ನಾಟಕದ ತಯಾರಿ ಅದ್ಧೂರಿಯಿಂದ ನಡೆಸಿದರು. ಕಾರಹುಣ್ಣಿಮೆಯ ದಿನ ಸಮೀಪಿಸಿದಂತೆ ಹುಡುಗರ ಗಡಿಬಿಡಿ ಅತಿಯಾಯ್ತು. ಇವರಾಡುವ ನಾಟಕ ಜನರ ಕಿವಿ, ಬಾಯಿಗೆ ಸುದ್ದಿಯಾಯ್ತು. ಬಾಲೆಯರು ನೀರು ತರುವ ದಾರಿಯ ಮಾತಿಗೆ ಕಥೆಯಾಯ್ತು. ದಿನಾ ಅದರ ತಾಲೀಮು (ರಿಹರ್ಸಲ್) ನೋಡುವುದಕ್ಕೇ ಹಿಂಡು ಹಿಂಡು ಜನ ಸೇರುತ್ತಿದ್ದರು. ಮುಂದೆ ಏನಾದರಾಗಲಿ, ತಾಲೀಮುಗಳ ಅ ಸಡಗರ, ಆ ಸಂಭ್ರಮ, ಆ ವೈಯಾರ, ಛೇ ನಾಟಕದ ಹುಡುಗರು ಅಷ್ಟೂ ದಿನ ನೆಲಕ್ಕೆ ಕಾಲೂರಲೇ ಇಲ್ಲ.

ಕಳ್ಳ ರಾವಣನಾಗಿದ್ದನಲ್ಲವೆ? – ಕಲ್ಲಿ ಮೀಸೆ ಬಿಟ್ಟು ದಿನಾ ಎಣ್ಣೆ ಹಚ್ಚಿ ಉಜ್ಜಿದ್ದೇ – ಸಂಭಾಷಣೆ ಕಂಠಪಾಠ ಮಾಡಲಿಕ್ಕೆ ಹೋಗಿ ಬಂದಲ್ಲಿ ಆ ಮಾತು ಒದರಿದ್ದೇ, ನಿಂಗೂ ಸಿಕ್ಕರೆ ಅವನೇ ಸೀತೆಯೆಂದು ಎಳೆದೆಳೆದು ಗಂಟಲ ನರ ಹರಿಯೋ ಹಾಗೆ ಕಿರಚಿದ್ದೇ – ಸುಳ್ಳಲ್ಲ, ಈಗ ಯಾರೊಮದಿಗೆ ಏನು ಮಾತಾಡಿದರೂ ರಾವಣನ ಧಾಟಿಯಲ್ಲೇ ಮಾತಾಡುತ್ತಿದ್ದ. ಅವನ ನಡಿಗೆಯ ರೀತ ಕೂಡ ಬದಲಾಗಿ ಕಿಸುಗಾಲು ಹಾಕಿ ನಡೆಯುತ್ತಿದ್ದ.

ಇತ್ತ ರಮೇಸನ ಸೀತೆಯ ಸಡಗರ ಹೇಳತೀರದು. ಗೇಣುದ್ದ ಕೂದಲ ಬಿಟ್ಟು, ಸೋರುವ ಹಾಗೆ ಎಣ್ಣೆ ಹಚ್ಚಿಕೊಂಡು, ಪೇಟೆಯ ಸೂಳೆಯರಂತೆ – ತಲೆ ಬಾಚಿಕೊಂಡು, ಮೂಗು ಮುರಿಯುವ ವೈಯಾರವೇ, ಕೈ ತಿರುಗಿಸುವ ಅಭಿನಯವೇ, ಹುಬ್ಬು ಹಾರಿಸಿ ತುಟಿ ಕಚ್ಚಿಕೊಳ್ಳುವ ಶೃಂಗಾರವೇ, ಆಹಾ ನಿಂಗೂನ ಹೃದಯದಲ್ಲಿ ಸವತಿ ಮತ್ಸರ ಹುಟ್ಟಿಸಿದ್ದು ಹೆಚ್ಚಲ್ಲ. ಹುಡುಗಿಯರೂ ಇವನನ್ನು ನೋಡಿ ಕರುಬುವಂತಾಯಿತು. ಆಂಜನೇಯನಾದ ಮೆರೆಮಿಂಡ ಈಗ ನೆಗೆಯುತ್ತಲೇ ನಡೆದಾಡುತ್ತಿದ್ದ. ಇವರ ಉರವಣಿ ನೋಡಿ ಊರ ಹುಡುಗರು ನಾಟಕದಲ್ಲಿ ಪಾತ್ರ ಸಿಕ್ಕವರೇ ನಶೀಬವಂತರೆಂದು ಅಸೂಯೆಪಟ್ಟರು.

ನಾಟಕ ನೋಡುವುದಕ್ಕೆ ಜನ ದಿನದಿನಕ್ಕೆ ಹೆಚ್ಚು ಹೆಚ್ಚು ಕೌತುಕ ತಾಳುತ್ತಿದ್ದರೆ ನಿಂಗೂ ಮಾತ್ರ ಹೆಚ್ಚು ಹೆಚ್ಚು ಹೊಟ್ಟೆಕಿಚ್ಚಿನಿಂದ ಉರಿದ. ತನಗೆ ಸೀತೆಯ ಪಾತ್ರ ಕೊಡಲಿಲ್ಲವಲ್ಲಾ ಎಂದು ತಳಮಳಿಸಿದ. ತಾನು ಸೀತೆಯಾಗಿದ್ದರೆ ಹೇಗೆ ನಿಲ್ಲುತ್ತಿದ್ದೆ. ಹ್ಯಾಗೆ ಕುಣಿಯುತ್ತಿದ್ದೆ, ಹ್ಯಾಗೆ ಹಾಡುತ್ತಿದ್ದೆ, ಹ್ಯಾಗೆ ಅಭಿನಯಿಸುತ್ತಿದ್ದೆ. ಕಳ್ಳ ಎದುರು ಬಂದಾಗ ಹ್ಯಾಗಿರುತ್ತಿದ್ದೆ, ಎಳೆದಾಗ ಹ್ಯಾಗೆ ಒಳಗಾಗುತ್ತಿದ್ದೆ, ಹೊತ್ತಾಗ ಹ್ಯಾಂಗೆ ಅನುಕೂಲಳಾಗುತ್ತಿದ್ದೆ – ಇತ್ಯಾದಿ ಕಲ್ಪಿಸಿ ಇನ್ನಷ್ಟು ಅಸೂಯೆಪಟ್ಟ. ತಾನು ನಪುಂಸಕನಾದದ್ದು ವ್ಯರ್ಥವೆನಿಸಿತು. ಹ್ಯಾಗೆ ನಾಟಕ ಮಾಡುತ್ತಾರೋ ನೋಡೇ ಬಿಡುತ್ತೇನೆಂದುಕೊಂಡ.

