ಚಾವಡಿಯಲ್ಲಿ ಹೀಗಾಗುತ್ತಿರಬೇಕಾದರೆ ಇತ್ತ ಚಿನ್ನದ ಕೂಸು ಕಣ್ಮರೆಯಾಯಿತು.

ಸಾಯಂಕಾಲ ನಿಂಗೂನಿಂದ ಸುದ್ದಿ ತಿಳಿದ ಶಿವನಿಂಗ ಹತಾಶನಾಗಿ ಕೈಕಾಲು ಕಳೆದುಕೊಂಡುಬಿಟ್ಟ. ಆ ರಂಡೆ ವಿಶ್ವಾಸಘಾತ ಮಾಡಿದಳು, ಅಂದುಕೊಂಡ. ಈ ಪೋಜದಾರ ಹೋಗಲಿ, ಅವಳನ್ನು ಸಿಗಿದು ಚರ್ಮ ಸುಲಿಸುತ್ತೇನೆ; ಅದಾಗಿ ಈಗ ಊರಿಗೆ ಮುಖ ತೋರಿಸೋದು ಹ್ಯಾಗೆ? ಅವ್ವ ಅಪ್ಪನೆದುರಿಗೆ ಮುಖಕೊಟ್ಟು ಮಾತಾಡೋದು ಹ್ಯಾಗೆ ಗುಡಿಸ್ಯಾ ಒಬ್ಬ ಗಂಡಿಗ್ಯಾ ಅಂದ. ಅವನ ಕಾಲು ಮುರಿದು ಕೈಗೆ ಕೊಡಬೇಕೆಂದ. ಗುಡಿಸ್ಯಾನನ್ನು ಇಷ್ಟು ಬೆಳೆಯಗೊಟ್ಟ ಅಪ್ಪನಿಗೆ ಆಡಿದ. ಬುದ್ಧಿ ಹೇಳದ ದತ್ತಪ್ಪನಿಗೆ ಅಂದ. ಮುದಿಗೊಡ್ಡುಗಳೆಂದು ಬೈದ. ತನ್ನಿಂದಾಗಿ ಗೌಡ ಮನೆತನ ತೋರುಬೆರಳಿಗೆ ಗುರಿಯಾಗುವಂತಾಯಿತಲ್ಲಾ ಎಂದು ಹಣೆ ಹಣೆ ಹೊಡೆದುಕೊಂಡ. ಮನೆಸುತ್ತ ಪೋಲೀಸರು, ತೋಟದಲ್ಲಿ ಪೋಲೀಸರು. ಎಲ್ಲಿ ಅಡಗಲಿ, ಎಲ್ಲಿ ಈ ಹಾಳು ಮುಖ ಮುಚ್ಚಿಕೊಳ್ಳಲೆಂದು ಬೋನಿಗೆ ಸಿಕ್ಕ ಹುಲಿಯ ಹಾಗೆ ಹಾಯ್ ಹಾಯ್ ಮಾಡುತ್ತ ಹರಿದಾಡಿದ. ಪೋಜದಾರನ ಮುಂದೆ ನಡೆಯುವ ಪಂಚಾಯ್ತಿ ಊರವರೆದುರು ನಿಲ್ಲುವಂಥ ತನ್ನನ್ನ ನೆನೆಸಿಕೊಂಡು ಚಡಪಡಿಸಿದ. ಸ್ವಲ್ಪ ಕತ್ತಲಾದೊಡನೆ ತೋಟದ ಕಡೆ ಹೋದವನು ಹ್ಯಾಗೋ ಪೋಲೀಸರ ಕಣ್ಣುತಪ್ಪಿಸಿ, ಯಾವುದೋ ಮಾಯೆಯಿಂದ ಮಾಯವಾದ.

