ಆ ದಿನ ರಾತ್ರಿ ದೇವರೇಸಿ ಬಯಸಿದ ಸರವೇನೋ ಸಿಕ್ಕಿತು. ಆದರೆ ತಾಯಿಯಿಂದ ಭಿನ್ನವಾದ.

ದೇವರೇಸಿ ಬಂದು ಹೋದಾಗ ಸುಂದರಿ ಒಳಗಿದ್ದರೂ ಬಸವರಾಜು ಇಲ್ಲವೆಂದು ಹೇಳಿದ್ದ. ದೇವರೇಸಿಯ ಮುಖಚರ‍್ಯೆ ನೋಡಿ ತೊಡೆತಟ್ಟಿ ನಕ್ಕ. ರಾತ್ರಿ ಮಂದಿ ಉಂಡು ಮಲಗೋ ಹೊತ್ತು. ಬಸವರಾಜು ಮತ್ತು ಸುಂದರಿ ರೇಡಿಯೋ ಕೇಳುತ್ತ ಕಾಲಮೇಲೆ ಕಾಲ ಹಾಕಿಕೊಂಡು ಕೂತಿದ್ದರು. ನಿರೀಕ್ಷಿಸಿದಂತೆ ದೇವರೇಸಿ ಬಂದ. ಮುಖ ಹೀರಿ ಒಗೆದು ಸೊಟ್ಟಿಯಾಗಿತ್ತು. ಕಣ್ಣು ಕೆಂಪಾಗಿ ಹರಳಾಗಿದ್ದವು. ಅವ ಬಂದಾಗ ಇಬ್ಬರೂ ಏಳಲಿಲ್ಲ. ಕೂತುಕೊಂಡೇ ಬಸವರಾಜು ಕಾಲು ಬದಲಿಸಿ ‘ಅದೇನ ದೊಡ್ಡ ಕಿಮ್ಮತ್ತಿನ ಸರಾ? ಅದಕ್ಯಾಕಿಷ್ಟ ಕಳವಳಪಡ್ತಿ?’ ಎಂದ ವರೇಸಿಗೆ ಅಸಮಾಧಾನವಾಯ್ತು.

“ಏನೆಂಬೋ ಮಾತೋ ಹುಡುಗಾ? ಬೆಂಕಿ ಕೆಂಡದಂಥಾ ದೇವೀ ಜೋಡಿ ನಗಡತಾರೇನೋ ಹುಚ್ಚಾ?”

ಈ ತನಕ ಬಾತಿಗೆಬಾರದ ಸರವಾಗಿದ್ದ ಅದರ ಬೆಲೆ, ದೇವರೇಸಿಯ ದೈನಾಸ ನೋಡಿದ ಮೇಲೆ, ಬಸವರಾಜನಿಗೆ ತಿಳಿದುಬಿಟ್ಟಿತು. ‘ಕೊಡೋಣಂತ, ನಾವೆಲ್ಲಿ ಓಡಿಹೋಗ್ತೀವೇನು? ಏನೋ ಹುಡುಗಾಟದ ಹುಡುಗಿ, ತಂದಾಳ, ಕೊಡಸ್ತೀನಿ. ಕೂತುಕೊ ಬಾ’ ಎಂದ. ಅಷ್ಟರಲ್ಲಿ ಸುಂದರಿ ಹರಿವಾಣದ ತುಂಬ ಭಟ್ಟೀ ಸೆರೆತಂದು ಮುಂದಿಟ್ಟಳು. ಈಗ ಸರ ತಿರುಗಿ ಕೊಡಸುತ್ತಾನೆಂದು ಖಾತ್ರಿಯಾಗಿತ್ತು. ಕೂತ. ಬೆಳಗಿನಿಂದ ತುತ್ತು ಕೂಳಿಲ್ಲ, ಹನಿ ನೀರು ಮುಟ್ಟಿರಲಿಲ್ಲ. ಒಮ್ಮೆಲೆ ಹಸಿದ ಅರಿವಾಯ್ತು. ಕುಡಿದ, “ಇನ್ನ ಸರಾ ಕೊಡವಾ” ಅಂದ. ಇನ್ನೊಮ್ಮೆ ಹರಿವಾಣ ತುಂಬಿದಳು. ಅದನ್ನೂ ಕುಡಿದ. ಖಂಡಬಂತು, ತಿಂದ. ಸುಮ್ಮನೇ ಕೂತ. ಬಸವರಾಜು ಹೇಳಿದ – “ಬೆಂಕೀ ಕೆಂಡದಂಥಾ ದೇವೀ ಅಂತೀ; ಆ ಸರ ಇದ್ದಲ್ಲಿಂದ ಇಲ್ಲಿ ಬಂದ ಬೀಳೋ ಹಾಂಗ ಮಾಡು” ಅಂದ.ದೇವರೇಸಿ ಸುಮ್ಮನಾದ. “ತಾಯೀ ಸತ್ಯ ಅಷ್ಟಿದ್ದರ ನಾ ರಕ್ತ ಕಾರಿ ಸಾಯೋ ಹಂಗ ಮಾಡಲಿ” ಎಂದು ಸುಂದರಿಯೂ ಮಾತು ಸೇರಿಸಿದಳು, ಬಸವರಾಜನ ಮುಗುಳು ನಗೆಗೆ ತನ್ನ ಹೀಹೀ ನಗೆ ಸೇರಿಸುತ್ತ. ದೇವರೇಸಿ ಒಂದು ಢರ್ರನೆ ತೇಗಿ ಬಿಕ್ಕತೊಡಗಿದ. ಕೂಡಲೇ ಬಸವರಾಜು “ತಾಯಿ ಬಂದಾಳ ಪಾದಾ ಹಿಡಕೊ” ಎಂದು ಸುಂದರಿಗೆ ಹೇಳಿದ. ಸುಂದರಿ ಓಡಿಹೋಗಿ ಕಾಲು ಹಿಡಿದಳು.

ಪಾದಾ ಹಿಡಕೊಂಡವಳು ಹಾಗೇ ಕಾಲು ತಿಕ್ಕತೊಡಗಿದಳು. ದೇವರೇಸಿ ತೇಲುಗಣ್ಣಾಗಿ ಹಾಗೇ ಹಿಂದೆ ಮುಂದೆ ತೂಗುತ್ತ, ಬಿಕ್ಕುತ್ತ ಕೂತ. ಇದು ದೇವೀ ಮೈಮೇಲೆ ಬಂದ ಗುರುತು. ಬಸವರಾಜು ಒಳಗೊಳಗೇ ನಗುತ್ತಿದ್ದವನು ಸುಂದರಿಗೆ ಕಣ್ಣು ಹೊಡೆದ. ಅವಳು ಕಾಲು ತಿಕ್ಕುತ್ತ, ತಿಕ್ಕುತ್ತ ಮೊಳಕಾಲು ದಾಟಿ ತೊಡೆ ತಿಕ್ಕ ತೊಡಗಿದಳು. ತಾಯಿ ಬಿಕ್ಕು ಗಕ್ಕನೆ ನಿಂತು, ಗಡಬಡಿಸಿ ಮೇಲಿನ ಕೈ ನಿವಾರಿಸಿದ. ಸುಂದರಿ ಹೋ ಎಂದು ನಕ್ಕಳು. ಬಸವರಾಜು ಹುಸಿ ಸಿಟ್ಟಿನಿಂದ ‘ತಾಯೀ ತೊಡೆಯಲ್ಲಿ ಬೆಂಕಿಯಿದೆ. ಹಾಗೆಲ್ಲ ಆಟ ಆಡಬ್ಯಾಡ’ ಎಂದ. ಸುಂದರಿ ಇನ್ನೂ ನಕ್ಕಳು. ನಗು ತಡೆಯದೆ ಒಳಗೆ ಹೋದಳು. ಮತ್ತೆ ಹರಿವಾಣ ತುಂಬಿದಳು. ದೇವರೇಸಿ ಕುಡಿಯದೆ “ತಾಯಿ ನನ್ನ ಕೊಂದ ಹಾಕತಾಳ ಸರಾ ಕೊಡ ಎವ್ವಾ” ಎಂದು ದೊಡ್ಡ ದನಿ  ತೆಗೆದು ಅಳುತ್ತಾ ಸುಂದರಿಗೆ ಕೈಮುಗಿದ. ಬಸವರಾಜು ಗಾಬರಿಯಾಗಿ ತಕ್ಷಣ ಸರಕೊಡುವಂತೆ ಹೇಳಿ ಹೊರಗೆ ಬಂದ, ಯಾರಾದರೂ ಇಲ್ಲಿ ನಡೆಯುವುದನ್ನ ಗಮನಿಸುತ್ತಿದ್ದರೆಯೋ ಎಂದು ನೋಡುವುದಕ್ಕೆ. ಸದ್ಯ ಯಾರಿರಲಿಲ್ಲ, ಅಲ್ಲೇ ನಿಂತ.