ಸುದ್ದಿ ಸುತ್ತ ಹದಿನಾಕು ಹಳ್ಳಿಗೆ ಹಬ್ಬಿತು. ಬೆಳಗಾಂವಿಯಿಂದ ಚಿಮಣಾ ಬರುತ್ತಾಳೆಂದು, ಡ್ಯಾನ್ಸು ಮಾಡುತ್ತಾಳೆಂದು, ವಿದ್ಯುದ್ದೀಪ ತರಿಸುತ್ತಾರೆಂದು ಮೊದಮೊದಲಿದ್ದರೆ, ಆಮೇಲೆ ಅದಕ್ಕೆ ಕೈಕಾಲು ಮೂಡಿ ಕಳ್ಳ ರಂಗತಾಲೀಮಿನಲ್ಲಿ ಕಿರಿಚಿದಾಗ ಪಕ್ಕದ ಮನೆಯ ಬಸರಿ ಹಲಿವುಳ್ದಳೆಂದು, ಮೆರೆಮಿಂಡನ ಮೈಯಲ್ಲಿ ಸ್ವಥಾ ಅಂಜನೇಯ ತುಂಬುವನೆಂದು ಹಬ್ಬತೊಡಗಿದವು. ಸೀತೆಯಾದ ರಮೇಸ ಈಗೀಗ ಹೆಂಗಸರಂತೆ ತಿಂಗಳಿಗೊಮ್ಮೆ ಮುಟ್ಟಾಗುವನೆಂದೂ ನಿಂಗೂ ಹೇಳಿದ. ಇಂಥ ಸುದ್ದಿ ಪಾತ್ರಧಾರಿಗಳ ಕಿವಿಗೆ ಬಿದ್ದಾಗಲಂತೂ ಒಬ್ಬೊಬ್ಬ ಒಂದೊಂದು ರೀತಿ ಪುಳಕಗೊಳ್ಳುತ್ತ ಅದು ನಿಜವೆಂಬಂತೆ ಅಭಿನಯಿಸುತ್ತಿದ್ದ. ನಾಟಕದ ದಿನ ಯಾವಾಗ ಬಂದೀತೋ ಎಂದು ಪ್ರತಿ ಜೀವ ಚಟಪಡಿಸುತ್ತಿತ್ತು. ಸದ್ಯ ಆ ದಿನವೂ ಬಂತು.

ಆ ದಿನ ಗೌಡ ಆರು ತಾಸಿನ ಮಧ್ಯಾಹ್ನ ಗುಡಿಸಲ ಮುಂದಿನ ಮರದಡಿ ಕೂತು ಕೂರಿಗಿ ಜೋಡಿಸುತ್ತಿದ್ದ. ತೋಟದ ಅಂಚಿನಲ್ಲಿ ಶಿವನಿಂಗ ಮೇವು ಮಾಡುತ್ತಿದ್ದವನು ಅಲ್ಲೇ ನಿಂತುಕೊಂಡು ಊರಿನ ಕಡೆ  ನೋಡುತ್ತಿದ್ದ. ಅವನನ್ನು ಗಮನಿಸಿ ಗೌಡ ತಾನೂ ಊರ ಕಡೆ ನೋಡಿದ. ದೂರದಲ್ಲಿ ದತ್ತಪ್ಪ, ಲಗುಮವ್ವ ಅವರೊಂದಿಗೆ ಇನ್ನಿಬ್ಬರು, ಪರವೂರಿನವರು ಗುಡಿಸಲ ಕಡೆಗೇ ಬರುತ್ತಿದ್ದರು. ಇಂಥ ಅಪವೇಳೆಯಲ್ಲಿ ದತ್ತಪ್ಪ ಬರೋ ಪೈಕಿ ಅಲ್ಲ, ಯಾಕಿರಬಹುದೆಂದು ಗೌಡನಿಗೂ ಆಶ್ಚರ್ಯವಾಯಿತು ಹಾಗೇ ನೋಡುತ್ತ ನಿಂತ.

ಗೌಡನಿಗೆ ಉಳಿದಿಬ್ಬರು ನಮಸ್ಕಾರ ಮಾಡಿದರು. ಆಗಂತುಕರ ಉದ್ದ ಕೂದಲು, ಅವನ್ನು ಮುಚ್ಚುವಂತೆ ಹಾಕಿದ ಕರೀಟೊಪ್ಪಿಗೆ – ಇವುಗಳಿಂದ ಆಟದವರೇ – ಎಂದು ಖಚಿತವಾಯ್ತು, ಪಡಸಾಲೆಯಲ್ಲಿ ಎಲ್ಲರು ಕೂತರು. ಪಕ್ಕದ ಹಳ್ಳಿಯವರು ಪಾರಿಜಾತ ಕಲಿತಿದ್ದಾರೆ, ಆಡೋದಕ್ಕೆ ಬಂದಿದ್ದಾರೆಂದು ದತ್ತಪ್ಪ ವಿಷಯ ಹೇಳಿದ. ಕಾರಹುಣ್ಣಿಮೆ ಒಂದರ್ಥದಲ್ಲಿ ಗೌಡನ ಮನೆಯ ಹಬ್ಬ, ಕರಿ ಹರಿಯುತ್ತಿರಲಿಲ್ಲ. ಯಾಕೆಂದರೆ ವರ್ಷಗಳ ಹಿಂದೆ ಕರಿ ತಪ್ಪಿಸಿಕೊಂಡು ಪರವೂರಿಗೆ ಹೋಗಿತ್ತು. ಈ ದಿನ ರಾತ್ರಿ ಕರಿಮಾಯಿ ಶಿಶು ಮಕ್ಕಳು ಸಮೇತ ಗೌಡನ ಮನೆಗೆ ಬಂದು, ಬೇಟೆಯ ಬಿನ್ನಾಯ ಮಾಡಿ, ಆಟ, ಮೋಜು ನೋಡಿ ಬೆಳಿಗ್ಗೆ ಗುಡಿಗೆ ಹೋಗುವುದು ಪದ್ಧತಿ. ಊರಿನಲ್ಲಿ ಈ ದಿನವೇ ಗುಡಸೀಕರನ ಮಂಡಳಿ ನಾಟಕ ಆಡುವವರಿರುವಾಗ ಇನ್ನೊಂದನ್ನು ಆಡಿಸುವುದು ಗೌಡನಿಗೆ ಒಪ್ಪಾಗಿ ತೋರಲಿಲ್ಲ. ಆದರೆ ಬಂದವರು ಕೇಳಲಿಲ್ಲ. ನೀವೇ ನೋಡದಿದ್ದರೆ ನಾವೇನು ಕಲಿತಂತಾಯಿತೆಂಬಂಥ ಮಾತಾಡಿದರು. ಅದು ಆ ಭಾಗದ ಕಲಾವಿದರೆಗೆ ಸಹಜ. ಗೌಡನ ಅಭರುಚಿ ಅಂಥಾದ್ದು. ಹಾಡುಗಾರಿಕೆಯಿರಲಿ, ಕುಣಿತವಿರಲಿ, ಮಾತುಗಾರಿಕೆಯಿರಲಿ – ಅದರ ಹೆಚ್ಚುಗಾರಿಕೆಯನ್ನು ಗುರತಿಸಬಲ್ಲವನಾಗಿದ್ದ. ಆಡಂಬರದ ಕಲೆಯಿಮದ ಅದನ್ನು ಬೇರ್ಪಡಿಸಬಲ್ಲವನಾಗಿದ್ದ. ಅಂತೂ ಗೌಡನಿಂದ ಭೇಷ್ ಅನ್ನಿಸಿಕೊಳ್ಳದವನು ಕಲಾವಿದನೇ ಅಲ್ಲ ಎಂಬಂಥ ಗುಂಗು ಕಲಾವಿದರಲ್ಲಿತ್ತು.

