದ್ದರು. ಕಾರಣಿಕದ ಅರ್ಥ ಸರಿಯಾಗಿ ತಿಳಿದಿರಲಿಲ್ಲ ಬೇರೆ. ಚಿನ್ನದ ಕೂಸು ಅಂದರೇನು? ಕಸಿದೊಯ್ಯವವರು ಯಾರು? ಯಾರಿಗೂ ಬಗೆಹರಿಯಲಿಲ್ಲ. ಗೌಡನೋ, ದತ್ತಪ್ಪನೋ, ಲಗಮವ್ವನೋ ಹೇಳಬೇಕು. ಅವರಿನ್ನೂ ಬಾಯಿ ಬಿಟ್ಟಿರಲಿಲ್ಲ. ಹಿರಿಯರು ಹಿಂದಿನ ಹಬ್ಬಗಳನ್ನು ಸ್ಮರಿಸಿ ಹೀಗೆಂದೂ ಆಗಿರಲಿಲ್ಲವೆಂದು. ಲಗಮವ್ವನ ಹಾಡುಗಳಿಗೂ ಇಂದಿನ ಸಂಗತಿ ಹೊರತಾಗಿತ್ತು.

ತಾಯಿಯ ಕೈಮುರಿದ ಸುದ್ದಿ ಆಗಲೇ ಹಬ್ಬಿತ್ತು. ನಿಂಗೂ ನಿನ್ನೆ ರಾತ್ರಿ ಹೆಣ್ಣು ದೆವ್ವಿನ ನರಳುವ ದನಿ ಕೇಳಿದ್ದನಲ್ಲ. ಅದೂ ಸುದ್ದಿಯಲ್ಲಿತ್ತು. ಹೆಮಗಸರಂತೂ ಗುಂಪುಗೂಡಿ ಈ ವರ್ಷ ಸತ್ತ ಹೆಂಗಸರನ್ನೆಲ್ಲಾ ಸ್ಮರಿಸಿ ಅವಳು ದೆವ್ವವಾಗಿರಬಹುದೇ? ಇವಳಾಗಿರಬಹುದೆ? ಬಸ್ವಿಗೆ ಮಕ್ಕಳ ಮಾಯೆ, ಚೆಲುವಿಗೆ ಗಂಡನ ಪ್ರೀತಿ ಇತ್ಯಾದಿ ಊಹಿಸುತ್ತಿದ್ದರು. ಯಾಕೆಂದರೆ ಈ ಹಳ್ಳಿಯವರ ನಂಬಿಕೆಯ ಪ್ರಕಾರ ಸಾವಿನಲ್ಲಿ ಇರೋದು ಎರಡೇ ರೀತಿ. ಒಂದು ತೃಪ್ತಿಯಿಂದ ಸಾಯೋದು. ಇನ್ನೊಂದು ಅತೃಪ್ತಿಯಿಂದ ಸಾಯೋದು. ಹಾಗೆ ಸತ್ತಮೇಲೆ ಕೂಡ ಸತ್ತವರು ಹೋಗಿ ಸೇರುವುದು ಸ್ವರ್ಗವೋ, ವೈಕುಂಠವೋ, ಕೈಲಾಸದಂಥ ಅದ್ಧೂರಿಯ ಸ್ಥಳಗಳಲ್ಲ. ತೃಪ್ತಿಯಿಂದ ಸತ್ತವರು ಜೇನುಹುಳುಗಳಾಗಿ ತಾಯಿಯ ಕೈಂಕರ್ಯಕ್ಕೆ ನಿಲ್ಲುತ್ತಾರೆ. ಅತೃಪ್ತರು ಭೂತಗಣಗಳಾಗಿ ನರಳುತ್ತಾರೆ. ಬಹುಶಃ ದತ್ತಪ್ಪನೊಬ್ಬನಿಗೆ ಮಾತ್ರ, ಅದೂ ಅವನು ಬ್ರಾಹ್ಮಣನಾದುದರಿಂದ ವೈಕುಂಠದ ಆಸೆ ಇತ್ತೋ ಏನೊ!