ಸುಂದರಿ ಸರ ತಂದು, ‘ತಗೋ’ ಎಂದಳು. ದೇವರೇಸಿ ಅಡರಾಸಿ ಅದಕ್ಕೆ ಕೈಹಾಕಹೋದಾಗ ನಗುತ್ತ ಹಿಂದೆ ಸರಿದಳು. ಬುಡಕಡಿದ ದೊಡ್ಡ ಮರ ಬಿದ್ದ ಹಾಗೆ ದೇವರೇಸಿ ಸಮತೋಲ ತಪ್ಪಿಬಿದ್ದ. ಮತ್ತೆ ತೋರಿಸಿದಳು. ಮತ್ತೆ ಎದ್ದು ಅಲ್ಲೀತನಕ ತೂರಾಡುತ್ತ ಹೋಗಿ ಕೈಹಾಕಿದ. ಮತ್ತೆಯೂ ಹಿಂದೆ ಸರಿದಳು. ಹೀಗೆ ನಾಲ್ಕೈದು ಸಲ ಮಾಡಿದಾಗ ಕೊನೆಗೆ ಅವಳನ್ನೇ ಗಟ್ಟಿಯಾಗಿ ಹಿಡಿದು ಕಸಿಯುತ್ತಿದ್ದ. ಬೆಳಗಿನಿಂದ ಹಸಿದು ನಿಶ್ಯಕ್ತಗೊಂಡಿದ್ದ. ರಕ್ತ ಕಾರಿಕೊಂಡಿದ್ದ. ಮೈಮೇಲೆ ಅಡರಿದ್ದ ಅವನನ್ನು ಜೋರಿನಿಂದ ಚಿಮಣಾ ದೂಕಿದಳು. ಅಲ್ಲೇ ನಿಂತ.

ಸುಂದರಿ ಸರ ತಂದು, ‘ತಗೋ’ ಎಂದಳು. ದೇವರೇಸಿ ಅಡರಾಸಿ ಅದಕ್ಕೆ ಕೈಹಾಕ ಹೋದಾಗ ನಗುತ್ತ ಹಿಂದೆ ಸರಿದಳು. ಬುಡಕಡಿದ ದೊಡ್ಡ ಮರ ಬಿದ್ದ ಹಾಗೆ ದೇವರೇಸಿ ಸಮತೋಲ ತಪ್ಪಿಬಿದ್ದ. ಮತ್ತೆ ತೋರಿಸಿದಳು. ಮತ್ತೆ ಎದ್ದು ಅಲ್ಲೀತನಕ ತೂರಾಡುತ್ತ ಹೋಗಿ ಕೈಹಾಕಿದ. ಮತ್ತೆಯೂ ಹಿಂದೆ ಸರಿದಳು. ಹೀಗೆ ನಾಲ್ಕೈದು ಸಲ ಮಾಡಿದಾಗ ಕೊನೆಗೆ ಅವಳನ್ನೇ ಗಟ್ಟಿಯಾಗಿ ಹಿಡಿದು ಕಸಿಯುತ್ತಿದ್ದ. ಬೆಳಗಿನಿಂದ ಹಸಿದು ನಿಶ್ಯಕ್ತಗೊಂಡಿದ್ದ. ರಕ್ತ ಕಾರಿಕೊಂಡಿದ್ದ. ಮೈಮೇಲೆ ಅಡರಿದ್ದ ಅವನನ್ನು ಜೋರಿನಿಂದ ಚಿಮಣಾ ದೂಕಿದಳು. ಅಲ್ಲೇ ಜೋಲಿ ತಪ್ಪಿಲ ಕುಸಿದ. ಕೈಕಾಲೂರಿ ಏಳಬೇಕೆಂದಾಗ ಚಿಮಣಾ ಓಡಿಹೋಗಿ ಅವನ ಡುಬ್ಬ ಹತ್ತಿ ಕುಕ್ಕರಿಸಿದಳು. ಏಳಲಾರದೆ ಬೀಳಲಾರದೆ ನೊಂದ ಪ್ರಾಣಿಯ ಹಾಗೆ ದೇವರೇಸಿ ಹೋರಾಡುತ್ತಿದ್ದ. ಹೇಳಿ ಕಳಿಸಿದ ಹಾಗೆ ಬಸವರಾಜು ಒಳಗೆ ಬಂದ. ಅದೇನು ಉಮೇದಿ ಉಕ್ಕಿತ್ತೋ ಸುಂದರಿ ಹೋ ಎಂದು ನಗುತ್ತ ಹುಲಿಯೇರಿದ ಕರಿಮಾಯಿಯ ಭಂಗಿಯಲ್ಲಿ ಕೂತ ಆಶೀರ್ವದಿಸಿದಳು. ಬಸವರಾಜನಿಗೆ ದಿಗಿಲಾಯಿತೇನೋ, ಗಂಭೀರವಾಗಿ ಕೈಮುಗಿದ!

ಅಂತೂ ಹುಣ್ಣಿಮೆಯೇನೋ ಬಂತು. ತಾಯಿ ರಂಡಿಯೂ ಆದಳು.

ತಾಯಿ ರಂಡಿ ಆದುದಕ್ಕೆ ಏನೋ ಚಂದ್ರ ಕ್ಷಯರೋಗಿಯಂತೆ ಬಿಳಿಚಿದ.

ಆ ದಿನ ಬೆಳಗಿನ ಬೆಳ್ಳಿಮೂಡುವ ಸಮಯದಲ್ಲಿ ಗೌಡನಿಗೆ, ಕರಿಮಾಯಿಯ ಗುಡಿಯ ನಡುಗಂಬ ನಡುಗಿ ಇಡೀ ಗುಡೀ ಕುಸಿದಂತೆ ಕನಸಾಯಿತು. ಫಕ್ಕನೆ ಎದ್ದು ಕೂತ. ಎದೆ ನಡುಗಿತು. ಕೂತು ಚಿಂತಿಸಲಾಗಲಿಲ್ಲ. ಅನಾಹುತ ತಪ್ಪಿಸುವುದು ಸಾಧ್ಯವೇ ಎಂದು ನೋಡಿದ. ಹಾದಿ ಕಾಣಲಿಲ್ಲ. ಕನಸನ್ನು ದತ್ತಪ್ಪನಿಗೆ, ದೇವರೇಸಿಗೆ ತಿಳಿಸಬೇಕೆಂದು ಆಗಲೇ ಜಳಕಕ್ಕೆ ಕೆರೆಯ ಕಡೆ ನಡೆದ.

