ಚಹದಂಗಡಿಯ ಅದ್ಧೂರಿಯ ಆರಂಭ ನೋಡಿದಿರಲ್ಲ. ವ್ಯಾಪಾರ ವೃದ್ಧಿಯಾಗಲಿಲ್ಲ. ಜನ ಆ ಬಗ್ಗೆ ತಲೆಕೆಡಿಸಿಕೊಳ್ಳಲೂ ಇಲ್ಲ. ತಿರುಗಾ ಮುರಗಾ ಗುಡಸೀಕರನೇ ಹೋಗಿ ಚಹ ಕುಡಿಯುತ್ತಿದ್ದ. ಚತುಷ್ಟಯರು, ಅದೂ ಪುಕ್ಕಟೆ ಸಿಕ್ಕರೆ ಆಗಾಗ ಒಂದೊಂದು ಗುಟುಕು ಕುಡಿಯುತ್ತಿದ್ದರು. ಅವರಿಗೆ ಸಿಕ್ಕುತ್ತಿದ್ದುದು ಕೂಡ ನಾಲ್ಕು ಜನಕ್ಕೆ ಕೂಡಿ ಒಂದು ಕಪ್ಪು. ಆ ಒಂದು ಕಪ್ಪಿನಲ್ಲೇ ಹಂಚಿಕೊಂಡು ಕುಡಿದವರಿಗೆ ಅದೇನು ಚಟ ಹತ್ತೀತು? ಕುಡಿದರೆ ಅದು ನಶೆಯಾಗುವ ಬಾಬತ್ತಲ್ಲ. ಆದ್ದರಿಂದ ಅದು ಸಿಕ್ಕರೂ ಸೈ, ಬಿಟ್ಟರೂ ಸೈ; ಸಿಕ್ಕಾಗ ಉಬ್ಬಲಿಲ್ಲ; ಸಿಗದಾಗ ಸೊರಗಲಿಲ್ಲ, ಹಾಗಿದ್ದರು.

ವ್ಯಾಪಾರವಾಗಲಿಲ್ಲವಾದ್ದರಿಂದ ತಾವೇಕೆ ಇಲ್ಲಿರಬೇಕೆಂದು ಚಿಮಣಾಳಿಗೂ ಅನ್ನಿಸಲಿಲ್ಲ. ಬಸವರಾಜನಿಗೂ ಅನ್ನಿಸಲಿಲ್ಲ. ಆದರೆ ಗುಡಸೀಕರ ಹಾಗು ಚಿಮಣಾಳ ಸಂಬಂಧ ರಹಸ್ಯವಾಗಿ ಉಳಿಯಲಿಲ್ಲ. ಗುಡಸೀಕರ ಹಾಗೆ ಬಯಸಿದರೂ ಆಡಿಕೊಳ್ಳುವವರು ಆಡಿಕೊಂಡರು. ಬಾಯಿ ಸೋತು ಸುಮ್ಮನಾದರು. ಗುಡಸೀಕರನ ತಾಯಿಗೆ ಇದರಿಂದ ಚಿಂತೆಯಾಯಿತಷ್ಟೇ. ಒಂದೆರಡು ಸಲ ತಾನೇ ಬುದ್ಧಿಹೇಳಿ ನೋಡಿದಳು. ಆಗೆಲ್ಲ ಗುಡಸೀಕರ ಸಿಡಿಯುತ್ತಿದ್ದ. ಹಿರಿಯರಿಲ್ಲದ ಮನೆ, ಮಗ ಮನೆಹಾಳಾದನಲ್ಲಾ ಎಂದು ಆ ಮುದುಕಿ ಕೊರಗಿತು. ಮಗನಿಗೆ ಬುದ್ಧಿ ಹೇಳಿರೆಂದು ಗೌಡನಿಗೂ, ದತ್ತಪ್ಪನಿಗೂ ಕೈಮುಗಿದಳು. ಈಗವನು ತಮ್ಮನ್ನು ಮಿರಿದವನೆಂದು ಅವರು ಹೇಳುತ್ತಲೂ ತನ್ನ ನಶೀಬನ್ನೇ ಬಯ್ದುಕೊಂಡು ಸುಮ್ಮನಾದಳು.

ಈಗ ಮೀಟಿಂಗಿನ ಸ್ಥಳ ಬದಲಾಗಿತ್ತು. ಸರಿರಾತ್ರಿಯ ತನಕ ಗುಡಿಸಲಲ್ಲೇ ಮೀಟಿಂಗ್ ಮಾಡಿ, ಚತುಷ್ಟಯರು ಮನೆಗಳಿಗೆ ಹೋಗುತ್ತಿದ್ದರು. ಬಸವರಾಜು ಮುಂಚಿನ ಪಂಚಾಯ್ತಿ ಆಫೀಸಿನಲ್ಲಿ ಒಬ್ಬನೇ ಮಗಲುತ್ತಿದ್ದ. ಬೆಳಿಗ್ಗೆ ಸೂರ್ಯೋದಯದ ಮುಂಚೆಯೇ ಎದ್ದು ಗುಡಿಸಲಿಗೆ ಹೋಗುತ್ತಿದ್ದ. ಅಷ್ಟರಲ್ಲೇ ಗುಡಸೀಕರ ಮನೆಗೆ ಹೋಗಿರುತ್ತಿದ್ದ.

