ಚಂದ್ರಶೇಖರ ಕಂಬಾರರು ಹೇಳತೇನ ಕೇಳದಿಂದ ಪ್ರಾರಂಭಿಸಿ ಈವರೆಗೆ ಶಿವಾಪುರಕ್ಕೆ ಸಂಬಂಧಿಸಿದ ಮೂಲ ಕಥೆಯೊಂದನ್ನು ಬೇರೆಬೇರೆ ವಿಧಾನಗಳಲ್ಲಿ ಹೇಳುತ್ತಾ ಬಂದಿದ್ದಾರೆ. ಇಂಥದೊಂದು ನಿರಂತರ ಕಥನ ಕಂಬಾರರ ಮೂರು ದಶಕದ ಬರವಣಿಗೆಗೆ ಸಾತತ್ಯವೊಂದನ್ನು ಕಟ್ಟಿಕೊಟ್ಟಿರುವ ಜತೆಜತೆಗೇ ಆ ಮೂಲಕಥೆಯ ಸಾಧ್ಯತೆಗಳ ವಿಸ್ತಾರವನ್ನೂ ಸೂಚಿಸಿದೆ. ಶಿವಾಪುರದ ಕಾಲ ದೇಶಗಳನ್ನು ಪುರಾಣದಿಂದ ಚರಿತ್ರೆಗೆ ವಿಸ್ತರಿಸುತ್ತ, ರೂಪಾಂತರಿಸುತ್ತ, ಒಂದನ್ನು ಮತ್ತೊಂದರೊಳಗೆ ಇಡುತ್ತ ಕಂಬಾರರು ಕಾಲ ದೇಶಗಳ ಹಲವು ಆಯಾಮಗಳನ್ನು ಒಟ್ಟಿಗೇ ಅಖಂಡವಾಗಿ ಒಳಗೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇವರ ಕೃತಿಗಳನ್ನು ಬಿಡಿಬಿಡಿಯಾಗಿ ನೋಡಿದಾಗ ಒತ್ತು ಕೊಂಚ ಬೇರೆ ಬೇರೆಯಾಗಿದೆ ಎನಿಸಿದರೂ, ಒಟ್ಟಾರೆಯಾಗಿ ನೋಡಿದಾಗ ಶಿವಾಪುರದ ಸ್ಥಿತಿ, ಸಾಧ್ಯತೆಗಳ ಇಡಿಯಾದ ಗ್ರಹಿಕೆಗಾಗಿ ಲೇಖಕರ ಸೃಜನಶೀಲ ಚಡಪಡಿಕೆ ವೇದ್ಯವಾಗುತ್ತದೆ. ಅಂದರೆ ಶಿವಾಪುರವೆನ್ನುವುದು ಒಂದು ಸರಳ, ನಿಶ್ಚಲ, ಏಕಸ್ಥಿತಿಯಲ್ಲ, ‘ಹೇಳತೇನ ಕೇಳ’, ‘ಗಂಗಾಮಾಯಿ’, ‘ನವಿಲೇ ನವಿಲೇ’, ‘ಜೋಕುಮಾರಸ್ವಾಮಿ’, ‘ಮಂದಾರ ಮರ’, ‘ತುಕ್ರನ ಕನಸು’, ‘ಕರಿಮಾಯಿ’ – ಇಂಥ ಹಲವು ಹತ್ತು ಕೃತಿಗಳಲ್ಲಿ ಕಂಡುಬರುವ ಶಿವಾಪುರಗಳ ಸಮುಚ್ಚಯ ಸ್ಥಿತಿ ಅದು, ಸಾಧ್ಯತೆಗಳ ಮಾತೂ ಹೀಗೆಯೇ, ಆದ್ದರಿಂದಲೇ ಕಂಬಾರರ ಬಿಡಿ ಕೃತಿಗಳ ಓದಿನ ಸಂದರ್ಭದಲ್ಲೂ ಇತರ ಕೃತಿಗಳ ನೆನಪನ್ನು ಓದುಗ ಸಂಪೂರ್ಣವಾಗಿ ಬಿಟ್ಟುಕೊಡುವಂತಿಲ್ಲ.

