ಸತಿಗೆ ಸ್ವತಂತ್ರವ ಕೊಡದಿರಣ್ಣ ನೀನು
ಮತಿಗೆಟ್ಟು ಬಾಯಿಬಾಯಿ ಬಿಡದಿರೊ
ಪತಿಗೆ ಬಣ್ಣದ ಮಾತ ಹಾಡ್ಯೋಳೊ ಅವಳು
ಮಿತಿ ಇಲ್ಲದ ಕರ್ಚು ಮಾಡ್ಯಾಳೊ
ಅತಿ ಹರುಷದಿಂದ ಕೂಡ್ಯಾಳಣ್ಣಾ ಪರ
ಗತಿಗೆ ಕರೆಕರೆ ಮಾಡ್ಯಾಳಣ್ಣಾ
ಹಡೆದ ತಂದೆ ತಾಯಿ ತ್ವಾರಿಸ್ಯಾಳೊ ತನ್ನ
ಕಡೆಗೆ ಬಾ ಎಂದು ಕರಿಸ್ಯಾಳೊ
ಬಿಡದೆ ಒಂಟಿ ಮಾಡಿ ನಿಲಿಸ್ಯಾಳೋ ಒಂದು
ಪಡಿ ಬತ್ತಕೆ ಬಯಿ ಬಿಡಿಸ್ಯಾಳೊ
ತಂದುದ್ದರೊಳಗೆ ಅರ್ಧ ಕದ್ದಾಳೋ ಅವಳು
ಸಂದು ಸುಳಿವು ನೋಡಿ ಮೆದ್ದಾಳೊ
ಮುಂದಿದ್ದ ಕೂಸನು ಒದ್ದಾಳೋ ಹತ್ತು
ಮಂದಿಯ ಕಾಲಿಗೆ ಬಿದ್ದಾಳೊ
ಉಂಡುಟ್ಟ ಮನೆ ಎಣಿಸ್ಯಾಳೊ ಅವನ
ಬಂಡು ಮಾಡಿ ಮಾನ ಕಳಿಸ್ಯಾಳೊ
ಮಂಡೆ ಕೆದರಿಕೊಂಡು ನಿಂತಾಳೊ
ದೊಡ್ಡ ಕೋರಿ ಮಾಡಿ ಕುಣಿಸ್ಯಾಳೊ
ಕರಕರೆ ಸಂಸಾರ ತರವಲ್ಲ ಇಂಥ
ದುರುಳ ಹೆಣ್ಣಿನ ಸಂಗ ಸರಸಲ್ಲ
ಶ್ರೀ ಪುರಂದರ ವಿಠಲಾ ತಾ ಬಲ್ಲ || ಸ ||
Leave A Comment