ಗುಡಸೀಕರ ತಾನೇನು ಮಾಡುತ್ತಿದ್ದೇನೆಂದು ಅರಿವಿಲ್ಲದೆ ತನಗೆ ಬಣ್ಣ ಎರಚಬಂದ ಬಾಳೂನ ಸಣ್ ಮಗನನ್ನು ಹಿಂದುಮುಂದು ನೋಡದೆ ದನ ಬಡೆದಂತೆ ಬಡಿದ. ಅದು ನಡೆದದ್ದು ಹೀಗೆ –

ಲಗಮವ್ವನ ಹಾಡು ಕೇಳಿ, ಅಲ್ಲಿ ಕೂರಲಾರದೆ ಎದ್ದು ಬಂದನಲ್ಲ, ಸೀದಾ ಮನಹೊಕ್ಕ. ಹೊಕ್ಕವನೇ ದಡ ದಡ ಜಿನಯೇರಿ ಮಹಡಿ ಹತ್ತಿದ. ಹತ್ತಿದವನೇ ಅತ್ತಿತ್ತ ಅಲೆದಾಡಿದ. ಸಿಗರೇಟು ಹೊತ್ತಿಸಿದ. ಅಲ್ಲೆ ಇದ್ದ ಪಲ್ಲಂಗದ ಮೇಲೆ ಕುಕ್ಕರಿಸಿದ. ಕೂತಿರಲಾರದೆ ನಿಂತ. ನಿಂತಿರಲಾರದೆ ಅಡ್ಡಾಡಿದ. ಮತತೆ ಕೂತ. ಮತ್ತೆ ನಿಂತ ಸೇದಿದ. ಎಸೆದ, ನಿಂತ, ಕೂತ.

ಮೆಂಬರರು, ಅದೇ ಹಿಂಬಾಲಕರು, ಸಪ್ಪಳ ಮಾಡದೆ, ಮುದುಡಿ ಇಷ್ಟಿದ್ದವರು, ಇಷ್ಟಿಷ್ಟೇ ಆಗಿ, ಚಲಿಸದೆ ಕಲ್ಲಿನ ಗೊಂಬೆಗಳ ಹಾಗೆ ಕೂತರು. ಗುಡಸೀಕರ ಬಹಳ ಹೊತ್ತಿನ ತಕ ಇವರನ್ನು ಗಮನಿಸದಂತೆ ಅಡ್ಡಾಡಿದ. ಕೂತು ಸಿಗರೇಟು ಹೊತ್ತಿಸುವಾಗ ಥಟ್ಟನೇ ತನ್ನ ಕಾಲಿಗೂ ನಮಸ್ಕರಿಸಿದ ದುರ್ಗಿಯ ನೆನಪಾಯಿತು. ಕಿಸೆಯಿಂದ ಐದರ ಎರಡು ನೋಟು ತೆಗೆದು ಕಳ್ಳನ ಕೈಗಿಡುತ್ತ “ಹೋಗು, ಸರಪಂಚ ಸಾಹೇಬರ ಕೊಟ್ಟಾರಂತ ಹೇಳಿ ದುರ್ಗಿಗಿ ಕೊಟ್ಟ ಬಾರಲೇ” ಎಂದ. ಸಿದ್ದರಾಮ ಓಡಿಹೋಗಿ ಹತ್ತು ರೂಪಾಯಿ ತಗೊಂಡು ಹೊರಟ, ಅವನು ಇನ್ನೂ ಇಪ್ಪತ್ತು ಹೆಜ್ಜೆ ಹೋಗಿರಲಾರ ಅಂಡೂರಾಮೂ ಉರ್ಪ್ ರಮೇಶ ಎದ್ದು “ಅವ ಮೊದಲs ಕಳ. ಕೊಡತಾನೋ ಇಲ್ಲೋ ನೋಡಿ ಬರತೇನ್ರೀ” ಎಂದು ಹೇಳುತ್ತ ಹೋಗಿಬಿಟ್ಟ. ಜಿಗಸು ಸಾತೀರ ಎದ್ದು “ಛೇ, ಛೇ, ಅವ ಮೊದಲ ಕುಡುಕs ಏನ ಮಾಡತಾನೋ ನೋಡತೇನ್ರಿ” ಎಂದು ಅವನೂ ಹೋದ. ಕೊನೆಯವ ಆಯೀಮೆರೆ ಮಿಂಡ ಏನೂ ಹೇಳದೆ, ಯಾಕೆಂದರೆ ಏನು ಹೊಳೆಯದೆ ಕಳಚಿಕೊಂಡ.