ಗೌಡನ ಹುಚ್ಚೇನು ಕಮ್ಮಿಯಲ್ಲ, ಕೌಜಲಗಿ ನಿಂಗವ್ವನಿಗೆ ಭೇಷ್ ಅಂದವನು, ಶಿವಗುರೆಪ್ಪನಿಗೆ ಭಲೆ ಅಂದವನು. ಖುಷಿ ಬಂದಾಗ ಗೌಡನ ಕೊಡುಗೈ ತಡೆಯುವವರೇ ಇಲ್ಲ. ಅದೇನು ಹುಚ್ಚೋ, ಕಲೆಯ ಜೊತೆ ವಿಚಿತ್ರ ತಾದಾತ್ಮ್ಯ ಹೊಂದುತ್ತಿದ್ದ. ಹಿಂದೊಮ್ಮೆ ಸ್ವತಃ ನಿಂಗವ್ವ ಸತ್ಯಾಭಾಮೆಯಾಗಿ ಭಕ್ತಿ, ಸೇಡು, ಅನುರಾಗಗಳ ಸುಳಿಗೆ ಸಿಕ್ಕು “ಕೃಷ್ಣಾ” ಎಂದು ಆರ್ತಳಾಗಿ ಹಾಡಿದಾಗ ಆ ದಿನ ಗೌಡ ಮುದಿ ಹೆಂಗಸಿನಂತೆ ಅತ್ತುಬಿಟ್ಟಿದ್ದ. ಕಲಾವಿದರೂ ಹಾಗಿದ್ದರು. ಅದೇ ನಿಂಗವ್ವನನ್ನು ದತ್ತಪ್ಪ ಮುಂಗೈ ಹಿಡಿದು ಏನು ಕೇಳುತ್ತಿ ಕೇಳು ಎಂದಿದ್ದ. “ಕೃಷ್ಣ ಕುಡದ ಹಾಲಿನ ಗಡಿಗ್ಯೊ ಇದು. ಇದನ್ಯಾಕ ಮುಟ್ಟತಿ” ಎಂದಿದ್ದಳು. ದತ್ತಪ್ಪ ಕೂಡಲೇ ಅವಳ ಕಾಲು ಮುಟ್ಟಿ ನಮಸ್ಕರಿಸಿದ್ದ. ಆ ಕಲಾವಿದರು, ಅವರ ಕಲೆಗಳು ಬದುಕಿನ ಗೂಢಗಳನ್ನು ಝುಮ್ಮ ದಟ್ಟಿಸುವಂತೆ ಚುಚ್ಚಿದ್ದವು. ಆ  ಅನುಭವದಿಂದ ಇವರು ಧನ್ಯರಾಗಿದ್ದರು.

ಆದರೆ ಈ ದಿನ ಆ  ಅನುಭವ ಬೇಡವಾಗಿತ್ತು. ಚೆಲುವಾದ ಹಾಡುಗಾರಿಕೆಗೆ ಮೈ ಪುಳಕಗೊಳ್ಳುವ ದಿನ ಅಲ್ಲ ಇದು, ಮಾತುಗಾರಿಕೆಯ ಚಕಮಕಿಯ ಕಿಡಿ ಈ ದಿನ ತಲೆಯಲ್ಲಿ ಬೆಳಕು ಚೆಲ್ಲುವಂತಿರಲಿಲ್ಲ. ಕುಣಿತಕ್ಕೆ ಕಣ್ಣು ಹಿಗ್ಗುವ ಸ್ಥಿತಿಯಲ್ಲಿರಲಿಲ್ಲ. ಯಾಕೆಂದರೆ ಗುಡಸೀಕರನ ನಾಟಕದಿಂದಾಗಿ ಬಂದವರೆದುರು ಊರ ಹುಳುಕುಗಳನ್ನು ಹೇಗೆ ತೋಡಿಕೊಳ್ಳುವುದು? ಅಷ್ಟು ದೂರದಿಂದ ಬಂದವರನ್ನು ಹೇಗೆ ನಿರಾಸೆಗೊಳಿಸುವುದು? ಅಷ್ಟರಲ್ಲಿ ಶಿವನಿಂಗ ದೂರ ನಿಂತಿದ್ದವನು “ಅವರೂ ಮಾಡಿಕೊಳ್ಳೋದಾದರ ಆಡಲಿ; ನಾವ್ಯಾಕ ನಮ್ಮ ಪದ್ಧತಿ ಬಿಡಬೇಕು?” ಅಂದ. ಬೇರೆ ಸಂದರ್ಭದಲ್ಲಾದರೆ ಗೌಡ ಈ ಮತು ಮೆಚ್ಚುತ್ತಿದ್ದನೋ ಏನೊ” ಅದೇನು ಮಾಡ್ತೀಯೊ ನೀನ ಮಾಡಿಕೊ ಮಾರಾಯ” ಎಂದುಬಿಟ್ಟ ದತ್ತಪ್ಪನಿಗೆ. ದತ್ತಪ್ಪನಿಗೆ ಅಷ್ಟು ಸಾಕಾಗಿತ್ತು ಕಲಾವಿದರನ್ನು ಎಬ್ಬಿಸಿಕೊಂಡು ಹೊರಟ.