ಊರಿಗಿನ್ನೂ ಬೆಳಗಾಗಿರಲಿಲ್ಲ. ಗುಡಿಗೆ ಹೋದ. ಒಳಗೆ ಕತ್ತಲೆಯಿತ್ತು. ತಾಯಿಯ ಮೂರ್ತಿ ಕಾಣಿಸುತ್ತಿರಲಿಲ್ಲ. ಹಾಗೇ ಪ್ರದಕ್ಷಿಣೆ ಹಾಕಿ ನಮಸ್ಕರಿಸಿ ಬಂದು ಹೊರಗೆ ಪೌಳಿಯ ದೀಪಗಂಬದ ಕಟ್ಟೆಯ ಮೇಲೆ ಕೂತ. ಶೀಲೆ ಹುಣ್ಣಿಮೆಯಲ್ಲಿ ತಾಯಿಯ ಕೈ ಮುರಿದವರ ಪತ್ತೆಯಾಗಿರಲಿಲ್ಲ. ಗುಡಿಕಟ್ಟಿಸಿದ ತನ್ನ ಹಿರಿಯರ ನೆನಪಾಯಿತು. ತಾಯಿ ಸೇಡು ತೀರಿಸಿಕೊಳ್ಳುತರತಿದ್ದಾಳೆನ್ನಿಸಿ ಭಯವಾಯ್ತು. ಮತ್ತೆ ಮಗನ ನೆನಪಾಗಿ ಕಂಠ ತುಂಬಿ ಬಂತು. ಎಷ್ಟು ಹೊತ್ತು ಕೂತಿದ್ದನೋ, ಮೈಯೆಚ್ಚರ ಬಂದಾಗ ಬೆಳ್ಳಂಬೆಳಕಾಗಿತ್ತು. ಮತ್ತೊಮ್ಮೆ ಪ್ರದಕ್ಷಿಣೆ ಹಾಕಿದ. ಕಣ್ಣುತುಂಬ ತಾಯಿಯ ಮೂರ್ತಿ ನೋಡಿದ. ‘ಹಡದವ್ವಾ ನನ್ನ ಮನೀ ದೀಪಾ ಉಳಸು’ ಎಂದು ಅಡ್ಡಬಿದ್ದ. ಶೀಗೇ ಹುಣ್ಣಿಮೆಯಲ್ಲಿ ಮುರಿದ ಕೈಯಲ್ಲಿ ಹಾಗೇ ಕಟ್ಟಿದ್ದರಲ್ಲ, ಅದು ಕೆಳಗೆ ಬಿದ್ದಿತ್ತು. “ಕತ್ತಿ ಚೆಲ್ಲೋದ ನಿನ್ನ ಪದವಿ ಅಲ್ಲ ತಾಯಿ, ಮತ್ತ ಹಿಡದ ಊರ ಜೀಂವಾ ಕಾಯಿ” ಎಂದು ಮತ್ತೆ ಮೊದಲಿನಂತೆ ಕಟ್ಟಿದ. ಆ ಕನಸು, ಈ ಅಪಶಕುನ ಒಟ್ಟಾರೆ ಅಮಂಗಳವೆನ್ನಿಸಿ ದತ್ತೂನ ಮನೆಕಡೆ ಹೆಜ್ಜೆ ಹಾಕಿದ.

ಅಲ್ಲಿ ದತ್ತಪ್ಪ ಸ್ನಾನ ಕೂಡ ಮಾಡದೇ ತಲೇಮೇಲೆ ಕೈಹೊತ್ತು ಚಿಂತಾಮಣಿ ನೋಡುತ್ತ ಕೂತಿದ್ದ. ಇವ ತನ್ನ ಕನಸು ಹೇಳಬೇಕೆಂದು ಬಾಯಿ ತೆರೆಯುವುದರೊಳಗೆ ದತ್ತಪ್ಪ –

“ಗೌಡಾ, ರಾತ್ರಿ ಕನಸಿನಾಗ ನನ್ನ ಚಿಂತಾಮಣಿ ಕಳಧಾಂಗಿತ್ತೋ!” ಅಂದ. ಗೌಡ ಮಾತಾಡಲೇ ಇಲ್ಲ.

ಬಹುಶಃ ಇವರಿಬ್ಬರ ಕನಸು ಕೇಳಿದ ಮೇಲೆ ಹೇಳಿದಳೋ ಅಥವಾ ನೆನಸಿಕೊಂಡಳೋ ಯಾಕೆಂದರೆ ಲಗಮವ್ವ ಕವಿಯಿತ್ರಿಯಾದ್ದರಿಂದ ಬೇಕುಬೇಕಾದ ಸಮಾಂತರ ಸಂಗತಿಗಳನ್ನು ನಿಂತಕಾಲ ಮೇಲೇ ಹೊಸೆಯಬಲ್ಲವಳಾದ್ದರಿಂದ ಹೀಗೆ ಹೇಳಬೇಕಾಯಿತು. ಅವಳ ನಾಲಗೆ ಕಳಚಿ ಬಿದ್ದಂತೆ ಕನಸಾಗಿತ್ತು.

ಊರಿಗೆಲ್ಲಾ ಆದಂತೆ ದೇವರೇಸಿಯ ಗುಡಿಸಲಿಗೂ ಬೆಳಗಾಯಿತು. ಬೆಳತನಕ ಕಣ್ಣಿಗೆ ಕಣ್ಣು  ಹಚ್ಚಿರಲಿಲ್ಲವಾದ್ದರಿಂದ ಕಣ್ಣು ಕೆಂಪಗೆ  ಕರಿಮಾಯಿಯ ಕಣ್ಣಿನಂತೆ ಕಾಣುತ್ತಿದ್ದವು. ಜ್ವರದಿಂದ ಮೈ ಸಿಡಿಯುತ್ತಿತ್ತು. ತಾನಿಂದು ಬದುಕುವುದಿಲ್ಲವೆಮದು ಖಚಿತವಾಗಿತ್ತು. ಏನಿದ್ದದ್ದು ಏನಾಗಿ ಹೋಗಿತ್ತು! ಊರವರ ಮುಖ ನೋಡುವುದಿರಲಿ, ತಾಯಿಯ ಮುಖ ಕಣ್ಣಾರೆ ನೋಡುವುದು ಹ್ಯಾಗೆ, ಕೈಯಾರೆ ಮುಟ್ಟಿ ಪೂಜೆ ಮಾಡೋದು ಹ್ಯಾಗೆ? ಓಡಿಹೋಗಿ ಒಂದು ಸಲ ನಿನ್ನೆ ನಡೆದದದ್ದನ್ನೆಲ್ಲ ಗೌಡನ ಮುಂದೆ ಒದರಿಬಿಡಲೆ ಎನ್ನಿಸಿತು. ಯಾಕೆ, ತಾಯಿಯ ಮಹತ್ವದ ಹುಣ್ಣಿಮೆ ಇದು; ತಾಯಿ ರಂಡಿಯಾಗುವ ಹುಣ್ಣಿಮೆ. ಆದದ್ದಾಗಲಿ ತಾಯಿ ಬೇಕಾದರೆ ನನ್ನನ್ನು ರಕ್ತಕಾರಿಸಿ ಕೊಂದು ಇನ್ನೊಬ್ಬರನ್ನಾಯ್ದುಕೊಳ್ಳಲಿ ಎಂದುಕೊಂಡ. ಇಷ್ಟು ವರ್ಷ ದೇವರೇಸಿಯಾಗಿದ್ದವನಿಗೆ ಅದೇ ಮಾನದ ಸಾವು. ಅಥವಾ ತಾಯಿ, ಎಷ್ಟಂದರೂ ಹಡೆದ ಕರುಳು. ನನ್ನ ತಪ್ಪನ್ನು ಹೊಟ್ಟೆಯಲ್ಲಿ ಹಾಕಿಕೊಳ್ಳಬಾರದೇಕೆ? ‘ನಾವೋ ಉಪ್ಪು ಹುಳಿ ಖಾರ ತಿಂಬವರು, ತಪ್ಪು ಮಾಡುವವರು, ತಾಯಿಯಲ್ಲದೆ ಇನ್ಯಾರು ಕಾಪಾಡಬೇಕು? ಮಗು ಹೇಸಿಕೆ ಮಾಡಿಕೊಳ್ಳುತ್ತದೆ. ತಾಯಿ ತೊಳೆದು ಹತ್ತಿರ ಕರೆದುಕೊಳ್ಳುವುದಿಲ್ಲವೆ? ಏನು ಮಾಡುತ್ತಿದ್ದೇನಂತ ಅರಿವಿಲ್ಲದ ಮಗು ತಾಯಿಗೆ ಹೊಡೆಯುತ್ತದೆ. ಹಸಿದಾಗ ಮತ್ತೆ ಅವ್ವಾ ಎನ್ನುತ್ತದೆ. ಹೊಡೆದಾಗ ಹೊಡಿಸಿಕೊಂಬವಳೂ ಅವಳೇ. ಹಸಿದಾಗ ಮೊಲೆಯೂಡುವವಳೂ ಅವಳೇ ಅಥವಾ, ಉಗುಳಿದಳು ಅನ್ನೋಣ. ಅವಳೇನು ಹೊರಗಿನವಳೆ? ತಾಯಿಯಲ್ಲವೆ? ಅವಳಿಗೆ ಉಗುಳುವ ಹಕ್ಕಿದೆ. ಆಕೆ ನನ್ನನ್ನು ಗುಡಿಯಾಚೆ ಉಗುಳಿದರೂ ಅದು ಮಾನವೆ. ಅವಳೇ ಹುಟ್ಟಿಸಿದಳು. ಅವಳೇ ಕೊಲ್ಲಲಿ, ಎಂದುಕೊಂಡು ಧೋತರ ತಗೊಂಡೆದ್ದ. ಮೈಯಲ್ಲಿ ದಿನದ ಕಸುವಿರಲಿಲ್ಲ. ಉತ್ಸಾಹವಿರಲಿಲ್ಲ. ಮಂದಿಯ ಮುಖ ನೋಡುವ ಧೈರ್ಯವಿರಲಿಲ್ಲ. ಸುಡುಸುಡುವ ಜ್ವರ ಬೇರೆ. ಮೆಲ್ಲಗೆ ಸಾಧ್ಯವಿದ್ದಷ್ಟು ಜನಗಳನ್ನು ನಿವಾರಿಸಿ ಕೆರೆಗೆ ಹೋಗಿ ಮಿಂದ. ಒದ್ದೆಯುಟ್ಟು ಗುಡಿಗೆ ಬಂದ. ಕಣ್ಣಿಗೆ ಕತ್ತಲು ಬಂದು ಗುಡಿಯ ಹೊಸ್ತಿಲ ಮೇಲೆ ಬಿದ್ದ. ಮತ್ತೆ ತಾನೇ ಎದ್ದು ಒಳಗೆ ಹೋದ.