ಹಾಗಾದರೆ ಈ ಸ್ಥಿತಿಯ ಸಂಗ್ರಹ ಸ್ವರೂಪವೇನು? ಸರಳವಾಗಿ ಹೇಳಬಹುದಾದರೆ ಅದು ಕೇವಲ ಒಂದು ಭೌಗೋಳಿಕ ಸ್ಥಿತಿಯಲ್ಲ, ಅದೊಂದು ಪ್ರಜ್ಞೆ. ಶಿವಾಪುರ ಎನ್ನುವುದು ಒಂದು ಸಮುದಾಯ. ಈ ಸಮುದಾಯಕ್ಕೆ ತನ್ನದೇ ಆದ ಸ್ಮೃತಿಗಳಿವೆ. ಆ ಸ್ಮೃತಿಗಳನ್ನು ಕಥನವಾಗಿಸಿ ತನ್ನ ಪುರಾಣಚರಿತ್ರೆಗಳನ್ನು ಧ್ಯಾನಿಸುವ ಜನಪದ ಇದೆ. ಈ ಜನಪದವು ಒಂದು ಗ್ರಾಮಸಮುದಾಯವಾಗಿ ಒಟ್ಟಿಗೇ ಗ್ರಹಿಸುವುದು ಕಂಬಾರರ ವೈಶಿಷ್ಟ್ಯ. ಈ ಸಮುದಾಯ ಹಲವಾರು ಜಾತಿ, ವರ್ಗಗಳಲ್ಲಿ ಒಡೆದುಕೊಂಡಿದ್ದರೂ, ತನ್ಮೂಲಕ ಪರಸ್ಪರ ಭಿನ್ನವೆನ್ನಿಸುವ ಆಶೋತ್ತರಗಳನ್ನು ತನ್ನ ಒಡಲಾಳದಲ್ಲಿ ಹುದುಗಿಸಿಕೊಂಡಿದ್ದರೂ ಒಂದು ಅವಿಚ್ಛಿನ್ನ ಪ್ರಜ್ಞೆ ಈ ಸಮುದಾಯವನ್ನು ಬೆಸೆದಿದೆ. ‘ಕರಿಮಾಯಿ’ ಕಾದಂಬರಿಯಲ್ಲೇ, ಕಾಣಬಹುದಾದಂತೆ ಗೌಡ, ದತ್ತಪ್ಪ, ಲಗುಮವ್ವ ಇವರೆಲ್ಲ ಬೇರೆಬೇರೆ ಜಾತಿ – ವರ್ಗಗಳಿಗೆ ಸೇರಿದವರಾದರೂ ಕರಿಮಾಯಿಯ ಪುರಾಣ ಇವರನ್ನೆಲ್ಲ ಒಂದು ಸಮುದಾಯವಾಗಿ ಬೆಸೆದಿದೆ. ಇದೊಂದು ಜೀವಂತ ಸಮುದಾಯ ಎನ್ನುವುದು ಮುಖ್ಯ. ತನ್ನ ಭೂತವನ್ನು ಕಥನವಾಗಿಸಿ ಹಾಡುವಂತೆ ಕಥನ ಪ್ರಕ್ರಿಯೆಯಲ್ಲಿ ತಾವೂ ಆ ಕಥನದ ಪಾತ್ರಧಾರಿಗಳಾಗಿ ಈ ಜನರು ಒಟ್ಟಿಗೇ ಹಲವು ಕಾಲದಲ್ಲಿ ಬದುಕುತ್ತಾರೆ, ಶಿವಾಪುರದ ಪುರಾಣವನ್ನು ಹೇಳುತ್ತಿದ್ದಾರೆ ಅಂದುಕೊಳ್ಳುತ್ತಿದ್ದಾಗ ಚರಿತ್ರೆಯ ವಿವರಗಳನ್ನು ತಂದು, ಚರಿತ್ರೆ ಹೇಳುತ್ತಿದ್ದಾರೆ ಅಂದುಕೊಳ್ಳುವಾಗ ಅದನ್ನು ಪುರಾಣವೆಂಬಂತೆ ಹೇಳಿ ಕಂಬಾರರು ಕಾಲ ದೇಶಗಳ ಎರಡು ಬೇರೆಬೇರೆ ಎಂಬಂಥ ಸ್ಥಿತಿಗಳನ್ನು ಒಟ್ಟಿಗೆ ಸೂಚಿಸಿಬಿಡುತ್ತಾರೆ. ‘ಅಂಡಾಂಡ ಪಿಂಡಾಂಡದಿಂದ ಸುರುವಾಗುವ ಲಗುಮವ್ವನ ಹಾಡಿನಲ್ಲೂ ಶಿವಾಪುರವಿದೆ.’ ಹಾಗೆಯೇ ‘ತಮ್ಮ ಊರಿನ ಸುತ್ತಮುತ್ತ ಯಾವ್ಯಾವ ಊರಿದೆಯೆಂಬುದು ಅಥವಾ ಯಾವ್ಯಾವ ಊರಿನ ಮಧ್ಯೆ ತಮ್ಮ ಊರಿದೆ ಎನ್ನುವುದು ಅವರಿಗೂ ಗೊತ್ತಿದೆ.’ ಪುರಾಣ ಕಾಲದ ಸ್ಮೃತಿಯಿಟ್ಟುಕೊಂಡ ಈ ಸಮುದಾಯ ಇಪ್ಪತ್ತನೆಯ ಶತಮಾನದವರೆಗೂ ಬದುಕಿ ಬಾಳಿಕೊಂಡು ಬಂದಿದೆ. ಈ ಹೊಸಕಾಲದಲ್ಲಿ ಬೆಳಗಾವಿ ಜಿಲ್ಲೆಯ ಒಂದು ಗ್ರಾಮವೆಂದು ಗುರುತಿಸಿಕೊಂಡಿದೆ. ಈ ಗ್ರಾಮದ ದೇವತೆಯಾದ ಕರಿಮಾಯಿಗೆ ಒಂದು ಪುರಾಣ, ಚರಿತ್ರೆಯಿರುವಂತೆ ಗೌಡ, ದತ್ತಪ್ಪರಿಗೂ ಅವರವೇ ಆದ ವಂಶಾವಳಿಗಳಿವೆ. ಶಿವಾಪುರದ ಒಳಗೇ ವರ್ಗ ಸಂಘರ್ಷ ಜೋಕುಮಾರಸ್ವಾಮಿ, ಜೈಸಿದನಾಯ್ಕ ಮುಂತಾದ ನಾಟಕಗಳಲ್ಲಿ ಸೂಚಿತವಾದರೆ ಹೇಳತೇನ ಕೇಳದಂಥ ಕಾವ್ಯಗಳಲ್ಲಿ ಸಮುದಾಯದ ಪ್ರಜ್ಞೆಯ ಪಲ್ಲಟಗಳು ಹೊರಶಕ್ತಿಯ ಆಗಮನದೊಂದಿಗೆ ಸೂಚಿತವಾಗುತ್ತವೆ. ನವಿಲೇ ನವಿಲೇ, ಕವಿತೆಯಲ್ಲಿ ಶಿವಾಪುರವನ್ನು ಕವಿದ ಬರದ ಸ್ಥಿತಿ ಮತ್ತು ಆ ಸ್ಥಿತಿ ನೀಗುವ ಸಾಧ್ಯತೆ ಮೇಲಿನ ಕೃತಿಗಳಲ್ಲಿ ಸೂಚಿತವಾದ ನುಡಿಗಟ್ಟಿಗಿಂತ ಭಿನ್ನವಾದ ಇನ್ನೊಂದು ಬಗೆಯಲ್ಲಿ ಮೂಡಿಬರುತ್ತವೆ. ಹೇಳತೇನ ಕೇಳದಲ್ಲಿ ರಾಕ್ಷಸನ ಆಗಮನದಿಂದ ಪಲ್ಲಟ ಪ್ರಾರಂಭವಾಗುತ್ತದೆ.

ಊರಿನ ಹುಡುಗೋರು ದೊಡ್ಡಾಟ ಬಿಟಕೊಟ್ಟು
ನಾಟಕವಾಡ್ಯಾರು ಪಟ್ಟಪೈಲೇಕ

ಆದ್ಯತೆ, ಆಶೋತ್ತರಗಳು ಬದಲಾಗುವ ಇನ್ನೊಂದು ಪರಿಯೆಂದರೆ,

ಹಸಮಕ್ಳ ಸಲುವಾಗಿ ಗರಡೀಯ ಮನಿಕೆಡವಿ
ಹೊಸ ಸಾಲಿ ಕಟ್ಟಿಸೋಣ, – ಬಲೆ ಶೋಭಾ

‘ಕರಿಮಾಯಿ’ ಕಾದಂಬರಿಯಲ್ಲೂ ಶಿವಾಪುರದ ಪ್ರಜೆಗಳಿಗೆ ಗೌಡ ಆಡಿಸುವ ಪಾರಿಜಾತಕ್ಕಿಂತ, ಗುಡಸೀಕರ ಆಡಿಸುವ ನಾಟಕವೇ ಆಕರ್ಷಕವಾಗುವ ಒಂದು ಪ್ರಸಂಗವಿದೆ. ಹಾಗೆಯೇ ಲಗುಮವ್ವನ ಹಾಡಿಗಿಂತ ಬಸವರಾಜನ ರೇಡಿಯೋ ಹೆಚ್ಚಿನ ಕುತೂಹಲ ಹುಟ್ಟಿಸುತ್ತದೆ. ಇಲ್ಲಿ ರಾಕ್ಷಸ ಬರುವುದಿಲ್ಲ, ಬೆಳಗಾವಿ ತನ್ನ ‘ಪ್ರಗತಿ’ಯಿಂದ ಶಿವಾಪುರವನ್ನು ಕಂಗೆಡಿಸುತ್ತದೆ. ಶಿವಾಪುರಕ್ಕೆ ಈಗ ತಾನೂ ಬೆಳಗಾವಿ ಆಗಬೇಕೆಂಬ ಆಸೆ. ಶಿವಾಪುರದವನೇ ಆದ ಗುಡಸ್ಯಾಗೋಳ ಬೆಳಗಾವಿಗೆ ಹೋಗಿ ಜಿ.ಎಚ್. ಗುಡಸೀಕರ ಬಿ.ಎ, ಎಲ್‌ಎಲ್‌.ಬಿ., ಆಗಿ ಮರಳುತ್ತಾನೆ. ಗೌಡ ದತ್ತಪ್ಪರ ಪರಂಪರಾಗತ ಆಳ್ವಿಕೆ ಮುಗಿದು ಸರಕಾರದ ಸೂಚನೆಯಂತೆ ಗ್ರಾಮಪಂಚಾಯಿತಿ ಹೊಸದಾಗಿ ಆಸ್ತಿತ್ವಕ್ಕೆ ಬರುತ್ತದೆ. ಇದರ ಪರಿಣಾಮಗಳ ಕಥನವೇ ಕರಿಮಾಯಿ ಕಾದಂಬರಿಯ ಪ್ರಧಾನ ಆಶಯ.

