ನಾಯೆಲ್ಯಾ ಮಹಾದಿಲ್‌ದಾರ ಕುಡಿತದಲ್ಲಿ, ಹಲಗೆ ಹೊಡೆಯುವುದರಲ್ಲಿ, ಎಲ್ಲದರಲ್ಲೂ. ನಿಮ್ಮ ಹತ್ತಿರ ಬಟ್ಟಲು ಸೆರೆ ಸಿಗುತ್ತದೆಂದರೆ ಅವನ ಮೋಜಿನ ಮಾತು ಕೇಳಬೇಕು; ಬೇಕಾ‌ದರೆ ನಿಮ್ಮ ಬಗ್ಗೆ ಪದ ಕಟ್ಟಿ ಹಾಡಿದರೂ ಹಾಡಿದನೇ, ಒಗಟು ಹೇಳಿದನೇ ಬೇಕೆಂದರೆ ಎದ್ದು ಕುಣಿದನೇ, ಸುಳ್ಳು ಹೇಳಿದನೇ; ಬೇಡವಾದರೆ ನಿಜ ಹೇಳಿದನೇ,  ಅಂತೂ ಏನೂ ಮಾಡಬಲ್ಲ. ಒಂಕಾರೆಪ್ಪನ ಬನ್ನೀಮರ ಆ ಊರಿನಲ್ಲೇ ದೆವ್ವಗಳಿರುವ ಭಾರೀ ಸ್ಥಳವೆಂದು ಖ್ಯಾತಿ. ಪ್ರತಿ ಅಮಾವಾಸ್ಯೆಯಂದು ಸರಿರಾತ್ರಿಯಲ್ಲಿ ಐದು ಜನ ಥಳಥಳ ಹೊಳೆಯುವ ಹೆಂಗಸರು ಆರತಿ ಬೆಳಗಿ, ಪ್ರದಕ್ಷಿಣೆ ಹಾಕಿ ಬೆಳ್ಳಂಬೆಳಗು ಮಂಗಳಾರತಿ ಮಾಡಿ ಬೆಳ್ಳೀ ಚಿಕ್ಕೆ ಮೂಡಿದೊಡನೆ ಕೆರೆಯ ಕಡೆ ಓಡುವರೆಂದೂ ಜನರಲ್ಲಿ ನಂಬಿಕೆಯಿದೆ. ಕೆಲವರು ಈ ಅದ್ಭುತ ದೃಶ್ಯವನ್ನು ಕಣ್ಣಾರೆ ಕಂಡದ್ದಾಗಿಯೂ ಹೇಳುತ್ತಾರೆ. ಬಾಟ್ಲಿ ಸೆರೆ ಕೊಡುವುದಾಗಿ ಜಿದ್ದು ಕಟ್ಟಿದ್ದಾಗ ನಾಯೆಲ್ಯಾ ಆ ಬನ್ನೀಮರಕ್ಕೆ ಅಮಾವಾಸ್ಯೆಯ ಕಗ್ಗತ್ತಲೆಯಲ್ಲೇ ಹೋಗಿ ಬಂದಿದ್ದಾನೆ ಎಂದರೆ ಎಂಥ ಧೈರ್ಯವಂತ ಇದ್ದಿರಬೇಕು!