ದೀಪ ಹಚ್ಚಿದ. ತಾಯಿಯ ಸೀರೆ ಕಳಚಿ ಮೈಗೆ ಮಜ್ಜನ ಮಾಡಿಸುವಾಗ ಮೈ ಝಂ ಎಂದು ಚಳಿ ಬಂದು ನಡುಗಿದ. ನಡುಗುವ ಕೈಗಳಿಂದಲೇ ಮಡಿ ಉಡಿಸಿದ. ತಾನು ತಂದಿದ್ದ ಕವಡೆಯ ಸರ ಹಾಕಿದ. ಹೂವೇರಿಸಿದ. ಗಂಟೆ ಬಾರಿಸಿದ. ಕೊನೆಗೆ ಪ್ರದಕ್ಷಿಣೆ ಹಾಕಿ ಅಡ್ಡಬಿದ್ದ. ಏಳುವ ಮನಸ್ಸಾಗಲೊಲ್ಲದು. ಚಳಿಜ್ವರ ನೆತ್ತಿಗೇರತೊಡಗಿತು.

ತಡವರಿಸಿಕೊಂಡು ಮೇಲೆದ್ದು ತಾಯಿಯ ಮುಖದ ಕಡೆ ನೋಡಿದ. ಒತ್ತರಿಸಿ ದುಃಖ ತಡೆಯಲಾಗದೆ ‘ಎವ್ವಾ’ ಎಂದು ಅಳತೊಡಗಿದ. “ಎದಿ ಕಲ್ಲ ಮಾಡಿಕೊ ಬ್ಯಾಡ ತಾಯೀ”, ಎಂದು ಎದೆ ಎದೆ ಬಡಿದುಕೊಂಡ. “ ನಾ ನಿನ್ನ ಮಗನಾ ಹಡದವ್ವಾ” ಎನ್ನುತ್ತ ಹಣೆಯನ್ನು ಕಲ್ಲಿಗೆ, ಗದ್ದಿಗೆಗೆ ಬಾರಿಸಿದ. ಅದೇನು ಕರಿಮಾಯಿಯ ಮಾಯೆಯೋ, ಮೂರ‍್ತಿಯ ಬಲಭುಜದ ಹೂವು ಕೆಳಗೆ ಬಿತ್ತು. ದೇವರೇಸಿಗೆ ಹೋದ ಜೀವ ತಿರುಗಿ ಬಂದಷ್ಟು ಸಂತೋಷವಾಯ್ತು. ಸ್ವಥಾ ತಾಯಿ ಅವನನ್ನು ತಬ್ಬಿಕೊಂಡು, ಮೈದಡವಿ ‘ಮಗನ ಚಿಂತೀ ಮಾಡಬ್ಯಾಡ. ನಾ ಇದ್ದೀನಿ’ ಅಮದಷ್ಟು ನೆಮ್ಮದಿಯಾಯ್ತು. ಮೈ ಹುಷಾರಾಗಿ ಚಳಿ ಜ್ವರ ಬಿಟ್ಟೋಡಿ ಮೈ ಬೆವರಿದ. ತಾಯಿಗೆ ಅತ್ಯಂತ ವಿನೀತನಾದ….ಕೃತಜ್ಞತೆಯಿಂದ ತುಂಬಿ ತುಂಬಿ ಕಣ್ಣೀರು ತುಳುಕಿದ. “ತಾಯಿ ನನ್ನ ತಪ್ಪ ಹೊಟ್ಯಾಗ ಹಾಕ್ಕೊಂಡ್ಲು; ತಾಯಿ ಆಶೀರ್ವಾದ ಆತು” ಎಂದು ತನಗೆ ತಾನೇ ಗಟ್ಟಿಯಾಗಿ ಹೇಳಿಕೊಳ್ಳುತ್ತ ಗುಡಿಸಲ ಕಡೆ ನಡೆದ.

ಇಡೀ ದಿನ ಗುಡಸೀಕರನ ಪಾರ್ಟಿಯ ಪ್ರಚಾರವೋ ಪ್ರಚಾರ. ಬೆಳಗಾವಿಯಿಂದ ಬ್ಯಾಂಡ್ಸೆಸೆಟ್‌ನವರನ್ನು, ಅವರ ಹಿಂದೆ ಕುಣಿಯುವ ಪಾತ್ರದ ಸೂಳೆಯರನ್ನು ಕರೆತಂದು ಊರ ತುಂಬ ಕುಣಿಸಿದರು. ಸ್ವಯಂ ಗುಡಸೀಕರ ಚತುಷ್ಟಯರೊಂದಿಗೆ ಮನೆ ಮನೆಗೆ ಹೋಗಿ ತಮಗೇ ಹೋಟು ಹಾಕಬೇಕೆಂದುಅಬಾಲವೃದ್ಧರಿಗೆ ವಿನಂತಿಸಿಕೊಂಡು  ಬಂದ. ಗೌಡ ದತ್ತಪ್ಪ ಹೋಗಲಿಲ್ಲ. ಕನಸುಗಳಿಂದ ಅವರ ಮನಸ್ಸು ಮೊದಲೇ ಜರ್ಜರಿತವಾಗಿತ್ತು. ನಿಂಗೂ ಮಾತ್ರ ಕುಸ್ತೀ ಹುಡುಗರನ್ನು ಕರೆದುಕೊಂಡು ಗೌಡರಿಗೇ ಹೋಟು ಹಾಕಬೇಕೆಂದು, ಗಂಡಸರು, ಹೆಂಗಸರೆನ್ನದೆ ಎಲ್ಲರಿಗೂ ಹೇಳಿ ಬಂದ. ಲಗಮವ್ವ ಹೆಂಗಸು ರೀತಿಯಲ್ಲಿ ಹೇಳಿ ಬಂದಳು. ಬಾಳೂ ಬಸೆಟ್ಟಿ ಅವರೂ ಅಲೆದಾಡಿ ಬಂದರು. ಕಂಡಕಂಡವರಿಗೆಲ್ಲ ದೇವಿಯ ಬಂಡಾರ ಹಚ್ಚಿಬಂದರು. ಈ ಗಡಿಬಿಡಿಯಲ್ಲಿ ಸಂಜೆಯಾದದ್ದೇ ಯಾರಿಗೂ ತಿಳಿಯಲಿಲ್ಲ.