ಈ ಹೊಸ ಕಥನ ಲಗುಮವ್ವಳ ಹಳೆಯ ಕಥನದ ಮುಂದುವರಿಕೆಯಾಗಿ ಮೂಡಿಬರುವುದು ಮಹತ್ವದ ಸಂಗತಿ. ಅಂದರೆ ಶಿವಾಪುರದ ಜನಪದ ತನ್ನ ಮೂಲಕಥೆಗೆ ಕಾಲದಿಂದ ಕಾಲಕ್ಕೆ ಹೊಸಹೊಸ ಆಖ್ಯಾನಗಳನ್ನು ಸೇರಿಸಿಕೊಂಡು ತನ್ನ ವಿಕಾಸವನ್ನು ದಾಖಲಿಸಿಕೊಳ್ಳುತ್ತ ಬಂದಿದೆಯಷ್ಟೆ. ಗುಡಸೀಕರ ಪಂಚಾಯಿತ ಛೇರ್ಮನ್ ಆದ ನಂತರದ ಘಟನಾವಳಿಗಳೂ ಹೀಗೆ ಒಟ್ಟಾರೆ ಶಿವಾಪುರ ಸಮುದಾಯದ ಕಥನದ ಮುಂದಿನ ಭಾಗಗಳೆಂಬಂತೆ ಬೆಳೆದು ಬರುತ್ತವೆ. ಅಂದರೆ ಈ ಸಮುದಾಯದ ದೃಷ್ಟಿಕೋನದಿಂದಲೇ ಎಲ್ಲವನ್ನು ನೋಡಲಾಗಿದೆ. ಕರಿಮಾಯಿಯ ಪುರಾಣವನ್ನು ಹಾಡುವ ಲಗುವಮವ್ವನಂತೆ ‘ಕರಿಮಾಯಿ’ ಕಥೆಯ ನಿರೂಪಕ ಹೀಗೆ ಸೂಚಿಸಿಬಿಡುತ್ತಾನೆ. “ಇಂಥಾ ಬಂಗಾರದ ತಾಯಿ ಆದಿಗೆ ಆದಿಯ ಹಡೆದವ್ವ, ಕಡೆಯ ಕಡೆ ಗೊತ್ತಿರದವ್ವ, ಇದಿಮಾಯಿ, ಘೋಡಗೇರಿಯ ಕಂಬಾರ ಬಸವಣ್ಣೆಪ್ಪನ ಮಗ, ಭೂಸನೂರುಮಠದ ಸಂಗಯ್ಯನ ಶಿಷ್ಯ, ಸಾವಳಿಗೆ ಶಿವಲಿಂಗೇಶ್ವರ ಮಠದ ಸಿದ್ಧರಾಮ ಸ್ವಾಮಿಗಳ ಭಕ್ತ – ಚಂದ್ರಶೇಖರನಿಗೆ ಬರೆಯುವ ಬುದ್ಧಿಕೊಟ್ಟಳು, ಹಾಗೆಯೇ ಓದುಗರಿಗೆ ತೂಗು ತೊಟ್ಟಿಲ, ಬೆಳ್ಳಿಬಟ್ಟಲದ ಭಾಗ್ಯ, ಫಲಪುತ್ರ ಸಂತಾನದ ಸೌಭಾಗ್ಯ ಕೊಡಲಿ.”

‘ಹೇಳತೇನ ಕೇಳ’, ‘ಕುದರೀ ಸಿದ್ದ’ ಮೊದಲಾದ ಕವಿತೆಗಳ ಈ ಬಗೆಯ ಸಾಲುಗಳನ್ನು ಗಮನಿಸಿ:

ಮೊದಲೀಗೆ ಅಲ್ಲಮ ಪ್ರಭುವಿಗೆ ಶರಣಾರ್ಥಿ
ಕೂಡಿ ಕುಂತ ಜನಕೆಲ್ಲ ನಮ್ಮ ನಮನಾ

ಕಲಿಯುಗದೊಳಗಿನ ಕಥೆಯ ವಿಸ್ತಾರವ
ತಿಳಿಸಿ ಹೇಳುವೆ ಕೇಳಬೇಕ್ರಿ ಜನಾ
(ಹೇಳತೇನ ಕೇಳ)

ಘೋಡಗೇರಿ ಬಸ್ಸಪ್ಪ ಅವರ ಮಗ ಚಂದ್ರಪ್ಪ
ಪದಾಮಾಡಿದಾರ ಭಾಳನಿವಳಾ
(ಹೇಳತೇನ ಕೇಳ)

ಕತಿ | ಹೇಳತೇನ್ರಿ ಮುಂದಿಂದಾ
ಆಗ | ಧಾಂಗ ಒಂದು ಸಹ ಕುಂದಾ
ಇರು | ಗುರುವೆ ನಾಲಗೆಯ ಹಿಂದಾ
ನಾ | ನಿಮ್ಮ ಕರುಣದ ಕಂದಾ
(ಹೇಳತೇನ ಕೇಳ)

ಕೇಳೀರೇನರಿ ಕತಿಯ ಕೇಳೀರೇನು|
ಕುದರೀ ಸಿದ್ಧನ ಕತಿಯ ಕೇಳೀರೇನು||
(ಕದರೀ ಸಿದ್ಧ)

ಕುದರಿ ಸಿದ್ಧರ ಜೋಡಿ ತುಳಿದಾಡಿ ಹೋಯ್ತೆಂದು
ಮಾತಾಡಿಕೊಳ್ಳುವರು ಮಂದಿ
ಕಾಡಿsಗೆ ಎಡಿಮಾಡಿ ನೈವೇದ್ಯ ನೀಡುವರು
ಕುದರೀ ಸಿದ್ಧರ ಕತಿಯ ಹಾಡಿ||
(ಕುದರೀ ಸಿದ್ಧ)

ಇನ್ನು ಕಂಬಾರರ ಹಲವು ನಾಟಕಗಳಲ್ಲಿ ಕಂಡುಬರುವ ಭಾಗವತರು, ಸೂತ್ರಧಾರರು, ನಿರ್ದೇಶಕರು, ಮೇಳಗಳು ಇವುಗಳನ್ನು ಗಮನಿಸಿದಾಗ ಕೂಡ ಕಥನದ ಬೇರೆ ಬೇರೆ ಮಾದರಿಗಳು ನಮ್ಮ ಅರಿವಿಗೆ ಬರುತ್ತವೆ. ‘ಕರಿಮಾಯಿ’ ಒಂದು ಕಾದಂಬರಿಯಾಗಿದ್ದರೂ, ಆಧುನಿಕ ಸಮಾಜದ ಕಥೆಯನ್ನೇ ಹೇಳಿದರೂ ಕಂಬಾರರು ತಮ್ಮ ಯಾವತ್ತೂ ಕಥನಕ್ರಮವನ್ನು ಬಿಟ್ಟುಕೊಟ್ಟಿಲ್ಲ ಎಂಬುದು ಗಮನಾರ್ಹ. ‘ಕರೀಮಾಯಿ’ ಒಂದು ದೀರ್ಘ ಜಾನಪದ ಕಥೆಯೂ ಅಲ್ಲ; ಅಥವಾ ಟಿಪಿಕಲ್ ವಾಸ್ತವವಾದೀ ಇಲ್ಲವೆ ನವ್ಯ ಕಾದಂಬರಿಯ ನಮೂನೆಯದೂ ಅಲ್ಲ; ದೇಶಿಯ ಕಥನ ಪ್ರಕಾರವೊಂದಕ್ಕೆ ಆಧುನಿಕ, ಸಮಕಾಲೀನ, ಸಾಮಾಜಿಕ ಅನುಭವಗಳನ್ನು ಹೇಗೆ ಒಗ್ಗಿಸಿಕೊಳ್ಳುವುದು ಎಂಬುದೇ ಇಲ್ಲಿನ ಸೃಜನಶೀಲ ತುರ್ತು. ಇಂಥದೊಂದು ಪ್ರಯತ್ನ ಎಂ.ಎಸ್. ಪುಟ್ಟಣ್ಣನವರ ಕಾದಂಬರಿಗಳಲ್ಲಿ – ಅಂದರೆ ಕನ್ನಡ ಕಾದಂಬರಿಯ ಪ್ರಾರಂಭಾವಸ್ಥೆಯಲ್ಲಿ ಕಂಡಿತ್ತು. ಯಾಕೋ ಏನೋ ಈ ಪ್ರಯತ್ನ ಮುಂದಿನ ದಿನದಲ್ಲಿ ಕಾಣೆಯಾಯಿತು. ಮತ್ತೆ ಇಂಥ ಪ್ರಯತ್ನ ಕಾಣುವುದು ದೇವನೂರ ಮಹಾದೇವರ ‘ಕುಸುಮಬಾಲೆ’ಯಲ್ಲೇ. ಅಂದರೆ ಕಂಬಾರರು ‘ಕರಿಮಾಯಿ’ ಕಾದಂಬರಿ ರಚನೆಯಲ್ಲಿ ದೇಶೀಯ ಮಾದರಿಯೊಂದನ್ನು ಕಂಡುಕೊಳ್ಳಲು ಪ್ರಯತ್ನಿಸಿದರು. ಕುತೂಹಲದ ಸಂಗತಿ ಎಂದರೆ ನಾಟಕಗಳಲ್ಲಿ ಅವರ ಇಂಥ ಪ್ರಯತ್ನಗಳು ಮುಂದುವರಿದ ಹಾಗೆ ಕಂಡರೂ ಸ್ವತಃ ತಮ್ಮ ಮುಂದಿನ ಕಾದಂಬರಿಗಳಲ್ಲಿ – ‘ಸಿಂಗಾರೆವ್ವ ಮತ್ತು ಅರಮನೆ’, ‘ಜಿ.ಕೆ. ಮಾಸ್ತರರ ಪ್ರಣಯ ಪ್ರಸಂಗ’ – ರಚನೆಯ ದೃಷ್ಟಿಯಿಂದ ಇಂಥ ಶೋಧಕ್ಕೆ ಮುಂದಾಗಲಿಲ್ಲ. ಕಂಬಾರರು ಈಗ ಕಾವ್ಯ ರೂಪದ ಕಾದಂಬರಿಯೊಂದನ್ನು ಬರೆಯುತ್ತಿದ್ದಾರೆ. ತನ್ಮೂಲಕ ಕಾದಂಬರಿ ಪ್ರಕಾರದಲ್ಲೇ ಹೊಸದೊಂದು ಮಾದರಿಗಾಗಿ ಪ್ರಯತ್ನಿಸುತ್ತಿದ್ದಾರೆ. ಲಂಕೇಶರು ‘ಬಿರುಕು’ ಮಾದರಿಯನ್ನು ಬಿಟ್ಟುಕೊಟ್ಟು ‘ಮುಸ್ಸಂಜೆ…’ಯಲ್ಲಿ ದೇಶೀಯ ಮಾದರಿಯೊಂದಕ್ಕಾಗಿ ಪ್ರಯತ್ನಪಟ್ಟರು. (‘ಮುಸ್ಸಂಜೆ..’ಮತ್ತು ಕರಿಮಾಯಿ’ ಒಂದೇ ವರ್ಷ ಪ್ರಕಟವಾದದ್ದು ಕುತೂಹಲದ ಸಂಗತಿ) ಅಂದರೆ ಭಾರತೀಯ ಲೇಖಕ ಕಾದಂಬರಿ ರಚನೆಯಲ್ಲಿ ತನ್ನದೇ ಆದ ದಾರಿಯನ್ನು ಕಂಡುಕೊಳ್ಳಲು ಯತ್ನಿಸಿದ್ದಾನೆ. ಈ ದೃಷ್ಟಿಯಿಂದ ಕೂಡ ಕಂಬಾರರ ‘ಕರಿಮಾಯಿ’ ಅಧ್ಯಯನ ಯೋಗ್ಯ. ಪಾತ್ರಕಲ್ಪನೆ, ಕಥಾ ಸಂವಿಧಾನದ ಸ್ವರೂಪ, ನಿರೂಪಕನ ಮಧ್ಯಪ್ರವೇಶಗಳು ಮುಂತಾದ ಅನೇಕ ನೆಲೆಗಳಲ್ಲಿ ಕಂಬಾರರು ತಮ್ಮ ಪರಂಪರೆಗೆ ಋಣಿಯಾಗಿರುವುದು ಸ್ಪಷ್ಟವಾಗಿಯೇ ಇದೆ.