ಶಿವಾಪುರದಲ್ಲಿ ಗ್ರಾಮಪಂಚಾಯಿತಿ ಮೆಂಬರರ ಮೀಟಿಂಗಿನ ಸುದ್ದಿ ಊರಲ್ಲಿ ಕೇಳಿಸತೊಡಗಿತ್ತಲ್ಲ, ಊರವರಿಗೆ ಆ ಸುದ್ದಿ ಕೇಳಿಸಿದರೆ ನಾಯೆಲ್ಯಾನಿಗೆ ನಾರತೊಡಗಿತು. ಆ “ಫಾರಿನ್ ಭಿರಂಡಿ”ಯನ್ನು ಒಮ್ಮೆಯಾದರೂ ಕುಡಿಯಲೇಬೇಕೆಂದು ಮನಸ್ಸು ಹರಿಯತೊಡಗಿತು. ಚತುಷ್ಟಯರಿಗೆ ದೆವ್ವಿನ ಕಥೆ ಹೇಳಿದ. ಅವರಿಂದೇನೂ ಆಗಲಿಲ್ಲ. ಯಾಕೆಂದರೆ ಅವರೆಲ್ಲಿಂದ ಕೊಡಬೇಕು? ಗುಡಸೀಕರನನ್ನೇ ಹಿಡಿಯಬೇಕೆಂದ. ಅವನೋ ಸಿಡುಕ. ದೆವ್ವಿ ಕಥೆಗೆ ಬಗ್ಗುವವನಲ್ಲ, ಅಲ್ಲದೆ ಇವನ ಅನೇಕ ಕಥೆಗಳ ದೆವ್ವಗಳು ಇರೋದು ಗೌಡನ ತೋಟದಲ್ಲಿ, ಆದರೂ ಇವನ ಭೂತಕಥಾಸರಿತ್ಸಾಗರದಲ್ಲಿ ಗುಡಸೀಕರ ಇಷ್ಟಪಡುವ ಒಂದು ಕಥೆಯಿತ್ತು. ಗುಡಸೀಕರ ಎರಡು ಮೂರು ಬಾರಿ ಆ ಕಥೆ ಕೇಳಿ ಹಾಗೇ ಕಳಿಸಿದ್ದ. ನಾಯೆಲ್ಯಾ ಬಾಯಿಬಿಟ್ಟು ತನಗೊಂದು ಹನಿ ಹನಿಸಿರೆಂದು ಕೇಳಿದರೂ ಮುಂದೆ ಕೊಡೋಣವೆಂದು ಹೇಳಿ ನಿವಾರಿಸಿದ್ದ. ಮಾಸ್ತರ ಎದ್ದುಹೋದ ಮೇಲೆ ನಗಾಡುತ್ತಿದ್ದರಲ್ಲ. ಗುಡಸೀಕರ ಎಲ್ಯಾನಿಗೆ ತಿಳಿಯದಂತೆ ಖಾಲಿ ಬಾಟ್ಲಿಗೆ ನೀರು ಹಾಕಿ ಒಳಗೆ ಕರೆದ. ಕರೆಯುವುದಿನ್ನೂ ಮುಗಿಯುವುದರೊಳಗೇ ನಾಯೆಲ್ಯಾ ಒಳಗೆ ಬಂದಿದ್ದ.

“ನಾಯೆಲ್ಯಾ, ಆ ಗೌಡನ ದೆವ್ವಿನ ಕಥಿ ಇನ್ನೊಮ್ಮಿ ಹೇಳಲೇ” ಎಂದ ಗುಡಸೀಕರ, ಬಾಟ್ಲಿಯ ನೀರನ್ನೇ ಗ್ಲಾಸಿಗೆ ಬಗ್ಗಿಸಿಕೊಂಡು ಕುಡಿಯುತ್ತ. ನಾಯೆಲ್ಯಾನ ಆಸೆ ಕರಗಿ ನೀರಾಗಿ ಹರಿದಂತೆ ಜೊಲ್ಲು ಬಂತು. ಅನೇಕ ದಿನಗಳ ತನ್ನ ಆಸೆ ಈಡೇರಬಹುದೆಂಬ ನಂಬಿಕೆಯಿಂದ ಕಣ್ಣು ಅಗಲವಾಗಿ ಬೆಳೆದವು. ಮುಖ ಕಳೆಕಳೆಯಾಯಿತು. ಮನಸ್ಸಿನಲ್ಲಿ ಕರಿಮಾಯಿಯನ್ನು ಸ್ಮರಿಸಿ “ಎವ್ವಾ, ಗುಡಸೀಕರಗ ಚಲೋ ಬುದ್ಧಿ ಕೊಡವ್ವಾ” ಎಂದು ಬೇಡಿಕೊಂಡು ಕಥೆ ಹೇಳಲಿಕ್ಕೆ ಸಿದ್ಧನಾದ. ಒಮ್ಮೆ ಚತುಷ್ಟಯರ ಮುಖ ನೋಡಿದ. ಇವನ ಸಂಭ್ರಮ ನೋಡಿ ಅವರಿಗೂ ಅಂದರೆ ಚತುಷ್ಟಯರಿಗೂ ನಗೆ ಬಂತು. ಅದು ಅವರು ಅರಿಯದ ಕಥೆಯೇನಲ್ಲ. ಆದರೆ ಹೇಳುವ ಅವನ ಹುರುಪಿನಲ್ಲಿ ಇಂದೊಂದು ವಿಶೇಷವಿತ್ತು. ಮದುವೆಯಾದ ಹೊಸ ಹುಡುಗ, ಪ್ರಥಮರಾತ್ರಿ, ತನ್ನ ಹೆಂಡತಿಯ ಬಳಿ ಹೋಗುವಾಗಿನ ವಿಶೇಷ ಕಾಂತಿಯಿತ್ತು. ಮುಖದಲ್ಲಿ. ಲವಲವಿಕೆಯಿಂದ ಕತೆ ಹೇಳತೊಡಗಿದ:

ಒಂದಾನೊಂದು ಕಾಲದಲ್ಲಿ, ಒಂದಾನೊಂದು ಹಳ್ಳಿಯಲ್ಲಿ ರಾಜ ಮಂತ್ರಿ ಪ್ರಧಾನಿ ದಂಡು ದಳವಾಯಿ ಮಂದಿ ಮಾರ್ಬಲ ಸಮೇತ ಸುಖವಾಗಿದ್ದರು. ಶಿವಾಪುರದಲ್ಲಿ ನಾಯೆಲ್ಯಾ ರಂಗಸಾನಿ ಅಂತ ಗಂಡ ಹೆಂಡತಿ ಇದ್ದರು. ನಾಯೆಲ್ಯಾ, ಕುಡುಕ ನನ ಮಗ, ಕುಡಿಯೋದರಲ್ಲಿ ಅವನ್ನ ಮೀರಿಸುವಂಥವರು ಸುತ್ತ ನಾಡಿನಲ್ಲೇ ಇರಲಿಲ್ಲ. ಒಂದು ದಿನ ಊರಲ್ಲಿದ್ದ ಅಡುಗೂಲಜ್ಜಿ ಲಗಮವ್ವನ ಗುಡಿಸಲಲ್ಲಿ ಖೂಬಾಗಿ ಕುಡಿದ. ಕುಡಿದ ಮೇಲೆ ಹೆಂಡತಿ ನೆನಪಾಯ್ತು. ಮನೆಗೆ ಹೋದ, ಮಲಗಿದ. ಮಧ್ಯರಾತ್ರಿ ಇದ್ದಕ್ಕಿದ್ದಂತೆ ತನ್ನ ತೋಟದಲ್ಲಿ (ಅಂದರೆ ಗೌಡನ ತೋಟದಲ್ಲಿ) ಯಾರೂ ಇಲ್ಲವೆಂದು ಸೇಂಗಾ, ಒಣಗು ಹಾಕಿದ್ದರಿಂದ ಯಾರಾದರೂ ಕಳ್ಳರು ಬಂದರೆ ಹೆಂಗಪಾ ಅಂದುಕೊಂಡು ಎದ್ದ. ಅಮಾವಾಸ್ಯೆಯ ಕತ್ತಲೆ, ಹೆದರಿಕೆಯಾಯ್ತು. ಕರಿಮಾಯಿಯ ಮೇಲೆ ಭಾರಹಾಕಿ, ಆದದ್ದಾಗಲಿ ಎಂದು ನಡೆದ.