ರಾತ್ರಿ ಎಷ್ಟಾಗಿತ್ತೋ, ಪೌಳಿಯ ಹಿಂಬದಿಯ ಗೋಡೆ ಹಾರಿ ಕರಿಮಾಯಿ ಗುಡಿಹೊಕ್ಕ. ಬಗ್ಗಿಕೊಂಡೇ  ಒಳಗೆ ಸರಿದ. ಒಳಗೆ ಕತ್ತಲಿತ್ತು. ಕರಿಮಾಯಿ ಮೂರ್ತಿಯ ಹಿಂದೆ ಕೂರೋಣವೆಂದು ಸರಿಯುತ್ತಿರುವಾಗ “ಯಾರವರಾ?” ಎಂದು ಕೇಳಿಸಿತು. ಹುಡುಗ ಬೆಚ್ಚಿದ. ಮತ್ತೆ ಯಾರಪ್ಪಾ ನೀನು?” ಎಂದದ್ದು ಕೇಳಿಸಿತು. ದನಿ ಗುರುತು ಹತ್ತಿ ಕೊಳವಿಯ ಮುದುಕಪ್ಪ ಗೌಡನೆಂದು ಗೊತ್ತಾಯಿತು. “ನಾ – ಎಜ್ಜಾ ಶಿವನಿಂಗ” ಎಂದು ಹತ್ತಿರ ಸರಿದ.

“ಯಾಕೋ ತಮ್ಮಾ, ನಿಮ್ಮಪ್ಪ ಏನಾರ ಹೇಳಿಕಳಿಸ್ಯಾನೇನು?”

“ಏನಿಲ್ಲೆಜ್ಜಾ”

“ಮತ್ತ ನೀ ಯಾಕ ಹಿಂಗ ಕಳ್ಳರ‍್ಹಾಂಗ ಬಂದ್ಯೋ ಹುಡುಗಾ?” ಶಿವನಿಂಗ ಸುಮ್ಮನಾದ. ಮುದುಕಪ್ಪನೂ ಮಾತು ಬೆಳೆಸಲಿಲ್ಲ. ಚಿಮಣೀ ಮಡದ ಕಾಡಿಗೆ ಕಡಕೊಂಡು ಬಿದ್ದಹಾಗೆ ಕತ್ತಲಿತ್ತು. ಊರುಬಿಟ್ಟು ಗುಡಿ ದೂರ ಇದ್ದುದರಿಂದ ಇದ್ದದ್ದೂ ಸಪ್ಪಳ ಕಮ್ಮಿ. ಜೀರುಂಡೆ ಹುಳು ಮಾತ್ರ ಒಂದೇ ಸಮ  ಮರ ಕೊರೆದಂತೆ ಜಿರ್‌ರ್ ಎಂದು ಒದರುತ್ತಿತ್ತು. ಜಾಗಾ ಸುರಕ್ಷಿತವೆಂದಾದ ಮೇಲೆ ಎದೆಬಡಿತ ತುಸು ಕಮ್ಮಿಯಾಯಿತು. ಬಹುಶಃ ಪೋಲೀಸರೀಗ ತನ್ನನ್ನು ಹುಡುಕುತ್ತಿರಬಹುದು. ನಾಳೆ ಬೆಳಿಗ್ಗೆ ಅಪ್ಪ ಚರ್ಮ ಸುಲಿಯುವುದು ಖಚಿತ. ಊರುಬಿಟ್ಟು ದೂರ ಹೋಗುವುದೇ ಚಲೋ. ಹೋಗೋ ಮುನ್ನ ಗುಡಿಸ್ಯಾ ಚಿಮಣಾ ಇಬ್ಬರನ್ನೂ ಮುಗಿಸಿ ಹೋಗಿದ್ದರೆ ಬರೋಬರಿ ಆಗುತ್ತಿತ್ತೆಂದು ಯೋಚಿಸಿದ. ಅಷ್ಟರಲ್ಲಿ ಮುದುಕನ ಕೈ ತಾಗಿತು. “ತಮ್ಮಾ” ಎನ್ನುತ್ತ ಮುದುಕ ಶಿವನಿಂಗನಿಗೆ ಇನ್ನಷ್ಟು ಸಮೀಪ ಸರಿದು ಪಿಸುಗುಟ್ಟಿದ.

“ತಮ್ಮಾ ಕುಂದರಗಿ ಮಠ ನೋಡಿದೆಯೇನು?”

“ಹೂಂ”

“ಎಷ್ಟಾಕ್ಕತಿ ಇಲ್ಲಿಂದ?”