ಇನ್ನು ಬಸವರಾಜನ ಬಗ್ಗೆಯೂ ಮಾತು ಬಂತು. ಆತ ತಪ್ಪು ಮಾಡಿರಬಹುದೆಂದು ಯಾರೂ ಕಲ್ಪಿಸಲೇ ಇಲ್ಲ. ಆದರೆ ಅವನಿಗೊಂದು ಮಡಿ ಇಲ್ಲ, ಮೈಲಿಗೆಯಿಲ್ಲ, ದೇವರಂತೂ ಮೊದಲೇ ಇಲ್ಲ. ಹೀಗೆ ಜನ ಯೋಚಿಸುವುದನ್ನು ಬಿಡಲಿಲ್ಲ.

ತಾಯಿಯ ಕರಿಮಾಯೆ ಯಾರ್ಯಾರ ಬುದ್ಧಿಗೆ ಏನೇನು ಮುಸುಕು ಹೊದಿಸಿತ್ತೋ ಅವರಿಗೆ ತಿಳಿದಂತೆ, ತಿಳಿದಷ್ಟು ಕಾರಣೀಕದ ಅರ್ಥ ಹೇಳಿದರು, ಕೇಳಿದರು. ಲಗಮವ್ವ ಸಾಮಾನ್ಯಳಲ್ಲ. ಕರಿಮಾಯಿಯನ್ನು ಪ್ರತ್ಯಕ್ಷ ಕಂಡು ಎದುರು ಕೂತು ಮಾತಾಡಿಸಿದವಳು. ಕರಿಮಾಯಿ ಅವಳ ನಾಲಿಗೆಯಲ್ಲಿ ಕೂತು ತನ್ನ ಚರಿತ್ರೆ ಹೇಳಿಸಿದ್ದಳು! ಅವಳಿಗೂ ಇಂದಿನ ಕಾರಣಿಕದ ಅರ್ಥ ಹೊಳೆಯಲಿಲ್ಲವೆಂದರೆ! ಮಲಗಿದಾಗಲೂ ಅವಳ ಬಲಗೈ ತೋರುಬೆರಳು ಮೂಗಿನ ಮೇಲಿತ್ತು.

ದತ್ತಪ್ಪನ ಪುರಾಣಮತಿಗೆ ಸೋಲಾಯ್ತು. ಅವನ ಚಿಂತಾಮಣಿಯಲ್ಲೂ ಅರ್ಥ ಸಿಗಲಿಲ್ಲ. ಗೌಡನಿಗೆ ಬುದ್ಧಿಯಿತ್ತು. ವಿವೇಕವಿತ್ತು, ಎಲ್ಲಕ್ಕಿಂತ ಹೆಚ್ಚಾಗಿ ಅನುಭವವಿತ್ತು. ಈ ಯಾವುದರಿಂದಲೂ ಕಾರಣಿಕದ ಸಮೀಪ ಸುಳಿಯಲಾಗಲಿಲ್ಲ. ಆದರೆ ಇಷ್ಟಂತೂ ಖಾತ್ರಿಯಾಗಿತ್ತು. ದೇವಿಯ ಕೈ ಮುರಿದಿತ್ತು. ಕಾರಣಿಕ ಹೀಗಾಗಿತ್ತು. ಆದ್ದರಿಂದ ಊರಿಗೇನೋ ಅನಿಷ್ಟವಿದೆ. ಆದರೆ ಊರ ಗೌಡನಾಗಿ ದೇವಿಯ ಕೈ ಮುರಿದ ಕಾರಣ ಕಂಡುಹಿಡಿಯಲೇ ಬೇಕಾಗಿತ್ತು. ಬಹುಶಃ ಆಗ ಕಾರಣಿಕದ ಅರ್ಥ ತಿಳಿಯಬಹುದು.

ಇದ್ದುದರಲ್ಲೇ ಮನಸ್ಸು ಹಗುರಾದವಳು ದುರ್ಗಿ. ತಾಯಿ ಗುಡಿ ಹೋಗುವಾಗ ಅವಳು ಅಲ್ಲಿರಲಿಲ್ಲ. ಮೈಲಿಗೆ ಮಾಡಿದ ಭಯ ಇತ್ತು. ತಾಯಿ ತನ್ನನ್ನು ಕೆಂಡದಲ್ಲಿ ಹಾಯಿಸುವುದು ಖಂಡಿತ ಎಂದುಕೊಂಡಿದ್ದಳು.

