ನಿಜ ಹೇಳಬೇಕೆಂದರೆ ಕೊಳವಿಯ ಮುದುಕಪ್ಪ ಗೌಡನನ್ನು ಇತ್ತೀಚೆಗೆ ಯಾರೂ ನೋಡಿರಲಿಲ್ಲ. ಗೌಡನೊಂದಿಗೆ ಅವನ ನಂಟುತನವಿದ್ದುದೇನೋ ಜನರಿಗೆ ಗೊತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಮುದುಕಪ್ಪ ಗೌಡ ಒಮ್ಮೆ ಕೂಡ ಶಿವಾಪುರದ ಕಡೆ ಸುಳಿದಿರಲಿಲ್ಲ; ಆತ ಬಂದು ಗೌಪ್ಯವಾಗಿಯೇ ಗೌಡನ ಮನೆಯಲ್ಲಿದ್ದದ್ದು ಗೌಡ, ದತ್ತಪ್ಪ, ಶಿವಸಾನಿ, ಲಗಮವ್ವ ಈ ನಾಲ್ವರಿಗಲ್ಲದೆ ಬೇರೆ ಯಾರಿಗೂ ಗೊತ್ತಿರಲಿಲ್ಲ. ಆದರೆ ಸುಂದರಿ ಪತ್ತೆಹಚ್ಚಿದ್ದು ಇವರಿಗೆ ಗೊತ್ತಿರಲಿಲ್ಲ. ಇದು ಗುಡಸೀಕರನ ಸಂಚೆಂದು ತಿಳಿದಾಗಂತೂ ಗೌಡ, ದತ್ತಪ್ಪ ಹೊತ್ತಿಕೊಂಡುರಿದರು. ಶಿವನಿಂಗನನ್ನು ಮೊನ್ನೆ ತಡೆಹಿಡಿದದ್ದು ತಪ್ಪಾಯಿತೆಂದರು. ಇದೊಂದು ಸಲ ಪಾರಾದರೆ ನೆನಪಿಟ್ಟುಕೊಳ್ಳುವ ಹಾಗೆ ಬುದ್ಧಿ ಕಲಿಸಬೇಕೆಂದರು. ಆ ದಿನ ತಾಯಿ ದೇವರೇಸಿಯ ಮೈತುಂಬಿ ಬಿಕ್ಕಳಿಸಿದಳಂತೆ. ಹೋಗಿ ಕಾಲು ಹಿಡಿಯಲಿಕ್ಕೂ ಸಾಧ್ಯವಾಗದೇ ಹೋಯ್ತು. ಪೋಲೀಸರು ಗೌಡ, ದತ್ತಪ್ಪ ಇಬ್ಬರ ಮೇಲೂ ಕಾವಲಿದ್ದರು. ತಾಯಿ ಏನು ಹೇಳಲಿದ್ದಳೋ ಅವಳ ವಾಕ್ಯಕ್ಕೂ ಎರವಾದರು.

ಇತ್ತಲಾಗಿ ಗುಡಸೀಕರನ ಸಂತೋಷ ಬಹಳ ಹೊತ್ತು ಉಳಿಯಲಿಲ್ಲ. ಸೇಡಿನ ಉದ್ರೇಕದಲ್ಲಿ ಬಸವರಾಜನಿಗೆ ಹಗ್ಗಾ ಕೊಟ್ಟು ಕೈಕಟ್ಟಿಸಿಕೊಂಡಂತಾಗಿತ್ತು. ಇಲ್ಲದಿದ್ದರೆ ಗಾಂಧೀಜಿಯ ಪರಮ ಭಕ್ತನಾಗಿ, ಸ್ವಾತಂತ್ರ್ಯ ಹೋರಾಟಗಾರರನ್ನೇ ಕೈಯಾರೆ ಕೊಡಲೊಪ್ಪಿ ದೇಶದ್ರೋಹ ಮಾಡುವುದೆಂದರೇನು? ಬೆಳಗಾವಿಯಲ್ಲಿದ್ದಾಗ ಚಳುವಳಿ ಸೇರಬೇಕೆಂದದ್ದು ಸುಳ್ಳೆ? ಗಾಂಧೀಜಿಯ ಸಲಹೆಯಂತೆ ಹಳ್ಳಿಗೆ ಬಂದದ್ದು ಸುಳ್ಳೆ ಸುಳ್ಳೇನು? ಶಿವಾಪುರದಲ್ಲಿ ಚಳುವಳಿಯ ಹುಡುಗರಿದ್ದಿದ್ದರೆ ಇವನೇ ಮುಂದಾಳಾಗುತ್ತಿದ್ದ. ತಾನು ಹಲ್ಕಟ್ಟ ದಂಧೆ ಮಾಡಿದೆನೆಂದು ತಿಳಿದದ್ದು ಫೋಜದಾರ ಊಟಕ್ಕೆ ಬಂದಾಗ.

