ಹೆಸರುಗಳಿಸುವ ಬಯಕೆಯುಸುಬಿನಲಿ ಮನದ ಕಾಲ್-
ಕುಸಿಯುತಿದೆ ; ಓ ತಂದೆ, ಓ ಗುರುವೆ ಬಾ ಇಲ್ಲಿ
ಪಂಕದಲಿ ಜಾಣ್ಮೆಯಿಂ ನಡೆವಂತೆ ನಡೆಗಲಿಸು.
ಆದರ್ಶ ಧ್ಯೇಯಗಳ ಗಗನದೆಡೆ ಹಾರಲಿಕೆ
ಸದ್ಭಾವ ರೆಕ್ಕೆಗಳ ಬಲವುಂಟು ; ಆದರೇಂ
ಕಾಲು ಹೂತಿಹುದಿಲ್ಲಿ ಕೆಸರಿನಲ್ಲಿ !
ಕಾಲು ಕೀಳದೆ ಎನಿತು ರೆಕ್ಕೆಗಳ ಬಡಿದರೇಂ,
ಹಾರಲಾಗುವುದೇನು ಬಾನಿನಲ್ಲಿ ?
ಓ ಗುರುವೆ ದಯೆಗೈದು ಬಿಡಿಸು ಬಾ ಬೇಗದಲಿ
ಹೊಸ ಶಕ್ತಿಯನು ನೀಡು, ಅಡಿಯ ಪಂಕದಿ ಬಿಡಿಸಿ
ನಿನ್ನ ರಕ್ಷೆಯನೆನ್ನ ರೆಕ್ಕೆಗಳಿಗಳವಡಿಸಿ.

ಕುಂಭಕಾರನ ಗಾಲಿಯಂತರದ ಮಣ್ಣಿನೊಲು
ಜಡವಾಗಿ ಬಿದ್ದಿಹುದು ಮತಿ, ಮೂಕವಾಗಿ.
ರೂಪಿಸದ ಕೈ ಇರದೆ ಎನಿತು ಸುತ್ತಿದರೇನು ?
ಮಡಕೆಯಹುದೇ ಮಣ್ಣು ಜಡತನವ ನೀಗಿ ?
ವ್ಯರ್ಥವಾಗಿಯೆ ಸುತ್ತಿ ಹಾಳಾಗುತಿದೆ ಬಾಳು,
ಬಾ, ರೂಪುಕೊಡು ಗುರುವೆ ಕೃಪೆಯ ಕೈ ನೀಡು.
ನಿನ್ನ ಕೈಚಳಕದಲಿ ಮಣ್‌ತನವ ನೀಗಿಸುತ
ಬಾ, ರೂಪುಕೊಟ್ಟೆನ್ನ ಪಾತ್ರೆಯನು ಮಾಡು.
ಎಲ್ಲವನು ತುಂಬುವೆನು ಇಲ್ಲಿ ಈ ಪಾತ್ರೆಯಲಿ
ಜಗದೆಲ್ಲ ಅನುಭವದ ಸಾರಗಳನು.
ಕಹಿಯೇನು, ಸಿಹಿಯೇನು, ಅಳುವೇನು, ನಗುವೇನು
ಎಲವನು ತುಂಬುವೆನು ವಿಧಿಯಿತ್ತುದನ್ನು,
ಕಡೆಗಿದನು ಅರ್ಪಿಸುವೆ ಆ ದೇವನಡಿಯಲ್ಲಿ
ತುಂಬಿರುವ ನನ್ನೆದೆಯ ಬಟ್ಟಲನ್ನು.
ಈ ಜೀವ ಜಾತ್ರೆಯಲಿ ಕೃತಕೃತ್ಯನಾಗುವೆನು
ಪೂಜೆ ಎನ್ನುತ ತಿಳಿದು ಬಾಳನಿದನು.