ಗುಡಸೀಕರನಿಗೆ ಮುಂಚಿನ ಮೂರು ತಿಂಗಳು ಒಟ್ಟಾರೆ ನಿರಾಸೆಯಾಗಿತ್ತು. ಗೌಡನ ಬಗೆಗಿನ ಅಸಮಾಧಾನದಿಂದ ನಾಟಕವನ್ನಾಡಿಸಿದ್ದ ನಿಜ. ಆದರೆ ಅದರಲ್ಲಿ ಆ ಮೂಲಕ ಹಳ್ಳಿಗರ ಮನಸ್ಸನ್ನು ಗೆದ್ದು ತನ್ನ ಸುಧಾರಣೆಗಳನ್ನು ತರಬೇಕೆಂಬ, ಹಳ್ಳಿಗರ ಕಲಾಭಿರುಚಿ ಸುಧಾರಿಸಬೇಕೆಂಬ ಹಂಬಲವಿತ್ತು. ಚಹದಂಗಡಿ ಸುರುಮಾಡೋದೆಂದರೆ ತನ್ನ ಹಳ್ಳಿಯನ್ನು ಬೆಳಗಾವಿಯಾಗಿಸುವ ಪ್ರಥಮ ಹೆಜ್ಜೆಯೆಂದೂ ನಂಬಿದ್ದ. ಚಿಮಣಾ ಹರಿಜನಳೆಂಬುದು, ಚಿಮಣಾವೃತ್ತಿ ಹರಿಜನರದೆಂದು ಅವನಿಗೂ ತಿಳಿದ ವಿಚಾರವೇ. ಆದರೆ ಹರಿಜನಳಾದ ಲಗಮವ್ವ ಸೆರೆಕೊಟ್ಟರೆ ಕುಡಿಯುವ ಜನ, ಚಿಮಣಾ ಚಹಾ ಕೊಟ್ಟರೆ ಯಾಕೆ ಕುಡಿಯಬಾರದು? ಜನ ಕುಡಿಯಲಿಲ್ಲ. ಅದಕ್ಕೆ ಕಾರಣ ಗುಡಸೀಕರನ ನಿರಾಸೆಗೆ ಇದೂ ಕಾರಣವಾಗಿತ್ತು.

ಜನಕ್ಕೆ ಬೇಡದ ಸುಧಾರಣೆಗಳನ್ನು ತಂದೇನು ಪ್ರಯೋಜನ? ಈ ಹುಂಬರ ಜೊತೆ ಎಷ್ಟಂತ ಕೆಸರಲ್ಲಿ ಗುದ್ದಾಡೋದು? ಎಂದೂ ಅನಿಸುತ್ತಿತ್ತು. ಅದಕ್ಕೆ ತಕ್ಕಂತೆ ಚತುಷ್ಟಯರೂ ನಿರೀಕ್ಷೆಯಷ್ಟು ನಡೆಯಬಲ್ಲವರಾಗಿರಲಿಲ್ಲ. ಆದರೆ ಬರಬರುತ್ತ ಹೊಸ ಆಶಾಕಿರಣ ಮೂಡತೊಡಗಿತ್ತು. ತನ್ನ ಹಾಗೂ ಚಿಮಣಾಳ ಸಂಭಂಧದ ಬಗ್ಗೆ ಜನ ಆಡಿಕೊಳ್ಳುವುದು ಅವನಿಗೂ ಗೊತ್ತಿತ್ತು. ಆದರೆ ಅನೇಕರು ಭಾವಿಸುವಂತೆ ಅವನಿಗೂ ಆ ಬಗ್ಗೆ ಅಭಿಮಾನ ಮೂಡಿತ್ತಷ್ಟೆ. ಅಲ್ಲದೆ ಯಾರೋ ಒಬ್ಬಿಬ್ಬರು ಈ ಬಗ್ಗೆ ಹಗುರಾಗಿ ಮಾತಾಡಿದಾಗ ಗೌಡ “ಗಂಡಸು ಮಾಡಿದ್ದರೂ ಮಾಡಿದ್ದಾನ ಬಿಡ್ರೊ” ಎಂದಿದ್ದನಂತೆ. ಅದು ಇವನ ಕಿವಿಗೆ ಬಿದ್ದು ಕಿವಿಯ ಬಳಿ ಒಂದೆರಡು ಕೊಂಬು ಮೂಡಿದ ಅನುಭವವಾಗಿತ್ತು. ಅವನ ಭುಜಕ್ಕೆ ಶಕ್ತಿ ಬಂದದ್ದು, ನಿಜ ಹೇಳಬೆಕೆಂದರೆ ಚಿಮಣಾಳಿಂದಲ್ಲ, ಬಸವರಾಜೂನಿಂದ.