ಅದಕ್ಕೆ ಅವಳು ಬೇಕೆಂದೇ ತಪ್ಪಿಸಿದ್ದಳು. ಆದರೆ ಸರಪಂಚನನ್ನು ಕೆಂಡ ಹಾಯಿಸುವುದೂ ಅಷ್ಟೇ ಖಂಡಿತವೆಂದುಕೊಂಡಿದ್ದಳು. ತಮ್ಮ ಗುಮುರಿಗೆಯಲ್ಲೇ ತಾಯಿಯ ಕೈ ಮುರಿದಿದ್ದು. ಖಾತ್ರಿಯಾಗಿತ್ತು. ಆದರೆ ದೇವೀ ಹಿಡಿದೆಳೆದದ್ದು ಬಸವರಾಜನನ್ನು! ಇದಕ್ಕೇನೆನ್ನಬೇಕು? ಹೊಯ್ಕನ್ನಲೇ, ತಾಯಿಯ ದಯೆ ಎನ್ನಲೇ, ತಾಯಿಗೂ ತಿಳಿಯಲಿಲ್ಲ ಎನ್ನಲೇ? ದಿನಾ ಎಷ್ಟೊಂದು ಒಟಗುಡುವ ಹುಡುಗಿ ಬಾಯಿಬಿಟ್ಟರೆ ಎಲ್ಲಿ ತಾ ಮಾಡಿದ ತಪ್ಪು ಹೊರಹೊಮ್ಮುವುದೋ ಎಂದು ಬಾಯಿ ಹೊಲಿದುಕೊಂಡಿದ್ದಳು.

ಸುಂದರಿಯ ಗುಡಿಸಲಲ್ಲಿ ಅಚಾನಕ ಮೀಟಿಂಗ್ ಸೇರಿತ್ತು. ಬಸವರಾಜನಿಗೆ ಅವಮಾನವಾದುದರಿಂದ ಮಾತಾಡಿಸಲಕ್ಕೆ ಬಂದವರಂತೆ ಚತುಷ್ಟಯರು ಸೇರಿದ್ದರು. ಅವನನ್ನು ದೇವಿ ಯಾಕೆ ಎಳೆದೆಂಬುದರರ ಬಗೆಗೆ ಗುಡಸೀಕರನಿಗೇನೋ ಸ್ಪಷ್ಟವಾಗಿತ್ತು ಬೆಳಗಾವಿಯವ, ನಂಬಿಕೆಯಿಲ್ಲದವ, ಈ ಊರಲ್ಲಿನ್ನೂ ಹೊಂದಿಕೊಳ್ಳದವ ಇತ್ಯಾದಿ. ಅದನ್ನೇ ಆತ ಹೇಳುತ್ತಿದ್ದ. ಚತುಷ್ಟಯರಿಗೆ ಕೆಡುಕೆನಿಸಲಿಲ್ಲ. ಖುಶಿಯೂ ಆಗಿರಲಿಲ್ಲ. ಲೋಕಾರೂಢಿ ಆಡಿದರು. ಎಲ್ಲರೂ ಮಾತಾಡುವುದಾದ ಮೇಲೆ ಬಸವರಾಜು ಮೆಲ್ಲನೆ ಮಾತು ಬಿಚ್ಚಿದ: ‘ಮುಂದಿನ ಎಲೆಕ್ಷನ್‌ನಲ್ಲಿ ಸರಪಂಚನಿಗೆ ತನ್ನ ಸಹಾಯ ಬೇಕೇ ಬೇಕು. ಅದಾಗಲೇ ಗೌಡನಿಗೆ ಗೊತ್ತಾಗಿದೆ. ಈಗಿನಿಂದಲೇ ಬಮದೋಬಸ್ತ್ ಮಾಡಿದರೆ ಮುಂದೆ ನಾನೇನು ತಂತ್ರ ಮಾಡಿದರೂ ಜನರ ಮನಸ್ಸಿಗೆ ನಾಟಿರಬಾರದು. ಅದಕ್ಕೇ ದೇವಿಯಿಂದ ಈ ರೀತಿ ಎಳೆಸಿದ್ದು, ಇದಂತೂ ಸ್ಪಷ್ಟವಾಗಿ ಹೇಳಿ ಮಾಡಿಸಿದ ಕೆಲಸ’!