ಸೂರ್ಯ ಪಶ್ಚಿಮದಲ್ಲಿ ಮುಳುಗುತ್ತಿದ್ದ. ದನಕರು ಮನೆಗೆ ಧಾವಿಸುವ ಅವಸರದಲ್ಲಿ ಎದ್ದ ಧೂಳು, ಪ್ರಚಾರಕ್ಕಾಗಿ ಜನ ಓಡಾಡಿ ಎದ್ದ ಧೂಳು, ಪಾತ್ರದವರು ಕುಣಿದಾಡಿ ಹುಡುಗರು ಅವರ ಸುತ್ತ ಗುಂಪುಗೂಡಿ ತುಳಿದಾಡಿ ಎದ್ದ ಧೂಳು, ಕಾರಖಾನೆಯ ಹೊಗೆಯಂತೆ ಅಡರಿದ್ದ ಕಲಬೆರಕೆಯ ಈ ವಿಚಿತ್ರ ಧೂಳಿನಲ್ಲಿ ಊರಿನ ವಿವರಗಳು ಅಸ್ಪಷ್ಟವಾಗಿ ತೋರುತ್ತಿದ್ದವು. ಇದರ ಜೊತೆಗೆ ಮೈಕಿನ, ಬ್ಯಾಂಡ್‌ಸೆಟ್ಟಿನ, ಮನುಷ್ಯರ ವಿಕಾರ ದನಿಗಳು ಬೆರೆತು ಊರಿಗೂರೇ ಕಿಟಾರನೆ ಕಿರುಚುತ್ತಿದ್ದಂತೆ ಕೇಳಿಸುತ್ತಿತ್ತು. ಮಕ್ಕಳು ಹೆದರಿ ಮೊಲೆ ಮರೆತು ಚೀರಿದರೂ ಯಾರಿಗೂ ಕೇಳಿಸದಂತಾಗಿತ್ತು. ಪಶ್ಚಿಮದ ಆಗಸ ಕರಿಮಾಯಿಯ ಕೆಂಗಣ್ಣಿನಂತೆ ಕೆಂಪಗಾಗಿತ್ತು. ಮೂಡಣದಲ್ಲಿ ಹುಣ್ಣಿಮೆ ಚಂದ್ರನ ಆಕೃತಿ ಮೂಡಿತು.

ಇದು ಉಳಿದೆಲ್ಲ ರಂಡಿ ಹುಣ್ಣಿಮೆಯಂತಿರಲಿಲ್ಲ. ಎದ್ದ ಧೂಳು ನೆಲಕ್ಕಂಟಿರಲಿಲ್ಲ. ಸಪ್ಪಳ ನಿಂತಿರಲಿಲ್ಲ. ಬೆಳದಿಂಗಳು ಹುಚ್ಚೆಚ್ಚು ಕೆರಳಿದಂತೆ ಆಕಾರಗೊಂಡುದಕ್ಕೆಲ್ಲ ನೆರಳು ಬಂತು. ನೆರಳು ಕ್ಷಣೇ ಕ್ಷಣೇ ದಟ್ಟವಾಗಿ ಕತ್ತಲೆಯ ಮರಿಯಂತಾಯಿತು.

ನಾನಾ ನಮೂನೆಯ ದನಿಗಳಲ್ಲಿ ಗೌಡನ ಮನೆಯಿಂದ ಹೊರಟ ಹಲಗೆ, ಡೊಳ್ಳಿನ ದನಿಯೂ ಒಂದಷ್ಟೆ. ಕೆಲವರ ಊಟವಾಗಿತ್ತು; ಕೆಲವರದಿಲ್ಲ. ಆಗಲೇ ಪಂಚರು, ಹಿರಿಯರು, ಆಳು ಮಕ್ಕಳು, ಗರತಿಯರು ಗೌಡನ ಮನೆಯ ಮುಂದೆ ಸೇರಿದ್ದರು. ಪಲ್ಲಕ್ಕಿಯಲ್ಲಾಗಲೇ ದೇವಿಯ ಬಂಗಾರದ ಮುಖವನ್ನಿಟ್ಟಿದ್ದರು. ಒಂದು ಕಡೆಯಿಂದ ದತ್ತಪ್ಪ, ಇನ್ನೊಂದು ಕಡೆಯಿಂದ ಗೌಡ ತಾಯಿಗೆ ಚೌರಿ ಬೀಸುತ್ತಿದ್ದರು. ಡೊಳ್ಲಿನ ಅಬ್ಬರದಲ್ಲಿ ಅವರ ಹಾಡು ಕೇಳಿಸುತ್ತಿರಲಿಲ್ಲ. ಬರುವವರೆಲ್ಲ ಬಂದುದು ಖಚಿತವಾದೊಡನೆ ಗೌಡ ಮೆರವಣಿಗೆ ಹೊರಡಲೆಂದ. ‘ಚಾಂಗು ಭಲೇ’ ಎಂದು ಮೆರವಣಿಗೆ ಹೊರಟಿತು.

ಮೆರವಣಿಗೆ ಊರಿನ ಮುಖ್ಯ ರಸ್ತೆಗಳಲ್ಲಿ ಹಾದು ದೇವರೇಸಿಯ ಗುಡಿಸಲಿಗೆ ಬಂತು. ದೇವರೇಸಿಯಾಗಲೇ ಹಸಿರು ಸೀರೆ ಉಟ್ಟು ಸಿದ್ಧನಾಗಿದ್ದ. ದೇವರೇಸಿಯ ಮೈಸುಡುತ್ತಿದ್ದುದನ್ನು ಗಮನಿಸಿ ಲಗಮವ್ವ “ಯಾಕೋ ಅವ್ವನ ಮೈ ಕಾದ ತಗಡಾಗೇತಿ” ಎಂದಳು. ಉಳಿದ ಗರತಿಯರೂ ಗಮನಿಸಿದರು. ದೇವರೇಸಿ ಉತ್ತರ ಕೊಡಲಿಲ್ಲ. ಮುತ್ತೈದೆಯರು ಹಾಡುತ್ತ ಅವನ ಎರಡೂ ಕೈಗೆ ಐದು ವರ್ಣಗಳ ಬಳೆ ಮೊಳಕೈತನಕ ತೊಡಿಸಿದರು. ಹಣೆ ತುಂಬ ಕುಂಕುಮ, ಬಂಡಾರ ಹಚ್ಚಿದರು. ಜಡೆಗೆ ಹೂ ಮುಡಿಸಿ ಬಂಡಾರ ಸಿಡಿಸಿದರು. ಕಾಲಿಗೆ ತೋಡೆ ತೊಡಿಸಿದರು. ಕೈಯಲ್ಲಿ ನವಿಲುಗರಿಯ ಚೌರಿ ಹಿಡಿದುಕೊಂಡಾದ ಮೇಲೆ ‘ಚಾಂಗು ಭಲೇ’ ಎಂದು ಮೆರವಣಿಗೆ ಗುಡಿಯ ಕಡೆ ನಡೆಯಿತು…

ಪೌಳಿಗೆ ಬಂದು ವಾಲಗ ಸುರುವಾಯಿತು. ಗೌಡ ತಾಯಿಯ ಬಂಗಾರದ ಮುಖವನ್ನೂ ಮಡಿಲಲ್ಲಿ ಬಚ್ಚಿಟ್ಟು ಕೂಸಿನಂತೆ ಎದೆಗವಚಿಕೊಂಡ. ದತ್ತಪ್ಪ ಚೌರಿ ಬೀಸುತ್ತ ದಾರಿ ತೋರಿಸಿದ. ತಾಯಿಯ ಬಂಗಾರದ ಮುಖವನ್ನು ಗರ್ಭಗುಡಿಗೆ ಒಯ್ದರು. ನಿಶ್ಯಕ್ತಿಯಿಂದ ದೇವರೇಸಿ ನಡೆಯಲಾರದಾಗಿದ್ದ ಲಗಮವ್ವ ರಟ್ಟೆಯಲ್ಲಿ ಕೈಹಾಕಿ ಒಳಗೊಯ್ದಳು ಅವರಷ್ಟೆ ಒಳಗೆ ಹೋದೊಡನೆ ಬಾಗಿಲಿಕ್ಕಿತು.