ತೋಟದ ಸಮ ಸಮೀಪ ಬಂದ ಹಾಗೆ ಸ್ವಲ್ಪ ಧೈರ್ಯ ಬಂತು. ಯಾಕೆಂದರೆ ಇವನು ಬರುವ ಮುಂಚೆಯೇ ಗೌಡರು ಬಂದು ಕಣದ ಹತ್ತಿರ ಕಾಲು ಚಾಚಿ ಬೆಂಕಿ ಕಾಸುತ್ತ ಕೂತಿದ್ದರು. ತಡಮಾಡಿ ಬಂದಿದ್ದ. ಅದಕ್ಕೇ ಗೌಡ ಬಯ್ಯತ್ತಾರೆಂದು ಹೆದರಿಕೊಂಡೇ “ಎಪ್ಪಾ ತಪ್ಪಾತರೀ” ಎನ್ನುತ್ತ ಸಮೀಪ ಬಂದ. ಬಂದು ನೋಡುತ್ತಾನೆ; ಗೌಡರಲ್ಲ. ಗೌಡರ ದೆವ್ವ! ಕೊಡ ಗಾತ್ರದ ತರಡು ಚೆಲ್ಲಿಕೊಂಡು ತನ್ನ ಕಾಲೀಗೇ ಬೆಂಕಿ ಹಚ್ಚಿ, ಉರಿಮಾಡಿ ಕಾಯಿಸಿಕೊಳ್ಳುತ್ತಿದೆ! “ಸತ್ತಿನೋ! ಎವ್ವಾ ಕರಿಮಾಯೀ” ಎಂದವನೇ ಓಡಿಹೋಗಿ ಗುಡಿಸಲದೊಳಗಿಂದ ನೀರು ಚಿಮುಕಿಸಿದನಂತೆ. ದೆವ್ವ ಗಪ್ಪಗಾರ, ಮಟಾಮಾಯ!

ಮಾರನೇ ದಿನ ಗೌಡನನ್ನು ನೋಡಿದಾಗಲೂ ಅವನಿಗೆ ಅದೇ ಥರ ಹೆದರಿಕೆಯಂತೆ. ಆಗಲೂ ಅವನು ರಾತ್ರಿ ಗೌಡರನ್ನು ಮುಖಾಮುಖಿ ನೋಉಡವುದಿಲ್ಲವಂತೆ –

“ಅವರಲ್ಲಿ, ನಾವಿಲ್ಲಿ”

ಎನ್ನುತ್ತ ಕಥೆ ಮುಗಿಸಿದ.

ಇಂಥಾ ಕಥೆಗಳನ್ನು ಬೇಕಾದರೆ ಎಣಿಸಿ ಸಾವಿರ ಹೇಳಿಯಾನು, ಸೆರೆ ಸಿಕ್ಕೋದಾದರೆ. ಸಾವಿರ ಕಥೆಗೂ ಇವನೇ ನಾಯಕನಾದರೂ, ಇವನು ಹೇಳುವುದು ಮತ್ತೆ “ಒಂದಾನೊಂದು ಕಾಲದಲ್ಲಿ, ಒಂದಾನೊಂದು ಊರಿನಲ್ಲಿ” ಎಂದೇ. ಆದರೆ ಬೇರೆಯವರ ದೆವ್ವಗಳಿಗೂ, ಇವನ ದೆವ್ವಗಳಿಗೂ ಒಂದು ವ್ಯತ್ಯಾಸವಿದೆ. ಇವೆಲ್ಲ ನೀರಿಗೆ ಹೆದರುತ್ತವೆ ಮತ್ತು ಪ್ರತಿಯೊಂದು ಕಥೆಯಲ್ಲೂ ಇವನೇ  ಜಯಶಾಲಿಯಾಗುತ್ತಾನೆ. ಇದು ನಿಜವಿದ್ದೀತು, ಯಾಕೆಂದರೆ ಈ ತನಕ ಬದುಕಿದ್ದಾನಲ್ಲ! ಕೆಲವು ಹೆಣ್ಣು ದೆವ್ವಗಳು ಇವನಿಗೆ ಸೆರೆ ಕದ್ದು ತಂದುಕೊಟ್ಟು ಇವನೊಂದಿಗೆ ಮಲಗಿಹೋಗುತ್ತವಂತೆ!