ಗುಡಸೀಕರನಿಗೆ ಇವರು ಬೇಕೂ ಆಗಿರಲಿಲ್ಲ. ಹೇಗೆ ಸೇಡು ತೀರಿಸಿಕೊಳ್ಳಬೇಕೆಂದು ದಾರಿ ತೋಚದೆ ಒಂದೇ ಸಮನೆ ಒದ್ದಾಡುತ್ತಿದ್ದ. ಹೊಯ್ಕೊಂಡ ಎಲ್ಲರ ನಾಲಿಗೆ ಸೀದು ಹೋಗುವ ಹಾಗೆ ಮಾಡುವ ಮಾಂತ್ರಿಕ ತಾನಾಗಿದ್ದರೆ, ಗೌಡ, ದತ್ತಪ್ಪ, ಲಗಮಿಯರನ್ನು ಜೇಲಿಗೆ ಕಳಿಸುವ ಅಧಿಕಾರಿ ತಾನಾಗಿದ್ದರೆ – ಅಂದುಕೊಂಡ. ತಕ್ಷಣ ಇನ್ನೊಂದು ಹೊಳೆಯಿತು: ಅರರೇ, ದುರ್ಗಿಗೆ ಈಗಷ್ಟೇ ಕೊಟ್ಟುಕಳಿಸಿದ ದುಡ್ಡನ್ನು ತುಂಬಿದ ಸಭೆಯಲ್ಲಿ ಆಗಲೇ ಕೊಟ್ಟಿದದರೆ ಈ ಮಕ್ಕಳು ಕೊಡುವ ನಾಕಾಣೀ, ಎಂಟಾಣೆಗಿಂತ ಆ ಹತ್ತು ರೂಪಾಯಿ ಎಲ್ಲರ ಕಣ್ಣಲ್ಲಿ ಹೊಳೆಯುತ್ತಿತ್ತು. ಲಗಮವ್ವನಿಗೆ, ಗೌಡನಿಗೆ, ದತ್ತೂನಿಗೆ, ಹೊಯ್ಕೊಂಡ ಬಿಕನೇಸಿಗಳಿಗೆ ಎಲ್ಲರಿಗೂ ತನ್ನ ಬೆಲೆ ತಿಳಿಯುತ್ತಿತ್ತು. ಮಾತು ಮಿಂಚಿಹೋಗಿತ್ತು. ಅಷ್ಟರಲ್ಲಿ ತಂಗಿ ಗಿರಜವ್ವ ಊಟಕ್ಕೆ ಕರೆದಳು

ಇಳಿ ಹೊತ್ತಾಗಿತ್ತು. ಓಣಿಯಲ್ಲಿ ಎಳೇ ಹುಡುಗರು ಬಣ್ಣ ಎರಚುತ್ತ ಹೊಯ್ಕೊಳ್ಳುತ್ತ, ನಗಾಡುತ್ತ ಗದ್ದಲ ಮಾಡುತ್ತಿದ್ದವು. ಅದನ್ನು ಕೇಳಿ ಉಂಡು ಮಲಗಿದ್ದ ಗುಡಸೀಕರನಿಗೆ ಎಚ್ಚರವಯಿತು. ಗದ್ದಲ ಸಮ ಸಮೀಪ ಬಂದು ತನ್ನ ಮನೆಯ ಮುಂದೆಯೇ ನಡೆಯುತ್ತಿರುವುದು ಗೊತ್ತಾಯಿತು. ಕೂಡಲೇ ಧಡಫಡ ಕೆಳಗಿಳಿದು ಹೋದ.

