ಬಳ್ಳಾರಿ ಜಿಲ್ಲೆಯಲ್ಲಿ ಜನಿಸಿ, ಮಹಾರಾಷ್ಟ್ರದಲ್ಲಿ ಸಂಗೀತ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿ ಮತ್ತೆ ಹುಟ್ಟೂರು ಕರೂರಿಗೆ ಬಂದು ಸಂಗೀತ ಸೇವೆಯಲ್ಲಿ ನಿರತರಾಗಿರುವ ಶ್ರೀ ಕರೂರ್‌ ವಿ. ತಿಮ್ಮಪ್ಪನವರು ಕರ್ನಾಟಕದ ಗ್ರಾಮೀಣ ಭಾಗದ ಹಿರಿಯ ಸಂಗೀತಗಾರರಲ್ಲೊಬ್ಬರು. ೧೯೨೪ರಲ್ಲಿ ಜನಿಸಿದ ಶ್ರೀ ಕರೂರ್ ವಿ. ತಿಮ್ಮಪ್ಪನವರಿಗೆ ಬಾಲ್ಯದಿಂದಲೂ ಸಂಗೀತದಲ್ಲಿ ಆಸಕ್ತಿ. ಐದನೇ ತರಗತಿಯಲ್ಲಿ ಓದುವಾಗಲೇ ಜೈಮಿನಿ ಭಾರತ, ಅಮರ ಕೋಶ, ಹರಿಭಕ್ತಿಸಾರ, ಸೋಮೇಶ್ವರ ಶತಕ ಕಂಠಪಾಠ.

ಗುರು ಶ್ರೀ ಕೆ. ಬಸವಯ್ಯಸ್ವಾಮಿಗಳಲ್ಲಿ ಶಿಷ್ಯ ವೃತ್ತಿ ಮಾಡಿ ಸಂಗೀತದಲ್ಲಿ ಪ್ರಭುತ್ವ ಪಡೆದರೂ ತಿಮ್ಮಪ್ಪನವರಿಗೆ ರಂಗಭೂಮಿಯತ್ತಲೇ ಒಲವು. ಸಂಗೀತದಲ್ಲಿ ಪರಿಣಿತಿ ಇದ್ದದ್ದರಿಂದ ಪೌರಾಣಿಕ ನಾಟಕಗಳ ಕಾಲವಾಗಿದ್ದ ಆ ಸಮಯದಲ್ಲಿ ಹದಿನೇಳರ ಹರೆಯದಲ್ಲೇ ತಿಮ್ಮಪ್ಪನವರಿಗೆ ನಾಟಕ ನಿರ್ದೇಶನದ ಅವಕಾಶಗಳು ಮೇಲಿಂದ ಮೇಲೆ ಲಭಿಸಿದವು.

ನಂತರ ಗುರುಗಳ ಆಜ್ಞೆಯಂತೆ ಪೂನಾಗೆ ತೆರಳಿ ಅಲ್ಲಿ ಮರಾಠಿ, ಹಿಂದಿ ಅಭ್ಯಾಸ ಮಾಡುತ್ತಲೇ ಹಿಂದಿ ವಿಶಾರದ ಪದವಿ ಪಡೆದು ಅನೇಕ ಮರಾಠಿ ನಾಟಕಗಳನ್ನು ನಿರ್ದೇಶಿಸಿದರು. ನಂತರ ಸ್ವಗ್ರಾಮ ಕರೂರಿನಲ್ಲಿ ಐದೂವರೆ ದಶಕಗಳಿಂದಲೂ ಸಂಗೀತ, ರಂಗಭೂಮಿಯ ಜೊತೆಗೆ ಬೆಂಬಿಡದ ಬಾಂಧವ್ಯ ಬೆಳೆಸಿಕೊಂಡು ಬಂದಿದ್ದಾರೆ.

ಡಾ. ಜೋಳದರಾಶಿ ದೊಡ್ಡನ ಗೌಡರಿಂದಲೇ ಮೆಚ್ಚುಗೆ ಪಡೆದಿದ್ದ ತಿಮ್ಮಪ್ಪನವರು ರಾಜ್ಯೋತ್ಸವ ಗೌರವ, ಬಳ್ಳಾರಿ ನಾಟ್ಯ ಭಾರತಿ ಮತ್ತು ಹೂವಿನ ಹಡಗಲಿ ಕಲಾ ತಂಡಗಳು ಸೇರಿದಂತೆ ಹಲವು ಸಂಘ ಸಂಸ್ಥೆಗಳಿಂದ ಸನ್ಮಾನಗಳನ್ನು ಪಡೆದಿದ್ದಾರೆ. ಜೊತೆಗೆ ಕರ್ನಾಟಕ ಅಕಾಡೆಮಿ ಪ್ರಶಸ್ತಿ ಕೂಡ ತಿಮ್ಮಪ್ಪನವರಿಗೆ ಸಂದಿದೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಲ ೧೯೯೯-೨೦೦೦ನೇ ಸಾಲಿನ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ.