ಶಿವಾಪುರದ ಪಾಲಿಗೆ ಗಂಡಸರ ಖರೇ ಹಬ್ಬವೆಂದರೆ ಇದೊಂದೇ. ಈ ಊರ ಹೋಳೀ ಹುಣ್ಣಿಮೆಯೆಂದರೆ ಸುತ್ತ ಹದಿನಾಲ್ಕು ಹಳ್ಳಿಗೆಲ್ಲ ಪ್ರಸಿದ್ಧವಾಗಿತ್ತು. ಗಂಡಸರು ಸಂಕೋಚವಿಲ್ಲದೆ ಹಿರಿನಿಂಗ ಕಿರಿನಿಂಗನ್ನೋ ಭೇದವಿಲ್ಲದೆ ಹಬ್ಬದಲ್ಲಿ ಭಾಗವಹಿಸುತ್ತಿದ್ದುದು ಇದಕ್ಕೆ ಕಾರಣವಾಗಿರಬಹುದು ಅಥವಾ ಊರಿನ ಮದುವೆಯಾಗದ ಉಡಾಳರಿಗೂ, ಸೂಳೆಯರ ತಂಡಕ್ಕೂ ಹಾಡಿನ ಜಿದ್ದಾಜಿದ್ದಿ ಸ್ಪರ್ಧೆಯಾಗುತ್ತದಲ್ಲ, ಅದಕ್ಕಿರಬಹುದು. ಅಥವಾ ಹೀಗೂ ಇರಬಹುದು; ಗೋಕಾವಿ ಕರದಂಟು, ತುಕೋಳ, ತಂಬಾಕು, ನಿಪ್ಪಾಣಿ ಬೀಡಿ – ಹೀಗೆ ಒಂದೊಂದೂರು ಒಂದೊಂದಕ್ಕೆ ಪ್ರಸಿದ್ಧವಾದಂತೆ ಶಿವಾಪುರದ ಸೂಳೆ ಎಂಬ ಮಾತೂ ಇರೋಣದರಿಂದ ಸಹಜವಾಗಿಯೇ ಇಲ್ಲಿಯ ಸೂಳೆಯರು ಚೆಲುವೆಯರು, ಅಷ್ಟೇ ಯಾಕೆ ಒಬ್ಬ ಜನಪದ ಕವಿಯ ಪ್ರಕಾರ –

ಇಡೀ ಜಗತಾದಾಗ ಎಲ್ಲೂ ಇಲ್ಲರಿ
ಇಂಥಾ ಮೋಜಿನ ಹುಡಿಗೇರಾ ||
ತುಂಬ ನಿತಂಬಾ ಹುಬ್ಬ ಕುಣಸತಾರ
ನಿಂತಲ್ಲೆ ಬೆವರ್ಯಾರ ಪೈಲ್ವಾನರಾ ||
ತೊಡಿಗೊಳ ಹುರಿಮಾಡಿ ಉಸರ ಹಾಕತಾರ
ಬಾಸಿಂಗ ಕಾಣದ ಹುಡುಗೋರಾ ||
ಏನಂತ ಹೇಳಲಿ ಶಿವಾಪೂರ ಸೂಳೇರ
ಅಸಲ ಸೊಂಟದ ಸಡಗರಾ ||

– ಎಂದು ಇರುವುದರಿಂದ ಇದೂ ಕಾಣವಾಗಿರಬಹುದು. ಅಥವಾ ಬೇರೆ ಕಾರಣಗಳೂ ಇರಬಹುದು. ಅಂತೂ ಈ ಊರ ಹೋಳೀ ಹಬ್ಬ ಪ್ರಸಿದ್ಧವೆಂಬುದಂತೂ ನಿಜ.

ಇದು ಈ ಊರವರಿಗೂ ತಿಳಿದದ್ದೆ. ಆದ್ದರಿಂದಲೇ ಹೋಳೀ ಹುಣ್ಣಿಮೆ ಇನ್ನೂ ಹತ್ತು ಹನ್ನೆರಡು ದಿನ ಇರುವಾಗಲೇ ಊರಿನ ಜನ ಮಾನಸಿಕ ಸಿದ್ಧತೆ ಮಾಡಿಕೊಳ್ಳುತ್ತಾರೆ. ತದಿಗೆಯ ಚಂದ್ರನನ್ನು ನೋಡಿದೊಡನೆ ಮಕ್ಕಳೆಲ್ಲ ಓಣಿಯಲ್ಲಿ ಸೇರಿ ಹೊಯ್ಕೋಳ್ಳತೊಡಗುತ್ತವೆ. ಒಂದೆರಡು ಗಂಟೆ “ಹೊಯ್ಕೊಳ್ಳುವ ಸೇವೆ” ಮಾಡಿ, ಮಂದಿ ಮಲಗಿದ ಮೇಲೆ ಪಕ್ಕದ ಹಿತ್ತಲಗಳಿಗೆ ಹಾರಿ ಕುಳ್ಳು(ಬೆರಣಿ) ಕಟ್ಟಿಗೆ ಕದ್ದು ಹಾಳು ಮನೆಯಲ್ಲಿ ಸಂಗ್ರಹಿಸಿ ಮಲಗಲಿಕ್ಕೆ ಹೋಗುತ್ತವೆ. ಹುಣ್ಣಿಮೆ ಬರುವವರಿಗೆ ಪ್ರತಿ ರಾತ್ರಿ ಈ ಕಾರ್ಯಕ್ರಮ ಚಾಚೂ ತಪ್ಪದೆ ನಡೆಯುತ್ತದೆ.

