ಶಿವಾಪುರ ದೊಡ್ಡ ಊರೇನಲ್ಲ. ಬೆಳಗಾವಿ ಜಿಲ್ಲೆಯ ನಕಾಶದಲ್ಲಿ ಕೂಡ ಆ ಹೆಸರಿನ ಊರು ಸಿಕ್ಕುವುದಿಲ್ಲ. ಆದರೆ ಪ್ರಾಥಮಿಕ ಶಾಲೆಯ ಒಂದು ಹಳೇ ಭೂಗೋಳದಲ್ಲಿ ಬೆಳಗಾವಿಯ ಉತ್ತರಕ್ಕೆ, ಮೂರಿಂಚಿನ ಮೇಲೆ ಆ ಹೆಸರಿನ ಒಂದು ಊರಿದೆ. ಅದನ್ನೊಮ್ಮೆ ಗುಡಸೀಕರ ರೈತಾಪಿ ಜನರಿಗೆ ತೋರಿಸಿ ಅಭಿಮಾನಪಡಿಸಿದ್ದ. ಹೀಗೆ ನಕಾಶದಲ್ಲಿ ತಮ್ಮ ಊರು ಗುರುತಿಸುವ ವಿದ್ಯೆಯನ್ನು ತಕ್ಷಣ ಗ್ರಹಿಸಿದವ ಗುಡಸೀಕರನ ಶಿಷ್ಯ ಕಳ್ಳ ಸಿದರಾಮ.

ಅದು ಅವನಿಗೆ ಬಹಳ ಸುಲಭವಾದ ವಿದ್ಯೆ, ಬೆಳಗಾವಿ ದೊಡ್ಡ ಶಹರವಾದುದರಿಂದ ಅದಂತೂ ಪ್ರತಿಯೊಂದು ನಕಾಶದಲ್ಲೂ ಇದ್ದೇ ಇರುತ್ತದೆ. ಅವನಿಗೆ ಇಂಗ್ಲಿಷಿನ “ಬಿ” ಅಕ್ಷರ ಗೊತ್ತಾಗಿತ್ತು. “ಬಿ” ಅಕ್ಷರದಿಂದ ಸುರುವಾಗೋದೋ ಬೆಳಗಾವಿ. ಸರಿ, ಸದರಿ ಬೆಳಗಾವಿಯಿಂದ ಮೂರಿಂಚು ಉತ್ತರಕ್ಕೆ ಸರಿದರೆ  ಶಿವಾಪುರ ಸಿಕ್ಕಲೇಬೇಕೆಂಬುದು ಅವನ ಖಾತ್ರಿ ತರ್ಕ. ಹೀಗಾಗಿ ಅವನು ತೋರಿಸುವ ಶಿವಾಪುರ ಒಮ್ಮೊಮ್ಮೆ ದಿಲ್ಲಿಯೋ, ಕಲ್ಕತ್ತಾದ ಬಳಿಯ ಹಳ್ಳಿಯೋ ಅಥವಾ ಹಿಂದೂಸ್ಥಾನದ ಯಾವದೇ ಹಳ್ಳಿಯಾಗಿರುತ್ತಿತ್ತು. ಇದರಲ್ಲಿ ಆತ ಎಷ್ಟು ಪರಿಣತನಾಗಿದ್ದನೆಂದರೆ ಒಮ್ಮೊಮ್ಮೆ ಜಗತ್ತಿನ ನಕಾಶದಲ್ಲೂ ಆತ ಶಿವಾಪುರವನ್ನು ಗುರುತಿಸುತ್ತಿದ್ದ! ಏನು ಮಾಡುವುದು? ಶಹರದ ಸಂಬಂಧದಲ್ಲಿ ಗುರುತಿಸಲ್ಪಡುವ ಸಣ್ಣ ಹಳ್ಳಿಯ ಹಾಡೇ ಇಷ್ಟು.