ಊಟಕ್ಕೆ ಕೂತಿದ್ದರಲ್ಲ, ಓಡಾಡಿ ನಿಡುತ್ತಿದ್ದ ಗಿರಿಜಾಳನ್ನು ತೋರಿಸಿ ಪೋಜದಾರ ಇವನ ಕಂಕುಳಕ್ಕೆ ಕೈಹಾಕಿ ಕಣ್ಣು ಮಿಟುಕಿಸಿ “ಗೊಂಬ್ಯಾಗ್ಯಾಳಲ್ಲಾ!”ಎಂದ. ಇವನ ಪಿತ್ಥ ನೆತ್ತಿಗೇರಿತು. ತಡಕೊಂಡು “ಆಕಿ ನನ್ನ ತಂಗಿ” ಎಂದ. ಪೋಜುದಾರ ನಂಬಲಿಲ್ಲ. ಗುಡಸೀಕರ ತನ್ನ ತಂಗಿಯನ್ನು ಸರಿಯಾಗಿ ಗಮನಿಸಿದ್ದು ಈಗಲೇ ಎಂದು ತೋರುತ್ತದೆ. ಎದೆ ಮೀರಿ ಬೆಳೆದಿದ್ದಳು. ಕುಬಸ ತೊಟ್ಟು ಒಳಗೆ ಬಾಡಿ ಹಾಕಿದ್ದಳು. ಜೋಡು ಹೆಳಲು ಹಾಕಿ ಟೇಪು ಕಟ್ಟಿದ್ದಳು. ನೋಡಿದವರು ಇವಳು ಹಳ್ಳೀಯವಳೆಂದು ಹೇಳುವುದು ಸಾಧ್ಯವೇ ಇರಲಿಲ್ಲ. ಅವಳ ಮೇಲೂ ಸಿಟ್ಟುಬಂತು. ಪೋಜದಾರ ಕೆಂಪು ಕಣ್ಣರಳಿಸಿ ಬೆವರು ಸುರಿಸುವ ಕರೀ ಕೆನ್ನೆಗಳನ್ನು ಕುಣಿಸುತ್ತ ಅನ್ನದ ಅಗಳಗಂಟಿದ ಬಿಳೀ ಹಲ್ಲುಗಳಲ್ಲಿ ನಗುತ್ತ “ಸುಳ್ಳ ಯಾಕ ಹೇಳ್ತಿಯೋ? ಇಂಥಾ ಕೇಸದಾಗ ನಾ ಮುಳುಗಿ ಮುಳುಗಿ ಎದ್ದಾಂವ” ಅಂದ. ಈಗ ಗುಡಸೀಕರನ ಮುಖ ನೋಡಬೇಕಿತ್ತು. ಸಿಟ್ಟು ತಹಬಂದಿಗೆ ತರಲಾರದೆ ತಾಮ್ರದ ತಪ್ಪಲೆಯಂತೆ ಮುಖಮಾಡಿ “ಸಾಹೇಬರ ಒಬ್ಬರ ಮನೀಗಿ ಬಂದಾಗ ಇಂಥಾ ನಡತಿ ಚಿಲೋ ಅಲ್ಲರಿ” ಅಂದ.

ಫೋಜುದಾರನಿಗೂ ಸಿಟ್ಟುಬಂತು. “ನನಗೆ ನಡತಿ ಕಲಸ್ತೀಯೇನೋ? ಬೆಳಗಾವಿ ಚಿಮಣಾನ ನೀ ತಂದಿಟ್ಟುಕೊಂಡಿದ್ದ ನಂಗೊತ್ತಿಲ್ಲಂದಿ?”

ಊಟವಾದ ಮೇಲೆ ಮನಸ್ಸಿಲ್ಲದಿದ್ದರೂ ಪೋಜದಾರನ ಮಲಗುವ ವ್ಯವಸ್ಥೆಯನ್ನು ಮಹಡಿಯ ಮೇಲೆ ಮಾಡಬೇಕಾಯಿತು. ಗುಡಸೀಕರನ ತಡೆದಿಟ್ಟ ಸಿಟ್ಟು ಬಸವರಾಜನ ಮೇಲೆ ಹರಿಹಾಯಿತು. ನಿನ್ನ ಮಾತು ಕೇಳಿ ಇಡೀ ಊರಿಗೆ ನಿವಾಳಿಯಾಗುವ ಪ್ರಸಂಗ ಬಂತು. ಹೆರವರ್ಯಾರೋ, ತನ್ನವರ್ಯಾರೋ ಹೋ ಎಂದು ಹಾರಾಡಿದ. ಮಾತಿಗೆ ಅವಕಾಶ ಕೊಟ್ಟು ಆಮೇಲೆ ಬಸವರಾಜು,  ತನ್ನ ಸಹಜ ಬುದ್ಧಿವಂತಿಕೆ ಬಿಚ್ಚಿದ. ಫೋಜದಾರ ನೀಚನೇ, ಇನ್ನೇನು ಸಜ್ಜನನಾಗಿರಬೇಕೆ? ನಮ್ಮ ಕೆಲಸ ಮುಖ್ಯ. ಮುದುಕಪ್ಪನ ಜವಾಬ್ದಾರಿ ನನಗಿರಲಿ. ಈಗ ಇದನ್ನೋದು ತಿಳೀಯುತ್ತದೆ; ನಾ ಯಾರೆಂದು ಎನ್ನುತ್ತ ಕಿಸೆಯಲ್ಲಿಯ ಒಂದು ಕಾಗದ ತೆಗೆದ.

ಅದು ಮೆಹರ್ಬಾನ ಪೋಜದಾರ ಸಾಹೇಬರ ಪಾದಾರವಿಂದಕ್ಕೆ ಚಿಮಣಾ ಸುಂದರಬಾಯಿ ಬರೆದ ವಿನಂತಿಯ ಅರ್ಜಿಯಾಗಿತ್ತು. ಗೌಡ, ಗೌಡನ ಮಗ, ಶಿವನಿಂಗ, ಇಬ್ಬರೂ ಸೇರಿ ತನ್ನನ್ನು ಬಲಾತ್ಕರಿಸಿ ಬಸಿರು ಮಾಡಿದ್ದಾರೆಂದೂ, ತನ್ನ ಹಾಗೂ ಗರ್ಭದ ಕೂಸಿನ ಜೀವನೋಪಾಯಕ್ಕೆ ಆಧಾರ ಮಾಡಬೇಕೆಂದೂ ಚಿಮಣಾ ಕೈಮುಗಿದು ಕೋರಿದ್ದಳು. ಕೆಳಗೆ ಸದರಿ ಅರ್ಜಿದಾರಳ ಸಹಿ ಇತ್ತು. ಶಿವನಿಂಗನ ಹೆಸರೂ ಸೇರಿದ್ದಕ್ಕೆ ಗುಡಸೀಕರನ ಸೇಡಿನ ಹೆಡೆಯಾಡಿ ಸೈಯೆನಿಸಿತು. ಬಾಕಿ ತಾನು ನೋಡಿಕೊಳ್ಳುವುದಾಗಿ ಬಸವರಾಜು ಬಲಗೈ ಭಾಷೆಕೊಟ್ಟ.

ಫೋಜುದಾರ ಏಳುವ ಸಮಯಕ್ಕೆ ಸರಿಯಾಗಿ ಬಸವರಾಜು ಹೋದ. ಹತ್ತುಸಲ ಹಲ್ಲು ಗಿಂಜಿ ಅರ್ಜಿಕೊಟ್ಟ. ಮುದುಕಪ್ಪ ಗೌಡ ಸಿಕ್ಕದಿದ್ದ ನಿರಾಸೆಯಲ್ಲಿದ್ದ ಕಟ್ಟಿ ಸಾಹೇಬರ ಕಣ್ಣು ಪಳ ಪಳ ಹೊಳೆದವು. ಹೆಣ್ಣಿನ ಕೇಸುಗಳೆಂದರೆ ಅವರಿಗೆ ಪಂಚಪ್ರಾಣ. ಊಟಕ್ಕೆ ಕೂತಿದ್ದಾಗ ಚಿಮಣಾಳಂಥವರನ್ನು ನೋಡಿದ್ದ ಬೇರೆ. ಅರ್ಜಿಯನ್ನು ಕೆಳಗಿನ ಚಿಮಣಾಳಿಗೆ ಕೇಳಲೆಂಬಂತೆ ಜೋರಿನಿಂದ ಓದಿದ. ಕೆಳಗಡೆ ಕಟ್ಟೆಯ ಮೇಲೆ ನಿಂಗೂ ಕೂತಿದ್ದವನು ಕೇಳಿ ಗೌಡನ ಮನೆಯ ಕಡೆಗೋಡಿದ.

ರಾತ್ರಿ ಖಾವಂದ ಕಟ್ಟಿ ಪೋಜದಾರ ಸಾಹೇಬ ದರ್ಬಾರು ಕರೆದ. ಹಿರಿಯರು ಬಂದರು. ಕೈಯಲ್ಲಿಯ ಕೋಲನ್ನು ಅತ್ತಿತ್ತ ಆಡಿಸುತ್ತ ಪೋಜದಾರ “ಸುಂದರಾ ಬಾಯೀನ ಕರಸು” ಎಂದ. ಗೌಡನಿಗೆ ಸುಂದರಾಬಾಯಿ ಯಾರೆಂದು ತಿಳಿಯಲಿಲ್ಲ. ಊರಿನಲ್ಲಿ ಆ ಹೆಸರಿನವರು ಯಾರೂ ಇದ್ದಂತಿರಲಿಲ್ಲ. ಅನುಮಾನಿಸುತ್ತ “ಯಾವ ಸುಂದರಾಬಾಯಿ?” ಎಂದು ಹೇಳುತ್ತಿರುವಂತೆಯೇ ದತ್ತಪ್ಪ “ಅದ, ಗುಡಿಸ್ಯಾ ತಂದಿಟ್ಟು ಕೊಂಡಾನಲ್ಲ. ಚಿಮಾಣಾ” ಎಂದ. ಅವಳನ್ನು ಕರೆತರಲು ಹಳಬ ಓಡಿದ, ವಿಷಯವೇನೆಂದು ಗೌಡ, ದತ್ತಪ್ಪ ಇಬ್ಬರಿಗೂ ಹೊಳೆಯಿತು. ಸುಂದರಿ ಬಸಿರಾದ್ದನ್ನು ಯಾರೋ ಮೂಕರ್ಜಿ ಮಾಡಿ ತಿಳಿಸಿದ್ದು ಖಾತ್ರಿಯಾಯ್ತು. ಗೌಡನಿಗೆ ಇದ್ದದ್ದೂ ದಿಗಿಲು. ಹಾಗೇನಾದರೂ ಬಂದಿದ್ದರೆ ನಮ್ಮ ನಾವೆ ತೀರಿಸಿಕೊಳ್ಳಬಹುದಾಗಿತ್ತು. ಯಾವ ಚಂಡಾಲರು ಮೂಕರ್ಜಿ ಕೊಟ್ಟಿದ್ದಾರೋ ಎಂದು ಗೌಡ ಚಿಂತಿಸಿದರೆ ದತ್ತಪ್ಪನಿಗೆ ಒಳಗೊಳಗೇ ಖುಷಿಯಾಗಿತ್ತು. ಗುಡಿಸ್ಯಾ ಇದರಿಂದಾದರೂ ಹಣ್ಣಾಗುತ್ತಾನಲ್ಲಾ ಎಂದು. ಅಷ್ಟರಲ್ಲಿ ಗುಡಸೀಕರ ಚತುಷ್ಟಯರೊಂದಿಗೆ ಬಂದ. ಅವನ ನಿರ್ಮಲ ಮುಖನೋಡಿ ದತ್ತಪ್ಪನಿಗಿನ್ನೂ ನಗೆ ಬಂತ. ದೂರದಲ್ಲಿ ಜನ ಗುಂಪಾಗಿ ನಿಂತಿದ್ದರು, “ಸುಂದರಬಾಯಿ ಬರಲಿಲ್ಲೇನು?” ಎಂದು ಪೋಜದಾರ ಗುಡುಗಿದ. ಸುಂದರಿ ಆಗಲೇ ಬಂದಿದ್ದಳು. ಆದರೆ ಯಾರೂ ಗಮನಿಸಿರಲಿಲ್ಲ. ಜನಗಳಲ್ಲಿ ನಿಂತಿದ್ದ ಬಸವರಾಜೂನನ್ನು ಗುಡಸೀಕರ  ಕರೆದು ಚಾವಡಿಯಲ್ಲಿ ಅವನಿಗಿಷ್ಟು ಕೂರಲು ಸ್ಥಳ ಕೊಟ್ಟ. ಸುಂದರಿ ಬಂದುದನ್ನು ತಿಳಿಸದವನೂ ಗುಡಸೀಕರನೇ, “ಶಿವನಿಂಗ ಅಂಬಾಂವೆಲ್ಲಿ?” ಎಂದು ಪೋಜದಾರ ಗುಡುಗಿದ. ಹಳಬ ಮತ್ತೆ ಓಡಿದ. ಶಿವನಿಂಗನಿಗಾಗಿ ಕಾಯದೆ ವಿಚಾರಣೆ ಸುರುವಾಯ್ತು. ಪೋಜುದಾರನ ಮೊದಲನೇ ನುಡಿಗೇ ಎಲ್ಲರಿಗೂ ಆಘಾತವಾಯ್ತು.