ಅವನ ದುರ್ಬಲ ಕ್ಷಣಗಳಲ್ಲೆಲ್ಲ ಬಸವರಾಜು ಪಕ್ಕಕ್ಕಿರುತ್ತಿದ್ದ. ಅವನ ವ್ಯಕ್ತಿತ್ವದ ಖಾಲಿ ಸ್ಥಳವನ್ನು ಹೊಗಳಿಕೆಯಿಂದ ಭರ್ತಿಮಾಡುತ್ತಿದ್ದ. ಸೋಲುಗಳನ್ನು ಗೆಲುವಾಗಿಸುತ್ತಿದ್ದ. ಬಸವರಾಜು ಎಷ್ಟು ಕಲಿತಿದ್ದನೋ ಗೊತ್ತಿಲ್ಲ; ಅಂತೂ ಇಬ್ಬರೂ ಸಹಪಾಠಿಗಳಷ್ಟು ಹತ್ತಿರವಾದರು. ಹಳ್ಳಿ ಸುಧಾರಣೆಯ ಬಗ್ಗೆ ಇಬ್ಬರ ಆದರ್ಶ, ಅಭಿಪ್ರಾಯಗಳು ಒಂದೇ ಆಗಿದ್ದವು. ಅಥವಾ ಪರಸ್ಪರರು ಹೇಗೆ ಹೊಂದಾಣಿಕೆ ಮಾಡಿಕೊಂಡರೋ ಕೆಲವೇ ದಿನಗಳಲ್ಲಿ ಇಬ್ಬರೂ ಒಂದಾಗಿದ್ದರು. ಕುಡಿದಾಗಂತೂ ಇಬ್ಬರೂ ತಬ್ಬಿಕೊಳ್ಳುವುದೇನು, ಒಬ್ಬನ ಎಂಜಲು ಇನ್ನೊಬ್ಬ ತಿನ್ನುವುದೇನುಲ ಪರಸ್ಪರರಿಗಾಗಿ ಪ್ರಾಣ ಕೊಡಲು ಆಣೆಯಿಡುವುದೇನು! ಈ ತನಕ ಗುಡಸೀಕರನಿಗೆ ಇಂಥ ಒಬ್ಬ ಸ್ನೇಹಿತನೂ ಸಿಕ್ಕಿದ್ದಲ್ಲ.

ಬಸವರಾಜನಿಂದಾಗಿ ಈಗ ಗುಡಸೀಕರನಿಗೆ ಎಲೆಕ್ಷನ್ನಿನಲ್ಲಿ ಹೊಸ ಕುತೂಹಲ ಹುಟ್ಟಿತು. ಬಸವರಾಜು ಮಹಾ ಮಾತುಗಾರ. ಈ ಎಲೆಕ್ಷನ್ ಗೆಲುವು ಹೇಗೆ ತಮ್ಮ ಆದರ್ಶಗಳ ಗೆಲುವಾಗುವುದೆಂದು ಭಾಷಣ, ಸಂಭಾಷಣ, ತರ್ಕಗಳಿಂದ ಖಾತ್ರಿಮಾಡಿದ. ಗಾಂಧೀಜಿಯವರಂಥ ಆದರ್ಶಗಳು ಗೌಡ, ದತ್ತಪ್ಪನಿಗೆ ಕನಸು ಮನಸ್ಸಿನಲ್ಲಿಯಾದರೂ ಹೊಳೆಯುವುದು ಸಾಧ್ಯವೆ? ಹೋಗಲಿ, ಆ ಹೆಸರಾದರೂ ಕೇಳಿಬಲ್ಲರೆ ಇವರು? ಒಬ್ಬನಿಗೊಂದು “ಸೀರಿಯಸ್ ಅಜಾರಿ” ಆಯಿತೆನ್ನೋಣ; ಕರಿಮಾಯಿಯ ಭಂಡಾರ ಬಳಿದುಕೊಂಡರೆ ಹೋಗುತ್ತದೋ? ಒಬ್ಬ ಬಸುರಿಯ ಹೆರಿಗೆ ಕಷ್ಟವಾಯಿತೆನ್ನೋಣ; ಕರಿಮಾಯಿ ಉಳಿಸಬಲ್ಲಳೋ? ಮೂಢನಂಬಿಕೆಗಳಿಂದ ಯಾರಾದರೂ ಬದುಕಿದ್ದು ಉಂಟೋ? ಛೇ ಛೇ ಇದೆಲ್ಲ ಆಗೋ ಮಾತಲ್ಲ. ಹೋಗೋ ಮಾತಲ್ಲ, ಊರೆಂದ ಮೇಲೆ ಒಂದು ಆಸ್ಪತ್ರೆ, ಒಂದು ಹೈಸ್ಕೂಲು ಬೇಡವೋ? ಹೆಬ್ಬೆಟ್ಟೊತ್ತುವ ಗೌಡನಿಂದ ಇವನ್ನು ತರುವುದು ಸಾದ್ಯವೋ? ಬೆಳಗಾವಿಯನ್ನು ನೋಡಬಾರದೆ? ಇಂದಿದ್ದ ಬೆಳಗಾವಿ ನಾಳಿಗಿಲ್ಲ. ಆ ಥರಾ “ಡೆವಲಪ್” ಆಗ್ತಾ ಇದೆ. ಬೆಳಗಾವಿ ಎತ್ತ ಹೋಗುತ್ತಿದೆ, ಈ ಜನ ಎತ್ತ ಹೋಗುತ್ತಿದ್ದಾರೆ? ಜನಕ್ಕೇನು, ಹೇಳಿ ಕೇಳಿ ಮೂಢನಂಬಿಕೆಯವರು. ಮೊದಮೊದಲು ಡೆವಲಪ್ಪಿನ ಅಗತ್ಯ ತಿಳಿಯಲಿಕ್ಕಿಲ್ಲ. ಬರಬರುತ್ತ ಅವರಿಗೇ ಗೊತ್ತಾಗುತ್ತದೆ. ಹಾಗಂತ ಅವರಿಗೇ ಗೊತ್ತಾಗಲೆಂದು ಬಿಟ್ಟರೆ ಹೇಗೆ? ಗೊತ್ತಗೋ ಹಾಗೆ ಮಾಡಬೇಕು. ಈ ಎಲೆಕ್ಷನ್ ಗೆದ್ದರೆ ಇದನ್ನೆಲ್ಲ ತಾವು ಮಾಡಿ ತೋರಿಸುತ್ತೇವೆಂದು ಹೇಳಬೇಕು – ಇತ್ಯಾದಿ.