ಊರ ಮಂದಿ ಕಳ್ಳ ಸಿದರಾಮನ ಮಾತನ್ನು ಮೊದಲೇಟಿಗೆ ನಂಬಲಿಲ್ಲ. ತಮ್ಮ ಊರಿನ ಸುತ್ತಮುತ್ತ ಯಾವ್ಯಾವ ಊರಿವೆಯೆಂಬುದು ಅಥವಾ ಯಾವ್ಯಾವ ಊರಿನ ಮಧ್ಯೆ ತಮ್ಮ ಊರಿದೆ ಎನ್ನುವುದು ಅವರಿಗೂ ಗೊತ್ತಿದೆ. ಆದರೆ ಜಂಜೂ ದ್ವೀಪದ ಶ್ರೀರಾಮ ಕ್ಷೇತ್ರದ ಮೇಲನಾಡಿನ ಹಳ್ಳಿಯೇ ಶಿವಾಪುರವೆಂದು ಹೇಳುವ ಹೆಳವರ ಮಾತು ನಕಾಶದ ವಿವರಗಳಲ್ಲಿ ಬರುವುದಿಲ್ಲವಲ್ಲ? ಅಂಡಾಂಡ ಪಿಂಡಾಂಡದಿಂದ ಸುರುವಾಗುವ ಲಗಮವ್ವನ ಹಾಡಿನಲ್ಲೂ ಶಿವಾಪುರವಿದೆ. ಆದರೆ  ಅದರಲ್ಲೂ ಜಂಜೂ ದ್ವೀಪವಿದೆಯಲ್ಲ? ಇವೆಲ್ಲ ಆದಿ ಗುರುತು ಹೇಗೆ ಸುಳ್ಳಾದಾವು? ಎಂದೂ ತಕರಾರು ತೆಗೆದರು. ಕಳ್ಳ ಸಿದರಾಮನ ವಿಶೇಷವಿರುವುದೇ ಇಲ್ಲಿ, ಬೇಕಾದರೆ ಇವೆಲ್ಲ ವಿವರಗಳನ್ನು ತಳಕು ಹಾಕಿ ನಕಾಶದಲ್ಲಿ ಶಿವಾಪುರ ತೋರಿಸಬಲ್ಲ. ಹೀಗಾಗಿ ನಂಬದವರೂ ಅವನ ಮಾತು ನಂಬುವಂತಾಯಿತು.

ಊರನ್ನು ದೂರದಿಂದ ನೋಡಿದರೆ ಕೆರೆ ಕಾಡುಗಳ ವಿಸ್ತಾರದಲ್ಲಿ, ಅವುಗಳ ದಟ್ಟ ಬಣ್ಣಗಳಲ್ಲಿ ಬಹಳ ಸಣ್ಣದಾಗಿ ಕಂಡೀತು. ರಾತ್ರಿಯಾಗಿದ್ದರೆ ಬರೀ ಒಂದು ಕೊಳ್ಳಿಯಾಗಿ, ಹಗಲಾದರೆ ಒಂದು ಕಪ್ಪು ಕಲೆಯಾಗಿ ಕಂಡೀತು. ಪಡುವಲ ದಿಕ್ಕಿಗೆ ಎತ್ತರವಾದ ದಟ್ಟ ಅಡವಿ ಬರುವುದರಿಂದ ಉಳಿದ ಊರುಗಳಿಗಿಂತ ಮುಂಚೆಯೇ ಇಲ್ಲಿ ಹೊತ್ತು ಮುಳುಗುತ್ತದೆ. ಕತ್ತಲೆ ಹೆಚ್ಚು ದಟ್ಟವಾಗಿ ಆವರಿಸುತ್ತದೆ. ಆದ್ದರಿಂದಲೇ ಬೆಳಕಿರುವಾಗಲೇ ಊರು ಸೇರುವದು ಒಳ್ಳೆಯದು. ಬೆಳಕಿದ್ದಾಗ ತಿಳಿದೀತೆಂದಲ್ಲ ಅಥವಾ ಕತ್ತಲಾದೊಡನೆ ಊರು ಮಲಿಗಿರುವದೆಂದೂ ಅಲ್ಲ. ತೆಂಕ ಹಾಗೂ ಮೂಡುದಿಕ್ಕಿಗೆ ಊರ ಹೊಲ ಮರಡಿಗಳಿವೆ. ಬಡಗಣಕ್ಕೊಂದು ಕೆರೆಯಿದೆ. ಅಡ್ಡ ಹಾದಿ ನೂರಾರಿದ್ದರೂ ಊರನ್ನು ಪ್ರವೇಶಿಸುವ ಮುಖ್ಯ ರಸ್ತೆ ಮೂಡಣ ದಿಕ್ಕಿಗೇ ಇದೆ. ಅದೊಂದು ಬಂಡೀ ಹಾದಿ. ಅಲ್ಲಿಂದಲೇ ಬೇಕಾದಲ್ಲಿಗೆ – ಬೆಳಗಾವಿಗೆ ಕೂಡ – ಹೋಗಬೇಕು, ಬರಬೇಕು. ಆ ರಸ್ತೆ ಮುಗಿದು ಊರು ಸುರುವಾಗುವ ಅಗಸಿ ಬಾಗಿಲ ಬಳಿಯೇ ಕರಿಮಾಯಿಯ ಗುಡಿಯಿದೆ. ಹೊರಗಿನಿಂದ ಬಂದವರು ಊರು ಹೋಗುವ ಮುನ್ನ, ಒಳಗಿದ್ದವರು ಅಗಸಿ ದಾಟುವ ಮುನ್ನ ಈ ದೇವಿಗೆ ಅಡ್ಡಬಿದ್ದೇ ಮುಂದುವರಿಯುವದರಿಂದ ನಮ್ಮ  ಪುರವರ್ಣನೆ ಇಲ್ಲಿಂದಲೇ ಆರಂಭವಾಗುತ್ತದೆ.

ಮದರಾಸದಿಂದ ಕಲ್ಲ ತರಸಿ
ಕಟ್ಟಿಸ್ಯಾರ ಊರ ಅಗಸಿ ||

ಎಂದು ಲಗಮವ್ವನ ಹಾಡಿನಲ್ಲಿ ಇದರ ವರ್ಣನೆ ಇದೆ. ಅಲ್ಲಿಂದ ನೇರವಾಗಿ ಮುಂದೆ ಕಾಣಿಸುವದೇ ಕರಿಮಾಯಿ ಕರ್ರೆವ್ವನ ಅರ್ಥಾತ್ ಕರಿಮಾಯಿಯ ಗುಡಿ. ದೊಡ್ಡದಲ್ಲ. ಚೆಂದವೂ ಇಲ್ಲ. ಎದುರಿಗೊಂದು ಕಟ್ಟೆಯ ದೀಪಕಂಬವಿದೆ. ಅದರಾಚೆ ಗುಡಿಯ ಪೌಳಿ. ಅದರ ಮಧ್ಯಭಾಗದಲ್ಲಿ ಗುಡಿಯಿದೆ. ಗುಡಿಯಲ್ಲಿ ಮೂರು ಹೆಜ್ಜೇನಿನ ದೊಡ್ಡದೊಡ್ಡ ಹುಟ್ಟುಗಳಿರುವದೇ ಇದರ ವಿಶೇಷ. ಇದಕ್ಕಂಟಿ ಗರ್ಭಗುಡಿ. ಅದಕ್ಕೊಂದು ಚಿಕ್ಕ ಬಾಗಿಲು. ಬಾಗಿಯೇ ಒಳಕ್ಕೆ ಹೋಗಬೇಕು.

ಹಾಗೆ ಒಳಕ್ಕೆ ಹೋದರೆ ಹೋದೊಡನೇ ಕಣ್ಣಿಗೆ ಕತ್ತಲೆ, ಮೈಗೆ ಅಲ್ಲಿಯ ತಂಪು ತಕ್ಷಣ ಅಂಟುತ್ತದೆ. ಒಮ್ಮೆಲೆ ಕಣ್ಣು ಕಪ್ಪಡಿಗಳ ಕಿರುಚಾಟದಿಂದ ಒಂದೆರಡು ನಿಮಿಷ ಇಡೀ ಗುಡಿ ಕಿಟಾರನೇ ಕಿರುಚಿದಂತಾಗುಬಹುದು. ಒಳಹೊಕ್ಕವರು ಹೊಸಬರಾದರೆ ಸತ್ತೆನೋ, ಬದುಕಿದೆನೋ ಎಂದು ಹೊರಗಾದರೂ ಓಡಬಹುದು. ಇಲ್ಲವೇ ಅವರೂ ಕಿರುಚಬಹುದು. ಧೈರ್ಯದಿಂದ ಅಲ್ಲೇ ನಿಂತಿದ್ದರೆ ಸ್ವಲ್ಪ ಸಮಯದ ಬಳಿಕ ನಿಧನಿಧಾನವಾಗಿ, ಮೆಲ್ಲನೇ ಸದ್ದಿಲ್ಲದೇ ಮೊಗ್ಗು ಹೂವಾದ ಹಾಗೆ ಒಳಗಿನ ವಿವರಗಳು ಬಿಚ್ಚಿಕೊಳ್ಳತೊಡಗುತ್ತವೆ.