“ಏನೋ ಗೌಡಾ, ಊರಿಗಿ ಹಿರ್ಯಾ ಆಗಿ ನೀನs ಇಂತಾ ಹಲಕಟ್ ದಂಧಾ ಮಾಡೋದಾ?”

“ಯಾಕ? ಏನಾತ್ರಿ?”

“ಅರೇದವನ್ಹಾಂಗ ಆಡಬ್ಯಾಡ. ಚಿಮಣಾ ಬಯೀನ ನೀನೂ, ನಿನ್ನ ಮಗ ಕೂಡಿ ಬಸರ ಮಾಡಿದ್ದ ಎಷ್ಟು ದಿನ ಮುಚ್ಚಿಟ್ಟಕೋಬೇಕಂತಿದ್ದಿ?”

ಈ ಮಾತು ಕೇಳಿ ಎಲ್ಲರಿಗೂ ಅಸಮಾಧಾನವಾಯ್ತು. ಕುಸ್ತಿ ಹಡುಗರಾಗಲೇ ಕುದಿಯ ತೊಡಗಿದ್ದರು. ಗೌಡ ಬಾಯಿ ತೆಗೆಯುವುದರೊಳಗೆ ದತ್ತಪ್ಪನೇ ಮಾತಾಡತೊಡಗಿದ.

“ಏನಂಬೋ ಮಾತರಿ ಇದು? ಕರಕೊಂಬಂದಾಂವ ಗುಡಿಸ್ಯಾ. ಗೌಡರಿಗಿ ಆಕೀ ಹೆಸರ ಸೈತ ಗೊತ್ತಿಲ್ಲ. ಬಸರ ಮಾಡೋದಂದರೇನ್ರಿ?”

“ನಡುವ ಬಾಯಿ ಹಾಕಾಕ ನೀ ಯಾರಲೆ?”