ತಾಯಿಯ ಬಂಗಾರದ ಮುಖವನ್ನು ಮೂಲ ವಿಗ್ರಹಕ್ಕೆ ಜೋಡಿಸಿದರು. ಕೆಂಪಗೆ ಥಳ ಥಳ ಹೊಳೆಯುವ ಕಣ್ಣುಪಟ್ಟಿಗಳನ್ನು ಹೊಂದಿಸಿದರು. ಕವಡೆಯ ಸರ ತೆಗೆದು ತಾಯಿಯ ಎದುರಿಗಿಟ್ಟರು. ಗರಿಗರಿ ನೆರಿಗೆ ಹೊಯ್ದು ಹಸಿರು ಸೀರೆ ಉಡಿಸಿದರು. ಬಂಗಾರದ ಥಾರಾವರಿ ಆಭರಣ ತೊಡಿಸಿದರು. ವಿಗ್ರಹದ ಕೈಗೂ ಐದು ವರ್ಣದ ಬಳೆ ತೊಡಿಸಿದರು. ತಾಯಿಯ ಈ ಬಗೆಯ ಶೃಂಗಾರ  ಇನ್ನು ಒಂದು ತಿಂಗಳ ತನಕ ನೋಡದೊರೆಯುವುದಿಲ್ಲ. ಆದ್ದರಿಂದ ಗೌಡ, ಲಗಮವ್ವ, ದತ್ತಪ್ಪ ಬಿದ್ದ ಕನಸುಗಳಿಗೆ ಹೆದರಿದ್ದರಿಂದ ಇದ್ದೀತು, ತುಂಬ ಭಾವುಕರಾಗಿ ಕಣ್ಣುತುಂಬ ನೋಡಿದರು. ಹಿಂದೆ ತಾಯಿಯ ಕೈ ಸಿಡಿಯುವಂತೆ ಮಾಡಿದ ಪಾಪಿ ಪತ್ತೆಯಾಗಿರಲಿಲ್ಲ. ತಾಯಿಯ ಮಾತೇ ಹೀಗೆ. ಎಲ್ಲಾ ತಮ್ಮ ಪರಿಣಾಮಗಳಿಂದಲೇ ತಿಳಿಯುತ್ತವೆ. ಮೊದಲೇ ಗೊತ್ತಾದರೆ ಆಗುವ ಅನಾಹುತವನ್ನಾದರೂ ತಪ್ಪಿಸಬಹುದು. ಆದರೆ ತಿಳಿಯುವಂತೆ ಮಾತಾಡಲಯ ತಾಯಿ ತಮ್ಮಂತೆ ಮನುಷ್ಯಳೆ? ಆಕೆಯ ವ್ಯವಹಾರದಲ್ಲಿ ಕೈಹಾಕುವುದು ತಮ್ಮಿಂದೇನಾದೀತು? ಇದನ್ನೆಲ್ಲ ನೆನದಾಗ ತಾವೆಂಥ ದುರ್ಬಲರೆಂದು ಅನಿಸುತ್ತದೆ. ಆಗೋದನ್ನ ಕೈಕಟ್ಟಿಕೊಂಡು ಸಾಕ್ಷಿಯಾಗಿ ನೋಡುವುದೆಷ್ಟೋ ಅಷ್ಟೆ.

ದೇವರೇಸಿಯನ್ನು ಎಬ್ಬಿಸಿಬೇಕಾಯ್ತು. ಎಬ್ಬಿಸುವಾಗ ಮೈ ಸುಡುತ್ತಿದ್ದುದು ಗೌಡನಿಗೂ ತಿಳಿದು ಹಳಹಳಿಸಿದ. ದೇವರೇಸಿ ಎದ್ದು ಧೂಪಾರತಿಯನ್ನು ಕೈಗೆತ್ತಿಕೊಂಡೊಡನೆ ಗರ್ಭಗುಡಿಯ ಬಾಗಿಲು ತೆರೆದರು. ಹೊರಗೆ ನೆರೆದಿದ್ದ ಭಕ್ತರೆಲ್ಲ ಬಾಗಿಲಿಗಿ ಮುಕುರಿ ತಾಯಿಯ ಬಂಗಾರದ ಶೃಂಗಾರ ಮೂರ್ತಿಯನ್ನು ಕಣ್ಣುತುಂಬ ನೋಡಿದರು. ದೇವೇರೇಸಿ ಧೂಪಾರತಿ ತಗೊಂಡು ಹೊರಬಂದು ಗುಡಿ ಪ್ರದಕ್ಷಿಣೆ ಹಾಕಿದ. ದೀಪಕಂಬದ ಹತ್ತಿರ ಹೋಗಿ ಅಲ್ಲಿದ್ದ ಗಣಗಳಿಗೆ ಧೂಪಾರತಿಯ ಕೈ ಮೇಲಕ್ಕೆತ್ತಿ ‘ಚಾಂಗುಭಲೇ’ ಎಂದು ಕಿರಿಚಿ ನೆಲಕ್ಕೆ ಕುಕ್ಕಿದ ಕೂಡಲೇ ನೆರೆದ ಭಕ್ತರೆಲ್ಲ ಗುಡಿಯಲ್ಲಿದ್ದ ಎಲ್ಲ ಗಂಟೆ, ಜಾಗಟೆ, ತಾಳ, ಡೊಳ್ಳುಗಳನ್ನು ಚಾಂಗು ಭಲೇ ಎಂದು ಕಿರುಚುತ್ತ ಕಿವಿಗಡಚಿಕ್ಕುವಂತೆ ಬಾರಿಸತೊಡಗಿದರು.

ದೇವರೇಸಿ ಓಡೋಡುತ್ತ ಬಂದು ಗರ್ಭಗುಡಿ ಹೊಕ್ಕು. ಈಗ ತಪಸ್ಸಿಗಾಗಿ ಅಡವಿಯಲ್ಲಿದ್ದ ಜಡೆಮುನಿಯ ಸಂಹಾರವಾಯಿತೆಂದೂ ಆ ಸುದ್ದಿಯನ್ನು ದೇವರೇಸಿ ಓಡೋಡುತ್ತ ಬಂದು ತಾಯಿಗೆ ಅರಿಕೆಮಾಡಿದನೆಂದೂ ಇದರಥ್. ತಾಯಿಯೀಗ ರಂಡೆ(ವಿಧವೆ)ಯಾದ್ದರಿಂದ ಆಕೆಯ ಕೈಬಳೆ ಒಡೆಯುತ್ತಾರೆ. ಗೌಡ ಆವೇಶದಲ್ಲಿದ್ದ ದೇವರೇಸಿಯನ್ನು ತೆಕ್ಕೆಹಾಯ್ದು ಹಿಡಿದುಕೊಂಡಿದ್ದ. ಲಗಮವ್ವ ಅವಸರದಲ್ಲಿ ದೇವರೇಸಿಯ ಕೈಬಳೆ ಒಡೆದಳು. ಕುಂಕುಮ ಅಳಿಸಿದಳು. ದತ್ತಪ್ಪ ಮೂರ್ತಿಯ ಕೈಬಳೆ ಒಡೆದು ಕುಂಕುಮ ಅಳಿಸಿದ. ಕೂಡಲೇ ಕೂಡಿದ ಭಕ್ತರು ಬಿಲ್ಲುಬಾಣೆಸೆದಂತೆ ಮೂರ್ತಿಯ ಕಡೆಗೆ ಅಡಿಕೆಗಳನ್ನು ಎಸೆದರು. ದೇವದಾನವರು ತಾಯಿಯ ಗರ್ಭಕ್ಕೆ ಆಯುಧಗಳನ್ನೆಸೆದರೆಂದು ಇದರರ್ಥ. ಗರ್ಭ ಕಳಚಿದೊಡನೆ ದೇವರೇಸಿ ವಿಕಾರವಾಗಿ ಕಿರಿಚಿದ. ಗೌಡ, ದತ್ತಪ್ಪ ಲಗುಬಗೆಯಿಂದ ನಾನಾ ಬಗೆಯ ಇಪ್ಪತ್ತೊಂದು ಹಣ್ಣುಗಳನ್ನು ತಾಯಿಯ ಉಡಿಯಲ್ಲಿ ಕಟ್ಟಿದರು.