ನಾಲಗೆ ಹಿರಿದು ತೇಲುಗಣ್ಣಾಗಿ ಬಿದ್ದ ಕೋಣ, ಅದರ ಕತ್ತಿನಲ್ಲಿ ನೆಟ್ಟ ಕತ್ತಿ. ಸೀರೆಯ ನೆರಿಗೆಯನ್ನೊದ್ದು ಅರೆ ಕಾಣುವ ಪಾದ, ಜರಿಯಂಚಿನ ಸೀರೆಯ ತೆರೆತೆರೆ ನೆರಿಗೆಗಳು, ಎರಡು ಬಲ ಹಸ್ತಗಳು, ಒಂದರಲ್ಲಿ ಖಡ್ಗವಿದೆ, ಇನ್ನೊಂದು ಆಶೀರ್ವದಿಸುತ್ತಿದೆ; ಎಡಗಡೆಗೆ ಒಂದು ಕೈಯಲ್ಲಿ ದೈತ್ಯನ ತಲೆಯಿದೆ; ಇನ್ನೊಂದು ನರ್ತಿಸುವ ಭಂಗಿಯಲ್ಲಿದೆ. ಈ ಹಸ್ತಗಳು ಥೇಟ್ ಮನುಷ್ಯರ ಹಸ್ತಗಳಂತೇ ಸಹಜವಾಗಿರುವುದರಿಂದ ಒಮ್ಮೊಮ್ಮೆ ಹೆದರಿಕೆಯಾಗುವದೂ ಉಂಟು. ಮೇಲೆ ನೋಡಿದರೆ ಏಕದಂ ಎರಡು ಹೊಳೆಹೊಳೆಯುವ ದೊಡ್ಡ ದೊಡ್ಡ ಕಣ್ಣಕಟ್ಟುಗಳು, ಬೆಳ್ಳಿಯವು, ಮುಖ ತುಂಬಿ ಕಿವಿಯತನಕ ವ್ಯಾಪಿಸಿವೆ. ಅವಕ್ಕೆ ತಕ್ಕಂತೆ ಎಸಳು ಮೂಗು, ಬಹುಶಃ ಮುಗುಳುನಗುವ ತುಟಿ, ಹಣೆ ಗದ್ದ, ಮುಕುಟ – ಎಲ್ಲ ಎಲ್ಲಾ ಕಣ್ಣಿಗೊತ್ತಿ ತುಂಬಿಕೊಳ್ಳುವಂತಿರುವ ಹಡದವ್ವ, ಜಗದಂಬಿ ಮೂಲೋಕದ ತಾಯಿ, ಕರಿಮಾಯಿ ಕರ್ರೆವ್ವನ ಸಾಕ್ಷಾತ್ ಮೂರ್ತಿ ಈಗಲೋ ಆಗಲೋ ಎದ್ದು ಬರುವಂತಿದೆ.

ಕರಿಮಾಯಿಯ ಪ್ರಭಾವ ಈ ಊರಿನಲ್ಲಿ – ಅಷ್ಟಿಷ್ಟಲ್ಲ. ಅವರಿಗೇನು ಪಾಪ ಹಲವು ಹದಿನೆಂಟು ದೇವರಿಲ್ಲ. ಇದ್ದ ಸಣ್ಣಪುಟ್ಟ ದೇವರುಗಳೂ ಕೂಡ ಇವಳೊಂದಿಗೆ ಒಂದಿಲ್ಲೊಂದು ಸಂಬಂಧ ಹೇಳಿಕೊಂಡೇ ಬದುಕಬೇಕು. ಜನ ಬೆಳಿಗ್ಗೆ ಏಳುವಾಗ “ತಾಯೀ” ಎಂದು ಏಳುತ್ತಾರೆ. ಮಲಗುವಾಗ “ತಾಯೀ” ಎಂದು ಮಲಗುತ್ತಾರೆ ಎದ್ದಾಗ ತಾಯೀ, ಬಿದ್ದಾಗ ತಾಯೀ, ಕೂತಾಗ ತಾಯೀ, ನಿಂತಾಗ ತಾಯೀ, ಕೆಲಸದ ಮೊದಲು, ಕೊನೆ ತಾಯೀ, ಊಟಕ್ಕೆ ತಾಯೀ, ಕೂಟಕ್ಕೆ ತಾಯೀ, ಒಳ್ಳೆಯ ಕೆಲಸಕ್ಕೂ ತಾಯೀ, ಕೆಟ್ಟಕೆಲಸಕ್ಕೂ – ಅಂದರೆ ಹಾದರ, ಕಳ್ಳತನಗಳಿಗೂ ತಾಯೀ – ಹೀಗೆ ಯಾವುದರ ಸುರುವಿಗೂ, ಮುಗಿವಿಗೂ ಅವಳ ಸೊಲ್ಲು ಬೇಕೇ ಬೇಕು.