‘ಕರಿಮಾಯಿ’ ಕಾದಂಬರಿಯಲ್ಲಿ ಹಲವು ಅಧ್ಯಾಯಗಳಿವೆಯಷ್ಟೆ. (ಈ ಅಧ್ಯಾಯಗಳಿಗೆ ಪ್ರತ್ಯೇಕ ಶೀರ್ಷಿಕೆಯೂ ಉಂಟು.) ಈ ಅಧ್ಯಾಯಗಳನ್ನು ಸ್ವತಂತ್ರ ಘಟಕಗಳೆಂಬಂತೆಯೂ ಓದಿ ಆನಂದಿಸಬಹುದು. ಅಂದರೆ ಕಾದಂಬರಿ ಸರಳ ರೇಖಾತ್ಮಕ ತರ್ಕವನ್ನು ಬಹುಮಟ್ಟಿಗೆ ಬಿಟ್ಟುಕೊಟ್ಟು ಹಲವು ಪ್ರಸಂಗಗಳ ಸಂಯೋಜನೆಯಂತಿದೆ. ಒಂದು ಮುಖ್ಯ ಪ್ರಸಂಗಕ್ಕೆ ಅನೇಕ ಉಪಪ್ರಸಂಗಗಳಿವೆ. ಇವುಗಳನ್ನು ಒಂದುಗೂಡಿಸುವ ಸ್ಥೂಲ ಎಳೆಯೊಂದು ಕಥೆಯಲ್ಲಿ ಇದ್ದರೂ ಉಪಾಖ್ಯಾನಗಳೇ ಹೆಚ್ಚು ಸ್ವಾರಸ್ಯಪೂರ್ಣವಾಗಿವೆ. ಪ್ರತಿಯೊಂದು ಪಾತ್ರಕ್ಕೂ ತನ್ನದೇ ಆದ ಇತಿಹಾಸವಿದೆ. ಪುರಾಣವೂ ಇದೆ. ಮುಖ್ಯ ಕಥೆಯನ್ನು ಹೇಳಿ ಮುಗಿಸಬೇಕೆಂಬ ಆತುರವಿಲ್ಲದೆ ನಿರೂಪಕ ಎಲ್ಲವನ್ನು ವಿವರವಾಗಿ ಸಾವಧಾನದಿಂದ ನಿರೂಪಿಸುತ್ತಾ ಹೋಗುತ್ತಾನೆ. ಮುಖ್ಯಕಥೆಯ ದೃಷ್ಟಿಯಿಂದ ಮೇಲುನೋಟಕ್ಕೆ ಮುನಿಯೆಲ್ಯಾನು ನಾಯೆಲ್ಯಾ, ಅಂಗೀಯೆಲ್ಯಾ ಆದ ಉಪಕಥೆ, ಪ್ರಶ್ನೋತ್ತರ ಮಾಸ್ತರ, ನಿಂಗೂ ಮುಂತಾದವರ ವೈಯಕ್ತಿಕ ಚರಿತ್ರೆಗಳು ಮುಖ್ಯವೆನಿಸದಿದ್ದರೂ ನಿರೂಪಕ ಅವುಗಳಿಗೂ ಅಷ್ಟೇ ಪ್ರಾಮುಖ್ಯ ಕೊಟ್ಟು ವರ್ಣಿಸುತ್ತಾನೆ. ವಿಶ್ಲೇಷಣೆಗಿಂತ ವರ್ಣನೆ ಮುಖ್ಯವಾಗುತ್ತದೆ. ಹಾಗಾಗಿ ವಿವರಗಳು, ಘಟನೆಗಳು ಒಂದಕ್ಕೆ ಒಂದರ ಸಮೀಕರಣದಲ್ಲಿ ನೇರವಾಗಿ ಕಥೆಯ ಕೇಂದ್ರಕ್ಕೆ ದುಡಿಯದೆ ಹರಡಿಕೊಂಡಿವೆ ಎನಿಸಿದರೂ ಇದರಿಂದಾಗಿ ಬಂಧ ಶಿಥಿಲವಾಗಿದೆ ಎನಿಸಿದರೂ ಅದು ಕಾದಂಬರಿಯ ದೋಷವೆಂದು ಅನ್ನಿಸುವುದಿಲ್ಲ. ಅಂದರೆ ಸಾಂಪ್ರಾದಾಯಿಕ ವಾಸ್ತವವಾದೀ ಇಲ್ಲವೆ ನವ್ಯ ಕಾದಂಬರಿಯಿಂದ ನಾವು ಸಾಮಾನ್ಯವಾಗಿ ನಿರೀಕ್ಷಿಸುವುದಕ್ಕಿಂತ ಭಿನ್ನವಾದುದೊಂದಕ್ಕೆ ಓದುಗನನ್ನು ಒಪ್ಪಿಸಿಕೊಳ್ಳುವುದರಲ್ಲಿ ಲೇಖಕರು ಯಶಸ್ವಿಯಾಗುತ್ತಾರೆ. ಅಷ್ಟೇ ಅಲ್ಲ ವಾಸ್ತವೇತರ ಎಂಬ ವಿಷಯಗಳನ್ನು ವಾಸ್ತವ ವಿವರಗಳ ಜೊತೆ ಸಹಜವೆಂಬಂತೆ ಇಡಲು ಲೇಖಕರು ಏನೂ ಸಂಕೋಚಪಟ್ಟುಕೊಂಡಿಲ್ಲ ಅಥವಾ ಅವುಗಳಿಗೆ ತಾರ್ಕಿಕ ಸಮಾಧಾನ ಸೂಚಿಸುವ ಗೋಜಿಗೂ ಹೋಗಿಲ್ಲ. ಹೀಗೆ ವಸ್ತು, ತಂತ್ರ ಎರಡೂ ನೆಲೆಯಲ್ಲಿ ಲೇಖಕರು ವಾಸ್ತವತೆಗೆ ಕಟ್ಟುಬೀಳದೆ ಅದಕ್ಕೆ ಹೊರತಾದ ಆಯಾಮಗಳನ್ನು ಆರಾಮವಾಗಿ ಒಳಗೊಂಡಿದ್ದಾರೆ ಕರಿಮಾಯಿ ಮೈದುಂಬುವ ದೇವರೇಸಿ ಪಾತ್ರ ಚಿತ್ರಣದಲ್ಲಿ ಈ ಅಂಶ ತುಂಬ ಚೆನ್ನಾಗಿ ವ್ಯಕ್ತವಾಗುತ್ತದೆ. ಎಲ್ಲವನ್ನೂ ‘ಮಿಥ್’ ಮಾಡುವ ಪರಿ ಕಾದಂಬರಿಯ ಒಟ್ಟು ಸ್ವರೂಪಕ್ಕೆ ಅನುಗುಣವಾಗಿಯೇ ಇದೆ. ವಾಸ್ತವತೆಯ ಭ್ರಮೆಯನ್ನು ಹುಟ್ಟಿಸುವ ಯಾವ ಸೋಗನ್ನೂ ನಿರೂಪಕ ಹಾಕುವುದಿಲ್ಲ.  ನಾವು ಅವನ ಕಥೆಯನ್ನು ಯಾವತ್ತೂ ಕೇಳುತ್ತಿದ್ದೇವೆ ಎಂಬುದನ್ನು ಮತ್ತೆಮತ್ತೆ ನೆನಪು ಮಾಡಿಕೊಡುವಂತೆ ಕಥೆಯಲ್ಲಿ ಮಧ್ಯಪ್ರದೇಶ ಮಾಡುತ್ತಲೇ ಇರುತ್ತಾನೆ. ‘ಮಿಥ್’ಅನ್ನು ಸೃಷ್ಟಿಸುತ್ತ, ಅದನ್ನು ಒಡೆಯುತ್ತ, ಭೂತ – ವರ್ತಮಾನಗಳಲ್ಲಿ ಓಡಾಡುತ್ತ, ಘಟನೆಗಳಿಗೆ ಏಕಕಾಲದಲ್ಲಿ ಸಾಕ್ಷಿಯೂ, ವ್ಯಖ್ಯಾನಕಾರನೂ ಆಗಿರುತ್ತಾನೆ: “ನಮ್ಮ ಕಥೆಯಲ್ಲಿ ಕಾಲಿಟ್ಟ ಹೊಸ ನಾಯಕಿಯನ್ನು ಕರಿಮಾಯಿಗೆ ಕೈಮುಗಿದು ಸ್ವಾಗತಿಸೋಣ. ಊರಿನಲ್ಲಿ ಹೊಸಗಾಳಿ ಸುಳಿಯಲೆಂದು, ಕೂಸುಗಳ ಆರೋಗ್ಯ ಕೆಡದಿರಲೆಂದು, ಹಚ್ಚಿದ ದೀಪ ಕಳೆಯದಿರಲೆಂದು ಹಾರೈಸೋಣ.”

ಹಾಗೆಂದು ‘ಕರಿಮಾಯಿ’ ಕೇವಲ ತನ್ನ ಕಥನ ಸ್ವರೂಪದಲ್ಲಿ ಆಧುನಿಕ ಓದುಗರನ್ನು ಮೆಚ್ಚಿಸಬಯಸುವ ಕೃತಿಯಲ್ಲ. ಅದು ಅನೇಕ ಮುಖ್ಯ ಸಂಗತಿಗಳನ್ನು ತನ್ನ ಮೈಮೇಲೆ ಹಾಕಿಕೊಂಡಿರುವ ಮಹತ್ತ್ವಾಕಾಂಕ್ಷಿ ರಚನೆ. ಹೊಸ ಮೌಲ್ಯಗಳ ಪ್ರವೇಶದಿಂದ ಒಂದು ನಂಬಿಕೆಗಳ ಲೋಕ ಕಂಪಿಸುವ, ಸಮುದಾಯ ಪ್ರಜ್ಞೆ ಆಘಾತಕ್ಕೆ ಒಳಗಾಗುವ, ಹೊಸದೊಂದು ಆರ್ಥಿಕ, ಸಾಮಾಜಿಕ ಜೀವನಕ್ರಮದ ಮುನ್ಸೂಚನೆ ಕಾಣಿಸುವ ಚಿತ್ರಗಳನ್ನು ಅದು ದಟ್ಟವಾಗಿ ಆದರೆ ತನಗೇ ಅನನ್ಯವೆನ್ನಿಸುವ ಕಾಮಿಕ್ ಧಾಟಿಯಲ್ಲಿ ಕಟ್ಟಿಕೊಡುತ್ತದೆ. (ಈ ಕಾಮಿಕ್ ಧಾಟಿ ಹಳೆಯದನ್ನು ಕುರಿತು ಹಳಹಳಿಕೆಯನ್ನು ಒಂದು ಮಟ್ಟದಲ್ಲಿ ನಿರೋಧಿಸುತ್ತದೆ). ‘ಕರಿಮಾಯಿ’ಯ ಮಿಥ್ ಒಡೆಯುವುದಕ್ಕೂ, ಶಿವಾಪುರದ ಜನರ ಸಮುದಾಯ ಪ್ರಜ್ಞೆ ಅಳ್ಳಕಗೊಳ್ಳುವುದಕ್ಕೂ ಸಂಬಂಧ ಇದ್ದೇ ಇದೆ. ಹೊಸ ಮೌಲ್ಯಗಳು ಕೇವಲ ಗ್ರಾಮಪಂಚಾಯಿತಿ ಮೂಲಕ ಬರುವುದಿಲ್ಲ. ಅವು ಬೆಳಗಾವಿ ಸೃಷ್ಟಿಸುವ ಹೊಸ ಕನಸುಗಳ ರೂಪದಲ್ಲಿಯೂ ಬರುತ್ತವೆ. ಗುಡಸೀಕರ ಶಿವಾಪುರಕ್ಕೆ ತರುವ ವಿದೇಶೀ ಬ್ರಾಂದಿ, ಸಿಗರೇಟು ಮುಂತಾದ ಅನೇಕ ಭೌತಿಕ ವಸ್ತುಗಳ ರೂಪದಲ್ಲಿ ಕಾಣಿಸಿಕೊಳ್ಳುವಂತೆ, ಪೊಲೀಸ್ ಸ್ಟೇಷನ್, ಕೋರ್ಟ್ ಮುಂತಾದ ವಸಾಹತುಶಾಹಿ ಸಂಸ್ಥೆಗಳ ರೂಪದಲ್ಲಿಯೂ ವ್ಯಕ್ತವಾಗುತ್ತವೆ. ಫೌಜುದಾರರು, ವಕೀಲರು, ಸರಕಾರಿ ಅಧಿಕಾರಿಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತವೆ. ಒಂದು ಕಡೆ ಬ್ರಿಟಿಷ್ ಸರಕಾರ: ಇನ್ನೊಂದು ಕಡೆ ಗಾಂಧಿ ನೇತೃತ್ವದ ಸ್ವಾತಂತ್ರ್ಯ ಚಳುವಳಿ. ಒಂದು ಪರಂಪರಾಗತ ಜಮೀನ್ದಾರಿ ವ್ಯವಸ್ಥೆಗೆ ಒಗ್ಗಿಹೋದ ಜನಪದಕ್ಕೆ ಈ ಎರಡೂ ಹೊಸವು: ಅನ್ಯ. ಸ್ವಾರಸ್ಯದ ಸಂಗತಿ ಎಂದರೆ ಹಳೆಯ ವ್ಯವಸ್ಥೆಯ ಪ್ರತಿನಿಧಿಯಾದ ಗೌಡ, ಹೊಸ ವ್ಯವಸ್ಥೆಯ ಪ್ರತಿನಿಧಿಯಾದ ಗುಡಸೀಕರ ಇಬ್ಬರೂ ಗಾಂಧಿಯನ್ನು ನೆನಸುತ್ತಾರೆ! ಕಾದಂಬರಿಯು ವಸಾಹತುಶಾಹಿ ಕ್ರೌರ್ಯವನ್ನೂ, ಸ್ವರಾಜ್ಯದ ಹಂಬಲಿಕೆಯನ್ನೂ ಸೂಕ್ಷ್ಮವಾಗಿ ಧ್ವನಿಸುತ್ತದೆ. ತಮ್ಮ ಊರು ಬೆಳಗಾವಿಯ ಹಾಗೆ ಆಗಬೇಕೆಂದು ಆಸೆಪಡುವವರೂ ಬೆಳಗಾವಿ ಪೊಲೀಸರಿಗೆ, ಕೋರ್ಟಿಗೆ, ಸರಕಾರಕ್ಕೆ ಭಯಪಡುತ್ತಾರೆ! ಈ ಆಸೆ, ಈ ಭಯ, ಸ್ವರಾಜ್ಯ ಸಂಪಾದನೆಯ ಮುನ್ಸೂಚನೆ ಇವೆಲ್ಲ ಒಟ್ಟಿಗೇ ಆಕ್ರಮಿಸಿ ಶಿವಾಪುರಸ ಜನಪದವನ್ನು ತಬ್ಬಿಬ್ಬು ಮಾಡಿದಂತಿದೆ. ಹಳತು – ಹೊಸತರ ಒಂದು ತೀರಾ ಮೂರ್ತವಾದ, ನಿರ್ಣಾಯಕ ಪ್ರಸಂಗ ನಿಂಗೂ ತನ್ನ ಹೆಂಡತಿಯನ್ನು – ಆಕೆಯ ಜೊತೆ ಲೈಂಗಿಕ ಸಂಬಂಧವಿಟ್ಟುಕೊಂಡಿದ್ದ ತನ್ನ ಅಪ್ಪನನ್ನೂ ಕೊಲೆ ಮಾಡಿದಾಗ ಏರ್ಪಡುತ್ತದೆ. ದೇಶೀ ನ್ಯಾಯಪದ್ಧತಿಗೂ ಏರ್ಪಡುವ ಒಂದು ಮೌಲಿಕ ಸಂಘರ್ಷವಾಗಿ ಇಡೀ ಪ್ರಸಂಗವನ್ನು ಚರ್ಚಿಸಲು ಸಾಧ್ಯವಿದೆ. ಹಾಗೆಯೇ ಹಳ್ಳಿಯ ಪಂಚರು ನಡುಸುತ್ತಿದ್ದ ಸಭೆಗಳಿಗೂ ಗುಡಸೀಕರ ನಡೆಸುವ ‘ಮೀಟಿಂಗ್’ಗಳಿಗೂ ವೈದೃಶ್ಯ ಹೊಳೆಯಿಸುವ ಲೇಖಕರು ಒಂದು ಹೊಸ ಸಾಮಾಜಿಕ ಪ್ರಕ್ರಿಯೆಯನ್ನೇ ಓದುಗರಿಗೆ ಕಾಣಿಸಿಬಿಡುತ್ತಾರೆ. ಪಂಚಾಯಿತಿಗೆ ಚುನಾವಣೆಗಳು ನಡೆದಾಗ ಗೌಡನ ಪಕ್ಷದವರು ಕರಿಮಾಯಿಯ ಭಂಡಾರ ಹಂಚಿದರೆ, ಗುಡಸೀಕರನ ಪಾರ್ಟಿಯವರು ಮಹಿಳಾ ಮತದಾರರನ್ನು ಓಲೈಸಲು ಬೆಳಗಾವಿಯಿಂದ ಬ್ರಾಗಳನ್ನು ತರಿಸಿ ಹಂಚುತ್ತಾರೆ! ಹಳೆಯ ವ್ಯವಸ್ಥೆ ಅದೆಷ್ಟೇ ಸುಂದರವಾಗಿ ತೋರುತ್ತಿರಲಿ ಅಥವಾ ನಿರೂಪಕನಿಗೆ ಅದರ ಬಗ್ಗೆ ಭಾವಪಕ್ಷಪಾತವಿರಲಿ, ಹೊಸ ವ್ಯವಸ್ಥೆ ಎಷ್ಟೇ ಭಯಾನಕವಾಗಿ ಕಾಣಿಸುತ್ತಿರಲಿ ಅಥವಾ ಅದರ ಬಗ್ಗೆ ವಿರೋಧವಿರಲಿ ಚಲನೆ ಅನಿವಾರ್ಯವೆಂಬ ಸತ್ಯವನ್ನು ಒಂದು ನಿರ್ಣಾಯಕ ಐತಿಹಾಸಿಕ ಸಂದರ್ಭದ ಹಿನ್ನಲೆಯಲ್ಲಿ ಕಾದಂಬರಿ ಧ್ವನಿಸುತ್ತದೆ. ಆದ್ದರಿಂದಲೇ ನಿರೂಪಕ ಇಲ್ಲೀಗಿ ನಮ್ಮ ಕತಿ ಸಂಪೂರ್ಣವಾಯ್ತು ಎಂದು ಸಾಂಪ್ರದಾಯಿಕ ಮುಕ್ತಾಯ ಹಾಡಿದರೂ ಅದು ಪರ್ಯಾಯವಾಗಿ ಹೊಸ ಕಥೆಯ, ಅಂದರೆ ಹೊಸ ಸಮಾಜದ ಆರಂಭವನ್ನಷ್ಟೇ ಸೂಚಿಸುತ್ತದೆ.