ತಾಯಿ ಕೂಡಲೇ ಕೋಪಗೊಂಡಳು. ದೇವರೇಸಿಯ ಮೈತುಂಬಿ ಮುಳ್ಳಾವಿಗೆ ಹತ್ತಿದ್ದಳು. ಕೈಯಲ್ಲಿ ಖಡ್ಗ ಕೊಟ್ಟರು. ಎಡಗೈಯಲ್ಲಿ ಪಂಜು ಕೊಟ್ಟರು. ರಭಸದಿಂದ ಗುಡಿಬಿಟ್ಟು ಹೊರಗೆ ಪೌಳಿಗೋಡಿದಳು. ಪೌಳಿಯ ತುಂಬ ಗಂಡಸರು ಕಿಕ್ಕಿರಿದು ನೆರೆದಿದ್ದರು. ಈಗ ತಾಯಿ ದೇವದಾನವರ ಸಂಹಾರಕ್ಕೆ ಹೊರಡುವ ಸಮಯ. ಆ ಅವಸರದಲ್ಲಿಯೇ ಹಕ್ಕಿನ ಹಿರಿಯರನ್ನು ಕರೆದು ಊರ ಯೋಗಕ್ಷೇಮದ ಬಗ್ಗೆ ಮೂರು ವಿಶೇಷ ಕಾರಣಿಕ ಹೇಳಿ ಊರ ಸೀಮೆ ದಾಟುತ್ತಾಳೆ. ಪಲ್ಲಕ್ಕಿಯ ಹತ್ತಿರ ನಿಂತೊಡನೆ ತಾಯಿ ಪಂಜಿನ ಕೈ ಎತ್ತಿ ‘ಏss’ ಎಂದು ಕಿರುಚಿದಳು. ಕೇಳುವುದಕ್ಕೆ ಎಲ್ಲರೂ ಸ್ತಬ್ಧರಾದರು. ಗೌಡ ಗಪ್ಪನೆ ಬಗ್ಗಿ ತಾಯಿಯ ಮುಳ್ಳಾವಿಗೆಯ ಮೇಲೆ ನಿಂತ ಕಾಲನ್ನು ಗಟ್ಟಿಯಾಗಿ ಹಿಡಿದುಕೊಂಡ. ಗುಡಿಯ ಒಳಗಡೆ ಹೆಂಗಸರು ಇನ್ನೂ ಗದ್ದಲ ಮಾಡುತ್ತಿದ್ದರು. ದತ್ತಪ್ಪ ಗದರಿಸಿದ, ಸುಮ್ಮನಾದರು. ಆದರೆ ಏನೋ ಗುಸುಗುಸು ನಡೆಯುತ್ತಿತ್ತು. ತಾಯಿ ಬೇಗನೆ ಬಾಯಿ ಬಿಡಲಿಲ್ಲ. ಬರೀ ಬಿಕ್ಕತೊಡಗಿದಳು.

ಜನ ಮೈಯೆಲ್ಲಾ ಕಿವಿಯಾದರು. ಆಶ್ಚರ್ಯವೆಂದರೆ ಗುಡಸೀಕರ ಕೂಡ ಬಸವರಾಜನೊಂದಿಗೆ ಕಾರಣಿಕ ಕೇಳಲು ಬಂದಿದ್ದ. ಒಳಗೊಳಗೇ ದೇವಿ ತನ್ನ ಎಲೆಕ್ಷನ್ ಪರವಾಗಿಯೇ ಕಾರಣಿಕ ಹೇಳಿಯಾಳೆಂಬ ನಂಬಿಕೆಯಿತ್ತು. ಬಸವರಾಜು ಅವನ ಪಕ್ಕದಲ್ಲೇ ನಿಂತು ಹೆಂಗಸರ ಕಡೆ ಕುಡಿನೋಟ ಬೀರುತ್ತ ನಿಂತಿದ್ದ. ಗುಡಸೀಕರನ ಕಿವಿಯಲ್ಲಿ ಏನೋ ಹೇಳುತ್ತಿದ್ದಂತೆ ಬಾಯಿ ಮುಚ್ಚಲಿಕ್ಕೆ ಸನ್ನೆಮಾಡಿ ಕಾರಣಿಕಕ್ಕೆ ಕಿವಿಗೊಟ್ಟ. ಹೆಂಗಸರಲ್ಲಿದ್ದ ಗಿರಿಜಳಿಗೆ ಕಾರಣಿಕದ ಬಗ್ಗೆ ಕಾಳಜಿಯಿದ್ದಂತಿರಲಿಲ್ಲ. ಬಸವರಾಜೂನನ್ನು ಕಣ್ಣಿನಿಂದಿರಿಯುತ್ತ, ಹಲ್ಲು ಕಿಸಿಯುತ್ತ ನಿಂತಿದ್ದಳು. ಈಗಲೂ ತಾಯಿಗೆ ಬಾಯಿ ಬಂದಿರಲಿಲ್ಲ. ಬರೀ ಬಿಕ್ಕುತ್ತಿದ್ದಳು.

ಗೌಡನ ಎದೆ ಡವಡವ ಹೊಡೆದುಕೊಳ್ಳುತ್ತಿತ್ತು. ತಾಯಿಯ ವಾಣಿ ಏನಾಗುತ್ತದೋ, ಬಾಯಿ ಕೂಡ ಬರದಾಗಿತ್ತು. ನಿಂಗೂ ಹೆಂಗಸರಲ್ಲೇ ನಿಂತಿದ್ದವನು ಬಸವರಾಜುವಿನ ಕಣ್ಣ ಬೇಟೆ ಗಮನಿಸಿದ್ದ. ನೋಡಿ ಅಸೂಯಪಟ್ಟಿದ್ದ. ಹಿಂದೆ ನಿಂತಿದ್ದ ಸುಂದರಿ ನಿಧಾನವಾಗಿ ಬಿಕ್ಕತೊಡಗಿದ್ದಳು.  ಕೂಡಲೇ ಹೆಂಗಸರು ಅವಳನ್ನು ಗದರಿಕೊಂಡರು. ಒಂದು ಸಲ ಸುಮ್ಮನಾಗಿ ಮತ್ತೆ ಬಿಕ್ಕತೊಡಗಿದಳು. “ಈ ರಂಡಿಗೇನಾಗೈತ್ಯೊ ಬ್ಯಾನಿ” ಎಂದು ಹೆಂಗಸರಿಗೆ ಕೇಳಿಸುವಂತೆ ಲಗಮವ್ವ ಬೈದು ಮತ್ತೆ ಕಾರಣೀಕಕ್ಕೆ ಕಿವಿಯೊಡ್ಡಿದಳು. ನಿಂಗೂ ತಿರುಗಿ

ನೋಡಿದಾಗ ಸುಂದರಿ ನಿಂತಲ್ಲೇ ಬಿಕ್ಕುತ್ತ ಕುಸಿದಿದ್ದಳು. ಬಿಕ್ಕುವಾಗ ಎದ್ದೆದ್ದು ಬೀಳುತ್ತಿದ್ದಳು. ಅಷ್ಟರಲ್ಲಿ ತಾಯಿ ಇನ್ನೊಮ್ಮೆ,

“ಏsss”

ಎಂದು ಕಿರಿಚಿದಳು, ಜನ ಸ್ತಬ್ಧರಾದರು. ಗೌಡ ತಾಯಿಯ ಕಾಲನ್ನು ಇನ್ನೂ ಬಿಗಿಯಾಗಿ ಹಿಡಿದ. ಕಿವಿಯ ಮೇಲೆ ತಾಯಿಯ ಬೆಚ್ಚಗಿನ ಕಣ್ಣೀರ ಹನಿ ಬಿದ್ದಾಗ ಕಳವಳವಾಯ್ತು. ತಾಯಿಗೆ ಬಾಯಿ ಬಂತು:

ಆಸರದ ಆಲದ ಮರದ ಬೇರ
ನೀರಿಲ್ಲದ ಒಣಗ್ಯಾವು
ನೀರ ಹಾಕೋದ ಮರೀಬ್ಯಾಡ್ರೆಲೇ….