ವಯಸ್ಸಿನಲ್ಲಿ ಇವರಿಗಿಂತ ದೊಡ್ಡಹುಡುಗರು, ಆದರೆ ಮದುವೆಯಾಗದವರು, ಕರಿಮಾಯಿಯ ಗುಡಿಯಲ್ಲಿ ರಾತ್ರಿ ಸೇರಿ ಹಳೆಯ ಹೋಳೀ ಪದ ಜ್ಞಾಪಿಸಿಕೊಳ್ಳುತ್ತ, ಹೊಸ ಪದ ಹೊಸೆಯತೊಡಗುತ್ತಾರೆ. ಈ ಹಬ್ಬವನ್ನು ಒಟ್ಟು ಎರಡು ದಿನ ಆಚರಿಸುತ್ತಾರೆ. ಹುಣ್ಣಿಮೆಯ ದಿನ ಗೌಡನ ನೇತೃತ್ವದಲ್ಲಿ ಹಿರಿಯರು, ಪ<ಚರು ವಾದ್ಯ ಸಮೇತ ಕಾಡಿಗೆ ಹೋಗಿ ಎಸಳಾದ ಮರದ ಟೊಂಗೆಯೊಂದನ್ನು ಕಡಿದು ತಂದು ಕರಿಮಾಯಿಯ ಗುಡಿಯ ಮುಂದೆ ನಿಲ್ಲಿಸುತ್ತಾರೆ. ಮಕ್ಕಳು ಕದ್ದು ತಂದ ಕುಳ್ಳು ಕಟ್ಟಿಗೆಗಳನ್ನೆಲ್ಲ ತಂದು ಅದರ ಸುತ್ತ ಗುಂಪಿ ಹಾಕುತ್ತಾರೆ. ಆ ದಿನ ಮನೆಯಲ್ಲಿ ಹೋಳಿಗೆಯೂಟ, ರಾತ್ರಿ ಊರಿನ ಉತ್ಸಾಹಿಗಳು ತಯಾರು ಮಾಡಿದ ಆಟ, ಮೋಜು ಸೋಗು ನಡೆಯುತತವೆ.

ಮಾರನೇ ದಿನವೇ ಧೂಳವಾಡ, ಹೊತ್ತು ಹುಟ್ಟುವ ಮುಂಚೆಯೇ ಗೌಡನ ನೇತೃತ್ವದಲ್ಲಿ ಜನರೆಲ್ಲ ಕಾಮನನ್ನು, ಅರ್ಥಾತ್ ಮರದ ಟೊಂಗೆಯನ್ನು ನಿಲ್ಲಿಸಿದ ಸ್ಥಳಕ್ಕೆ ವಾದ್ಯ ಸಮೇತ ಬರುತ್ತಾರೆ. ಅವರೆಲ್ಲ ಕಾಮನ ಸುತ್ತ ಗಿಜಿಗಿಟ್ಟುತ್ತ ನಿಂತ ದೃಶ್ಯ ನೋಡಬೇಕು ಒಬ್ಬರು ಮೈಮೇಲೂ ಸರಿಯಾಗಿ ಬಟ್ಟೆ ಇರುವುದಿಲ್ಲ. ಒಬ್ಬೊಬ್ಬರೂ ಈ ಹಬ್ಬಕ್ಕೆಂದೇ ಇಟ್ಟ ಹಳೇ, ಹರಿದ ಚಿಂದಿ ಬಟ್ಟೆಗಳನ್ನು ಹೊರತೆಗೆದು ಹಾಕಿಕೊಂಡಿರುತ್ತಾರೆ. ಸೊಂಟದ ಸುತ್ತ ಚಿಂದಿ ಬಟ್ಟೆಯ ಹಿಂಡು ಹಿಂಡು ಗಂಡಸರು ಬಾಯ್ಗೆ ಕೈ ಒಯ್ಯುವ ಅವಸರದಲ್ಲಿರಲು, ಮುದುಕರು ಲಗಮವ್ವನ ನಿಂತಂಬಗಳನ್ನೇ ನೋಡುತ್ತ ಹಳೆಯ ಕಾಲ ನೆನಪಿಸಿಕೊಂಡು ಸಂಭ್ರಮದಲ್ಲಿರಲು, ನೋಟ ಕಾಣದೆ ಅವಕಾಶ ಸಿಕ್ಕಲ್ಲಿ ಉಸುಳುತ್ತ ಸಣ್ಣ ಮಕ್ಕಳು ಚಡಪಡಿಸುತ್ತಿರಲು ಗೌಡ ಕಾನ ಗುಂಪಿನ ಬೆಂಕಿ ಹಚ್ಚುತ್ತಾನೆ. ಕೂಡಲೇ ಎಲ್ಲರೂ ಅಕ್ಷರಶಃ ದನಿ ಮುಗಿಲು ಮುಟ್ಟುವ ಹಾಗೆ ಲಬೋಲಬೋ ಅಂತ ಹೊಯ್ಕೊಳ್ಳುತ್ತಾರೆ. ವಾದ್ಯದವರು ವಾದ್ಯ ಬಾರಿಸುತ್ತಾರೆ. ಅವರು ಹೊಯ್ಕೊಳ್ಳುವುದರ ಮೇಲಿಂದಲೇ ಬೆಕಾದರೆ ಅವರವರ ವಯಸ್ಸು ಹೇಳಿಬಿಡಬಹುದು. ಮುದುಕರು ಒಂದೆರಡು ಸಲ ಹೊಯ್ಕೊಂಡು ಸುಮ್ಮನಾದರೆ ನಡು ವಯಸ್ಸಿನವರು ಅವರಿಗಿಂತ ಹೆಚ್ಚು, ಮದುವೆಯಾಗದ ಹುಡುಗರು ಇನ್ನೂ ಹೆಚ್ಚು. ಮಕ್ಕಳು ಇಲ್ಲಿಸುವುದೇ ಇಲ್ಲ.

ಅದೆಲ್ಲ ಸುಟ್ಟು ಬೂದಿಯಾದ ಮೇಲೆ ಲಗಮವ್ವ ಒಂದು ಹರಿವಾಣದಲ್ಲಿ ಬೂದಿ ತುಂಬಿಕೊಂಡು ಊರ ಸೀಮೇಯಗುಂಟ ಸಿಂಪಡಿಸಿ ಬರುತ್ತಾಳೆ. ಅಂದರೆ ಸೀಮೆಯಾಚೆಯ ರೋಗ – ರುಜಿನಾದಿಗಳು ಊರಿಗೆ ಬರುವುದಿಲ್ಲವೆಂದೂ, ಆ ಭಾಗ ಧನ – ಧಾನ್ಯಗಳಿಂದ ತುಂಬಿ ತುಳುಕುವುವೆಂದೂ ನಂಬಿಕೆ, ಇಷ್ಟೊತ್ತಿಗಾಗಲೇ ಹೊತ್ತು ಮೂರು ಮಾರು ಏರಿರುತ್ತದೆ. ಸೀಮೆ ಕಟ್ಟಿದ ಲಗಮವ್ವ ಸೀದಾ ಹೋಗಿ ಸೂಳೆಯರನ್ನೆಲ್ಲ ಕಲೆಹಾಕಿ ಗುಡಿಗೆ ಹೊರಡುತ್ತಾಳೆ. ಹಾಡಿನ ಜಿದ್ದಾದ ಮೇಲೆ ಬಣ್ಣ ಗೊಜ್ಜಾಡಬೇಕಲ್ಲ, ಸೂಳೆಯರು ಸಾಮಾನ್ಯವಾಗಿ ಹರಕು ಸೀರೆ ಉಟ್ಟಿರುತ್ತಾರೆ. ಅವರ ಸೀರೆ ಎಷ್ಟೆಷ್ಟು ಹರಿದಿದ್ದರೆ ರಸಿಕರ ಬಾಯಿ ಅಷ್ಟಷ್ಟು ತೆರೆದಿರುತ್ತವೆ.