ಕಾದಂಬರಿಯಲ್ಲಿ ಕೆಲವು ಸಮಸ್ಯೆಗಳಿವೆ, ಮೇಲುನೋಟಕ್ಕೇ ಎದ್ದುಕಾಣುವ ಸಮಸ್ಯೆ ಎಂದರೆ: ಗೌಡ – ದತ್ತಪ್ಪರು ಪ್ರತಿನಿಧಿಸುವ ವ್ಯವಸ್ಥೆಗೂ ಗುಡಸೀಕರ ಪ್ರತಿನಿಧಿಸುವ ವ್ಯವಸ್ಥೆಗೂ ತಿಕ್ಕಾಟ ಸ್ಪಷ್ಟವಾಗಿಯೇ ಇದೆ. ಆದರೆ ಹಳೆಯ ವ್ಯಸ್ಥೆಯೊಳಗಣ ಸಂಘರ್ಷ, ಹೊಸ ವ್ಯವಸ್ಥೆ ತರಬಹುದಾದ ಇತ್ಯಾತ್ಮಕ ಬದಲಾವಣೆಯ ಸಾಧ್ಯತೆಗಳು ನಿರೂಪಣೆಯಲ್ಲಿ ಗೌಣವಾಗುತ್ತವೆ. ಅಂದರೆ ಹಳತು – ಹೊಸತು ಅವುಗಳ ಎಲ್ಲ ಗುಣಾವಗುಣಗಳ ಸಮೇತ ಸಂಘರ್ಷಕ್ಕೆ ಒಳಗಾಗುವುದಿಲ್ಲ. ಹೊಸದರ ವಿಕೃತಿಯೇ ಹೆಚ್ಚಾಗಿ ವಿಜೃಂಭಿಸುತ್ತದೆ. “ಗೌಡ ದತ್ತಪ್ಪನ ಆಳಿಕೆಯಲ್ಲಿ ಜನ ಅನ್ಯಾಯವಾಯಿತು ಅನ್ನಲಿಲ್ಲ, ಕಾಲ ಬದಲಾಯಿತು ಅನ್ನಲಿಲ್ಲ, ಕಲಿಕಾಲ ಕಾಲಿಟ್ಟಿತು ಅನ್ನಲಿಲ್ಲ, ಹಾಗಿದ್ದರು” ಎಂದು ನಿರೂಪಕ ದಾಖಲಿಸುವಾಗ ಗುಡಸೀಕರನ ಎಲ್ಲ ಚಟುವಟಿಕೆಗಳೂ ಲೇವಡಿಗೆ ಒಳಗಾಗುವಾಗ ಕಾದಂಬರಿಯ ಸಹಾನುಭೂತಿ ಹಳೆಯದರ ಕಡೆಗೆ ವಾಲಿರುವುದು ಸ್ಪಷ್ಟವಾಗುತ್ತದೆ. ದತ್ತಪ್ಪ, ಲಗುಮವ್ವ ಕೆಲವೊಮ್ಮೆ ತಮಾಷೆಗೆ ಒಳಗಾದರೂ ಗೌಡನ ಪಾತ್ರ ಒಂದೇ ಆಯಾಮದ್ದು ಅನ್ನಿಸುತ್ತದೆ. ಕಂಬಾರರ ಬಹಳಷ್ಟು ಕೃತಿಗಳಲ್ಲಿ ಗೌಡ ಕೆಡುಕಿನ ಪ್ರತಿರೂಪದ ಏಕ ಆಯಾಮದ ಪಾತ್ರವಾಗಿ ಮೂಡುವಂತೆ ‘ಕರಿಮಾಯಿ’ಯ ಗೌಡ ಒಳಿತಿನ ಪ್ರತಿರೂಪವೆಂಬಂತೆ ಚಿತ್ರಿತವಾಗಿದ್ದಾನೆ. ಗೌಡನ ಮಗ ಶಿವನಿಂಗನ ಪಾತ್ರ ತುಂಬಾ ಅಸ್ಪಷ್ಟವಾಗಿದೆ, ಕಾದಂಬರಿಯಲ್ಲಿ ಅವನ ಪಾತ್ರ ಸ್ಪಷ್ಟವಾಗುವುದಿಲ್ಲ. ಅವನು ಗೌಡನ ಮುಂದಿನ ಪೀಳಿಗೆಯನ್ನು ಸೂಚಿಸುವ ಪಾತ್ರವಾದರೂ ಕಾದಂಬರಿ ದಾಖಲಿಸುವ ಬದಲಾವಣೆಯ ಪ್ರಕ್ರಿಯೆಯಲ್ಲಿ ಅವನಿಗೊಂದು ನಿರ್ಣಾಯಕ ಪಾತ್ರವಿದೆ ಅನ್ನಿಸುವುದಿಲ್ಲ. ಹೀಗಾಗಿ ನಿರೂಪಕನ ನೋಟದಲ್ಲೇ ಒಂದು ಬಗೆಯ ಪ್ರತಿಗಾಮಿತ್ವ ಸೂಚಿತವಾಗುತ್ತದೆ. ಆದರೆ ಕಾದಂಬರಿ ತನ್ನ ನಿರೂಪಕನನ್ನೂ ಮೀರಿ ಬಿಡುತ್ತದೆ. ನಿರೂಪಕ ಬದಲಾವಣೆಯ ಪರ ಇಲ್ಲ ಎನಿಸಿದರೂ, ಬದಲಾವಣೆಯನ್ನು ಕುರಿತ ಅವನ ವ್ಯಾಖ್ಯಾನಗಳು ಪಕ್ಷಪಾತದಿಂದ ಕೂಡಿವೆ ಎನಸಿದರೂ ಬದುಕು ನಿಷ್ಠುರವಾಗಿ ಚಲಿಸುವ ಸತ್ಯವನ್ನು ಕಾದಂಬರಿ ದಾಖಲಿಸಿಬಿಡುತ್ತದೆ. ಹೊಸದನ್ನು ಸ್ವಾಗತಿಸುವಲ್ಲಿ ಅಸಹನೆ, ವಿರೋಧ ಕಂಡುಬಂದರೂ ಅದರ ಆಗಮನದ ಸತ್ಯ ನಿರಾಕೃತವಾಗುದಿಲ್ಲ. ಇಂಥ ಪರಿಸ್ಥಿತಿ ‘ಕರಿಮಾಯಿ’ ಕಾದಂಬರಿಗೆ ಸಂಬಂಧಿಸಿದ್ದು ಎಂದೇನೂ ಅಲ್ಲ, ಬದಲಾವಣೇಯೇ ಪ್ರಧಾನ ಸತ್ಯಜಿತ್‌ರಾಯ್ ಅವರ ಶ್ರೇಷ್ಠ ಚಲನಚಿತ್ರ ಕೃತಿಗಳಲ್ಲಿ ಒಂದಾದ ‘ಜಲಸಾ ಘರ’ದ  ಕೇಂದ್ರ ಸಮಸ್ಯೆಯೂ ಇದೇ ಬಗೆಯದೇ. ಅಂದರೆ ನಮ್ಮ ಸಾಹಿತಿ ಕಲಾವಿದರು ಬದಲಾವಣೆಯ ಪ್ರಕ್ರಿಯೆಯನ್ನು ದಾಖಲಿಸುವ ಆದರೆ ಆ ಬದಲಾವಣೆಯ ದಿಕ್ಕುದೆಸೆಗಳ ಬಗ್ಗೆ ಸ್ವತಃ ಇಟ್ಟುಕೊಂಡಿರುವ ಧೋರಣೆ – ಇವುಗಳ ಆಂತರಿಕ ಸಂಘರ್ಷ ಅಂತಿಮವಾಗಿ ಸೃಷ್ಟಿಸುವ ಆಕೃತಿಗಳ ಸ್ವರೂಪ ಸಾಹಿತ್ಯ ವಿಮರ್ಶೆಗೆ ಕೆಲವೊಂದು ಮಹತ್ವದ ಸವಾಲುಗಳನ್ನು ಒಡ್ಡುತ್ತದೆ. ಈ ಪ್ರಶ್ನೆಗೆ ಮುಖಾಮುಖಿಯಾಗದೆ ಕಲಾಕೃತಿಗಳನ್ನು ಸರಳವಾಗಿ ಪ್ರತಿಗಾಮಿ – ಪ್ರಗತಿಗಾಮಿ ಎಂದು ವಿಂಗಡಿಸುವುದು ಅಷ್ಟೇನೂ ಅಪೆಕ್ಷಣೀಯವಾದ ಕೆಲಸವಲ್ಲ. ಅದು ಸಾಹಿತ್ಯ ವಿಮರ್ಶೆಯನ್ನು ತೀರಾ ಹಗುರ ಮಾಡಿಬಿಡುತ್ತೆ.