ಇಂಥ ಮಾತು ಕೇಳಿದರೆ ಗುಡಸೀಕರನಿಗೆ ಹೇಗಾಗಬೇಡ? ಆಳದಲ್ಲಿ ಹುದುಗಿದ ಆದರ್ಶಗಳನ್ನೆಲ್ಲ ಹೊಡೆದೆಬ್ಬಿಸಿ ಹೊರಕ್ಕೆ ತಂದ. ಸೋಲು ಆದರ್ಶವಾದಿಗಲ್ಲದೆ ಇನ್ನಾರಿಗೆ ಬರಬೇಕು? ಗಾಂಧೀಜಿ  ಎಷ್ಟು ಸಲ ಸೋತಿಲ್ಲ? ಈ ಎಲೆಕ್ಷನ್ ಗೆಲ್ಲಲೇ ಬೇಕೆಂದು ತೀರ್ಮಾನಿಸಿದ.

ಬಸವರಾಜೂನ ಪೂರ್ವಾಶ್ರಮ ಏನಿತ್ತೋ ಗೊತ್ತಿಲ್ಲ. ಚಳುವಳಿಯಲ್ಲಿದ್ದವನೆಂದು ಅವನೇ ಹೇಳಿ ಕೊಂಡಿದ್ದನಷ್ಟೆ. ಈ ಊರಿನಲ್ಲಿ ಮಾತ್ರ ಪಸಂದಾಗಿ ಹೊಂದಿಕೊಂಡುಬಿಟ್ಟ. ಕಪ್ಪು ಚಾಳೀಸಿನೊಳಗಿಂದಲೇ ಜನರ ಗುಟ್ಟುಗಳನ್ನು ಗಮನಿಸಿದ್ದ, ದೌರ್ಬಲ್ಯಗಳನ್ನು ಪತ್ತೆಹಚ್ಚಿದ್ದ. ಅವರನ್ನು ಸಂತೋಷಗೊಳಿಸುವ ಮಾತು, ವಿಧಾನಗಳನ್ನು ಕಂಡುಕೊಂಡಿದ್ದ. ಎಲ್ಲರನ್ನೂ ದೊಡ್ಡವರೋ, ಚಿಕ್ಕವರೋ ಬಹವಚನದಲ್ಲಿ ಮಾತಾಡಿಸುತ್ತಿದ್ದ. ಎಲ್ಲಕ್ಕಿಂತ ಹೆಚ್ಚಾಗಿ ಗುಡಸೀಕರನಿಗೆ ಗೊತ್ತಾಗದ ಒಂದು ರಹಸ್ಯ ದೌರ್ಬಲ್ಯ ಅವನಿಗೆ ತಿಳಿದಿತ್ತು! ಈ ಜನಗಳ ಜಿವಕೇಂದ್ರ ಕರಿಮಾಯಿ – ಎಂದು.