ಹಾಗೆ ಇವರ ತಂಡ ಗುಡಿಯ ಕಡೆ ಹೊರಟರಾಯಿತು. ಹುಡುಗರು ತಂಡತಂಡವಾಗಿ ಹೊಯ್ಕೊಳ್ಳುತ್ತ ಬೆನ್ನು  ಹತ್ತುತ್ತಾರೆ. ಮಧ್ಯೆ ಮಧ್ಯೆ ಅವರಿಗೂ ಇವರಿಗೂ ಹ್ಯಾವದ ಮಾತು,  ದೀಡೀ ದಿಕ್ಕಟ್ಟು, ಕುಚೇಷ್ಟೆಗಳ, ಕೊಡುಕೊಳೆ ನಡೆದಿರುತ್ತದೆ ಉದಾ: “ಏಳೂರ ನೀರು ಕುಡಿದಲ್ಲದ ಈ ಮಣಕಿನ ಬೆದಿ ನಿಲ್ಲಾಣಿಲ್ಲಲೇ” ಎಂದು ಗಂಡು ಹಿಂಡಿನಿಂದ ಮಾತು ಬಂದರೆ “ಅಯ್ಯ, ತೊಯ್ಸಿಕೊಂಡ ಕಾಗೀ ಹಾಂಗ ಮಾರಿ ಮಾಡಿಕೊಂಡ ಎಷ್ಟ ಮಾತಾಡತೈತಿ ನೋಡs” ಎಂದು ಆ ಕಡೆಯಿಂದ ಬರುತ್ತದೆ. “ಹಿಡದ ಹಿಂಡಿದರ ಮೈಯಾಗ ತಟಕ ರಸ ಇಲ್ಲ; ಬಾಯಿ ನೋಡ ವಟ ವಟಾ” ಎಂದು ಈ ಕಡೆಯಿಂದ ಬಂದರೆ “ಸೀರೀ ಮರೀಗಿ ಸಿಂಬಳಾ ಒರಸತಾಳ, ಗಲ್ಲ ಕಡದರ ಗುಲ್ಲ ಮಾಡತಾಳ, ಯಾರಲೇ ಹುಡುಗಾ?” ಎಂದೊಂದು ಚಿಗುರು ದನಿ ಮೂಡಿದರೆ ಉಳಿದ ಹಿಂಡೆಲ್ಲ ಅವರಲ್ಲಿನ ಒಬ್ಬಳ ಹೆಸರು ಹೇಳಿ ಹೊಯ್ಕೊಳ್ಳತೊಡಗುತ್ತಾರೆ. ಹೀಗೆ ಸಭ್ಯತೆಯಿಂದ ಸುರುವಾದದ್ದು ಯಾವ ಕೊನೆ ತಲುಪೀತೆಂದು ಹೇಳಲಿಕ್ಕಾಗುವುದಿಲ್ಲ. ಗುಡಿಯ ತನಕ ಇಂಥ ಕೊಂಕು ಬಾಣಗಳ ಸುರಿಮಳೆ ಹಾಗೇ ಸಾಗೇ ಇರುತ್ತದೆ.

ಪ್ರತಿಯೊಬ್ಬ ಸೂಳೆಯ ಕೈಯಲ್ಲಿ ಈ ದಿನ ಆತ್ಮರಕ್ಷಣೆಗೆ ಒಂದೊಂದು ಮುಳ್ಳಿನ ಸಿಂದೀ ಝಳಿಕೆ ಇರುತ್ತದೆ. ಯಾಕೆಂದರೆ ಬಣ್ಣ ಗೊಜ್ಜುವಾಗ, ಹೇಳಿ ಕೇಳಿ ಶಿವಾಪುರದ ಹುಡುಗರಾದ್ದರಿಂದ ಸೊಂಟದ ವಿಷ ಇಳಿಯುವ ತನಕ ಅವಕ್ಕೆ ಮನುಷ್ಯರ ಮಾತೇ ತಿಳಿಯುವುದಿಲ್ಲವಾದ್ದರಿಂದ ಏನಾದೀತು, ಏನಾಗಲಿಕ್ಕಿಲ್ಲ ಎಂದು ಹೇಳಬರುವಂತಿಲ್ಲ, ಈ ಹೊತ್ತು ಯಾರೇನು ಮಾಡಿದರೂ, ಯಾರೂ, ಸ್ವತಃ ದೇವರೂ ಕೇಳಬಾರದು. ಮುದಿ ಸೂಳೆಯರಿಗಂತೂ ಕೈಕೊಟ್ಟ ಹಳೆ ಮಿಂಡರ ಸೇಡು ತೀರಿಸಿಕೊಳ್ಳುವುದಕ್ಕೆ ಇದು ಒಳ್ಳೇ ಸಂದರ್ಭ. ಜನಗಳಲ್ಲಿ ನುಗ್ಗಿನುಗ್ಗಿ ಮೈ ನೆತ್ತರಾಡುವ ಹಾಗೆ ಸಿಂದೀ ಝಳಕಿಯಿಂದ ಬಾರಿಸುತ್ತಾರೆ. ಅವರು ತಾಕತ್ತಿದ್ದರೆ ಎದುರಿಸುತ್ತಾರೆ; ಇಲ್ಲವೆ ಹುಡುಗರ ಹಿಂದೆ ಅಡಗಿ ಅಡಗಿ ಓಡಿಹೋಗುತ್ತಾರೆ. ಇದು ಅವರವರ ಪ್ರೀತಿ, ಸೊಕ್ಕು, ಧಿಮಾಕು, ದಿಗರಿಗೆ ಸೇರಿದ್ದು, ಯಾಕೆಂದರೆ ಏಟು ತಿಂದಷ್ಟೂ ಅದು ಹೆಮ್ಮೆ ಪಡುವ ವಿಷಯ – ಗಂಡಸರಿಗೆ.