ಕಾರಣಿಕ ಸ್ಪಷ್ಟವಾಗಿ ಚುನಾವಣೆಯ ಬಗ್ಗೆ ಇತ್ತೆಂಬ ಬಗ್ಗೆ ಯಾರಿಗೂ ಅನುಮಾನವಾಗಲಿಲ್ಲ. ಆಸರದ ಆಲದ ಮರದ ಬೇರಿಗೆ ನೀರು ಹಾಕುವುದೆಮದರೆ ಗೌಡನ ಪಾರ್ಟಿಗೆ ‘ಹೋಟು’ ಹಾಕಬೇಕೆಂಬುದಾಗಿ ಎಲ್ಲರೂ ಅರ್ಥೈಸಿಕೊಂಡರು. ಗಟ್ಟಿಮುಟ್ಟಾದ ನುಡಿಯೆಂದು ಜನ ಆಡಿಕೊಂಡರು ಕೂಡ, “ನಡೀಪಾ ಗುಡಸೀಕರಾ ಇನ್ನ” ಎಂದೊಬ್ಬ ಕುಸ್ತೀ ಹುಡುಗ ಕುಹಕವಾಡಿದ. ಗುಡಸೀಕರನಿಗೆ ನಿರಾಶೆಯಾಯ್ತು. ಬಸವರಾಜೂನ ಕಡೆ ನೋಡಿದ. ಅವನಿರಲಿಲ್ಲ.

ರಂಡಿ ಹುಣ್ಣಿವೆ ದಿನ ಆಗೋದು ಒಟ್ಟು ಮೂರು ನುಡಿಗಳು. ಊರುಗಾರಿಕೆಯ ಮೊದಲನೆಯ ನುಡಿಯಾದ ಮೇಲೆ ಎರಡನೆಯ ನುಡಿ ಗೌಡನ ಮನೆತನಕ್ಕೆ ನೇರವಾಗಿ ಸಂಬಂಧಪಡುವುದರಿಂದ ತನ್ನ ಕಳೆದ ಮಗನ ಬಗ್ಗೆ ತಾಯಿ ಏನು ಹೇಳುವಳೋ ಎಂದು ಗೌಡ ತವಕಗೊಂಡ. ಗಂಟಲಲ್ಲಿದ್ದ ಎರಡನೆ ನುಡಿ ಇನ್ನೇನು ದನಿಗೊಂಡು ಹೊರಬರಬೇಕು, ಅಷ್ಟರಲ್ಲಿ ಗುಡಿಯೊಳಗಿದ್ದ ಸುಂದರಿ ವೀರಾವೇಶದಿಂದ “ಏ” ಎಂದು ಥೇಟ್ ದೇವರೇಸಿಯಂತೆ ಕಿರಚಿದಳು. ಜನ ದಂಗಾದರು.

ಏನು, ಎತ್ತ, ಯಾಕೆ, ಹ್ಯಾಗೆ – ತಿಳಿಯುವ ಮುನ್ನವೇ, ಜನ ಹಿಂದಿರುಗಿ ಹೆಂಗಸರತ್ತ ನೋಡ ನೋಡುವುದರೊಳಗೆ ಸುಂದರಿ ಹೆಂಗಸರ ಮಧ್ಯದಿಂದ ನೆಗೆದು ಬಂದು ಗಂಡಸರ ಗುಂಪಿನಲ್ಲಿ ಹೊಕ್ಕು ಎರಡೂ ಕೈಯಲ್ಲಿದ್ದ ಬಂಡಾರವನ್ನು ರಭಸದಿಂದ ಮೇಲಕ್ಕೆರಚಿದಳು. ದೇವರೇಸಿ ಅವಾಕ್ಕಾಗಿ ನಡುಗಿದ. ಅವಳು ಒಲೆದಾಡುವ ಪರಿ ನೋಡಿ ದೇವೀ, ತನ್ನ ಬಿಟ್ಟು ಇವಳ ಮೈತುಂಬಿದಳೆಂಬ ದುಃಖ ಒಂದೆಡೆಗಾದರೆ ಎಲ್ಲಿ ತನ್ನ ಗುಟ್ಟು ರಟ್ಟು ಮಾಡುವಳೋ ಎಂಬ ಭಯ ಇನ್ನೊಂದೆಡೆ, ಸುಂದರಿ ಓಡಿ ಬಂದು ದೇವರೇಸಿಯ ಹತ್ತಿರವೇ ನಿಂತು ತನ್ನ ಶಕ್ತಿಯನ್ನೆಲ್ಲ ಒಗ್ಗೂಡಿಸಿ ಇನ್ನೊಮ್ಮೆ ಕಿರಚಿದಳು. ಜನರ ಮನಸ್ಸು ಚೆದರಿ ಚೆಲ್ಲಾಪಿಲ್ಲಿಯಾಯಿತು. ಅವಳು ಒಲೆದಾಡುವ ಪರಿಯೋ ಥೇಟ್ ದೇವರೇಸಿಯಂತೇ ಇದ್ದುದರಿಂದ ಇವಳಿಗೂ ತಾಯಿ ಮೈತುಂಬಿರಬೇಕೆಂದು ಕೆಲವರಂದುಕೊಂಡರು. ಈ ಹುಚ್ಚರಂಡೆ ಹಗರಣಾ ಮಾಡುತ್ತಿದ್ದಾಳೆಂದು ಕೆಲವರಂದರು. ಮೈತುಂಬದಿದ್ದರೆ ಕೂಡಿದ ಭಕ್ತರಲ್ಲಿ ಹೀಗೆ ಒದರುವ ಧೈರ್ಯ ಬರುತ್ತಿತ್ತೇ? ಪಲ್ಲಕ್ಕಿಯ ಹತ್ತಿರ ನಿಲ್ಲುವ ಧೈರ್ಯವಾಗುತ್ತಿತ್ತೇ? ಹಗರಣಾ ಮಾಡಿದ್ದರೆ ನಾವ್ಯಾಕೆ, ದೇವಿ ಸುಮ್ಮನಿರುತ್ತಿದ್ದಳೆ? ನಿಂತಲ್ಲೇ ರಕ್ತ ಕಾರಿಸಿ ಬಿಡುತ್ತಿದ್ದಳು. ಅದೂ ಹೋಗಲಿ, ಅವಳ ದನಿಯಲ್ಲೇ ಏನೋ ಒಂದು ವಿಶೇಷವಿದೆ. ಹಲ್ಕಟ ಹೆಂಗಸೇನೋ ಹೌದು. ಆದರೆ ತಾಯಿಯ ಮನಸ್ಸಿಗೆ ಬಂದರೆ ಏನು ಮಾಡಲಾಗುತ್ತದೆ? ದೇವರೇಸಿ ಏನೋ ಮೈಲಿಗೆ ಮಾಡಿರಬೇಕು. ಇಲ್ಲದಿದ್ದರೆ ಅವನನ್ನು ಬಿಟ್ಟು ದೇವೀ ಇನ್ನೊಬ್ಬರನ್ನು ಯಾಕೆ ಆರಿಸಿಕೊಳ್ಳುತ್ತಿದ್ದಳು? ಗೌಡ ಅಪ್ರತಿಭನಾದ. ದತ್ತಪ್ಪನ ಚಿಂತಾಮಣಿಯ ಬುದ್ಧಿ ಮಸಳಿಸಿತು. ಏನು ಮಾಡಬೇಕೆಂದು ಯಾರಿಗೂ ತೋಚಲೊಲ್ಲದು. ಸುಂದರಿ ಮತ್ತೆ ಕಿರಿಚಿ ಬಿಕ್ಕತೊಡಗಿದಳು. ಇದು ದೇವರೇಸಿಯ ಬಿಕ್ಕಿನಂತೆ ಇತ್ತು. ನಂಬಲು ಸಿದ್ಧರಾದ ಕೆಲವು ಭಾವುಕರಿಗೆ ಸಂಶಯವೇ ಉಳಿಯಲಿಲ್ಲ. ಚರ್ಚಿಸುವ ಸಮಯವೂ ಅದಲ್ಲ.