ಬಸವರಾಜೂನ ರೇಡವೇ ಜನಪ್ರಿಯವಾಗಿತ್ತು. ಹಾಗೇ ಅವನ ಉಡುಪೂ, ನಡೆನುಡಿಯೂ, ಮಾತುಗಾರ ಬೇರೆ. ಬೆಳಗಾವಿಯನ್ನು ರಸವತ್ತಾಗಿ ಕೇಳಿದವರ ಬಾಯಲ್ಲಿ ನೀರು ಸೋರುವ ಹಾಗೆ ವರ್ಣನೆ ಮಾಡುತ್ತಿದ್ದ. ಹೋಟಲಂತೆ, ತಮಾಷಾ ಅಂತೆ, ಸಿನಿಮಾ ಅಮತೆ, ಕಾಲೇಜು ಹುಡುಗಿಯರಂತೆ, ಇಂಗರೇಜಿ ಮಡ್ಡಮ್ಮಗಳಂತೆ – ಛೇ, ಛೇ ಇದನ್ನು ಕೇಳಿದ ಎಳೆಯರಿಗೆ ತಮ್ಮ ಊರು ಬೆಳಗಾವಿಯಾಗುವ ತನಕ ಕಾಯುವುದು ಅಸಾಧ್ಯವೆಂದು ಹೊಳೆದಂತಾಗುತ್ತಿತ್ತು. ಹೆಚ್ಚೇನು ಆತ ತರುಣರಿಗೆ ಮಾದರಿಯಾದ. ನಿಂಗೂನಂಥ ನಿಂಗೂ ಕೂಡ ಮನಸ್ಸಿನಲ್ಲೇ ಇವನನ್ನು ಕೂಡುತ್ತಿದ್ದ.

ಬಸವರಾಜು ತನಗಾದ ವೀಡಿ ರೋಗದ ಬಗ್ಗೆ ಒಮ್ಮೆ ಮಾತಾಡಿದ. ಚತುಷ್ಟಯರು ವೀಡಿ ಅಂದರೆ ಬಹಳ ದೊಡ್ಡ  ಮಂದಿಗೆ  ಆಗುವ ರೋಗವೆಂದು ಬಗೆದು, “ಅಯ್ಯೋ ಆ ರೋಗ ನಮಗೆ ಬರಬಾರದೇ?” ಎಂದು ಹಳಹಳಿಸಿದರು. ಬೇಕೆಂದೇ ಕೆಮ್ಮಿ “ಯಾಕೋ ಕೆಮ್ಮುತ್ತಿ?” ಎಂದು ಯಾರಾದರೂ ಕೇಳಿದರೆ “ಹಿಂಗ, ನನಗ ಸೊಲ್ಪ ವೀಡಿ ಆಗೇತಪಾ” ಎಂದು ಸುಳ್ಳು ಸುಳ್ಳೇ ಹೇಳುತ್ತಿದ್ದರು. ಅಷ್ಟಕ್ಕೇ ಬಿಡದೆ, ಬಸವರಾಜು ಹೇಳಿದ ರೋಗಗಳನ್ನು ಎಂಟೆಂಟು ದಿನ ಅಭಿನಯಿಸುತ್ತಿದ್ದರು.

ಗುಡಸೀಕರನಂತೂ ಬಸವರಾಜನನ್ನು ದುಡ್ಡಿನಷ್ಟು ಗಟ್ಟಿಯಾಗಿ ನಂಬಿದ್ದ. ಆದ್ದರಿಂದ ಸಹಜವಾಗಿಯೇ ಬಸವರಾಜೂನಿಗೆ ಆ ಮನೆಯ ಬಳಕೆ ಜಾಸ್ತಿಯಿತ್ತು. ವಾರದಲ್ಲಿ ಮೂರು ನಾಲ್ಕು ಸಲ ಊಟಕ್ಕೆ ಹೋಗುತ್ತಿದ್ದ. ಮಗನ ಮೇಲಿನ ಇವನ ಪ್ರಭಾವ ನೋಡಿದ ಮುದುಕಿ “ಮದವೆಯ ಬಗ್ಗೆ ನೀನಾದರೂ ಹೇಳಪ್ಪಾ!” ಎಂದು ಬಸವರಾಜನಿಗೇ ಹೇಳಿದಳು. ಇವನೂ ಹೇಳಿದ. ಏನೂ ಆಗಲಿಲ್ಲ. ಕೊನೆಗೆ ಹೋಗಲಿ, ಮನೆಯಲ್ಲಿ ಬೆಳೆದುನಿಂತ ತಂಗಿಯ ಮದುವೆಯನ್ನಾದರೂ ಮಾಡಲಿಕ್ಕೆ ಹೇಳಪ್ಪಾ” ಎಂದಳು.