ಗುಡಿಯ ಕಟ್ಟೆಗೆ ಬಂದಾಗ ಮೇಲೆ ಹಾಡುವ ಎರಡು ತಂಡಗಳೂ ಎದುರು ಬದುರು ನಿಲ್ಲುತ್ತವೆ. ಮಧ್ಯದಲ್ಲಿ ಹಲಗೆಯವರು ಅರೆ ನಗ್ನರಾದ ತೆರೆಬಾಯ ಗಂಡು ಹಿಂಡು ಸುತ್ತ ಸೇರುತ್ತದೆ, ಚಾವಡಿ ಕಟ್ಟೆಯ ಮೇಲೆ ಗೌಡ, ಅವನ ಸುತ್ತ ಹಕ್ಕಿನವರು, ಅಂದರೆ ಪಂಚರು, ಕುಲಕಣ್ಣಿ – ಕೂರುತ್ತಾರೆ. ಗೌಡ ಹಾಡುಗಾರಿಕೆ ಸುರುವಾಗಲೆಂದು ಅಪ್ಪಣೆ ಕೊಟ್ಟಕೂಡಲೇ ಎರಡೂ ತಂಡದ ನೇತಾರರು ಗೌಡನಿಗೂ, ಪಂಚರಿಗೂ ನಮಸ್ಕರಿಸಿ ಸುರುಮಾಡುತ್ತಾರೆ.

ಅವರ ಮೇಲೆ ಇವರು, ಇವರ ಮೇಲೆ ಅವರು ವ್ಯಂಗ್ಯದ ಪದ ಹೇಳುತ್ತ ನಡು ನಡುವೆ ರಸಿಕರ ಕೇಕೆ, ವವ್ವಾ, ಬಲೆಗಳೊಂದಿಗೆ ಹಾಡಿನಂತ್ಯದ ಹುಡುಗರ ಹೊಯ್ಕೊಳ್ಳುವುದರೊಂದಿಗೆ ಹಾಡುಗಾರಿಕೆ ಒಂದೆರಡು ತಾಸು – ಹಾಗೆ ರಂಗೇರಿದರೆ ಇನ್ನೂ ಒಂದೆರಡು ತಾಸು ಮುಂದುವರಿಯುತ್ತದೆ. ಮುಗಿದಾದ ಮೇಲೆ ಗೌಡ ಇಬ್ಬರಿಗೂ ಖುಷಿಯಾಲಿ ಅಂದರೆ ಒಂದೊಂದು ರೂಪಾಯಿ ಕೊಡುತ್ತಾನೆ. ಪಂಚರೂ ಕೊಡುತ್ತಾರೆ. ಅಲ್ಲಿಗೆ ಹಿರಿಯರ ಭಾಗ ಮುಗಿಯಿತು. ಮುಂದ೩ಎ ಹುಡುಗರದೇ ಆಟ. ಸೂಳೆಯರಿಗೆ ಬಣ್ಣ ಗೊಜ್ಜುತ್ತ ಅವರಿಂದ ಸಿಂದೀ ಗರಿಯ ಏಟು ತಿನ್ನುತ್ತ ಆಟವಾಡುತ್ತಾರೆ. ಇದು ತಲೆತಲಾಂತರದಿಂದ ನಡೆದುಬಂದ ಪದ್ಧತಿ.

ಆದರೆ ಈ ಸಲ ಹಾಗಾಗಲಿಲ್ಲ. ಗೌಡನೊಬ್ಬನನ್ನು ಬಿಟ್ಟು ಉಳಿದವರೆಲ್ಲ ಬಂದಾಗಿತ್ತು. ಗುಡಿಯ ಕಟ್ಟೆಯ ಮೇಲೆ ಹಕ್ಕಿನವರು ಕುಳಿತುಕೊಂಡು ಗೌಡಿನಿಗಾಗಿ ಕಾಯುತ್ತಿದ್ದರು. ಹಾಡಿನ ತಂಡದವರು ತಂತಮ್ಮಲ್ಲೇ ಹಾಡಲಿರುವ ಪದಗಳ ಹೊಳಹು ಹಾಕುತ್ತ ಸೇರಿಸಬೇಕಾದ ವಿವರಗಳನ್ನು ಚರ್ಚಿಸುತ್ತ ಗುಂಪಿನ ಮೇಲೆ ಅದರಿಂದಾಗಬಹುದಾದ ಪರಿಣಾಮಗಳನ್ನು ಕಲ್ಪಿಸಿಕೊಳ್ಳುತ್ತ ಸಂತೋಷಿಸುತ್ತಿದ್ದರು. ನಾಯೆಲ್ಯಾ ಹಲಗೆ ಕಾಸಿ ಅದರ ನಾದ ಹದ ಮಾಡತೊಡಗಿದ್ದ. ಈ ವರ್ಷ  ಸೂಳೆಯರ ತಂಡದಲ್ಲಿ ದುರ್ಗಿಯಿದ್ದುದೊಂದು ವಿಶೇಷ ಆಕರ್ಷಣೆಯಾಗಿತ್ತು. ಕೆಲವರು ಆಗಾಗ ದೀಡಿ ಮಾತು ಹೇಳಿ ದುರ್ಗಿಯ ಗಮನ ತಮ್ಮ ಕಡೆಗೆ ಸೆಳೆಯುತ್ತಲೂ, ಸೆಳೆದದ್ದಕ್ಕೆ ಹೆಮ್ಮೆಪಡುತ್ತಲೂ ಇದ್ದರು. ಮಾತು ಹೊಳೆಯದ ಮಂದಮತಿಗಳು ಎಲ್ಲರಿಗಿಂತ ಜೋರಾಗಿ ನಕ್ಕು, ಹಾಗೆ ನಕ್ಕಾದರೂ ದುರ್ಗಿಯ ಗಮನ ತಮ್ಮ ಕಡೆ ಹರಿಯುವಂತೆ ಮಾಡಲು ಖಟಪಟಿ ಮಾಡುತ್ತಿದ್ದರು. ತಡವಾದದ್ದಕ್ಕೆ ತಡೆಯದೆ ಒಂದೆರಡು ಎಳೇ ಹಸುಳೆಗಳು ತಮಗಾಗಿ ಕಾದಿರುವಂತೆ ಹೊಯ್ಕೊಳ್ಳಲಾರಂಭಿಸಿ ಹಿರಿಯರ “ಬಾಯ್ಮುಚ್ರೆಲೇ, ಛೀ ಥೂ” ಗಳಿಗೆ ಪಕ್ಕಾಗಿ ಸುಮ್ಮನಾದವು.