ನಾನು ‘ಕರಿಮಾಯಿ’ ಕಾದಂಬರಿಯನ್ನು ಮೊದಲು ಓದಿದ್ದು ೧೯೭೮ರಲ್ಲಿ. “ಹೊಸ ಮೌಲ್ಯಗಳನ್ನು ಹಳೆಯ ಮೌಲ್ಯಗಳ ಹಿನ್ನೆಲೆಯಲ್ಲಿ ಸಮರ್ಥವಾಗಿ ವಿಶ್ಲೇಷಿಸದೆ, ಇಲ್ಲವೆ ಹೊಸ ಮೌಲ್ಯಗಳನ್ನು ಮುಂದಿಟ್ಟುಕೊಂಡು ಹಳೆಯ ಮೌಲ್ಯಗಳನ್ನು ಪುನರ್ವಿಮರ್ಶಿಸದೆ ಕಂಬಾರರು ಇರುವುದನ್ನೇ ಶ್ರೇಷ್ಠವೆಂದು ಭಾವಿಸುತ್ತ ಪ್ರತಿಗಾಮಿಗಳಾಗಿ ಬಿಡುತ್ತಾರೆ” ಎಂಬುದು ನನ್ನ ಅಂದಿನ ನಿಲುವಾಗಿತ್ತು. ಈಗಲೂ ಈ ನಿಲುವಿನಲ್ಲಿ ಮೂಲಭೂತವಾದ ಬದಲಾವಣೆಯೇನೂ ಆಗಿಲ್ಲ, ಆದರೆ ಕೇವಲ ಇಂಥ ನಿಲುವಿನಿಂದಲೇ ಕೃತಿಯನ್ನು ಪ್ರವೇಶಿಸಿದರೆ ಅದು ಬಂದು ಕಣ್ಣುಪಟ್ಟಿಯಾಗಿ ಕೃತಿಯ ಇನ್ನಿತರ ಮಹತ್ವದ ಸಂಗತಿಗಳು ಗೋಚರಿಸದೇ ಹೋಗಬಹುದು ಎನ್ನಿಸಿತು. ವಿಮರ್ಶೆಯ ಮಾರ್ಗ ಯಾವುದೇ ಇರಲಿ, ಅದು ಒಂದು ಕೃತಿಯಿಂದ ಪಡೆಯಬಹುದಾದಷ್ಟನ್ನೂ ಪಡೆಯಲು ಅಡ್ಡಿಯಾಗಬಾರದು. ಒಂದು ಬಗೆಯ ಓದು ಇಂಥ ಅಡ್ಡಿಗಳನ್ನು ಒಡ್ಡಿದರೆ ಓದಿನ ಕ್ರಮವನ್ನು ಬದಲಾಯಿಸಿಕೊಳ್ಳಬೇಕಾದ್ದು ವಿಮರ್ಶಕನ ಕರ್ತವ್ಯ. ಕಲಾಕೃತಿಯನ್ನು ಒಂದೇ ದೃಷ್ಟಿಕೋನ, ಪ್ರಜ್ಞೆ ಇಲ್ಲವೇ ನೆಲೆಯಿಂದ ನೋಡಿ ಬೆಲೆ ಕಟ್ಟಬೇಕು ಎಂಬ ಹಠವನ್ನು ವಿಮರ್ಶಕ ಬಿಟ್ಟುಕೊಟ್ಟು ಅದರ ಬಹುಮುಖಗಳನ್ನು ಕಾಣುವ ಎಚ್ಚರವನ್ನು ಉಳಿಸಿಕೊಳ್ಳಬೇಕು.

ಕಳೆದ ಹದಿನೈದು ವರ್ಷಗಳಲ್ಲಿ ‘ಕರಿಮಾಯಿ’ ಕಾದಂಬರಿಯನ್ನು ಮತ್ತೆಮತ್ತೆ ಓದಿದಾಗ, ಕಂಬಾರರ ಸಾಹಿತ್ಯದ ಅಧ್ಯಯನದಲ್ಲಿ ತೊಡಗಿಕೊಂಡಾಗ ವಿಷಯಗಳು ನಾನು ಅಂದು ಭಾವಿಸಿದ್ದಷ್ಟು ಸರಳವಲ್ಲ ಅನ್ನಿಸತೊಡಗಿತು. (ನೋಡಿ: ಹೊಸ ಹೆಜ್ಜೆ ಹೊಸ ಹಾದಿ, ಅಕ್ಷರ ಪ್ರಕಾಶನ, ೧೯೮೧, ಪುಟಗಳು ೮೪ – ೯೦) ಹಾಗಾಗಿ ಈ ಮರು ಓದು.

ಸಾಹಿತ್ಯ ಪರಂಪರೆಯೊಂದರಲ್ಲಿ ಹೊಸ ಕೃತಿಗಳು ಬರುತ್ತಿದ್ದ ಹಾಗೆ ಅವು ಹಳೆಯ ಕೃತಿಗಳ ಹೊಸ ಓದನ್ನು ಒತ್ತಾಯಿಸುತ್ತಿರುತ್ತವೆ. ನವ್ಯ ಕಾವ್ಯಮಯ ಹನ್ನೆರಡನೆಯ ಶತಮಾನದ ವಚನಕಾರರನ್ನು ಹೊಸದಾಗಿ ಬೇರೆ ರೀತಿಯಲ್ಲಿ ಓದಲು ಪ್ರೇರಣೆಗಳನ್ನು ಕೊಟ್ಟಿತು. ತೇಜಸ್ವಿಯವರ ‘ಕರ್ವಾಲೋ’ ಕುವೆಂಪು ಕಾದಂಬರಿಗಳ ಹೊಸ ಓದಿಗೆ ದಾರಿ ಮಾಡಿಕೊಟ್ಟಿತು. ಹಾಗೆಯೇ ದೇವನೂರ ಮಹಾದೇವ ಅವರ ‘ಕುಸುಮ ಬಾಲೆ’ ಬಂದ ಮೇಲೆ ಕಂಬಾರರ ಸಾಹಿತ್ಯದ ಪುನರ್ವಿಮರ್ಶೆ, ಮರು ಓದು ಅಗತ್ಯ ಎನ್ನಿಸಿದೆ. ಒಂದು ಜನ ಸಮುದಾಯದ ಸ್ಮೃತಿ, ನಂಬಿಕೆ, ಆಚರಣೆ, ಆಶೋತ್ತರಗಳನ್ನು ಸಾರಾಸಗಟಾಗಿ ಅವೈಜ್ಞಾನಿಕವೆಂದೋ, ಅವೈಚಾರಿಕವೆಂದೋ, ಮೂಢನಂಬಿಕೆಗಳೆಂದೋ ನಿರಾಕರಿಸಿಬಿಡುವುದು ಸುಲಭ. ಆದರೆ ಒಬ್ಬ ಸೃಜನಶೀಲ ಬರಹಗಾರ ಒಂದು ಬಹುಸಂಖ್ಯಾತ ಜನವರ್ಗದ ಸ್ಮೃತಿಗಳಿಗೂ, ನಂಬಿಕೆಗಳಿಗೂ ಎದುರಾದಾಗ ಅವನ ಸೃಜನಶೀಲತೆ, ಕೆಲಸ ಮಾಡುವ ಬಗೆಯನ್ನು ಪರಿಶೀಲಿಸಿಬೇಕಾದ್ದು ಮುಖ್ಯ. ‘ಕುಸುಮ ಬಾಲೆ’ ಕನ್ನಡ ವಿಮರ್ಶಾ ಕ್ಷೇತ್ರದಲ್ಲಿ ಹುಟ್ಟುಹಾಕಿರುವ ಹೊಸ ವಾಗ್ವಾದಗಳು ಇಂಥ ಕೃತಿಗಳನ್ನು ಕುರಿತ ಹೊಸ ಓದಿಗೆ, ಮರು ಓದಿಗೆ ಒತ್ತಾಯಿಸುತ್ತಿವೆ. ಈ ಹಿನ್ನೆಲೆಯಲ್ಲಿ ‘ಕರಿಮಾಯಿ’ ಕಾದಂಬರಿಯ ಮರು ಓದು ಅವಶ್ಯಕವಾಗಿದೆ.

ಟಿ.ಪಿ. ಅಶೋಕ