ಅದೂ ನಿಜ. ಮದುವೆಯ ಅಗತ್ಯ ಗುಡಸೀಕರನಿಗಿಂತ ಗಿರಿಜಳಿಗೆ ಹೆಚ್ಚಾಗಿತ್ತು. ಕೊಯ್ಲಿಗೆ ಬಂದ ಫಸಲಿನಂತೆ ಬೆಳೆಯುವುದಕ್ಕೆ ಬಯಲೆನ್ನದೆ ಇಕ್ಕಟ್ಟೆನ್ನದೆ ಸಿಕ್ಕ ಸಿಕ್ಕಲ್ಲಿ ಅವಕಾಶವಾದಲ್ಲೆಲ್ಲ ನೋಡಿದವರ ಕಣ್ಣುತುಂಬುವಂತೆ ಬೆಳೆದು ತುಂಬಿಕೊಂಡಿದ್ದಳು. ಆ ಹುಡುಗಿಗೆ ಮೊದಲೇ ಬೆಕ್ಕಿನ ಕಣ್ಣು ಬೇರೆ. ಆಕಾರದಲ್ಲಿ ಚಿಕ್ಕವು. ಅರೆದೆರೆದ ಆ ಮಾದಕ ಕಣ್ಣುಗಳಿಂದಾಗಿ ಸದಾ ಹರೆಯದ ನಶೆಯಲ್ಲಿದ್ದಂತೆ ತೋರುತ್ತಿದ್ದಳು. ಹುಡುಗರ ದೃಷ್ಟಿ ಕೂತರೂ ಸಾಕು, ಗಿಣಿ ಕೂತ ಜೋಳದ ತೆನೆಯಂತೆ ಮೈತೂಗಿ ತೂಗಿ ತುಳುಕಾಡುತ್ತಿದ್ದಳು. ಅದೆಂಥ ಹೊಸ ಹಂಬಲ ಮೈಯಲ್ಲಿ ಹುಟ್ಟಿಕೊಂಡಿತ್ತೋ, ಅಷ್ಟು ದೂರದಲ್ಲಿ ಹುಡುಗರು ಹಾದುಹೋಗುತ್ತಿದ್ದರೆ ಕಣ್ಣಿಗಿಂತ ಮುನ್ನ ಮೈಗೆ ಕಾಣಿಸಿ, ಮೈತುಂಬಾ ಮುಳ್ಳೆದ್ದು ಇಕ್ಕಟ್ಟಿನ ಆಸೆಗಳು ಒಡಮುರಿದು ಹರಿದಾಡಿ ಈ ಸಣ್ಣ ಹುಡುಗಿಯನ್ನು ನಡುಗಿಸಿ ನಡುಗಿಸಿ ಘಾಸಿಮಾಡುತ್ತಿದ್ದವು. ಬಸವರಾಜುವಿನ ಒಡನಾಟ ಆ ಮನೆಗೆ ಜಾಸ್ತಿಯಾಯ್ತಲ್ಲ. ಸಹಜವಾಗಿಯೇ ಇವನ ಮೈಯ ಅತ್ತರೆಣ್ಣೆಯ ವಾಸನೆ ಅವಳ ಮೈ ಪುಳಕಕ್ಕೆ ಮಂದಾನಿಲದಂತೆ ಹಿತಕರವಾಗಿತ್ತು. ಇದೆಲ್ಲ ಅವಳ ಅರಿವಿಗೆ ಗೊತ್ತಿಲ್ಲದೆ ಮೈ ಕೊಬ್ಬಿಗೆ ಮಾತ್ರ ಗೊತ್ತಾಗಿ ಆದದ್ದು.

ಮೊದಲೇ ಹಾಡಲೋ ಹಾದರ ಮಾಡಲೋ ಎಂಬಂಥ ವಯಸ್ಸು. ಸ್ವಲ್ಪ ಹೆಚ್ಚಾಗಿಯೇ ನಗುತ್ತಿದ್ದಳು; ವಿನಾಕಾರಣ ಬಳುಕುತ್ತಿದ್ದಳು. ಈತ  ತೋಟದ ಕಡೆ ಬಂದರೆ ಅವಳೂ ಬರುತ್ತಿದ್ದಳು. ಕಣ್ಣಿಂದ ತಿಂದವಳಂತೆ ನೋಡುತ್ತಿದ್ದಳು. ಒಂದು ದಿನ ಒಬ್ಬ ಹೆಣ್ಣಾಳನ್ನು ಕಳಿಸಿ ಇವನ ರೇಡವೇ ಇಸಿದುಕೊಂಡು ಕೇಳಿದಳು. ಬೇಟೆಗಾರನಿಗೆ ಪ್ರಾಣಿಗಳ ಸ್ವಭಾವ, ಹಂಗಾಮಿಗೆ ತಕ್ಕ ಅವುಗಳ ಚಲನವಲನ ತಿಳಿದಂತೆ ಅವನಿಗೆ ಅವಳ ಮೈಮನಸ್ಸಿನ ತುದಿಬುಡ ತಿಳಿದಿತ್ತು. ಜಾತ್ಯಾ ಬೇಡನಮತೆ ಅವನೂ ಹೊಂಚುತ್ತಿದ್ದ.