ಸಿಟ್ಟು ಎಲ್ಲರ ನೆತ್ತಿಗೇರಿತು. ಪೋಜುದಾರನಿಗೆ ಇನ್ನೂ ಹೆಚ್ಚು. ತನ್ನ ಗಡಸುದನಿಗೆ ಅಧಿಕಾರದ ಮದ ಬೆರೆಸಿ, ಮಾತಿಗೊಮ್ಮೆ ಲೇ ಎನ್ನುತ್ತ ಒದರಾಡತೊಡಗಿದ. “ಗೌಡ ಮಾಡಿಲ್ಲದೇ ಹೋದಲ್ಲಿ ಸ್ವಥಾ ಅರ್ಜಿ ಯಾಕ ಹಾಕಲಿಲ್ಲ?” ಅಂದ. “ಪರವೂರವಳ ಬಗ್ಗೆ ತಾ ಯಾಕೆ ಅರ್ಜಿ ಹಾಕಬೇಕೆಂದು” ಗೌಡ ಕೇಳಿದ. “ಪರವೂರದವಳಾದ ಮಾತ್ರಕ್ಕೆ ಅನ್ಯಾಯ ಆಗಬಹುದೋ” ಎಂದು ಪೋಜದಾರ ಕೇಳಿದ. “ಅದು ಕರೆತಂದವರ ಜವಾಬ್ದಾರಿ” ಎಂದು ಗೌಡ ಹೇಳಿದ. “ಅವಳನ್ನು ಕರೆತಂದವರ್ಯಾರು, ಆಕೆ ಜೊತೆ ವ್ಯವಹಾರ ಇದ್ದವರ್ಯಾರು ಅಂತ ಊರಮತೂರು ಗೊತ್ತಿದ್ದ ವಿಚಾರ. ವಿಚಾರಿಸಬಹುದಲ್ಲ” ಎಂದು ದತ್ತಪ್ಪ ಹೇಳಿದ. ಇಷ್ಟೆಲ್ಲ ಮಾತು ಚಕಮಕಿಯ ಕಿಡಿಯಂತೆ ಹಾರಿ ಹೋಗುತ್ತಿದ್ದರು. ತನ್ನ ಕೈಕೆಳಗಿನ ಗೌಡ ಕುಲಕರ್ಣಿಗಳಿಂದ ಈ ರೀತಿಯ ಅವಧೇಯತೆಯನ್ನು ಪೋಜದಾರ ನಿರೀಕ್ಷಿಸಿರಲಿಲ್ಲ. ಮುಖದ ಮೇಲೆ ಸ್ಪಷ್ಟವಾಗಿ ಮಾತಾಡತೊಡಗಿದ್ದರು. ಪೋಜದಾರನಿಗೆ ತನ್ನ ಮೀಸೆ ಬೋಳಿಸಿ ಕೈಗಿಟ್ಟಷ್ಟು ಅವಮಾನವಾದಂತಾಗಿತ್ತು. ಬುಸುಗುಡಲಾರಂಭಿಸಿದ. “ನೀನೇನಂತಿ?” ಎಂದು ಗುಸೀಕರನತ್ತ ತಿರುಗಿದ. ಗುಡಸೀಕರ ಎದ್ದು ಚಾವಡಿಯ ಮಧ್ಯೆ ಬಂದು,

“ಮೆಹರ್ಬಾನ್ ಪೋಜದಾರ ಸಾಹೇಬರೇ, ಊರ ಹಿರಿಯರೆ, ಅಣ್ಣ ತಮ್ಮಂದಿರೆ, ಅಕ್ಕ ತಂಗಿಯರೆ…”

ಎಂದು ಭಾಷಣ ಸುರುಮಾಡಿದ. ಪೋಜದಾರನಿಗೆ ವಿಶ್ರಾಂತಿ ಬೇಕಿತ್ತೆಂದು ತೋರುತ್ತದೆ. ಅವನನ್ನು ತಡೆಯಲಿಲ್ಲ. ಇನ್ನು ಗುಡಸೀಕರನನ್ನು ತಡೆಯುವವರ್ಯಾರು? ಅದೇ ಗೊತ್ತಲ್ಲ. “ಇಂಡಿಯಾ ದೇಶ ಹಳ್ಳಿಗಳ ದೇಶದಿಂದ ಸುರುವಾಗಿ ಪಂಚಯ್ತಿಯವರೆಗೆ ಬಂದು, ತಾನು ಊರು ಮುಂದೆ ತರೋದಕ್ಕೆ ಪ್ರಯತ್ನಿಸಿದ್ದು, ಹಿರಿಯರು ಅವನ ಕಾಲಹಿಡಿದು ಹಿಂದೆಳೆದದ್ದು, ಪಂಚಾಯ್ತಿ ಹಿಂದಿರುಗಿಸಲೆಂದು ಕೇಳಿದ್ದು, ಎಲೆಕ್ಷನ್ ಆಗಲೆಂದು ತಾ ಹೇಳಿದ್ದು… ಇತ್ಯಾದಿ ಇತ್ಯಾದಿ. ಪೋಜದಾರನ ತಾಳ್ಮೆ ತಪ್ಪಿ “ಲಗು ಮುಗಸಪಾ” ಎಂಬ ಸೂಚನೆ ಬಂತು “ತನ್ನನ್ನು ಎಲೆಕ್ಷನ್ನಿನಲ್ಲಿ ಸೋಲಿಸೋದಕ್ಕೆ ಗೌಡ ಇಂಥ ಅಪವಾದ ತನ್ನ ಮೇಲೆ ಹೊರಿಸುತ್ತಿದ್ದಾನೆ ಎಂದು ಹೇಳಿದ. ಕೂಡಿದವರು ತಂತಮ್ಮಲ್ಲಿ ತಲೆಗೊಂದು ಮಾತಾಡಿಕೊಂಡರು. ಬೇಕಾದರೆ ಪೋಜದಾರನೇ ಇವರನ್ನು ನಿಯಂತ್ರಿಸಲೆಂದು ಗೌಡ ಸುಮ್ಮನಾದ. ದತ್ತಪ್ಪನೂ ಸುಮ್ಮನುಳಿದ. ಅಷ್ಟರಲ್ಲಿ ಕುಡಿದ ಮಂದಿಯೊಳಗಿಂದ ನಿಂಗೂ ಜಿಗಿದು ಬಂದು ಪೋಜುದಾರನ ಎದುರು ನಿಂತ. ಒರಟು ದನಿಯ ಹೆಣ್ಣು ವೇಷದ ಇವನನ್ನು ನೋಡಿ ಆ ಬಿಗಿ ವಾತಾವರಣದಲ್ಲೂ ಪೋಜುದಾರನಿಗೆ ಮೋಜೆನಿಸಿತು. ಆವೇಶ ಬಂದವನಂತೆ ಎತ್ತರದ ದನಿಯಲ್ಲಿ” ಅಲ್ಲಪಾ ಸರಪಂಚಾ, ನೀನs ಆಕಿನ್ನ ತಂದ ಇಟ್ಟಕೊಂಡಿದೀ. ದಿನಾ ಆಕೀ ಸೀರೀ ಸೆರಗಿನ್ಯಗ ಉಳ್ಯಾಡತಿ, ಗೌಡ್ರ ಬಸರ ಮಾಡ್ಯಾರಂತ, ಹೇಳಾಕೆ ಬಂದಿ. ಮ್ಯಾಲ ಶಿವನಿಂಗನ ಹೆಸರೂ ಸೇರಿಸಿದಿ. ಇಳೀಬಾರದ? ಯಾರಾದರೂ ನಂಬೂ ಮಾತs ಇದು? ನೋಡೋಣು, ಈ ಮಂದ್ಯಾಗ ಒಬ್ಬರ ಯಾಯಾಗಾದರೂ ಈ ಮತ ಹೋಂಡಸು, ಗಂಡಸಂತೀನಿ.”