ಗಿರಿಜವ್ವ ಬಾಗಿಲಲ್ಲಿ ನಿಂತುಕೊಂಡು ಹುಡುಗರ ಬಣ್ಣದಾಟ ನೋಡಿ, ಎಲ್ಲರಿಗೂ ಕೇಳಿಸುವಂತೆ ನಗುತ್ತಿದ್ದಳು “ನಾಚಿಕಿ ಬರಾಣೀಲ್ಲ? ಗಂಡ ಹುಡುಗೋರ್ನ ನೋಡಿಕೋತ ನಿಂತೀದಿ, ನಡಿ ಒಳಗೆ” ಎಂದು ಗದರಿಸಿ, ಒಳಗೆ ಕಳಿಸಿ ಆ ಸ್ಥಳದಲ್ಲಿ  ತಾನು ನಿಂತುಕೊಂಡ. ಹುಡುಗರು ಒಬ್ಬರನ್ನೊಬ್ಬರು ಅಟ್ಟಿಸಿಕೊಂಡು ಹೋಗಿ ಬಣ್ಣ ಗೊಜ್ಜುತ್ತಿದ್ದರು. ಒಬ್ಬ ಹುಡುಗ ಬಾಳೂನ ಸಣ್ಣ ಮಗ – ಗುಡಸೀಕರ ನಿಂತುದನ್ನು ನೋಡಿ, “ಸರಪಂಚ ಸಿಕಕಾನ ಬರ‍್ರ‍್ಯೋ” ಎಂದು ಹೊಯ್ಕೊಳ್ಳುತ್ತ ಬಣ್ಣ ಎರಚಿದ. ಉಳಿದವರೂ ಬಂದು ಎರಚಿದರು. ಗುಡಸೀಕರ ಕೆಂಡ ಕೆಂಡವಾದ, ತಾನೇನು ಮಾಡುತ್ತಿದ್ದೇನೆಂದು ಅರಿವು ಬಿಟ್ಟು ಓಡಿಹೋಗಿ ಆ ಎಳೇ ಹುಡುಗನ್ನ ಹಿಡಿದೆಳೆದು ಎಲ್ಲೆಂದರಲ್ಲಿ ಕೈ ಬಾಯಿ ಎನ್ನದೆ ದನ ಬಡಿದಂತೆ ಬಡಿಯತೊಡಿದ. ಹುಡುಗ ಕಿರಿಚಿ, ಕೂಗಿ ಒದರಿದರೂ ಬಿಡಲಿಲ್ಲ. ತಪ್ಪಿಸಿಕೊಂಡು ನಿಂತು ಎಳೆಯರ ಹಿಂಡಿನಲ್ಲಿ ಅಡಗಿದರೆ ಅಟ್ಟಿಸಿಕೊಂಡು ಓಡಿಹೋಗಿ ಹೊಡೆದ. ಕೈಸೋತು ಒದ್ದ. ಕಾಲು ಸೋತು ಹೊಡೆದ. ಹುಡುಗ “ಸತ್ತಿನ್ರೋ ಎಪ್ಪಾ” ಎಂದು ಆರ್ತನಾಗಿ ಕೂಗಿದ. ಉಳಿದ ಹುಡುಗರು ಗಾಬರಿಯಾಗಿ ಬಿಡಿಸಿಕೊಳ್ಳಲಾರದೆ, ಓಡಲಾರದೆ, ಕೂಗಲಾರದೆ ಒಂದರ ಹಿಂದೊಂದು, ಒಂದರ ಆಶ್ರಯದಲ್ಲಿನ್ನೊಂದು ಮುದುಡಿ ನಿಂತವು. ದೂರದಲ್ಲಿ ಹೊರಬಂದ ಹೆಂಗಸರ ಗುಂಪು ಬಂದು ಬಿಡಿಸಿಕೊಳ್ಳಲು ದೈರ್ಯಸಾಲದೆ ಮರುಗುತ್ತಿದ್ದರು. ಸುದೈವದಿಂದ ನಿಂಗೂ ಓಡಿಬಂದು ಹುಡಗನ್ನ ಬಿಡಿಸಿಕೊಂಡ.