ಊರಿನ ಇನ್ನೊಂದು ಭಾಗದಲ್ಲಿ ವಿಚಿತ್ರ ಲವಲವಿಕೆ ತುಂಬಿತ್ತು. ಸ್ಟೇಜು ಕಟ್ಟುವ ಸೀನು ಸೀನರಿಯ ಪರದೆ ಕಟ್ಟುವ ನಾ ಮುಂದು, ನೀ ಮುಂದು ಜನಗಳ ಉತ್ಸಾಹ ಹೇಳತೀರದು. ನಾಟಕವಿನ್ನೂ ರಾತ್ರಿ ಉಂಡು, ಮಲಗೋ ಹೊತ್ತಿಗೆ ಸುರುವಾಗೋದು. ಜನ ಆಗಲೇ ಸ್ಟೇಜಿನ ಬಳಿ ಗಂಡು ಹೆಣ್ಣೆನ್ನದೆ, ಹಿರಿ ಕಿರಿಯರೆನ್ನದೆ ಸೇರಿಬಿಟ್ಟಿದ್ದರು. ನಾಟಕದ ಪ್ರತಿಯೊಬ್ಬ ಪಾತ್ರಧಾರಿ ಮದುವೆಯ ವರನಂತೆ, ಕೂಡಿದವರು ತನ್ನ ಮದುವೆಗೇ ಬಂದವರೆಂಬಂತೆ ಸಡಗರದಿಂದ ನೋಡುತ್ತ ನೋಡಿಸಿಕೊಳ್ಳುತ್ತ ಆ ಈ ಕಡೆ ಓಡಾಡುತ್ತಿದ್ದ. ಅವರಿಗೆ ಮುಗಿಲು ಮೂರೇ ಗೇಣು ಉಳಿದಿತ್ತು. ಸೇರಿದವರಿಗೆ ತಾನು ಪಾತ್ರಧಾರಿಯೆಂದು ತಿಳಿಯಬೇಕಲ್ಲ? ತನ್ನ ಪಾತ್ರದ ಮಾತುಗಳನ್ನು ಜನರ ಗುಂಪಿನಲ್ಲೇ ಬಾಯಿಪಾಠ ಮಾಡುತ್ತ ಅಡ್ಡಾಡುತ್ತಿದ್ದ. ಪಕ್ಕದ ಹಳ್ಳಿಗಳ ಹೈಕಳು ಆಗಲೇ ರಾತ್ರಿಯ ಬುತ್ತಿ ಕಟ್ಟಿಕೊಂಡು ಬಂದಿದ್ದರು. ವಿದ್ಯುದ್ದೀಪದ ಬಗ್ಗೆ, ಚಿಮಣಾ ಬಗ್ಗೆ ಎಲ್ಲರೂ ತಮತಮಗೆ ತಿಳಿದ ಕಥೆಗಳನ್ನು ಎಷ್ಟು ಹೇಳಿ ಕೇಳಿದರೂ ತೃಪ್ತಿಯಿಲ್ಲ.

ಚಿಮಣಾ ಗುಡಸೀಕರನ ಮನೆಯಲ್ಲಿದ್ದಳು. ಅವನ ಮನೆಯ ಮುಂದೊಂದು ಹಿಂಡು ಹುಡುಗರು ನಿಂತಿದ್ದರು. ಅಪ್ಪಿತಪ್ಪಿ ಚಿಮಣಾ ಉಗುಳೋದಕ್ಕಾದರೂ ಹೊರಗೆ ಬಂದರೆ ಆಗಲೇ ನೋಡಬೇಕೆಂಬ ತವಕ ಪ್ರತಿಯೊಬ್ಬನಿಗೆ. ಒಳಗೆ ಮಾತಾಡುವವರ ದನಿ ಹೊರಗಿನವರಿಗೆ ಹೆಣ್ಣದನಿಯಾಗಿ ಕೇಳಿಸುತ್ತಿತ್ತು. ಗಿರಿಜಳ ಓಡಾಟ ಹೇಳತೀರದು. ಪರಿಚಿತ ಹುಡುಗರನ್ನೋ, ಪಾತ್ರಧಾರಿಗಳನ್ನೋ ಕರೆದು ಏನೇನೋ ಕೆಲಸ ಹೇಳುತ್ತ ಗಾಳಿ ತುಂಬಿದ ಎಲೆಗರುವಿನಂತೆ ಒಳಗೊಮ್ಮೆ, ಹೊರಗೊಮ್ಮೆ ವಿನಾಕಾರಣ ಓಡಾಡುತ್ತ ತನ್ನ ಪ್ರತಿಷ್ಠೆ ಪ್ರದರ್ಶಿಸುತ್ತಿದ್ದಳು.

ಆ ದಿನ ಅದೇ ಊರಿನಲ್ಲಿ ನಾಟಕವಿದ್ದ ವಿಷಯ ಬಯಲಾಟದ ಕಲಾವಿದರಿಗೂ ಗೊತ್ತಿತ್ತು. ತಮ್ಮ ಬಯಲಾಟಕ್ಕೆ ಜನ ಸೇರುವುದಿಲ್ಲವೆಂದೂ ಗೊತ್ತಿತ್ತು. ನಿರಾಸೆಯೂ ಆಗಿತ್ತು. ಆದರೂ ಗೌಡ, ಹಿರಿಯರೂ ನೋಡುತ್ತಾರಲ್ಲಾ, ಸಾಕೆಂದು ಸುಮ್ಮನಾದರು.

ಊರಿನ ಬಯಕೆ ಹಣ್ಣಾದಂತೆ ಹೊತ್ತು ಮುಳುಗಿತು. ಕತ್ತಲಾಗುವುದರೋಳಗೇ ಹೊಸ ನಾಟಕದವರು ವಿದ್ಯುದ್ದೀಪ ಹಚ್ಚಿಬಿಟ್ಟರು. ಕೇಳಬೇಕೆ? ಜನ ಅವಸರವಸರವಾಗಿ ಊಟ ಮಾಡಿ, ಸ್ಟೇಜಿನ ಮುಂದೆ ಅನುಕೂಲ ಜಾಗ ಹಿಡಿದುಕೊಂಡು ನಾ ಮುಂದೆ ತಾ ಮುಂದೆಂದು ಜಗಳಾಡುತ್ತ ಕೂತುಬಿಟ್ಟರು.

ಪ್ರೇಕ್ಷಕರಲ್ಲಿ ಒಡೆದು ಕಾಣುತ್ತಿದ್ದವಳೆಂದರೆ ಗಿರಿಜಾ, ಅವಳಿಗೆ ಹೆಮ್ಮೆ, ತಾನು ಗುಡಸೀಕರನ ತಂಗಿಯಾದದ್ದಕ್ಕೆ, ಚಿಮಣಾ ತಮ್ಮ ಮನೆಯಲ್ಲಿ ಇಳಿದುಕೊಂಡಿದ್ದಕ್ಕೆ. ಎಲ್ಲರೂ ತನ್ನ ಮಾತು ಕೇಳುತ್ತಿರುವರೆಂಬಂತೆ ಜೋರು ದನಿಯಲ್ಲಿ ಮಾತಾಡುತ್ತಿದ್ದಳು. ಅವಳ ಸುತ್ತ ಹತ್ತಾರು ಸಮವಯಸ್ಸಿನ ಹುಡುಗಿಯರು ಬಿಟ್ಟ ಕಣ್ಣು ಬಿಟ್ಟಹಾಗೆ, ತೆರೆದ ಬಾಯಿ ತೆರೆದ ಹಾಗೇ, ಆಕೆ ಹೇಳುವುದನ್ನೆಲ್ಲ ಭಯ, ಭಕ್ತಿ ಬೆರಗಿನಿಂದ ಕೇಳುತ್ತ ಕುಳಿತಿದ್ದರು. ಚಿಮಣಾಳನ್ನು ಎಷ್ಟು ವರ್ಣಿಸಿದರೂ ಆ ಹುಡುಗಿಯ ಬಾಯಿಗೆ ಸೋಲಿರಲಿಲ್ಲ.