ಅಂದ. ಇಂಥ ಮಾತನ್ನು ಗುಡಸೀಕರ ಮೊದಲೇ ನಿರೀಕ್ಷಿಸಿದ್ದನೆಂದು ತೋರುತ್ತದೆ. “ಯಾರ  ಬಾಯಾಗ ಯಾಕ ಹೊಂಡಸಬೇಕೊ? ಆಕೀ ಗೌಡನ ತೊಡೀಮ್ಯಾಲ ತಲೀ ಇಟ್ಟ ಮಲಗದ್ದ ಖುದ್ದ ನಾನs ನೋಡೀನಿ. ಬೇಕಂದರ ಕೇಳ ಬಸವರಾಜೂನ.”

ಓತಿಕ್ಯಾತಿಗೊಂದು ಬೇಲೀ ಸಾಕ್ಷಿ. ಈಗ ಗೌಡ ಬಾಯಿಬಿಡಲೇ ಬೇಕಾಯಿತು. ಎದ್ದುನಿಂತು ಪೋಜುದಾರನ ಕಡೆಗೊಮ್ಮೆ, ಜನರ ಕಡೆಗೊಮ್ಮೆ ಮುಖಮಾಡಿ, ಆಗಾಗ ಎರಡೂ ಕೈ ಜೋಡಿಸುತ್ತ, ಅಂದಿನ ಘಟನೆಯನ್ನು ವಿವರಿಸತೊಡಗಿದ. ಗೌಡನಿಗೆ ಈ ರೀತಿ ತಡೆಯುವ ಅವಕಾಶ ಕೊಡುವುದು ಗುಡಸೀಕರನಿಗೆ ಬೇಕಿರಲಿಲ್ಲ. ಪೋಜದಾರ ಗೌಡನನ್ನು ತಡೆಯುವ ಗೋಜಿಗೆ ಹೋಗಲೇ ಇಲ್ಲ. ಗೌಡನ ಪ್ರತಿ ಮಾತಿಗೂ ಸತ್ಯದ ಹೊಳಪಿತ್ತು, ಹರಿವಿತ್ತು. ಸತ್ಯವೇ ಹಾಗೆ. ಜನರ ಕಣ್ಣಲ್ಲಂತೂ ಗುಡಸೀಕರ ಪುಡಿ ಪುಡಿಯಾಗಿಬಿಟ್ಟ. ಆಗಾಗ ತಡೆಯುವುದಕ್ಕೆ ಯತ್ನಿಸಿ ಸೋತ. ಗೌಡ ಕೊನೆಗೆ –

“ನೋಡ್ರಿ, ಸಾಹೇಬರ ಆದದ್ದ ಹಿಂಗ. ಈ ಮಾತಿಗೆ ಎರಡಿದ್ದರ ಕರಿಮಾಯಿ ನನ್ನ ನಾಲಿಗೆ ಸೀಳಲಿ. ಬೇಕಾದರ ದತ್ತೂನ ಕೇಳ್ರಿ. ಲಗಮವ್ವನ ಕೇಳ್ರಿ. ಗುಡಿಸ್ಯಾನ ಮ್ಯಾಲ ನಮಗ್ಯಾಕ್ರಿ ಸಿಟ್ಟು ಬರಬೇಕು! ಸಿಟ್ಟಿದ್ದರ ನಾವs ಕರದ ಪಂಚಾಯ್ತಿ ಅವನ ಕೈಯಾಗಿಡತಿದ್ದವ?”

ಎಂದ. ಇದನ್ನು ಕೇಳಿ ಮಂದಿಯ ಅಂಚಿಗಿದ್ದ ಲಗಮವ್ವನೇನು ಅನೇಕರು ಕರಗಿ ಕಣ್ಣೀರು ತಂದರು.