ಒಂದು ದಿನ ಮಧ್ಯಾಹ್ನ ಬಸವರಾಜು ಗುಡಸೀಕರನೊಂದಿಗೆ ಊಟಮಾಡಿ ಅವರ ಮನೆಯಲ್ಲಿಯೇ ಮಲಗಿದ್ದ. ಅಷ್ಟರಲ್ಲಿ ಎಲ್ಲಿಂದಲೋ ಮುದ್ದೆ ಮಾಡಿದ ಕಾಗದದ ಉಂಡೆಯೊಂದು ಅವನ ಮೇಲೆ ಬಿತ್ತು. ತಕ್ಷಣ ಎದ್ದುಕೂತು, ಗುಡಸೀಕರನ ಕಡೆ ನೋಡಿದ. ಅವ ಪಲ್ಲಂಗದ ಮೇಲೆ ಗೊರಕೆ ಹೊಡೆಯುತ್ತಿದ್ದ. ಮೇಲಿದ್ದವನಿಗೆ ಈ ಕೆಳಗಿನ ವ್ಯಾಪಾರ ತಿಳಿಯುವಂತೆಯೂ ಇರಲಿಲ್ಲ. ಬಸವರಾಜು ಕಳ್ಳಬೆಕ್ಕಿನಂತೆ ಸುತ್ತ ಕಣ್ಣಾಡಿಸಿದ. ಜಿನೆಯ ಮೇಲೆ ಬರೀ ಮುಖ ಮಾತ್ರ ತೋರುತ್ತ ನಿಂತಿದ್ದ ಗಿರಿಜಾ ಕಿಲಕ್ಕನೇ ನಕ್ಕು ಕೆಳಗಿಳಿದಳು. ಬೇಟೆ ಸಿಕ್ಕಿತೆಂದುಕೊಂಡ. ಕೆಳಕ್ಕಿಳಿದು ಬಂದ. ಕೆಳಗೆ ಹೊಡ ಬಾಗಿಲಲ್ಲಿ ಗಿರಿಜಾ ನಿಂತಿದ್ದಳು. ಮುದುಕಿಯಿರಲಿಲ್ಲ. “ತೋಟದ ಕಡೆ ಹೋಗ್ತೀನೀಂತ ಗುಡಸೀಕರಗ ಹೇಳ್ರಿ” ಎಂದು ಹೇಳುತ್ತ ಕಣ್ಣು ಹೊಡೆದು ನಡೆದ. ಗಿರಿಜಾಳ ಎದೆ ನಗಾರಿಯಂತೆ ಬಡಿದುಕೊಳ್ಳಲಾರಂಭಿಸಿತು.

ನಾಗರಪಂಚಮಿ ಹಬ್ಬವಾಗಿ ಹೋಗಿತ್ತು. ಚಿಗುರಲೋ ಎಲೆ ಬಿಡಲೋ ಎಂಬಂತೆ ಎಲ್ಲ ಕಡೆ ಹಸಿರು ಹುಚ್ಚುಚ್ಚಾಗಿ ಹಸರಿಸಿತ್ತು. ಮೈಕೈ ಭಾರವಾಗಿ ಕಣ್ಣಂಚಿನಲ್ಲಿ ಕನಸು ಕಾಣೂವ ಚಿಕ್ಕ ಪ್ರಾಯದ ಎಳೆಯರಂತೆ ಭೂಮಿ ಕಾನಿಸುತ್ತಿತ್ತು. ಒಂದೇ ಒಂದು ದೇಟು ಮುಟ್ಟುವ ಮನಸ್ಸಾಗುವುದಿಲ್ಲ. ಈಗ ಎಸಳನ್ನು ಎಷ್ಟು ಹಿಡಿದರೆ ಅಷ್ಟು ಬಾಡುತ್ತದೆ. ಹುಲ್ಲಿನ ಮೇಲೆ ಕಾಲಿಟ್ಟು ನಡೆಯಬೇಕಲ್ಲಾ ಎಂಬ ಕೊರಗು. ಬೇಲಿಯ ಮೇಲಿನ ಬಣ್ಣಬಣ್ಣದ ಹೂಗಳೆದು ಕುಣಿದಾಡುವಂತೆ ಚಿಟ್ಟೆಗಳು ಹುಟ್ಟಿ ಹಾರಾಡತೊಡಗಿದ್ದವು. ಹಸರಿನ ಈ ಸಮೃದ್ಧಿಯನ್ನು ನೋಡಿದರೆ ಈಗ ಕಲ್ಲೆದೆ ಮೃದುವಾಗುತ್ತದೆ. ಮನಸ್ಸು ಬೆರಗಾಗುತ್ತದೆ. “ಛೇ ಕರಿಮಾಯಿ ದೊಡ್ಡವಳು” ಎನಿಸುತ್ತದೆ. ಒಬ್ಬ ಜನಪದ ಕವಿ ಹಾಡಿದಂತೆ ಸಾಯುವುದೇ ನಿಜವಾದರೆ ಸಾವು ಈಗಲೇ ಇಲ್ಲೇ ಬರಲಿ – ಎನಿಸುತ್ತದೆ.