ಕಥೆ ಕೇಳಿ ಎಲ್ಲರೂ ಹೋ ಎಂದು ನಕ್ಕರು. ಗುಡಸೀಕರನಿಗೆ ಖುಶಿಯಾಗಿ “ತಗೊಳ್ಲೆ ಮಗನs ಭಿರಂಡಿ ಕುಡಿ” ಎಂದು ಬಾಟ್ಲಿಯನ್ನೇ ಅಂದರೆ ನೀರು ತುಂಬಿದ ಬಾಟ್ಲಿಯನ್ನೇ ಇಡೀಯಾಗಿ ಅವನಿಗಿತ್ತು, “ಹೋಗು, ನನ್ಹೆಸರ ಹೇಳಿ ಕುಡಿ ಹೋಗು” ಎಂದ. ಕೊಟ್ಟ ತಕ್ಷಣವೇ ನಾಯೆಲ್ಯಾ ಅದೆನ್ದೆ ಇದೆನ್ನದೆ ಬಾಯಿಗಿಟ್ಟು ಗಟ ಗಟ ಗಟ ಕುಡಿದು ಬರಿ ಬಾಟ್ಲಿ ಕಂಕುಳಲ್ಲಿಟ್ಟುಕೊಂಡು ಕಣ್ನು ಅಗಲವಾಗಿ ತೆರೆದುಕೊಂಡು, ನಿಶ್ಚಲವಾಗಿ ಕೂತುಬಿಟ್ಟ! ಚತುಷ್ಟಯರು ಬಿದ್ದು ಬಿದ್ದು ನಗುತ್ತಿದ್ದರೆ ಎಂಟು ಜನ ನಕ್ಕಂತೆ ಕಂಡರು. ಗುಡಸೀಕರನಿಗೆ ಕೈ ಮುಗಿದು ಹೊರಬಿದ್ದ. ಊರು ಆಗಲೇ ಮಲಗಿತ್ತು.

ನ್ಯಾಯೆಲ್ಯಾ ಈ ಹಿಂದೆ ಭಿರಂಡಿ ಹೇಗಿರುತ್ತದೆಂದು ಚತುಷ್ಟಯರನ್ನು ಕೇಳಿದ್ದ. ಅವರೋ ನಾಲ್ವರು ನಾಲ್ಕು ಥರಾ ಹೇಳಿದ್ದರು. ಕಳ್ಳ “ಹೊಟ್ಯಾಗ ರಂ ಅಂದು ತಲಿ ಗಿರ್ರಂತ ತಿರುಗಿ, ಕಾಲಾಗ ಕುದುರಿಮರಿ ಜಿಗಧಾಂಗಾಗತೈತಿ” ಅಂದಿದ್ದ. “ಒಂದ ನಮೂನಿ ಒಂದಿದ್ದದ್ದ ನಾಕೆಂಟ ಆಧಾಂಗ ಇರತೈತಿ” ಅಂತ ರಮೇಸ ಹೇಳಿದ್ದ. “ಕೆರ್ಯಾಗ ಈಸ ಬಿದ್ದಾಂಗಿರತೈತಿ” ಎಂದು ಸಾತೀರ ಹೇಳಿದ್ದ. ಮೆರೆಮಿಂಡನಂತೂ “ಸ್ವರ್ಗಲೋಕ ಕಾಣತೈತಲ್ಲೋ ಮೊನ್ನಿ ನಮ್ಮ ಅಜ್ಜಾ ನಿಮ್ಮ ಅಜ್ಜೀ ಎಲ್ಲಾ ಕಂಡರು. ನಿಮ್ಮ ಅಜ್ಜೀನ ನಮ್ಮಜ್ಜಾ ಅಟ್ಟಿಸಿಕೊಂಡ ಓಡತಿದ್ದಾ!” ಎಂದು ಹೇಳಿದ್ದ. ಇದನ್ನೆಲ್ಲ ಕೇಳಿ “ಅವರವರ ಭಾವಕ್ಕೆ ತಕ್ಕಂತೆ ಅವರವರ ಪರಮಾತ್ಮ” ಎಂದುಕೊಂಡು ತನಗೇನು ಆಗುತ್ತದೋ, ಕಾಣುತ್ತದೋ ಎಂದು ಕಾತರದಿಂದ ಇದ್ದ. ತನಗೊಮ್ಮೆ ಈ ಭಿರಂಡಿ ಸಿಕ್ಕರೆ ಮೆರೆಮಿಂಡನ ಅಜ್ಜಿಯನ್ನು ತಾನು ಹಿಡಿದುಕೊಳ್ಳಬೇಕೆಂದೂ ಅಂದುಕೊಂಡಿದ್ದ. ಈಗ ನೋಡಿದರೆ ಈ ನಾಲ್ವರ ನಾಲ್ಕು ಥರದ ಅನುಭವ ತನಗೊಬ್ಬನಿಗೇ ಏಕದಂ ಏಕಕಾಲಕ್ಕೆ ಆದಂತೆ ಅನಿಸಿತು. ನಡೆಯುವುದಕ್ಕೆ ರಸ್ತೆ ಸಾಲದಾಯ್ತು. ಕುದುರೆಮರಿಯ ಮೇಲೆ ಹತ್ತಿ ಕೂತಂತೆ ಅನಿಸಿತು. ಒಂದಿದ್ದದ್ದು ನಾಕೆಂಟೂ ಕಂಡಿತು. ಕೆರೆಯಲ್ಲಿ ಈಜಾಡಿದಂತಾಯ್ತು. ಸ್ವರ್ಗಲೋಕ ಕಂಡು, ಅದರಲ್ಲಿ ಮೆರೆಮಿಂಡನ ಅಜ್ಜಿ ಎದುರು ಬಂದಂತಾಗಿ “ಸಿಕ್ಕಲೇ ಹುಡುಗಿ” ಎಂದು ತೆಕ್ಕೆ ಹಾದ. ತೆಕ್ಕೆಗೆ ಸಿಕ್ಕವನು ನಿಂಗೂ! ನಾಯೆಲ್ಯಾನಿಗೂ ಎದು ಗೊತ್ತಾಯಿತು. ಸರಿಯಾಗಿ ನಿಲ್ಲಲೂ ಆಗಲೊಲ್ಲದು. ಮಾತಾಡಲೂ ಆಗಲೊಲ್ಲದು. ಅವನ ಕಂಕುಳದ ಬಾಟ್ಲಿ ನೋಡಿ ಇದು ಗುಡಸೀಕರನೆಂದು ನಿಂಗೂ ಗುರುತಿಸಿದ. ಹೀಗೇ ಬಿಟ್ಟರೆ ರಸ್ತೆಯ ಪಾಲಾಗುತ್ತಾನೆಂದು ನಿಂಗೂ ಅವನ ರಟ್ಟೆ ಹಿಡಿದು ಅವನ ಗುಡಿಸಲ ಕಡೆ ಬಿಡೋಣವೆಂದು ಕರೆದುಕೊಂಡು ನಡೆದ. ಜೋಲಿ ತಪ್ಪಿ ನಾಯೆಲ್ಯಾ ನಿಂಗೂನ ಸೊಂಟ ತಬ್ಬಿಕೊಂಡ. “ಥೂ ಖೋಡಿ” ಎಂದು ಅಂಥ ಕತ್ತಲೆಯಲ್ಲೂ ನಿಂಗೂ ನಾಚಿಕೊಂಡ. ತನ್ನ ಓಣಿ ಸಮೀಪಿಸುವ ತನಕ ನಾಯೆಲ್ಯಾ ಏನೇನೋ ಮಾತಾಡುತ್ತಿದ್ದ. ನಿಂಗೂ ಸೂತ್ರದ ಗೊಂಬೆ ಥರಾ ಕಾಣಿಸುವುದಾಗಿ ಹೇಳಿದ. ಚಿಮಣಾ ನಿನ್ನ ಮುಂದೆ ಏನೇನೂ ಅಲ್ಲ ಅಂದ. ಇನ್ನೇನು ತನ್ನ ಹೆಂಡತಿ ಮುಂದಿನ ಅಮಾವಾಸ್ಯೆಗೆ ಸಾಯತ್ತಾಳಲ್ಲಾ, ಸತ್ತಕೂಡಲೇ ನಿಂಗೂನನ್ನೇ ಮದುವೆಯಾಗುವುದಾಗಿ ಕರಿಮಾಯಿಯ ಆಣೆ ಮಾಡಿದ. ಓಣಿ ಬಂದೊಡನೆ ಅವನನ್ನು ಅಲ್ಲೇ ಬಿಟ್ಟು “ಇನ್ನು ಗುಡಸಲಕ ಹೋಗಲೇ ಭಾಡ್ಯಾ” ಎಂದೂ ನಿಂಗೂ ಅವನಾಡಿದ್ದನ್ನೆಲ್ಲ ಜ್ಞಾಪಿಸಿಕೊಳ್ಳುತ್ತ ತನ್ನ ಮನೇ ಕಡೆ ಓಡಿಹೋದ.

ನಾಯೆಲ್ಯಾ ಗುಡಿಸಲಿಗೆ ಹೋಗಿ ಬಾಗಿಲು ಬಡಿದ. ಒಳಗಿನಿಂದ “ಯಾರವರಾ” ಎಂದದ್ದು ಕೇಳಿಸಿತು. ಇವನ ಪಿತ್ಥ ನೆತ್ತಿಗೇರಿತು. “ಯಾರವರಾ? ನಿನ ಗಂಡ! ಬಾಗಿಲ ತಗಿಯೇ ಬಿದ್ದಾಡೀ” ಅಂದ. ಅಂದು ಬಾಗಿಲಿಗೊಂದು ಒದ್ದ. ಒದ್ದು “ಬಾಗಿಲು ತೆಗಿಯೇ ರುಕ್ಮಿಣೀ; ಮೋಅದ ಅರಗಿಣೀ” ಎಂದು ಪಾರಿಜಾತದ ಕೃಷ್ಣನ ಹಾಡು ತೊದಲಿದ. ಬಾಗಿಲು ತೆರೆಯಿತು, ಒಳನುಗ್ಗಿದ. ಒಳಗೆ ಒಮ್ಮೆಲೇ, ಹಾರಾಟ, ಕೂಗಾಟ ಸುರುವಾಯಿತು. ಯಾಕೆಂದರೆ ಅದು ನಾಯೆಲ್ಯಾನ ಗುಡಿಸಲಾಗಿರಲಿಲ್ಲ. ತಪ್ಪಿ ಮಾದರ ಭರಮನ ಗುಡಿಸಲಿಗೆ ನುಗ್ಗಿದ್ದ. ಭರಮ ಮನೆಯಲ್ಲಿರಲಿಲ್ಲ.