ಹಿಂದಿನ ಎಲ್ಲ ಕೇಸುಗಳಲ್ಲಿಯಂತೆ ಇಲ್ಲಿಯೂ ತಾನೇ ಸೋಲುತ್ತಿದ್ದೇನೆಂದು ಗುಡಸೀಕರನಿಗನ್ನಿಸಿತು. ಸ್ವಥಾ ಪೋಜದಾರನೂ ಆರ್ದ್ರನಾಗಿದ್ದಂತೆ ತೋರಿತು. ಕೂಡಲೇ ಆವೇಶ ತಾಳಿ ಹೆದರಿದವರು ಕಿರಿಚಿ ಮಾತಾಡುವಂತೆ ಒದರಿದ:

“ಇಂಥ ಬಣ್ಣದ ಮಾತು ಮೆಹರ್ಬಾನ ಸಾಹೇಬರ ಮುಂದ ಆಡ್ತೀಯೇನೋ ಗೌಡಾ? ಅವರಿಗೆಲ್ಲಾ ತಿಳೀತೈತಿ. ಸಾಹೇಬರs ಬೇಕಾದ್ರ ಸುಂದರಾಬಾಯಿ ಇಲ್ಲೇ ಇದ್ದಾಳ ಆಕೀನ್ನs ಕೇಳ್ರಿ ಹೇಳತಾಳ ಇವನ ಅವತಾರ.”

ಕೆಲದಿನಗಳ ಹಿಂದೆ ಬಸವರಾಜು ತನ್ನಿಂದ ಬಸಿರಿಳಿಯುವ ಮದ್ದು ಒಯ್ದ ಕಾರಣ ಸ್ಪಷ್ಟವಾಯ್ತು ನಿಂಗೂನಿಗೆ. ಆ ಉದ್ರೇಕದಲ್ಲಿ ಗಪ್ಪನೆ  ಪೋಜದಾರನ ಮುಂದೆ ಕೂತು ನೆಲ ಬಾರಿಸುತ್ತ,

“ಸಾಹೇಬರ ಇದರ ಹಕೀಕತೆಲ್ಲಾ ನನಗ ತಿಳೀತ್ರಿ” ಅಂದ. ಇವನ ಮಾತು ಕೇಳುವ ತಾಳ್ಮೆ ಪೋಜದಾರನಿಗಿರಲಿಲ್ಲ.

“ಬಾಯ್ಮುಚ್ಚತಿಯೋ? ಇಲ್ಲಾ ಲಗಾಸಂತಯೋ?”

“ಕೇಳಿದಮ್ಯಾಲ ಬೇಕಾದರೆ ಲಗಾಸರಿ. ಹಲಿವುಳಿಯೋ ಮದ್ದ ಬಸವರಾಜೂಗ ಸ್ವಥಾ ನಾನ ಕೊಟ್ಟಿದ್ನಿ. ಅಂದs ಚಿಮಣಾಗ ಕೊಟ್ಟಿದ್ದ. ಗೌಡರ ಹೇಳಿದ್ದೆಲ್ಲಾ ಅಂದs ನಡದೈತ್ರಿ.”

ಕೂಡಿದ ಮಂದಿಗೆಲ್ಲ ಖಾತ್ರಿಯಾಗಿ ಬಿಟ್ಟಿತ್ತು. ಗುಡಸೀಕರನ ಪಿತ್ಥ ನೆತ್ತಗೇರಿತು. “ಸ್ವಥ ಬಸರದಾಕೀನ ಬಿಟ್ಟ ಇದೆಲ್ಲ ಸಾಕ್ಷಿ ಕೇಳಾಕ ಹತ್ತಿದಿರಿ?”

ಎಂದು ಪೋಜದಾರನಿಗೆ ಸಿಟ್ಟು ಮಾಡಿದ, ಪೋಜದಾರನಿಗೂ ತನ್ನ ಅಧಿಕಾರದ ನೆನಪಾಯಿತು.

“ಯಾಕಲೇ ಹಲಿವುಳಿಯೋ ಮದ್ದ ಕೊಡೋದ ಬೇಕಾಯ್ದೇಶೀರುನ್ನೋದ ಗೊತ್ತಿಲ್ಲಾ? ಮೊದಲ ನಿನ್ನs ಜೇಲಿಗಿ ಹಾಕತೀನ ತಡಿ’ ಆಮ್ಯಾಲ ನೋಡಿಕೊಳ್ತೀನಿ? ಎಲ್ಲಿ ಆ ಹೆಂಗಸು?”

ಎಂದು ಸುಂದರಿಯನ್ನು ಮುಂದೆ ಕರೆತರುವಂತೆ ಸನ್ನೆ ಮಾಡಿದ. ಈತನಕ ಮೂಲೆಯಲ್ಲಿ ಹುದುಗಿದ ಸುಂದರಿ ಮುಂದೆ ಬಂದಳು. ಪೋಜದಾರನ ಕೌತುಕವೆಲ್ಲ ಸೋರಿಹೋಯಿತು. ಇವಳು ಇಂದು ಮಧ್ಯಾಹ್ನ ಊಟ ನೀಡಿದವಳಾಗಿರಲಿಲ್ಲ. ಉಳಿದವರೆಲ್ಲ ಉಸಿರು ಬಿಗಿಹಿಡಿದು ಅವಳನ್ನೇ ನೊಡುತ್ತಿದ್ದರು. ಆಕೆ ಗುಡಸೀಕರನಂತೆ ಹೇಳುವುದರಲ್ಲಿ ಸಂಶಯವಿರಲಿಲ್ಲ. ದಿನಾ ಅವನ ಅನ್ನ ಉಂಡವಳು, ಮೈಯುಂಡುವಳು ಇನ್ನು ಹ್ಯಾಗೆ ಹೇಳ್ಯಾಳು? ಕೆಲವರಾಗಲೇ ಗೊಣಗಿದರು ಕೂಡ. ಅದು ಪೋಜದರನಿಗೆ ನಿಲುಕಲೇ ಇಲ್ಲ. ಈ ಮದ್ಯೆ ನಿಂಗೂ ಯಾವಾಗಲೋ ಮಾಯವಾಗಿದ್ದ. ಸುಂದರಿ ಮುಂದೆ ಬಂದು ತಲೆಬಾಗಿ ನಿಂತಳು.