ಸೊಂಟದೆತ್ತರ ಇಂಥ ಬೆಳೆ ಹಸರಿನಲ್ಲಿ ಗಿರಿಜಾ ಹಿಂಡನಗಲಿದ ಜಿಂಕೆಯಂತೆ, ಹೆಜ್ಜೆ ಸಪ್ಪಳಕ್ಕೂ ಕಣ್ಣಗಲಿಸಿ, ಹೆದರುತ್ತ ತೋಟದ ಕಡೆ ಹೊರಟಿದ್ದಳು. ಇನ್ನೂ ಕೈ ಮಾರು ಹೊತ್ತಿತ್ತು. ಹೊಲದಿಂದ ಬರುವ ದನಕರುಗಳ ಕಾಲಧೂಳಿ ಸೂರ್ಯಕಿರಣದಲ್ಲದ್ದಿ ಕರಿಮಾಯಿಯ ಬಂಡಾರೆಸೆದಂತೆ ಕಾಣುತ್ತಿತ್ತು. ಮೇದು ಬಂದು ಗೂಡು ಸೇರುತ್ತಿದ್ದ ಗುಬ್ಬಿಗಳ ಹಿಂಡು ಗಿಡ ಗಿಡಕ್ಕೆ ಮರ ಮರಕ್ಕೆ ಗುಂಪು ಗುಂಪಾಗಿ ಮುತ್ತಿ, ತಮ್ಮ ಸ್ಥಳವನ್ನು ಇನ್ನೊಬ್ಬರು ಆಕ್ರಮಿಸಿದ್ದಕ್ಕೋ, ಹಸರಿನ ಸಂಭ್ರಮಕ್ಕೋ ಯದ್ವಾತದ್ವಾ ಕಿರುಚಿತ್ತಿದ್ದವು.

ಅವರ ತೋಟ ದೂರವೇನೂ ಇರಲಿಲ್ಲ. ಅವಳ ಬಗ್ಗೆ ಯಾರಿಗೂ ಸಂದೇಹ ಬರಬೇಕಾದ್ದಿರಲಿಲ್ಲ. ಭಯ, ಸಂಭ್ರಮ, ಕಲ್ಪನೆ ಬೆರೆತ ಮನಸ್ಸಿನಿಂದ ತೇಕುಸಿರು ಬಿಡುತ್ತ ತೋಟದ ಬಾವಿಯ ಬಳಿ ಬಂದಳು. ಯಾರೂ ಇರಲಿಲ್ಲ. ಪಕ್ಕದ ಹೊಲದಲ್ಲಿಯ ಜೋಳ ಅಲುಗಾಡಿಸಿತು. ನೋಡಿದರೆ ಆಳದಲ್ಲಿ ಬಸವರಾಜು ಮುಗುಳುನಗುತ್ತ ನಿಂತಿದ್ದವನು ಕೈಮಡಿ ಕರೆಯುತ್ತಿದ್ದ. ಸ್ವಲ್ಪ ಅಧೈರ್ಯವಾಯಿತು. ಓಡಿಬಿಡಲೇ ಎಂದುಕೊಂಡಳು. ಬಸವರಾಜು ಒಂದು ಚೆಂಡು ಹೂ ತಗೊಂಡು ಜೋರಿನಿಂದ ಇವಳ ಕಡೆ ಎಸೆದ. ಹೂಬಾಣ ಹುಡುಗಿಯ ಎದೆಗೇ ನೆಟ್ಟು ಒಂದು ಹೆಜ್ಜೆಯಿಟ್ಟು ಮತ್ತ ನಿಂತಳು. ಮತ್ತೊಂದು ಹೂವು ಎಸೆದ. ಸೊಂಟಕ್ಕೆ ತಾಗಿ ತೊಡೆ ನಡುಗಿ ಒಂದೊಂದೇ ಹೆಜ್ಜೆಯಿಟ್ಟು ಅವನ ಬಳಿ ಹೋದಳು ಹುಲಿ ಹಾರಿ ಜಿಂಕೆಮರಿಯನ್ನು ಮುರಿಯಿತು. ಗುದಮುರಿಗೆಗೆ ಎಳೆ ಜೋಳದ ಬೆಳೆ ಥರಥರ ನಡುಗಿತು.