ಭರಮನ ಹೆಂಡತಿ ಮತ್ತು ತಾಯಿ ಕಿರುಚಾಡುತ್ತ, ಒದರಾಡುತ್ತ, ಬೈಗಳಗಳಿಂದ ನಾಯೆಲ್ಯಾನನ ಕುಲಕೋಟಿಯನ್ನು ತೊಳೆಯುತ್ತ ಕೈಗೆ ಸಿಕ್ಕ ತಟ್ಲಿ, ಕಸಪೊರಕೆಯಿಂದ ಕೈ ಬಾಯಿ, ನೋಡದೆ ಬಾರಿಸಿ, ಮೈ ನೀರಿಳಿಸುತ್ತ ಹಾಹೋ ಎಂದು ಗದದಲ ಮಾಡತೊಡಗಿದರು. ಕಳ್ಳನಿರಬೇಕೆಂದು ಪಕ್ಕದ ಗುಡಿಸಲಿನವರು ಎಚ್ಚೆತ್ತು ಹೊರಗೆ ಬಂದು ಭರಮನ ಮನೆ ನುಗ್ಗಿ ಅವರೂ ಒದ್ದರೂ. ಈ ತನಕ ದಿಕ್ಕು ತಪ್ಪಿ, ಏನೆಂದು , ಯಾಕೆಂದು, ಹ್ಯಾಗೆಂದು ತಿಳಿಯದೆ ಒದರಾಡದೆ ಸುಮ್ಮನೆ ಏಟು ತಿನ್ನುತ್ತಿದ್ದವನು ಮಂದಿ ಬುತ್ತಲೂ ತನಗಿನ್ನು ಉಳಿಗಾಲವಿಲ್ಲೆಂದು “ಸತ್ರಿನ್ರೋ ಎಪ್ಪಾ” ಎಂದು ಸಿಡಿದ ಉಗುಳಿನಂತೆ ಹೊರಬಿದ್ದ.

ನೋಡಿದರೆ ನಾಯೆಲ್ಯಾ! ಮೂಲೆ ಗುಡಿಸಲದ ಅವನ ಹೆಂಡತಿ ರಂಗಸಾನಿಗಾಗಲೇ ಎಚ್ಚರವಾಗಿ ಹೊರಬಂದಿದ್ದಳು. ಇಬ್ಬರೂ ಹೆಂಗಸರು ಅಳುತ್ತ, ಕರೆಯುತ್ತ ಹೊರಬಂದ ಎಲ್ಲರಿಗೂ ಹೇಳಿ ಸಹಾಯಕ್ಕಾಗಿ ಕೂಗಾಡತೊಡಗಿದದರು. ಈಗ ಅವನಿಗೆ ಒಂದಿಷ್ಟೂ ನಿಶೆಯಿರಲಿಲ್ಲ. ಕಂಡ ಕಂಡವರ ಕಾಲು ಹಿಡಿದ. “ನಿಶೇದಾಗ ತಪ್ಪಾತೆಪ್ಪೋ” ಅಂದ. ಕೂಡಿದವರು ಛೀ ಥೂ ಅಂದರು. ಭರಮನ ತಾಯಿ ಹಾಗೂ ಹೆಂಡತಿಯ ಕೂಗಾಟ ಇನ್ನೂ ಸಾಗಿತ್ತು. ಉಳಿದವರು “ನಾಳಿ ಗೌಡಗ ಹೇಳೋಣು, ಹೋಗ್ರಿನ್ನ” ಎಂದು ಸಮಾಧಾನ ಮಾಡಿ ಅವರನ್ನು ಒಳಗೆ ಕಳಿಸಬೇಕಾದರೆ ಕುರಿ ಕೋಣ ಬಿದ್ದವು. ರಂಗಿ ನಾಯೆಲ್ಯಾನನ್ನು ದರ ದರ ಎಳೆದುಕೊಂಡು ಹೋಗಿ ಬಾಗಿಲಲ್ಲಿ ಕಾಲಿನಿಂದ ಒಂದೆರಡು ಚೆಲ್ಲಿ, ಅಲ್ಲೇ ಬಿಟ್ಟು ಒಳಗೆ ಹೋಗಿ ಮಲಗಿದಳು. “ಕರಿಮಾಯಿ! ಏನ ಹೋಗಿ ಏನಾತಿದು” ಎಂದು ಚಿಂತಿಸುತ್ತ ನಾಯೆಲ್ಯಾ ಬಾಗಿಲಲ್ಲೇ ಬಿದ್ದುಕೊಂಡ, ‘ಮುನಿಯೆಲ್ಯಾ’ನೊಂದಿಗೆ.