ಅಷ್ಟರಲ್ಲಿ ಗುಡಸೀಕರನ ಸವಾರಿ ಆಗಮಿಸಿತು, ಕಳ್ಳ ಸಿದ್ರಾಮ ಕೂತ, ನಿಂತ ಮಂದಿಯನ್ನು ಬದಿಗೆ ಸರಿಸಿ ಹಾದಿ ಮಾಡುತ್ತಾ ಮುಂದೆ ಮುಂದೆ ಬಂದ. ಹಿಂದೆ ಗುಡಸೀಕರನೂ, ಅವನ ಹಿಂದೆ ಮೆಂಬರರೂ ಬರುತ್ತಿದ್ದರು. ಬಂದವರು ಇವರೇ ಎಂದು ಗೊತ್ತಾಗಿ ಜನ ಮತ್ತೆ ಮೊದಲಿನಂತಾದರೂ. ಕಳ್ಳ ಸಿದ್ರಾಮನನ್ನೂ ದಾಟಿ ಗುಡಸೀಕರ ನೇರವಾಗಿ ಕಟ್ಟೆಯ ಕಡೆ ನಡೆದ. ಕಟ್ಟೆಯಾಗಲೇ ಹಕ್ಕಿನ ಕುಳಗಳಿಂದ ಭರ್ತಿಯಾಗಿತ್ತು. ಗೌಡನಿಗಾಗಿ ಜಮಖಾನೆಹಾಸಿ, ಹಿಂದೊಂದು ತೆಕ್ಕೆಯಿಟ್ಟು ಒಬ್ಬರು ಕೂರುವಷ್ಟು ಮಾತ್ರ ಜಾಗ ಖಾಲಿಬಟಿಟಿದ್ದರು. ಗುಡಸೀಕರ ನೆಟ್ಟಗೆ ಕಟ್ಟೆಯೇರಿ ಕುಳಿತ ಕುಳಗಳನ್ನು ದಾಟಿ ಗೌಡನ ಜಾಗದಲ್ಲೇ ಕೂತುಬಿಟ್ಟ!

ಕೂತ ನಿಂತವರೆಲ್ಲ ಒಮ್ಮೆಲೇ ಒಂದು ಕ್ಷಣ ಸ್ತಬ್ದರಾಗಿ ಆ ಕಡೆ ನೋಡತೊಡಗಿದರು. ಮೆಲ್ಲಗೆ ತಮ್ಮ ತಮ್ಮಲ್ಲೇ ಗುಸುಗುಸು ಸುರುಮಾಡಿದರು. ಜನ ಇದನ್ನು ನಿರೀಕ್ಷಿಸಿರಲಿಲ್ಲ. ಆಗಬಾರದ್ದು ಆಗಿಹೋದಂತೆ ಹಿರಿಯರು ಕೈ ಕೈ ಹಿಸುಕಿಕೊಂಡರು, ನಾಯೆಲ್ಯಾ ಹಲಗೆ ಹದಮಾಡುವುದನ್ನು ಬಿಟ್ಟು ಕಾಲೆತ್ತರಿಸಿ ಗೌಡನ ಸ್ಥಳದಲ್ಲಿ ಕೂತ ಸರಪಂಚನನ್ನು ನೋಡಿದ. ದತ್ತಪ್ಪನ ಮುಖದ ಮೋಜು ಮಾಯವಾಯಿತು.

ಎಲ್ಲರ ಕಣ್ಣು ತನ್ನನ್ನೇ ಇರಿಯುತ್ತಿದ್ದುದು, ಎಲ್ಲರ ಪಿಸುನುಡಿಗೆ ತಾನೇ ವಸ್ತುವಾದದ್ದು ಸರಪಂಚನಿಗೂ ತಿಳಿಯಿತು. ತನ್ನ ಪಾಡಿಗೆ ತಾಉ ಏನನ್ನೂ ಗಮನಿಸಿಲ್ಲವೆಂಬಂತೆ ಸುಮ್ಮನಿರಲು ಉತ್ನಿಸಿದ. ಸಾಧ್ಯವಾಗಲಿಲ್ಲ. “ಎಲಡಿಕಿ ಚೀಲ ತಂದಿಯೇನಲೇ ನಿಂಗೂ?” ಎಂದು ಕಟ್ಟೆಯ ಹತ್ತಿರ ಕೈಕಟ್ಟಿ ನಿಂತ ನಿಂಗೂನನ್ನು ಕೇಳಿದ. ಅದನ್ನವನು ಸಾಮಾನ್ಯವೆಂಬಂತೆ ಹೇಳಿದರು ಅದು ಎಲ್ಲರಿಗೂ ಕೇಳಿಸುವಷ್ಟು, ಹೆದರಿದ ಹುಡುಗರು ಜೋರಾಗಿ ಮಾತಾಡುವಂತೆ ದನಿ ಎತ್ತರವಾಗಿತ್ತು. ತನ್ನ ಮಾತಿಗುತ್ತರವಾಗಿ ಯಾರಾದರೂ ಮಾತಾಡಬೇಕೆಂಬ ಆಸೆಯಿತ್ತು. ಅಲ್ಲಿ ಕೂರಬಾರದು, ಏಳಬಾರದು, ಕೂತರೆ ಎಲ್ಲರ ಕಣ್ಣು ಎದುರಿಸಬೇಕು, ಎದ್ದರೆ ಅವಮಾನ ಏನಾದರೂ ಮಾಡುತ್ತಾನೆಂದರೆ ನಿಂಗೂ ಏನೂ ಹೇಳಲಾರದೆ ಒಂದು ಬಾರಿ ಹಲ್ಲು ಕಿಸಿದು ಜನಗಳನ್ನು ನೋಡಿದ ಅಷ್ಟೆ.