“ಚಿಮಣಾ ಅಂದರ ಏನಂತ ತಿಳದೀರ? ಅಂಗಡ್ಯಾಗಿನ ಗೊಂಬ್ಯಾಗ್ಯಾಳ! ಪತ್ತಲ ಉಟ್ಟಾಳ ಖರೆ, ನಮ್ಹಾಂಗ ಸೆರಗ ತಲೀಮ್ಯಾಲ ಹೊರೂಣಿಲ್ಲ. ಹಾರೂರ್ಹಾಂಗ ಹೆಗಲ ಮ್ಯಾಲ ಹಾಕತಾಳ. ದೊಡ್ಡ ಸಾವ್ಕಾರಂತ! ನಿಂತ ನೋಡಿದರ ತೆಲೀ ಮ್ಯಾಗಿನ ರುಂಬಾಲ ಕೆಳಗೆ ಬೀಳಬೇಕ, ಅಷ್ಟೆತ್ತರ ಬಂಗ್ಲೆ ಐತೆಂತ; ಆರ ಮಂದಿ ಹೆಂಗಸರ ಬರೀ ಆಕೀ ಸೀರಿ ಒಗ್ಯಾಕ ಇದ್ದಾರಂತ! ಮತ್ತ ಹಾಸಗಿ ಹಾಕವಾಕಿ ಬ್ಯಾರೇ, ಅಡಿಗೀ ಮಾಡುವಾಕಿ ಬ್ಯಾರೇ, ಊಟ ನೀಡುವಾಕಿ ಬ್ಯಾರೇ, ಊಟದ ಮ್ಯಾಲ ಎಲಡಿಕಿ ಮಡಿಚಿ ಕೊಡುವಾಕಿ ಬ್ಯಾರೆ! ನಮ್ಹಾಂಗ ಬುಟ್ಟಿ ತಿಂದ ತೊಟ್ಟಿ ಹೇತಾಳಂದೀ! ನಮ್ಮ ಮನ್ಯಾಗ ಊಟ ಮಾಡೋವಾಗ ನಾನs ನೊಡೇನಲ್ಲ – ಈಟ ಈಟ ಅನ್ನ, ಇಷ್ಟ ಸಾರ, ಹಾಲ ತುಪ್ಪ! ಮೂರ ತುತ್ತ ಊಟಾ ಮಾಡತಾಳ, ಕೈ ತೊಳೀತಾಳ ಅಪ್ಪ. ಕುಬಸದಾಗಿನ ಬಾಡೀ ಹೆಂಗೈತಂದಿರೇ? ದಿನಕ್ಕೆ ಮೂರ ಬಾಡಿ ತೊಡತಾಳ! ಬಾಡೀಗಿ ಸೈತ ನಾರೂ ಎಣ್ಣಿ ಹಚ್ಚಿರತಾಳ…” ಇತ್ಯಾದಿ ಇತ್ಯಾದಿ ಈ ಮಾತು ಕೇಳಿ ಪಾಪ ಒಂದು ಅರಿಯದ ಬಾಲೆ “ಆಕೀನೂ ನಮ್ಹಾಂಗ ಹೂಂಸ ಬಿಡತಾಳು?” ಎಂದು ಕೇಳಿತು. ಆಶ್ಚರ್ಯವೆಂದರೆ ಈ ಪ್ರಶ್ನೆಗೆ ಯಾರೂ ನಗಲಿಲ್ಲ. ಇದಕ್ಕೂ ಗಿರಿಜಾ ಗಂಭೀರವಾಗಿಯೇ ಉತ್ತರ ಕೊಟ್ಟಳು.

ನಾಟಕ ಸುರುವಾಗೋತನಕ ಗಿರಿಜಾ ಒಂದಿಲ್ಲೊಂದು ಇಂಥ ಸಂಗತಿ ಹೇಳುತ್ತಲೇ ಇದ್ದಳು. ಉಳಿದವರು ಕೇಳುತ್ತಲೇ ಇದ್ದರು. ಹೇಳಿ ಅವಳು ದಣಿಯಲಿಲ್ಲ, ಕೇಳಿ ಅವು ದಣಿಯಲಿಲ್ಲ. ಇಂಥ ಹರಿಕಥೆಗಳು ಪ್ರೇಕ್ಷಕರಲ್ಲಿ ಅಲ್ಲಲ್ಲಿ ನಡೆಯುತ್ತಲೇ ಇದ್ದವು. ಗೌಡನ ಮನೇ ಮುಂದೆ ಬಯಲಾಟವಾಗಲೇ ಸುರುವಾಗಿತ್ತು.

ಇವರ ನಾಟಕ ಸುರುವಾಯ್ತು. ಪ್ರಾರಂಭಕ್ಕೆ ಗುಡಸೀಕರ ರಂಗದ ಮೇಲೆ ಬಂದು ನಾಟಕ ಕಲೆಯ ಬಗ್ಗೆ ಒಂದು ಉಪನ್ಯಾಸ ಬಿಗಿದ. ಯಾರಿಗೂ ಭಾಷಣ ತಿಳಿಯಲಿಲ್ಲ. ಆದರೆ ಯಾರೂ ಗದ್ದಲ ಮಾಡಲಿಲ್ಲ. ಭಾಷಣದ ಅಂತ್ಯಕ್ಕೆ ಪಾಪಮಾಸ್ತರ ಬಂದು ಅವನಿಗೊಂದು ಮಾಲೆ ಹಾಕಿ “ನಮ್ಮ ಊರಿನಲ್ಲಿ ಗುಡಸೀಕರ ಜಗತ್ಪ್ರಸಿದ್ಧರಾಗಿದ್ದಾರೆ” ಎಂಬಂಥ ಏನೇನೋ ಒದರಿದ. ಗುಡಸೀಕರ ಹೋಗಿ ಪ್ರೇಕ್ಷಕರಲ್ಲಿ ತನಗಾಗಿ ಹಾಕಿದ್ದ, ಸಾಲೆಯಿಂದ ತಂದಿರಿಸಿದ್ದ, ನಾಲ್ಕೂ ಕಾಲು ಸರಿಯಾಗಿದ್ದ ಕುರ್ಚಿಯಲ್ಲಿ ಠೀವಿಯಿಂದ ಕೂತ. ಪರದೆ ಎದ್ದಿತು.

