ಹೊಸಿಲ ಬಳಿಗೇ ಬಂದು ನಿಂತಿದೆ ಯುದ್ಧ, ಏಳಣ್ಣ ಏಳೊ
ಆಗು ಸನ್ನದ್ಧ.

ಬಿಟ್ಟಿ ಬಂದುದನು ಪಟ್ಟಾಗಿ ಹೊಡೆದು ಮಲಗಿದಂತಲ್ಲ
ಇದು ಯುದ್ಧ ;
ನೀನು ನಿನ್ನದು ಎಲ್ಲವನು ಝಡತಿ ಮಾಡಿಕೋ ಒಂದು ಸಲ,
ಆಗು ಸನ್ನದ್ಧ.

ಹಿಂದೆಲ್ಲ ಎಚ್ಚರಿಸಿದಾಗ ಕನವರಿಸಿ ಮಲಗಿದೆ :
“ಎಲ್ಲೋ ಇದೆ ಅದು ಆಚೆ ಕಾಂಪೋಂಡಿನಾಚೆ.”
ಗೇಟನು ತಳ್ಳಿ ಒಳನುಗ್ಗಿದಾಗಲೂ ನಿನಗೆ ಕನಸು :
‘ಇನ್ನೂ ಇದೆ ಅಂಗಳದಲ್ಲೆ, ಈಗೇಕೆ ಅದರ ಮಾತು ?’
ಈಗಲೋ ಹೊಸಲಿಗೇ ಬಂದು ನೆಕ್ಕುವ ನಾಲಗೆ,
ತಡಮಾಡಿದರೆ ಮನೆಯೊಳಕ್ಕೆ ನುಗ್ಗೀತು ನೆಟ್ಟಗೆ.

ಎಂದೆಂದು ಹೋರಾಡಿದವನಲ್ಲ ನೀನು, ಅಭ್ಯಾಸವಿಲ್ಲ ನಿನಗೆ ;
ಕೇವಲ ಚರಿತ್ರೆಯಲ್ಲೋದಿ ಗೊತ್ತಿದೆ ನಿನಗೆ ಯುದ್ಧಗಳ ವರ್ಣನೆ.
ನನಗೆ ಗೊತ್ತಿಲ್ಲವೆ? ಯಾರೋ ಹಗಲಿರುಳು ಹೋರಾಡಿ
ಬೆವರನು ಸುರಿಸಿ ತಂದುಕೊಟ್ಟರು ನಿನಗೆ ಯಜಮಾನಿಕೆ.
ಕೂತು ಉಂಡು, ಆಗಾಗ ಕಿತ್ತಾಡಿ ನಿದ್ದೆ ಹೊಡೆದವ ನೀನು.
ಗೊತ್ತಿರಲಿಲ್ಲ ನಿನ್ನ ಮನೆಯಾಚೆಗೇ ನಡೆದ ಹಳದಿಗಣ್ಣಿನ
ಕಳ್ಳ ಹೊಂಚಾಟಿಕೆ?
ಈಗ ಗೊತ್ತಾಯಿತೇ ಅಣ್ಣ? ಈಗ ನಿನ್ನದು ಸರದಿ ;
ಘರ್ಜಿಸು ಆಗು ಸನ್ನದ್ಧ.
ನಿನ್ನ ಮನೆ ಬಾಗಿಲಲ್ಲೇ ಬಂದು ನಿಂತಿದೆ ಯುದ್ಧ.

ಕೊಡು ಬೀಳ್ಕೊಡಿಗೆಯ ಮುತ್ತ ನಿನ್ನ ಮನದನ್ನೆಯ ಕೆನ್ನೆಗೆ –
ಮಕ್ಕಳಿಗೆ ಪೆಪ್ಪರಮೆಂಟು ಕೊಡು ‘ಟಾ ಟಾ’ ಹೇಳು.
ಹೆಗಲಿಗೇರಿಸು ಇದುವರೆಗು ಪೂಜೆಗಿರಿಸಿದ್ದ
ಹಳೆಯ ಬಂದೂಕನು.
ಕಹಳೆ ಊದು, ರಣಭೇರಿಯನು ಬಜಾಯಿಸು,
ಮೂಲೆ ಮೂಲೆಗಳಲ್ಲಿ ಮುದುರಿಕೂತವರ ನೆಟ್ಟಗೆ ನಿಲ್ಲಿಸು,
ಜಮಾಯಿಸು.
ಒಂದು ಸಲವಾದರೂ ಅನುಭವಿಸು, ಈ ಮಣ್ಣು
ನನ್ನದು, ನನಗೆ ಜೀವ ಕೊಟ್ಟಿದ್ದು – ಎಂದು.
ಈ ಭಾವವಿಲ್ಲದ ಬದುಕೊಂದು ಬದುಕಲ್ಲ.
ಇದರಲ್ಲೆ ಸಾಯುವುದು ಪುಣ್ಯವೆಂದು.
ಏಳು ಹೊಸಿಲಬಳಿಗೇ ಬಂತು ಯುದ್ಧ
ಆಗು ಸನ್ನದ್ಧ.