“ಯಾಡ ಮೂರ ಹರದಾರಿ ಆದೀತು”

“ಏನ ಮಾಡ್ಲೊ ಹುಡುಗಾ, ನಾಳಿ ನಾ ಹೋಗದಿದ್ದರ ಕೆಲಸ ಕೆಡತೈತಿ. ನನ್ನ ಹಾದೀ ನೋಡಿಕೋತ ಹತ್ತಮಂದಿ ಕೂತಿರತಾರ. ನಿಮ್ಮಪ್ಪ ಯಾರ‍್ನೊ ಕಳಿಸ್ತೇನಂದಿದ್ದ, ಹೋಗಿ ನಿಮ್ಮಪ್ಪಗಾಟ ನೆನಪು ಮಾಡಿ ಬರ‍್ತಿಯ್ತೇನ?”

“ನಮ್ಮಪ್ಪನs ನನ್ನ ಕಳಿಸ್ಯಾನಜ್ಜಾ”

ಎಂದೊಂದು ಸುಳ್ಳುಬಿಟ್ಟ. ಅಲ್ಲದೆ ಆ ಕೆಲಸ ತಾನೇ ಮಾಡಬಹದಲ್ಲಾ, ಊರು ಬಿಡಲಿಕ್ಕೆ ಇದೊಳ್ಳೆ ನೆವ ಸಿಕ್ಕಿತೆಂದುಕೊಂಡ.

“ಎಲೀ ಇವನ, ಮತ್ತ ಕೇಳಿದರ ಹೇಳಿಲಿಲ್ಲಲ್ಲೊ? ಚೆಲೋ ಆತ ಬಾ. ದೇಶಕ್ಕ ನಿಂದೂ ಆsಟ ಸೇವಾ ಸಲ್ಲಲಿ. ಕುಂದರಗಿ ಮಠಕ್ಕ ಹೋಗಿ ಬರ‍್ತೀಯೇನ?”

“ಅಲ್ಲಿ ಕುಂತವರ್ಯಾರು ನೇರೂ ಗಾಂಧೀಯೇನಜ್ಜ?”

“ಅವರ ಅಂತ ತಿಳಿ”

“ಹೋಗತೇನ ಏನ ಹೇಳೆಜ್ಜಾ”