ಪಾರ್ವತಿ ಪರಮೇಶ್ವರರ ಸಭೆಯಿಂದ ನಾಟಕ ಸುರುವಾಯಿತು. ಲೋಕದ ತಂದೆತಾಯಿಗಳಾದ ಅವರು ಜಗತ್‌ಕಲ್ಯಾಣ ಮರೆತು ಸರಸದಲ್ಲಿ ತೊಡಗಿದ್ದಾಗ ನಾರದನ ಪ್ರವೇಶವಾಗಬೇಕು. ಅವನ ಪ್ರವೇಶ ಹಳ್ಳಿಯ ಮಂದಿಗೆ ಅಕ್ಷರಶಃ ರೋಮಾಂಚವೆಬ್ಬಿಸಿತು. ಜೋತುಬಿದ್ದ ಹಗ್ಗದ ತುದಿಯ ಕುಣಿಕೆಯಲ್ಲಿ ಕಾಲೂರಿ ನಾರದ ಉರ್ಫ್ ಮೆರೆಮಿಂಡ ನಾರಾಯಣನ ನಾಮಸ್ಮರಣೆ ಮಾಡುತ್ತ ಎಡಗೈಯಲ್ಲಿ ಭದ್ರವಾಗಿ ಹಗ್ಗ ಹಿಡಿದುಕೊಂಡು ಬಲಗೈಯಲ್ಲಿ ತಂಬೂರಿ ಹಿಡಿದುಕೊಂಡು ರಂಗದ ಮೇಲ್ಭಾಗದಿಂದ ಮಧ್ಯ ರಂಗದವರೆಗೆ ಇಳಿದ. ಭಾವುಕ ಮಂದಿಗೆ ನಾರದ ಆಕಾಶದಿಂದ ಅವತರಿಸುತ್ತಿರುವನೋ ಏನೋ ಎಂಬಂತಾಯ್ತು. ಬೆಕ್ಕಸ ಬೆರಗಾಗಿ ಬಾಯಲ್ಲಿ ಗುಂಗಾಡು ಹೊಕ್ಕು ಹೊರಬಂದರೂ ಖಬರಿಲ್ಲದಂತೆ ಕೂತರು.

ನಾರದ ಮಹರ್ಷಿ “ಎಲೈ ಜಗನ್ನಿಯಾಮಾಕನಾದ ಪರಮಾತ್ಮನೇ” ಎನ್ನುತ್ತ ಜಿಗಿಯಬೇಕು. ಹಾಗೆ ಜಿಗಿಯಹೋದರೆ ಕುಣಿಕೆ ಬಿಗಿಯಾಗಿ ಕಾಲು ಹೊರಬರಲೇ ಇಲ್ಲ! ಜೋಲಿ ತಪ್ಪಿದ ಮಹರ್ಷಿ ಕೈಬಿಟ್ಟ. ಸುದೈವಕ್ಕೆ ಕಾಲ ಕುಣಿಕೆ ಹಾಗೇ ಬಿಗಿಯಾಗೇ ಇದ್ದುದರಿಂದ ನೆಲಕ್ಕೆ ಅಪ್ಪಳಿಸಲಿಲ್ಲ. ನಾರದನ ಕಾಲು ಕುಣಿಕೆಯಲ್ಲಿ ಸಿಕ್ಕು ಕೆಳಕ್ಕೂ ಬೀಳದೆ, ನಿಲ್ಲಲಿಕೂ ಆಗದೆ ತಲೆಕೆಳಗಾಗಿ ತೂಗಾಡತೋಡಗಿದ! ಜನ ಹೋ ಎಂದು ನಗತೊಡಗಿದರು. ಕೆಲವರು ಇದೂ ನಾಟಕವೇ ಇರಬಹುದೆಂದು ಸ್ವಲ್ಪ ಹೊತ್ತು ಸುಮ್ಮನಿದ್ದರು. ಆದರೆ ನಾರದನ ಚಡಪಡಿಕೆ ನೋಡಿ ಅವರಿಗೂ ಅರ್ಥವಾಯಿತು. ಗುಡಸೀಕರ ಎದ್ದು “ಪರದೇ ಬಿಡೋ” ಎಂದು ಕೂಗಿದ. ಶಿವ ಗಾಬರಿಯಾಗಿ ಒಳಗೋಡಿದ. ಗುಡಸೀಕರ ಮತ್ತೆ ಕೂಗಿದ. ಪಾಪ ಪಾರ್ವತಿಗೆ ಕೂಗಾಡುವ ಜನರನ್ನು ತೂಗಾಡುವ ನಾರದನನ್ನು ಹೇಗೆ ಎದುರಿಸಬೇಕೆಂದು ತಿಳಿಯದೆ ತಾನು ಬಾಯಿಪಾಠ ಮಾಡಿದ್ದ ಹಾಡನ್ನು ಅಭಿನಯಸಮೇತ ಕೀರಲು ದನಿಯಲ್ಲಿ ಒದರುತ್ತ, ಸೊಂಟದ ಮೇಲೆ ಎರಡೂ ಕೈ ಊರಿ ಕುಣಿಯತೊಡಗಿದ. ಜನಕ್ಕೆ ನಗೆಯಿಂದ ಹುಚ್ಚು ಹತ್ತುವುದೊಂದು ಬಾಕಿ. ತೂಗಾಡುವ ನಾರದನನ್ನು ನೋಡುವುದೇ? ಕುಣಿಯುವ ಪಾರ್ವತಿಯನ್ನು ನೋಡುವುದೇ? ಕಿರುಚಾಡುವ ಗುಡಸೀಕರನನ್ನು ನೋಡುವುದೇ? ಕೊನೆಗೆ ಗುಡಸೀಕರ ಎದ್ದು ಒಳಗೆ ಹೋದ.

ಒಳಗಿದ್ದ ಕಳ್ಳ ರಾವಣನಿಗಾಗಲೇ ನೆತ್ತಿಗೇರುವಷ್ಟು ನಶೆಯೇರಿತ್ತು. ರಂಗದ ಮೇಲೆ ಆಗಲೇ ಆಂಜನೇಯ ಬಂದು ತೂರಾಡುತ್ತಿದ್ದಾನೆಂದು ಭಾವಿಸಿ ಓಡಿಬಂದು “ಎಲವೆಲವೋ ದುಷ್ಟ ಕಪಿಯೇ” ಎಂದು ನಿಲ್ಲಲಾರದೆ ಜೋಲಿ ತಡೆಯಲಾರದೆ ಗದೆ ಎತ್ತಿ ತೂಗುವ ನಾರದನನ್ನು ಹೊಡೆಯಹೋಗಿ ಕರೆಂಟಿನ ಪೆಟ್ಟಿಗೆಗೆ ಜೋರಿನಿಂದ ಅಪ್ಪಳಿಸಿದ. ಕರೆಂಟು ಹೋಗಿ ವಿದ್ಯುದ್ದೀಪಗಳೆಲ್ಲಾ ಆರಿಹೋಗಿ ಜನ ಹೋ ಎಂದು ಎದ್ದುಬಿಟ್ಟರು. ಮಕ್ಕಳು, ಹೆಂಗಸರು ಕಿರುಚಾಡತೊಡಗಿದರು. ಜನಕ್ಕೆ ಈಗ ಪಾರಿಜಾತದ ನೆನಪಾಯಿತು. ಸ್ವಲ್ಪ ಹೊತ್ತು ಸುಧಾರಿಸಿಕೊಂಡಿದ್ದು ಆ ಕಡೆ ನುಗ್ಗಿದರು.