“ಎಳೀ ಹುಡುಗನ ಮ್ಯಲ ಕೈಮಾಡ್ತಿ, ಬುದ್ಧಿ ಎಲ್ಲಿಟ್ಟೀಯೋ ನಮ್ಮಪ್ಪಾ?” ಎಂದು. ತಾನು ಮಾಡಿದ್ದು ತಪ್ಪೆಂದು ಅರಿವಾಯ್ತೋ ಏನೊ/ ಗುಡಸೀಕರ ಸುಮ್ಮನೇ ಮನೆಯೊಳಕ್ಕೆ ನಡೆದ. ನಿಂಗೂ ಸುಮ್ಮನಾಗಲಿಲ್ಲ. “ಕನ್ನಡಿ ನೋಡಿಕೊಳ್ಳೋ ನಮ್ಮಪ್ಪಾ” ಅಂದ. ನಿಜ ಗುಡಸೀಕರ ಆವೇಶದಲ್ಲಿ ಕೂದಲು ಕೆದರಿಕೊಂಡು ಅಸಹ್ಯವಾಗಿದ್ದ. ನಿಂಗೂನ ಮಾತು ಕೇಳಿ ಹೋಗುತ್ತಿದ್ದವ ನಿಂತು:

“ಯಾಕಲೇ?” ಅಂದ.

“ಆ ಹುಡುಗನ ಮ್ಯಾಲ ಕೈ ಎತ್ತಿದಾಂಗ ನನ್ನ ಮ್ಯಾಲ ಎತ್ತಬಾರದ? ತೋರಸ್ತೀನಿ” ಎಂದು ನಿಂಗೂ ಸವಾಲು ಹಾಕಿದ. ಗುಡಸೀಕರನಿಗೆ ಅಷ್ಟು ಸಾಕಾಯ್ತು. ಏನೋ ಮಾಡಲು ಹೋಗಿ ಏನೋ ಮಾಡಿದ್ದ. ಯಾರದೋ ಮೇಲಿನ ಸಿಟ್ಟನ್ನು ಯಾರದೋ ಮೇಲೆ ಹಾಕಿದ್ದ. ಅದನ್ನು ನಿಂಗೂ ಗಮನಿಸಿದ್ದ, ಇವನಿಗೂ ಅದು ತಿಳಿಯಿತು. ಸಣ್ಣವನಾಗಿ, ತಿರುಗುತ್ತರ ಕೊಡದೆ ಒಳಕ್ಕೆ ಹೋದ. ಹುಡುಗನ ಮೈ ತುಂಬಾ ಬಾಸಳ ನೋಡಿ ಬಾಳೂ ವೀರಾವೇಶ ತಾಳಿದ. ದತ್ತಪ್ಪ ಬುದ್ಧಿ ಹೇಳಿ ಬಿಡಿಸಬೇಕಾದರೆ ಬೆವರು ಇಳಿಯಿತು. ಎಲ್ಲ ಕೇಳಿ “ಇವ ತನ್ನ ಗೋರಿ ತಾನs ತೋಡಿಕೊಳ್ಳಾಕ ಹತ್ಯಾನ” ಎಂದು ಗೌ ಹೇಳಿದರೆ “ಇಲ್ಲಾ ಊರ ಗೋರಿ ತೋಡಾಕಹತ್ಯಾನೆಂದು” ಬಾಳೂ ಸಿಟ್ಟಿನಲ್ಲಿ ಅಂದ.