ಮುದುಕ ಬಲುಭದ್ರವಾಗಿ ಬಚ್ಚಿಟ್ಟುಕೊಂಡಿದ್ದ ಒಂದು ಗಂಟು ಹೊರಗೆ ತೆಗೆದ. ಮೇಲೊಂದು ಚೀಟಿಕೊಟ್ಟು “ಮಠಕ್ಕ ಹೋಗು. ಅಲ್ಲೀ ಪೂಜರಿದ್ದಾನ್ನೋಡು, ಗಡ್ಡದಾಂವ, ಅವನ ಹಂತ್ಯಾಕ ಹೋಗಿ ಮುದುಕಪ್ಪ ಗೌಡ ಕಳಿಸ್ಯಾನಂತ ಹೇಳು. ನಿನ್ನ ಕರಕೊಂಡು ಹೋಗಿ ಅಣ್ಣೂ ಗುರೂಜೀಗಿ ಭೇಟಿ ಮಾಡಸ್ತಾನ, ಕೈಯಾಗ ಈ ಗಂಟಾ, ಚೀಟಿ ಕೊಡು, ನನ್ನ ಆಸೇ ಬಿಡಿರಿ, ಶಿವಾಪುರದ ಕಡೆ ಇನ್ನ ಎಂಟದಿನಾ ಬರಬ್ಯಾಡರಂತ ಹೇಳಿ ಬಾ ಹೋಗು” ಎಂದ. ಮುದುಕನ ದನಿ, ಕೊನೆಕೊನೆಗೆ ನಡುಗಿತು. ಭಾವುಕನಾಗಿ ಶಿವನಿಂಗನ ಕೈಹಿಡಿದು ಎದೆಗವಚಿಕೊಂಡು ಸ್ವಲ್ಪ ಹೊತ್ತು ಮಾತಿಲ್ಲದೆ ಕೂತ. ಅಳುತ್ತಿದ್ದ ಕೂಡ. ಶಿವನಿಂಗನ ಕೈಮೇಲೆ ಒಂದು ಹನಿ ಬಿಸಿ ಕಣ್ಣೀರು ಬಿತ್ತು. ಮುದುಕನ್ನ ಹ್ಯಾಗೆ ಸಮಾಧಾನ ಮಾಡಬೇಕೆಂದು ತಿಳಿಯದಾಯ್ತು. ತಾನು ಹೋಗುವುದಕ್ಕೆ ಅನುಮಾನ ಪಡುತ್ತಿದ್ದೇನೆಂದು ಅಂದುಕೊಂಡನೋ ಎಂದು “ಕಾಳಜೀ ಬಿಡೆಜ್ಜಾ ನಾ ಹೋಗತೀನಿ” ಅಂದ. ಮುದುಕ ಮಾತಾಡಲಿಲ್ಲ. ಶಿವನಿಂಗನನ್ನು ಹಾಗೆ ಬಾಚಿ ತಬ್ಬಿಕೊಂಡ. ಮುದಿಯೆತ್ತು ಕರುವಿನ ಮೈ ನೆಕ್ಕುವ ಹಾಗೆ ಬೆನ್ನಿನ ಮೇಲೆ ಬಹಳ ಹೊತ್ತು ಕೈಯಾಡಿಸಿದ. ಮುದುಕನ ಚಡಪಡಿಕೆ ನೋಡಿ ಇದೇನೊ ಮಹತ್ವದ ಕೆಲಸವೇ ಇರಬೇಕೆಂದುಕೊಂಡ. ಚೆಲ್ಲಿಕೊಂಡ ಹಾಗೆ ಸುಮ್ಮನೇ ಬಿದ್ದುಕೊಂಡ, ಅವನಿಗೆ ಸಮಾಧಾನವಾಗುವ ತನಕ.

“ಅಂಧಾಂಗ ನೀ ಮೊದಲ ಯಾಕ ಹೇಳಲಿಲ್ಲಾ?”

ಶಿವನಿಂಗ ಈಗಲೂ ಸುಮ್ಮನಾದ.

“ನಾನs ಹೋಂದಲ್ಲೊ ಅಂತ ಸಂಶೆ ಬಂತೇನ?”

ಮುದುಕ ಇನ್ನೂ ಮಾತಾಡುತ್ತಲೇ ಇದ್ದ. ‘ನಾ ಹೋಗತೀನೆಜ್ಜಾ’ ಎಂದು ಶಿವನಿಂಗ ಅವಸರ ಮಾಡಿದ. “ಹೂಂ ಈಗ ಹ್ವಾದರs ಪಾಡ. ನಾನೂ ಬರತಿದ್ದೆ. ಈ ಕಣ್ಣೊಂದಪಾ” ಎನ್ನುತ್ತಾ ತನ್ನ ಅಸಹಾಯಕತೆಯ ಬಗ್ಗೆ ಪರಿತಪಿಸಿದ. ಶಿವನಿಂಗನಿಗೆ ಈಗ ನೆನಪಾಯಿತು. ಮುದುಕನಿಗೆ ಇರುಳುಗಣ್ಣೆಂದು. ಎದ್ದು “ನಾ ಹೋಗ್ತೀನೆಜ್ಜಾ” ಎಂದು. ಮುದುಕನಿಗೆ ಏನು ತಿಳಿಯಿತೋ ತಾನೂ ಎದ್ದು ಶಿವನಿಂಗನನ್ನು ಮತ್ತೆ ತಬ್ಬಿಕೊಂಡು “ಪೋಲೀಸರು ಗಿಲ್ಲೀಸರು ಹುಶಾರಪಾ. ಕೊಟ್ಟವನs ಬಂದುಬಿಡು. ಕರಿಮಾಯಿ ಕಾಪಾಡತಾಳ ನೀ ಹೋಗಿ ಬಾ” ಎಂದು. ಶಿವನಿಂಗ ಸರ್ರನೇ ಮಾಯವಾದ.