ಎಲ್ಲ ಎದ್ದುಹೋದರು, ರಂಗಭೂಮಿ ಸ್ತಬ್ಧವಾಗಿತ್ತು. ಗುಡಸೀಕರ ಬ್ಯಾಟ್ರಿ ಹಿಸುಕಿ ಎಲ್ಲರನ್ನೂ ಹೆಸರುಕೊಂಡು ಕರೆಯುತ್ತ ಹುಡುಕಿದ. ಪರದೆಯ ಹಿಂದೆ ಕಳ್ಳ ಮೂಲೆಯಲ್ಲಿ ಕಾಲೆತ್ತೋ, ಕೈಯೆತ್ತೋ ಬೇಹೋಶ್ ಆಗಿ ಒಣಗು ಹಾಕಿದ ಬಟ್ಟೆಯ ಹಾಗೆ ಬಿದ್ದುಬಿಟ್ಟಿದ್ದ. ಹೋಗಿ ಎಬ್ಬಿಸಿ ನೋಡಿದ. ನಶೆಯೇರಿದ್ದು ಸ್ಪಷ್ಟವಾಯಿತು. ಸಮೀಪದಲ್ಲಿ ಸೀತೆ ಮುರಿದ ಗೊಂಬೆಯ ಹಾಗೆ ಬಿದ್ದುಬಿಟ್ಟಿದ್ದಳು. ಉಳಿದವರೆಲ್ಲ ಫರಾರಿ. ಹಾಗೇ ನೋಡುತ್ತ ಬಂದಾಗ ಚಿಮಣಾ ಪಿಳಿಪಿಳಿ ಕಣ್ಣು ಬಿಡುತ್ತ ಸಂಕುಚಿತವಾಗಿ ಉಡುಗಿದ್ದಳು. ಕೋಪ ತಾಪ, ನಿರಾಸೆಗಳಿಂದ ಮೊದಲೇ ಸುಡುತ್ತಿದ್ದವನಲ್ಲಿ ಸೊಂಟದ ಬೆಂಕಿ ಭುಗಿಲ್ಲೆಂದು ಹೊತ್ತಿಕೊಂಡು ಉರಿಯಿತು. ತನಗೇ ಗೊತ್ತಲ್ಲದಂತೆ ಹೋಗಿ ಅವಳನ್ನು ತಬ್ಬಿಕೊಂಡ.

ನಿಂಗೂ ಚಲೋದಾಗಿ ಸೇಡು ತೀರಿಸಿಕೊಂಡಿದ್ದ. ಮುಟ್ಟಿ ನೋಡಿಕೊಳ್ಳುವ ಹಾಗೆ ಬರೆ ಎಳೆದಿದ್ದ. ತಿಂದರೆ ತುಟಿ ಕೆಂಪಗಾಗುತ್ತವೆಂದು ಪುಸಲಾಯಿಸಿ ರಾವಣ ಉರ್ಫ್ ಕಳ್ಳನಿಗೂ ಸೀತೆ ಉರ್ಫ್ ರಮೇಸನಿಗೂ ಎಲಡಿಕೆ ಮಡಚಿ ಕೊಟ್ಟಿದ್ದ. ಅದರಲ್ಲಿ ಮತ್ತುಬರುವ ಗಿಡಮೂಲಿಕೆ ಇಟ್ಟಿದ್ದ. ಗುಡಸೀಕರನ ಭಾಷಣ ಮುಗಿಯೋ ಹೊತ್ತಗೆ ರಾವಣನ ತಲೆತಿರುಗಿ ಎದುರು ನಿಂತವರು ಎರಡೆರಡಾಗಿ ಕಾಣತೊಡಗಿದರು. ಜಗಿಯುತ್ತ ತುಟಿ ಸವರಿಕೊಳ್ಳುತ್ತ ಮೂಲೆಗೊರಗಿದ್ದ ಸೀತೆ ಮೇಲೇಳಲೇ ಇಲ್ಲ. ಕಳ್ಳನಿಗೆ ಜೊಂಪು ಕೂಡ ಹತ್ತಿತ್ತು. ಅಷ್ಟರಲ್ಲಿ ಜನರ ಹಾಹಾಕಾರ ಕೇಳಿಸಿ ಎಚ್ಚೆತ್ತು ನೋಡಿದ. ನಾರದ ತೂಗಾಡುತ್ತಿದ್ದನಲ್ಲಾ, ಓಹೋ ಹನುಮಂತನ ಪ್ರವೇಶವಾಗಿದೆಯೆಂದು ಭಾವಿಸಿ ಓಡಿಹೋದ. ಹೊಡೆಯುವುದಕ್ಕೆ ಹೋಗಿ ನಾರದನ ಬದಲು ಕರಂಟ್ ಡಬ್ಬಿಗೆ ಹೊಡೆದ. ಮುಂದಿನ ಕಥೆ ನಿಮಗೆ ಗೊತ್ತೇ ಇದೆ. ಕತ್ತಲಲ್ಲಿ ಜನರ ಹಾಹೋ ನಡೆದು ನಟರು ಗಾಬರಿಯಿಂದ ಬೆದರಿದ ಕುರಿಗಳಂತೆ ದಿಕ್ಕುಪಾಲಾಗಿ ಸತ್ತೆವೋ ಬದುಕಿದೆವೋ ಎಂದು ಓಡಿಹೋದರು.

ಆದರೆ ಯಾರಿಂದ ಹೀಗಾಯಿತೆಂದು ಕೊನೆಯ ತನಕ ಯಾರಿಗೂ ತಿಳಿಯಲೇ ಇಲ್ಲ. ತನಗೆ ಯಾರೋ ಮದ್ದು ಮಾಟ ಮಾಡಿರಬೇಕೆಂದು ಕಳ್ಳ ನಂಬಿದರೆ, ತನಗೆ ದೃಷ್ಟಿಯಾಗಿ ಹೀಗಾಯಿತೆಂದು ಸೀತೆ ನಂಬಿದ. ಕರಿಮಾಯಿಯಿಂದಲೇ ಹೀಗಾಯಿತೆಂದು ಜನ ನಂಬಿದರು. ಯಾಕೆಂದರೆ ಇದು ವಿನಾಕಾರಣ ನಂಬಿಕೆಯಲ್ಲ.

ಇಲ್ಲಿ ಗುಡಸೀಕರ ನಾಟಕ ನಡೆದಿದ್ದರೆ ಗೌಡನ ಮನೆಯ ಮುಂದೆ ಪಾರಿಜಾತ ನಡೆದಿತ್ತಲ್ಲವೆ? ದೇವರೇಸಿ ಅಲ್ಲೇ ಕೂತು ಆಟ ನೋಡುತ್ತಿದ್ದ. ಸರಿಸುಮಾರು ಇಲ್ಲಿ ನಾರದ ತೂಗಾಡುತ್ತಿದ್ದಾಗ ಅಲ್ಲಿ ದೇವರೇಸಿ ಒಂದೆರಡು ಸಲ ಬಿಕ್ಕಿದನಂತೆ. ಇಲ್ಲಿ ತಾಯಿ ಬಿಕ್ಕುವುದಕ್ಕೂ ಅಲ್ಲಿ ಕರೆಂಟು ಹೋಗುವುದಕ್ಕೂ ಸಮವಾಯಿತು. ತಾಯಿ ಇಲ್ಲೀತನಕ ಹರಿಯುವ ನೀರು ತರುಬಿದ್ದಳು. ಬಿಳಿ ಮೋಡದಿಂದ ಮಳೆ ಬರಿಸಿದ್ದಳು. ಆದರೆ ವಿದ್ಯುದ್ದೀಪ ಕಳೆಯಬಲ್ಲಳೆಂದು ಯಾರಿಗೂ ತಿಳಿದಿರಲಿಲ್ಲ. ಮಾರನೇ ದಿನವೇನೋ ಕಾರಾರು ರೀತ್ಯ ಗುಡಸೀಕರ ವಿದ್ಯುದ್ದೀಪದವನಿಗೆ  ಹಣಕೊಟ್ಟು ಕಳಿಸಿದ್ದ. ಆದರೆ ಅವನ ಕಣ್ಣು ಹೋದವೆಂದೂ, ಅವನು ಅಳುತ್ತ ಇನ್ನೊಬ್ಬರ ಕೈಹಿಡಿದುಕೊಂಡು ಹೊದನೆಂದೂ ಸುದ್ದಿ ಅಥವಾ ನಂಬಿಕೆ ಹಬ್ಬಿತು. ಹೆಚ್ಚೇನು, ಗೌಡ, ದತ್ತಪ್ಪ ಕೂಡ ಇದನ್ನು ನಂಬಿದರು.

ಈ ನಂಬಿಕೆಗಳಿಂದ ಚತುಷ್ಟಯರೂ ಅಧೀರರಾದರು. ಆದರೆ ಗುಡಸೀಕರ ಮಾತ್ರ ಎಳ್ಳಕಾಳು ಮುಳ್ಳಮೊನೆಯಷ್ಟೂ ವಿಚಲಿತನಾಗಲಿಲ್ಲ. ಚಿಮಣಾಳ ಸಂಗಸುಖದಲ್ಲಿ ಹುಡುಗ ಒಳಗೊಳಗೇ ಆಳದಲ್ಲಿ ಆಳ್ಳಕಾಗಿದ್ದ. ನಾಟಕ ಕೆಟ್ಟುದಕ್ಕೆ ಕಾರಣ ಕೆದರಿ ತಿಳಿಯುವ ಗೋಜಿಗೆ ಅವ ಹೋಗಲೇ ಇಲ್ಲ.

ನಾಟಕವಾದ ಎರಡು ಮೂರು ದಿನ ಊರಿನ ಮನಸ್ಸು ಕದಡಿಬಿಟ್ಟಿತ್ತು. ಊರ ಬಾಯೊಳಗೆಲ್ಲ ಕರಿಮಾಯಿಯ ಸುದ್ದಿಯೇ. ಚಿಮಣಾಳ ಸುದ್ದಿಯೇ. ನಾಟಕದ ಸುದ್ದಿಯೇ. ಗುಡಸೀಕರ ಈಗ ಗೌಡನ ಎದುರಾಳಿಯಾಗಿದ್ದ. ಗೌಡ ತಾನೇ ಮುಂದಾಗಿ ಪಂಚಾಯ್ತಿ ಕೊಟ್ಟದ್ದನ್ನು, ಈತ ಎಲ್‌ಎಲ್‌ಬಿ ಪಾಸಾದಾಗ ಸಕ್ಕರೆ ಹಂಚಿದ್ದನ್ನು ಜನ ಸ್ಮರಿಸಿದರು. ಆದರೆ ಹುಡುಗಿಯರ ಕಲ್ಪನೆಗಳಿಗೆ ರೆಕ್ಕೆ ಮೂಡಿ ಸಿಕ್ಕಾಪಟ್ಟೆ ಹಾರಾಡಲು ಇರೋ ಮುಗಿಲು ಸಾಲದೆನಿಸಿ, ಹಳೇ ಮುದುಕಿಯರು ಕಾಶಿ ಕೈಲಾಸದ ಕನಸು ಕಂಡಂತೆ ಇವರು ಬೆಳಗಾವಿಯ ಕನಸು ಕಾಣತೊಡಗಿದರು.

ಈಗ ಊರಲ್ಲಿ ಚಿಮಣಾ ಇದ್ದಳು. ಇವಳೊಂದಿಗೆ, ಅವಳ ಜೊತೆ ಬಂದಿದ್ದ ಇನ್ನೊಬ್ಬ ನಮ್ಮ ಕಥೆಯಲ್ಲಿ ಕಾಲಿರಿಸಿದ. ಅವನೇ ಬಸವರಾಜು. ಗುಡಸೀಕರ ಮತ್ತೆ ಚೇತರಿಸಿಕೊಂಡ. ಚತುಷ್ಟಯರನ್ನು ಕರೆಸಿದ. ಅವರೋ ನಾಟಕ ತನ್ನಿಂದಲೇ ಕೆಟ್ಟಿತೆಂದು ಪ್ರತಿಯೊಬ್ಬನೂ ಒಳಗೊಳಗೇ ಹುಳುಹುಳು ಮಾಡುತ್ತಿದ್ದ. ಈ ಮೂರು ದಿನವೆಲ್ಲ ಅವರು ತಮ್ಮ ಮೇಲಿನ ತಪ್ಪು ಜಾರುವಂಥ ನೆಪ ಸೃಷ್ಟಿಸುವುದರಲ್ಲೇ ಕಾಲ ಕಳೆದಿದ್ದರು. ಕರೆಸಿದ್ದಕ್ಕೆ ಅಂಜುತ್ತ ಹೋದರೆ ಆಶ್ಚರ್ಯ ಕಾದಿತ್ತು. ಗುಡಸೀಕರ ನಾಟಕದ ಸುದ್ದಿ ಎತ್ತಲೇ ಇಲ್ಲ.

“ಯಾಕ್ರೋ? ಚಾದಂಗಡಿ ವಿಚಾರ ಮರತಬಿಟ್ಟಿರೇನ್ರೋ? ಹೋಗ್ರಿ, ಹೋಗ್ರಿ, ಊರ ಹೊರಗ ಹೊಲಗೇರಿ ಹಂತ್ಯಾಕ ನಮ್ಮ ಜಾಗಾ ಐತೆಲ್ಲ, ಅಲ್ಲೊಂದು ಗುಡಸಲಾ ಹಾಕ್ರಿ, ನಾಳಿ ಚೆಲೋ ದಿನ ಐತಿ. ಸುರುಮಾಡೋಣು, ನಡೀರಿ.”