‌ದತ್ತಪ್ಪನ ಚಡಪಡಿಕೆ ಸ್ಪಷ್ಟವಾಗಿತ್ತು. ಆದರೆ ಬಿಟ್ಟು ಹೇಳಲೊಲ್ಲ. ಇಷ್ಟರಲ್ಲೇ ಗೌಡ ಬರಬಹುದು. ಅವನನ್ನೆಲ್ಲಿ ಕೂರಿಸಬೇಕು? ಹಾಗೇ ಕೂತ, ನಿಂತವರ ಅಸಮಾಧಾನವೂ ಸ್ಪಷ್ಟವಾಗಿತ್ತು. ಪಂಚಾಯ್ತಿ ಮೆಂಬರರು, ತಾವೇ ತಪ್ಪುಮಾಡಿದಂತೆ. ಅದನ್ನು ತೋರಗೊಡದೆ ಹರಕಂಗಿಯ ಜೇಬುಗಳಲ್ಲಿ ಏನೋ ಹುಡುಕುತ್ತಿದ್ದಂತೆ, ಮರೆತವರು, ಏನೋ ಜ್ಞಾಪಿಸಿಕೊಳ್ಳುತ್ತಿದ್ದಂತೆ ಅಭಿನಯಿಸತೊಡಗಿದರು. ಕೊನೆಗೆ ಕಳ್ಳ ತನ್ನ ಅಭಿನಯ ಸಾಲದೆಂದು ಕಂಡುಕೊಂಡು ಎದುರಿಗಿದ್ದ ಬಾಳೂನಿಗೆ “ಏ ಬಾಳೂ, ಎಲಡಿಕೆ ಚಂಚಿ ತಂದೀಯೇನಲಾ” ಎಂದು ಕೇಳಿದ. ಕೊನೇ ಪಕ್ಷ ಅವನು ಇಲ್ಲವೆಂದಾದರೂ ಹೇಳಿಯಾನೆಂದು. ಬಾಳೂ, ಎಲಡಿಕಿ ತಿನ್ನುತ್ತಿದ್ದವನು ಚಂಚಿಯನ್ನು ಎಡಗೈಯಲ್ಲಿ ಹಿಸಿದುಕೊಂಡು ಬಲಗೈ ಬೆರಳುಗಳನ್ನು ತುಟಿಗಂಟಿಸಿ ಪಿಚಕ್ ಎಂದು ಎಲ್ಲರಿಗೂ ಕೇಳಿಸುವಂತೆ ಉಗುಳಿ ಇಲ್ಲವೆಂಬಂತೆ ಕೈಮಾಡಿದ. ಕಳ್ಳ, ಅವನು ತನ್ನ ಮೇಲೆ ಉಗುಳಿದ ಹಾಗೆ ಮುಖ ಸಿಂಡರಿಸಿಕೊಂಡು ಮಂದಿ ನೋಡಿದರೇನೋ ಎಂಬಂತೆ ಸುತ್ತ ನೋಡಿದ.

ಲಗಮವ್ವನಿಗೆ ಸುತ್ತ ಬಿಗಿದ ಮೌನ ತಡೆಯಲಾಗಲಿಲ್ಲ. “ಇಲ್ಲಿ ಯಾರೂ ಗಂಡಸರs ಇಲ್ಲೇನ್ರಿ?” ಎನ್ನುತ್ತ ಎದ್ದು ನಿಂತು ಏನೋ ಹೇಳಬೇಕೆಂದಿದ್ದಳು. ಅಷ್ಟರಲ್ಲಿ ಚೇರಮನ್ ಇಡೀ ಸಭಗೆ ತಾನೆ ಹಿರಿಯನೆಂಬಂತೆ ತನ್ನ ಅಪ್ಪಣೆಗಾಗಿ ಎಲ್ಲರೂ ಕಾಯುತ್ತಿದ್ದಂತೆ –

“ಹೂ ಲಗಮವ್ವಾ, ಇನ್ನ ಸುರಿಮಾಡಿರಿ” ಎಂದ. ನಿಂಗೂ ಈಗ ಸ್ವಲ್ಪ ಧೈರ್ಯತಾಳಿ –

“ಅದು ಗೌಡ್ರು ಕೂರೋ ಜಾಗ: ಅವರು ಬರೋ ಹೊತ್ತಾತು, ಆ ಜಾಗಾ ಬಿಟ್ಟ ಇಳೀತಿ?”

ಎಂದು ಹೇಳುತ್ತಿರುವಂತೆಯೇ –

“ಬರಲಿ ಬರಲಿ, ಅವರಿಗೂ ಇಲ್ಲೇ ಜಾಗ ಮಾಡಿ ಕೊಡೋಣ: ಅದಕ್ಯಾಕಿಷ್ಟ ತಲೀ ಕೆಡಿಸಿಕೊಳ್ತಿ?”

– ಎಂದು ನಿರ್ಲಕ್ಷ್ಯ ನಟಿಸುತ್ತಾ ಹೇಳಿ,

“ಹೂ ಲಗಮವ್ವಾ, ಸುರು ಮಾಡರಿನ್ನ”

– ಎಂದ. ಲಗಮವ್ವ ಇವನ ಕಡೆ ಬೆನ್ನು ತಿರುಗಿಸಿ ಕೂತಳಷ್ಟೆ. ಅಲ್ಲೇ ನಿಂತಿದ್ದ ರಮೇಶ, ಇವನೂ ಒಬ್ಬ ಮೆಂಬರನೇ, ಸಂದರ್ಭದ ಗಾಂಭೀರ್ಯ ಮುರಿಯುತ್ತ –

“ಸುರು ಮಾಡವಾ ಲಗಮವ್ವಾ, ಊರ ಚೇರ್ಮನ್ನರs ಹೇಳತಾರಂದರ ಇಮ್ಮತ್ತಿಲ್ಲೇನ? ಏ ನಾಯೆಲ್ಯಾ ಬಾರಿಸಲೇ ಹಲಗಿ”

– ಎಂದು ಚೇರ್ಮನ್ನರ ಅಭಿಮಾನದ ಪರವಾಗಿ ಮಾತಾಡಿದ. ತನ್ನನ್ನೇ ಕುರಿತು ರಮೇಶ ಹೇಳಿದ್ದರಿಂದ ಏನು ಮಾಡಲೂ ತೋಚದೆ ನಾಯೆಲ್ಯಾ ಎದ್ದು ನಿಲ್ಲುತ್ತಿದ್ದ; ಅಷ್ಟರಲ್ಲಿ ಲಗಮವ್ವ ಕೂತಲ್ಲಿಂದಲೇ –