ಎಲ್ಲರಿಗೂ ಈ ತರ್ಕ ಕೂಡಲೇ ಖಾತ್ರಿಯಾಯ್ತು. ಗುಡಸೀಕರನಿಗೆ ಇನ್ನೂ ಹೆಚ್ಚು. ತಮಗೆ ಗೊತ್ತಾಗದಂತೆ ಎಂಥಾ ‘ಟ್ರಿಕ್ಕು’ ಮಾಡಿದ್ದಾರಲ್ಲಾ! ಒಳಗೆ ಸುಂದರಿ ಖಿಖ್ಖ್‌ಎಂದು ನಕ್ಕಳು.

ಇವರ ಮಾತುಕತೆಯಲ್ಲಿ ಸುಂದರಿಗೆ ಆಸಕ್ತಿಯಿರಲಿಲ್ಲ. ಒಳಗೆ ಹಾಸಿಗೆಯ ಮೇಲೆ ಬಿದ್ದುಕೊಂಡು ಧೇನಿಸುತ್ತಿದ್ದಳು. ದೇವರೇಸಿ ಎಲ್ಲರನ್ನು ಬಿಟ್ಟು ಬಸವರಾಜೂನನ್ನು ಹಿಡಿದೆಳೆದದ್ದು ಅವಳಿಗು ಆಶ್ಚರ್ಯವಾಗಿತ್ತು. ಅವನ ಹಿಂದು ಮುಂದನ್ನು ಬಲ್ಲವಳು, ನಿಂಗೂನೊಂದಿಗೆ ಆತ ದುರ್ಗಿಯ ವಿಷಯ ಪ್ರಸ್ತಾಪಿಸಿದ್ದನ್ನು ಕದ್ದು ಕೇಳಿದ್ದಳು. ನಿನ್ನೆ ರಾತ್ರಿಯಷ್ಟೇ ಅವನ ಚಡ್ಡಿಗೆ ಹಸಿ ರಕ್ತ ಅಂಟಿದ್ದನ್ನು ನೋಡಿದ್ದಳು. ಜನ ಮೈಲಿಗೆಯ ಮಾತಾಡಿದ್ದನ್ನು, ದೇವಿಯ ಕೈ ಮುರಿದದ್ದನ್ನೂ ಕೇಳಿದ್ದಳು. ಆದ್ದರಿಂದ ಅವನಿಗಾದದ್ದು ಸರಿಯಾದ ಶಿಕ್ಷೆಯೇ. ಆದರೆ ಕಳ್ಳನನ್ನು ಊರಹೊರಗಿನ ದೇವಿ ಪತ್ತೆ ಮಾಡಿದ್ದು ಹೇಗೆ? ಹೀಗೆ ಚಿಂತಿಸುತ್ತಿದ್ದಾಗ ಹೊರಗಡೆ ಬಸವರಾಜು ಎಲೆಕ್ಷನ್‌ಗಾಗಿ ಗೌಡನೇ ಹೀಗೆಲ್ಲ ಮಾಡಿಸಿದ್ದನೆಂದು ಹೇಳುತ್ತಿದ್ದ. ಕೇಳಿ ನಗು ತಡೆಯಲಾಗಲಿಲ್ಲ. ನಗುತ್ತಲೇ ಎದ್ದು ಹೊರಗೆ ಬಂದಳು. ಯಾರನ್ನೂ ಮಾತಾಡಿಸದೆ ಮುಂದಿದ್ದ ಸೆರೆಯ ಬಾಟ್ಲಿ ತಗೊಂಡು ಮೊದಲಿನ ನಗೆಯಲ್ಲಿ ಇನ್ನೊಂದು ಲಯ ಬೆರೆಸಿ ಒಳಕ್ಕೆ ಸುಳಿದಳು. ಬಸವರಾಜು ಗೆಲುವಿನಿಂದ ಸಿಗರೇಟು ಹೊತ್ತಿಸಿದ.