“ಏನs ಬರೋಬರಿ ಹೇಳ, ನೀ ಬಸರಾದದ್ದ ಯಾರಿಗೆ?” ಏನು ಹೇಳುತ್ತಾಳೆಂದು ಎಲ್ಲರೂ ತುಟಿ ಬಿಗಿಹಿಡಿದು ನಿಂತರು. ಸುಂದರಿ ಮೆಲ್ಲಗೆ “ಗೌಡಗ” ಎಂದು ಹೇಳಿ ಗೌಡನ ಕಡೆ ಬೆರಳುಮಾಡಿ ತೋರಿಸಿ ಮತ್ತೆ ತಲೆ ಕೆಳಗೆ ಹಾಕಿದಳು. ಇದು ಸಮೀಪದವರಿಗೆ ಕೇಳಿಸಿತು, ದೂರಿದ್ದವರಿಗೆ ಕೇಳಿಸಲಿಲ್ಲ. ತಂತಮ್ಮಲ್ಲೇ ಏನಂದ್ಲು ಏನಂದ್ಲೆಂದು ಗೊಂದಲ ಹಾಕುತ್ತಿರುವಾಗ ಗಲಮವ್ವ “ಥೂ, ಬಕ್ಕಿಗಿ ಬೆದಿ ಕಲಿಸೋ ರಂಡೆ” ಎಂದು ಕರ್‌ರ್‌ಕ್ಕೆಂದು ಲಟಿಕೆ ಮುರಿದಳು. ಎಲ್ಲರ ಅಸಮಾಧಾನಕ್ಕೆ ಕೊಳ್ಳಿಯಿಟ್ಟಂತಾಗಿ “ಛೇ ಛೇ ಹಾಹೋ” ಸುರುವಾಯಿತು. ಪೋಜದಾರ ಬಾಯಿ ಹಾಕಲಿಲ್ಲ. ಇದ್ದುದರಲ್ಲಿ ಗುಡಸೀಕರ ಹುರುಪಾದ. ಚತುಷ್ಟಯರು ಕೈಕಟ್ಟಿಕೊಂಡು, ತುಟಿ ಹೊಲಿದುಕೊಂಡು, ಸಾಲೆ ಮಕ್ಕಳಂತೆ ಕುಳಿತಿದ್ದರು. ಅವರ ಪೈಕಿ ಸ್ವಲ್ಪ ಲವಲವಿಕೆಯಿದ್ದವನು ಕಳ್ಳ. ಅದಕ್ಕೆ ಕಾರಣವಿತ್ತು. ಈಗಷ್ಟೇ ನಿಂಗೂ ಧೈರ್ಯದ ಮಾತಾಡಿ ಹೋಗಿದ್ದನಲ್ಲ. ಅಷ್ಟೂ ಜನರಿಗಿಲ್ಲದ ಅವನ ಧೈರ್ಯ, ಪೇಟೆ ಸೂಳೆಯರಂಥ ಅವನ ಹಾವಭಾವ, ನೋಡಿ ಕಳ್ಳ ಭಲೆ ಭಲೆ ಎಂದು ಜೊಲ್ಲು ಸುರಿಸಿದ. ಎದೆಗಾರಿಕೆಯ ಸಪಾಟಾದ ಅವನೆದೆಗೆ ಉಬ್ಬು ಮೂಡಿಸುವ ವ್ಯವಸ್ಥೆ ಮಾಡಿದರೆ ಅವಳ ರೂಪ ಹೇಗಾಗುವುದೆಂದು ಧ್ಯಾನಿಸುತ್ತಿದ್ದ. ಈಗ ಅವನ ಹಂಬಲದ ಸುದ್ದಿ ಯಾಕೆ?

ಜನ ಬೇಕಾಬಿಟ್ಟಿ ಮಾತಾಡಿಕೊಮಡರು. ಪೋಜುದಾರ ಜನರನ್ನು ಸುಮ್ಮನಾಗಿಸುವ ಗೋಜಿಗೆ ಹೋಗಲೇ ಇಲ್ಲ. ಹಾಹೊ ಗದ್ದಲದಲ್ಲಿಯೇ ಯಾರಿಗೆ ಕೇಳಿಸ್ತೋ, ಯಾರಿಗಿಲ್ಲವೋ ತನ್ನ  ತೀರ್ಮಾನ ಒದರಿಬಿಟ್ಟ. ಗೌಡ ಸುಂದರಿಗೂ, ಅವಳ ಕೂಸಿಗೂ ಎರಡೆಕರೆ ಜಮೀನು ಬರೆದು ಕೊಡತಕ್ಕದ್ದು. ಇಷ್ಟು ಹೇಳಿ ಥಟ್ಟನೆ ಎದ್ದುಹೋದ.