“ನಮಗೇನೂ ಅವಸರಿಲ್ಲರೀ. ಗೌಡ ಬರಲಿ, ಸಾವಕಾಶ ಸುರುಮಾಡೂಣಂತ” ಎಂದಳು. ಇದನ್ನು ಕೇಳಿ ನಯೆಲ್ಯಾ ಕುಕ್ಕರಿಸಿದ. ಸರಪಂಚನ ಮುಖ ಇಷ್ಟಿದ್ದದ್ದು ಇಷ್ಟಾಯಿತು. ಈ ಒರಟುತನ ಅವನ ನಿರೀಕ್ಷೆಗೆ ಮೀರಿದ್ದು. ಹೇಗೆ ಎದುರಿಸಬೇಕೆಂದು ಗೊತ್ತಾಗದೆ ಚಡಪಡಿಸಿದ. ಅವನ ಮುಖದಲ್ಲಿ ಚಡಪಡಿಕೆ ಅವನ ಮೂಗಿನಷ್ಟೇ ಸ್ಪಷ್ಟವಾಗಿ ಕಂಡುಬರುತ್ತಿತ್ತು. ಎಲ್ಲರ ಕಣ್ಣುಗಳು ತನ್ನನ್ನು ಇರಿಯುವಂತೆ ಅನ್ನಿಸಿತು. ಎಲ್ಲರ ಮನಸ್ಸುಗಳಲ್ಲಿ ತಾನು ರಾಡಿಯಲ್ಲಿ ಸಿಗಬಿದ್ದು ಒದ್ದಾಡುತ್ತಿರುವಂತೆ ಅನ್ನಿಸಿತು. ಎದುರಿಸಲಾರದೇ ಕಿಸೆಗೆ ಕೈಬಿಟ್ಟು ಸಿಗರೇಟು ತೆಗೆದು ಹೊತ್ತಿಸಿ ಪುಸ್‌ಪುಸ್ ಎಂದು ಹೊಗೆಬಿಟ್ಟ. ಬೇರೆ ಸಂದರ್ಭದಲ್ಲಾಗಿದ್ದರೆ ಜನ  ಆ ಸಿಗರೇಟು, ಆ ಹೊಗೆ ಅದರ ವಾಸನೆಯೊಂದಿಗೆ ಆಟವಾಡಬಹುದಿತ್ತು.

ಆಶ್ಚರ್ಯವೆಂದರೆ ದತ್ತಪ್ಪ ಸುಮ್ಮನೇ ಕೂತಿದ್ದ. ತಾನು ತೋರಬೇಕಾದ ಪ್ರತಿಕ್ರಿಯೆ ಜನರೇ ತೋರುತ್ತಿದ್ದಾರೆಂದೋ, ಗೌಡ ಬರಲಿ, ನೋಡಿಕೊಳ್ಳೋಣವೆಂದೋ – ಅಂತೂ ಸುಮ್ಮನಿದ್ದ. ಪರಿಸ್ಥಿತಿಯನ್ನು ಗಮನಿಸಿ ಒಬ್ಬ ಎಳೆ ಬಾಲಕ ಲಬೊ ಲಬೊ ಹೊಯ್ಕೊಂಡ. ಎಲ್ಲರೂ ಹೊಯ್ಕೊಂಡರು. ಇದು ತನ್ನನ್ನು ಕುರಿತಾಗಿಯೇ ಎಂದು ಗಡಸೀಕರ ಬಲ್ಲ. ಅಷ್ಟರಲ್ಲಿ ಗುಂಪಿನಂಚಿನ ಒಬ್ಬ “ಗೌಡರು ಬಂದರು, ಬಂದರು” ಎಂದ. ಎಲ್ಲರೂ ಆ ಕಡೆ ಮುಖ ಹೊರಳಿಸಿದರು. ಗೌಡ ಅವಸರವಸರವಾಗಿ ಬರುತ್ತಿದ್ದ. ಇಂದಿನಅ ಹಾಡುಗಾರಿಕೆ ನಿರಂಬಳ ಸಾಗೀತೆಂದು ಯಾರಿಗೂ ಅನಿಸಲಿಲ್ಲ. ಗೌಡನಿಗೂ ಸರಪಂಚನಿಗೂ ಜಗಳವಾಗಬಹುದೆಂದೂ ಕೂಡ ಕೆಲವರು ಕಲ್ಪಿಸಿದರು. ಎಲ್ಲರ ಕಣ್ಣಲ್ಲಿ ವಿಚಿತ್ರ ಕುತೂಹಲ ಚಂಚಲಿಸಿತು.

ಜನ ಎದ್ದು ಗೌಡನಿಗೆ ಹಾದೀ ಮಾಡಿಕೊಟ್ಟರು. ಕೆಲವರು “ಶರಣ್ರೀಯೆಪ” ಎಂದರು ಗೌಡ ಪ್ರತಿ ನಮಸ್ಕರಿಸುತ್ತ ನಡೆದ. ತನ್ನ ಸ್ಥಳದಲ್ಲಿ ತೆಕ್ಕೆಗೆ ಆಧಾರವಾಗಿ, ತನ್ನತ್ತ ನೋಡದೆ, ಸಿಗರೇಟು ಸೇದುತ್ತ ಕೂತ ಸರಪಂಚನನ್ನು ನೋಡಿದ. ಎದ್ದು ನಿಂತ ದತ್ತಪ್ಪನ ಮುಖ ನೋಡಿದ, ಪರಿಸ್ಥಿತಿಯ ಅರಿವಾಗಿ ಹೋಯ್ತು. ಅವರಿವರನ್ನು ಹೆಸರುಗೊಂಡು ಕರೆದು “ಕೂಡ್ರಿ ಕೂಡಪಾ” ಎನ್ನುತ್ತ ನೇರ ಕಟ್ಟೆಗೆ ಹೋದ. “ಶರಣರೀ – ಸರಪಂಚರ” ಅಂದ, ದತ್ತಪ್ಪನ ಪಕ್ಕದಲ್ಲೇ ಸ್ಥಳ ಮಾಡಿಕೊಂಡು ಕೂರುತ್ತ “ಹೂ ಲಗಮವ್ವ ನೋಡೋಣ ಈ ವರ್ಷ ಏನೇನ ಹಾಡ ಕಟ್ಟೀರಿ, ಸುರುಮಾಡಿರಿ” ಅಂದ, ಏನೂ ಆಗಿಲ್ಲವೆಂಬಂತೆ. ಗೌಡನ ಮಾತು ಕೇಳಿ ದತ್ತಪ್ಪ ತಲೆ ಭಾರ ಇಳುವಿದಷ್ಟು ಹಗುರಾದ. ನರಲ್ಲಿನ್ನೂ ಗುಜುಗುಜು ಇತ್ತು. ಅವರ ಮಾತು ಕೇಳಿಸುತ್ತಿರಲಿಲ್ಲ ನಿಜ; ಅವರ ಕೈ ಬಾಯಿ ನೋಡಿಯೇ ಹೇಳಬಹುದಿತ್ತು: ಅವರು ತಕರಾರು ತೆಗೆಯುತ್ತಿದ್ದಾರೆಂದು. ಗೌಡನಿಗೆ ಅರಿವಾಗಿ ದನಿದೋರಿದ:

“ನಮ್ಮ ಲಗಮವ್ವ ವರ್ಷಕ್ಕೊಂದು ಏನಾರ ಹೊಸಾ ಚೀಜ ತಂದs ಇರತಾಳ ನೋಡ ದತ್ತೂ” ಎಂದು ಪಂಚರತ್ತ ನೋಡಿ ದುರ್ಗಿಯುತ್ತ ಗಮನ ಸೆಳೆದ. “ಅಯ್ಯs ಇದು ಅಬಾಯೀ ಮಗಳ್ರಿ” ಎಂದು ಹೇಳಿ “ಹೋಗs ಗೌಡನ ಪಾದ ಹಿಡದ ಬಾ” ಎಂದು ಎದ್ದು ತಲೆಬಾಗಿ ನಿಂತ ದುರ್ಗಿಗೆ ಹೇಳಿದಳು. ದುರ್ಗಿ ಅಷ್ಟೂ ಜನರ ಕಣ್ಣಿಗೆ ಗುರಿಯಾಗಿ, ಎಳಕರ ಮನಸ್ಸಿಗೆ ಮುದವಾಗಿ, ಮದವಾಗಿ, ಆದ್ದರಿಂದ ನಾಚುತ್ತ, ಅದನ್ನು ಸಂತೋಷಿಸುತ್ತ ತಲೆ ತುಂಬ ಸೆರಗು ಹೊತ್ತು ಗೌಡನತ್ತ ಹೊರಟಳು. ಹೋಗಿ ಕಾಲುಮುಟ್ಟಿ ನಮಸ್ಕರಿಸಿದಳು. ಪಕ್ಕದ ಹಿರಿಯರ ಕಾಲು ಮುಟ್ಟಿದಳು. ಅಥವಾ ನಾಚಿಕೆಯ ಅತಿಶಯದಲ್ಲಿ ಯಾರ್ಯಾರದೋ ಕಾಲು ಮುಟ್ಟಿ ಬೆದರಿದ ಮಣಕಿನಂತೆ ಓಡಿಬಂದಳು. ಹಾಡುಗಾರಿಕೆ ಸುರುವಾಯಿತು. ಗಲಮವ್ವ ಎದ್ದುನಿಂತು,

ಕಲಿಯುಗ ಕಾಲಿಟ್ಟಿತು ಧರ್ಮ
ಉಳಿಯಲಿಲ್ಲ ಚೂರಾ!
ಕಲಿತವರ ಕಾಲಾಗ ಲೌಕಿಕವೆಂಬೋದು
ಅಧರ್ಮವಾಯಿತು ಪೂರಾ!!

– ಎಂದು ಸುರುಮಾಡಿ “ಕಲಿತ ಕೋತಿ”ಗಳ ಭಂಡತನವನ್ನು ಬಯಲಿಗೆಳೆದಳು. ಇದು ಎದುರು ತಂಡಕ್ಕೆಸೆದ ಸವಾಲಾಗಿರಲಿಲ್ಲ. ಆದರೆ ಜನ ಈ ಹಾಡಿನಿಂದ ಎಷ್ಟು ಖುಷಿಪಟ್ಟರೆಂದರೆ ಹಾಡಿನಂತ್ಯದ ಹೊಯ್ಕೊಳ್ಳುವಿಕೆಗೆ ಮುದುಕರೂ ಸೇರಿದ್ದರು. ಆ ಹಾಡನ್ನು ತಾವೇ ಹೇಳಿದಂತೆ ಆನಂದಪಟ್ಟರು. ಹಾಡು ಯಾರನ್ನು ಕುರಿತದ್ದೆಂದು ಇವರಿಗೆ ಹೇಳಿ ಕೊಡಬೇಕೆ? ಗುಡಸೀಕರನ ಮುಖ ಇನ್ನೂ ಅಸಭ್ಯವಾಯಿತು. ಒಳಗೆ ಕತ ಕತ ಕುದಿಯುತ್ತಿದ್ದನೆಂಬುದುದನ್ನು ಅವನ ಕಣ್ಣ ಜ್ವಾಲೆಗಳೇ ಹೇಳುತ್ತಿದ್ದವು. ಗೌಡ ಮುಗುಳ್ನಕ್ಕು ಸುಮ್ಮನಾದರೆ, ದತ್ತಪ್ಪ ಜೋರಾಗಿಯೇ ನಕ್ಕ. ಜನ ಸಿಳ್ಳುಹಾಕಿ ನಕ್ಕರು, ಕೆಲವರು ರುಂಬಾಲು ಹಾರಿಸ ನಕ್ಕರು. ಈ ಥಾರಾವರಿ ನಗೆಗಳನ್ನು ಸಂಯಮಿಸುವುದು ಗೌಡನಿಂದಲೂ ಸಾಧ್ಯವಿರಲಿಲ್ಲ.

ಪಂಚಾಯ್ತಿ ಮೆಂಬರರೆಲ್ಲ ಮುರುಟಿದ್ದರು. ಈ ನಗೆಗಳು ಗುಡಸೀಕರನ ಒಳಗಿನ ಬೆಂಕಿಗೆ ಹುಲ್ಲಾದವು, ಭಗ್ಗನೇ ಎದ್ದು ಕಟ್ಟೆಯಿಳಿದು, ಈಗಷ್ಟೇ ಹೊತ್ತಿಸಿದ ಸಿಗರೇಟನ್ನು ನೆಲಕ್ಕೆಸೆದು ತುಳಿದು, ಹೊಸಕಿ, ಬಿಟ್ಟ ಬಾಣದ ಹಾಗೆ ಹಿಂಡಿನಿಂದ ಮರೆಯಾದ. ಪಂಚಾಯ್ತಿ ಮೆಂಬರರು ಒಬ್ಬೊಬ್ಬರಾಗಿ ಬಾಲದ ಹಾಗೆ ಸಾಲಾಗಿ ಹಿಂಬಾಲಿಸಿದರು.